ಬದುಕ ಬದಲಿಸಬಹುದು ಎಂಬ ಆರೋಗ್ಯಕರ ಜೀವನ ಸೂತ್ರವನ್ನು ಸ್ವತ: ಬದುಕಿನಲ್ಲಿ ಅಳವಡಿಸಿಕೊಂಡ ವಿರಳ ಲೇಖಕಿ ನೇಮೀಚಂದ್ರ. ಅದನ್ನು ಅವರು ತಮ್ಮ ಈ ಕಾದಂಬರಿಯ ಮೂಲಕವೂ ಸಾಕ್ಷಾತ್ಕಾರಗೊಳಿಸಿದ್ದಾರೆ. ಅದನ್ನು ಇಲ್ಲಿ ಪ್ರಜ್ಞಾಪೂರ್ವಕವಾಗಿ ವರ್ತಮಾನದಿಂದ ಭೂತಕ್ಕೂ , ಭೂತದಿಂದ ವರ್ತಮಾನವನ್ನು ಬೆಸೆಯುವುದರ ಮೂಲಕ ಆಗುಮಾಡಿಸಿದ್ದಾರೆ. ಪುಸ್ತಕದ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಯಾದವಶೇಮ್
ಕನ್ನಡ ಮೂಲ : ನೇಮೀಚಂದ್ರ
ತಮಿಳು ಅನುವಾದ: ಕೆ. ನಲ್ಲತಂಬಿ

ಕೆ. ನಲ್ಲತಂಬಿ
ವರ್ತಮಾನ: ಕಾದಂಬರಿ ಆರಂಭವಾಗುವುದು ವರ್ತಮಾನದಲ್ಲಿ. ಯಹೂದಿ ಕುಟುಂಬದ ಜತೆಗೆ ಹಿಂದೂ ಕುಟುಂಬದ ಸ್ನೇಹದ ಮೂಲಕ. ಮೋಸೆಸ್ ರ ಹದಿಹರೆಯದ ಬಾಲೆ ಹನ್ನಾ. ಅವಳೊಮ್ಮೆ ತಮ್ಮ ಮನೆಗೆ ಬಂದಾಗ ಗ್ರಾಮೀಣ ನೆಲೆಯಿಂದ ಬಂದ ಅಮ್ಮ ಅವಳನ್ನು ತನ್ನ ದೇವರ ಕೋಣೆಗೆ ಕರೆದೊಯ್ಯುವುದರ ಮೂಲಕ ತಮ್ಮ ದೇವರ ಪಟಗಳನ್ನೆಲ್ಲಾ ತೋರಿಸಿ’ ನಿಮ್ಮ ದೇವರ ಪಟವನ್ನೂ ತೆಗೆದುಕೊಂಡು ಬಾ, ಇಷ್ಟೆಲ್ಲಾ ದೇವರುಗಳನ್ನು ಪೂಜಿಸುವ ನಮಗೆ ನಿಮ್ಮ ದೇವರ ಪಟ ಒಂದು ಹೊರೆಯಾಗುವುದಿಲ್ಲ” ಎಂದು ಹೇಳಿದಾಗ ಹನ್ನಾ ನಮ್ಮ ದೇವರಿಗೆ ಹೆಸರಾಗಲಿ, ಆಕಾರವಾಗಲಿ ಇಲ್ಲ” ಎಂದಾಗ ,ಅಂತಹ ದೇವರ ಕಲ್ಪನೆಯೆ ಇಲ್ಲದ ಅಮ್ಮಾ ಅವಕ್ಕಾಗುತ್ತಾರೆ. ಮುಂದೆ ಈ ಬಾಲೆ ತನ್ನ ಇದ್ದ ತಂದೆಯನ್ನೂ ಕಳೆದುಕೊಂಡಾಗ ಅವಳನ್ನು ಮನೆಗೆ ಕರೆತಂದು ಮಕ್ಕಳಲ್ಲಿ ಒಬ್ಬಳನ್ನಾಗಿ ಬೆಳೆಸುತ್ತಾರೆ. ಅವಳನ್ನು ದೇವಾಲಯಕ್ಕೆ ಕರೆದೊಯ್ದು ಅವಳಿಗೆ ” ಅನಿತಾ” ಎಂದು ಹೆಸರಿಡುತ್ತಾರೆ.

ಅಂದಿನಿಂದ ಮನೆಯವರಿಗೆಲ್ಲಾ ಅವಳು ಅನಿತಾ ಆಗಿ ಬೆಳೆಯುತ್ತಾಳೆ.ಅವಳು ಬೆಳೆದಂತೆ ಅವಳಲ್ಲಿ ಅನುರಕ್ತಿಯನ್ನು ಬೆಳೆಸಿಕೊಂಡ ಅವರ ಮಗ ವಿವೇಕ್ ಅವಳನ್ನು ವಿವಾಹವಾಗ ಬಯಸುತ್ತಾನೆ. ತಮ್ಮ ಜಾತಿ ಧರ್ಮದವಳಲ್ಲದ ಅವಳನ್ನು ಮದುವೆಯಾಗುವುದನ್ನು, ಉನ್ನತ ಶಿಕ್ಷಣ ಪಡೆದ ಅವನ ತಂದೆ ವಿರೋಧಿಸಿದರೆ, ಮುಗ್ದರಾದ ಅವನಮ್ಮ ಬೆಂಬಲಿಸುತ್ತಾರೆ. ಕಡೆಗೂ ಅವರ ವಿವಾಹ ನೆರವೇರುತ್ತದೆ. ಮುಂದೆ ಅವರಿಗೆ ಮಗ ಹುಟ್ಟಿದಾಗ ಜಾತಿ ಧರ್ಮಗಳ ಎಲ್ಲೆಯನ್ನು ಮೀರಿದ ವಿಶಾಲ ಎಂದು ಹೆಸರಿಡುತ್ತಾರೆ. ಬೇರೆಯವರು ಮರೆತರು ತಾನು ಮೂಲತಃ ಯಹೂದಿ ಎಂದು ಮರೆಯದ ಹನ್ನಾ ತನ್ನ ಮೂಲವನ್ನು ಹುಡುಕಲು, ತನ್ನ ತಾಯಿ ಅಕ್ಕ ತಂಗಿಯರು ಏನಾದರು ಎಂಬ ಅನ್ವೇಷಣೆಯಲ್ಲಿ ತೊಡಗುತ್ತಾಳೆ. ತನ್ನ ತಾಯಿನಾಡಾದ ಜರ್ಮನಿಗೆ,ಹೋಗುತ್ತಾಳೆ. ಅಲ್ಲಿ ಹಿಟ್ಲರ್ ಆರ್ಯಜನಾಂಗದ ಶ್ರೇಷ್ಟತೆಯ ವ್ಯಸನವನ್ನು ತನ್ನ ನಾಡಿಗೂ ಅಂಟಿಸಿ , ಯಹೂದಿಗಳನ್ನು ತಮ್ಮ ಶತ್ರುಗಳೆಂದು ಬಿಂಬಿಸಿ ಅವರ ಬರ್ಬರ ಹತ್ಯೆಯಲ್ಲಿ ತೊಡಗುತ್ತಾನೆ.ಮತ್ತು ತನ್ನ ಹಿಂಬಾಲಕರಾದ ನಾಜಿಗಳನ್ನು ತೊಡಗಿಸುತ್ತಾನೆ. ಅವರು ಯಹೂದಿಗಳಿಗೆ ಕ್ಯಾಂಪ್ ಗಳನ್ನು ಏರ್ಪಡಿಸಿ, ಗ್ಯಾಸ ಚೇಂಬರ್ಗೆ ತಳ್ಳುವುದರ ಮೂಲಕ ಕ್ರೂರ ಹತ್ಯೆಯಲ್ಲಿ ತೊಡಗುತ್ತಾರೆ. ಅದಕ್ಕೆ ಬಲಿಯಾಗದೆ ತಪ್ಪಿಸಿಕೊಂಡು ಸರ್.ಸಿ.ರಾಮನ್ ರ ಕರೆಯ ಮೇರೆಗೆ ಇಂಡಿಯಾಗೆ ಹೊರಡಲು ಸಿದ್ದರಾಗಿ ಮೋಸೆಸ್ ತನ್ನ ಕಿರಿಯ ಮಗಳ ಜತೆಗೆ ಮೊದಲು ಹೊರಟು ಹೊರಬಂದು, ಹೆಂಡತಿಗೆ ಮಕ್ಕಳನ್ನು ಕರೆದುಕೊಂಡು ಬರಲು ಸೂಚಿಸುತ್ತಾರೆ. ಅವರು ಸಿದ್ದರಾಗಿ ಹೊರಬರುವುದರಲ್ಲಿ, ನಾಜಿಗಳ ಒಂದು ಜೀಪ್ ಅವರ ಮುಂದೆ ಬಂದು ನಿಂತು ಅವರನ್ನು ಹತ್ತಿಸಿಕೊಂಡು ಎಲ್ಲಿಗೋ ಹೋದುದನ್ನು ಅಸಹಾಯಕರಾಗಿ ಈ ತಂದೆ ಮಗಳು ನೋಡುತ್ತಾರೆ. ನಂತರ ಅವರು ಬೇರೆ ದಾರಿಯಿಲ್ಲದೆ ಬೆಂಗಳೂರಿಗೆ ಬರುತ್ತಾರೆ. ಇದನ್ನು ಸಿಂಹಾವಲೋಕನ ಕ್ರಮದಿಂದ ಹೆಣೆದಿದ್ದಾರೆ. ಈಗ ಅವರ ಅನ್ವೇಷಣೆಯಲ್ಲಿ ಇಲ್ಲಿಗೆ ಬಂದ ಹನ್ನಾ ಹೊಲೊಕಾಸ್ಟನಲ್ಲಿ ಅಳಿದವರ ಉಳಿದವರ ಬಗ್ಗೆ ಮಾಹಿತಿಯನ್ನು ಅಮೆರಿಕಾದಲ್ಲಿ ಕಾಪಿಡಲಾಗಿದೆ ಎಂದು ತಿಳಿದು ಅಲ್ಲಿಗೆ ಹೋಗುತ್ತಾರೆ. ಅಲ್ಲಿ ತನ್ನ ತಾಯಿ ಮತ್ತು ತಂಗಿ ತೀರಿಕೊಂಡ ದಾರುಣ ಸುದ್ದಿ ತಿಳಿಯುತ್ತದೆ.
ಉಳಿದ ಅಕ್ಕನ ಅನ್ವೇಷಣೆಯೆ ಅವಳ ಮುಂದಿನ ಗುರಿಯಾಗುತ್ತದೆ. ಯಾದವಶೇಮ್ ತನ್ನ ಅಕ್ಕಾ ರೆಬೆಕ್ಕಾ ಇರಬೇಕು ಎಂದು ಅಲ್ಲಿಗೆ ಬಂದು ಡೈರಕ್ಟರಿಯಲ್ಲಿ ಆ ಹೆಸರನ್ನು ಪತ್ತೆ ಮಾಡಿ ಫೋನ್ ಮಾಡಿ ಅದೆ ರೆಬೆಕ್ಕಾ ಇರುವ ಮನೆ ಎಂದು ಖಚಿತಪಡಿಸಿಕೊಂಡು ,ಅವಳು ಸಮುದ್ರತೀರಕ್ಕೆ ಹೋಗಿರುವುದನ್ನು ತಿಳಿದು ಅಲ್ಲಿಗೆ ತನ್ನ ಗಂಡನೊಡನೆ ಹೋಗುತ್ತಾಳೆ. ಎಪ್ಪತ್ತೈದು ವರ್ಷದ ಒಬ್ಬ ಹಿರಿಯ ಹೆಣ್ಣಿನ ಬಳಿ ಹೋಗಿ’ ರೆಬೆಕ್ಕಾ” ಎಂದು ಕೂಗಿದಾಗ ಅವಳು ಆಶ್ಚರ್ಯದಿಂದ ತಿರುಗಿನೋಡುತ್ತಾಳೆ. ‘ ನಾನು ನಿನ್ನ ತಂಗಿ ಹನ್ನಾ” ಎಂದಾಗ ಅವಳಿಗೆ ದಿಗ್ಭ್ರಮೆಯಾಗಿ ಪರಸ್ಪರ ಅಪ್ಪಿಕೊಳ್ಳುತ್ತಾರೆ. ನಂತರ ಅವರ ಮನೆಗೆ ಹೋಗಿ ಎಲ್ಲರಿಗೂ ತನ್ನ ಕಳೆದುಹೋದ ತಂಗಿ ಸಿಕ್ಕಿದ್ದನ್ನು ಸಂಭ್ರಮದಿಂದ ತಿಳಿಸುತ್ತಾರೆ. ಆ ರಾತ್ರಿ ಮಹಡಿಯ ಮೇಲೆ ಅಕ್ಕ ತಂಗಿಯರಿಬ್ಬರೆ ಮಲಗಿಕೊಳ್ಳಲು ಹೊರಟಾಗ ರೆಬೆಕ್ಕಾಳ ದಾರುಣ ಕತೆಯ ಅನಾವರಣವಾಗುತ್ತದೆ. ಭೂತ: ರೆಬೆಕ್ಕಾ ತನ್ನನ್ನು ತನ್ನ ಅಮ್ಮ ತಂಗಿಯನ್ನು ಕರೆದೊಯ್ದ ನಾಜಿಗಳು , ಮೆನ್ ಕ್ಯಾಂಪ್ ನಲ್ಲಿ ಅಮ್ಮ ತಂಗಿಯರನ್ನು ತನ್ನನ್ನು ಬೇರೆ ಬೇರೆ ಕ್ಯಾಂಪ್ ಗಳಿಗೆ ಕಳಿಸಿದ್ದನ್ನು ಮತ್ತು ಆಗತಾನೆ ಹದಿಹರೆಯಕ್ಕೆ ಬಂದಿದ್ದ ತನ್ನ ಮೇಲೆ ನಾಜಿಗಳ ಕ್ರೂರ ಕಣ್ಣುಗಳು ಬಿದ್ದುದನ್ನು, ಇಬ್ಬಿಬ್ಬರು ನಾಜಿಗಳು ತನ್ನ ಮೇಲೆರಗಿ ಅತ್ಯಾಚಾರ ಮಾಡಿ, ಕಡೆಗೆ ಬ್ರೆಡ್ ತುಂಡುಗಳನ್ನು ತನ್ನ ಕಡೆಗೆ ಎಸೆದು ಹೋಗುತ್ತಿದ್ದುದನ್ನು ಹೇಳಿದಳು. ತಾನು ಬದುಕಿ ಉಳಿಯಲು ಇದನ್ನು ಸಹಿಸಿಕೊಳ್ಳದೆ ಬೇರೆ ದಾರಿ ಇರಲಿಲ್ಲವೆಂದು ಅಂತಲ್ಲಿ ಕೂಡ ಪ್ರೇಮ ಚಿಗುರಿದ ವಿಸ್ಮಯವನ್ನು ಕಿರುನಗೆಯೊಡನೆ ನಿರೂಪಿಸಿತ್ತಾಳೆ.ತಮಗೆ ಬ್ರೆಡ್ ವಿತರಿಸುವವರಲ್ಲಿ ಒಬ್ಬ ಕ್ರಿಶ್ಚಿಯನ್ ಯುವಕನಿದ್ದನೆಂದು,ಅವನು ತನಗೆ ಒಲಿದ ಬಗೆಯನ್ನು ,ಅದರಿಂದಾಗಿ ಮತ್ತು ಒಂದು ನಾಯಿಯ ದೆಸೆಯಿಂದ ತನಗೆ ಬಿಡುಗಡೆ ಸಾಧ್ಯವಾಯಿತೆಂದು ತಿಳಿಸಿದಾಗ ಹನ್ನಾ ಗೆ ಖೇದ ಆಶ್ಚರ್ಯಗಳು ಉಂಟಾಗುತ್ತವೆ. ರೆಬೆಕ್ಕಾ ಅನುಭವಿಸಿದ ಸಂಕಟ ಯಾತನೆಗಳ ನಿರೂಪಣೆಗಳು ಯಾರ ಕರುಳನ್ನಾದರೂ ಕಿವಿಚುತ್ತವೆ.

೧೯೪೮ ರಲ್ಲಿ ಎರಡು ವಿಶ್ವಯುದ್ದಗಳ ನಂತರ ಯಹೂದರಿಗಾಗಿ ಜನಿಸಿದ ಇಸ್ರೇಲ್ ನ್ನು ತಮ್ಮ ತಾಯಿನಾಡೆಂದು ಉಳಿದ ಯಹೂದಿಗಳು ಸಂಭ್ರಮಿಸಿದರೆ ,ಇನ್ನೊಬ್ಬರ ಸಮಾಧಿಯ ಮೇಲೆ ಹುಟ್ಟಿದ ಇಸ್ರೇಲ್ ಹನ್ನಾಳಲ್ಲಿ ಯಾವ ಸಂಭ್ರಮವನ್ನು ಮೂಡಿಸುವಲ್ಲಿ ವಿಫಲವಾಗುತ್ತದೆ. ಒಂದೇ ಮೂಲದಿಂದ ಹುಟ್ಟಿದ ಯಹೂದಿ, ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳ ನಡುವೆ ಯಾಕೆ ಈ ಅಡ್ಡಗೋಡೆಗಳು ,ಎಂದು ಅವಳಿಗೆ ಅರ್ಥವಾಗುವುದಿಲ್ಲ. ಇವರು ಪರಸ್ಪರ ಕೂಡಿ ಬಾಳಲು ಸಾಧ್ಯವಿಲ್ಲವೆ ಎನ್ನುವುದು ಅವಳ ಕನಸು.ಅದಕ್ಕೆ ಅಡ್ಡಬಂದಿರುವುದೆಂದರೆ ಅವುಗಳ ಶ್ರೇಷ್ಟತೆಯ ವ್ಯಸನದಿಂದ ಹುಟ್ಟಿಕೊಂಡ ಯುದ್ದಗಳು. ಯುದ್ದಗಳ ಮೂಲ ಮನಸ್ಸಿನಲ್ಲಿ. ಇನ್ನೊಬ್ಬರ ಕುರಿತ ದ್ವೇಷದಲ್ಲಿ ಎಂದು ಅವಳ ಖಚಿತವಾದ ನಿಲುವು. ಅದಕ್ಕಾಗಿ ಅವಳು ಏಕಾಂಗಿಯಾಗಿ, ಸಮಾಜದ ಜತೆಯಲ್ಲಿ ಸೇರಿ ಹೋರಾಟ ಮಾಡುತ್ತಾಳೆ. ತನ್ನನ್ನು ಸಾಕಿದ ಗ್ರಾಮೀಣ ಅಮ್ಮನಿಂದ ಎಲ್ಲರನ್ನೂ ಒಳಗೊಳ್ಳುವ ಸಂಸ್ಕ್ರತಿಯನ್ನು ಅಳವಡಿಸಿಕೊಳ್ಳುತ್ತಾರೆ. ವರ್ತಮಾನ: ಬೆಂಗಳೂರಿನ ಮನೆಗೆ ಮರಳಿಬಂದಾಗ,ಅವರ ಮನೆಗೆ ಕಾಶ್ಮೀರದಿಂದ ಸವಿತಾ ಎನ್ನುವ ಹೆಸರಿನ ಹೆಣ್ಣುಮಗಳು ಬಂದಾಗ, ಹನ್ನಾಳ ಮಗ ವಿಶಾಲ ಅವಳಲ್ಲಿ ಅನುರಕ್ತಿಯನ್ನು ತಳೆಯುತ್ತಾನೆ. ಅವಳು ಒಂದು ದಿನ ತನ್ನ ಕೋಣೆಯಲ್ಲಿ ನಮಾಜು ಮಾಡುತ್ತಿರುವುದನ್ನು ಅವಳು ಸವಿತಾ ಅಲ್ಲ ಸಬಿಹಾ ಎಂದು ತಿಳಿದು ತನಗೆ ಮೋಸವಾಯಿತು ಎಂದು ಕೂಗಾಡುತ್ತಾನೆ. ಅದನ್ನು ಕೇಳಿ ಹನ್ನಾ ಅವನ ವಿರುದ್ದ ಕೂಗಾಡುತ್ತಾಳೆ. ಆ ವೇಳೆಗೆ ಅಲ್ಲಿಗೆ ಬಂದ ವಿವೇಕ್ ಅವನನ್ನು ಹೊರಗೆ ಕರೆದುಕೊಂಡು ಗೌರಿಪಾಳ್ಯದ ಯಹೂದಿ ಸ್ಮಶಾನಕ್ಕೆ ಕರೆದುಕೊಂಡು ಹೋಗಿ ವಿಶಾಲನಿಗೆ ಅವನ ತಾತ ಮೋಸೆಸ್ ನ ಸಮಾಧಿಯನ್ನು ಅದನ್ನು ಅನುಗಾಲದಿಂದ ಕಾಯುತ್ತಾ ಬಂದ ಮುಸ್ಲಿಮ್ ರನ್ನು ತೋರಿಸುತ್ತಾನೆ. ಈಗ ವಿಶಾಲನ ಕಣ್ತೆರೆಯುತ್ತದೆ. ಮನೆಗೆ ಬಂದು ಅಮ್ಮನ ಮಡಿಲಿನಲ್ಲಿ ಮಲಗಿ ತನ್ನ ಪಶ್ಚಾತ್ತಾಪ ವ್ಯಕ್ತಪಡಿಸುವುದಲ್ಲದೆ , “ಎಲ್ಲಿ ಏನು ಬೇಕಾದರೂ ಆಗಲಿ . ಈ ಮನೆಯಲ್ಲಿ ಸಬಿಹಾ ಇರಲಿ” ಎಂದು ಗೋಗರೆಯುತ್ತಾನೆ.ಆಗ ಹನ್ನಾ ಕಿರುನಗೆ ನಗುತ್ತಾಳೆ. ಸತ್ತವರ ಸಮಾಧಿ ಕಾಯುವುದಕ್ಕಿಂತ ಜತೆಗಿನ ಸಹಬಾಳ್ವೆ ದೊಡ್ಡದು ಎಂಬುದನ್ನು ನಿರೂಪಿಸುವಂತೆ. ಈ ಆಶಾವಾದದೊಂದಿಗೆ ಕಾದಂಬರಿ ಮುಗಿಯುತ್ತದೆ.

ಇಡಿ ಕಾದಂಬರಿಯ ತುಂಬಾ ಹನ್ನಾ ಳ ” ಯಾವಾಗ ಈ ಯುದ್ದ ಮುಗಿಯುತ್ತದೆ, ನೆವೆರ್ ಎಗೈನ್” ಎಂಬ ಮಾತುಗಳು ಅನುರಣಿಸುತ್ತವೆ. ಅದು ನಮ್ಮದೂ ಆಗುತ್ತದೆ ಆದರೆ ಲೇಖಕಿ ತಮ್ಮ ಮಾತುಗಳ ಕೊನೆಗೆ ” ನಾನು ಈ ಕಾದಂಬರಿ ಬರೆಯಲು ತೊಡಗಿದಾಗ ಹಿಟ್ಲರ್ ಕುರಿತು ಪುಸ್ತಕಗಳೇ ದೊರೆಯುತ್ತಿರಲಿಲ್ಲ. ಈಗ ಎಲ್ಲೆಂದರಲ್ಲಿ ಅವನ ಕುರಿತು , ಅವನ ಮೇನ್ ಕ್ಯಾಂಪ್ ಪುಸ್ತಕಗಳು ದೊರೆಯುತ್ತವೆ ಇದು ಆತಂಕದ ವಿಷಯ. ಇನ್ನೊಮ್ಮೆ ಹಿಟ್ಲರ್ ಹುಟ್ಟದಂತೆ ನೋಡಿ ಕೊಳ್ಳುವ ಅಗತ್ಯವಿದೆ” ಎಂದು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಈ ಅವರ ಆತಂಕ ಮನುಕುಲದ ಭವಿಷ್ಯದಲ್ಲಿ ಕಾಳಜಿ ಇರುವವರಲ್ಲೆಲ್ಲಾ ಇರಬೇಕಾದ್ದು.
ಕನ್ನಡದ ಸಂದರ್ಭದಲ್ಲಿ ಈ ಬಗೆಯ ಕಾದಂಬರಿ ಇದೊಂದೆ.ಅದನ್ನು ಬರೆದಿರುವುದು ಒಬ್ಬ ಲೇಖಕಿ ಎನ್ನುವುದು ಹೆಮ್ಮೆಪಡಬೇಕಾದ ಸಂಗತಿ .ಏಕೆಂದರೆ ಅಕೆ ಲೇಖಕಿ ಮಾತ್ರವಲ್ಲ. ಒಬ್ಬ ತಾಯಿಕೂಡ. ತಾಯಿಯಾದವಳಿಗೆ ತನ್ನ ಮಕ್ಕಳ ಭವಿಷ್ಯದ ಬಗ್ಗೆ ಸದಾ ಆತಂಕ ಇರುವುದು ಸಹಜ. ಮನುಕಲವನ್ನೆ ಒಳಗೊಳ್ಳಬಲ್ಲ ತಾಯಿ. ಇಂತಹ ಲೇಖಕಿ ಮೂರು ದಶಕಗಳ ಹಿಂದೆ ಅವರ ಮುಂಬಯಿ ಗೆಳತಿ ನಮ್ಮ ಶಾಮಲಾ ಮಾಧವ ಅವರ ಜತೆಗೆ ನಮ್ಮ ಮನೆಗೆ ಬಂದಿದ್ದರು, ಮತ್ತು ಈಚೆಗೆ ಧಾರವಾಡದಲ್ಲಿ ನಡೆದ ಲೇಖಕಿಯರ ಸಮಾವೇಶವನ್ನು ಉದ್ಘಾಟಿಸಲು ಬಂದಾಗ ಅವರಿಗೆ ಅದರ ನೆನಪು ನಿಚ್ಚಳವಾಗಿತ್ತು ಎಂಬುದು ಸಂತೋಷದ ಸಂಗತಿ. ಈ ಅಪೂರ್ವ ಕೃತಿಯನ್ನು ಸಮರ್ಥವಾಗಿ ಭಾಷಾಂತರಿಸಿದ ಗೆಳೆಯರಾದ ಕೆ.ನಲ್ಲತಂಬಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅವರು ನಾನು ಕೇಳಿದ ಕೂಡಲೆ ಪುಸ್ತಕವನ್ನು ಕಳಿಸಿಕೊಡುವುದರ ಮೂಲಕ ಇದನ್ನು ಓದುವ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಮಿತಿಗಳೆಂದು ಕರೆಯುವುದಾದರೆ: ಮೂಲ ಇಂಗ್ಲಿಷ್ ವಾಕ್ಯಗಳನ್ನು ಹಾಗೆಯೆ ಉಳಿಸಿಕೊಂಡಿರುವುದು ಮತ್ತು ಇಂಗ್ಲಿಷ್ ವಾಕ್ಯಗಳನ್ನು ತಮಿಳು ಲಿಪಿಯಲ್ಲಿ ಬರೆದಿರುವುದು. ಕಾದಂಬರಿಯ ಸಾಧನೆಯ ಮುಂದೆ ಇವು ಗೌಣ. ಮುದ್ರಣಗೊಂಡ ಮೂರುವರ್ಷಗಳಲ್ಲಿ ಪುನರ್ ಮುದ್ರಣಗೊಂಡಿರುವುದು ತಮಿಳಿನಲ್ಲಿ ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇಬ್ಬರಿಗೂ ವಂದನೆ,ಅಭಿನಂದನೆ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು
