ಶ್ರೇಷ್ಠ ವ್ಯಕ್ತಿ, ಸಾಧಕರ ಆತ್ಮಕತೆಗಳು ಇನ್ನೊಬ್ಬರಿಗೆ ಸ್ಪೂರ್ತಿಯಾಗಬಹುದು, ಆದರೆ ಒಬ್ಬ ವೇಶ್ಯೆಯ ಆತ್ಮಕತೆಯ ಉದ್ದೇಶವೇನು?… ‘ವಿದ್ಯಾವಂತ ವೇಶ್ಯೆಯ ಆತ್ಮಕಥೆ’ ಪ್ರಕಟವಾಗಿ ಕೇವಲ ಒಂದೂವರೆ ತಿಂಗಳಿನಲ್ಲಿ ನಾಲ್ಕು ಸಾವಿರ ಪ್ರತಿಗಳ ನಾಲ್ಕು ಮುದ್ರಣ ಕಂಡಿತು, ಬಂಗಾಳಿ ಸಾಹಿತ್ಯದಲ್ಲಿ ದೊಡ್ಡ ಸಂಚಲನ ಮೂಡಿಸಿದಂತ ಕೃತಿ ಇದು. ಇದನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ ನಾಗ ಎಚ್ ಹುಬ್ಳಿ ಅವರು, ನನ್ನ ಅಭಿಪ್ರಾಯವನ್ನು ನಾನು ಕೊಟ್ಟಿದ್ದೇನೆ, ತಪ್ಪದೆ ಮುಂದೆ ಓದಿ…
ಪುಸ್ತಕ :ವಿದ್ಯಾವಂತ ವೇಶ್ಯೆಯ ಆತ್ಮಕಥೆ
ಬಂಗಾಳಿ ಮೂಲ : ಮಾನದಾ ದೇವಿ ಪ್ರಣೀತ
ಕನ್ನಡಕ್ಕೆ ಅನುವಾದ : ಡಾ ನಾಗ ಎಚ್ ಹುಬ್ಳಿ
ಪ್ರಕಾಶನ : ಛಂದ ಪುಸ್ತಕ ಪ್ರಕಾಶನ
ಬೆಲೆ : ೨೪೦.೦೦
ವೇಶ್ಯೆ ವೃತ್ತಿಗೆ ಬರುವ ಬಹುತೇಕ ಹೆಣ್ಣುಮಕ್ಕಳ ಹಿನ್ನೆಲೆ ಅನಕ್ಷರಸ್ಥರು, ಆರ್ಥಿಕವಾಗಿ ದುರ್ಬಲರು ಆಗಿರುತ್ತಾರೆ ಎನ್ನುವುದು ಒಂದು ಊಹೆ ಇದೆ. ವಿದ್ಯಾವಂತ ಹೆಣ್ಣುಮಕ್ಕಳು ಜೀವನ ನಡೆಸಲು ಮಕ್ಕಳಿಗೆ ಮನೆ ಪಾಠ ಮಾಡುತ್ತಾರೆ, ಆಫೀಸ್ ನಲ್ಲಿ ಕೆಲಸ ಮಾಡುತ್ತಾರೆ, ಶಿಕ್ಷಕರಾಗುತ್ತಾರೆ, ಇನ್ನೇನೋ ಆಗುತ್ತಾರೆ ಆದರೆ ವೇಶ್ಯೆಯರಾಗಲು ಮುಂದೆ ಬರುವುದಿಲ್ಲ. ವೇಶ್ಯೆರೆಂದರೆ ನಮ್ಮ ಸಮಾಜದಲ್ಲಿ ಅವರಿಗೆ ಯಾವುದೇ ಗೌರವವಿಲ್ಲಾ. ಅವರನ್ನು ಕೀಳು ದೃಷ್ಠಿಯಲ್ಲಿ ನೋಡುತ್ತಾರೆ. ಅಂತದರಲ್ಲಿ ಒಬ್ಬ ವಿದ್ಯಾವಂತ ಮಹಿಳೆ ವೇಶ್ಯೆವೃತ್ತಿಗೆ ಹೋಗುತ್ತಾಳೆ ಎಂದರೆ ಅದು ಸಹಜವಾಗಿಯೇ ಕುತೂಹಲವನ್ನು ಕೆರಳಿಸುತ್ತದೆ. ನಾಗ ಹೆಬ್ಳಿ ಅವರ ‘ವಿದ್ಯಾವಂತ ವೇಶ್ಯೆಯ ಆತ್ಮಕಥನ’ ಶೀರ್ಷಿಕೆಯ ಪುಸ್ತಕ ನೋಡಿದಾಗ ಅಂತದ್ದು ಈ ಪುಸ್ತಕದಲ್ಲಿ ಏನಿದೆ?… ಅದನ್ನು ಓದಲೇಬೇಕು ಎಂದು ಪುಸ್ತಕವನ್ನು ತರೆಸಿಕೊಂಡೆ.
ಕೊಲ್ಕತ್ತಾದಲ್ಲಿ ಬ್ರಾಹ್ಮಣ ಸಭ್ಯಸ್ಥ ಕುಟುಂಬದಲ್ಲಿ ಹುಟ್ಟಿದ ಮಾನದಾ ದೇವಿ ಪ್ರಣೀತ ಎನ್ನುವ ನತದೃಷ್ಟ ಹೆಣ್ಣುಮಕ್ಕಳ ಕತೆಯಿದು. ಹೆಣ್ಣು ಮಕ್ಕಳಿಗೆ ಹುಟ್ಟಿದಾಗಿನಿಂದ ಮದುವೆ ಆಗಿ ಆಕೆಗೆ ಮಕ್ಕಳಾದರೂ ತಾಯಿಯ ನೆರಳು ಇರಲೇಬೇಕು. ಆ ನೆರಳು ಬರಾಡದರೇ ಮಾನದಾ ಹೆಣ್ಣು ಮಗುವಿನಂತೆ ಅಡ್ಡ ದಾರಿ ಹಿಡಿಯುತ್ತದೆ.

ಮಾನದಾ ಹತ್ತು ವರ್ಷವಳಿದ್ದಾಗ ತಾಯಿಯನ್ನು ಕಳೆದುಕೊಳ್ಳುತ್ತಾಳೆ. ತಾಯಿಯ ಅಕ್ಕರೆಯಲ್ಲಿ ಬೆಳೆದ ಮಾನದಾಳಿಗೆ ತಾಯಿಯನ್ನು ಮರೆಯುವುದು ಅಷ್ಟು ಸುಲಭವಾಗಿರಲಿಲ್ಲ. ಅಪ್ಪನಿಗೆ ಹೆಂಡತಿ ಸ್ಥಾನ ತುಂಬಲು ಹೆಂಡತಿಯಾಗಿ ಇನ್ನೊಬ್ಬಳು ಬಂದಳು. ಆದರೆ ಆಕೆ ಮಾನದಾಳಿಗೆ ತಾಯಿಯ ಸ್ಥಾನ ತುಂಬಲು ಸಾಧ್ಯವಾಗಲಿಲ್ಲ. ತನ್ನ ಏಕಾಂತವನ್ನು ಮರೆಯಲು ಮಾನದಾ ಓದಿನಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಳು. ತನ್ನದೇ ಆದ ಪ್ರಪಂಚದಲ್ಲಿ ಸ್ನೇಹಿತರ ಜೊತೆ ಓಡಾಡುತ್ತಾ, ಸಂತೋಷವಾಗಿದ್ದ ಮಾನದಾ ಮುಂದೆ ಪ್ರೌಢಾವಸ್ಥೆ ಬಂದಾಗ ಪ್ರೀತಿಯ ಮೋಹದ ಬಲೆಯಲ್ಲಿ ಬೀಳುತ್ತಾಳೆ. ಅಪ್ಪ ,ಮಲತಾಯಿಯ ನಿರ್ಲಕ್ಷ್ಯ ಹಾಗೂ ಆಕೆಗೆ ಸಿಕ್ಕ ಸ್ವಾತಂತ್ರದಿಂದ ತನ್ನ 15 ವರ್ಷ ವಯಸ್ಸಿನಲ್ಲಿ ಗೆಳೆಯ ರಮೇಶ್ ನ ಮಾತು ಕೇಳಿ ಅವನೊಂದಿಗೆ ಮನೆ ಬಿಟ್ಟು, ದೂರದ ಊರಿಗೆ ಓಡಿ ಹೋಗುತ್ತಾಳೆ.
ಪ್ರಪಂಚದ ಧ್ಯಾನವಿಲ್ಲದ ಅಮಾಯಕೆ ಮಾನದಾ, ಮುಂದೆ ರಮೇಶನ ಮೋಸದ ಬಲೆಗೆ ಬಿದ್ದು ಒದ್ದಾಡಿ ಹೋಗುತ್ತಾಳೆ. ರಮೇಶ ಒಬ್ಬ ಮೋಸಗಾರ, ಕಳ್ಳ, ಸುಳ್ಳ ಎಂದು ತಿಳಿಯುವಷ್ಟರಲ್ಲಿ ಗರ್ಭಿಣಿಯಾಗಿರುತ್ತಾಳೆ. ದುಷ್ಟ ರಮೇಶ ತನ್ನ ಆಸೆಗಳು ಈಡೇರಿದ ಮೇಲೆ ಒಂದು ದಿನ ಮಾನದಾಳನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು ಮನೆಯಿಂದ ಹೊರಟು ಹೋಗುತ್ತಾನೆ. ಗೊತ್ತಿಲ್ಲದ ಊರು ಕೇರಿಯಲ್ಲಿ ಒಂಟಿಯಾಗಿ ಬದುಕು ಕಟ್ಟಿಕೊಳ್ಳುವುದು ಮಾನದಾಗೆ ದೊಡ್ಡ ಸವಾಲಾಗುತ್ತದೆ. ಮುಗ್ಧ ಹುಡುಗಿ, ಮನೆ ತುಂಬಾ ಆಳುಕಾಳು ಇದ್ದಂತಹ ಅನುಕೂಲಸ್ಥ ಕುಟುಂಬದಲ್ಲಿ ಬೆಳೆದ ಹುಡುಗಿ ಬದುಕು ಕಟ್ಟಿಕೊಳ್ಳಲು ತನ್ನ ಮೈಮೇಲೆ ಇದ್ದಂತಹ ಬಂಗಾರವನ್ನೆಲ್ಲ ಮಾರಿ ಬರಿಗೈಯಾಗಿ ನಿಲ್ಲುತ್ತಾಳೆ.
ಅಲ್ಲಿಂದ ಸ್ವಾಮೀಜಿ ಆಶ್ರಮಕ್ಕೆ ಆಶ್ರಯ ಬಯಸಿ ಬರುತ್ತಾಳೆ, ಆಶ್ರಮದಲ್ಲಿ ಆಶ್ರಯ ಸಿಗುತ್ತದೆ. ಅಲ್ಲಿ ಮಾನದಾ ಗರ್ಭದಲ್ಲಿಯೇ ಮಗು ಅಸುನಿಗುತ್ತದೆ. ಅನ್ನಹಾರ, ಉಡುಗೆ – ತೊಡುಗೆ ಯಾರಿಗೂ ಕೊರತೆಯಾಗುವುದಿಲ್ಲ. ಆದರೆ ಮನಸ್ಸಿನೊಳಗೆ ಕಾಮ ರಾಕ್ಷಸವಿದ್ದರೇ ಅನೇಕರನ್ನು ಬೀದಿಗೆ ತಂದು ಬಿಡುತ್ತದೆ ಎನ್ನುವ ಸ್ವಾಮೀಜಿಯ ಮಾತು ಮಾನದಾಳ ಬದುಕಿನಲ್ಲಿ ಸತ್ಯವಾಗುತ್ತದೆ. ಅವಳಲ್ಲಿನ ಕಾಮದ ಹಂಬಲಕ್ಕೆ ಆಶ್ರಮದ ಬಾಗಿಲು ಮುಚ್ಚುತ್ತದೆ. ಮುಂದೆ ಮಾನದಾ ಮಹಿಳಾ ಕಲ್ಯಾಣ ಆಶ್ರಮ ಸೇರುತ್ತಾಳೆ. ಅಲ್ಲಿ ಇನ್ನೊಂದು ದುಷ್ಟ ಪ್ರಪಂಚ ತೆರೆದುಕೊಳ್ಳುತ್ತದೆ. ಅಲ್ಲಿ ಆಶ್ರಮದ ಆಡಳಿತ ವರ್ಗದವರ ಕಾಮಕ್ಕೆ ಮಾನದಾ ಬಲಿಯಾಗುತ್ತಾಳೆ. ಅವರಿಂದ ತಪ್ಪಿಸಿಕೊಂಡು ಮತ್ತೊಂದು ಕಡೆ ಹೋದಾಗ ಅವಳು ಮಾಡಿದ ಒಂದು ತಿಳಿಯದ ತಪ್ಪಿಗೆ ಇಡೀ ಸಮಾಜ ಕೊನೆಗೆ ಹೆತ್ತ ತಂದೆಯೂ ಕೂಡಾ ಕ್ಷಮಿಸುವುದಿಲ್ಲ.

ಮಾನದಾ ತನ್ನ ಆತ್ಮಕಥೆಯಲ್ಲಿ ಒಂದು ಕಡೆ ಹೇಳುತ್ತಾಳೆ ಕೆಲವು ತರುಣರ ಕುತಂತ್ರ, ಮೋಸ, ವಂಚನೆಯಿಂದ ಎಷ್ಟೋ ಹೆಣ್ಣುಮಕ್ಕಳು ಕಾಲು ಜಾರುತ್ತಾರೆ. ಯಾರು ಸಮಾಜದ ಒಳಿತಿಗಾಗಿ ಯೋಚಿಸುತ್ತಾರೋ ಅಂಥವರು ದಾರಿ ತಪ್ಪಿದ ಹೆಣ್ಣುಮಕ್ಕಳನ್ನು ಕೈಹಿಡಿದು ಅವರಿಗೆ ಬದುಕು ಕಟ್ಟಿಕೊಳ್ಳಲು ಸಹಾಯದ ಹಸ್ತ ಚಾಚಿ ಎಂದು ವಿನಂತಿಸಿಕೊಳ್ಳುತ್ತಾರೆ. ಮಾನದಾ ಈ ಮಾತು ಹೇಳಬೇಕೆಂದರೆ ಅವಳು ರಮೇಶನ ಜೊತೆ ಓಡಿ ಹೋಗಿದ್ದು ತಪ್ಪಿನ ಅರಿವು ಚನ್ನಾಗಿ ಆಗಿತ್ತು. ಅವರ ತಂದೆ ಮತ್ತು ಈ ಸಮಾಜ ಕೂಡಾ ಮಾನದಾಳಷ್ಟೇ ದೊಡ್ಡ ತಪ್ಪು ಮಾಡಿದೆ. ಅವಳ ತಪ್ಪನ್ನು ಕ್ಷಮಿಸಿ ಬದುಕಲು ಒಂದು ಅವಕಾಶವನ್ನು ಮಾನದಾಳಿಗೆ ಕೊಟ್ಟಿದ್ದರೇ ಆಕೆ ಒಬ್ಬ ಒಳ್ಳೆ ಗಾಯಕಿಯಾಗುತ್ತಿದ್ದಳು, ಇಲ್ಲವೇ ಇನ್ನೊಂದು ಏನೋ ಸಾಧನೆ ಮಾಡುತ್ತಿದ್ದಳು. ಆದರೆ ಅವಳನ್ನು ಇನ್ನಷ್ಟು ನರಕಕ್ಕೆ ತಳ್ಳಿದ್ದು ಅವಳ ಅಪ್ಪ ಮತ್ತು ಈ ಸಮಾಜವೇ. ಅವರು ಮಾಡಿದ ದೊಡ್ಡ ತಪ್ಪಿನಿಂದ ಮಾನದಾ ಬದುಕಲು ವೇಶ್ಯೆ ವೃತ್ತಿಯನ್ನು ರಾಜಾರೋಷವಾಗಿ ಆಯ್ದುಕೊಂಡಳು.
ಕೆಲವು ವೇಶ್ಯೆಯರಂತೂ ಪ್ರತಿಷ್ಠಿತ ವ್ಯಕ್ತಿಯ ಅನೈತಿಕ ಸಂಬಂಧದಿಂದ ಹುಟ್ಟಿದವರು. ಅವರಿಂದ ಹುಟ್ಟಿದ ಮಕ್ಕಳು ಕಷ್ಟದಲ್ಲಿ, ನೋವಿನಲ್ಲಿ ಒದ್ದಾಡುತ್ತಿದ್ದರೇ, ಹುಟ್ಟಿಸಿದ ಗಣ್ಯವ್ಯಕ್ತಿಗಳು ಜನರ ಮಧ್ಯೆ ಗೌರವದಿಂದ ಬಾಳುತ್ತಿದ್ದಾರೆ. ತಿಳಿಯದೆ ತಪ್ಪು ಮಾಡಿದ ಎಷ್ಟೋ ಮಾನದಾಳಂತವರು ಕೆಂಪು ಬೆಳಕಿನ ಮಧ್ಯೆ ಉಸಿರುಗಟ್ಟಿಸಿಕೊಂಡು, ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ ಎನ್ನುವ ಸತ್ಯ ತಿಳಿದಾಗ ಓದುಗರಲ್ಲಿ ಆಕ್ರೋಶ ಹುಟ್ಟುಹಾಕುತ್ತದೆ.
ಮಾನದಾ ಕತೆ ಇನ್ನೂ ಇದೆ. ಆದರೆ ನೀವು ಪುಸ್ತಕಕೊಂಡು ಓದಲಿ ಎನ್ನುವ ಕಾರಣಕ್ಕೆ ಕುತೂಹಲ ಇಲ್ಲಿಗೆ ಬಿಟ್ಟು ಲೇಖಕರ ವಿಚಾರಕ್ಕೆ ಬರುತ್ತೇನೆ.
1920ರಲ್ಲಿ ಬಂಗಾಳಿ ಸಾಹಿತ್ಯದಲ್ಲಿ ಸಂಚಲನವನ್ನು ಹುಟ್ಟಿಸಿದಂತಹ ಕೃತಿ ‘ಶಿಕ್ಷತಾ ಪತಿತಾರ್ ಆತ್ಮಚರಿತ’. ಅದನ್ನು ಕನ್ನಡಕ್ಕೆ ತಂದವರು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ಡಾ ನಾಗ ಎಚ್ ಹುಬ್ಳಿ ಅವರು. ಓದಿದ್ದು ಇಂಜಿನಿಯರಿಂಗ್ ಡಿಪ್ಲೋಮ, ಕನ್ನಡದಲ್ಲಿ ಎಂ ಎ, ಪತ್ರಿಕೋದ್ಯಮದಲ್ಲಿ ಪಿ ಎಚ್ ಡಿ ಮಾಡಿದ್ದಾರೆ. ಸದ್ಯ ಇವರು ರಾಂಚಿಯಲ್ಲಿ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೇರೆ ಭಾಷೆಯಿಂದ ಅನುವಾದ ಮಾಡುವುದು ಅಷ್ಟು ಸುಲಭದ ಮಾತಲ್ಲ. ಓದುಗರಿಗೆ ಆಪ್ತವಾಗಬೇಕು ಎಂದರೆ ಓದುಗನ ಮನಸ್ಸನ್ನು ಹೊಕ್ಕಿ ಬರೆಯಬೇಕು. ಅದನ್ನು ನಾಗ್ ಸರ್ ಓದುಗನ ಮುಂದೆ ಚಂದವಾಗಿ ಪ್ರಸ್ತುತ ಪಡಿಸಿದ್ದಾರೆ. ಎಲ್ಲಿಯೂ ಇದು ಅನುವಾದಗೊಂಡ ಪುಸ್ತಕ ಅನ್ನಿಸುವುದಿಲ್ಲ ಸ್ವತಃ ಮಾನದಾನೇ ಕನ್ನಡದಲ್ಲಿ ಬರೆದಂತೆ ಅನುಭವಕೊಡುತ್ತದೆ.
ಪುಸ್ತಕ ಮುಗಿಯುವ ಹೊತ್ತಿಗೆ ವೇಶ್ಯೆಯರ ಕಷ್ಟಗಳು. ವೈಶ್ಯವಾಟಿಕೆ ಹಿಂದಿರುವ ಅಸಲಿ ನಕಲಿ ಸತ್ಯಗಳು, ಇಂತಹ ಹೀನ ಕೃತ್ಯಕ್ಕೆ ಹೆಣ್ಣುಮಕ್ಕಳು ಹೇಗೆ ಅಪ್ಪಿಕೊಳ್ಳುತ್ತಾರೆ? ಸಾಕಷ್ಟು ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರಗಳು ಮಾನದಾ ಅವರಿಂದ ಈ ಕೃತಿಯಲ್ಲಿ ಸಿಗುತ್ತದೆ.
ಇದು ಕೇವಲ ಮಾನದಾ ದೇವಿ ಪ್ರಣೀತ ಅವರ ಒಬ್ಬರ ಕತೆಯಲ್ಲ, ಗಂಗೂಬಾಯಿ ಕಾಠಿಯಾವಾಡಿ ಅವರ ಕತೆಯೂ ಹೀಗೆಯೇ. ನಟಿಯಾಗಬೇಕು ಎನ್ನುವ ಹುಚ್ಚಿಗೆ ಮನೆಯವರಿಗೆ ಗೊತ್ತಾಗದಂತೆ ಯಾರೊಬ್ಬನ ಹಿಂದೆ ಮುಂಬೈ ಬರುತ್ತಾಳೆ. ಮುಂದೆ ಆಕೆಯೂ ಕೆಂಪು ದೀಪದಲ್ಲಿ ಕಳೆದು ಹೋಗುತ್ತಾಳೆ. ಇದು ೨೦೨೨ ರಲ್ಲಿ ತೆರೆಕಂಡ ‘ಗಂಗೂಬಾಯಿ’ ಎನ್ನುವ ಹಿಂದಿ ಸಿನಿಮಾದಲ್ಲಿ ಅವರ ಜೀವನ ಕತೆಯನ್ನು ನೋಡಬಹುದು. ಅಲಿಯಾ ಭಟ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಾನದಾ ದೇವಿ ಪ್ರಣೀತ ಅವರ ‘ವಿದ್ಯಾವಂತ ವೇಶ್ಯೆಯ ಆತ್ಮಕಥೆ’ ಪುಸ್ತಕ ಓದುವಾಗ ಗಂಗೂಬಾಯಿ ಕಾಠಿಯಾವಾಡಿ ಅವರ ಆತ್ಮಕತೆಯೂ ನೆನಪಿಗೆ ಬಂತು.
ಮೋಸ ಹೋಗುವ ಪ್ರತಿ ಹೆಣ್ಣಿನ ಹಿಂದೆ ಸಾಕಷ್ಟು ನೋವಿನ ಕತೆಗಳಿವೆ. ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿ, ಪ್ರೇಮ, ಇನ್ನೇನೋ ಹುಚ್ಚು ಹತ್ತಿಸಿಕೊಂಡು ಅಪ್ಪ ಅಮ್ಮನಿಗೆ ನೋವು ಕೊಡುವ ಮೊದಲು ಈ ಪುಸ್ತಕವನ್ನು ಎಲ್ಲ ಹುಡುಗ , ಹುಡುಗಿಯರು ತಪ್ಪದೆ ಓದಬೇಕು. ಎಚ್ಚರಿಗೆ ಗಂಟೆ ಈ ಪುಸ್ತಕವಾಗಿದೆ. ಪುಸ್ತಕ ಓದಿದಮೇಲೆ ನಮ್ಮ ಮನಸ್ಸು ಕೆಂಪು ದೀಪದಿಂದ ಕತ್ತಲಲ್ಲಿ ಸ್ವಲ್ಪ ಹೊತ್ತು ಕೂರಿಸುವುದಂತೂ ಸತ್ಯ ಎಂದು ಹೇಳುತ್ತಾ ನಾಗ್ ಸರ್ ಅವರಿಗೆ ಶುಭವಾಗಲಿ ಎಂದು ಶುಭ ಕೋರುತ್ತೇನೆ…
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಸಂಪಾದಕಿ
