ಜೊತೆ ಜೊತೆಯಲಿ ಧಾರವಾಹಿ ಖ್ಯಾತಿಯ ನೀನಾಸಂ ಕಿರಣ್ ಅವರೊಂದಿಗೆ ಒಂದಷ್ಟು ಮಾತು

ನಿಮ್ಮಲ್ಲಿ ಪ್ರತಿಭೆಯಿದ್ದರೆ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳಿಂದ ನಿಮ್ಮನ್ನು ಇನ್ನಷ್ಟು ಬಲಗೊಳಿಸಿಕೊಳ್ಳಿ. ಕಲಿಕೆ ಎನ್ನುವುದು ದೊಡ್ಡ ಸಾಗರವಿದ್ದಂತೆ ಅದನ್ನು ಎಷ್ಟು ಕಲಿತರು ಸಾಲದು ಎಂದು ಇಂದಿನ ಉದಯೋನ್ಮುಖ ಕಲಾವಿದರಿಗೆ ನೀನಾಸಂ ಕಿರಣ್ ಅವರು ಕಿವಿ ಮಾತನ್ನು ಹೇಳಿದ್ದಾರೆ. ಅವರ ಬಗ್ಗೆ ಇನ್ನಷ್ಟು ವಿಷಯಗಳು ಮುಂದೆ ಓದಿ…

ಕಿರಣ ಅವರು ಮೊದಲ ವರ್ಷ ಬಿಎ ಓದುತ್ತಿದ್ದಾಗ ಅವರ ಕಾಲೇಜಿಗೆ ‘ನೀನಾಸಂ ನಾಟಕಗಳ ತಿರುಗಾಟ’ ಪ್ರದರ್ಶನವಿತ್ತು. ಆಗ ಅವರಿಗೆ  ನೀನಾಸಂ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ. ಅವರನ್ನು ಗೇಟ್ ಕೀಪರ್ ಆಗಿ ನಾಟಕದ ವಸ್ತುಗಳನ್ನು ನೋಡಿಕೊಳ್ಳಲು ನಿಲ್ಲಿಸಿದ್ದರು. ನಾಟಕವನ್ನು ನೋಡುತ್ತಾ… ನೋಡುತ್ತಾ… ಅವರಲ್ಲಿ ನಟನೆಯ ಗೀಳು ಅಂಟಿಕೊಂಡಿತು. ಅಂದಿನ ನೀನಾಸಂ ವಿದ್ಯಾರ್ಥಿಗಳಾಗಿದ್ದಾಗ ಅಚ್ಯುತ್ ರಾವ್, ಶೈಲಶ್ರೀ ಹಾಗೂ ಧರ್ಮೆಂದ್ರ ಅರಸುರವರ ಪರಿಚಯವಾಯಿತು. ಹೀಗೆ ಅವರ ಮಾರ್ಗದರ್ಶನದಂತೆ ನೀನಾಸಂನಲ್ಲಿ ಒಂದು ವರ್ಷದ ಕೋರ್ಸ್ ಮಾಡಿಕೊಂಡರು. ಮುಂದೆ ಅವರು ನೀನಾಸಂ ಕಿರಣ್ ಆದರು.

ಒಬ್ಬ ಕಲಾವಿದನಿಗೆ ನಾಯಕನಾದರೆ ಅಥವಾ ನಾಯಕಿಯಾಗಿಯೇ ಪಾತ್ರ ಮಾಡಿದರೆ ಪ್ರೇಕ್ಷಕರನ್ನು ತಲುಪಲು ಸಾಧ್ಯವೆನ್ನುವುದು ಸುಳ್ಳು. ಕಲಾವಿದನಿಗೆ ಯಾವುದೇ ಪಾತ್ರಕೊಟ್ಟರು ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಶಕ್ತಿ ಇರಬೇಕು ಅಂದರೆ ಮಾತ್ರ ಅವನು ಒಬ್ಬ ಪರಿಪೂರ್ಣ ನಟ. ಆ ಶಕ್ತಿ ಕಿರಣ್ ಅವರಲ್ಲಿದೆ. ಪಾತ್ರ ಚಿಕ್ಕದಾದರೂ ಅವರ ಅಭಿನಯ ಎಲ್ಲರ ಮನದಲ್ಲಿ ನೆಲೆ ಮಾಡುವ ಶಕ್ತಿ ಆ ಭಗವಂತ ಅವರಿಗೆ ನೀಡಿದ್ದಾನೆ. ಮೃದುಭಾಷಿಯಾದ ಕಿರಣ್, ನೆಗೆಟಿವ್ ಪಾತ್ರ ಬಂದಾಗ ಕಿರಣ್ ಬೇರೆಯೇ ಆಗಿ ಪ್ರೇಕ್ಷಕರ ಮೈ ಉರಿಸುತ್ತಾರೆ. ಅದೇ ಕಿರಣ್ ಹಾಸ್ಯ ಪಾತ್ರಗಳಲ್ಲಿಯೂ ಮಾಡಿದ್ದಾರೆ. ವಿಭನ್ನ ಪಾತ್ರಗಳಲ್ಲಿ ಕಾಣುವ ಅವರು ಯಾವುದೇ ಪಾತ್ರಕೊಟ್ಟರು ಅದನ್ನು ಸಂಪೂರ್ಣವಾಗಿ ಸ್ವೀಕರಿಸಿ, ಆ ಪಾತ್ರಕ್ಕೆ ಜೀವ ತುಂಬುತ್ತಾರೆ.

ಜನಪ್ರಿಯ ಧಾರಾವಾಹಿಯಾಗಿರುವ ‘ಜೊತೆ ಜೊತೆಯಲಿ’ ಬಾಯಿಬಡಕ, ಸಿಡುಕ ರಘುಪತಿ ಪಾತ್ರದಲ್ಲಿ ಕಿರಣ್ ತಮ್ಮ ಅಮೋಘ ಅಭಿನಯದಿಂದ ಮನೆ ಮಾತಾಗಿದ್ದಾರೆ. ಸುಮಾರು ೪೦ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ನಟನೆಯನ್ನಲ್ಲದೆ ಚಿತ್ರಕಲೆ, ಯಕ್ಷಗಾನ ಕಲಾವಿದರು ಕೂಡಾ ಆಗಿದ್ದಾರೆ. ಕೊರೊನ ಸಂದರ್ಭದಲ್ಲಿ ತಮ್ಮ ಕೈ ಹಿಡಿದದ್ದು ಚಿತ್ರಕಲೆ ಎಂದು ಸ್ಮರಿಸುತ್ತಾರೆ.

ಕಲಾವಿದರಿಗೆ ಕೊರೊನ ಎನ್ನುವುದು ಸಾಮಾನ್ಯ. ಅವಕಾಶ ಸಿಕ್ಕಾಗ ಕೊರೊನ ಹೋದಂತೆ, ಅವಕಾಶವಿಲ್ಲದಾಗ ಕೊರೊನ ಅಂಟಿಕೊಂಡಂತೆ ಎಂದು ಮುಗುಳ್ನಗೆ ಬೀರುತ್ತಾ, ತಮ್ಮ ಕಷ್ಟದ ದಿನಗಳ ಬಗ್ಗೆ ನೆನೆಸಿಕೊಳ್ಳುತ್ತಾ. ತಾವು ಸಾಗಿ ಬಂದ ದಾರಿಯ ಬಗ್ಗೆ ಆಕೃತಿ ಕನ್ನಡದಲ್ಲಿ ಮುಕ್ತವಾಗಿ ತಮ್ಮ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.

This slideshow requires JavaScript.

ಲೇಖನ್: ನಮಸ್ಕಾರ ಕಿರಣ್ ರವರೆ ನಿಮ್ಮ ಬಾಲ್ಯ ಹಾಗೂ ಹುಟ್ಟೂರಿನ ಬಗ್ಗೆ ಪರಿಚಯ ಮಾಡಿಕೊಡಿ.

ಕಿರಣ್ : ನಾನು ಹುಟ್ಟಿದ್ದು ‘ತಾಳಗುಪ್ಪ’ ಎಂಬ ಊರಿನಲ್ಲಿ. ಬೆಳೆದದ್ದು, ಓದಿದ್ದು ಎಲ್ಲಾ ಕರಾವಳಿ ಜಿಲ್ಲೆಯ ಹೊನ್ನಾವರದಲ್ಲಿ. ಕರಾವಳಿ ಎಂದರೆ ನದಿ- ಸಮುದ್ರ-ಬೆಟ್ಟ-ಗುಡ್ಡಗಳ ರಮಣೀಯ ತಾಣ. ನನ್ನ ತಂದೆಯವರು “ಇಂಡಿಯನ್ ಪ್ಲೈ ವುಡ್” ಎಂಬ ಸಂಸ್ಥೆಯಲ್ಲಿ ಅರಣ್ಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಓದಿದ್ದು ಹೊನ್ನಾವರದ ʼಸಂತ ಅಂತೋನಿ ಶಾಲೆʼ ಯಲ್ಲಿ. ಈಗ ಆ ಶಾಲೆಯಿಲ್ಲ. ಕನ್ನಡ ಮಾಧ್ಯಮದಲ್ಲಿ ಓದುವವರ ಸಂಖ್ಯೆ ಇಳಿಮುಖವಾದ ಕಾರಣ ಶಾಲೆಯನ್ನು ಮುಚ್ಚಿಬಿಟ್ಟರು. ಇದು ನಿಜಕ್ಕೂ ಬೇಸರದ ವಿಷಯ.

ಲೇಖನ್: ನಟನೆಯ ಬಗ್ಗೆ ಒಲವು ನಿಮ್ಮಲ್ಲಿ ಹೇಗೆ ಹುಟ್ಟಿಕೊಂಡಿತು….???

ಕಿರಣ್ : ಸಣ್ಣ ವಯಸ್ಸಿನಲ್ಲಿಯೇ ನಮ್ಮ ಶಾಲೆಯಲ್ಲಿ ಛದ್ಮ ವೇಷ ಸ್ಪರ್ಧೆ ಯಲ್ಲಿ ಭಾಗವಸಿದ್ದೆ. ಅದು ನಮ್ಮ ಶಾಲಾ ಶಿಕ್ಷಕರಿಗೆಲ್ಲಾ ಇಷ್ಟವಾಯಿತು. ನಂತರ ಅವರ ಪ್ರೋತ್ಸಾಹದಿಂದ ತಾಲೂಕು ಮಟ್ಟದ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಅನೇಕ ಬಹುಮಾನಗಳು ಬಂದವು. ಆಮೇಲೆ, “ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿದ್ಯಾಲಯ” ಹೊನ್ನಾವರದಲ್ಲಿ ಓದುವಾಗ ʼನೀನಾಸಂʼ ನಾಟಕಗಳು ಪ್ರದರ್ಶನಕ್ಕೆ ಬರುತ್ತಿದ್ದವು. ಅಲ್ಲಿ ನಾನು “ಟಿಪ್ಪು ಸುಲ್ತಾನ್ “ ಎಂಬ ನಾಟಕದಲ್ಲಿ ಮೊದಲು ಒಂದು ಸಣ್ಣ ಪಾತ್ರದ ಮೂಲಕ ಬಣ್ಣ ಹಚ್ಚಿದೆ. ಅದನ್ನು ನಿರ್ದೇಶನ ಮಾಡಿದ್ದು ‘ಕಿರಣ್ ಭಟ್ʼ ಎಂಬುವವರು. ಈಗ ಅವರು ಮಕ್ಕಳ ರಂಗಭೂಮಿಯಲ್ಲಿ ಇದ್ದಾರೆ.

 

ವಿಡಿಯೋ ಕೃಪೆ : zeekannada

ನನಗೆ ʼನೀನಾಸಂʼ ನಾಟಕಗಳನ್ನು ನೋಡಿದ ಮೇಲೆ. ಅವರ ವಿಭಿನ್ನ ಶೈಲಿಯು ನನ್ನನ್ನು ಆಕರ್ಷಸಿತು. ಮುಂದೆ ಅಲ್ಲಿಯ ಅಚ್ಯುತ್ ರಾವ್, ಶೈಲಶ್ರೀ ಹಾಗೂ ಧರ್ಮೆಂದ್ರ ಅರಸುರವರ ಪರಿಚಯವಾಯಿತು. ಅವರುಗಳ ಸಲಹೆಯ ಮೇರೆಗೆ ನೀನಾಸಂ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಆಯ್ಕೆಯಾದೆ. ಅಲ್ಲಿ ಒಂದು ವರ್ಷದ ಮೇರೆಗೆ ಒಪ್ಪಂದ ಮಾಡಿಕೊಂಡು. ಒಳ್ಳೇಯ ನಟನಾ ತರಬೇತಿಯೊಂದಿಗೆ ಉಚಿತವಾಗಿ ಊಟದ ಹಾಗೂ ಉಳಿದುಕೊಳ್ಳಲು ವ್ಯವಸ್ಥೆಯನ್ನು ಮಾಡಿಕೊಡುತ್ತಾರೆ. ಆದರೆ ಈಗ ಅಲ್ಲಿ ಉಚಿತ ವ್ಯವಸ್ಥೆ ಇಲ್ಲಾ. ಸರ್ಕಾರದಿಂದ ಮುಂಚೆ ಅನುದಾನ ಸಿಗುತ್ತಿತ್ತು. ಈಗ ನಿಂತಿದೆ. ಆದರೆ ಆಯ್ಕೆಯಾದವರಿಂದ ಸಣ್ಣ ಮೊತ್ತದ ʼಡೊನೇಷನ್ʼ ತೆಗೆದುಕೊಳ್ಳುತ್ತಾರೆ. ನಟನಾ ತರಬೇತಿ ಎಂದಿನಂತೆಯೆ ಇದೆ. ಅಲ್ಲಿ ನಟನೆಯ ತರಬೇತಿ ಪಡೆಯುತ್ತಿದ್ದಾಗ. ಚಿದಂಬರ ರಾವ್ ಜಂಬೆ ಪ್ರಾಂಶುಪಾಲರಾಗಿದ್ದರು. ಅವರು ಮಾಡಿಸಿದಂತಹ ನಾಟಕ “ಜೆಂಟಲ್ ಮ್ಯಾನ್ ಆಫ್ YTK”. ಆಮೇಲೆ ವೆಂಕಟರಮಣ ಐತಾಳರು ಮಾಡಿಸಿದ “ಹಂಸ ದಮಯಂತಿ” ಎಂಬ ನಾಟಕ, ಬಿ.ವಿ. ಕಾರಂತರು ಮಾಡಿಸಿದ “ಸತ್ರು ಅಂದ್ರೆ ಸಾಯ್ತಾರ” ನಾಟಕಗಳು ಒಳ್ಳೆ ಅನುಭವ ಕೊಟ್ಟಿತು. ಇದರ ಜೊತೆಗೆ ʼಲಂಕೇಶ್ʼ ಅವರ ʼಬಿರುಕುʼ ಕೃತಿಯನ್ನು ʼನಟರಾಜ್ ಹೊನ್ನವಳ್ಳಿʼ ಮಾಡಿಸಿದರು. ಇವುಗಳ ಜೊತೆಗೆ “ತಿರುಗಾಟ” ಎಂಬ ಪ್ರಾಯೋಗಿಕ ಅಭಿನಯ ತರಬೇತಿಗೆ ನನ್ನನ್ನು ಆಯ್ಕೆ ಮಾಡಿದರು. ಆದರೆ ನನಗೆ ದೆಹಲಿಯಲ್ಲಿರುವ ʼರಾಷ್ಟ್ರೀಯ ನಾಟಕ ಶಾಲೆʼ (National School of Drama) ಯಲ್ಲಿ ಕಲಿಯಬೇಕೆಂದು ತುಂಬಾ ಆಸೆ ಇತ್ತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಆದ್ದರಿಂದ “ತಿರುಗಾಟ” ಪ್ರಾಯೋಗಿಕ ತರಬೇತಿಗೆ ಮತ್ತೆ ಸೇರಿದೆ.

ಕು ಶಿ : ನೀವು ಕಲಿಯಬೇಕೆಂದಿರುವ ʼರಾಷ್ಟ್ರೀಯ ನಾಟಕ ಶಾಲೆʼ(NSD) ಯಲ್ಲಿಯ ತರಬೇತಿಯ ಪ್ರಾಮುಖ್ಯತೆ ಹಾಗೂ ವಿಶೇಷತೆಗಳೇನು?

ಕಿರಣ್ : ನೀನಾಸಂನಲ್ಲಿ ಒಂದು ವರ್ಷ ಕೊಡುವ ತರಬೇತಿಯನ್ನು ಇಲ್ಲಿ ಮೂರು ವರ್ಷ ವಿಸ್ತಾರವಾಗಿ ತರಬೇತಿ ಕೊಡುತ್ತಾರೆ. ಹಾಗೆ ಭಾರತದ ಸುಮಾರು ಭಾಷೆಗಳಲ್ಲಿ (ಕನ್ನಡವು ಸೇರಿ) ನಾಟಕಗಳನ್ನು ಮಾಡಿಸುತ್ತಾರೆ. ಜೊತೆಗೆ ವಿವಿಧ ಭಾಷೆಯ ಕಲಾವಿದರ ಜೊತೆಗೆ ಬೆರೆಯುವ ಅವಕಾಶ ದೊರಕುತ್ತದೆ.

ವಿಡಿಯೋ ಕೃಪೆ : zeekannada

ಕು ಶಿ : ನೀನಾಸಂ ಜೊತೆಗಿನ “ತಿರುಗಾಟ” ಪ್ರಾಯೋಗಿಕ ತರಬೇತಿಯ ಪಯಣ ಹೇಗಿತ್ತು?

ಕಿರಣ್ : ಪ್ರಾಯೋಗಿಕ ತರಬೇತಿಯ ಮೂಲಕ ಕುವೆಂಪುರವರ “ಸ್ಮಶಾಣ ಕುರುಕ್ಷೇತ್ರ”, ಜಂಬೆ ಯವರ “ತ್ರೀ ಸಿಸ್ಟರ್” ನಾಟಕಗಳಲ್ಲಿ ಅಭಿನಯಿಸಿದೆ. ಆಮೇಲೆ ಅಲ್ಲಿ ಕೇರಳದ “ಕಾವಲಂ ನಾರಾಯಣ ಪಣಿಕ್ಕರ್” ಎಂಬುವವರ ಪರಿಚಯವಾಯಿತು. ಅವರ ಸಂಸ್ಕೃತ ನಾಟಕಗಳು ತುಂಬಾ ಪ್ರಸಿದ್ದಿಯಾಗಿವೆ.ಅವರ ನಾಟಕಗಳಲ್ಲು ನಟಿಸಿದೆ. ನಂತರ “ಭಗವದ್ಜಿತಿಯ” ಎಂಬ ಮಹೇಂದ್ರ ವಿಕ್ರಮರವರ ನಾಟಕದಲ್ಲಿ ಒಂದು ಪಾತ್ರವನ್ನು ಕೊಟ್ಟರು. ಆಮೇಲೆ ನೀನಾಸಂ ಹಳೆ ವಿದ್ಯಾರ್ಥಿ ಸಂಘದಲ್ಲಿ ಸೇರಿಕೊಂಡು, ಇಕ್ಬಾಲ್ ಅಹ್ಮದ್ ರವರ ನೇತೃತ್ವದಲ್ಲಿ ಸುಮಾರು ಕಾಲೇಜುಗಳಿಗೆ ಹೋಗಿ. ವಿದ್ಯಾರ್ಥಿಗಳಿಗೆ ಪಾಠವಾಗಿದ್ದ ʼಪ್ರತಿಮಾʼ ಹಾಗೂ ʼಲೈಫ್ ಆಫ್ ಗೆಲಿಲಿಯೊʼ ನಾಟಕದ ಪ್ರದರ್ಶನವನ್ನು ಕೊಟ್ಟೆವು. ಅದರಲ್ಲಿನ ಮುಖ್ಯವಾಗಿ ಶ್ರೀ ರಾಮನ ಹಾಗೂ ಗೆಲಿಲಿಯೊ ಪಾತ್ರವನ್ನು ನಾನೇ ಮಾಡಿದೆ. ಹೀಗೆ ಅನೇಕ ನಾಟಕಗಳಲ್ಲಿ ಅಭಿನಯಿಸಿ ಅನೇಕ ದಿಗ್ಗಜರ ಜೊತೆ ಬೆರೆಯುವ ಅವಕಾಶ ಸಿಕ್ಕಿ, ಒಳ್ಳೇಯ ಅನುಭವಗಳನ್ನು ಗಳಿಸಿಕೊಳ್ಳಲು ಸಹಾಯವಾಯಿತು.

ಕು ಶಿ : ನಾಟಕರಂಗದಲ್ಲಿ ಸಕ್ರೀಯರಾಗಿ ಗುರುತಿಸಿಕೊಂಡಿದ್ದ ತಾವು. ಕಿರುತೆರೆ ಹಾಗೂ ಸಿನೆಮಾ ರಂಗಕ್ಕೆ ಬಂದ ರೀತಿ ಹೇಗೆ ?

ಕಿರಣ್ : ೨೦೧೧ ರಲ್ಲಿ ಬಿ .ಸುರೇಶ ರವರು ಪರಿಚಯವಾದರು. ಅವರ ಸಂಸ್ಥೆಯಲ್ಲಿ ತಯಾರಾಗುತ್ತಿದ್ದ “ಅಳುಗುಳಿ ಮನೆ ಹಾಗೂ ಮದರಂಗಿ” ಧಾರಾವಾಹಿಯಲ್ಲಿ ನಟಿಸಿದೆ. ನಂತರ ಹೊನ್ನಾವರದ ನನ್ನ ಬಾಲ್ಯದಲ್ಲಿ ಓದಿದ ʼಸಂತ ಅಂಥೋನಿʼ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ರೋಡ್ರಿಗೇಸ್ ರವರ ಮೂಲಕ ನಿರ್ದೇಶಕ ಮನು ನಂಜಪ್ಪರವರ ಪರಿಚಯವಾಯಿತು.  ಅವರ “ಆತ್ಮಸಾಕ್ಷಿ” ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ಖಳನಾಯಕನ ಪಾತ್ರವನ್ನು ಮಾಡಿದೆ.

ಹಾಗೆ ನಿರ್ದೇಶಕ ಗಿರಿರಾಜ್ ರವರ ಜಟ್ಟ, ಮೈತ್ರಿ, ಅಮರಾವತಿ ಹಾಗೂ ತುಂಡೈಕ್ಲ ಸಹವಾಸ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಅಲ್ಲಿಂದ ಇಲ್ಲಿಯವರೆಗೂ ಲೂಸಿಯ, ಯು ಟರ್ನ್,  ಆಕ್ಟ್ 1978 ಹೀಗೆ ಸುಮಾರು ೪೦ ಸಿನಿಮಾ ಹಾಗೂ ೮ ಧಾರಾವಾಹಿಯಲ್ಲಿ ಅಭಿನಯಿಸಿದ್ದೀನಿ.

ಲೇಖನ್: ಅಭಿನಯಿಸುವುದರ ಜೊತೆಗೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೀರಾ ?

ಕಿರಣ್ : ಹೌದು ಬಿ.ಸುರೇಶರವರ ಜೊತೆ ಅವರದೇ “ದೇವರ ನಾಡಲ್ಲಿ” ಚಿತ್ರಕ್ಕೆ ಸಹಾಯಕ ಸಂಭಾಷಣೆಗಾರನಾಗಿ ಕೆಲಸ ಮಾಡಿದ್ದೀನಿ.(ನೀನಾಸಂ ಕಿರಣ ನಾಯಕ ಅವರ ಕೈಯಲ್ಲಿ ಅರಳಿದ ಚಿತ್ರಕಲೆ )

ಕು ಶಿ : ಸರ್, ಹೀಗೆ ನಿರಂತರವಾಗಿ ಅಭಿನಯಿಸುತ್ತ ಇದ್ದ ನೀವು. ಕರೋನ ಸಂದರ್ಭದಲ್ಲಿ ಅನುಭವಿಸಿದ ಕಷ್ಟವನ್ನು ಹೇಳುತ್ತೀರಾ….??

ಕಿರಣ್: ಹಿಂದೆ ನಮ್ಮ ಹಿರಿಯರು “ಪ್ಲೇಗ್” ಮಹಾಮಾರಿಯಿಂದ ಅನುಭವಿಸಿದ ಕಷ್ಟಗಳನ್ನು ನಾವು ನಮ್ಮ ಪೀಳಿಗೆಯಲ್ಲಿ ಕರೋನ ಮೂಲಕ ನೋಡುವಂತಾಯಿತು. ನನ್ನ ಎಲ್ಲಾ ಸ್ನೇಹಿತರ ಜೊತೆಗೆ ನಾನು ಕೂಡ ಮಾನಸಿಕ ಖಿನ್ನತೆಗೊಳಗಾಗಿದ್ದೀನಿ. ಆಗ ನನಗೆ ಮಯೂರ ಪತ್ರಿಕೆಯ ಸಂದೀಪ್ ನಾಯಕ್ ವತಿಯಿಂದ ಸಹಾಯ ದೊರೆಯಿತು. ಬಾಲ್ಯದಿಂದಲೂ ನನಗೆ ಚಿತ್ರ ಬಿಡಿಸುವ ಅಭ್ಯಾಸವಿತ್ತು. ಹಾಗಾಗಿ ಮಯೂರ ಪತ್ರಿಕೆಯ ಕಥೆಗಳಿಗೆ ಚಿತ್ರಗಳನ್ನು ಬರೆದುಕೊಟ್ಟೆ. ಆ ಸಮಯದಲ್ಲಿ ಖಿನ್ನತೆಯಿಂದ ಹೊರಬರಲು ನೆರವಾದ ಮಯೂರ ಬಳಗಕ್ಕೆ ವಂದನೆಗಳು.

ಕು ಶಿ : ಅಭಿನಯದ ಸೆಳೆತದಿಂದ ಅವಕಾಶಕ್ಕಾಗಿ ಹಾತೊರೆಯುವ ಯುವ ಪೀಳಿಗೆಗೆ ನಿಮ್ಮ ಸಲಹೆ ಏನು ?

ಕಿರಣ್ : ಯುವಪೀಳಿಗೆಗೆ ನಾನು ಹೇಳುವುದಿಷ್ಟೆ, ಮೊದಲು ಅಭಿನಯ ಶಾಲೆಯಲ್ಲಿ ಪ್ರಾಥಮಿಕ ವಿದ್ಯೆಗಳನ್ನು ಕಲಿಯಿರಿ. ಹಾವ-ಭಾವಗಳನ್ನು ತಿಳಿದುಕೊಳ್ಳಿ. ರಂಗಭೂಮಿ ಚಟುವಟಿಕೆಗಳಲ್ಲಿ ಭಾಗವಹಿಸಿ. ಆ ಮೂಲಕ ಸಣ್ಣ ಮಟ್ಟದಲ್ಲಿ ಅಭಿನಯಿಸುತ್ತ ಹೋದರೆ, ತಾನಾಗೆ ಅನುಭವಗಳು ದೊರೆಯುತ್ತದೆ. ಮುಂದೆ ಅವಕಾಶಗಳು ಹುಡುಕಿ ಬರುತ್ತದೆ. ಆದರೆ ನಿಮ್ಮ ಶ್ರಮ, ನಿಮ್ಮ ಪ್ರತಿಭೆ ಇಲ್ಲಿ ಬೇಕೇ ಬೇಕು.

ಲೇಖನ್: ನಿಮ್ಮಲ್ಲಿ ಸಾಹಿತ್ಯದ ಬಗ್ಗೆ ಇರುವ ಆಸಕ್ತಿಯನ್ನು ವಿವರಿಸಿ

ಕಿರಣ್ : ಬಿಡುವಿನ ವೇಳೆಯಲ್ಲಿ ಎಲ್ಲಾ ಬಗೆಯ ಸಾಹಿತ್ಯವನ್ನು ಓದುತ್ತೇನೆ. ಪ್ರತಿಯೊಬ್ಬ ನಟನಿಗೂ ಸಾಹಿತ್ಯ ಬಲು ಮುಖ್ಯ. ಓದುವ ಅಭಿರುಚಿ ಬೆಳೆಸಿಕೊಂಡರೆ ಭಾಷೆಯ ಪರಿಶುದ್ಧತೆಯನ್ನು ಬೆಳೆಸಿಕೊಳ್ಳಬಹುದು. ಆ ಮೂಲಕ ಪ್ರೇಕ್ಷಕರನ್ನು ಬೇಗನೆ ತಲುಪುತ್ತೇವೆ.

ಧನ್ಯವಾದಗಳು ಕಿರಣ್ ರವರೆ ನಿಮ್ಮ ಈ ಸಣ್ಣ ಬಿಡುವಿನ ವೇಳೆಯನ್ನು ನಿಮ್ಮ ಪರಿಚಯಕ್ಕಾಗಿ ನಮ್ಮ “ಆಕೃತಿ ಕನ್ನಡ”ಕ್ಕೆ ಒದಗಿಸಿಕೊಟ್ಟಿದ್ದಕ್ಕೆ. ಹಾಗೂ ಮುಂದೆ ಇನ್ನು ಹೆಚ್ಚು ಚಿತ್ರಗಳಲ್ಲಿ ಹಾಗೂ ವಿವಿಧ ಬಗೆಯ ಪಾತ್ರಗಳಲ್ಲಿ ಅಭಿನಯಿಸಿ ಮತ್ತಷ್ಟು ಯಶಸ್ಸು ಸಿಗಲಿ ಎಂದು ನಮ್ಮ ಬಳಗದಿಂದ ಆಶಿಸುತ್ತೇವೆ.


  • ಕು ಶಿ ಚಂದ್ರಶೇಖರ್, ಲೇಖನ್ ನಾಗರಾಜ್

(ನೀನಾಸಂ ಕಿರಣ ಅವರ ಜೊತೆ ಆಕೃತಿ ಕನ್ನಡದ ಲೇಖಕರಾದ ಕು ಶಿ ಚಂದ್ರಶೇಖರ್, ಲೇಖನ್ ನಾಗರಾಜ್)

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW