“ಅಕ್ಕರೆಯಿಂದವ್ವ ಕರೆದಾಗ” ಕವನ

ಮುದ್ನಾಳ ಯಾದಗಿರಿ ಜಿಲ್ಲೆಯ ಸರಕಾರಿ ಪ್ರಥಮ ದರ್ಜೆಯ ವಸತಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಶೋಕ ಕುಮಾರ ಎಸ್ ಅವರ ರಚನೆಯ ಒಂದು ಕವನವನ್ನು ತಪ್ಪದೆ ಮುಂದೆ ಓದಿ…

ಅಕ್ಕರೆಯಿಂದ ಅವ್ವ ಕರೆದಾಗ
ಬಿಸಿರೊಟ್ಟಿ ಮ್ಯಾಗ ಎಣ್ಣಿ ಸವರಿ ಕೊಟ್ಟಾಗ
ಮನದಾಸೆ ಅರಿತು ಇನ್ನು ಬೇಕೆಂದು ಕೇಳಿದಾಗ.

ಹೊಗೆ ಹತ್ತಿ ಕಣ್ಣೀರು ಸುರಿವಾಗ
ಕೊಳವೆಯಿಲ್ಲದೆ ಬಾಯಿಂದೊಲೆ ಊದಿದಾಗ
ಹೊಗೆ ಹತ್ತಿ ಕಣ್ಣುರಿದು ಕಣ್ಣೀರು ಧಾರೆಗಟ್ಟಿದಾಗ.

ಧಗೆಯ ಬೆವರು ಸುರಿದಾಗ
ಕಪ್ಪುಹೊಗೆ ಮೂಗು ಸೇರಿದಾಗ
ಫುಪ್ಪಸದ ಉಬ್ಬಸು ಹೊರ ಹಾಕಿದಾಗ.

ಕಾಲುವೆ ತೋಡಿ ಕೈಗುಳ್ಳೆ ಎದ್ದಾಗ
ತೋಡಿದ ಕಾಲ್ವೆಯಲ್ಲಿ ಕಾಲ್ಜಾರಿ ಬಿದ್ದಾಗ
ಚಳಿಜ್ವರ ಬಂದು ಕೌದಿ ಹೊದ್ದು ಮಲಗಿದಾಗ.

ಅಪ್ಪ ದುಡಿದು ತಂದ ನುಚ್ಚಕ್ಕಿಯಾಗ
ಅವ್ವ ಹರಳು ಹೆಕ್ಕುತ್ತಾಳ ಹಾಕಿ ಮೊರದಾಗ
ಬಡ ಬದುಕು ಸಾಗುತ್ತಾದ ಕಡು ಬಡತನದಾಗ.

ಅವ್ವ ಸೊಂಟಕ್ಕೆ ಸೆರಗು ಸುತ್ತಿದಾಗ
ರಣಬಿಸಿಲು ಅವ್ವನ ತಲೆ ಸುಡುತ್ತಿರುವಾಗ
ಮರುಗಿದಪ್ಪನ ಮನಸು ನೆರಳಂತೆ ನೆರವಾದಾಗ.

ಬರಿಗಾಲು ಕಲ್ಲಿಗೆ ತಟ್ಟಿದಾಗ
ಕಾಲ ಬೆರಳೊಡೆದು ರಕ್ತ ಸುರಿವಾಗ
ಅವ್ವ ಓಡೋಡಿ ಬಂದೆದೆಗವಚಿಕೊಂಡಾಗ.

ಇದ್ದನ್ನ ಮಕ್ಕಳಿಗಿಕ್ಕಿ ತಣ್ಣೀರು ಕುಡಿದಾಗ
ನಿದ್ದೆಬಾರದ ಕಣ್ಣು ನಕ್ಷತ್ರ ಎಣಿಸುತ್ತಿರುವಾಗ
ದುಃಖ ಉಮ್ಮಳಿಸಿ ಕಣ್ಣಂಚು ತುಂಬಿ ಬಂದಾಗ.

ಅವ್ವ ಮರುಗುತ್ತಿದ್ದಳು ಮನಸಿನಾಗ
ಅಪ್ಪ ಸುಖವ ಕಾಣಲಿಲ್ಲ ತನ್ನ ಬಾಳಿನಾಗ
ಮಕ್ಕಳಿಗಾಗಿ ನೋವು ನುಂಗಿದರು ಎದೆಯೊಳಗ.


  • ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ- ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ ಯಾದಗಿರಿ ಜಿಲ್ಲೆ. ಜಿಲ್ಲಾಧ್ಯಕ್ಷರು ಸಿರಿಗನ್ನಡ ವೇದಿಕೆ ಯಾದಗಿರಿ ಜಿಲ್ಲಾ ಘಟಕ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading