ಜೀರ್ಕ / ದೀರ್ಕನಮರದ ಹಣ್ಣುಗಳು ಹೆಚ್ಚಾಗಿ ಕರ್ನಾಟಕದ ಮಲೆನಾಡು ಮತ್ತು ಕರಾವಳಿಯ ಭಾಗದಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಜೀರ್ಕ ಹಣ್ಣಿನ ಮಹತ್ವ, ಅದರಿಂದ ತಯಾರಿಸಲ್ಪಡುವ ಅಡೂಳಿ ಹುಳಿಯ ಬಗ್ಗೆ ಪಶುವೈದ್ಯರಾದ ಡಾ.ಯುವರಾಜ್ ಹೆಗಡೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.ಮುಂದೆ ಓದಿ…
#ಜೀರ್ಕ_ದೀರ್ಕನ_ಮರದ_ಹಣ್ಣು, ಅದರಿಂದ ತಯಾರಿಸುವ ಅಡೂಳಿಯ ರುಚಿಯನ್ನು ಸವಿಯದ ಮಲೆನಾಡಿಗರು ಇರಲಿಕ್ಕಿಲ್ಲ. ಕರ್ನಾಟಕದಲ್ಲಿ ಮಲೆನಾಡು ಮತ್ತು ಕರಾವಳಿಯ ಭಾಗದಲ್ಲಿ ಮಾತ್ರ ಕಾಣಸಿಗುವ ಜೀರ್ಕ( ದೀರ್ಕ)ದ ಮರಗಳು Garcinia Xanthochymus ಪ್ರಭೇದಕ್ಕೆ ಸೇರಿದ್ದು, ಹೆಚ್ಚಾಗಿ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಂಡುಬರುತ್ತವೆ. ಸದಾಹಸಿರಿನಿಂದ ಕಂಗೊಳಿಸುವ ಇವು ಸಾಮಾನ್ಯವಾಗಿ ಚಳಿಗಾಲದಲ್ಲಿ ಅದರಲ್ಲೂ ನವೆಂಬರ್ ತಿಂಗಳಿನಿಂದ ಜನವರಿ ಅಂತ್ಯದವರೆಗೂ ಫಲವನ್ನು ನೀಡುತ್ತವೆ. ಜೀರ್ಕದ ಕಾಯಿ ಕಡುಹಸಿರು ಬಣ್ಣದಿಂದ ಕೂಡಿದ್ದು ಮಾಗಿದಾಗ ಹಳದಿ ಬಣ್ಣಕ್ಕೆ ತಿರುಗಿ, ಕೇಸರಿ ಬಣ್ಣದ ತೊಳೆಗಳನ್ನು ಹೊಂದಿರುತ್ತವೆ . ಇದರ ಹುಳಿ ಮಿಶ್ರಿತ ಸಿಹಿ ಹಣ್ಣುಗಳನ್ನು ಬಹುತೇಕ ಮಲೆನಾಡಿನ ಮಕ್ಕಳು ಮುಖ ಕಿವುಚುತ್ತಲೇ ಸವಿಯುತ್ತಾರೆ. ಪ್ರಾಣಿ ಪಕ್ಷಿಗಳಿಗೂ ಪ್ರಿಯವಾದ ಹಣ್ಣನ್ನು ಕೆಂದಳಿಲುಗಳು, ಕಬ್ಬೆಕ್ಕು, ಮಂಗ, ನವಿಲು, ಹಾರ್ನ ಬಿಲ್ ಗಳು, ಕೆಳಗೆ ಬೀಳುವ ಹಣ್ಣನ್ನು ಜಿಂಕೆ, ಕಡವೆ, ಜಾನುವಾರುಗಳು ಇಷ್ಟಪಟ್ಟು ತಿನ್ನುತ್ತವೆ.

ಫೋಟೋ ಕೃಪೆ : google
ಜೀರ್ಕದ ಕಾಯಿ ಮತ್ತು ಹಣ್ಣಿನಿಂದ ತಯಾರಿಸುವ ಹುಳಿಯನ್ನು’#ಅಡೂಳಿ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಈ ಹುಳಿಯನ್ನು ಮೀನು ಮತ್ತು ಮಾಂಸದ ಅಡುಗೆಗಳಿಗೆ ಬಳಸುವುದೇ ಹೆಚ್ಚು. ಸರಿಯಾಗಿ ಎಚ್ಚರವಹಿಸಿ ತಯಾರಿಸಿದ ಅಡೂಳಿಯನ್ನು 2 ವರುಷದವರೆಗೆ ಗುಣಪಟ್ಟ ಹಾಳಾಗದ ಹಾಗೆ ಸಂಗ್ರಹಿಸಿ ಇಡಬಹುದಾಗಿದೆ. ಮೀನಿನ ಖಾದ್ಯಗಳಿಗೆ ಬಳಸುವ ಅತ್ಯಂತ ಶ್ರೇಷ್ಠವಾದ ಹುಳಿ ಅಡೂಳಿ ಎಂದರೆ ತಪ್ಪಾಗಲಾರದು. ಅದರಲ್ಲೂ ಮಣ್ಣಿನ ಗಡಿಗೆಯಲ್ಲಿ ಬಚ್ಚುವ ಮೀನಿಗೆ ಒಂದೆರೆಡು ಚಮಚ ಅಡೂಳಿಯನ್ನು ಹಾಕಿದಾಗ ಅಡುಗೆಗೆ ವಿಶಿಷ್ಟವಾದ ರುಚಿ, ಸ್ವಾದ ಬರುತ್ತದೆ. ಒಣಗಿಸಿದ ಜೀರ್ಕದ ಹೋಳುಗಳನ್ನು ಹುಣಸೆಗೆ ಪರ್ಯಾಯವಾಗಿ ಮಲೆನಾಡಿನಲ್ಲಿ ಬಳಸುವುದೂ ಉಂಟು.

ಫೋಟೋ ಕೃಪೆ : google
#ಅಡೂಳಿ_ತಯಾರಿಸುವ_ವಿಧಾನ :
ಚೆನ್ನಾಗಿ ಬೆಳೆದ ಜೀರ್ಕದ ಕಾಯಿಗಳನ್ನು ಹೋಳುಗಳನ್ನಾಗಿ ಕತ್ತರಿಸಿ ಒಂದು ವಾರದ ಕಾಲ ಬಿಸಿಲಿನಲ್ಲಿ ಒಣಗಿಸಬೇಕು. ಹಣ್ಣುಗಳು ಇದ್ದಲ್ಲಿ ಕೈಯಿಂದಲೇ ಹಣ್ಣನ್ನು 3-4 ಭಾಗ ಮಾಡಿ ಒಣಗಿಸಬಹುದು .ಹೀಗೆ ಒಣಗಿಸಿದ ಜೀರ್ಕದ ಹೋಳುಗಳನ್ನು 2 ದಿನಗಳ ಕಾಲ ನೀರಿನಲ್ಲಿ ನೆನೆಸಿದರೆ ಹೋಳುಗಳಲ್ಲಿಯ ಹುಳಿಯನ್ನು ನೀರಿಗೆ ಬಿಟ್ಟುಕೊಡುತ್ತದೆ. ನಂತರ ನೀರನ್ನು ಮಾತ್ರ ಸಂಗ್ರಹಿಸಿ ಗಡಿಗೆಯಲ್ಲಿ ಶೇಕಡ 95 ರಷ್ಟು ನೀರು ಆವಿಯಾಗುವಂತೆ ಕಾಯಿಸಿದಲ್ಲಿ ಕಂದು ಬಣ್ಣದ ಅಡೂಳಿ ರುಪುಗೊಳ್ಳುತ್ತದೆ. ಉದಾಹರಣೆಗೆ 15ಕೆಜಿ ಯ ಅಡೂಳಿ ಹೋಳುಗಳನ್ನು 2 ಕೊಡ ನೀರಿಗೆ ನೆನೆಸಿಟ್ಟು ನಂತರ ಬಚ್ಚಿದಲ್ಲಿ ಮುಕ್ಕಾಲು ಲೀಟರ್ ನಷ್ಟು ಅಡೂಳಿಯನ್ನು ಪಡೆಯಲು ಸಾಧ್ಯ. ಲೋಹದ ಪಾತ್ರೆಯಲ್ಲಿ ಅಡೂಳಿಯನ್ನು ತಯಾರಿಸಬಹುದಾದರೂ ಅದರ ಗುಣಮಟ್ಟ ಉತ್ತಮವಾಗಿರುವುದಿಲ್ಲ.

ಅಡೂಳಿಯನ್ನು ಅಡುಗೆಗೆ ಮಾತ್ರವಲ್ಲದೆ, ಜೀರ್ಕದ ಹಣ್ಣನ್ನು ವಿನೆಗರ್ ತಯಾರಿಸಲು, ಅತಿಸಾರಕ್ಕೆ ಔಷಧವಾಗಿ, ಬೀಜಗಳನ್ನು ಒಣಗಿಸಿ ಅವುಗಳಿಂದ ಎಣ್ಣೆಯನ್ನು ತೆಗೆದು ಜಾನುವಾರುಗಳಿಗೆ ಕಾಲುಬಾಯಿ ಜ್ವರ ಬಂದಾಗ ಗೊರೆಸಿನಲ್ಲಿ ಉಂಟಾಗುವ ಗಾಯವನ್ನು ಶೀರ್ಘವಾಗಿ ಗುಣಪಡಿಸಲು ಉಪಯೋಗಿಸುತ್ತಾರೆ. ಈ ಹಣ್ಣಿನಲ್ಲಿ `ಸಿ’ ವಿಟಮಿನ್ ಯತೇಚ್ಛವಾಗಿರುತ್ತದೆ. ಹಣ್ಣನ್ನು ಮತ್ತು ಅಡೂಳಿಯನ್ನು ಹೆಚ್ಚಾಗಿ ಸೇವಿಸಿದಾಗ ಹುಳಿತೇಗು, ಪಿತ್ತದೋಷ, ಅಸಿಡಿಟಿ ಸಮಸ್ಯೆಗಳು ಕಂಡು ಬರುತ್ತದೆ.

ಹಿಂದೆ ಮಲೆನಾಡಿನ ಬಹುತೇಕ ಎಲ್ಲರ ಮನೆಯ ಹಿಂಭಾಗದಲ್ಲಿ ಒಂದೆರೆಡು ಜೀರ್ಕದ ಮರಗಳನ್ನು ಉಳಿಸಿಕೊಂಡು #ಹುಳಿಯನ್ನು ತಯಾರಿಸುತ್ತಿದ್ದರು. ಬದಲಾದ ಜೀವನ ಶೈಲಿಯಲ್ಲಿ ಮಾರುಕಟ್ಟೆಯಲ್ಲಿ ದೊರೆಕುವ ಕೃತಕ /ಸಂಶ್ಲೇಷಿತ ಹುಳಿಗೆ ಮಾರುಹೋದ ಜನತೆ, ಮನೆಯಲ್ಲಿ ತಯಾರಿಸಬಹುದಾದ ಹುಣಸೆಗೆ ಪರ್ಯಾಯವಾದ ಅಡೂಳಿಯ ಬಗ್ಗೆ ಅಸಡ್ಡೆತೋರಿ, ಜೀರ್ಕದ ಮರಗಳನ್ನು ಪೋಷಿಸುವುದು ಕಡಿಮೆ ಮಾಡಿದರು. ಇದರಿಂದ ಮರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಅಡೂಳಿಯ ರುಚಿ, ವೈಶಿಷ್ಟತೆಯನ್ನು ಅರಿತು ಜೀರ್ಕದ ಮರಗಳನ್ನು ಪೋಷಿಸಿ , ಹಣ್ಣಿನ ಮರಗಳ ನಡುತೋಪುಗಳಂತೆ ಅಥವಾ ಮಿಶ್ರಬೆಳೆಗಳಾಗಿ ಬೆಳೆದು ಜಗತ್ತಿಗೆ ಪರಿಚಯಿಸಿದಲ್ಲಿ ಮರಗಳು ಉಳಿಯುವಂತಾಗುವುದಲ್ಲದೆ, ಉದ್ಯೋಗ ಸೃಷ್ಟಿಯೂ ಆಗುತ್ತದೆ ಎಂದು ಆಶಿಸೋಣ.
- ಡಾ.ಯುವರಾಜ್ ಹೆಗಡೆ, (ಪಶುವೈದ್ಯರು,ವೈದಕೀಯ ಬರಹಗಾರರು) ತೀರ್ಥಹಳ್ಳಿ
