ಜನುಮ ಜನುಮಕೂ – ಭಾಗ ೬

ಸುಮಾಳಿಗೆ ಸಿನಿಮಾದಲ್ಲಿ ನಟಿಸಬೇಕು ಅನ್ನುವ ಆಸೆಯಿಂದ ತನ್ನ ತಮ್ಮ ಪೂವಯ್ಯನೊಂದಿಗೆ ಶೂಟಿಂಗ್ ನೋಡಲು ಓಡೋಡಿ ಶೂಟಿಂಗ್ ಸ್ಥಳಕ್ಕೆ ಧಾವಿಸಿ ಬರುತ್ತಾಳೆ. ಅವಳ ರೂಪಕ್ಕೆ ಇಡೀ ಸೆಟ್ ನಲ್ಲಿದ್ದ ಎಲ್ಲ ಹುಡುಗರು ಬೆರಗಾಗಿ ನಿಲ್ಲುತ್ತಾರೆ. ನಿರ್ದೇಶಕ ರಾಣಾರನ್ನು ಭೇಟಿಯಾಗಲು ಸುಮಾ ಕಾಯುತ್ತಿದ್ದಾಳೆ. ಮುಂದೆ ಏನಾಗುತ್ತೆ?… ಓದಿ ಜನುಮ ಜನುಮದ ಪ್ರೀತಿಯ ಕತೆ…

ನಾಯಕಿ ಆಟಕ್ಕೆ ನಾಯಕ ತೋಪು!

ರಾಣಾ ಮೊದಲ ಶಾಟ್ ಚಿತ್ರೀಕರಿಸುವ ತರಾತುರಿಯಲ್ಲಿದ್ದಾರೆ. ನಾಯಕ ಶಯನಕುಮಾರ ಮತ್ತು ನಾಯಕಿ ಅನುಷ್ ಚಾವ್ಲಾ ರೆಡಿಯಾಗಿದ್ದಾರೆ. ನಾಯಕಿ ರೇಗುತ್ತ ನಾಯಕನನ್ನು ಹೀಯಾಳಿಸುತ್ತಾಳೆ. ನಾಯಕ ಎಲ್ಲವನ್ನು ಸಹಿಸಿಕೊಂಡು ಕೊನೆಗೆ ನಾಯಕಿಯನ್ನು ಅನಾಮತ್ತಾಗಿ ಎತ್ತಿಕೊಂಡು ಒಳಗೆ ಹೋಗುವ ದೃಶ್ಯ ನಿರ್ದೇಶಕರು ಮಾನಿಟರ್ ಆನ್ ಅಂದರು. ಲೈಟ್ಸ್ ಬೆಳೆಗಿದವು. ಕೆಮರಾ ಸಜ್ಜಾಯಿತು. ರಾಣಾ ಮಾನಿಟರ್ ನಲ್ಲಿ ಕಣ್ಣಿಟ್ಟು ಕೂತರು.

ಓಕೆ ಮಾನೀಟರ್ ರೆಡಿ?… ಲೈಟ್ಸ್ ಆನ್… ಕೆಮರಾ ರೋಲ್ …ಆಕ್ಷನ್ …’ ಅಂದರು. ಅದನ್ನೇ ಕಾಯುತ್ತಿದ್ದ ನಾಯಕಿ ಎದೆಯನ್ನು ತೆರೆದುಕೊಂಡು ನಾಯಕ ಶಯನಕುಮಾರನತ್ತ ತಿರುಗಿ ಕಣ್ಣು ಹೊಡೆದಳು. ನಾಯಕ ಕಕ್ಕಾಬಿಕ್ಕಿಯಾಗಿ ನಿಂತ. ನಿರ್ದೇಶಕರು ಕೊಟ್ಟ ಸೂಚನೆಗೂ ಇದಕ್ಕೂ ಏನೂ ಸಂಬಂಧವೇ ಇರಲಿಲ್ಲ. ನಾಯಕಿ ತನ್ನನ್ನು ಜರಿಯುತ್ತಾಳೆ. ಆ ಮೇಲೆ ತಾನು ಆಕೆಯನ್ನು ಅನಾಮತ್ತಾಗಿ ಎತ್ತಿಕೊಂಡು ಕೋಣೆಯೊಳಗೆ ಹೋಗಬೇಕು. ಇಷ್ಟೇ ಇರೋದು ಸೀನು.

ಆದರೆ ನಾಯಕಿ ಕಣ್ಣು ಹೊಡೆಯುತ್ತ ಕುಲುಕಾಡುತ್ತ ಬಂದರೆ ತಾನೇನು ಪ್ರತಿಕ್ರಿಯಿಸಬೇಕು? ಗೊಂದಲಕ್ಕೆ ಬಿದ್ದು ನಿರ್ದೇಶಕರತ್ತ ನೋಡಿದ ಶಯನ್. ರಾಣಾರಿಗೆ ಆಗಲೇ ಕೋಪ ಬಂದುಬಿಟ್ಟರು.

ನೋ…ನೋ… ಹಾಗಲ್ಲಮ್ಮ. ಇದು ಬೆಡ್ ರೂ೦ ಸೀನಲ್ಲ…ಹೀರೋನ ಮೇಲೆ ನಿಮಗೆ ಸಿಕ್ಕಾಪಟ್ಟೆ ಕೋಪ ಇದೆ. ಅದನ್ನು ಇಲ್ಲಿ ತೀರಿಸಿಕೊಳ್ತಾ ಇದ್ದೀರಾ. ಆ ಉಡಾಫೆ ನನ್ಮಗನ್ನ ಚನ್ನಾಗಿ ಬೈದುಬಿಡಿ ಮೇಡಂ’. ದಟ್ ಮೀನ್ಸ್ ನಮ್ದು ಹೀರೋಗೆ ಹೇಟ್ ಮಾಡ್ತದೆ.’

ಯಾಹ್..ಯಾಹ್ …ಇಷ್ಟೋತ್ತಿನ ತನಕ ಹೇಳಿದ್ದು ಅದೇ ಅಲ್ವಾ…?

ಹೆಂಗೆ ಸರ್ ಹೇಟ್ ಮಾಡ್ತದೆ? ವಿದೌಟ್ ಲವ್ ಹೀರೋ ನಮ್ದುನ್ನ ಹೆಂಗೆ ಎತ್ಕೊಂಡು ಹೋಗ್ತದೆ? ದಿಸ್ ಈಜ್ ಪ್ಯಾರ್ ಕಾ ಹಮಲಾ ಹೈನಾ?’ ನಿರ್ದೇಶಕರಿಗೆ ಪ್ರಶ್ನೆ ಹಾಕಿದಳು ಅನುಷ್ ಚಾವ್ಲಾ!’

ರಾಣಾರಿಗೆ ಕೋಪ ಬಂತು.

ಪ್ರಶ್ನೆಗೆಳು ಬೇಡ ತಾಯಿ.ಕತೇಲಿರೋದು ಹಾಗೇನೇ. ಹೇಳಿದಷ್ಟು ಮಾಡಿ. ಪ್ಲೀಸ್. ಡೋಂಟ್ ಆಸ್ಕ್ ಎನಿ ಕೊಶ್ಚನ್.

ಫೋಟೋ ಕೃಪೆ : drvorobjev

ನಿರ್ದೇಶಕರು ಮಾತು ಮುಗಿಸಿರಲಿಲ್ಲ. ಎಲ್ಲರೂ ನೋಡುತ್ತಿದ್ದಂತೆ ಅನುಷ್ ಚಾವ್ಲಾ ರೊಯ್ಯನೆ ಅಳತೊಡಗಿದಳು. ಎಲ್ಲರೂ ಗಾಬರಿಯಾದರು. ದೂರ ಕೂತು ನೋಡುತ್ತಿದ್ದ ನಿರ್ಮಾಪಕ ಚಂದೂ ಪಾಟೀಲ್ ಗಾಬರಿಯಿಂದ ಎದ್ದು ನಿಂತು-‘ ಏನಾತ್ರಿ ಡೈರೆಕ್ಟರ್ ಸಾಹೇಬರ್ …?’ ಎಂದು ಕೂಗಿದರು. ಅಮ್ಮ ರೋಶನಿ ಚಾವ್ಲಾ ಧಾವಿಸಿ ಬಂದು-

ಕ್ಯಾ ಹುವಾ ಬೇಟಿ? ರೋಟಿ ಕ್ಯೂ? ಎಂದು ಮುದ್ದಾಡಿದಳು. ಅನುಷ್ಕಾ ನಿರ್ದೇಶಕರತ್ತ ಕೈ ತೋರಿಸಿ-

‘ವೊನೇ ಮುಂಝೆ ತಾಯಿ ಬೋಲ್ ಗಯೇ. ತಾಯಿ ಬೋಲೇತೋ ಕಾನಡಿ ಮೇ ಅಮ್ಮಾ ಹೈನಾ? ನಮ್ಮದಕ್ಕೆ ಶಾದಿನೇ ಆಗಿಲ್ಲ. ಮದರ್ ಕೈಸೇ ಹೋತಿ ಮೈ? ಗಪ್ ಚುಪ್ ಅಮ್ಮಾ ಆದ್ರೆ ನಮ್ಮದು ಮಾರ್ಕೆಟ್ಟು ಏಕ್ ದ೦ ಡುಬ್ ಜಾತಿ ಹೈನಾ? ನಮ್ಮದು ಇನ್ನು ಹುಡುಗಿ ಅದೆ. ಡೈರೆಕ್ಟರ್ ಕೋ ಬೋಲ್ ಅಮ್ಮಾ…’

ರಾಣಾ ರಿಗೆ ಎಲ್ಲಿಲ್ಲದ ಸಿಟ್ಟು ಬಂತು, ತಾನು ಕೆನ್ನೆಗೆ ಹೊಡೆಯಬೇಕಾದದ್ದು ಈಗ ಇವಳನ್ನೇ ಅಂದುಕೊಂಡರು. ಹೊಗೆರಾಮ ಪೆಚ್ಚನಂತೆ ನಿಂತು ಎಲ್ಲ ನೋಡುತ್ತಿದ್ದ ನಿರ್ಮಾಪಕ ಪಾಟೀಲ್ ಎರಡೂ ಕೈಯಿಂದ ಅನುಷ್ ಳ ಕಣ್ಣೀರು ಒರೆಸುತ್ತ ಸಮಾಧಾನ ಹೇಳುತ್ತಿದ್ದ. ಹೊಗೆರಾಮ ತಾನೇ ಖುದ್ದಾಗಿ ನಿಂತು ನಾಯಕಿಗೆ ಜ್ಯುಸೂ ಕುಡಿಸಲು ಯತ್ನಿಸತೊಡಗಿದ.
ಇದನ್ನೆಲ್ಲ ಗಮನಿಸಿದ ರಾಣಾ ತಾನೇನು ತಪ್ಪು ಮಾಡಿದೆ ಎಂದು ಯೋಚಿಸುತ್ತಲೇ ಇದ್ದರು.

****

ಬೆಟ್ಟದ ಇಳಿಜಾರಿನಲ್ಲಿ ಅಂಕು-ಡೊಂಕಾಗಿ ಸಾಗುವ ರಸ್ತೆ. ಎಡ-ಬಲದಲ್ಲಿ ಕಾಫಿ ತೋಟಗಳು. ಎದುರಿಗೆ ಇನ್ನೊಂದು ವಾಹನ ಬಂದರೆ ಹಾಯಾಗಿ ಬದಿಗೆ ಸರಿದು ಜಾಗ ಬಿಡುವಂತಿಲ್ಲ. ಇದ್ದುದರಲ್ಲೇ ಜಾಗ್ರತೆಯಿಂದ ಸರಿದು ಮುಂದೆ ಹೋಗಬೇಕು.

ಫೋಟೋ ಕೃಪೆ : incrediblemalnad

ಅಂಥ ಕಡಿದಾದ ರಸ್ತೆಯಲ್ಲಿ ಧೂಳೆಬ್ಬಿಸುತ್ತ ಧಾವಿಸುತ್ತಿತ್ತು. ಫೋರ್ ವೀಲರ್ ಜೀಪು. ಅದರಲ್ಲಿ ಇದ್ದದು ಇಬ್ಬರೇ . ಜೀಪು ಓಡಿಸುತ್ತಿದ್ದಾಕೆ ಹುಡುಗಿ. ಅಂದರೆ ಸುಮಾ ಅಪ್ಪಚ್ಚು. ಬದಿಗೆ ಕುಳಿತಿದ್ದವ ಆಕೆಯ ತಮ್ಮ ಪೂವಯ್ಯ. ತಾವಿರುವ ಬಾಳೆಲೆ ಎಸ್ಟೇಟ್ ನಿಂದ ಬಗ್ಗನಮನೆ ಎಸ್ಟೇಟಿಗೆ ಹದಿನಾಲ್ಕು ಕಿಲೋಮೀಟರ್ ದೂರ. ಕೊಡಗಿನಲ್ಲಿ ಎಲ್ಲೇ ಸುತ್ತಾಡಿದರೂ ಸುಮಾ ಈ ಚೀಪಿನಲ್ಲೇ ಡ್ರೈವ್ ಮಾಡಿಕೊಂಡು ಓಡಾಡುತ್ತಾಳೆ.ಬೆಟ್ಟದ ರಸ್ತೆಯಲ್ಲಿ ಜೀಪು ಡ್ರೈವ್ ಮಾಡುವುದೆಂದರೆ ಸುಮಾಳಿಗೆ ಎಲ್ಲಿಲ್ಲದ ಖುಷಿ. ಹಾಗೆ ಬೆಟ್ಟದ ಓರೆಯಲ್ಲಿ ಸಾಗುವಾಗ ಎದುರು ಬೆಟ್ಟದಲ್ಲಿರುವ ಬಗ್ಗನಮನೆ ಎಸ್ಟೇಟ್ ಗೋಚರಿಸಿತು.

ಸುಮಕ್ಕಾ…ನೋಡಲ್ಲಿ ಸಿನಿಮಾದವರ ಗಾಡಿಗಳು. ಕಾರು,ಜನರೇಟರ್ ,ಬಸ್ಸು, ಎಲ್ಲಾವೂ ತಂದಿದ್ದಾರೆ. ಪೂವಯ್ಯ ಉತ್ಸಾಹದಿಂದ ಹೇಳಿದಾಗ ಡ್ರೈವ್ ಮಾಡುತ್ತಿದ್ದ ಸುಮಾ ಕೆಂಪು ಗೂಗಲ್ ನಲ್ಲಿ ಕಣ್ಣು ಹೊರಳಿಸಿ ನೋಡಿದಳು. ಆದಮ್ಯ ಉತ್ಸಾಹ ಇಬ್ಬರಿಗೂ.

ಮಾಚಯ್ಯ ಅಂಕಲ್ ನನಗೂ ಪಾರ್ಟು ಕೊಡಿಸ್ತಾರೆ ತಾನೇ? ‘ ಸುಮಾ ಉತ್ಸಾಹದಲ್ಲಿಯೇ ತಮ್ಮನನ್ನು ಕೇಳಿದಳು. ನಕ್ಕ ಪೂವಯ್ಯಾ. ಸುಮಕ್ಕ…ನಿನಗೆ ಈ ಸಿನಿಮಾದೊಳ್ಗೆ ಪಾರ್ಟು ಮಾಡಬೇಕು ತಾನೇ. ನನಗ್ ಬಿಡು.
ಅಂದ ಥೇಟ್ ಗಾಂಧಿನಗರದ ಅಡ್ಡವಾಳಗಳ ಥರ. ಸುಮಾ ಖುಷಿಯಾದಳು.

ಜೀಪಿನ ವೇಗವನ್ನು ಇನ್ನಷ್ಟು ಹೆಚ್ಚಿಸಿದಳು. ರಸ್ತೆಯಿಂದ ಧೂಳು ಮೇಲೆದ್ದಿತು.

ಜೀಪು ಓಡಿಸುತ್ತಿದ್ದ ಸುಮಾಳ ಒಂದು ಕಣ್ಣು ಎದುರು ಬೆಟ್ಟದಲ್ಲಿ ಕಾಣುತ್ತಿದ್ದ ಮಾಚಯ್ಯನವರ ಬಗ್ಗೆ ನಮನೆ ಬಂಗ್ಲೆಯ ಮೇಲಿತ್ತು.

****

ಸುಮ್ಮನೆ ಕೂತುಬಿಟ್ಟಿದ್ದ ನಿರ್ದೇಶಕ ರಾಣಾರ ಸುತ್ತ ಛಾಯಾಗ್ರಾಹಕ ತಂಗಮಣಿ, ಸಹಾಯಕ ನಿರ್ದೇಶಕರು, ಕೆಮರಾ ಸಹಾಯಕರು, ಸೌಂಡ್ ಇಂಜಿನಿಯರ್ ಇತ್ಯಾದಿ ತಾಂತ್ರಿಕ ವರ್ಗದವರು ನಿಂತಿದ್ದರು. ಯಾರೂ ಮಾತಾಡುತ್ತಿಲ್ಲ. ಎಲ್ಲರ ಮುಖದಲ್ಲೂ ಸ್ಮಶಾನ ಮೌನ. ತಂಗಮಣಿ ಮೆಲ್ಲಗೆ ನಿರ್ದೇಶಕರ ಬಳಿ ಹೇಳಿದ-

ಫೋಟೋ ಕೃಪೆ : Times of India

‘ಸಾರ್, ನೀವು ತಲೆ ಕೆಡಿಸಿಕೊಳ್ಳಬೇಡಿ. ಈ ಹೊಸ ಪ್ರೊಡ್ಯೂಸರಿಗೆ ನಿಯತ್ತಿನ ಟೆಕ್ನಿಶಿಯನ್ ಬೇಡಾಂತ ಕಾಣುತ್ತೆ. ನಿಮ್ಮಂಥೋರು ಗಾಂಧಿನಗರದಲ್ಲಿ ಮಾದರಿ ಆಗಿರೋರು. ಈ ಹಿಂದಿ ಹುಸುಗಿ ಇನ್ನೂ ಏನೇನು ರಾದ್ದಂತ ಮಾಡ್ತಳೋ. ನೀವು ಈ ಸಿನಿಮಾ ಮಾಡೋಲ್ಲ ಅಂತ ಹೇಳ್ಬಿಡಿ ಸಾರ್. ನಾವೂ ಬಿಟ್ಟು ಬಿಡ್ತೀವಿ. ಹ್ಯಾಗೂ ನಿಮ್ಮ ಇನ್ನೊಂದು ಸಿನಿಮಾ ಇದೆಯಲ್ಲ. ಅದನ್ನು ಶುರು ಮಾಡೋಣ.’

ತಂಗಮಣಿ ಹಾಗಂದಾಗ ರಾಣಾ ತಕ್ಷಣ – ‘ನೋ…ನೋ ..ಹಾಗ್ ಮಾಡಬಾರದು. ಒಮ್ಮೆ ಒಂದು ಕೆಲ್ಸಕ್ಕೆ ಒಪ್ಪಕೊಂಡ್ರೆ ಮುಗೀತು. ಅದನ್ನು ಮುಗಿಸೋತನಕ ಬಿಡಬಾರದು ಮಣಿ. ಈ ಇಂಡಸ್ಟ್ರೀಲಿ ಕಮಿಟ್ ಮೆಂಟ್ ಇಲ್ಲದಿದ್ದರೆ ಒಳ್ಳೆ ಸಿನಿಮಾ ಕೊಡೋಕಾಗಲ್ಲ. ನಾನು ಈ ಸಿನಿಮಾ ಮುಗಿಸಿಯೇ ಆಚೆ ಹೋಗ್ತೀನಿ. ನನಗೆ ಅನುಷ್ ಚಾವ್ಲಾ ಮುಖ್ಯ ಅಲ್ವೇ ಅಲ್ಲ. ಕಮಿಟ್ ಮೆಂಟ್ ಮುಖ್ಯ. ಹುಂ ಮುಂದಿನ ಶಾಟ್ಸ್ ಗೆ ರೆಡಿಯಾಗಿ.’

ರಾಣಾ ದಿಗ್ಗನೆ ಮೇಲೆದ್ದರು. ಸಹಾಯಕ ನಿರ್ದೇಶಕ ಪುಟ್ಸಾಮಿಗೆ ಖುಷಿಯಾಯಿತು. ಯಾವುದೋ ಕಾರಣಕ್ಕೆ ಸಿನಿಮಾ ನಿಂತೋದ್ರೆ ನಾಳೆಯಿಂದಲೇ ತನಗೆ ಕೆಲಸವಿರುವುದಿಲ್ಲ ಎಂಬ ಚಿಂತೆಯಿತ್ತು ಅವನಿಗೆ. ಪಾಪ. ಮೊನ್ನೆ ತಾನೇ ಮದುವೆಯಾದ ಹುಡುಗ.

ಅತ್ತ ನಾಯಕಿ ಅನುಷ್ ಚಾವ್ಲಾ ಳ ಸುತ್ತ ನಿರ್ಮಾಪಕನಲ್ಲದೆ ನಟ ಶಯನಕುಮಾರ, ಅಮ್ಮ ರೋಶನಿ ಮತ್ತು ಸ್ಥಳೀಯರು ಗುಂಪಾಗಿ ಸೇರಿಕೊಂಡಿದ್ದರು. ಅವರೆಲ್ಲರಿಗೆ ಅಂಥ ಸುಂದರಿಯೊಬ್ಬಳು ಅಳುವಾಗ ಹೇಗೆ ಕಾಣುತ್ತಾಳೆ ಎಂದು ನೋಡುವ ಕಾತುರ. ರಾಣಾರ ಗುಂಪು ಶೂಟಿಂಗ್ ಗೆ ರೆಡಿಯಾಗಿರುವುದನ್ನು ನೋಡಿ ನಿರ್ಮಾಪಕ ಪಾಟೀಲ್, ರಾಣಾರ ಹತ್ತಿರ ಬಂದ.

‘ಡೆರೆಕ್ಟರ್ ಸಾಹೇಬರ… ನಮ್ಮ ಹೀರೋಯಿನ್ ಗೆ ಎಲ್ಲಾ ತಿಳಿಸಿ ಹೇಳಿದೀನಿ.ಒಪ್ಪಕೊಂಡಳಾ. ಕೋಟಿ ರೊಕ್ಕದ ಮುಂದ ಇದ್ಯಾವ ಲೆಕ್ಕರೆಪಾ. ಇನ್ನೇನು …ಶೂಟಿಂಗ್ ಶುರು ಮಾಡ್ರಲ್ಲ…’.

ಪಾಟೀಲ ಅಷ್ಟು ಹೇಳಿದ್ದೆ ತಡ. ಏನೂ ನಡೆದೇ ಇಲ್ಲ ಅನ್ನುವಂತೆ ನಾಯಕಿ ಕುಲುಕುಲು ನಗುತ್ತ ವಯ್ಯಾರದಿಂದ ಎದ್ದು ಬಂದಳು.’

‘ ಮೈ ರೆಡಿ ಹೂ೦…’ ಅಂದಳು. ನಾಜೂಕಾಗಿ. ರಾಣಾ ಅವಳತ್ತ ತಿರುಗಿಯೂ ನೋಡಲಿಲ್ಲ.

‘ಶೂಟಿಂಗ್ ನಿಲ್ಲೋದಿಲ್ಲ. ಅಳೋವಂಥದ್ದು ಇಲ್ಲಿ ಏನೂ ಆಗಿಲ್ಲ. ಮಾತಿನಂತೆ ನಾನು ನಿನಗೆ ಹೇಳಿದ ಹೊತ್ತಿಗೆ ಸರಿಯಾಗಿ ಸಿನಿಮಾ ಮುಗಿಸಿ ಕೊಡ್ತೀನಿ. ಇನ್ಮುಂದೆ ಲೋಕೇಶ ನಲ್ಲಿ ಈ ಥರ ಸೀನ್ ಕ್ರಿಯೇಟ್ ಆಗೋಲ್ಲ. ಓಕೇ …’ ಎಂದವರೇ ತಮ್ಮ ಟೀ೦ ಜತೆಗೆ ಕೆಮರಾ ಕಡೆಗೆ ನಡೆದರು. ಮತ್ತೆ ಮೊದಲಿನ ಉತ್ಸಾಹ ಎಲ್ಲರಲ್ಲೂ ಚಿಮ್ಮಿತು. ಶಯನಕುಮಾರ್ ಗೆ ಇಲ್ಲಿ ಏನಾಗುತ್ತಿದೆಯೆಂಬುದೇ ಗೊತ್ತಾಗದೆ ಗಲಿಬಿಲಿಗೊಂಡ.ಖುಷಿಗೊಂಡ ಪ್ರೊಡ್ಯೂಸರ್ ಎಲ್ಲರಿಗೂ ಜ್ಯುಸ್ ತಂದುಕೊಡು ಎಂದು ಹೊಗೆರಾಮ ಆರ್ಡರ್ ಮಾಡಿದ.

ಶೂಟಿಂಗ್ ಮನೆಯ ಗೇಟ್ ಬಳಿ ಸುಮಾ ಜೀಪು ತಂದು ನಿಲ್ಲಿಸಿದಳು. ಅಲ್ಲಿದ್ದ ಸಿನಿಮಾ ತಂಡದ ಸೆಕ್ಯುರಿಟಿ ಜೀಪಿನ ಹತ್ತಿರ ಬಂದು-
‘ಶೋಟಿಂಗ್ ನಡೀತಾ ಇದೆ. ತೊಂದ್ರೆ ಮಾಡ್ಬೇಡಿ. ಸೈಲೆಂಟಾಗಿರಬೇಕು. ಸುಮ್ನೆ ದೂರಾ ನಿಂತು ನೋಡಿ…’ ಎಂದು ಆರ್ಡರ್

ಮಾಡಿದ ಕೂಡಲೇ ಪೂವಯ್ಯ – ತಾವು ಬರೀ ಶೊಟಿಂಗ್ ನೋಡಲು ಬಂದವರಲ್ಲ ಪ್ರೊಡಕ್ಷನ್ ಮ್ಯಾನೇಜರ್ ರಘುರಾಮ ಬರೋದಿಕ್ಕೆ ಹೇಳಿದ್ರು’ ಎಂದ. ಕಾವಲುಗಾರ ಒಮ್ಮೆ ಸುಮಾಳನ್ನು ಇಡಿಯಾಗಿ ನೋಡಿ.

ಫೋಟೋ ಕೃಪೆ : Pinterest (ಸಾಂದರ್ಭಿಕ ಚಿತ್ರ )

‘ಹೂ೦… ಆಡಿಷನ್ ನ್ನು ಕೊಡೋದಕ್ಕೆ ಬಂದಿದ್ದೀರಾ? ಆಯ್ತು. ಓಕೆ ಕೊಡಿ. ಕೊಡಿ…ಸೆಲೆಕ್ಟ್ ಆಗದಿದ್ರೆ ಆಮೇಲೆ ನನ್ನತ್ರ ಬನ್ನಿ. ಇಡೀ ಗಾಂಧಿನಗರ ಗೊತ್ತು ನನಗೆ. ಕೆಲವು ಪ್ರೊಡ್ಯುಸರ್ ದಿನಾಲೂ ಕೇಳ್ತಿರತಾರೆ. ಹೊಸಾ ಹೀರೋಯಿನ್ ಹುಡುಕ್ತಾ ಇದೀವಿ ಕಣಯ್ಯ. ಗೊತ್ತಿದ್ರೆ ಹೇಳು ಅಂತ. ನಿಮ್ಮನ್ನ ಪುಷ್ ಮಾಡೋಣ.’ ಎಂದು ಹಲ್ಕಿರಿದು ನಕ್ಕು ಸುಮಾಳತ್ತ ನೋಡಿದ. ಸುಮಾಳಿಗೆ ಅವನ ಹಳದಿ ಹಲ್ಲಾ ನೋಡಿ ಅಸಹ್ಯವೆನಿಸಿತು. ಜೀಪು ಮುಂದೆ ಹೋಯಿತು. ಸೆಕ್ಯೂರಿಟಿ ಡ್ರೈವ್ ಮಾಡಿಕೊಂಡು ಹೋದ ಅವಳನ್ನೇ ದಿಟ್ಟಿಸಿ ನೋಡಿದ. ಸ್ಕ್ರೀನ್ ಟೆಸ್ಟ್ ಮಾಡುವವನಂತೆ. ಅಬ್ಬಾ ಸುಮಾ ಅದ್ಬುತ ಚಲುವೆ!
ಜೀಪು ನಿಂತಷ್ಟೆ ತಡ, ದೂರದಲ್ಲಿದ್ದ ಹೊಗೆರಾಮ ಹತ್ತಿರ ಧಾವಿಸಿ ಬಂದ. ಒಮ್ಮೆ ಇವರನ್ನು ಇಡಿಯಾಗಿ ನೋಡಿದ. ಒಂದೇ ನೋಟಕ್ಕೆ ಸುಮಾ ಅವನ ಗಮನ ಸೆಳೆದಳು. ಅಬ್ಬಾ…ಹಿಂದಿ ಹುಡುಗಿಗಿಂತ ಇವಳೇ ಸುಂದರವಾಗಿದ್ದಾಳಲ್ಲಪ್ಪ ಕೊಡಗಿನ ಹುಡುಗಿಯರು ಸುಂದರಿಯರೆಂದು ಕೇಳಿದ್ದೆ. ಈಗ ಇವಳನ್ನು ನೋಡಿದ ಮೇಲೆ ಅದು ನಿಜ ಅನ್ನಿಸಿತು.

‘ನೀವು…ಸುಮಾ ಅಪ್ಪಚ್ಚು ಅಲ್ವಾ? ಮಾಚಯ್ಯನವರು ಕಳಿಸಿದ್ದು ತಾನೇ?’
ಹೊಗೆರಾಮ ಕೇಳಿದಾಗ ಸುಮಾ ಮತ್ತು ಪೂವಯ್ಯ ಮುಖ- ಮುಖ ನೋಡಿಕೊಂಡರು. ಮುಖ ಅರಳಿತು. ಸುಮಾಳೆ ಮುಂದೆ ನಿಂತು ಉತ್ತರಿಸಿದಳು.

(ಸೂಚನೆ : ಈ ಕತೆಯೂ ಈಗಾಗಲೇ ಪುಸ್ತಕರೂಪದಲ್ಲಿದ್ದು, ಆಕೃತಿಕನ್ನಡ ಮ್ಯಾಗಝಿನ್ ನಲ್ಲಿ ಪ್ರತಿ ಶನಿವಾರ ಪ್ರಕಟವಾಗುತ್ತದೆ. ಇತರೆ ಯಾರು ಕೂಡ ಈ ಕತೆಯನ್ನು ಪ್ರಕಟಿಸುವ ಹಾಗಿಲ್ಲ.ಹಾಗೂ ಕದಿಯುವಂತಿಲ್ಲ.)

ಮತ್ತೆ ಮುಂದಿನ ಶನಿವಾರ ಓದಿರಿ. ಇದೊಂದು ಕುತೂಹಲಕಾರಿ ಕತೆ. ತಪ್ಪದೆ ಓದಿರಿ. ]


  • ಹೂಲಿಶೇಖರ್  (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW