ವಿದೇಶಿ ಅಧ್ಯಾತ್ಮ ಸಾಧಕರು



ಅಧ್ಯಾತ್ಮವು ಸಮಾಜದ ಖಾಯಿಲೆಯಲ್ಲಿ ಮುಳುಗದಂತೆ ಕಾಪಾಡಿದೆ. ಇಡೀ ಜಗತ್ತನ್ನು ಆಕರ್ಷಿಸಿರುವುದು ನಮ್ಮ ಭಾರತೀಯ ಸಂಸ್ಕೃತಿ. ಅಧ್ಯಾತ್ಮ ಸಾಧಕರ ತವರು ನಮ್ಮ ಭಾರತ. ನಮ್ಮ ಹೆಮ್ಮೆ ನಮ್ಮ ಭಾರತ…

ಶತಶತಮಾನಗಳಿಂದಲೂ ಭಾರತ ಅಸಂಖ್ಯ ವಿದೇಶೀಯರನ್ನು ಅನೇಕಾನೇಕ ಕಾರಣಗಳಿಂದ ಆಕರ್ಷಿಸಿದೆ. ಇಲ್ಲಿನ ಸಂಪತ್ಸಮೃದ್ಧಿಯನ್ನೂ, ಭೌತಿಕ ಪ್ರಗತಿಯನ್ನೂ ಕಂಡು ಬಂದವರು ಕೆಲವರಾದರೆ, ಇಲ್ಲಿನ ಜ್ಞಾನ ವಿಜ್ಞಾನ ತತ್ವಜ್ಞಾನಗಳ ಪ್ರಖರತೆಗೆ ಬೆರಗಾಗಿ ಬಂದವರು ಕೆಲವರು. ಆಕ್ರಮಣಕಾರಿಗಳಾಗಿ ಬಂದವರು ಒಂದಿಷ್ಟು ಜನರಾದರೆ, ಸದ್ಗುಣ ಸಂಪನ್ನರಾಗಿ ಬಂದವರು ಒಂದಷ್ಟು ಜನ. ಇಲ್ಲಿಗೆ ಅಧ್ಯಾತ್ಮ ಸಾಧನೆಯ ಮಾರ್ಗಗಳಲ್ಲಿ ತಮ್ಮನ್ನು ತಾವು ಕಳೆದುಕೊಳ್ಳಲು ಬಂದವರ ಜೊತೆಯಲ್ಲಿ, ತಾವು ಕಳೆದುಕೊಂಡ ನೆಮ್ಮದಿ, ಸುಖ ಸಂತೋಷಗಳನ್ನು ಮರಳಿ ಪಡೆದುಕೊಳ್ಳಲು ಬಂದವರೂ ಇದ್ದರು. ಭಾರತ ಅವರವರ ಸ್ವಭಾವ ವೈಶಿಷ್ಟ್ಯಗಳಿಗೆ ಅನುಗುಣವಾಗಿ ಆದರಿಸಿ ಸತ್ಕರಿಸಿದೆ.



ಭಾರತೀಯ ಸಂಸ್ಕೃತಿಯ ಮಹಾನತೆ ವೈಶಿಷ್ಟ್ಯ ಕಾಣುವುದು ಇಲ್ಲಿಯೇ. ಲಬ್ಧ ಇತಿಹಾಸದುದ್ದಕ್ಕೂ ಭಾರತ ತೃಷಿತ ಜನರ ದಾಹವನ್ನು ಇಂಗಿಸುವ ಅಮೃತವಾಹಿನಿಯಾಗಿ ಹರಿದು ಬಂದಿದೆ. ಸಾಮಾಜಿಕ ಸ್ಥಿತಿ ಹೇಗೇ ಇರಲಿ, ಆರ್ಥಿಕವಾಗಿ ಎಂತಹ ಸಂಕಷ್ಟಗಳೇ ಎದುರಾಗಿರಲಿ, ರಾಜಕೀಯವಾಗಿ ದಾಸ್ಯ ಶೃಂಕಲೆಗಳೇ ಬಂಧಿಸಿರಲಿ, ಭಾರತದ ಸಾಂಸ್ಕೃತಿಕ ಶ್ರೇಷ್ಠತೆ ಒಂದಿನಿತೂ ಮಸುಕಾಗಲಿಲ್ಲ, ಮುಕ್ಕಾಗಲಿಲ್ಲ. ಮತ್ತೆ ಮತ್ತೆ ಎದುರಾದ ಪರಕೀಯ ಆಕ್ರಮಣಗಳು ರೂಢಿ ಸಂಪ್ರದಾಯ ಕರ್ಮಠತೆಯ ಹೆಸರಲ್ಲಿ ಆಗೀಗ ಸೇರಿಹೋದ ಅನಿಷ್ಟಗಳು – ಯಾವುವೂ ಭಾರತೀಯ ಸಂಸ್ಕೃತಿಯ ಪ್ರವಾಹವನ್ನು ತಡೆಯುವಲ್ಲಿ ದಿಕ್ಕು ತಪ್ಪಿಸುವಲ್ಲಿ ಯಶಸ್ಸು ಪಡೆಯಲಿಲ್ಲ. ಅಂತಹ ಅಡೆತಡೆಗಳು ಎದುರಾದಾಗಲೆಲ್ಲಾ ಅದು ಮತ್ತಷ್ಟು ಹೊಳಪಿನಿಂದ ಪುಟಿದೆದ್ದಿದೆ. ಜನಮಾನಸದಲ್ಲಿ ಹೊಸದೊಂದು ಸ್ಪೂರ್ತಿಯನ್ನು ತುಂಬಿದೆ. ಜಗತ್ತಿನ ಹಲವಾರು ಸಂಸ್ಕೃತಿ ನಾಗರಿಕತೆಗಳು ಹೇಳಹೆಸರಿಲ್ಲದಂತೆ ನಾಶವಾಗಿರುವಾಗ, ಭಾರತೀಯ ಸಂಸ್ಕೃತಿಯೊಂದೇ ಚಿರನೂತನವಾಗಿರುವುದಕ್ಕೆ ಕಾರಣ ಅದರ ಆತ್ಮವಾಗಿರುವ ಅಧ್ಯಾತ್ಮ! ಇಲ್ಲಿನ ಭೌತಿಕ ಪ್ರಗತಿಯೂ ಅಧ್ಯಾತ್ಮದ ತಳಹದಿಯನ್ನೇ ಅವಲಂಬಿಸಿರುವುದರಿಂದ, ಸಂಸ್ಕೃತಿ ಪ್ರವಾಹ ನಿರಂತರವಾಗಿ ಹರಿದಿದೆ. ಭೌತಿಕ ಪ್ರಗತಿ ಅಜೀರ್ಣವಾಗಿ ಸಮಾಜ ಖಾಯಿಲೆ ಬೀಳದಂತೆ, ಅಧ್ಯಾತ್ಮ ವಲಯ ನಿರಂತರ ಔಷಧೋಪಚಾರ ನಡೆಸುತ್ತದೆ. ಅಂತರಂಗ ಬಹಿರಂಗಗಳ ಈ ಸಮತೋಲನ ದೇಶವನ್ನು ಜನ ಜೀವನವನ್ನು ರಕ್ಷಿಸಿದೆ, ಪೋಷಿಸಿದೆ.

ಫೋಟೋ ಕೃಪೆ : Navabharat times

ಭಾರತೀಯ ಸಂಸ್ಕೃತಿಯ ಈ ಪೋಷಕ ಗುಣವೇ ಜಗತ್ತನ್ನು ಆಕರ್ಷಿಸಿರುವುದು. ಈ ಆಕರ್ಷಣೆಗೆ ಒಳಗಾಗಿ ಬಂದವರು ಇಲ್ಲಿನ ನಾಡು- ನುಡಿಯನ್ನು ಒಪ್ಪಿದರು. ನಡೆ ನುಡಿಯನ್ನು ಅಪ್ಪಿದರು. ಭಾರತೀಯರಿಗೇನೂ ಕಡಿಮೆ ಇಲ್ಲದಂತೆ ಬಾಳಿದರು. ಅಧ್ಯಾತ್ಮ ಕ್ಷೇತ್ರದಲ್ಲೂ ಸಾಧನೆ ಮಾಡಿದರು.



೨೦ ನೇ ಶತಮಾನದಲ್ಲಿ ಹೀಗೆ ಭಾರತಕ್ಕೆ ಭೇಟಿ ನೀಡಿದ ವಿದೇಶೀಯರಲ್ಲಿ ಒಬ್ಬರಾಗಿ, ಭಾರತೀಯ ಸಾಧನಾ ಪಥದಲ್ಲಿ ಮುನ್ನಡೆದವರು ಶ್ರೀ ಪಾಲ್ ಬ್ರಂಟನ್. ಧ್ಯಾನವನ್ನು ಹೇಳಿಕೊಡಬಲ್ಲ, ಅಧ್ಯಾತ್ಮ ಸಾಧನೆಯ ಮಾರ್ಗವನ್ನು ತೋರಿಸಬಲ್ಲ ಸಮರ್ಥ ಗುರುವನ್ನು ಹುಡುಕುತ್ತಾ ಅವರು ಭಾರತದ ಉದ್ದಗಲಕ್ಕೂ ಓಡಾಡಿದರು. ಭಾರತದ ನಗರ ಪಟ್ಟಣಗಳಲ್ಲಿ, ಹಳ್ಳಿ ಹಾಡಿಗಳಲ್ಲಿ, ಕಾಡು ಮೇಡುಗಳಲ್ಲಿ, ಸಾಧು ಸಂತರನ್ನು ಅಧ್ಯಾತ್ಮ ಸಾಧಕರನ್ನೂ, ಹಾದಿ ಬದಿಯ ಯಕ್ಷಿಣಿಗಾರರನ್ನು ಭೇಟಿಯಾದರು. ಅವರ ಬಳಿ ವಿಧೇಯ ವಿದ್ಯಾರ್ಥಿಯಂತೆ ಕುಳಿತು ಚರ್ಚಿಸಿದರು. ಪ್ರೌಢ ಪರೀಕ್ಷಕನಂತೆ ಎದುರಿಗಿದ್ದವರ ಆಳ ಅಗಲಗಳನ್ನೆಲ್ಲ ಜಾಲಾಡಿದರು. ಕಪಟಿಗಳ, ಕಡಿಮೆ ಸಾಮರ್ಥ್ಯವಂತರ, ಹೊಟ್ಟೆ ಪಾಡಿಗಾಗಿ ವೇಷ ತೊಟ್ಟವರನ್ನೆಲ್ಲ ಬಿಟ್ಟು ಮುಂದಕ್ಕೆ ಹೊರಟರು. ಪರೀಕ್ಷಿಸದೆ ಒರೆಗೆ ಹಚ್ಚದೆ ಯಾರನ್ನೂ ಒಪ್ಪಲೂ ಇಲ್ಲ, ತಿರಸ್ಕರಿಸಲೂ ಇಲ್ಲ. ಅವರ ಗುಣೈಕನಿಷ್ಠ ಪ್ರಯತ್ನ ಸಫಲವಾದದ್ದು ಮಹರ್ಷಿ ರಮಣರ ಎದುರಿನಲ್ಲಿ. ಅನೇಕ ತಿಂಗಳುಗಳ ಕಾಲ ಅವರು ರಮಣರ ಆಶ್ರಮದ ಬಳಿಯಲ್ಲಿಯೇ ಕುಟೀರ ಕಟ್ಟಿಕೊಂಡು ಅಧ್ಯಾತ್ಮ ಸಾಧನೆಯಲ್ಲೂ ತೊಡಗಿದ್ದರು. ಅಂತಹ ಅಧ್ಯಾತ್ಮ ಸಾಧಕರ ತವರು ನಮ್ಮ ಭಾರತ. ನಾವು ಹೆಮ್ಮೆ ಪಡುವಂತಹದ್ದು.


  • ಶಿವಕುಮಾರ್ ಬಾಣಾವರ  (ನಿವೃತ್ತ, ಕಾರ್ಯಪಾಲಕ ಇಂಜೀನಿಯರ್ – ಕೆ. ಪಿ.ಸಿ. ಎಲ್)

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW