ಸಿದ್ದಾಪುರದ ಎಂ ಜಿ ಸಿ ಕಾಲೇಜಿನ ವಿದ್ಯಾರ್ಥಿನಿ ಪ್ರೀತಿ ನಾಯ್ಕ್ ಅವರು ಹಸೆ ಚಿತ್ರದ ಮೇಲೆ ಪ್ರಾಜೆಕ್ಟ್ ಬುಕ್ ಮಾಡಿದ್ದಾರೆ. ಹಸೆ ಚಿತ್ರದ ಬಗ್ಗೆ ಕೆಲವು ಉಪಯುಕ್ತ ಮಾಹಿತಿಗಳು ಈ ಪ್ರಾಜೆಕ್ಟ್ ಬುಕ್ ನಲ್ಲಿದೆ. ಅದನ್ನು ಶಿವಕುಮಾರ್ ಬಾಣಾವರ ಅವರು ಓದುಗರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ. ಹಸೆ ಚಿತ್ರದ ಬಗ್ಗೆ ಮುಂದೆ ಓದಿ…
ಜನಪದ ಚಿತ್ರಕಲೆಗಳು ಮಾನವನ ಮೂಲ ಸಂವೇದನೆಗಳಿಗೆ ವೈವಿಧ್ಯ ಪೂರ್ಣವಾಗಿರುತ್ತದೆ. ಜನಪದರು ತಮ್ಮ ಅನುಭವಗಳಿಗೆ ಬಣ್ಣ ತುಂಬಿದ್ದು, ಇಂತಹ ಕಲೆಗಳ ಮೂಲಕ. ಆದುದ್ದರಿಂದ ಇವು ಜನಪದರ ಬದುಕಿನ ವೈವಿಧ್ಯ ಕಲಾ ಪರಂಪರೆ, ಹೃದಯ ಶ್ರೀಮಂತಿಕೆ ಹಾಗೂ ಸಂಸ್ಕಾರವಂತಿಕೆಗಳನ್ನು ತಿಳಿಸಿಕೊಡುತ್ತವೆ. ಹೀಗೆ ಜನಪದ ಚಿತ್ರಕಲೆಗಳು ಜನಾಂಗಿಕ, ಧಾರ್ಮಿಕ, ಸಾಮಾಜಿಕ, ಭೌಗೋಳಿಕ ಅಂಶಗಳಿಂದ ಕೂಡಿರುತ್ತದೆ.ಜನಪದರ ಸೌಂದರ್ಯ, ಮೂಲ ಪ್ರಜ್ಞೆಯ ವರ್ಣ ರೇಖಾ ರೂಪವೇ ಜನಪದ ಚಿತ್ರಕಲೆಗಳು. ಹೀಗೆ ಜನಪದರ ಚಿತ್ರಕಲೆಯಲ್ಲಿ ಸೌಂದರ್ಯವೇ ಮೂಲ ಘಟಕವಾಗಿರುತ್ತದೆ. ಜನಪದ ಚಿತ್ರಕಲೆಯಲ್ಲಿ ಜನಪದರ ದಟ್ಟವಾದ ಬದುಕು ಇರುವುದನ್ನು ಕಾಣುತ್ತೇವೆ.
ಹಸೆಯ ಹಿಂಭಾಗದ ಗೋಡೆಯೇ “ಹಸೆ ಗೋಡೆ” ಈ ಗೋಡೆಯ ಮೇಲೆ ಬರೆದಿರುವ ಚಿತ್ರ “ಹಸೆ ಗೋಡೆ ಚಿತ್ತಾರ”. ಇದೊಂದು ಅಪರೂಪದ ಸಮೂಹ ಚಿತ್ರಕಲೆ. ಇದು ಅತ್ಯಂತ ವಿಶಿಷ್ಟವಾದ ಹಾಗೂ ಸುಂದರವಾದ ಗ್ರಾಮೀಣ ಕಲಾ ಪ್ರಕಾರ.
(ಹಸೆಚಿತ್ರ ಕಲಾವಿದೆ ಪ್ರೀತಿ ನಾಯ್ಕ್ )
ಮಲೆನಾಡಿನ ಗ್ರಾಮೀಣ ಸಂಸ್ಕೃತಿಯ ಮೂಲ ರೂಪಗಳು ಎನಿಸಿದ ಹಸೆ – ಗೋಡೆ ಚಿತ್ತಾರಗಳು ಈ ಆಧುನಿಕ ಯುಗದಲ್ಲಿ ನಶಿಸುವ ಹಂತದಲ್ಲಿವೆ.
ಸಿದ್ದಾಪುರದ ಎಂ ಜಿ ಸಿ ಕಾಲೇಜಿನ ವಿದ್ಯಾರ್ಥಿನಿ ಪ್ರೀತಿ ನಾಯ್ಕ್ ಈ ಕಲೆಯನ್ನು ತುಂಬ ಆಸೆಯಿಂದ ಅಭ್ಯಾಸ ಮಾಡಿ ಇಂಥದೊಂದು ಪ್ರಾಜೆಕ್ಟ್ ಬುಕ್ ಮಾಡಿದ್ದಾರೆ. ಸ್ವತಃ ಕಲಾವಿದೆಯಾಗಿರುವ ಇವರು ಹಸೆ ಚಿತ್ರ ಕಲೆಯ ಹಲವು ಪ್ರಕಾರಗಳನ್ನು ಬಣ್ಣದ ಸ್ಕೆಚ್ ಪೆನ್ ಉಪಯೋಗಿಸಿ ಚಿತ್ರಿಸಿದ್ದಾರೆ. ಮೂಲದ ಸೊಗಡನ್ನು ಚಿತ್ರಗಳಲ್ಲಿ ಹಾಗೆಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ತುಂಬಾ ಆಸಕ್ತಿ ಹುಟ್ಟಿಸಿದ ಈ ಪುಸ್ತಕದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದೇನೆ. ಪ್ರೀತಿ ನಾಯ್ಕ್ ಇವರಿಗೆ ಅಭಿನಂದನೆಗಳು.
ಹಸೆ ಚಿತ್ರ ಕಲೆಯ ಮೂರು ವಿಭಾಗಗಳು :
೧) ಮದುವೆ ಕಾರ್ಯಗಳಲ್ಲಿ ಬರೆಯುವ ಹಸೆ ಗೋಡೆ ಚಿತ್ತಾರಗಳು.
೨) ಮನೆಯ ಅಲಂಕಾರಕ್ಕಾಗಿ ಬರೆಯುವ ಚಿತ್ರಗಳು.
೩) ಹಬ್ಬ ಹರಿದಿನಗಳಲ್ಲಿ ಬರೆಯುವ ಬುಟ್ಟಿ ಚಿತ್ತಾರಗಳು.
ವಿನ್ಯಾಸಗಳು
* ಮುಂಡಿಗೆ ಹಸೆ ಚಿತ್ರ
* ಮಾದನ ಕೈ ಇರುವ ಹಸೆ ಚಿತ್ರ
* ಚಚ್ಚೌಕದ ಹಸೆ ಚಿತ್ರ
* ತೇರು ಆಕಾರದ ಹಸೆ ಚಿತ್ರ
* ಮೂರು ಗೋಪುರ ಇರುವ ಹಸೆ ಚಿತ್ರ
* ಒಂದು ಗೋಪುರ ಇರುವ ಹಸೆ ಚಿತ್ರ.
* ಜೋಗಿ ಜಡೆ
* ಮಂಟಪ
* ವಾದ್ಯ
* ಕೃಷಿ ಕಾರ್ಯಗಳು
- ಶಿವಕುಮಾರ್ ಬಾಣಾವರ (ನಿವೃತ್ತ, ಕಾರ್ಯಪಾಲಕ ಇಂಜೀನಿಯರ್ – ಕೆ. ಪಿ.ಸಿ. ಎಲ್)