ಫೈಜ್ನಟ್ರಾಜ್ ಅವರು ಎದೆಯೊಳಗೆ ತಲ್ಲಣ’, ‘ಮಂತ್ರದಂಡ’, ‘ಬುದ್ಧನಾಗ ಹೊರಟು’ ಸೇರಿದಂತೆ ಕನ್ನಡದಲ್ಲಿ ಬಹಳಷ್ಟು ಕವನ ಸಂಕಲಗಳನ್ನುತಂದಿದ್ದಾರೆ. ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ಕೆಳದಿ ಚನ್ನಮ್ಮ ಕಟ್ಟಿಸಿದ ಕೋಟೆಯ ಊರು ಚನ್ನಗಿರಿ ತಾಲ್ಲೂಕಿನ ಸಂತೆಬೆನ್ನೂರಿನವರು. ವೃತ್ತಿಯಲ್ಲಿ ಕನ್ನಡ ಅಧ್ಯಾಪಕರಾಗಿದ್ದಾರೆ. ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…
ಚಳಿಗಿಷ್ಟು ಬೆಂಕಿ ಹಾಕ
ಕಣ್ಣ ಬೆಂಕಿಗೂ ಜಗ್ಗದ ಚಳಿಗೆ
ತೋಳಬಂಧಿ ಉತ್ತರ !
ವಿರಸ, ವಿರಹ ಈ’ ಕಾಲ’ ದಲ್ಲಾ
ಛೆ, ಛೆ ಬಿಡ್ತು ಅನ್ನಿ!
ಎದೆಗೊರಗಿದ ಎದೆಗೆ
ಮಾತುಗಳ ಬಂಧದ ಜರೂರಿಯಿಲ್ಲ!
ಕೋರ್ಟ್ ಚಳಿಗಾಲದ ಅಧಿವೇಶನಕೆ ಬಂದಂತೆ
ಮತ್ಯಾಕೋ ಅಗಲುವ ಅರ್ಜಿ !
ಯಾವ ಹಾಡೂ ಕೆಲಸಕೆ ಬಾರದು
ಚಳಿ ಚಳಿಯ…ಹೊರತಾಗಿ!
ಬಂಧನವೆಂದರೆ ಸಿನಿಮಾ ಅಂದವರಾರು..
ಇಬ್ಬರೋ…ಒಬ್ಬರೋ ಅನ್ನುವಂಥಾ ಬೆಸುಗೆ!
ಧಿಗ್ಗನೆದ್ದ ಬೆಂಕಿಗೆ
ಆರೋ ವ್ಯಾಲಿಡಿಟಿ ಇದೆ ಈ ಚಳಿ ಬೆಂಕಿಗೆ?
ಎಣಿಸುತ್ತಾ ಕೂತರೆ ಮಗ್ಗಿ ಪುಸ್ತಕ
ಮುಗಿದೀತು ಚುಂಬನ- ಗಣಕಯಂತ್ರಕೆ ಹೊಂದುವುದಲ್ಲ!
ಬಿಡಿ ಸಾಕು ಅನ್ನವವರ ತಂದು
ಗುಂಡಿಕ್ಕಿ ಚಳಿಯೇ ಐವಿಟ್ನೆಸ್ ಆಗಿಬಿಡಲಿ!
ಚಳಿಗೆ ನಡುಗದ, ಒಲವ ಉರಿಗೆ
ಸುಡದ ಜೀವಿಗಳ ತಂದು ಗ್ಯಾಸ್ ಸ್ಟೌ ಮೇಲಿಕ್ಕಿ!
ಒಲವೇ ನೀ ಸತ್ತರೂ ಸಾಯಿ
ಆದರೆ ಚಳಿಗೆ ಚೂರು ಆಯಸ್ಸು ಜಾಸ್ತಿ ಕೊಡು!
ನೀ …
ಫೋಟೋ ಕೃಪೆ : google.com
ನೀ ದೂರಾದಷ್ಟು ಚಂದ
ನೀ ಎದುರಿಗಿದ್ದಷ್ಟು ಹಿತ
ನೀ ಹೆಗಲೇರದಿದ್ದರೆ ಖುಷಿ
ನೀ ಸಿಗದಿದ್ದರೆ ಕಷ್ಟ
ನೀ ಎದುರಾದರೆ ದ್ವಂದ್ವ
ನೀ ನಾನಾಗದಿದ್ದರೆ ಒಳ್ಳೆಯದು
- ಸಂತೆಬೆನ್ನೂರು ಫೈಜ್ನಟ್ರಾಜ್ (ಕವಿ, ಕತೆಗಾರ)