ವಿಶೇಷ ವಿಕಲಚೇತನರಿಗೆ ಕರುಣೆ ಬೇಕಾಗಿಲ್ಲ, ಅವರ ಸಾಧನೆಗೆ ಪ್ರೋತ್ಸಾಹ ಸಿಕ್ಕರೆ ಸಾಕು ಎನ್ನುತ್ತಾರೆ ೨೦೧೪ ರ ಮಿಸ್ ವೀಲ್ ಚೇರ್ ಸ್ಪರ್ಧೆಯನ್ನು ಗೆದ್ದ ಸ್ಪರ್ಧಿ ಡಾ.ರಾಜಲಕ್ಷ್ಮಿ ಎಸ್ ಜೆ ಅವರು. ಅವರ ಸಾಧನೆಯ ಕುರಿತು ಎನ್.ವಿ.ರಘುರಾಂ ಅವರು ಬರೆದ ಒಂದು ಲೇಖನ. ತಪ್ಪದೆ ಓದಿ…
2014 ರಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಬೆಂಗಳೂರಿನ ಹಲ್ಲಿನ ಡಾಕ್ಟರ್ ಒಬ್ಬರು ಕೊನೆಯ ಹಂತ ಪ್ರವೇಶ ಮಾಡಿದ್ದರು. ಆಗ ಅವರಿಗೆ ಕೇಳಿದ ಒಂದು ಪ್ರಶ್ನೆ ” ನಿಮಗೆ ಇನ್ನೊಂದು ಆಯ್ಕೆ ಈ ಜೀವನದಲ್ಲಿ ಸಿಕ್ಕಿದರೆ ಯಾರ ತರಹ ಜೀವನ ಮಾಡಲು ಬಯಸುತ್ತೀರಿ?”. ಈ ಪ್ರಶ್ನೆಗೆ ಸ್ಪರ್ಧಿ ಹೇಳಿದ ಉತ್ತರ “ನನಗೆ ಇನ್ನೊಮ್ಮೆ ಜೀವಿಸಲು ಅವಕಾಶ ಸಿಕ್ಕಿದರೆ ನಾನು ನನ್ನ ಜೀವನವನ್ನೇ ಮರು ಜೀವಿಸಲು ಪ್ರಯತ್ನ ಮಾಡುತ್ತೇನೆ. ನಾನು ಎಲ್ಲರಂತೆ ಸಾಮಾನ್ಯ ಮನುಷ್ಯಳಾಗಿ ಇದ್ದಾಗ ಮಾಡಿದ ತಪ್ಪು ತಿದ್ದಿಕೊಂಡು, ಈ ದೇಶದಲ್ಲಿ ಇರುವ ವಿಶೇಷ ಚೇತನರ ಜೀವನವನ್ನು ಉತ್ತಮ ಪಡಿಸಲು ಪ್ರಯತ್ನ ಮಾಡುತ್ತೇನೆ “. ಆ ಉತ್ತರಕ್ಕೆ ಆ ಸಭೆಯಲ್ಲಿದ್ದವರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಆ ದಿನ “ಮಿಸ್ ವೀಲ್ ಚೇರ್ -2014” ಗೆದ್ದ ಸ್ಪರ್ಧಿ ಡಾ.ರಾಜಲಕ್ಷ್ಮಿ ಎಸ್ ಜೆ.

ಫೋಟೋ ಕೃಪೆ : Anand Daga Photography
ಎಲ್ಲರಂತೆ ಸಾಮಾನ್ಯ ಮಗುವಾಗಿ ಹುಟ್ಟಿದ್ದರು ರಾಜಲಕ್ಷ್ಮಿ. ಇವರ ತಂದೆ ತಾಯಿ ಇಬ್ಬರೂ ಡಾಕ್ಟರ್ ಆಗಿದ್ದರು. ಅವರು ಮನೆಯಲ್ಲೇ ರೋಗಿಗಳನ್ನು ನೋಡುತ್ತಿದ್ದರು. ಆಗ ಹುಷಾರ್ ಆದ ರೋಗಿಗಳು “ದೇವರು ಬಂದ ಹಾಗೆ ಬಂದು ನಮಗೆ ಸಹಾಯ ಮಾಡಿದರು” ಎಂದು ತನ್ನ ತಂದೆ ತಾಯಿಯ ಬಗ್ಗೆ ಹೇಳುವ ಮಾತುಗಳನ್ನು ಕೇಳಿ ತಾನು ಡಾಕ್ಟರ್ ಆಗಲು ಬಯಸಿದಳು. 2000ನೇಯ ವರ್ಷ ಹತ್ತನೇಯ ತರಗತಿಯನ್ನು ಡಿಸ್ಟಿಂಕ್ಷನ್ ನಲ್ಲಿ ಪಾಸು ಮಾಡಿದರು. ಬರೀ ಪಾಠ ಮಾತ್ರವಲ್ಲದೆ ಜಿಲ್ಲಾ ಮಟ್ಟದ ಟೇಬಲ್ ಟೆನಿಸ್ ಆಟಗಾರರು, ಭಾರತೀಯ ಮತ್ತು ಪಾಶ್ಚಿಮಾತ್ಯ ಶೈಲಿಯ ನೃತ್ಯದಲ್ಲಿ ತರಬೇತಿ ಪಡೆದಿದ್ದರು.
ಪದವಿ ಪೂರ್ವ ಶಿಕ್ಷಣದ ನಂತರ ಬಿ.ಡಿ.ಎಸ್. ಓದಲು ಸೇರಿದರು. ಪರೀಕ್ಷೆಯಲ್ಲಿ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾದಾಗ, ಅವರ ಫ್ರೋಫೆಸರ್ ರವರ ಮಾತಿನಂತೆ 2007ರಲ್ಲಿ ಚೆನೈನಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಲು ಹೋಗುತ್ತಿದ್ದಾಗ ತೀವ್ರವಾದ ಕಾರು ಅಪಘಾತಕ್ಕೆ ಒಳಗಾದರು. ಆಗ ಅವರ ಬೆನ್ನು ಹುರಿಗೆ ತೀವ್ರವಾದ ತೊಂದರೆ ಉಂಟಾಗಿ, ಅವರ ಎರಡೂ ಕಾಲುಗಳು ಸ್ವಾಧೀನ ಕಳೆದು ಕೊಂಡವು. ಎರಡು ಆಪರೇಶನ್ ನಂತರ ಕೂಡ ಯಾವುದೇ ಗುಣ ಕಾಣಲಿಲ್ಲ. ಪ್ರಾರಂಭದಲ್ಲಿ ಚಕ್ರದ ಕುರ್ಚಿಯಲ್ಲಿ ಕೂರಲು ಮನಸ್ಸು ಒಪ್ಪಲಿಲ್ಲ. ಕೊನೆಗೆ “ಈ ಚಕ್ರದ ಕುರ್ಚಿ ಬಿಟ್ಟರೆ ಮುಂದೆ ತಾನು ಯಾರಿಗೂ ಉಪಯೋಗವಿಲ್ಲದೆ ಒಂದು ಮೂಲೆಯಲ್ಲಿ ಉಳಿಯ ಬೇಕಾಗುತ್ತದೆ” ಎಂದು ತಿಳಿದು ಅದನ್ನು ಒಪ್ಪಿಕೊಂಡರು. ಆ ಚಕ್ರದ ಕುರ್ಚಿ ಮುಂದೆ ಅವರಿಗೆ ಒಳ್ಳೆಯ ಸ್ನೇಹಿತನೇ ಆಯಿತು. ನಂತರ ಅವರ ಜೀವನದ ದಿಕ್ಕು ಬದಲಾಯಿಸಿತು.

ಫೋಟೋ ಕೃಪೆ : google
ಅವರ ಮನೆಯಲ್ಲಿ ಎಲ್ಲರೂ ಅವರ ನೆರವಿಗೆ ನಿಂತರು. ಆದರೆ ಸುತ್ತಲಿನ ಸಮಾಜದ ಪ್ರತಿಕ್ರಿಯೆ ಅಷ್ಟೇನೂ ಚೆನ್ನಾಗಿರಲಿಲ್ಲ. “ಅಯ್ಯೋ ಪಾಪ, ಆಕ್ಸಿಡೆಂಟ್ ಅಂತೆ”, ಈ ತರಹದ ಮಾತುಗಳನ್ನು ಹೇಳುವವರೇ ಜಾಸ್ತಿ. ಆ ಮಾತುಗಳನ್ನು ತಲೆಗೆ ಹಾಕಿಕೊಳ್ಳದೆ ತಮ್ಮ ಕೆಲಸದಲ್ಲಿ ನಿರತರಾದರು.
2009 ರಲ್ಲಿ ಫ್ಯಾಶನ್ ಡಿಸೈನ್, ಯೋಗ, ಸೈಕಾಲಜಿಗಳಲ್ಲಿ ತರಬೇತಿ ಪಡೆದರು. ಸರ್ಕಾರದವರು ವಿಶೇಷ ಚೇತನರಿಗೆ 3% ಅವಕಾಶವನ್ನು ಮೀಸಲು ಇರಿಸಿದ್ದರೂ ಕೂಡ ಅದನ್ನು ಪಾಲನೆ ಮಾಡುತ್ತಿರಲಿಲ್ಲ. 2010ರಲ್ಲಿ ಇವರು ಕೋರ್ಟ್ ನ ಸಹಾಯದಿಂದ ಎಂ.ಡಿ.ಎಸ್. ಪದವಿಗೆ ಪ್ರವೇಶ ಪಡೆದರು. 73% ಅಂಕಗಳನ್ನು ಪಡೆದು ಕರ್ನಾಟಕಕ್ಕೆ ಪ್ರಥಮ ಸ್ಥಾನ ಪಡೆದು 2013ರಲ್ಲಿ ಪಾಸಾದರು. 2012ರಲ್ಲಿ ಇವರು ತಮ್ಮ ಕ್ಷೇತ್ರದಲ್ಲಿ ಮಾಡಿದ ಸಂಶೋಧನೆಯ ಬಗ್ಗೆ ಫ್ರೌಢ ಪ್ರಬಂಧವನ್ನು ಪ್ರಕಟಿಸಿದರು.
ಆ ಸಮಯದಲ್ಲಿ ಅವರ ಕಣ್ಣಿಗೆ ಬಿದ್ದಿದ್ದು “ಮಿಸ್ ವೀಲ್ ಚೇರ್” ಸ್ಪರ್ಧೆಯ ಜಾಹೀರಾತು. ತಮ್ಮ ಮೂರು ನಿಮಿಷದ ವಿಡಿಯೋ ಮಾಡಿ ಆ ಸ್ಪರ್ಧೆಗೆ ಕಳುಹಿಸಿದರು. ಅವರು ಸ್ಪರ್ಧೆಗೆ ಆಯ್ಕೆಯಾದಾಗ ಜಿಮ್ ನಲ್ಲಿ ತರಬೇತಿ ಪಡೆದು, ಉತ್ತಮ ಆಹಾರ ಪದ್ಧತಿಯನ್ನು ರೂಡಿಸಿಕೊಂಡರು. ನಂತರ ನಡೆದಿದ್ದು ಇತಿಹಾಸ. ಆಗಲೇ ಅವರು ಹೇಳಿದ ಮಾತುಗಳು “ನಾನು ಒಂದು ಜೀವನದಲ್ಲಿ ಎರಡು ತರಹದ ಅನುಭವ ಪಡೆದಿದ್ದೇನೆ. ಒಂದು ಸಾಮಾನ್ಯ ಮನುಷ್ಯರ ತರಹ, ಇನ್ನೊಂದು ವಿಶೇಷ ಚೇತನರ ತರಹದ ಜೀವನ.” ಈ ಸ್ಪರ್ಧೆಯಲ್ಲಿ ಗೆದಿದ್ದು ಅವರಿಗೆ ಮಾನಸಿಕವಾಗಿ ಬಹು ದೊಡ್ಡ ಬಲ ತಂದುಕೊಟ್ಟಿತು.

ಫೋಟೋ ಕೃಪೆ : google
2014ರಲ್ಲಿ ತಮ್ಮ ಡೆಂಟಲ್ ಚಿಕಿತ್ಸಾಲಯ ತೆರೆದರು. ಜೊತೆ ಜೊತೆಗೆ ಅವರು ವಿಶೇಷ ಚೇತನರ ತರಬೇತಿಗಾಗಿ, ಹಕ್ಕುಗಳಿಗಾಗಿ ಹೋರಾಟ ಮಾಡಲು ಪ್ರಾರಂಭ ಮಾಡಿದರು. 2015ರಲ್ಲಿ ಎಸ್.ಜೆ. ಫೌಂಡೇಶನ್ನ್ ಸ್ಥಾಪಿಸಿ ಅದರ ಮೂಲಕ ಮಿಸ್ ವೀಲ್ ಚೇರ್ ಸ್ಪರ್ಧೆಯನ್ನು ಬೆಂಗಳೂರಿನಲ್ಲಿ ಆಯೋಜಿಸಿದರು. 2017ರಲ್ಲಿ ಪೋಲೆಂಡ್ ನಲ್ಲಿ ನಡೆದ “ವಿಶ್ವ ವೀಲ್ ಚೇರ್ ಸುಂದರಿ” ಸ್ಪರ್ಧೆಗೆ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿ ಸ್ಪರ್ಧೆಯಲ್ಲಿ “ವಿಶ್ವ ಜನಪ್ರಿಯ ಟೈಟಲ್” (MISS POPULARITY TITLE) ಪಡೆದರು.
ಸಣ್ಣವರಾಗಿದ್ದಾಗಿಂದಲೂ ಡಾಕ್ಟರ್ ಆಗಲು ಇವರು ಕನಸು ಕಂಡಿದ್ದರು. ಈಗ ಅವರು ಪ್ರಖ್ಯಾತ ಆರ್ಥೋಡಾಂಟಿಕ್ ( ORTHODONTIC) ಡಾಕ್ಟರ್ ಆಗಿದ್ದಾರೆ. ಜೊತೆಯಲ್ಲಿ 2017ರಿಂದ ದಂತ ವೈದ್ಯಕೀಯ ಕಾಲೇಜಿನಲ್ಲಿ ಅಸಿಸ್ಟೆಂಟ್ ಫ್ರೋಫೆಸರ್ ಆಗಿ ಕೂಡ ಕೆಲಸ ಮಾಡುತ್ತಿದ್ದರು. ಜೊತೆಗೆ ಅವರು ಸ್ಥಾಪಿಸಿರುವ ದತ್ತಿ ಸಂಸ್ಥೆಯ ಮೂಲಕ ವಿಶೇಷ ಚೇತನರ ಅಭ್ಯುದಯಕೆ, ಹಕ್ಕುಗಳಿಗೆ ಹೋರಾಟ ಮಾಡುತ್ತಿದ್ದಾರೆ. ಈಕೆ ಟೆಡ್ ಎಕ್ಸ್ (TEDX) ನಲ್ಲಿ ಸ್ಪೂರ್ತಿ ತುಂಬುವ ಮಾತುಗಾರ್ತಿ ಯಾಗಿ ಕೂಡ ಹೊರಹೊಮ್ಮಿದ್ದಾರೆ.
“ನನಗೆ ಅಪಘಾತವಾದಾಗ ನನಗೆ ಎಲ್ಲರೂ ಕರುಣೆ ತೋರಿಸಿದರು. ಆದರೆ ವಿಶೇಷ ಚೇತನರಿಗೆ ಕರುಣೆ ಬೇಕಾಗಿಲ್ಲ. ಬೇಕಾಗಿರುವುದು ಅವರ ಸಾಧನೆಗೆ ಅವರ ಜೊತೆ ಇರವುದು ಮಾತ್ರ ” ಡಾ|ರಾಜಲಕ್ಷ್ಮಿಯವರ ಮಾತು ನಿಜಕ್ಕೂ ಸತ್ಯ.

ಫೋಟೋ ಕೃಪೆ : google
ಡಾ|ರಾಜಲಕ್ಷ್ಮಿಯವರು ತನ್ನ ದೈಹಿಕ ಸ್ಥಿತಿಯ ಬಗ್ಗೆ ಯೋಚಿಸದೆ ಅನೇಕ ಸಾಧನೆಗಳನ್ನು ಮಾಡಿದ್ದಾರೆ. 2016ರಲ್ಲಿ ಕೊಸ್ಮೋಡರ್ಮ ರವರು ಇವರು ಬರೆದ “ಬೋಲ್ಡ್ ಈಸ್ ಬ್ಯೂಟಿಫುಲ್” ಫ್ರೌಢ ಲೇಖನವನ್ನು ಪರಿಗಣಿಸಿ ಭಾರತದ 9 ಧೈರ್ಯವಂತ ಮಹಿಳೆಯಲ್ಲಿ ಒಬ್ಬರು ಎಂದು ಗುರುತಿಸಿದ್ದಾರೆ.
2017 ರಲ್ಲಿ ಎಸ್.ಆರ್.ಎಲ್. Diagnosticsರವರು ” “women of substance” ಎಂದು ಕರೆದು ಸನ್ಮಾನಿಸಿದ್ದಾರೆ. ಜಿಲ್ಲಾ ಮಟ್ಟದ ವೀಲ್ ಚೇರಿನಲ್ಲಿ ಬ್ಯಾಸ್ಕೆಟ್ ಬಾಲ್ ಸ್ಪರ್ಧೆಯಲ್ಲಿ ಸೆಮಿ ಫೈನಲ್ ತಲುಪಿದ್ದರು. ಇಂಡಿಯನ್ ಆರ್ಥೋಡಾಂಟಿಕ್ ಸೊಸೈಟಿಯ ರಾಷ್ಟೀಯ ಪ್ರಶಂಸೆಯ ಪತ್ರ ಪಡೆದಿದ್ದಾರೆ. ಭಾರತದ ರಾಷ್ಟ್ರಾಧ್ಯಕ್ಷರಿಂದ ದೆಹಲಿಯಲ್ಲಿ “ರೋಲ್ ಮಾಡೆಲ್ ಆಫ್ ಇಂಡಿಯಾ” ಎಂಬ ರಾಷ್ಟೀಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ತಾವು ಚಲಾಯಿಸಲು ಸಾಧ್ಯವಾಗುವಂತೆ ಬದಲಾಯಿಸಿಕೊಂಡಿರುವ ಕಾರಿನಲ್ಲಿ ಅವರು ಈವರೆಗೆ 13 ದೇಶಗಳಿಗೆ ಭೇಟಿಕೊಟ್ಟಿದ್ದಾರೆ.
ಈ ದಿನ ರಾಜಲಕ್ಷ್ಮಿ ಸ್ವತಂತ್ರ ಮಹಿಳೆಯಾಗಿದ್ದಾರೆ. ಅವರ ಕಾರನ್ನು ಅವರೇ ಚಾಲನೆ ಮಾಡುತ್ತಾರೆ. ಭಾರತದ ಎಲ್ಲ ಕಡೆ ಓಡಾಡಿದ್ದಾರೆ. ವಿಶ್ವದ ಅನೇಕ ದೇಶಗಳಿಗೆ ಭೇಟಿ ಕೊಟ್ಟಿದ್ದಾರೆ. “ನಾನು ದೈಹಿಕ ತೊಂದರೆಗೆ ಒಳಗಾಗದೆ ಇದ್ದರೆ, ಅವರ ಕಷ್ಟಗಳು ಬಹುಶಃ ನನಗೆ ಗೊತ್ತು ಆಗುತ್ತಿರಲ್ಲಿಲ್ಲವೇನೋ.” ಎಂದು ಅವರು ಹೇಳುವ ಮಾತು ಎಲ್ಲರ ಕಣ್ಣು ತೆರೆಸಲಿ.
ಈ ಮಹಿಳೆ ನಮ್ಮ ಕರ್ನಾಟಕದ ಹೆಮ್ಮೆ.
- ಎನ್.ವಿ.ರಘುರಾಂ. ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್) ಕ.ವಿ.ನಿ.ನಿ.
