ರುದ್ರಾವರ್ತ್ ಕುಂಡ

ರುದ್ರಾವರ್ತ್ ಕುಂಡ ಇದೊಂದು ವಿಸ್ಮಯಕಾರಿ ಕುಂಡ. ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ನೈಮಿಶಾರಣ್ಯದಿಂದ ಸ್ವಲ್ಪ ದೂರದಲ್ಲಿರುವ ಈ ಕುಂಡವನ್ನು ರುದ್ರಾವರ್ತ್ ಕುಂಡ ಎನ್ನುವ ಹೆಸರಿನಿಂದ ಕರೆಯುತ್ತಾರೆ. ವಸಂತ ಗಣೇಶ್ ಅವರು ರುದ್ರಾವರ್ತ್ ಕುಂಡ ದ ಬಗ್ಗೆ ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….

ಇದು ಇರುವುದು ಸೀತಾಪುರ ಜಿಲ್ಲೆಯ ನೀಮ್ಸರ್ ನಿಂದ ಸುಮಾರು 7 ಕಿಲೋ ಮೀಟರ್ ದೂರದಲ್ಲಿರುವ ಅರ್ಬಾಪುರ ಎನ್ನುವ ಹಳ್ಳಿಯಲ್ಲಿ ಹರಿಯುವ ಗೋಮತಿ ನದಿಯ ದಡದಲ್ಲಿ. ಇದೊಂದು ಸಣ್ಣ ಕೊಳ.

ಈ ಕುಂಡದ ವಿಶೇಷ ಏನೆಂದರೆ ನಾವು ಈಶ್ವರನ ಧ್ಯಾನ ಮಾಡುತ್ತಾ ಬಿಲ್ವಪತ್ರೆಯನ್ನು ನೀರಿನಲ್ಲಿ ಅರ್ಪಿಸಿದರೆ ಆ ಬಿಲ್ವಪತ್ರೆಯು ನೀರಿನಲ್ಲಿ ಮುಳುಗುತ್ತದೆ. ಮತ್ತು ಇದು ಮುಳುಗುವುದನ್ನು ನಾವು ಕಣ್ಣಾರೆ ನೋಡಬಹುದು. ನಾವು ಹಾಲನ್ನು ಕೊಳದಲ್ಲಿ ಹಾಕಿದರೆ ಆ ಹಾಲು ನೀರಿನ ಜೊತೆಯಲ್ಲಿ ಪೂರ್ತಿಯಾಗಿ ಬೆರೆಯುವುದಿಲ್ಲ, ಅದೂ ಕೂಡ ಕೊಳದ ತಳದತ್ತ ಹೋಗುವುದನ್ನು ಕಾಣಬಹುದು.

ಮೂರನೆಯದಾಗಿ ಈ ಕುಂಡದಲ್ಲಿ ಐದು ಬಗೆಯ ಹಣ್ಣುಗಳನ್ನು ನೀವು ಹಾಕಿದರೆ, ಸ್ವಲ್ಪ ಸಮಯದಲ್ಲಿ, ಒಂದು ಅಥವಾ ಎರಡು ಹಣ್ಣುಗಳು ಮೇಲೆ ಬರುತ್ತವೆ ಮತ್ತು ಉಳಿದವು ನೀರಿನಲ್ಲಿ ಮುಳುಗುತ್ತದೆ. ಇದನ್ನು ಪರೀಕ್ಷೆ ಮಾಡಲು ಕೆಲವರು ಒಂದು ಬಾಳೆಯ ಹಣ್ಣನ್ನು ಐದು ಭಾಗ ಮಾಡಿ ಹಾಕಿದರೂ ಅದರಲ್ಲಿ ಒಂದೆರಡು ಚೂರುಗಳು ಮೇಲೆ ಬಂದು ಉಳಿದವು ನೀರಿನಲ್ಲಿ ಮುಳುಗಿ ಹೋಗುತ್ತವಂತೆ.

ಇದರ ಕುರಿತಾಗಿ ಸ್ಥಳೀಯರು ಹೇಳುವುದು ಏನೆಂದರೆ ಈ ಕೊಳದ ತಳದಲ್ಲಿ ಈಶ್ವರ ಲಿಂಗವಿದೆ. ಹಾಗಾಗಿ ಇಲ್ಲಿ ನಾವು ಬಿಲ್ವಪತ್ರೆ ಮತ್ತು ಹಾಲನ್ನು ಹಾಕಿದಾಗ ತಳದಲ್ಲಿರುವ ಈಶ್ವರನಿಗೆ ಅವು ತಲುಪುತ್ತವೆ. ಹಣ್ಣುಗಳನ್ನು ಹಾಕಿದಾಗ ಒಂದೆರಡು ನಮಗೆ ಪ್ರಸಾದದ ರೂಪದಲ್ಲಿ ಮೇಲೆ ಬರುತ್ತವೆ ಮತ್ತು ಉಳಿದವು ಈಶ್ವರನಿಗೆ ನೈವೇದ್ಯ ರೂಪದಲ್ಲಿ ಅರ್ಪಿತವಾಗುತ್ತವೆ ಎಂದು.

ಇದರ ಕುರಿತು ಕಥೆ ಹೇಳುವ ಸ್ಥಳೀಯರು ಇಲ್ಲಿ, ರುದ್ರನು ತಾಂಡವ ನೃತ್ಯವನ್ನು ಮಾಡಿದ ಮೇಲೆ ಶಾಂತನಾಗಲು ಈ ಗೋಮತಿ ನದಿಯನ್ನು ಪ್ರವೇಶಿಸಿ ತಪಸ್ಸು ಮಾಡಿದನು. ಹಾಗಾಗಿ ಈ ಕುಂಡದಲ್ಲಿ ಶಿವನು ನೆಲೆಸಿದ್ದಾನೆ. ಅದೇ ಕಾರಣದಿಂದ ಈ ಕುಂಡದಲ್ಲಿ ವಿಸ್ಮಯ ನಡೆಯುತ್ತದೆ ಎಂದು ಹೇಳುತ್ತಾರೆ.


  • ವಸಂತ ಗಣೇಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading