ಅಬ್ಬಕ್ಕ ರಾಣಿ ಅಥವಾ ‘ಅಬ್ಬಕ್ಕ ಮಹಾದೇವಿ’ ೧೬ನೇ ಶತಮಾನದ ತುಳುನಾಡಿನ ರಾಣಿಯಾಗಿದ್ದಳು. ಇವರು ೧೬ ನೇ ಶತಮಾನದ ದ್ವಿತೀಯಾರ್ಧದಲ್ಲಿ ಪೋರ್ಚುಗೀಸರೊಡನೆ ಹೋರಾಡಿದಳು. ಅಬ್ಬಕ್ಕನ ಬಗ್ಗೆ ಇನ್ನಷ್ಟು ಕುತೂಹಲಕಾರಿ ವಿಷಯಗಳನ್ನು ಪ್ರೊ.ರೂಪೇಶ್ ಹಂಚಿಕೊಂಡಿದ್ದಾರೆ. ಮುಂದೆ ಓದಿ…
ರಾಣಿಯು ದೇವಾಲಯಗಳ ನಗರಿ ಮೂಡುಬಿದಿರೆಯ ಪ್ರದೇಶವನ್ನಾಳಿದ ಚೌಟ ವಂಶಕ್ಕೆ ಸೇರಿದವಳು. ಪುತ್ತಿಗೆ ರಾಜಧಾನಿಯಾಗಿದ್ದರೂ, ಬಂದರು ನಗರಿ ಉಲ್ಲಾಳವು ಉಪ ರಾಜಧಾನಿಯಾಗಿದ್ದಿತ್ತು.ಉಲ್ಲಾಳ ಸಮೃದ್ಧ ಬಂದರು. ಪಶ್ಚಿಮಕ್ಕೆ ಅರೇಬಿಯಾ ಮತ್ತು ಇತರ ದೇಶಗಳಿಗೆ ಮಸಾಲೆ ವ್ಯಾಪಾರದ ಕೇಂದ್ರವಾಗಿತ್ತು. ಅದು ಲಾಭದಾಯಕ ವ್ಯಾಪಾರ ಕೇಂದ್ರವಾಗಿದ್ದರಿಂದ ಪೋರ್ಚುಗೀಸ್, ಡಚ್ ಮತ್ತು ಬ್ರಿಟಿಷರು ಈ ಪ್ರದೇಶದ ನಿಯಂತ್ರಣಕ್ಕಾಗಿ ಮತ್ತು ವ್ಯಾಪಾರ ಮಾರ್ಗಗಳಿಗಾಗಿ ಪರಸ್ಪರ ಪೈಪೋಟಿ ನಡೆಸಿದರು. ಆದಾಗ್ಯೂ ಸ್ಥಳೀಯ ಮುಖ್ಯಸ್ಥರ ಪ್ರತಿರೋಧವು ತುಂಬಾ ಪ್ರಬಲವಾಗಿದ್ದರಿಂದ ಅವರಿಗೆ ಹೆಚ್ಚು ಮುನ್ನಡೆಯಲು ಸಾಧ್ಯವಾಗಲಿಲ್ಲ. ಅಬ್ಬಕ್ಕನ ಆಡಳಿತವನ್ನು ಸ್ಥಳೀಯ ಆಡಳಿತಗಾರರು, ಎಲ್ಲಾ ಜಾತಿ ಮತ್ತು ಧಾರ್ಮಿಕ ಮಾರ್ಗಗಳನ್ನು ಮೀರಿ ಮೈತ್ರಿಯಿಂದ ಜೈನರು, ಹಿಂದೂಗಳು ಮತ್ತು ಮುಸ್ಲಿಮರು ಚೆನ್ನಾಗಿ ಪ್ರತಿನಿಧಿಸುತ್ತಿದ್ದರು.
ಫೋಟೋ ಕೃಪೆ : Youtube (ತುಳುನಾಡಿನ ರಾಣಿ ಅಬ್ಬಕ್ಕ )
ಅಬ್ಬಕ್ಕ ಪೋರ್ಚುಗೀಸರ ಜೊತೆ ೧೫೫೫ ,೧೫೫೭ ,೧೫೬೭ ಯುದ್ದಗಳನ್ನು ಜಯಿಸಿದ್ದರು. ೧೫೬೮ ರಲ್ಲಿ ಅಬ್ಬಕ್ಕನನ್ನು ಮೋಸದಿಂದ ಸೋಲಿಸಿದರು. ಆದರೂ ೧೫೭೦ ರಲ್ಲಿ ಕೇರಳಾದ ಪೋಕರ್ ಮರಕ್ಕಾರ್ ಹಾಗೂ ಬಿಜಾಪುರದ ಸುಲ್ತಾನನ ಸಹಾಯದಿಂದ ಜಯಿಸಿದರು. ಜಯಿಸಿ ಸುಲ್ತಾನ ಬೇಗ ಮರಳಿ ಹೋದ. ಆದರೆ ಗಾಯಗೊಂಡು ಸೈನಿಕರನ್ನು ಪರಿಚಯಿಸಿ. ಕೆಲ ದಿನಗಳ ನಂತರ ಮರಳಿ ಹೋಗುತ್ತಿದ್ದ ಮರಕ್ಕಾರನ್ನು ದಾರಿಯಲ್ಲಿ ಕೊಂದು, ಅಬ್ಬಕ್ಕನಿಗೆ ಸಹಾಯಕ್ಕೆ ಯಾರೂ ಇಲ್ಲದಂಗೆ ಮಾಡಿ ಬಂಧಿಸಿದ ಕಥೆ ನಿಮಗೆಲ್ಲಾ ಗೊತ್ತಿರಬಹುದು.
ಫೋಟೋ ಕೃಪೆ : History
೧೪೯೮ ರಲ್ಲಿ ವಾಸ್ಕೋಡಿಗಾಮ ಯೂರೋಪಿನಿಂದ ಭಾರತಕ್ಕೆ ಸಮುದ್ರ ಮಾರ್ಗ ಕಂಡು ಹುಡುಕಿದ ಐದು ವರುಷಗಳ ನಂತರ ಅಂದರೆ ೧೫೦೩ ರಲ್ಲಿ ಪೋರ್ಚುಗೀಸರು ಪ್ರಪ್ರಥಮವಾಗಿ ಕೇರಳಾದ ಕೊಚ್ಚಿನ್ ನಲ್ಲಿ ವಾಸಹಾತು-ಬಂದರನ್ನು ರೂಪೀಕರಿಸಿದರು. ನಂತರ ಗೋವಾ, ಮಸ್ಕತ್, ಶ್ರೀಲಂಕಾ, ಚೀನಾ….. ಖಾರ ಪದಾರ್ಥಗಳೇ ಅವರ ಅಧೀಕೃತ ವ್ಯಾಪಾರವಾಗಿತ್ತು. ಹೀಗೆ ವ್ಯಾಪಾರ ಸರಬರಾಜಿಗೆ ಉಲ್ಲಾಳದ ಮೇಲೆ ಅವರಿಗೆ ಕಣ್ಣು ಬಿತ್ತು. ಇದು ಅಬ್ಬಕ್ಕನಿಗೆ ತಿಳಿಯಿತು.
ಗೋವಾವನ್ನು ಆಕ್ರಮಿಸಿಕೊಂಡ ನಂತರ ಮತ್ತು ಅದರ ಮೇಲೆ ಹಿಡಿತ ಸಾಧಿಸಿದ ನಂತರ, ಪೋರ್ಚುಗೀಸರು ತಮ್ಮ ಗಮನವನ್ನು ದಕ್ಷಿಣಕ್ಕೆ ಮತ್ತು ಕರಾವಳಿಯತ್ತ ತಿರುಗಿಸಿದರು. ಪೋರ್ಚುಗೀಸ್ ಕಮಾಂಡರ್ ಅಡ್ಮಿರಲ್ ಡೋನ್ ಅಲ್ವಾರೋ ಡಿ ಸಿಲ್ವೇರಿಯಾ ೧೫೨೫ ರಲ್ಲಿ ಗೋವಾ ಮಾರ್ಗವಾಗಿ ಬಂದು ಮಂಗಳೂರು ಬಂದರು ವಶಪಡಿಸಿದರು. ನಂತರ ದಕ್ಷಿಣ ಕೆನರಾ ಕರಾವಳಿಯ ಮೇಲೆ ದಾಳಿ ಮಾಡಿ ಮಂಗಳೂರು ಬಂದರನ್ನು ನಾಶಪಡಿಸಿದರು.
ಫೋಟೋ ಕೃಪೆ : feminisminindia
ಅಂದು ಅಬ್ಬಕ್ಕ ಅವರ ಸೈನ್ಯಬಲವನ್ನು ಅರಿತಳು. ತನ್ನ ಸೈನ್ಯದ ಬಲ ಪೋರ್ಚುಗೀಸರು ಸಮ ಬಲ ತರಬೇಕೆಂಬ ಹಠವಾಯಿತು. ಕೃಷಿ ಪ್ರಧಾನವಾದ ತುಳುನಾಡಿನ ಹೆಂಗಸರು ಕೈಯಲ್ಲಿ ತೆನೆ ಕೊಯ್ಯುವ ಕತ್ತಿ ಹಿಡಿದು ಹೋಗುವುದನ್ನು ನೋಡಿದ ರಾಣಿ, ತನ್ನ ರಾಜ್ಯದ ಎಲ್ಲಾ ಹೆಂಗಸರಿಗೆ, ತನ್ನ ಸೈನಿಕರಿಂದ ಅವರು ತೆನೆ ಕೊಯ್ಯಲು ಉಪಯೋಗಿಸುತ್ತಿದ್ದ ಕತ್ತಿಯಿಂದ ಯುದ್ದದ ತಾಲೀಮು ಕೊಡಿಸಿದಳು. ಆ ಕತ್ತಿಗೆ ಹಗ್ಗ ಕಟ್ಟಿ ಗರಗರನೆ ತಿರುಗಿಸಿ ಶತ್ರುಗಳು ದೂರ ಹೋಗುವಂತೆ ಮಾಡಲು ತರಬೇತಿ ಕೊಟ್ಟು ಆ ಸೈನ್ಯಕ್ಕೆ ಪೊಣ್ಣುಲೆನ (ಹೆಂಗಸರು) ಪಡೆ (ಸೈನ್ಯ) “ಪೆಣ್ಣ್ ಪಡೆ”ಎಂದು ಹೆಸರಿಟ್ಟರು.
೧೫೫೫ ಪೋರ್ಚುಗೀಸರು ಅಬ್ಬಕ್ಕನ ಉಲ್ಲಾಳಕ್ಕೆ ದಾಳಿ ಇಟ್ಟರು. ತನ್ನ ಸೈನಿಕರೊಂದಿಗೆ ಅವಳು ಯುದ್ದಕ್ಕೆ ಇಳಿಯುವ ಮೊದಲು ಪೆಣ್ ಪಡೆಗೆ ತೆಂಕು (ಈಗಿನ ತೊಕ್ಕೋಟು) ಭಾಗದಿಂದ ಆಕೃಮಿಸಲು ನಿರ್ದೇಶಿಸಿದಳು.
ಅಬ್ಬಕ್ಕ ಇರುವಲ್ಲೇ ಸೈನ್ಯವಿರುವುದೆಂದು ಬಗೆದು ಪೋರ್ಚುಗೀಸರು ಆ ಭಾಗವನ್ನು ಆಕೃಮಿಸುತ್ತಿದ್ದರು. ಅಬ್ಬಕ್ಕ ವೀರಾವೇಶದಿಂದ ಹೋರಾಡುತ್ತಲೇ ಇದ್ದಾಗ…
ಇತ್ತ ಪೆಣ್ ಪಡೆ – ಬಡಕು ಗುಡ್ಡೆ /ಉತ್ತರದ ದಿನ್ನೆ ಯವರೆಗೆ ಪೋರ್ಚುಗೀಸರನ್ನು ಅಟ್ಟಾಡಿಸಿ ಓಡಿಸಿ, ಮಂಗಳೂರು ಬಂದರಿನವರೆಗೆ (ಈಗಿನ ಕೊಟ್ಟಾರ ಚೌಕಿ) ತಮ್ಮದಾಗಿಸಿದರು. ತೊಕ್ಕೋಟುವರೆಗೆ ಇದ್ದ ಅಬ್ಬಕ್ಕನ ರಾಜ್ಯ ಈಗ ಬಡಕು ಗುಡ್ಡೆಯವರೆಗೆ ವ್ಯಾಪಿಸಿತು. ಆ ಗುಡ್ಡೆಗೆ “ಪೆಣ್ ಪಡೆ ಗುಡ್ಡೆ” ಎಂದು ಹೆಸರಾಯಿತು. ನಂತರ ೧೫೫೭ ಹಾಗೂ ೧೫೬೭ ರ ಯುದ್ದದಲ್ಲಿ “ಪೆಣ್ ಪಡೆ ಗುಡ್ಡೆ” ಯಿಂದ ಒಳಗೆ ಪೋರ್ಚುಗೀಸರಿಗೆ ವಶಪಡಿಸಲಾಗಲಿಲ್ಲ. ಆದರೆ ೧೫೬೮ ರ ಯುದ್ದದಲ್ಲಿ ಅವರು ಅದನ್ನು ವಶಪಡಿಸಿದರು. ಅದನ್ನು ಸೆನ್ಹೋರ/ Senhora (ಪೋರ್ಚುಗೀಸ್ ನಲ್ಲಿ ಹೆಂಗಸು/ಹೆಣ್ಣು) ಕೊಲಿನ/Colina ( ಗುಡ್ಡೆ) ಎಂದು ಕರೆದರು.
ನಂತರ ಬ್ರಿಟೀಷರು ತಮ್ಮದಾಗಿಸಿದಾಗ ಸೆನ್ಹೋರ ಕೊಲಿನ ದ ಆಂಗ್ಲ ಪೂರಕ ಪದ lady Hill ಆಯಿತು.
(ಸನ್ಮಾನ್ಯ ಕುದ್ಕಾಡಿ ವಿಶ್ವಾನಾಥ ರೈ ಗುರುಗಳು )
ಹೀಗೆ ಅಬ್ಬಕ್ಕನ ಕಥೆ ನಮಗೆ ಎಂಟನೇ ತರಗತಿಯಲ್ಲಿ , ನನ್ನ ಗುರುಗಳಾದ , ಕನ್ನಡ ವಿದ್ವಾಂಸರಾದ, ನಾಟ್ಯ ಗುರುಗಳಾದ, ‘ಮುಂಗಾರು’ ಪತ್ರಿಕೆಯ ಬರಹಗಾರರಾದ ಸನ್ಮಾನ್ಯ ಕುದ್ಕಾಡಿ ವಿಶ್ವಾನಾಥ ರೈ ಅವರು
ನಮಗೆ ಹೇಳಿದ ಕಥೆಯ ಒಂದು ಭಾಗ ಇಂದು ನೆನಪಾಯಿತು. ತುಂಬಾ ವಿಷಯ ಅವರು ನಮ್ಮ ಮನದೊಳಗೆ ಸೇರಿಸಿದ್ದಾರೆ. ಸಮಯ-ಮನಸ್ಸು ಅನುವು ಮಾಡಿದಾಗ ಬರೆಯಲು ಪ್ರಯತ್ನಿಸುತ್ತೇನೆ.
ಅಬ್ಬಕ್ಕನ ಯುದ್ದದ ಜಯಕ್ಕೆ ಎಲ್ಲಾ ಜಾತಿ ಮತದ ಮಹಿಳೆಯರ ಕೊಡುಗೆಯ ಬಳುವಳಿಯೇ ಈ ಲೇಡಿ ಹಿಲ್ ಎನ್ನಬಹುದು ಅಲ್ವೆ. ಎನ್ನುತ್ತಾ…
ನಿಮ್ಮವ ನಲ್ಲ
ರೂಪು
- ಪ್ರೊ. ರೂಪೇಶ್ (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು ವಿಜಯಾ ಕಾಲೇಜು ಬೆಂಗಳೂರು)