‘ಯಶೋಗಾಥೆ’ ಕವನ – ಹೆಚ್.ಪಿ.ಕೃಷ್ಣಮೂರ್ತಿ

ಸುರಿಯಲು ಹಣವಿರಲಿಲ್ಲ, ನೀರಿನ ಅನುಕೂಲವಿರಲಿಲ್ಲ, ಕೊರಗುತ ಕೂತ ಜಾಯಮಾನ ಸಾಲುಮರದ ತಿಮ್ಮಕ್ಕದಾಗಿರಲಿಲ್ಲ …. ಕವಿ ಹೆಚ್.ಪಿ.ಕೃಷ್ಣಮೂರ್ತಿ ಅವರ ಕವನದ ಮೂಲಕ ವೃಕ್ಷಮಾತೆಗೆ ಅಂತಿಮ ನಮನಗಳು …

ಕೈಯಲೊಂದು ಸಸಿ ಹಿಡಿದು
ಫೋಟೋಗೆ ಹಲ್ಕಿರಿದು
ಪೋಜು ಕೊಡುವ ಗೋಜಿಗೆ
ಎಂದೂ ಇಳಿಯಲಿಲ್ಲ

ಸರ್ಕಾರ ಕೊಡುವ ಪ್ರಶಸ್ತಿ ಪತ್ರಕೆ
ಅಶಿಸ್ತಿನ ಮಾರ್ಗ ಹಿಡಿಯಲಿಲ್ಲ
ಬಿರಿದು ಬಾವಲಿಗಳಾಸೆಗೆ
ಎಂದೂ ಕೈ ಚಾಚಲಿಲ್ಲ

ಸಭೆ ಸಮಾರಂಭಗಳಿಲ್ಲ
ಮೈಕು ಭಾಷಣಗಳ ಗೀಳಿಲ್ಲ
ಬಾಲ ಬಡುಕರಿಲ್ಲ
ವಂದಿ ಮಾಗಧರಿಲ್ಲ
ತೋರಿಕೆಯ ಧಿಮಾಕು ಗೊತ್ತಿಲ್ಲ
ಆಡಂಭರವಂತೂ ಮೊದಲೇ ಇಲ್ಲ

ಸುರಿಯಲು ಹಣವಿರಲಿಲ್ಲ
ನೀರಿನ ಅನುಕೂಲವಿರಲಿಲ್ಲ
ದೇಹದಲಿ ಶಕ್ತಿಯೂ ಅಷ್ಟಿರಲಿಲ್ಲ
ಸಹಾಯಕೆ ಜನರೂ ಇರಲಿಲ್ಲ
ಆದರೂ ಕೊರಗುತ ಕೂತ ಜಾಯಮಾನ
ಈಕೆಯದಾಗಿರಲಿಲ್ಲ

ಲಕ್ಷ ಲಕ್ಷ ಹಣ ಸುರಿದು
ರೀತಿ-ನೀತಿಗಳ ಅಧ್ಯಯನಕೆಂದು
ವಿಮಾನ ಹತ್ತಲಿಲ್ಲ

ಸೂಟು-ಬೂಟಿನ ಮಂದಿಗಳ ಜತೆ
ಸೆಮಿನಾರುಗಳು ನಡೆಸಲಿಲ್ಲ
ನಿಸ್ವಾರ್ಥ-ನಿರಪೇಕ್ಷಿತ
ಕಾಯಕ ನಿಷ್ಠೆ ಅಷ್ಟೆ!

ಸಾವಿರ ಸಾವಿರ ‘ಸಾವಿರ’ ದ
ಸಾಲು ಸಾಲು ಸಸಿಗಳ ನೆಟ್ಟು
ನಿರುಣಿಸಿ, ಮರವಾಗಿಸಿ
ಹೆಸರಿಗಾಸೆ ಪಡದೆ
” ಇಚ್ಚಾ ಶಕ್ತಿಯ ಮುಂದೆ
ಉಳಿದೆಲ್ಲವೂ ಗೌಣ “ಎಂಬ ಮಾತಿಗೆ
ಹೊಸ ಅರ್ಥ ಬರೆದ ದಿಟ್ಟೆ
ಇದು ನಮ್ಮ ವೃಕ್ಷಮಾತೆ
ತಿಮ್ಮಕ್ಕಳ ಯಶೋಗಾಥೆ!


  •  ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading