ಸಿಡಿದ ಮೊಗ್ಗು

ರಾಮ ಹೆಗ್ಡೆ ಅವರಿಗೆ ರಕ್ತ ಸಂಬಂಧಕ್ಕಿಂತ ವಂಶದ ಮರ್ಯಾದೆಯೇ ಹೆಚ್ಚಾಗಿತ್ತು. ಮಗಳು ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿದ್ದಕ್ಕೆ ಮನೆಯಿಂದಲೇ ಹೊರಕ್ಕೆ ಹಾಕಿದ್ದರು. ಅದೇ ರಾಮ ಹೆಗ್ಡೆ ಅವರ ಬಂಗಲೆ ಈಗ ಊರ ಬಾಗಿಲಲ್ಲಿ ಹರಾಜಿಗೆ ನಿಂತಿದೆ. ಅವರ ವಂಶದ ಮರ್ಯಾದೆ ಈಗ ಯಾರು ಕಾಪಾಡುತ್ತಾರೆ?ಮುಂದೇನಾಗುತ್ತದೆ?…ಓದಿ ಕತೆಗಾರ ತಾಮ್ರಗೌರಿಯವರ ಲೇಖನಿಯಲ್ಲಿ ಅರಳಿದ ಪ್ರೀತಿಯ ಕತೆ…

ಎಲ್ಲರೂ ನಾಲ್ಕೈದು ದಿವಸಗಳಿಂದ ಎದುರು ನೋಡಿದ್ದ ಆ ದಿನ ನಾಳೆ ಬರಲಿತ್ತು. ಈ ರಾತ್ರಿ ಮುಗಿದರೆ ಬೆಳಗು ಆ ವಂಶದ ಬಗ್ಗೆ ಹೊಸ ಇತಿಹಾಸವೊಂದನ್ನು ಸೃಷ್ಟಿಸಲಿತ್ತು. ರಾಮ ಹೆಗ್ಡೆಯವರ ವಂಶದ ಗೌರವ ನಾಳಿನ ಕಾರ್ಯಕ್ರಮದದೊಂದಿಗೆ ಬೀದಿ ಪಾಲಾಗಲಿದೆ. ಎರಡು ಮೂರು ವರ್ಷಗಳ ಹಿಂದೆ ಆ ಊರಿನ ಗೌರವದ ಗುರುತಾಗಿ, ವಂಶ ಪಾರಂಪರ್ಯದಿಂದ ಮನೆ ಮಾತಾಗಿ ವಿಜೃಂಭಿಸುತ್ತಿದ್ದ ಆ ಭವ್ಯ ಬಂಗಲೆ ರಾಮ ಹೆಗ್ಡೆಯವರ ಬದುಕಿನ ಏರಿಳಿತದಂತೆಯೇ ಬಣ್ಣ ಕಳೆದು ಕೊಳ್ಳುತ್ತಾ ಬಂದು, ನಾಳೆ ಸಾರ್ವಜನಿಕ ಹರಾಜಿಗೆ ಬಂದು ಯಾರದೋ  ಮೂರನೆಯವರ ಸ್ವತ್ತಾಗಲಿದೆ. ಇಷ್ಟು ವರ್ಷ ದರ್ಪಠೀವಿಗಳಿಂದ ಮೆರೆದವರು, ಅವರ ಮಕ್ಕಳು, ತಾವು ಹುಟ್ಟಿ ಬೆಳೆದು ಸಂಭ್ರಮಪಟ್ಟ ವಾಸಸ್ಥಳವನ್ನು ಉಳಿಸಿಕೊಳ್ಳಲು ಅಸಮರ್ಥರಾಗಿದ್ದಾರೆ ಈಗ.

ಫೋಟೋ ಕೃಪೆ : house plan

ಮಧುಗೆ ನಿದ್ದೆ ಬರಲಿಲ್ಲ. ಆ ಬಂಗಲೆಯ ರಕ್ತ ಸಂಬಂಧಿಗಳಲ್ಲಿ ಒಬ್ಬನಾದ ತನಗೆ ಬಂಗಲೆಯವರಿಂದ ದೊರಕಿದ ಸ್ವಾಗತ ಸಂಬಂಧಗಳು ಅವನು ಯಾವ ಕ್ಷಣದಲ್ಲೂ ಮರೆಯಲಾಗದಂಥದ್ದು. ಆ ಬಂಗಲೆಯ ಮಕ್ಕಳೊಂದಿಗೆ ಶ್ರೀಮಂತ ವಾತಾವರಣದಲ್ಲಿ ಬೆಳೆಯ ಬೇಕಾಗಿದ್ದ, ಉಳಿದು ಎಲ್ಲರ ಪ್ರೀತಿ- ವಾತ್ಸಲ್ಯಗಳನ್ನು ಗಳಿಸಬೇಕಾಗಿದ್ದ ತಾನು, ಆ ಬಂಗಲೆಗೆ ಬೇಡವಾದ ಶಿಶು. ಬಡತನದಲ್ಲಿ ಬೆಳೆದು ಈಗ ತಾನೊಬ್ಬ ಸಮಾಜದ ಗಣ್ಯ ವ್ಯಕ್ತಿ ಆಗಿರುವುದೊಂದು ಆಕಸ್ಮಿಕ! ಮಗನ ಕೋಣೆಯ ದೀಪ ಆರಿಸಲು ಬಂದ ಜಾನಕಿ ಅವನಿನ್ನೂ ನಿದ್ದೆ ಮಾಡದೆ ಅತ್ತಿತ್ತ ಹೊರಳಾಡುತ್ತಿರುವುದನ್ನು ಕಂಡಳು. ಅವಳಿಗೂ ನಿದ್ದೆ ಬಂದಿರಲಿಲ್ಲ. ಶಾಂತವಾಗಿ ಮಲಗಲು ಹೇಗೆ ಸಾಧ್ಯ ? ರಾಮ ಹೆಗ್ಡೆಯವರ ಮಗಳಾಗಿ ತಾನು ಹುಟ್ಟಿ ಬೆಳೆದ ಮನೆ ನಾಳೆ ಹರಾಜಿಗೆ ಬರಲಿದೆ. ಈ ಘಟನೆ ರಾಮ ಹೆಗ್ಡೆಯವರ ಮೇಲೆ ಎಂಥ ಪರಿಣಾಮ ಮಾಡಬಹುದೆಂದು ಅವಳಿಗೆ ಗೊತ್ತು.

ಸುತ್ತ- ಮುತ್ತ ಸಮಾಜ ಬದಲಾಗುತ್ತಿದ್ದರೂ, ಜನರೇ ನಾಡಿನ ಆಡಳಿತಗಾರರಾಗುತ್ತಿದ್ದರೂ, ಯಾರಿಗೂ ಬೇಡವಾದ ಹಿಂದುಳಿದ ಜನ ಒಂದು ನೆಲೆ ಕಂಡುಕೊಳ್ಳುತ್ತಿದ್ದ ಕಾಲ ನಡೆಯುತ್ತಿದ್ದರೂ, ಅವರಿಗೆ ಮಾತ್ರ ತಾವು ದೊಡ್ಡ ಶ್ರೀಮಂತರೆಂಬ ಅಭಿಮಾನ. ಆ ಹಳ್ಳಿಯೆಲ್ಲ ತಮ್ಮದಾಗಿತ್ತು. ಈ ಹಳ್ಳಿಯ ಜನರೆಲ್ಲಾ ತಮ್ಮ ವಂಶದವರಲ್ಲಿ ಊಳಿಗ ಮಾಡಿದವರು ಎಂದೇ ಭಾವನೆ. ಜಾನಕಿಗೆ ತಂದೆಯ ಗುಣಗಳೆಲ್ಲ ಗೊತ್ತು. ಅವರು ತನ್ನ ಪ್ರೀತಿ, ಸ್ನೇಹದ ಸ್ವಾತಂತ್ರ್ಯ ಸಹಿಸಲಾರರು ಎಂದು ತಿಳಿದಿದ್ದರೂ ಗೋಪಾಲನನ್ನು ಮದುವೆಯಾಗಿದ್ದಳು. ಮೂಲತಃ ಗೋಕರ್ಣದವನಾದ ಗೋಪಾಲ ತೀರಾ ಬಡವ. ಅವರ ಮನೆಯಲ್ಲಿ ಓದಲು ಇದ್ದವ. ಅದು ರಾಮ ಹೆಗ್ಡೆಯವರಿಗೆ ಸರಿಬರಲಿಲ್ಲ. ತಮ್ಮ ಘನತೆ, ಗೌರವಕ್ಕೆ ಸರಿಹೊಂದುವಂಥದ್ದಲ್ಲ ಎಂದು ಅವಳ ಮೇಲೆ ರೇಗಾಡಿದರು. ಓದಲು ಬಂದ ಗೋಪಾಲ ಮೊದಲ ನೋಟದಲ್ಲೇ ತನ್ನ ಮನಸ್ಸಿನಲ್ಲಿ ಸೇರಿಹೋದವನು. ಮುಂದೆ ತನ್ನವನೇ ಆಗಬೇಕಾದಾಗ ಅವಳು ಆ ಭವ್ಯ ಬಂಗಲೆಯನ್ನು ತ್ಯಜಿಸಿ ಬರಬೇಕಾಯಿತು.

ಫೋಟೋ ಕೃಪೆ : desiblitz

” ಮಧು, ಇನ್ನೂ ನಿದ್ದೆ ಬರಲಿಲ್ವೇನೋ ?” ಮಗನ ತಲೆ ಮುಟ್ಟುತ್ತಾ ಜಾನಕಿ ಕೇಳಿದಳು. ” ನಾಳೆ ಆ ಬಂಗ್ಲೆ ಹರಾಜಿಗೆ ಬರೋದು ನಿನ್ಗೆ ಜ್ಞಾಪಕ ಇದೆ ತಾನೆ ?” ಎಂದಳು. ಮಧು ತಾಯಿಯನ್ನೇ ನೋಡಿದ. ಈ ವೇಳೆಗೆ ಇದನ್ನು ಹೇಳಲು ಬಂದುದ್ದರ ಅರ್ಥವೇನಿರಬಹುದು ಅನ್ನಿಸಿತು. “ಹೌದಮ್ಮ, ನಾಳೆ ಇಷ್ಟು ಹೊತ್ತಿಗೆ ಅದು ಬೇರೆಯವರ ಬಂಗ್ಲೆ ಆಗಿರುತ್ತೆ …” ಎಂದ. ಒಂದು ಕ್ಷಣ ಮೌನ. ದೀಪದ ಮಂದ ಬೆಳಕಿನಲ್ಲಿ ಮಧು ತಾಯಿಯ ಮುಖ ನೋಡಿದ. ಅವಳ ಕಣ್ಣುಗಳಲ್ಲಿ ಬೆಳಕು ಪ್ರತಿಫಲಿಸುತ್ತಿರುವುದು ಕಾಣಿಸಿತು. ಅವಳಿಗೆ ದುಃಖವಾಗಿದೆ ಎಂದೆನಿಸಿತು. “ನಿನಗೆ ಮಾಡಿದ ಪಾಪಕ್ಕೆ ತಕ್ಕ ಫಲಾನ ಆ ಜನ ಅನುಭವಿಸ್ತಿದ್ದಾರೆ. ಅದಕ್ಕಾಗಿ ಯಾಕೆ ಗೋಳಾಡ್ತೀಯಾ ಬಿಡಮ್ಮ” ಎಂದ ಮಧು.

ತನಗೆ ಆ ವಂಶದ ಜನ ಏನೇನು ತೊಂದರೆಗಳನ್ನು ಕೊಟ್ಟಿದ್ದಾರೆಂದು ಅವನಿಗೆ ಜಾನಕಿಯೇ ಹೇಳಿದ್ದಳು. ತಮ್ಮ ಅಂತಸ್ತಿಗೂ ತೀರಾ ಕೆಳಮಟ್ಟದಲ್ಲಿರುವ ಗೋಪಾಲನ ಮದುವೆ ತನ್ನೊಂದಿಗೆ ಖಂಡಿತಾ ಆಗಕೂಡದು ಎಂದು ತಂದೆ ಅಬ್ಬರಿಸಿ ಹೇಳಿದ್ದರು. ಹಾಗೆ ಏನಾದರೂ ಆದರೆ ನಿನ್ನನ್ನು ಮನೆಯಿಂದ ಹೊರಗೆ ಹಾಕಿ ವಂಶದ ಗೌರವವನ್ನು ಉಳಿಸಿಕೊಳ್ಳುತ್ತೇನೆ ಎಂದಿದ್ದರು. ಆದರೆ ಈಗ ನಾಳೆ ಆ ವಂಶದ ಗೌರವ ಏನಾಗಲಿದೆ…? “ಇಲ್ಲ ಕಣೋ ಮಧು. ಹಾಗಾಗ್ಬಾರ್ದು. ನಿಮ್ತಾತ ಚೆನ್ನಾಗಿ ಬದುಕಿ ಬಾಳ್ದೋರು. ಅವರ ಹೃದಯ ಹೀಗೆ ಒಡೆದು ಚೂರು ಚೂರಾಗ್ಬಾರ್ದು. ನನ್ನ  ಈ ಜೀವನವನ್ನು ನಾನೇ ಆರಿಸಿಕೊಂಡಿದ್ದು. ನಂಗೆ ತಂದೆಗಿಂತಲೂ ಹೊಸ ಸ್ನೇಹಾನೆ ಮುಖ್ಯ ಅನ್ನಿಸ್ತು. ಅವರಿಗೆ ಮಗಳಿಗಿಂತಲೂ ವಂಶದ ಗೌರವ ಮುಖ್ಯ ಅನ್ನಿಸ್ತು. ಅವ್ರು ಮುಖ್ಯ ಅಂದ್ಕೊಂಡದ್ದು ಅವರಿಂದ ಹೊರಟು ಹೋಗೋದು ತಾತಂಗೆ ನಂಗೆ ತುಂಬಾ ಸಂಕಟವೆನಿಸ್ತಿದೆ…” ಜಾನಕಿ ಹೇಳಿದಳು. ಮಗನಿಂದ ಏನಾದರೂ ಉತ್ತರ ಬಂದಿತೇನೋ ಅಂತ ಕಾದು ನೋಡಿದಳು ಕೆಲಕ್ಷಣ. ಉತ್ತರವಿಲ್ಲ… ನಿದ್ದೆ ಬಂದಿರಬೇಕೆನಿಸಿತು. ದೀಪ ಆರಿಸಿ ಮಲಗಲು ಹೋದಳು.

ಮಧು ತಾಯಿ ಹೋದದ್ದನ್ನು ಗಮನಿಸಿದ. ಹೌದು, ತಾತ ಚೆನ್ನಾಗಿ ಬದುಕಿ ಬಾಳಿದವರು. ಆದರೆ ತಮ್ಮನ್ನು ಸಮಾಧಾನವಾಗಿ ಬದುಕಿ ಬಾಳಲು ಬಿಡಲಿಲ್ಲ. ಊರಿನವರಿಗೆಲ್ಲ ಸಹಾಯ ಮಾಡುವ ಮನುಷ್ಯನಿಗೆ ಮಗಳು ಬೇಡವಾಯಿತು. ಮಗಳ ಬಡತನ ಕಾಣದಾಯಿತು. ಮಗಳ ಮಗ ಬೇಡವಾಗುವ ಹಾಗಾಯಿತು. ಜಾನಕಿ ಗೋಪಾಲ ಮದುವೆಯಾಗಿ ಹೊಸ ಬದುಕು ಪ್ರಾರಂಭಿಸಿದ್ದು ಮಧುನ ಹುಟ್ಟಿಗೆ ನಿಮಿತ್ತವಾದಂತಾಯಿತೇ? ಹೊರತು ಜಾನಕಿಯ ಬದುಕು ಆಸೆ ಪಟ್ಟಂತಾಗಲಿಲ್ಲ. ಮಧು ಅವಳ ಹೊಟ್ಟೆಯಲ್ಲಿದ್ದಾಗಲೇ ರತ್ನಮ್ಮ ಬಂಗಲೆ ಬಿಟ್ಟು ಜಾನಕಿಯ ಮನೆ ಸೇರಿದಳು. ಮಧು ಹುಟ್ಟಿ ಎರಡು ವರ್ಷವಾಗಿದ್ದಾಗ ತೋಟದಲ್ಲಿ ಹಾವು ಕಚ್ಚಿ ಗೋಪಾಲ ತೀರಿಕೊಂಡ.

” ಜಾನಕಿ ಅಪ್ಪನ ಮನೆಯಲ್ಲಿ ರಾಣಿ ಹಾಗೆ ಇರಬಹುದಾಗಿತ್ತು . ಆದ್ರೆ… ಅವಳಿಗೆ ಗೋಪಾಲನೇ ಹೆಚ್ಚಾದ. ಅವನನ್ನೇ ಮದುವೆ ಮಾಡ್ಕೊಂಡು ಆ ಐಶ್ವರ್ಯನ ಬಿಟ್ಟು ಬಂದ್ಳು. ಬಡತನದಲ್ಲಿ ಜೀವನ ಪ್ರಾರಂಭಿಸಿದ್ಳು. ಹಣಕ್ಕಿಂತಲೂ ಅವ್ಳಿಗೆ ಸ್ನೇಹ, ಪ್ರೀತಿನೇ ಜಾಸ್ತಿಯಾಗೋಯ್ತು. ಆದ್ರೆ… ಪಾಪ ಅವ್ಳಿಗೆ ಆ ಸುಖಾನೂ ದಕ್ಲಿಲ್ಲ. ಗೋಪಾಲನನ್ನೂ  ಕಳ್ಕೊಂಡು ಒಂಟಿ ಆದ್ಳು. ನೀನೇ ಅವಳಿಗೆ ಸರ್ವಸ್ವ ಆಯ್ತು. ನಿಂಗೋಸ್ಕರ ಅವಳು ಬದುಕಿದ್ಳು. ಬಡತನದಲ್ಲಿ ಕಷ್ಟ ಪಡ್ತಾ ನಿನ್ನನ್ನು ಬೆಳೆಸಿದ್ಳು , ಓದಿಸಿದ್ಳು . ಹೀಗೆ ಒಬ್ಬ ದೊಡ್ಡ ಮನುಷ್ಯನಾಗೂ ಮಾಡಿದಳು. ನೀನು ಈಗ ಸಂಪಾದಿಸಿರೋ ಐಶ್ವರ್ಯ, ಘನತೆ, ಗೌರವಗಳೆಲ್ಲ ಅವಳ ದುಡಿಮೆ ತ್ಯಾಗಗಳ ಫಲ. ಅವಳನ್ನು ನೀನು ಚೆನ್ನಾಗಿ ನೋಡ್ಕೋಬೇಕು. ಯಾವ ದುಃಖಾನೂ ಕೊಡಬಾರ್ದು …” ರತ್ನಮ್ಮ ಸಾಯುವುದಕ್ಕೆ ಕೆಲವು ದಿನಗಳಿಗೆ ಮೊದಲು ಮಧುಗೆ ಹೇಳಿದ್ದಳು.

ನವರಾತ್ರಿ ಹಬ್ಬ ಬಂಗಲೆಯಲ್ಲಿ ಅತೀ ಸಂಭ್ರಮದಿಂದ ನಡೆಯುವುದನ್ನು ಮಧುಗೆ ತೋರಿಸಬೇಕೆಂದು ರತ್ನಮ್ಮನಿಗೆ ಬಹಳ ಇಷ್ಟ. ಚಿಕ್ಕ ಹುಡುಗ ಮಧುನನ್ನು ಕರೆದೊಯ್ದಳು ಒಂದು ವರ್ಷ. ಬಂಗಲೆಯನ್ನು ಅಷ್ಟು ವೈಭವವಾಗಿ ಮಧು ಎಂದೂ ಕಂಡಿರಲಿಲ್ಲ. ಬಂಗಲೆಯ ಹೊರಗಿಗಿಂತ ಒಳಗೆ ದೀಪಾಲಂಕಾರ, ಬಣ್ಣ ಬಣ್ಣದ ಬೊಂಬೆಗಳ ಸಾಲು, ಅಲ್ಲಿನ ದೊಡ್ಡವರು ಜರ್ಬಾಗಿ ಉಡುಪು ಧರಿಸಿಕೊಂಡು ಓಡಾಡುತ್ತಿದ್ದುದು, ಅವನ ವಯಸ್ಸಿನ ಮಕ್ಕಳು ಹೊಸ ಬಟ್ಟೆ ಧರಿಸಿ ಮಹಡಿ ಹತ್ತಿ ಇಳಿಯುತ್ತಿದ್ದುದನ್ನೆಲ್ಲಾ ಅವನು ನೋಡಿದಾಗ ಆ ಮನೆ ತನ್ನದು, ತಾನೂ ಈ ಮನೆಗೆ ಸೇರಿದವನು ಎನ್ನಿಸಿತ್ತು.

ಆ ಮಕ್ಕಳ ಸಂಗಡ ಆಡಲು ಹೋದಾಗ, ಎಲ್ಲಿದ್ದರೋ ರಾಮ ಹೆಗ್ಡೆಯವರು ಕೆಂಗಣ್ಣು ಮಾಡುತ್ತಾ, ದೊಡ್ಡ ಮೀಸೆ ಹುರಿ ಮಾಡುತ್ತಾ ಅಬ್ಬರಿಸುತ್ತಾ ಬಂದಿದ್ದರು. ಮಧುನನ್ನು ಸ್ನೇಹದಿಂದ ಕಂಡು ಮಾತನಾಡಿಸಿದ್ದ ಆ ಮನೆಯ ಹುಡುಗಿ ಚಂದ್ರಿಕಾ ತಾತನನ್ನು ನೋಡಿ ಬೆದರಿ ದೂರ ನಿಂತಿದ್ದಳು. ಕೂಡಲೇ ರಾಮ ಹೆಗ್ಡೆಯವರು ಮಧುನನ್ನು ಎಳೆದು ಬೀದಿಗೆ ದಬ್ಬಿದ್ದರು. ಅವನ ಕೈಯಲ್ಲಿದ್ದ ತಿಂಡಿಯ ತಟ್ಟೆಯನ್ನು ಕಿತ್ತೆಸೆದರು.” ಭಿಕಾರಿಗಳಿಗೆಲ್ಲ ಇಲ್ಲಿ ಜಾಗಾ ಇಲ್ಲ. ನಡೆ ಹೊರಗೆ ” ಎಂದಿದ್ದರು. ಚಂದ್ರಿಕಾ ಬೆಪ್ಪಾಗಿ ಅವನನ್ನು ನೋಡುತ್ತಿದ್ದಂತೆ ಮಧು ರತ್ನಮ್ಮನನ್ನೂ ಮರೆತು ಕಣ್ಣೀರು ಸುರಿಸುತ್ತ ಅಮ್ಮನ ಹತ್ತಿರ ಬಂದಿದ್ದ. ಅಮ್ಮನ ಮಡಿಲಲ್ಲಿ ಮಲಗಿ ಅತ್ತಿದ್ದ.

ಫೋಟೋ ಕೃಪೆ : desiblitz

ಜಾನಕಿ ದೀಪ ಆರಿಸಿ ಹೋಗಿದ್ದರೂ ಮಧುಗೆ ನೆನಪುಗಳು ನಿದ್ದೆ ಮಾಡಲು ಬಿಟ್ಟಿರಲಿಲ್ಲ. ಚಿಕ್ಕಂದಿನಿಂದ ನಡೆದದ್ದೆಲ್ಲ ನೆನಪಿಗೆ ಬರುತ್ತಿದ್ದವು. “ನೀನು ಆ ಮನೆಯವರಿಗೆ ಬೇಡದವನಾಗಿರಬಹುದು ಆದ್ರೆ … ಭಿಕಾರಿ ಅಲ್ಲ. ಹಾಗೆ ಆಗೋಕ್ಕೆ ನಾನು ಬಿಡೋಲ್ಲ” ಎಂದು ಜಾನಕಿ ಮಗನನ್ನು ಜೀವನದ ಒಂದೊಂದು ಹಂತದಲ್ಲೂ ಮೇಲೇರಿಸಿದ್ದಳು. ಮಧು ತಾಂತ್ರಿಕ ನಿಪುಣನಾದ. ದೊಡ್ಡ ಓದು ಓದಿದ. ತನ್ನದೇ ಆದ ಕಾರ್ಖಾನೆ, ವ್ಯಾಪಾರ ವಹಿವಾಟು ಪ್ರಾರಂಭಿಸಿ ಹಂತಗಳನ್ನು ಬೇಗ ಬೇಗ ದಾಟಿದ. ಈಗ ಅವನು ಸಮಾಜದ ಅತಿಗಣ್ಯ ವ್ಯಕ್ತಿಗಳಲ್ಲೊಬ್ಬ. ದೊಡ್ಡ ಶ್ರೀಮಂತ ವರ್ಗ ಗೌರವಿಸುವ ವ್ಯಕ್ತಿ. ಮಧು ಈಗ ತಾಯಿಯನ್ನು ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿಸುತ್ತಿದ್ದಾನೆ. ಅವಳು ದುಃಖಗಳೆಲ್ಲವನ್ನೂ ಮರೆಯುವಂತೆ ಆಧಾರ ಸ್ತಂಭವಾಗಿ ನಿಂತಿದ್ದಾನೆ. ತನ್ನ ತವರನ್ನು ಮರೆತ ತಾಯಿ, ಆ ವಂಶದ ಏರಿಳಿತಗಳನ್ನು ಕಂಡು ತಿಳಿದು ಸುಮ್ಮನಿರಲು ಸಾಧ್ಯವಾಗಲಿಲ್ಲ.

ಆ ಮನೆಗೆ ಅದೇನು ಗರ ಬಡಿಯಿತೋ. ಮಕ್ಕಳೆಲ್ಲ ಆಸ್ತಿಗಾಗಿ ತಂದೆಯೊಂದಿಗೆ ಜಗಳವಾಡಿದರು. ದೊಡ್ಡಸ್ಥಿಕೆ ಉಳಿಸಿಕೊಳ್ಳಲು ರಾಮ ಹೆಗ್ಡೆಯವರು ಹಿಂದಿನ ವೈಭವ ಮುಂದುವರಿಸಲು ಪ್ರಯತ್ನಿಸಿದರು. ಮಕ್ಕಳು ಮಾಡಿದ ಸಾಲ ಸೋಲ ಅವರ ತಲೆಯ ಮೇಲೆ  ಬಂದಿತು. ಸಾಲ ತೀರಿಸಲು ರಾಮ ಹೆಗ್ಡೆಯವರ ಸರ್ವಸ್ವವೂ ಖರ್ಚಾಯಿತು. ಕೋರ್ಟು ಕಚೇರಿಗಳಿಗೆಂದು ಬೇಕಾದಷ್ಟು ಕರಗಿಹೋಯಿತು. ಬಂಗಲೆಯ ಮೇಲೂ ದೊಡ್ಡ ಸಾಲವಾಯಿತು. ತೀರಿಸುವ ಗಡುವು ತೀರಿಹೋಗಿ ಈಗ ಬಂಗಲೆ ಹರಾಜಿಗೆ ಬಂದಿದೆ. ಆ ವಂಶದವರೆಲ್ಲರ ಗೌರವ ಹರಾಜಾಗಲಿದೆ. ಇವರಿಗೆಲ್ಲ ಹೀಗೇ ಆಗಬೇಕು ಎನ್ನಿಸಿತ್ತು ಮಧುಗೆ. ಆದರೆ ತಾಯಿ ಮನಸ್ಸಿನಲ್ಲೇ ಗೋಳಾಡುತ್ತಿರುವುದು ಅವನಿಗೆ ಚೆನ್ನಾಗಿ ಅರ್ಥವಾಗಿತ್ತು.

ಎರಡೇ ದಿನಗಳ ಹಿಂದೆ ರಾಮ ಹೆಗ್ಡೆಯವರು ಇವನ ಮನೆ ಹೊಸ್ತಿಲು ತುಳಿದು ಬಂದು ಮೊದಲ ಸಲ ಮಗಳು, ಮೊಮ್ಮಗನ ಮುಂದೆ ನಿಂತಿದ್ದರು. ಅವರ ಜೋಲು ಮುಖ, ಬಣ್ಣ ಕಳೆದುಕೊಂಡ ವ್ಯಕ್ತಿತ್ವ ಕಂಡೇ ಜಾನಕಿ ಅರ್ಧ ಕುಸಿದಿದ್ದಳು. ತಂದೆಯನ್ನು ಬಿಗಿದಪ್ಪಿಕೊಂಡಿದ್ದಳು. ಅವರನ್ನು ಕೂರಿಸಿ ಸಾಂತ್ವನಗೊಳಿಸಿದ್ದಳು. ಮಧು ಬಂದು ಅಮ್ಮನ ಹತ್ತಿರ ಕುಳಿತು ತಾತನನ್ನೇ ನೋಡಿದ್ದ. ”ನಾಳೆ ಬಂಗ್ಲೆ ಹರಾಜು ಆಗ್ತಿದೆ. ಹಿರಿಯರ ಆಸ್ತಿ, ವಂಶದ ಗೌರವ ಹೋಗ್ತಿದೆ…” ತಲೆ ಬಗ್ಗಿಸಿಕೊಂಡೇ ರಾಮ ಹೆಗ್ಡೆಯವರು ಮಾತನಾಡಿದ್ದರು. “ಈಗ ನಿನ್ನ ಮಗ ಏನಾದ್ರೂ ಮಾಡ್ಬೇಕು…” ಎಂದಿದ್ದರು. ಜಾನಕಿ ಮಗನ ಮುಖವನ್ನೇ ನೋಡಿದ್ದಳು. ಅವಳ ಕಣ್ಣುಗಳಲ್ಲೂ ಕಣ್ಣೀರು ಧಾರೆ .

ಮಧು ನೆನಪುಗಳ ಕಾಡುವಿಕೆಯಲ್ಲಿ ರಾತ್ರಿಯೆಲ್ಲ ಹೊರಳಾಡಿದ್ದ. ಈ ವಂಶದ ಜಂಭ ಕೊನೆ ಕಾಣುತ್ತದೆ. ಅಹಂಕಾರಕ್ಕೊಂದು ಫಲ ಸಿಗಲಿದೆ. ಹಾಗೆ ಮಾಡಿದವರು ಹೀಗೆ ಅನುಭವಿಸಲೇಬೇಕು ಎಂದುಕೊಂಡಿದ್ದ. ತನ್ನ ತಾಯಿಯ ಯೌವನದ ಬದುಕನ್ನು ಚಿವುಟಿ ಹಾಕಿದ ಜನ, ತನ್ನನ್ನುಕತ್ತು ಹಿಡಿದು ಹೊರದಬ್ಬಿದ ಜನ ಇದನ್ನು ತಿಳಿಯಲಿ. ಅವರ ಕಾಲ ಆಗಿ ಹೋಯಿತು. ಇದೀಗ ನನ್ನ ಕಾಲ ಎಂದುಕೊಂಡ. ಮರುದಿನ ಬೆಳಕಾಗುತ್ತಿದ್ದಂತೆಯೇ ಜಾನಕಿ ಮಗನ ಮುಂದೆ ಬಂದು ನಿಂತಿದ್ದಳು. ಮಗನಿಗೆ ಯಾವ ಬಲವಂತವನ್ನೂ ಮಾಡದೆ, ಮನಸ್ಸಿನೊಳಗೆ ಬಂದು ತುಂಬಿಕೊಂಡ ತವರಿನ ದುಃಖವನ್ನು ಭರಿಸಲಾಗದ ಸಂಕಟದ ಅಸಹಾಯಕತೆ ಅವಳದು. ಹೊರಬಾಗಿಲಿಗೂ, ತನ್ನ ರೂಮಿಗೂ ಅವಳು ಚಡಪಡಿಸುತ್ತಾ ಓಡಾಡುವುದನ್ನೇ ಮಧು ಗಮನಿಸಿದ.

ಫೋಟೋ ಕೃಪೆ : 123RF

ಯಾವುದೋ ನಿಮಿಷದಲ್ಲಿ  ಡಂಗುರದ ಸದ್ದು ಕೇಳಿಸತೊಡಗಿತು. ಬಂಗಲೆ ಹರಾಜು ವೇಳೆ ಹತ್ತಿರವಾಯಿತೆಂದು ಸೂಚಿಸುವ ಸದ್ದು. ಜಾನಕಿಯ ಕಣ್ಣೀರು ಧಾರಾಕಾರವಾಯಿತು. ಮಧು ಉಡುಪು ಧರಿಸಿಕೊಂಡ. ” ಬಾ…ಮ್ಮ… ಅಲ್ಲಿಗೆ ಹೋಗೋಣ… “ಎಂದು ಬಲವಂತವಾಗಿ ತಾಯಿಯನ್ನು ಹೊರಡಿಸಿದ. ಮನೆ ಮುಂದಿನ ಪೋರ್ಟಿಕೋದಲ್ಲಿದ್ದ ವಿದೇಶಿ ಕಾರು ಬಾಗಿಲು ತೆಗೆದು ತಾನೇ ಅವಳನ್ನು ಒಳಗೆ ಹತ್ತಿಸಿದ.” ಬಂಗ್ಲೆಯ ಕಡೆ ನಡೆ “ಎಂದು ಡ್ರೈವರನಿಗೆ ಹೇಳಿದ. ಬಂಗಲೆಯ ಮುಂದೆ ಆ ಊರಿನವರೆಲ್ಲ ಬಂದು ತುಂಬಿದಂತಿತ್ತು. ಆ ವಂಶದವರ ಗೌರವ ಧೂಳೀಪಟವಾಗುವುದು ಎಲ್ಲರಿಗೂ ಬೇಕಾಗಿತ್ತು ಅನ್ನುವ ಹಾಗೆ, ಹೊರ ಬಾಗಿಲು ಮುಂದಿನ ಸೋಫಾವೊಂದರಲ್ಲಿ ರಾಮ ಹೆಗ್ಡೆಯವರು ತಲೆ ಬಗ್ಗಿಸಿ ಕುಳಿತುಕೊಂಡಿದ್ದರು. ಅವರೊಬ್ಬರೇ  ಒಂಟಿಯಾಗಿ, ಯಾವ ಮಕ್ಕಳು, ಮೊಮ್ಮಕಳ ಜೊತೆಯೂ ಇಲ್ಲದೆ  ಬದುಕಿನಲ್ಲಿ ಮೊದಲ ಬಾರಿಗೆ ನಿಸ್ತೇಜರಾಗಿ ಕುಳಿತಿದ್ದರು.

ಸರ್ಕಾರಿ ಅಧಿಕಾರಿ ಹರಾಜು ಮೊದಲು ಮಾಡಿದ್ದ ಐದಾರು ಲಕ್ಷ ರೂಪಾಯಿಗಳಿಂದ ಹತ್ತು ಲಕ್ಷಕ್ಕೆ ಬಂದಿದ್ದ. ಗುಂಪಿನ ಮಧ್ಯದಿಂದ ಯಾರೋ ಹದಿನೈದು ಲಕ್ಷ ಎಂದು ಕೂಗಿದ್ದರು. ಅಷ್ಟರಲ್ಲಿ” ಇಪ್ಪತ್ತೈದು ಲಕ್ಷ …!!!” ಊರಿನವರೆಲ್ಲ ಥಟ್ಟನೆ ತಿರುಗಿ ನೋಡಿದರು. ಮಧು ಕಾರಿನಿಂದ ಇಳಿದು ಬರುತ್ತಾ ಕೂಗಿದ್ದ. ಜಾನಕಿ ಮೆಚ್ಚುಗೆ, ಹೆಮ್ಮೆಯಿಂದ ಮಗನ ಮುಖ ನೋಡಿದ್ದಳು. ತಲೆ ಬಗ್ಗಿಸಿಕೊಂಡು ಕುಳಿತಿದ್ದ ರಾಮ ಹೆಗ್ಡೆಯವರು ಥಟ್ಟನೆ ಎದ್ದು ನಿಂತರು. ಅವರ ವಯಸ್ಸಾದ ದೇಹ ಅಲುಗಾಡಿತು. ತಲೆ ತಲಾಂತರದಿಂದ ಶ್ರೀಮಂತರ ಮನೆಯಾಗಿದ್ದ ಆ ಊರಿನ ಭಾರೀ ಬಂಗಲೆ ಮಧುವಿನ ವಶಕ್ಕೆ ಬಂದಿತು. ತನ್ನನ್ನು, ತನ್ನ ತಾಯಿಯನ್ನೂ ಹೊರಗಟ್ಟಿದವರನ್ನು ಹೊರಗಟ್ಟಿ ತಾನೀಗ ಅದನ್ನು ತನ್ನದಾಗಿಸಿಕೊಳ್ಳಬೇಕು.” ಭಿಕಾರಿಗಳಿಗೆ ಜಾಗ ಇಲ್ಲ ಹೊರಡು ” ಎಂದು ಅಬ್ಬರಿಸಿದವರನ್ನು ರಸ್ತೆಗಿಳಿಸಿ ಭಿಕಾರಿಯನ್ನಾಗಿ ಮಾಡಬೇಕು. ಮಧು ತಾಯಿಯೊಂದಿಗೆ ಮೊದಲ ಬಾರಿಗೆ ಹಕ್ಕಿನೊಂದಿಗೆ ಆ ಮನೆಯೊಳಗೆ ಕಾಲಿಟ್ಟ.

ರಾಮ ಹೆಗ್ಡೆಯವರು ಅವನ ಹತ್ತಿರ ಬಂದರು.” ಮಗೂ…ನಿನ್ನನ್ನ ಮಾತಾಡ್ಸೋ ಹಕ್ಕನ್ನೂ ನಾನು ನನ್ನ ನಡವಳಿಕೆಯಿಂದ ಕಳೆದುಕೊಂಡುಬಿಟ್ಟಿದ್ದೀನಿ. ಒಬ್ಬರಿಗೆ ಜೀವನದಲ್ಲಿ ಬುದ್ಧಿ ಬರೋಕೆ ಸರ್ವನಾಶ ಆಗ್ಬೇಕಾದದ್ದಿಲ್ಲ. ಆದ್ರೆ, ನನ್ನ ವಿಷ್ಯದಲ್ಲಿ ಹೀಗಾಯ್ತು. ನಾನು ಈಗ ಬೀದಿ ಪಾಲಾಗಿದ್ರೂ ಈ ವಂಶದ ಗೌರವ ಉಳ್ಸಿದೆ.ಇದಿನ್ನು ನಿಂದು. ನಾನು ಹೋಗ್ತೀನಿ…”ಎಂದು ತಾತ ಹೊರಗೆ ಹೆಜ್ಜೆ ಹಾಕಿದ್ದನ್ನು ಮಧು ನೋಡಿದ. ಎಲ್ಲಾ ಆಗಿ, ಏನೂ ಇಲ್ಲವಾಗಿ, ಬಾಳಿನಲ್ಲಿ ಕುಸಿದಿದ್ದರೂ ಆ ಧೀಮಂತ ನಿಲುವು. ವಂಶದ ಘನತೆ ಉಳಿಯಬೇಕೆಂದು ಮಗಳನ್ನು ಕಳೆದುಕೊಂಡ ಹಾಗೆ ಬಂಗಲೆಯನ್ನು ಕಳೆದುಕೊಂಡಿದ್ದರೂ, ರಕ್ತದಲ್ಲಿ ಹರಿಯುತ್ತಿರುವ ಆ ಘನತೆ, ಗಾಂಭಿರ್ಯ ಮಧು ಅವರ ಮುಖವನ್ನೇ ನೋಡುತ್ತಾ ನಿಂತ. ಆ ಮುಖದಲ್ಲೀಗ ಒಂದಿಷ್ಟು ಗೆಲುವು ಕಾಣಿಸಿತ್ತು.

ಫೋಟೋ ಕೃಪೆ : Istock

ಮೊದಲ ಬಾರಿಗೆ ಮಧು ಮಾತನಾಡಿದ. “ತಾತಾ, ನಮ್ಮೆಲ್ಲರ ಜೀವನದಲ್ಲಿ ಏನೇನೋ ಆಗೋಯ್ತು. ನಿಮಗೂ ರಕ್ತ ಸಂಬಂಧಕ್ಕಿಂತ ವಂಶದ ಗೌರವಾನೆ  ಮುಖ್ಯವಾಯ್ತು. ಗಟ್ಟಿ ಮನಸ್ಸು ಮಾಡಿ ನೀವು ವಂಶದ ಗೌರವಾನ ಉಳಿಸಿದ್ರಿ. ಆದ್ರೆ, ನಿಮ್ಮನ್ನು ರಸ್ತೆ ಪಾಲು ಮಾಡಿ ನನ್ನ ಘನತೆಯನ್ನು ಕಳೆದುಕೊಳ್ಳೋದಿಕ್ಕೆ ನಂಗೆ ಇಷ್ಟವಿಲ್ಲ. ಈ ಬಂಗ್ಲೆ ನಿಮ್ಮದು. ಯಾವಾಗಲೂ ನಿಮ್ಮದೇ ..!! ” ರಾಮ ಹೆಗ್ಡೆಯವರ ಕಣ್ಣುಗಳಿಂದ ಬಳ ಬಳನೆ ನೀರು ಸುರಿಯಿತು. ಜಾನಕಿ ಸುಮ್ಮನೆ ನಿಂತಳು. ತಂದೆಯ ದೊಡ್ಡಸ್ತಿಕೆಗಿಂತಲೂ ದೊಡ್ಡತನ ಪ್ರದರ್ಶಿಸಿದ ಮಗನ ಬಗ್ಗೆ ಅವಳಿಗೆ ಹೆಮ್ಮೆ ಅನಿಸಿತು. ” ಮಧು, ನಾವು ಬಂದ ಕೆಲಸ ಆಯ್ತು. ಈ ವಂಶದ ಗೌರವ ಉಳಿಯಿತು. ಇನ್ನು  ನಮಗಿಲ್ಲೇನೂ ಕೆಲಸ ಇಲ್ಲ. ನಡೆ ಹೋಗೋಣ ” ಎಂದಳು.

ತಮಗೆ ಹೊಸ ಬದುಕು ಕೊಟ್ಟು ಮೊಮ್ಮಗ, ಮಗಳು ಕಾರು ಹತ್ತಿ ತಮ್ಮಿಂದ ದೂರ ದೂರ ಹೋಗುವುದನ್ನೇ ನೋಡುತ್ತಾ ರಾಮ ಹೆಗ್ಡೆಯವರು ನಿಂತರು. ಅವರನ್ನು ಕೂಗಿ ಕರೆಯಬೇಕು ಎನಿಸಿದರೂ, ಅದೇಕೋ ಮಾತೇ ಹೊರಡಲಿಲ್ಲ.

  • ಪ್ರಭಾಕರ್ ತಾಮ್ರಗೌರಿ

5 1 vote
Article Rating

Leave a Reply

1 Comment
Inline Feedbacks
View all comments
ರಘುರಾಂ

Very touching.

Home
News
Search
All Articles
Videos
About
1
0
Would love your thoughts, please comment.x
()
x
%d
Aakruti Kannada

FREE
VIEW