ಸೋಮವಾರ, ಬುಧವಾರ ಒಳ್ಳೆಯ ದಿನವಾದರೇ ಮಂಗಳವಾರ ಏಕೆ ಒಳ್ಳೆಯ ದಿನವಾಗುವುದಿಲ್ಲ? ಇದರ ಬಗ್ಗೆ ಪ್ರೊ.ರೂಪೇಶ್ ಅವರು ಒಂದು ಸಣ್ಣಕತೆಯ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ…
(ಕಥಾ ನಾಯಕ ಕಾಲೇಜ ಉಸಪನ್ಯಾಸಕ ಹುದ್ದೆಯನ್ನರಸಿ ಸಂದರ್ಶನಕ್ಕೆ ಹೋಗಿರುತ್ತಾನೆ. ಇಂದು ಮಂಗಳವಾರ ಬೇಡ. ನಾಳೆಯಿಂದ ಒಳ್ಳೆಯ ಕೆಲಸ ಕ್ಕೆ ಹಾಜರಾಗುವಂತೆ ಪ್ರಾಂಶುಪಾಲರು ಹೇಳಿದಾಗ, ಕಥಾನಾಯಕನ ಮನಸ್ಸಿನಲ್ಲಿ ಮಂಗಳವಾರ ಏಕೆ ಒಳ್ಳೆಯ ಕೆಲಸ ಮಾಡಬಾರದು? ಎನ್ನುವ ಪ್ರಶ್ನೆಗಳು ಏಳುತ್ತವೆ. ಆಗ ಅವರಲ್ಲಿ ನಡೆಯುವ ಮಾತಿನ ಚಕಮಕಿಯನ್ನು ಲೇಖಕರು ಸಣ್ಣ ಕತೆಯ ಮೂಲಕ ಸೊಗಸಾಗಿ ವಿವರಿಸಿದ್ದಾರೆ…)
ಸರಿ…ಸರಿ….ಆಯ್ತು” ಅಂತ ಪ್ರಾಂಶುಪಾಲರಾದ ಪ್ರೊ. ರಾವ್ ಫೋನಿಟ್ಟು…
” ಸರಿ.. ನೀವು ನಾಳೆ ಬನ್ನಿ, ಕರ್ತವ್ಯಕ್ಕೆ ಹಾಜರಾಗಿ” ಎಂದರು.
” ನಾಳೆ ಯಾಕೆ ಸಾರ್… ಇವತ್ತೇ ಕೊನೇ ದಿನ” ಅಂದರು ಸಂತೋಷ್ ಸಾರ್.
ನಾನೂ ಹೌದೆಂದೆ.
“ಇವತ್ತು ಮಂಗಳವಾರ. ಸೋಮವಾರ ಇಲ್ಲಾಂದ್ರೆ, ನಾಳೆ ಬುಧವಾರ ಶುಭ ಕಾರ್ಯಕ್ಕೆ ಒಳ್ಳೆಯದು” ಎಂದರು.
ಒಂದು ಕ್ಷಣ ನಾವಿಬ್ಬರೂ ಮುಖಾಮುಖಿ ನೋಡಿ…ಎದ್ದು ಹೊರ ಬಂದೆವು.
ಸರಿ ಅಂತ , ಗೇಟ್ ಬಳಿ ತಲುಪಿ, ಸಂತೋಷರು ತಮ್ಮ ಬೈಕ್ ಹತ್ತುವಾಗ ” ಸಾರ್ , ಇವತ್ತೇ ಕೊನೇ ದಿನ ೧೭ ಅಲ್ವಾ? ನಾಳೆ ನಾವು ಬಂದರೆ, ಆದೇಶ ಪ್ರಕಾರ ನಮಗೆ ಅರ್ಹತೆ ಇರಲ್ವಲ್ಲ… ಏನಂತೀರಿ?” ಎಂದೆ.
” ನಾನೂ ಅದೇ ಯೋಚಿಸುತ್ತಿದ್ದೆ. ಈ ಆರ್ಡರ್ ನಲ್ಲಿ ನಾಳೆ ಬನ್ನಿ ಅಂತ ಅವರತ್ರ ಬರೆಸಿದ್ರೆ?” ಎಂದರು.
”ಬನ್ನಿ… ನೋಡೋಣ…”ಎಂದು ಇಬ್ಬರೂ ಪುನಃ ಪ್ರಾಂಶುಪಾಲರ ಬಳಿ ಹೋದೆವು.
” ನಾನು ಈವತ್ತೇ ಸೇರ್ಕೋತೀನಿ, ಅನುವು ಮಾಡಿ” ಎಂದೆ.
“ರೀ … ಅರ್ಥಮಾಡ್ಕೊಳ್ಳೀ…. ನಾಳೆ ನಿಮಗೇ ಆದ್ಯತೆ. ಯಾರನ್ನೂಕರೆಯಲ್ಲ. ನನ್ನ ಮಾತು ಕೇಳಿ ನಿಷ್ಕಳಂಕ ಮುಖದ ಗುರು ಸಮಾನರು ಎಂದರು.
” ಅಲ್ಲಾ ಸಾರ್….
ನಾನು ಹುಟ್ಟಿದ್ದೇ ಮಂಗಳವಾರ, ಹನುಮ ಹುಟ್ಟಿದ್ದೂ ಮಂಗಳವಾರ..
ಫೋಟೋ ಕೃಪೆ : Quartz (ಸಾಂದರ್ಭಿಕ ಚಿತ್ರ )
ಈ ಸಂಸ್ಥೆ ನನ್ನ ಸಂದರ್ಶನ ಮಾಡಿದ್ದೂ ಮಂಗಳವಾರ… ಈಗ ಬಿಡುತ್ತಿರುವ ಕಾಲೇಜು ಸೇರಿದ್ದೂ ಮಂಗಳವಾರ, ಅದರಿಂದ ಇಂತಹಾ ಒಳ್ಳೆ ಸಂಸ್ಥೆಯಲ್ಲಿ ಕೆಲಸ ಸಿಕ್ತು ನೋಡಿ, ಮಂಗಳವಾರ ನನಗೆ ಒಳ್ಳೆ ದಿನ ಸಾರ್” ಎಂದೆ.
” ಏನೇ ತಪ್ಪಾದರೂ ತಿದ್ದಲು ನಿಮ್ಮಂತ ಹಿರಿಯರು ಇರುವುದೇ ಶುಭ ಲಕ್ಷಣ” ಎಂದು ಧ್ವನಿಗೂಡಿಸಿದರು ಸಂತೋಷ್. ಆ ಕ್ಷಣ ಹೆಂಗೂ ಅವರು ಒಪ್ಪಲಿಲ್ಲ. ನಾನಂತು ಕರ್ತವ್ಯ ಹಾಜರಾಗುವ ಸಹಮತ ಪತ್ರ (ಮೊದಲೇ ಬರದಿದ್ದೆ) ಆದೇಶದ ಪ್ರತಿ ಸೇರಿಸಿ ಅವರ ಮುಂದಿಟ್ಟೆ.
ಕೊಂಚ ಯೋಚನೆ ಮಾಡಿ,
“ಸರಿ ….ಈವತ್ತು ವಿಭಾಗ ಮುಖ್ಯಸ್ಥರಿಂದ ವೇಳಾಪಟ್ಟಿ ಪಡೆಯಿರಿ … ಆದ್ರೆ ಪಾಠ ನಾಳೆಯಿಂದ ಮಾಡುವಿರಂತೆ” ಎಂದು ಮನಸ್ಸಿಲ್ಲಾ ಮನಸ್ಸಿನಿಂದ ಸಹಿ ಹಾಕಿ, ಎಲ್ಲಿಗೋ
ಫೋನ್ ಮಾಡಿ ” … ಕೇಳ್ತಾ ಇಲ್ಲ….ಸೇರಿದ್ದಾರೆ…ಬಿಸಿ ರಕ್ತ ಬೇರೆ…ಪಾಠ ನಾಳೆಯಿಂದ ಮಾಡ್ತಾರೆ…” ಹೇಳುತ್ತಾ ಇದ್ದರು. ಪಾಪ ಆ ಒಳ್ಳೆಯ ಮನಸ್ಸನ್ನು ನಾನು ಆ ಕ್ಷಣ ಕ್ರೂರವಾಗಿ ನೋಯಿಸಿದೆ ಎಂದು ಮುಂದಿನ ದಿನಗಳಲ್ಲಿ ನನಗೆ ಭಾಸವಾಗಿದ್ದು ಅವರ ನಿವೃತ್ತಿಯ ದಿನ ನನ್ನಲ್ಲಿ ಗೋಚರವಾಯಿತು. ನಾನು ಕಛೇರಿ ಅಧೀಕ್ಷಕ(office superident) ಬಳಿ ಹೋಗಿ, ವರದಿ ಕೊಟ್ಟೆ, ಹಾಜರಾತಿಯಲ್ಲಿ ಹೆಸರು ಬರೆದಾಗ, ಕೂಡಲೇ ಋಜು ಹಾಕಿದೆ.
” ಏಯ್ …. ಪ್ರಾಂಶುಪಾಲರು ನಾಳೆ ಸಹಿ ಹಾಕಕ್ಕೆ ಹೇಳಿದ್ದು, ಬನ್ನಿ ಇಲ್ಲಿ…” ಅಂತ ಕರೀತಿದ್ರು…
ಸಂತೋಷ್ ಸಾರ್ ನಗ್ತಾ ಇದ್ರು. ಸಂತೋಷರಿಗೆ ವಿದಾಯ ಹೇಳಿ ಒಳನಡೆದೆ. ವಿಭಾಗ ಮುಖ್ಯಸ್ಥರ ಕೊಠಡಿಗೆ ಹೋದೆ
“ಸಾರ್ ….ಹೊಸಾ ನೇಮಾಕತಿ….”
“ಹಾಂ ಗೊತ್ತಾಯ್ತು… ಟೈಂ ಟೇಬಲ್ ಇಲ್ಲಿದೆ. ಅದರಲ್ಲಿ ಹೆಸರಿಲ್ಲದ ಸೆಕ್ಷನ್ ನಿಮಗೆ” ಎಂದರು.
ನೋಡಿದ್ರೆ ನನಗೆ ಬೆಳಗಿನ ಕೊನೆಯ ಪಿರೇಡ್…
ಕ್ಲಾಸಿಗೆ ಓಡಿ ಹೋದೆ…
ಸಂಪೂರ್ಣ ಒಂದು ಗಂಟೆ ಖುಷಿಯಿಂದ ಪಾಠ ಮಾಡಿ ಹೊರಬರುವಾಗ, ಉಪ ಪ್ರಾಂಶುಪಾಲರು ನನ್ನ ನಖಶಿಖಾಂತ ನೋಡಿದರು. ಅವರಿಗೆ ನಗು ನಗುತ್ತಾ ” ಸಾರ್ ನಮಸ್ಕಾರ…” ಎಂದು ಗೌರವಿಸಿ ಮುನ್ನಡೆದೆ. ತುಂಬಾ ಹಿರಿಯರೂ ಗುರುಸಮಾನರೂ ಆದ, ಅವರೆಲ್ಲಾ ” ಎಂತಹಾ ಮೂಢನಾದ ಇವನು ಎಷ್ಟೊಂದು ಅಪನಂಬಿಕೆಯವನು, ಅನಾಗರಿಕ” ಎಂದು ನನ್ನ ಬಗ್ಗೆ ನೊಂದಿರಬಹುದು. ನಂತರ ಇಂದಿನವರೆಗೂ ಅದೆಷ್ಟೋ ಮಂಗಳವಾರಗಳು ನನ್ನ ನೋಡಿ ಹೋಗುತ್ತಿದೆ.
ಎಲ್ಲಾ ಮಂಗಳವಾರಕ್ಕೂ ನಮಿಸುತ್ತಾ….
ನಿಮ್ಮವ ನಲ್ಲ.
ರೂಪು
- ಪ್ರೊ. ರೂಪೇಶ್ (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು ವಿಜಯಾ ಕಾಲೇಜು ಬೆಂಗಳೂರು)