ಎರಡನೆಯ ಮಹಾಯುದ್ಧ ಇತಿಹಾಸ

ಮಹಾಯುದ್ಧಗಳು ಅದರಲ್ಲೂ ಎರಡನೆಯ ಮಹಾಯುದ್ಧ, ಪ್ರಪಂಚದ ಇತಿಹಾಸದ ಒಂದು ಕರಾಳ ಅಧ್ಯಾಯ. ಒಂದು ಅಂದಾಜಿನ ಪ್ರಕಾರ ೭೫ ರಿಂದ ೮೦ ಮಿಲಿಯ ಜನರ ಮಾರಣಹೋಮವಾಯಿತು.  ‘ಎರಡನೆಯ ಮಹಾಯುದ್ಧ ಇತಿಹಾಸ’ ಕುರಿತು ರಾಘವನ್ ಚಕ್ರವರ್ತಿ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಪ್ರಮುಖವಾಗಿ ಸೋವಿಯೆತ್ ಒಕ್ಕೂಟ ಹಾಗೂ ಚೀನಾ ತೀವ್ರ ನಷ್ಟಕ್ಕೊಳಗಾದವು. ನಂತರ ಜಪಾನ್ ನ ಸರದಿ. ಯುದ್ಧ ಮಾತ್ರದಿಂದಲ್ಲದೇ, ತೀವ್ರ ಹಸಿವು, ಬಾಂಬ್ ಸ್ಪೋಟಾನಂತರದ ಅಪಾಯಕಾರಿ ವಿಕಿರಣಗಳಿಂದ ಆದ ಜೀವನಷ್ಟವೂ ಇದರಲ್ಲಿ ಸೇರಿದೆ. ಹಿಟ್ಲರ್ ನ ನಾಜ಼ಿ ಧೂರ್ತ ಪಡೆ, ತನ್ನ ಯಾತನಾ ಶಿಬಿರ (concentration camp)ಗಳಲ್ಲಿ ತೀವ್ರ ಹಿಂಸಾಚಾರವೆಸಗಿ ಕೊಂದವರ (ಬಹುತೇಕ ಯಹೂದಿಗಳು (Jews)) ಸಂಖ್ಯೆಯೂ ಲಕ್ಷಗಳಲ್ಲಿದೆ. ೧೯೩೯ರಲ್ಲಿ ನಾಜ಼ಿಗಳ ಜರ್ಮನಿ, ಪೋಲೆಂಡನ್ನು ಆಕ್ರಮಿಸುವುದೊಂದಿಗೆ ಆರಂಭವಾದ ಎರಡನೆಯ ವಿಶ್ವಸಮರ, ೧೯೪೫ರಲ್ಲಿ ಹಿಟ್ಲರ್ ನ ಆತ್ಮಹತ್ಯೆಯ ನಂತರ ಜರ್ಮನಿಯ ಶರಣಾಗತಿಯವರೆಗೂ ಅವಿಚ್ಛಿನ್ನವಾಗಿ ಮುಂದುವರೆಯಿತು. ವಿಶ್ವದ ಅಂದಿನ ಎಲ್ಲಾ ಶಕ್ತಿಶಾಲೀ ರಾಷ್ಟ್ರಗಳೂ ಯುದ್ಧದಲ್ಲಿ ’ಭಾಗವಹಿಸಿ’ದ್ದವು.

ಮಾನವತೆಗೆ ಅಪರಿಹಾರ್ಹ ಕಳಂಕ ತಂದ ಮಹಾಯುದ್ಧ, ಸಿನಿಮಾ ಜಗತ್ತಿನ ಮೇಲೆ ಅಪಾರ ಪರಿಣಾಮ ಬೀರಿತು. ಮಹಾಯುದ್ಧದ ಕಥೆಯ ಹಿನ್ನಲೆಯುಳ್ಳ ಹಲವಾರು ಅವಿಸ್ಮರಣೀಯ ಚಿತ್ರಗಳು ನಿರ್ಮಿತವಾದವು. ಹಾಲಿವುಡ್ ಮೇಲೆ ’ಹೋಲೋಕಾಸ್ಟ್’, ’ಕಾನ್ಸನ್ಟ್ರೇಷನ್ ಕ್ಯಾಂಪ್’, ’ಗ್ಯಾಸ್ ಚೇಂಬರ್’, ತರದ ಪರಿಕಲ್ಪನೆಗಳು ಗಾಢಪರಿಣಾಮ ಬೀರಿದವು.

ಮಹಾಯುದ್ಧದ ಘಟನೆಗಳನ್ನು ಹಿನ್ನಲೆಯಾಗಿಯೋ ಅಥವಾ ಅದನ್ನೇ ವಿಷಯವಾಗಿಯೋ ಉಳ್ಳ Casablanca, The Great Escape, inglorious bastards, Saving Private Ryon, Schindler’s list, The Pianoist…. ಮುಂತಾದ ಚಿತ್ರಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. The Pianistನ ನಿರ್ದೇಶಕ ರೋಮನ್ ಪೊಲನ್ಸ್ಕಿ, ಸ್ವತಃ ಯಾತನಾ ಶಿಬಿರದಲ್ಲಿ ಬಂಧಿಯಾಗಿದ್ದರು. ಅಲ್ಲಿನ ಹಿಂಸಾಚಾರ, ಮಾರಣಹೋಮವನ್ನೆಲ್ಲಾ ಕಣ್ಣಾರೆ ಕಂಡು ಹೇಗೋ ಅಲ್ಲಿಂದ ತಪ್ಪಿಸಿಕೊಂಡಿದ್ದರು. ಹೀಗಾಗಿ ಅವರ The Pianist ಒಂದು ಅಪೂರ್ವ ಕಲಾಕೃತಿಯಾಯಿತು. ವಿಶ್ವಯುದ್ಧದ ಹಿನ್ನಲೆಯ ಕಥೆಯುಳ್ಳ ಚಿತ್ರಗಳಲ್ಲಿ The Pianist ಗೇ ಒಂದು ತೂಕವಿದೆ.

ಇಲ್ಲಿ ಹಂಚಿಕೊಂಡಿರುವ ಇಬ್ಬರು ಬಾಲಕರಿರುವ ಸ್ತಬ್ಧ ಚಿತ್ರ “The Boy in the Striped Pyjaamas” ಎಂಬ ಇಂಗ್ಲೀಷ್ ಚಿತ್ರದ್ದು. ವಿಶ್ವಯುದ್ಧದ ಕಥೆ ಆಧರಿಸಿದ ಚಿತ್ರಗಳ ವರ್ಗಕ್ಕೆ (genre) ಸೇರಿದ ಮತ್ತೊಂದು ಗಮನಾರ್ಹ ಚಿತ್ರ. ಯಾತನಾ ಶಿಬಿರಗಳನ್ನು ಇಬ್ಬರು ಚಿಕ್ಕ ಬಾಲಕರ ಕಣ್ಣಲ್ಲಿ ಕಂಡಹಾಗೆ ಕಟ್ಟಿಕೊಡುವ ನಿರ್ದೇಶಕ ಮಾರ್ಕ್ ಹರ್ಮನ್ ರ ಯತ್ನ ಶ್ಲಾಘನೀಯವಾಗಿದೆ.


ಫೋಟೋ ಕೃಪೆ : google

ಬ್ರುನೊ, ಎಂಟು ವರ್ಷದ ಬಾಲಕ. ತಂದೆ ನಾಜ಼ಿ (ಜರ್ಮನ್) ಸೈನ್ಯದಲ್ಲಿ ಅಧಿಕಾರಿ. ಯಾತನಾ ಶಿಬಿರಗಳಲ್ಲಿನ ಯಹೂದಿಗಳ ’ತೀವ್ರ ವಿಚಾರಣೆ’, ಅವರ ಮೇಲಿನ ಹಿಂಸಾಚಾರ, ಸತ್ತ ಖೈದಿಗಳ ಸಾಮೂಹಿಕ ದಹನ ಇತ್ಯಾದಿ ಅಮಾನವೀಯ ಕೆಲಸಗಳನ್ನು ’ಕರ್ತವ್ಯ ಪ್ರಜ್ಞೆ’ಯಿಂದ ನಿರ್ವಹಿಸುವ ಈ ಅಧಿಕಾರಿಗೆ ಈಗ ಕೆಲಸದಲ್ಲಿ ’ಬಡ್ತಿ’ ಸಿಕ್ಕಿದೆ. ಜರ್ಮನಿಯ ಗ್ರಾಮೀಣ ವಿಭಾಗದ ಕ್ಯಾಂಪ್ ಒಂದಕ್ಕೆ ವರ್ಗವಾಗಿದೆ. ತನ್ನ ಆಟ-ಪಾಠಗಳಲ್ಲಿ ಮಗ್ನನಾದ ಬ್ರುನೋಗೆ, ನಾಜ಼ಿ ಹಿಂಸಾಚಾರವಾಗಲೀ, ತನ್ನ ತಂದೆ ಅದರಲ್ಲಿ ಭಾಗಿ ಎಂಬುದಾಗಲೀ ತಿಳಿದಿಲ್ಲ. ಹೊಸ ಊರಿಗೆ ಹೋಗಲು ಒಲ್ಲದ ಮನಸ್ಸಿಂದ ತನ್ನ ಅಕ್ಕನೊಂದಿಗೆ ಹೊರಡುತ್ತಾನೆ. ಮನೆಯಲ್ಲೇ ಬಂದು ಪಾಠ ಹೇಳಿಕೊಡಲು ನಾಜ಼ಿ ಪಡೆಯ ಮೇಷ್ಟ್ರೊಬ್ಬನನ್ನು ಗೊತ್ತುಮಾಡಿರುತ್ತಾರೆ. ಆ ಮೇಷ್ಟ್ರು ಯಹೂದಿಗಳ ಬಗ್ಗೆ ಸಾಧ್ಯವಾದಷ್ಟು ತಪ್ಪುತಿಳುವಳಿಕೆ ಕೊಡುತ್ತಿರುತ್ತಾನೆ. ಬ್ರುನೋನ ಮನೆಯಲ್ಲಿ ಪಟ್ಟಾಪಟ್ಟಿ (ಗೆರೆಗಳ) ಅಂಗಿ-ಪಾಯಿಜಾಮ ಧರಿಸಿದ ವಿಚಾರಾಣಾಧೀನ ಖೈದಿಗಳು ಪರಿಚಾರಕರ ಕೆಲಸ ಮಾಡುತ್ತಿರುತ್ತಾರೆ. ಬ್ರುನೊಗೆ ಅವರು ಖೈದಿಗಳೆಂದು ತಿಳಿಯದು. ಅಲ್ಲದೇ ಬ್ರುನೊ ಮನೆಬಿಟ್ಟು ಹೋಗದಂತೆ ಕಟ್ಟೆಚ್ಚರ ವಹಿಸಿರುತ್ತಾರೆ. ಸೈನದ ಅಧಿಕಾರಿಗಳು ಮನೆಗೆ ಬಂದು ಹೋಗುತ್ತಿರುತ್ತಾರೆ. ಬ್ರುನೋಗೆ ಇದೆಲ್ಲಾ ವಿಚಿತ್ರವಾಗಿ ಕಾಣುತ್ತದೆ. ಕೋಪಿಷ್ಟ ತಂದೆಯನ್ನು ಎದುರಿಸುವ ಧೈರ್ಯವಿಲ್ಲದೇ ಸುಮ್ಮನಿರುತ್ತಾನೆ. ಆದರೆ ದಿನೇ-ದಿನೇ ಕುತೂಹಲ ಕೆರಳುತ್ತದೆ.

ಸರ್ಪಗಾವಲಿನ ನಡುವೆಯೂ, ಒಂದು ದಿನ ಬ್ರುನೊ ಮನೆ ಬಿಟ್ಟು ಬರುತ್ತಾನೆ. ಮನೆಯ ಸುತ್ತಾ ನಿರ್ಜನ ಕಾಡಿನಂತಹ ಪ್ರದೇಶ. ಸ್ವಲ್ಪಸಮಯ ನಡೆದ ನಂತರ, ವಿದ್ಯುತ್ ತಂತಿಗಳಿಂದ ಕಟ್ಟಿದ ಮುಳ್ಳು ಬೇಲಿಗಳಿಂದ ಆವೃತವಾದ ಕ್ಯಾಂಪ್ (ಶಿಬಿರ) ವೊಂದನ್ನು ಕಾಣುತ್ತಾನೆ. ಬೇಲಿಯ ಒಳಗೆ ಆಟವಾಡುತ್ತಿದ್ದ ತನ್ನದೇ ವಯಸ್ಸಿನ ಶ್ಮುಯೆಲ್ ಎಂಬ ಉದ್ದದ ಗೆರೆಗಳ ಪಾಯಿಜಾಮ-ಅಂಗಿ ಧರಿಸಿದ ಮತ್ತೊಬ್ಬ ಬಾಲಕನನ್ನು ಕಂಡು ಅವನೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತಾನೆ. ಮನೆಯಲ್ಲಿ ಒಬ್ಬಂಟಿಯಾದ ಬ್ರುನೊ, ಶ್ಮುಯೆಲ್ನನ್ನು ಕಂಡು ಕರುಬುತ್ತಾನೆ. ಕಾರಣ ಜೊತೆ ಆಟವಾಡಲು ಅದೇ ವಯಸ್ಸಿನ ಇನ್ನೂ ಹಲವು ಹುಡುಗರು ಆ ಕ್ಯಾಂಪ್ ನಲ್ಲಿದ್ದಾರೆ.

ಬಹಳ ಮುಗ್ಧ ಹುಡುಗ ಶ್ಮುಯೆಲ್ ನ ಇಡೀ ಕುಟುಂಬವನ್ನು ನಾಜ಼ಿ ಪಡೆ ಬಂಧಿಸಿ ಶಿಬಿರದಲ್ಲಿ ದೂಡಿರುತ್ತದೆ. ಶ್ಮುಯೆಲ್ ನ ತಾತ-ಅಜ್ಜಿ ಅನಾರೋಗ್ಯದಿಂದ ಸತ್ತಿದ್ದಾರೆ ಎಂದು ಆತ ತಿಳಿದಿದ್ದಾನೆ. ಆದರೆ ಅವರು ಸತ್ತಿದ್ದು ಶಿಬಿರದಲ್ಲಿ ನಡೆದ ಹಿಂಸಾಚಾರದಲ್ಲಿ ಎಂದು ಅವನಿಗಿನ್ನೂ ತಿಳಿಯದು.

ಬ್ರುನೋಗೆ ಕ್ರಮೇಣ ಸತ್ಯ ಸ್ಪಷ್ಟವಾಗಿ ಗೋಚರಿಸಲಾರಂಭಿಸುತ್ತದೆ. ಪಾಇಜಾಮ ಧರಿಸಿರುವರೆಲ್ಲಾ ಖೈದಿಗಳೆಂಬುದು ಮನದಟ್ಟಾಗುತ್ತದೆ. ಪದೇ ಪದೇ ಮನೆಯವರ ಕಣ್ತಪ್ಪಿಸಿ ಮುಳ್ಳಿನ ಬೇಲಿಯ ಒಳಗಿನ ಶ್ಮುಯೆಲ್ ನನ್ನು ಭೇಟಿಮಾಡಿ ಬರುತ್ತಿರುತ್ತಾನೆ. ಮನೆಯಿಂದ ತಿಂಡಿ-ಕೇಕ್ ಇತ್ಯಾದಿಗಳನ್ನು ಕದ್ದೊಯ್ದು ಶ್ಮುಯೆಲ್ ನೊಂದಿಗೆ ಹಂಚಿಕೊಳ್ಳಲಾರಂಭಿಸುತ್ತಾನೆ. ಈ ಮಧ್ಯೆ ಬ್ರುನೋನ ತಾಯಿಗೆ ತನ್ನ ಗಂಡ ಮಾಡುತ್ತಿರುವ ಅಮಾನವೀಯ ಕೆಲಸಗಳ ಬಗ್ಗೆ ತಿಳಿದುಹೋಗಿ ತೀವ್ರ ವ್ಯಥೆ ಪಡುತ್ತಾಳೆ. ಆದರೆ ಆತ ತಾನು ತನ್ನ ’ಕರ್ತವ್ಯ’ವನ್ನು ಮಾತ್ರ ಮಾಡುತ್ತಿದ್ದೇನೆ ಎಂದು ವಾದಿಸುತ್ತಾನೆ. ಮನೆ ರಣರಂಗವಾಗುತ್ತದೆ.

ಫೋಟೋ ಕೃಪೆ : google

‘ಯಹೂದಿಗಳನ್ನು ದ್ವೇಷಿಸಬೇಕು’ ಎಂಬ ಯಾವುದೇ ಪೂರ್ವಾಗ್ರಹವಿಲ್ಲದ ಬ್ರುನೋ ಮಾತ್ರ ಶ್ಮುಯೆಲ್ ಗೆ ನಿಷ್ಕಲ್ಮಶ ಸ್ನೇಹ ತೋರುತ್ತಾನೆ. ಶ್ಮುಯೆಲ್ ನನ್ನು ಬಿಟ್ಟಿರಲಾಗದ ಸ್ಥಿತಿ ತಲುಪುತ್ತಾನೆ. ವಿದ್ಯುತ್ ಬೇಲಿಯ ಬಳಿ ಇಬ್ಬರ ಭೇಟಿ ನಡೆಯುತ್ತಲೇ ಇರುತ್ತದೆ. ಆ ಒಂದು ದಿನ ಶ್ಮುಯೆಲ್ ನ ತಂದೆಯನ್ನು ಅನಿಲ ಚೇಂಬರ್ (ಗ್ಯಾಸ್ ಚೇಂಬರ್) ನಲ್ಲಿ ಇತರ ಹಲವು ಖೈದಿಗಳೊಂದಿಗೆ ಕೊಲ್ಲಲಾಗುತ್ತದೆ. ಇದನ್ನು ತಿಳಿಯದೇ ಶ್ಮುಯೆಲ್ ಕಂಗಾಲಾಗುತ್ತಾನೆ. ಆ ದಿನದ ಭೇಟಿಯಲ್ಲಿ ತನ್ನ ತಂದೆ ಕಾಣೆಯಾಗಿರುವ ವಿಚಾರವನ್ನು ಬ್ರುನೋಗೆ ತಿಳಿಸುತ್ತಾನೆ.
ಈ ಮಧ್ಯೆ ’ಕಟುಕ’ ತಂದೆಯೊಂದಿಗೆ ಮಕ್ಕಳಿರುವುದನ್ನು ಇಷ್ಟಪಡದ ಬ್ರುನೋನ ತಾಯಿ, ಮಕ್ಕಳಿಬ್ಬರನ್ನೂ ದೂರದ ಬಂಧುವಿನ ಬಳಿ ಬಿಡಲು ನಿರ್ಧರಿಸುತ್ತಾಳೆ. ತಕ್ಷಣವೇ ಅದಕ್ಕೆ ತಯಾರಿಯೂ ಆರಂಭಿಸಿಬಿಡುತ್ತಾಳೆ. ಆ ಮಾರನೆಯ ದಿನ ಬ್ರುನೋ ತನ್ನಕ್ಕನೊಂದಿಗೆ ಪರ ಊರಿಗೆ ಹೋಗುವ ನಿರ್ಧಾರವಾಗಿರುತ್ತದೆ. ಆದರೆ ’ಕಾಣೆಯಾದ’ ಶ್ಮುಯೆಲ್ ನ ತಂದೆಯ ಬಗ್ಗೆ ಬ್ರುನೋಗೆ ತೀವ್ರ ಕಾಳಜಿ. ತಾನು ಬೇಲಿ ದಾಟುವಂತಿಲ್ಲ. ಶ್ಮುಯೆಲ್ ತೊಡುವ ನೀಳಗೆರೆಗಳ ಪಾಯಿಜಾಮ-ಅಂಗಿ ಧರಿಸಿದ (ಖೈದಿಗಳ ಸಮವಸ್ತ್ರ) ಬ್ರುನೋ ಬೇಲಿಯ ಕೆಳಗಿಂದ ಶಿಬಿರದೊಳಗೆ ಸೇರಿಬಿಡುತ್ತಾನೆ. ಹೊಂಚುತ್ತಾ ’ಕಾಣೆ’ಯಾದ ವ್ಯಕ್ತಿಯನ್ನು ಹುಡುಕಲಾಂಭಿಸಿದಾಗ ಅವನಿಗೆ ಶಿಬಿರದಲ್ಲಿನ ಸತ್ಯದ ಸಂಪೂರ್ಣ ದರ್ಶನವಾಗುತ್ತದೆ. ಅಲ್ಲಿ ನಡೆಯುವ ಕುಕೃತ್ಯಗಳನ್ನು ಕಂಡು ಆಘಾತವಾಗುತ್ತದೆ. ಅಲ್ಲಿ ಹೇಗೆಯೋ ಶ್ಮುಯೆಲ್ ನನ್ನು ಸಂಧಿಸುತ್ತಾನೆ. ಮತ್ತೆ ’ಶೋಧ’ಕ್ಕಿಳಿಯಬೇಕು. ಅಷ್ಟರಲ್ಲಿ ಗ್ಯಾಸ್ ಚೇಂಬರ್ ಗೆ ಅಟ್ಟಲು ಮತ್ತಷ್ಟು ಜನರನ್ನು ನಾಜ಼ಿ ಪಡೆ ಸಾಲುಗಟ್ಟಿಸುತ್ತಿರುತ್ತದೆ. ಶ್ಮುಯೆಲ್ ನೊಂದಿಗೆ ’ಖೈದಿ’ಯ ವೇಷದ ಬ್ರುನೋ ನನ್ನು ಕೂಡಾ ಸಾಲಿನೊಳಗೆ ತಳ್ಳಲಾಗುತ್ತದೆ.

ಚಿತ್ರದ ಕೊನೆಯ ಕ್ಷಣಗಳಂತೂ ಮನಸ್ಸನ್ನು ಕಲಕಿ ಬಿಡುತ್ತವೆ. ಮೂಕವಾಗಿಸಿಬಿಡುತ್ತದೆ. ಮುಗ್ಧತೆಯೇ ಮೂರ್ತಿವೆತ್ತಂತಿರುವ ಆ ಇಬ್ಬರು ಹುಡುಗರ ಸಹಾಜಿಭಿನಯ ಕಣ್ಣಿಗೆ ಕಟ್ಟುತ್ತದೆ. ಯಹೂದಿ ಹುಡುಗನಿಗೆ ಹೆಚ್ಚು ಅಂಕಗಳು ಸಲ್ಲುತ್ತವೆ.

ಖ್ಯಾತ ಐರಿಷ್ ಕಾದಂಬರಿಕಾರ ಜಾನ್ ಬಾಯ್ನ್ ರ ಇದೇ ಹೆಸರಿನ ಕಾದಂಬರಿಯನ್ನು ೨೦೦೬ ರಲ್ಲಿ ಬರೆದು ಪ್ರಕಟಿಸಿದಾಗ, ಸುಮಾರು ೮ ಮಿಲಿಯನ್ ಪ್ರತಿಗಳು ಮಾರಾಟಗೊಂಡವು. ಆದರೆ ಪೋಲ್ಯಾಂಡ್ ನ ಹಾಲೊಕಾಸ್ಟ್ ಮ್ಯೂಸಿಯಮ್ ನ ಅಧಿಕಾರಿಗಳಿಂದ ತೀವ್ರ ಟೀಕೆಗೂ ಒಳಗಾದರು. ಹಲವಾರು ವರ್ಷ ಹಾಲೊಕಾಸ್ಟ್ ಸಂಬಂಧಿ ಅಧ್ಯಯನ ನಡೆಸಿದ್ದ ಬಾಯ್ನ್, ಬ್ರಿಟನ್ ನ ’ಆಸ್ಥಾನ ಕವಿ’ ಎಂದೇ ಹೆಸರಾಗಿದ್ದ ಜಾನ್ ಬೆಟ್ಜ಼್ ಮನ್ ರಿಂದ ಪ್ರಭಾವಿತರಾಗಿದ್ದರು. ಬಾಲ್ಯ ಕುರಿತ ಬೆಟ್ಜ಼್ ಮನ್ ನ ಪ್ರಖ್ಯಾತ ಸಾಲುಗಳಾದ:

“Childhood is measured out by sounds and smells and sights, before the dark hour of reason grows.” ,

ಬಾಯ್ನ್ ರನ್ನು ಮೌನಕ್ಕೆ ದೂಡಿದ್ದವು. ತಮ್ಮ ಹೊಲೊಕಾಸ್ಟ್ ಕುರಿತಾದ ಓದಿಗೆ, ಬೆಟ್ಜ಼್ ಮನ್ ನ ಕಾಡುವ ಸಾಲುಗಳನ್ನು ಹೊಸೆದ ಬಾಯ್ನ್ ಬರೆದ ಕಾದಂಬರಿ ಅಂತರರಾಷ್ಟ್ರೀಯ ಮನ್ನಣೆ ಪಡೆಯಿತು. ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಅನಿಮೇಶನ್-ಗ್ರಾಫಿಕ್ಸ್ ಲೋಕದಲ್ಲಿ ಮುಳುಗಿದ್ದ ನಿರ್ದೇಶಕ ಮಾರ್ಕ್ ಹರ್ಮನ್, ಮುಖ್ಯವಾಹಿನಿಗೆ ೯೦ರ ದಶಕದಲ್ಲೇ ಬಂದರೂ, ಕಾಲೂರುವಂತಹ ಯಶಸ್ಸು ಸಿಕ್ಕಿರಲಿಲ್ಲ. ಬಾಯ್ನ್ ರ ಈ ಕಾದಂಬರಿಯನ್ನು ಸಿನಿಮಾ ತೆರೆಗೆ ಅಳವಡಿಸಿದ ಹರ್ಮನ್, ಜನಪ್ರಿಯ-ಯಶಸ್ವಿ ನಿರ್ದೇಶಕರ ಸಾಲಿಗೆ ಸೇರ್ಪಡೆಯಾದರು.
ತಮ್ಮ ಫ಼ಾರ್ಂ ಮನೆಯ ಸಮೀಪದ ಕ್ಯಾಂಪ್ ನಿಂದ ಆಗಾಗ ಬರುವ ಸುಟ್ಟುವಾಸನೆ, ಅವನ ತಂದೆ ರೋಷ-ತಿರಸ್ಕಾರ ಪೂರ್ವಕವಾಗಿ ಹೇಳುವು ’ಆ ಕ್ಯಾಂಪ್ ನಲ್ಲಿರುವವರು ಮನುಷ್ಯರೇ ಅಲ್ಲ’ ಎಂಬ ಮಾತು, ಬ್ರುನೊಗೆ ಇದರ ಮೂಲವೇನಿರಬಹುದೆಂಬ ಕುತೂಹಲಕ್ಕೆ ನಾಂದಿಹಾಡುತ್ತವೆ. ಆಗಲೇ ಬೆಟ್ಜ಼್ ಮನ್ ನ ‘dark hour of reason grows” ಸಾಲುಗಳಿಗೊಂದು ಮುನ್ನಲೆ ಒದಗುತ್ತದೆ.

ಈ ಚಿತ್ರ ಅಪಾರ ಜನಮನ್ನಣೆ ಪಡೆಯಿತು. ಚಿತ್ರದ ವಸ್ತು ಐತಿಹಾಸಿಕವಾದರೂ, ಪಾತ್ರಗಳು ಕಾಲ್ಪನಿಕ. ಮಾರ್ಕ್ ಹರ್ಮನ್ ರ ಜೀವಂತ ನಿರೂಪಣೆಯಲ್ಲಿ ಹಲವು ಆಕ್ಷೇಪಾರ್ಹ ಅಂಶಗಳೂ ಇವೆ:


ಫೋಟೋ ಕೃಪೆ : google

ಜೀವಂತವಿರುವ ಕ್ಯಾಂಪ್ (ಶಿಬಿರ) ಸಂತ್ರಸ್ಥರ ಪ್ರಕಾರ, ಎಂಟು-ಒಂಬತ್ತು ವರ್ಷದ ಎಳೆ ಹುಡುಗರನ್ನು ಕ್ಯಾಂಪ್ ಗಳಲ್ಲಿ ಬಹಳ ದಿನ ಇಟ್ಟುಕೊಳ್ಳುತ್ತಿರಲಿಲ್ಲ. ಚಿತ್ರದ ಸನ್ನಿವೇಶವೊಂದರಲ್ಲಿ ಬ್ರುನೋನ ತಾಯಿ, ದೂರದ ಕ್ಯಾಂಪ್ ನಿಂದ ದಟ್ಟ ಕಪ್ಪು ಹೊಗೆ ದುರ್ನಾತ ಬಂದಾಗ ಅದೇನಿರಬಹುದೆಂದು ಚಕಿತಳಾಗುತ್ತಾಳೆ. ಅಧಿಕಾರಿಯೊಬ್ಬ ಅದು ಸಾಮೂಹಿಕವಾಗಿ ದಹನಮಾಡಿದ ಯಹೂದಿಗಳ ಶವಗಳದ್ದು ಎಂದಾಗ ಅಚ್ಚರಿ-ಆಘಾತಕ್ಕೊಳಗಾಗುತ್ತಾಳೆ. ಜರ್ಮನಿಯ ಹಿರಿಯ ಸೈನ್ಯಾಧಿಕಾರಿಯ ಪತ್ನಿಗೆ ಇದೆಲ್ಲಾ ತಿಳಿಯದ ವಿಚಾರ ಎಂದರೆ ನಂಬಲು ಕಷ್ಟವಾಗುತ್ತದೆ. ಸನ್ನಿವೇಶವೊಂದರಲ್ಲಿ ಆಕೆ ’ಕ್ಯಾಂಪ್ ನ ಸಮೀಪದ ಮನೆ ಬೇಡವೇ ಬೇಡ.. ಎಂದು ಹಠ ಹಿಡಿದಿರುತ್ತಾಳೆ. ’ಕಾಂಪ್’ ಗಳಲ್ಲಿ ನಡೆಯುವ ನರಮೇಧವನ್ನು ಗಾಜಿನ ಪರದೆಯೊಂದರ ಹಿಂದಿನಿಂದ ಕಣ್ಣಾರೆ ನೋಡಲು, ಸೈನ್ಯಾಧಿಕಾರಿಗಳು ಕುಟುಂಬದವರೊಂದಿಗೆ ಸಾಲುಗಟ್ಟಿ ನಿಂತು ನೋಡುತ್ತಿದ್ದರ ಬಗ್ಗೆ ’ಹಾಲೋಕಾಸ್ಟ್’ ಸಂಬಂಧಿಸಿದ ಸಾಹಿತ್ಯದ ಹಲವೆಡೆ ಉಲ್ಲೇಖಿಸಲಾಗಿದೆ. ಶಿಬಿರಗಳಲ್ಲಿ ಕೊಲೆಯಾದ ಯಹೂದಿಗಳ ಆಸ್ತಿಗಳನ್ನೆಲ್ಲಾ ಹಿಟ್ಲರ್ ಪಡೆಯ ಅಧಿಕಾರಿಗಳು ಅವರ ಕುಟುಂಬದವರೇ ಅಕ್ರಮವಾಗಿ ವಹಿಸಿಕೊಂಡಿದ್ದೂ ರಹಸವೇನಲ್ಲ. ಅಲ್ಲದೇ, ಜರ್ಮನ್ ಸೈನಿಕರ ಹದ್ದಿನ ಕಣ್ಣು ತಪ್ಪಿಸಿ, ಇಬ್ಬರು ಬಾಲಕರು ಮಾತ್ರವೇ ಕ್ಯಾಂಪ್ ನ ಮೂಲೆಯೊಂದರಲ್ಲಿ ಚೆಂಡಾಟ ವಾಡುವ, ಚೆಕರ್ಸ್ ಆಡುವ ಸಾಧ್ಯತೆಗಳಿತ್ತೇ?

ಯಹೂದಿ ಗಳನ್ನು ನಿಶ್ಶಕ್ತರಂತೆ, ಹಿಂಸೆಯ ವಿರುದ್ಧ ತಿರುಗಿಬೀಳಲಾರದ ಅಸಹಾಯಕರಂತೆ ತೋರಿಸಿರುವುದೂ ಚಿತ್ರದ ಒಂದು ಋಣಾತ್ಮಕ ಅಂಶ ಎಂದು ಹಲವು ವಿಮರ್ಶಕರ ಅಭಿಪ್ರಾಯವಾಗಿತ್ತು. ಕ್ಯಾಂಪ್ ನ ಒಳಗೆ ಮತ್ತು ಹೊರಗೆ ಹಿಂಸೆ-ಕ್ರೌರ್ಯದ ವಿರುದ್ಧ ಯಹೂದಿಗಳ ವಿರೋಧ ಕ್ರಮೇಣ ಹೆಚ್ಚುತ್ತಾ ಹೋಗಿದ್ದನ್ನು ಇತಿಹಾಸಕಾರರು ಗಮನಿಸಿದ್ದಾರೆ. ಚಿತ್ರದಲ್ಲಿ ಬರುವ ಹಿಟ್ಲರ್ ನ ಕುಖ್ಯಾತ ಕಾಂಪ್ ಗಳಲ್ಲಿ ಒಂದಾದ ’ಆಶ್ ವಿಟ್ಜ಼್-ಬಿರ್ಕೆನೌ’ ನಲ್ಲಿ, ಯಹೂದಿ ಖೈದಿಗಳು ಗ್ಯಾಸ್ ಚೇಂಬರ್ ಒಂದನ್ನು ಯಶಸ್ವಿಯಾಗಿ ಸ್ಪೋಟಿಸಿ, ಹಲವು ಜರ್ಮನ್ ಸೈನಿಕರನ್ನು ಕೊಂದ ಘಟನೆ ಚರಿತ್ರೆಯಲ್ಲಿ ಸೇರಿದೆ. ಗ್ಯಾಸ್ ಚೇಂಬರ್ ಗಳಲ್ಲಿ ವಿಕಾರವಾಗಿ ಸತ್ತ ಸಾವಿರಗಟ್ಟಲೇ ಹೆಣಗಳನ್ನು ತೆಗೆದು, ಚೇಂಬರ್ ಶುಚಿಗೊಳಿಸುವ ಕೆಲಸವನ್ನೂ ಇದೇ ಖೈದಿಗಳು ಮಾಡಬೇಕಿತ್ತು. ಇದನ್ನು ಖೈದಿಗಳ ಗುಂಪೊಂದು ವಿರೋಧಿಸಿತು. ಗುಂಪಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಅಧಿಕಾರಿಗಳ ಕ್ರೌರ್ಯವೂ ಹೆಚ್ಚಾಗತೊಡಗಿತು. ಆಗ ಖೈದಿಗಳ ಯಶಸ್ವಿ ಷಡ್ಯಂತ್ರವೊಂದು ಹಲವು ಜರ್ಮನ್ ಸೈನಿಕರ, ಅಧಿಕಾರಿಗಳ ಜೀವ ತೆಗೆದಿತ್ತು. ಹರ್ಮನ್, ಐತಿಹಾಸಿಕ ನಿಖರತೆಯತ್ತ ಎಚ್ಚರವಹಿಸಬಹುದಗಿತ್ತು. ಬ್ರುನೊ ನ ನೀಲಿಕಣ್ಣುಗಳು, ಅವನ ಬಾಲ್ಯಸಹಜ ಕುತೂಹಲ/ಚಟುವಟಿಕೆಗಳ ಮೇಲೆಯೇ ಹರ್ಮನ್ ಹೆಚ್ಚು ಗಮನವಹಿಸಿದಂತೆ ತೋರುತ್ತದೆ. ಇಲ್ಲಿ ಶ್ಮುಯೆಲ್ ಒಬ್ಬ ಮುಗ್ಧ-ಅಸಹಾಯಕನಾಗಿಯೇ ಉಳಿಯುತ್ತಾನೆ. ಕೊನೆಯಲ್ಲಿ ಬ್ರುನೊ ಕುಟುಂಬದ ಎದೆಯೊಡೆಯುವ ದುಃಖ, ಅವರ ಕುಟುಂಬಕ್ಕಾದ ಕ್ಲೇಶ, .. ಗ್ಯಾಸ್ ಚೇಂಬರ್ ಗಳಲ್ಲಿ ನಿಷ್ಕಾರಣವಾಗಿ ಕೊಲ್ಲಲ್ಪಟ್ಟ ಸುಮಾರು ೨ ಮಿಲಿಯ ಮಕ್ಕಳನ್ನು ಮರೆಸಿಬಿಡುತ್ತದೆ. ಹರ್ಮನ್ ಇಲ್ಲಿ ಸೋಲುತ್ತಾರೆ. ಶ್ಮುಯೆಲ್ ಅಂತಹ ೨ ಮಿಲಿಯ ಮಕ್ಕಳ ಪ್ರತಿನಿಧಿ ಎಂಬುದನ್ನು ಅವರ ನಿರೂಪಣೆ ಮರೆಮಾಚಿಬಿಡುತ್ತದೆ.
ಏನೇ ಇರಲಿ, Fiction (ಕಾಲ್ಪನಿಕ) ಕಥೆಯೊಂದು ಇತಿಹಾಸಕ್ಕೆ ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕೆಂದೇನೂ ಇಲ್ಲ.

ಸ್ಪೀಲ್ಬರ್ಗ್ ರ ‘ಶಿಂಡ್ಲರ್ಸ್ ಲಿಸ್ಟ್’ ನ ತಾಂತ್ರಿಕ ಕುಸುರಿ ಇಲ್ಲಿ ಕಾಣಲಾಗದು. ’ದ ಪಿಯನಿಸ್ಟ್’ ನಲ್ಲಿ ಪೋಲನ್ಸ್ಕಿ ಕಟ್ಟಿಕೊಡುವ ಅಪೂರ್ವ ಮಾನವೀಯ ಸೆಲೆಯೊಂದನ್ನು ಇಲ್ಲಿ ಕಾಣಲಾಗದು. ಅದರ ಜಾಗವನ್ನು ’ಮೆಲೋಡ್ರಾಮ; ಆಕ್ರಮಿಸಿಕೊಂಡಿದೆ. ಆದರೂ ಹರ್ಮನ್ ಎಲ್ಲಾ ಕಲಾವಿದರಲ್ಲೂ, ವಿಶೇಷವಾಗಿ ಆ ಬಾಲಕರೀರ್ವರಿಂದ ತೆಗೆಸಿರುವ ಅಭಿನಯ, ಸ್ಮರಣೀಯ.
ಯುದ್ಧಕ್ಕಾಗಿ ಹಾತೊರೆಯುವ ಮನಸ್ಸುಗಳು ಒಬ್ಬ ಬ್ರುನೊ ಅಥವಾ ಶ್ಮುಯೆಲ್ ಕುರಿತು ಯೋಚಿಸಬೇಕಿದೆ. ನೆಲ್ಸನ್ ಮಂಡೇಲಾ ಹೇಳುವಂತೆ “love comes more naturally to the human heart than its opposite.”


  • ರಾಘವನ್ ಚಕ್ರವರ್ತಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW