ದುಡ್ಡಿಗಾಗಿ ವೋಟು ಮಾರಿ ಗುಲಾಮರಾಗಬೇಡಿ, ಸ್ವಇಚ್ಚೆಯಿಂದ ಮತದಾನ ಮಾಡಿ ನಾಯಕರಾಗಿ, ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ, ನಿಮ್ಮ ಅಮೂಲ್ಯ ಮತ ದೇಶದ ಭವಿಷ್ಯ ಎನ್ನುವುದು ಮರೆಯದಿರಿ, ವಿಕಾಸ್. ಫ್. ಮಡಿವಾಳರ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…
ಒಂದೆರಡು ದಿನದ ಹಿಂದೆ ನನ್ನ ಮಿತ್ರನೊಬ್ಬ ಕರೆಮಾಡಿ ವೋಟಿಂಗ್ ಕಾರ್ಡ್ ಮಾಡಿಸುವುದು ಹೇಗೆ? ಎಂದು ಕೇಳಿದ. ರಾಜಕಾರಣವೆಂದರೆ ಸಾಕು ಉದ್ದುದ್ದ ಬೈಗುಳಗಳನ್ನು ಬೈಯುತ್ತಿದ್ದ ಅವನು ಈಗ ವೋಟಿಂಗ್ ಕಾರ್ಡ್ ಮಾಡಿಸುತ್ತಿದ್ದಾನೆಂದು ತಿಳಿದು ಆಶ್ಚರ್ಯದಿಂದ “ರಾಜಕೀಯ ಎಂದರೆ ದೂರ ಸರಿಯುವವನು ಈಗ ಅದೇಕೆ ರಾಜಕಾರಣದಲ್ಲಿ ಅಷ್ಟು ರುಚಿ ತೋರಿಸುತ್ತಿರುವೆ ” ಎಂದು ಕೇಳಿಬಿಟ್ಟೆ. ಅದಕ್ಕವನು “ಹಾಗೇನಿಲ್ಲ ಅಣ್ಣ, ವೋಟರ್ ಕಾರ್ಡ್ ಗೆ ಎಲ್ಲ ರಾಜಕೀಯ ಪಕ್ಷಗಳು ತಲಾ ಒಂದೊಂದು ಸಾವಿರ ರೂಪಾಯಿ ಕೊಡ್ತಾ ಇದ್ದಾರೆ. ಒಳ್ಳೆ ಬಿಸಿನೆಸ್ ಆಗುತ್ತಲ್ಲ ಅದ್ಕೆ ಮಾಡಿಸ್ಕೊತ ಇದೇನಿ ” ಅಂತ ಹೇಳಿದ.
ಅವನ ಮಾತಿಗೆ ನನ್ನಲ್ಲಿ ಉತ್ತರವಿರಲಿಲ್ಲ. ಸುಮ್ಮನೆ ಫೋನ್ ಕಟ್ ಮಾಡಿದೆ. ಹೀಗೆ ಮಾತಾಡಿದವನು ಯಾವುದೊ ಅನಕ್ಷರಸ್ತ ವ್ಯಕ್ತಿಯಾಗಿದಿದ್ದರೆ ಅವನಿಗೆ ಬುದ್ದಿ ಹೇಳಬಹುದಾಗಿತ್ತು. ಆದರೆ ಆ ಮಾತುಗಳ್ಳನಾಡಿದವನು ಅಕ್ಷರದ ಜ್ಞಾನ ಉಳ್ಳವನಾಗಿದ್ದು, ದೇಶದ ಪರಿಸ್ಥಿತಿಯ ಆಳ ಮತ್ತು ಅಗಲವನ್ನು ಅರಿತ ಯುವಕನಾಗಿದ್ದ. ಅವನ ಮಾತುಗಳನ್ನು ಕೇಳಿ ಕೊಂಚ ಕಸಿವಿಸಿಯಾಯಿತು. ಓದು ಬರಹ ತಿಳಿದ ಯುವಕರೆ ದುಡ್ಡಿನ ಆಮಿಷಕ್ಕೊಳಗಾಗಿ ತಮ್ಮ ಹಕ್ಕನ್ನು ಮಾರಿಕೊಳ್ಳುತ್ತಿದ್ದಾರೆಂದರೆ, ಅವರಿಗೂ ಭಿಕ್ಷೆ ಬೇಡುವವರಿಗೂ ಯಾವುದೆ ವ್ಯತ್ಯಾಸವಿಲ್ಲವೆನಿಸುತ್ತದೆ. ಅದಕ್ಕಾಗಿ ಏನೊ ನಮ್ಮ ಪ್ರಜಾಹಿತಾಂಕ್ಷಿ ಹಾಡುಹಗಲಲ್ಲೆ ದೇಶವನ್ನು ಕೊಳ್ಳೆ ಹೊಡೆಯುತ್ತಿರುವುದು. ನಾವುಗಳೆ ಮಣ್ಣು ತಿಂದು ಅವರಿಗೆ ಬೈಯುವುದು ಸಮಂಜಸವಲ್ಲ. ಮೊದಲು ನಾವು ತಿದ್ದಿಕೊಳ್ಳಬೇಕು ನಮ್ಮವರನ್ನು ತಿದ್ದಬೇಕು.

ಕೆಳದಿನಗಳ ಹಿಂದೆ ವೊಟಿಂಗ್ ಕಾರ್ಡ್ ಮಾಡಿಸಲು ನಗರಸಭೆಗೆ ಹೊರಟಿದ್ದೆ. ಎಲ್ಲ ದಾಖಲೆಗಳನ್ನು ಕೊಟ್ಟನಂತರ ಅಲ್ಲಿರುವ ಸಿಬ್ಬಂದಿ ” ಇಲ್ಲೆ ಸ್ವಲ್ಪ ದೂರದಲ್ಲಿ ಒಂದು ಕಂಪ್ಯೂಟರ್ ಅಂಗಡಿ ಇದೆ. ಅಲ್ಲಿ ನನ್ನ ಹೆಸರನ್ನು ಹೇಳಿ. ಕೂಡಲೆ ವೊಟರ್ ಕಾರ್ಡ್ ಮಾಡಿಸಿಕೊಡುತ್ತಾನೆ” ಅಂತ ಹೇಳಿದ. ಬೆಳಗ್ಗೆಯಿಂದ ತಹಶೀಲ್ದಾರ್ ಕಚೇರಿ, ನಗರಸಭೆ ಸುತ್ತಾಡಿದ್ದ ನನಗೆ ಕೋಪ ಬಂದು ” ನಿಮಗೆ ಸರ್ಕಾರ ದುಡ್ಡು ಕೊಡುತ್ತದೋ ಇಲ್ಲ ಕಂಪ್ಯೂಟರ್ ಅಂಗಡಿಯವನು ಕೂಲಿ ಕೊಡುತ್ತಾನೊ” ಎಂದು ರೇಗಾಡಿದೆ. ಇವರೆಲ್ಲ ಸರ್ಕಾರಿ ಕೆಲಸಗಾರರೊ ಇಲ್ಲ ಕಂಪ್ಯೂಟರ್ ಅಂಗಡಿಗಳ ಏಜೆಂಟರೊ ನನಗೆ ತಿಳಿದಿಲ್ಲ. ಅವರವರ ಕೆಲಸಗಳನ್ನು ನಿಯತ್ತಾಗಿ ಮಾಡಿದಿದ್ದರೆ ನನ್ನ ದೇಶದ ಪರಿಸ್ಥಿತಿ ಹೀಗೆ ಆಗುತ್ತಿರಲಿಲ್ಲ. ಒಂದರ್ಥದಲ್ಲಿ ಇವರೆ ನಮ್ಮನ್ನು ಲೂಟಿ ಹೊಡೆದು ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆ ಆರೋಪಿಸುತ್ತಾರೆ. ಬೆಕ್ಕು ತಾನು ತಿಂದು ಇಲಿ ಬಾಯಿಗೆ ಒರೆಸಿದಂತೆ.
ಎಲೆಕ್ಷನ್ ಬಂತೆಂದರೆ ರಾಜಕಾರಣಿಗಳ ಕಣ್ಣಿಗೆ ಮೊದಲು ಬೀಳುವುದು ಅಕ್ಷರಸ್ಥ ಯುವಕರು. ಬಿಸಿ ರಕ್ತದ ಯುವಕರನ್ನು ಕ್ರಾಂತಿಕಾರಿ ವಿಚಾರಗಳಿಂದ ಇಲ್ಲವೆ ದೊಡ್ಡ ದೊಡ್ಡ ಭಾಷಣಗಳಿಂದ ಬ್ರೈನ್ ವಾಶ್ ಮಾಡಿ ಸುಲಭವಾಗಿ ವೋಟ್ ಗಳನ್ನು ಕೊಳ್ಳೆಹೊಡೆಯಬಹುದೆಂಬುದು ಅವರ ಆಲೋಚನೆ. ಇವೆರಡಕ್ಕೂ ಅವರು ಬಗ್ಗಲಿಲ್ಲವೆಂದರೆ ಅವರ ಕೊನೆಯ ಅಸ್ತ್ರವೆ ದುಡ್ಡು ಕೊಟ್ಟು ವೋಟು ಖರೀದಿಸುವುದು. ದೆಹಲಿ ಸುಲ್ತಾನರ ಕಾಲದಲ್ಲಿ, ಮೊಘಲ್ ಔರಂಗಜೇಬನ ಕಾಲದಲ್ಲಿ ದುಡ್ಡು ಕೊಟ್ಟು ಗುಲಾಮರನ್ನಾಗಿಸುವ ಪದ್ಧತಿ ಇತ್ತು. ಈಗ ನಮ್ಮ ಪ್ರಜಾಹಿತ ರಕ್ಷಕರು ದುಡ್ಡು ಕೊಟ್ಟು ಮತದಾರರನ್ನು ಖರೀದಿಸುತ್ತಿದ್ದಾರೆ. ದುಡ್ಡಿಗಾಗಿ ಅವರ ಹಿಂದೆ ಗುಂಪು ಕಟ್ಟಿ ಸುತ್ತಾಡುವ ಮುಂಚೆ ಒಮ್ಮೆ ಯೋಚಿಸಿ, ನಿಮ್ಮ ದುಡ್ಡನ್ನೆ ನಿಮಗೆ ಕೊಡುತ್ತಿದ್ದಾರೆ ಹೊರತು ಅವರುಗಳ ಸ್ವಂತ ಸಂಪಾದನೆಯಿಂದಲ್ಲ. ಕೆರೆಯ ನೀರನ್ನು ಕೆರೆಗೆ ಚಲ್ಲಿ ಅವರು ಲಾಭಪಡೆದುಕೊಳ್ಳುತ್ತಿರುವುದು ನಿಮಗೆ ಕಾಣಿಸುತ್ತಿಲ್ಲವೆ.
ಫೋಟೋ ಕೃಪೆ : google
ನಿಮ್ಮ ಉಜ್ವಲ ಭವಿಷ್ಯವನ್ನು, ಕೊಳ್ಳೆ ಹೊಡೆಯುವವರಿಗೆ ಕೊಟ್ಟು ಏನು ಪ್ರಯೋಜನ. ಒಬ್ಬ ಒಳ್ಳೆ ನಾಯಕನನ್ನು ಆರಿಸಿ ತರುವ ಹಕ್ಕು ನಿಮಗಿದೆ. ಆ ನಾಯಕ ನಿಮ್ಮಲ್ಲೆ ಒಬ್ಬರಾಗಿರುತ್ತಾರೆ. ನಿಮ್ಮ ಒಂದು ಮತದಾನದಿಂದ ದೇಶದ ಭವಿಷ್ಯ ಬದಲಾಗಲಿದೆ. ಇಂದಿನ ಯುವಕರೆ ಮುಂದಿನ ನಾಯಕರೆಂಬ ಸತ್ಯವನ್ನು ಅರಿತು ಯಾವುದೊ ಪ್ರಭಾವಕ್ಕೆ ಅಥವಾ ಆಮಿಷಕ್ಕೆ ಒಳಗಾಗದೆ ಮತನಿಡಿ. ದೇಶದ ಪ್ರಗತಿಗೆ ನಾಂದಿ ಹಾಡುವುದು ಬಿಡುವುದು ನಿಮ್ಮ ಕೈಯ್ಯಲ್ಲಿದೆ. ದುಡ್ಡಿಗಾಗಿ ವೋಟು ಮಾರಿ ಗುಲಾಮರಾಗುತ್ತಿರೊ ಇಲ್ಲ ತಮ್ಮ ಸ್ವಇಚ್ಚೆಯಿಂದ ಮತದಾನ ಮಾಡಿ ನಾಯಕರಾಗುತ್ತಿರೊ ನೀವೇ ತಿರ್ಮಾನಿಸಿ. ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ.
ಇಂತಿ ನಿಮ್ಮ ಪ್ರೀತಿಯ…
- ವಿಕಾಸ್. ಫ್. ಮಡಿವಾಳರ