ಪುಸ್ತಕಗಳೆಂಬ ಜ್ಞಾನದ ಬಾಗಿಲು

ಪುಸ್ತಕ ಓದುವುದು ಕೆಲವರಿಗೆ ಹವ್ಯಾಸವಾದರೆ ಮತ್ತೆ ಹಲವರಿಗೆ ಜ್ಞಾನ ವೃದ್ಧಿಗಿರುವ ದಾರಿ. ಪ್ರತಿಯೊಬ್ಬ ಅಭಿರುಚಿ ಭಿನ್ನವಾಗಿರಬಹುದು. ಆದರೆ ಆ ಓದು ಆತನ ಜ್ಞಾನದಾಹವನ್ನು ತಣಿಸುತ್ತದೆ. ಪುಸ್ತಕ ಓದುವುದರಿಂದ ನಮ್ಮ ಕಲ್ಪನಾ ಶಕ್ತಿ ಹೆಚ್ಚುವುದರ ಜತೆಯಲ್ಲಿ ಮನೋವಿಕಾಸಕ್ಕೆ ನೆರವಾಗುತ್ತದೆ. ಪುಸ್ತಕ ದಿನಾಚರಣೆ ಕುರಿತು ಡಾ.ಗುರುಪ್ರಸಾದ ರಾವ್ ಹವಲ್ದಾರ್ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ …

ಒಂದೊಂದು ಪುಸ್ತಕವು ತನ್ನದೇ ಆದ ವೈವಿಧ್ಯಮಯ ಕಥಾ ಮತ್ತು ಜ್ಞಾನ ಹಂದರವನ್ನು ಒಳಗೊಂಡಿದ್ದು, ಬೇರೆ ಬೇರೆ ಪ್ರಪಂಚದ ಅರಿವು ಮೂಡಿ ಸುತ್ತದೆ. ಒಟ್ಟಿನಲ್ಲಿ ಪುಸ್ತಕಗಳು ಕೇವಲ ಜ್ಞಾನದ ಗುಚ್ಛ ವಾಗಿರದೆ ಒಂದು ಪ್ರದೇಶದ ಭಾಷೆ, ಸಂಸ್ಕೃತಿ ಇವೆಲ್ಲವನ್ನು ಬೆಸೆಯುವ ಕೊಂಡಿಗಳಾಗಿರುತ್ತವೆ. ಪುಸ್ತಕಗಳು ನಮ್ಮ ಅಂತ ಸತ್ವದೊಂದಿಗೆ ಹೇಗೆ ಬೆಸೆಯಬೇಕೆಂದು ಭರತ ಹೀಗೆ ಹೇಳುತ್ತಾನೆ- ” ಪುಸ್ತಕಗಳು ನಮ್ಮ ಆತ್ಮದೊಳಗೆ ಹೆಪ್ಪುಗಟ್ಟಿರುವ ಕರುಣಾಂಬುಧಿಯನ್ನು ಛೇದಿಸುವ ಹಿಮಗೊಡಲಿಯಾಗಬೇಕು”.

ಪುಸ್ತಕಗಳು ಹಿಂದಿನ ಮತ್ತು ಭವಿಷ್ಯದ ನಡುವಿನ ಕೊಂಡಿಯಾಗಿ, ತಲೆಮಾರುಗಳು ಮತ್ತು ಸಂಸ್ಕೃತಿಗಳ ನಡುವಿನ ಸೇತುವಾಗಿವೆ ಎಂದರೆ ತಪ್ಪಾಗಲಾರದು. ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆ ಪುಸ್ತಕ ಉದ್ಯಮದ ಮೂರು ಪ್ರಮುಖ ಕೊಂಡಿಗಳಾದ ಪ್ರಕಾಶಕರು, ಪುಸ್ತಕ ಮಾರಾಟಗಾರರು ಮತ್ತು ಗ್ರಂಥಾಲಯಗಳನ್ನು ಪ್ರತಿನಿಧಿಸುವ ದಿನವಾಗಿದೆ. ಇವರೆಲ್ಲರೂ ಪುಸ್ತಕಗಳ ಮೂಲಕ ಸಮಾಜಕ್ಕೆ ನೀಡುತ್ತಿರುವ ಕೊಡುಗೆಯನ್ನು ನೆನಪಿಸುವ ಮತ್ತು ಇಂದಿನ ಆಧುನಿಕ ತಂತ್ರ ಜ್ಞಾನ ಜಗತ್ತಿನ ನಡುವೆಯೂ ಪುಸ್ತಕಗಳು ಉಳಿಸಿಕೊಂಡಿರುವ ಮಹತ್ವವನ್ನು ಸಾರುವ ದಿನ ಇದಾಗಿದೆ.

ಓದುವಿಕೆಯ ಅಭಿರುಚಿ ಹೆಚ್ಚಿಸಲು, ಪ್ರಕಾಶನಕ್ಕೆ ಉತ್ತೇಜನ ನೀಡಲು ಹಾಗೂ ಕೃತಿಸ್ವಾಮ್ಯಗಳ ಸಂರಕ್ಷಣೆಗಾಗಿ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪುಸ್ತಕ ದಿನಾಚರಣೆಯ ಪರಿಕಲ್ಪನೆ ಮೊದಲು ಮೂಡಿದ್ದು ಸ್ಪೈನಿನಲ್ಲಿ. ಪುಸ್ತಕ ಪ್ರೀತಿ ಬೆಳೆಸುವ ಏಕೈಕ ಉದ್ದೇಶದಿಂದ ಇದನ್ನು ಆರಂಭಿಸಿ ದವರು ಸ್ಪೈನಿನ ಪುಸ್ತಕ ವ್ಯಾಪಾರಿಗಳು. ಜನರಲ್ಲಿ ಪುಸ್ತಕ ಓದುವ ಅಭಿರುಚಿ ಬೆಳೆಸುವುದರ ಜೊತೆಗೆ ಪುಸ್ತಕ ಪ್ರಕಟಣೋದ್ಯಮವನ್ನು ಪ್ರೋತ್ಸಾಹಿಸುವುದು ಈ ಪುಸ್ತಕಾಂದೋಲನದ ಮತ್ತೊಂದು ಗುರಿ ಯಾಗಿತ್ತು. ಸ್ಪೈನಿನ ಪುಸ್ತಕ ವ್ಯಾಪಾರಿಗಳ ಈ ಆಲೋಚನೆಯ ಹಿಂದಿನ ವ್ಯಾಪಾರಿ ಹಿತಾಸಕ್ತಿ ಇತ್ತು , ಜೊತೆಗೆ ಪುಸ್ತಕ ದಿನವನ್ನು ಆಚರಿಸಬೇಕೆಂಬ ಆಲೋಚನೆ Vicente Clavel Andres ಎಂಬ ಬರಹಗಾರನಗಿತ್ತು. 17 ನೇ ಶತಮಾನದ ಪ್ರಖ್ಯಾತ ಸ್ಪೇನ್ ಬರಹಗಾರ Miguel de Cervantes ರನ್ನು ಗೌರವಿಸಬೇಕೆನ್ನುವ ಉದ್ದೇಶದಿಂದ ಅವರ ಜನ್ಮದಿನ(Oct-7) ಅಥವಾ ಮಡಿದ ದಿನ (Apr-23) ಅನ್ನು ಪುಸ್ತಕ ದಿನವನ್ನಾಗಿ ಆಚರಿಸಬೇಕೆಂದು ಸೂಚಿಸಿದ.

ಆದರೆ ಯುನೆಸ್ಕೊ ಹಾಗಾಗಿ UNESCO ಎಪ್ರಿಲ್ 23 ಪ್ರಖ್ಯಾತ ನಾಟಕಗಾರ ವಿಲಿಯಂ ಶೇಕ್ಸ್ಪಿಯರ್ ಮರಣವನ್ನು ಹೊಂದಿದ ದಿನವು ಅಂದೇ ಆಗಿದ್ದರಿಂದ ,ಅಲ್ಲದೇ ಒಂದು ಹೆಜ್ಜೆ ಮುಂದೆ ಹೋಗಿ ಜ್ಞಾನಪ್ರಸಾರ ಸಾಧನವಾಗಿ ಪುಸ್ತಕ ವನ್ನು ಮಾನ್ಯ ಮಾಡಿತು. ಜನರಲ್ಲಿ ಪುಸ್ತಕ ಬಗೆಗಿನ ಆಸಕ್ತಿ ಬೆಳೆಸುವ ಹಾಗೂ ಪುಸ್ತಕ ಪ್ರಕಟಣೋದ್ಯಮವನ್ನು ಪ್ರೋತ್ಸಾಹಿಸುವ ಧ್ಯೇಯದಿಂದ ಯುನೆಸ್ಕೊ ವಿಶ್ವ ಪುಸ್ತಕ ದಿನ ಆಚರಣೆ ಯೋಜನೆಯನ್ನು ಜಾರಿಗೆ ತಂದಿತು.

ಈ ಬಾರಿ ನಾವು 29 ನೇ ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ ಆಚರಿಸುತ್ತಿದ್ದೇವೆ.ಜನರಲ್ಲಿ ಪುಸ್ತಕಗಳ ಬಗ್ಗೆ ಆಸಕ್ತಿ ಮೂಡಿಸುವ, ಜ್ಞಾನಪ್ರಸಾರಿಸುವ ಸಲುವಾಗಿ ಪ್ರತಿ ವರ್ಷ ಒಂದು ಥೀಮ್ ಮತ್ತು ಪುಸ್ತಕ ರಾಜಧಾನಿಯನ್ನು ಆಯ್ಕೆ ಮಾಡಿ ಘೋಷಿಸುತ್ತದೆ. ಈ ಬಾರಿಯ ವಿಶ್ವ ಪುಸ್ತಕ ಮತ್ತು ಹಕ್ಕುಸ್ವಾಮ್ಯ ದಿನದ 2024 ರ ಅಧಿಕೃತ ಥೀಮ್ “ನಿಮ್ಮ ಹಾದಿಯಲ್ಲಿಯೇ ಓದಿ(Read Your Way) ” ಆಗಿದೆ. ಇದು ಜನರ ಓದುವ ಉತ್ಸಾಹವನ್ನು ಪ್ರೋತ್ಸಾಹಿಸುವ ಮತ್ತು ಓದುವಾಗ ಆಗುವ ಸಂತೋಷದ ಮಹತ್ವವನ್ನು ಥೀಮ್ ಹೇಳುತ್ತದೆ. ಪುಸ್ತಕ ದಿನಾಚರಣೆ ಅಂಗವಾಗಿ ಪ್ರತಿವರ್ಷ ವಿಶ್ವದ ಒಂದು ನಗರವನ್ನು ವಿಶ್ವದ ಪುಸ್ತಕ ರಾಜಧಾನಿಯನ್ನಾಗಿ ಯುನೆಸ್ಕೊ ಘೋಷಿಸುತ್ತದೆ.

ವರ್ಲ್ಡ್ ಬುಕ್ ಕ್ಯಾಪಿಟಲ್ ಅಡ್ವೈಸರಿ ಕಮಿಟಿಯು 2024ರ ವಿಶ್ವ ಪುಸ್ತಕ ರಾಜಧಾನಿಯಾಗಿ ಸ್ಟ್ರಾಸ್ಬರ್ಗ್, ಫ್ರಾನ್ಸ್ ವಿಶ್ವದ ಪುಸ್ತಕ ರಾಜಧಾನಿ ಪಟ್ಟದ ಗೌರವ ಪಡೆದುಕೊಂಡಿದೆ.
ಯುನೆಸ್ಕೋ ಮಹಾನಿರ್ದೇಶಕ ಆಡ್ರೆ ಅಜೌಲೆ ಹೀಗೆ ಘೋಷಿಸುತ್ತ : ‘ಇಂದಿನ ಅನಿಶ್ಚಿತ ಕಾಲದಲ್ಲಿ ಅನೇಕರು ಪುಸ್ತಕಗಳನ್ನು ಆಶ್ರಯುವ ಮತ್ತು ಕನಸುಗಳಿಗೆ ಮೂಲವಾಗಿಸುವತ್ತಾ ತಿರುಗಿದ್ದಾರೆ(In uncertain times, many are turning to books as a refuge and a source of dreams.)”.

ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನದ ಉದ್ದೇಶಗಳು ವಿಶ್ವ ಪುಸ್ತಕ ದಿನದಂದು ಪುಸ್ತಕ ಹಾಗೂ ಲೇಖಕ ಇಬ್ಬರಿಗೂ ಗೌರವ ಸಲ್ಲಿಸಲಾಗುತ್ತದೆ. ಜೊತೆಗೆ ಓದುಗರ ಸಂಖ್ಯೆಯನ್ನು ಹೆಚ್ಚಿಸುವ  ಓದುವಿಕೆಯ ಮಾಧುರ್ಯವನ್ನು ತಿಳಿಸುವ ವಿವಿಧ ಚಟುವಟಿಕೆಗಳನ್ನು ಈ ದಿನದಂದು ಹಮ್ಮಿಕೊಳ್ಳಲಾಗುತ್ತದೆ. ಯುನೆಸ್ಕೊ ನೀಡುವ ಸಹಿಷ್ಣುತೆಯ ಸೇವೆಯಲ್ಲಿ ಮಕ್ಕಳ ಮತ್ತು ಯುವಜನರ ಸಾಹಿತ್ಯ ಪುರಸ್ಕಾರವನ್ನು ಈ ದಿನದಂದು ಪ್ರಕಟಿಸಲಾಗುತ್ತದೆ. 1995 ರಲ್ಲಿ ಪ್ಯಾರಿಸ್​ನಲ್ಲಿ ನಡೆದ ಯುನೆಸ್ಕೊ ಸಾಮಾನ್ಯ ಸಭೆಯಲ್ಲಿ ಏ.23 ರಂದು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನವನ್ನು ಆಚರಿಸಲು ಘೋಷಿಸಿತು, ಕೃತಿಸ್ವಾಮ್ಯ ಎಂದರೇನು?ಲೇಖಕ ಅಥವಾ ಬರಹಗಾರರಿಗೆ ಅವರು ರಚಿಸಿದ ಬರಹ ಅಥವಾ ಇನ್ನಾವುದೇ ಮಾಹಿತಿಯ ಮೇಲೆ ಕಾನೂನಾತ್ಮಕ ಹಕ್ಕು ನೀಡುವುದೇ ಕೃತಿಸ್ವಾಮ್ಯವಾಗಿದೆ. ತನ್ನ ಕೃತಿಯನ್ನು ಪ್ರಕಟಿಸಲು ಅಥವಾ ನಕಲು ಮಾಡಲು ಮತ್ತೊಬ್ಬರಿಗೆ ಅಧಿಕಾರ ನೀಡಲು ಈ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಅಂದರೆ ಮೂಲತಃ ಇದು ಬೌದ್ಧಿಕ ಆಸ್ತಿ ಹಕ್ಕಾಗಿದೆ. ಪುಸ್ತಕ ಹಾಗೂ ಕೃತಿಸ್ವಾಮ್ಯಗಳ ರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡುತ್ತಿರುವ ಯುನೆಸ್ಕೊ ಕ್ರಿಯಾಶೀಲತೆ, ಸೃಜನಶೀಲತೆ ಮತ್ತು ವೈವಿಧ್ಯತೆಗಳಿಗೆ ಒತ್ತು ನೀಡುತ್ತಿದೆ. ಹಾಗೆಯೇ ಎಲ್ಲರಿಗೂ ಜ್ಞಾನದ ಸಮಾನ ಹಂಚಿಕೆಯಾಗುವಂತೆ ಶ್ರಮಿಸುತ್ತಿದೆ. ಸೃಜನಾತ್ಮಕ ನಗರಗಳ ಜಾಲ ನಿರ್ಮಾಣ, ಸಾಕ್ಷರತೆಯ ಉತ್ತೇಜನ, ಮೊಬೈಲ್ ಮೂಲಕ ಕಲಿಕೆ ಮತ್ತು ವೈಜ್ಞಾನಿಕ ಹಾಗೂ ಶೈಕ್ಷಣಿಕ ಜ್ಞಾನ ಸಂಪನ್ಮೂಲಗಳು ಮುಕ್ತವಾಗಿ ಲಭ್ಯವಾಗುವಂತೆ ಮಾಡುವಲ್ಲಿ ಯುನೆಸ್ಕೊ ಪ್ರಮುಖ ಪಾತ್ರವಹಿಸಿದೆ. ಸಾಹಿತ್ಯ ಕ್ಷೇತ್ರದ ಪ್ರಮುಖ ಪಾಲುದಾರರಾಗಿರುವ ಲೇಖಕ, ಪ್ರಕಾಶಕ, ಶಿಕ್ಷಕ, ಲೈಬ್ರರಿಯನ್, ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳು, ಮಾನವ ಹಕ್ಕು ಸ್ವಯಂ ಸೇವಾ ಸಂಸ್ಥೆಗಳು, ಸಮೂಹ ಮಾಧ್ಯಮ ಹೀಗೆ ಸಮಾನ ಮನಸ್ಕ ಎಲ್ಲರನ್ನೂ ಒಂದೇ ಜಾಗತಿಕ ವೇದಿಕೆಯಡಿ ತರುವುದು ಜಗತ್ತಿನಲ್ಲಿ ಕೋವಿಡ್​-19 ನಂತರ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಶಾಲೆ-ಕಾಲೇಜುಗಳು ವಿದ್ಯಾರ್ಥಿಗಳು, ಓದುಗರು,  ಇ-ಬುಕ್​ ಹಾಗೂ ಇ-ಲರ್ನಿಂಗ್​ನತ್ತ ಗಮನಹರಿಸಿದರು. ಸಂಶೋಧಕರು ಸಹ ತಮ್ಮ ಜರ್ನಲ್​ಗಳನ್ನು ಆನ್ಲೈನ್​ ಮೂಲಕ ಪ್ರಕಟಿಸುತ್ತಿದ್ದಾರೆ. ಡಿಜಿಟಲ್​ ಲೈಬ್ರರಿಗಳು ಹಾಗೂ ಪ್ರಕಾಶಕರು ಸಹ ಆದಷ್ಟೂ ಹೆಚ್ಚು ಮಾಹಿತಿಯನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡುತ್ತಿದ್ದಾರೆ. ವಿಶ್ವಾಸಾರ್ಹ ಆನ್ಲೈನ್​ ಮಾಹಿತಿಗೆ ಇನ್ನಿಲ್ಲದ ಬೇಡಿಕೆ ಬಂದಿದ್ದು, ಉತ್ತಮ ಗುಣಮಟ್ಟದ ಇ-ಬುಕ್ಸ್​, ಜರ್ನಲ್​ಗಳು ಹಾಗೂ ಶೈಕ್ಷಣಿಕ ಪಠ್ಯದ ಪ್ರಕಟಣೆಗೆ ನಾಂದಿ ಹಾಡಿದೆ.ನ್ಯಾಷನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ (NDLI) ಐಐಟಿ ಖರಗ್​ಪುರ್​ನಲ್ಲಿ ಪ್ರಧಾನ ಕಚೇರಿ ಹೊಂದಿರುವ ನ್ಯಾಷನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ದೇಶದ ಅತಿ ದೊಡ್ಡ ಆನ್ಲೈನ್​ ಕಲಿಕಾ ಪ್ಲಾಟ್​ಫಾರ್ಮ್ ಆಗಿದೆ. 48 ಮಿಲಿಯನ್​ ಇ-ಬುಕ್​ಗಳು ಹಾಗೂ ವಿವಿಧ ಕ್ಷೇತ್ರದ ಜ್ಞಾನ ಭಂಡಾರವನ್ನು ಹೊಂದಿರುವ ಈ ಪೋರ್ಟಲ್​ಗೆ ನಿತ್ಯ ಸುಮಾರು 3 ಮಿಲಿಯನ್​ ಓದುಗರು ಭೇಟಿ ನೀಡುತ್ತಾರೆ.ಯುನೆಸ್ಕೊ ಸೃಜನಾತ್ಮಕ ನಗರಗಳ ಜಾಲ (United Nation’s Creative Cities Network)ಸುಸ್ಥಿರ ನಗರ ಅಭಿವೃದ್ಧಿಗಾಗಿ ಸೃಜನಾತ್ಮಕ ಪಾತ್ರ ವಹಿಸುತ್ತಿರುವ ಜಾಗತಿಕ ನಗರಗಳ ಮಧ್ಯೆ ಸಹಕಾರ ಏರ್ಪಡಿಸುವ ದೃಷ್ಟಿಯಿಂದ 2004 ರಲ್ಲಿ ಯುನೆಸ್ಕೊ ಸೃಜನಾತ್ಮಕ ನಗರಗಳ ಜಾಲ ಆರಂಭಿಸಲಾಯಿತು. ಸೃಜನಾತ್ಮಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಸುಸ್ಥಿರ ಅಭಿವೃದ್ಧಿಗೆ ಶ್ರಮಿಸುತ್ತಿರುವ ವಿಶ್ವದ 246 ನಗರಗಳು ಈ ಜಾಲದಲ್ಲಿವೆ.

ಕನ್ನಡ ಪುಸ್ತಕದ ವಿಚಾರಕ್ಕೆ ಬಂದರೆ ಕ್ರಿ ಪೂ 2000 ವರ್ಷಗಳ ಹಿಂದಿನಿಂದಲೂ  ಹುಲ್ಲಿನ ಹಾಳೆ , ತಾಳೆಗರಿ  ಅಥವಾ ಬಿದಿರು ಪಟ್ಟೆಗಳ ಮೇಲೆ ತಮ್ಮ ಕಾವ್ಯವನ್ನು ಬರೆದು ರಾಜನ ಆಸ್ಥಾನದಲ್ಲಿ  ವಾಚಿಸುತ್ತಿದ್ದರು . ಆದಿ ಕವಿ ಪಂಪ, ರನ್ನ, ಕುಮಾರವ್ಯಾಸ,ನಿಂದ  ಕುವೆಂಪು  ಬೇಂದ್ರೆ, ಅಡಿಗ ಕಾರಂತ ಮಾಸ್ತಿ, ಕಂಬಾರ, ಕಾರ್ನಾಡ್, ಭೈರಪ್ಪ ಮುಂತಾದ ಅನೇಕ ಸಾಹಿತಿಗಳು ತಮ್ಮ ಸಾಹಿತ್ಯ ಸುಧೆಯನ್ನು ಹರಿಸಿದ್ದಾರೆ , ಸುಮಾರು ಇಲ್ಲಿಯವರೆಗೆ   ಸಾವಿರಾರು ಕನ್ನಡ ಪುಸ್ತಕಗಳು ಪ್ರಕಟವಾಗಿ ಓದುಗರ ಮನ ತಣಿಸಿ, ಜ್ಞಾನವನ್ನು  ಉಣಬಡಿಸಿವೆ.
ಪ್ರತಿವರ್ಷ ಪ್ರತಿಭಾವಂತ ಬರಹಗಾರ, ಲೇಖಕರ ಅಸಂಖ್ಯಾತ ಪುಸ್ತಕಗಳು ಪ್ರಕಟವಾಗುತ್ತಿವೆ. ಅದರೆ ಡಿಜಿಟಲ್ ಮಾದ್ಯಮದಿಂದಾಗಿ ಕನ್ನಡದಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳುವವರ ಮಧ್ಯೆ ಕನ್ನಡ ಪುಸ್ತಕಗಳ  ಸಂಖ್ಯೆ ಮತ್ತು ಖರೀದಿಸಿ ಓದುವವರು ಹೆಚ್ಚುತ್ತಿದೆ. ಇಂದು ಪುಸ್ತಕ ಗಳು ಕಂಪ್ಯೂಟರ್, ಮೊಬೈಲ್, ಟ್ಯಾಬ್ಲೆಟ್  ಕಿಂಡಲ್ ಗಳ ಮೂಲಕ  ಇ- ಪುಸ್ತಕ ರೂಪದಲ್ಲಿ, ಪಿಡಿಎಫ್ ಫೈಲ್ಗಳಾಗಿ, ಅನೇಕ ಓದುಗರಿಗೆ ತಲುಪುತ್ತಿವೆ,ಜೊತೆಗೆ ಆನ್ಲೈನ್ ಮೂಲಕ  ಪುಸ್ತಕಗಳನ್ನು  ಖರೀದಿಸಬಹುದು,
ಪುಸ್ತಕ ಪ್ರಕಟನೆಯ ಕುರಿತಂತೆ ಕನ್ನಡದಲ್ಲಿ ಯಾವುದೇ ರೀತಿಯ ಶೈಕ್ಷಣಿಕ ಕೋರ್ಸುಗಳು ಇಲ್ಲದಿದ್ದರೂ ತಮಗಿರುವ ಸೀಮಿತ ಜ್ಞಾನದಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.

ತಂತ್ರಜ್ಞಾನ ದ ಹೆಚ್ಚು ಬಳಕೆಯಿಂದಾಗಿ ಹಿಂದೆಂದಿಗಿಂತಲೂ  ಇಂದು ಮನುಷ್ಯ ಏಕಾಂಗಿತನಕ್ಕೆ, ಮಾನಸಿಕಕ್ಕೆ ಒಳಗಾಗುತ್ತಿದ್ದಾನೆ ಇದಕ್ಕೆ ಪರಿಹಾರವೆಂದರೆ ಪುಸ್ತಕಗಳನ್ನು ಓದುವುದು, ಹಿಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ. ಪುಸ್ತಕ ಓದುವುದರ ಮೂಲಕ ವಿಶ್ವ ಜ್ಞಾನ ಪಡೆಯುವುದು ಹಾಗೂ ಕ್ರಿಯಾಶೀಲತೆಯನ್ನು ಬೆಳೆಸುವುದು ಎಲ್ಲರ ಆದ್ಯತೆಯಾಗಬೇಕಿದೆ.ಅದರಲ್ಲೂ ಇಂದಿನ ಯುವ ಸಮೂಹ ಸೋಷಿಯಲ್ ಮೀಡಿಯಾದೊಂದಿಗೆ ತಮ್ಮ ಹೆಚ್ಚಿನ ಸಮಯವನ್ನು ವ್ಯಯಿಸುತ್ತಿದ್ದಾರೆ.‍‍

ಓದು ಎಂದರೆ ಕೇವಲ ಪಠ್ಯಪುಸ್ತಕದ ಓದು ಅನ್ನುವ ಮನಸ್ಥಿತಿಯಡೆಗೆ ಹೋಗುತ್ತಿದ್ದಾರೆ. ಪೋಷಕರು ಶಿಕ್ಷಕರು,ಅಧ್ಯಾಪಕರು ಕೊಂಡು ಓದುವ , ಬದುಕಿನ ದಾರಿ ತೋರುವಂತಹ ಸಾಹಿತ್ಯದ ಕುರಿತು ಅರ್ಥಮಾಡಿಸಬೇಕಿದೆ.

“ಒಂದು ಪುಸ್ತಕ ಹತ್ತು ಜನ ಸ್ನೇಹಿತರಿಗೆ ಸಮ” ಎಂಬ ಮಾತಿದೆ. ನಾವು ಏಕಾಂಗಿ ಎಂದು ಭಾವಿಸುವವರಿಗೆಲ್ಲಾ ಜೊತೆಯಾಗುವುದಕ್ಕೆ ಈ ಪ್ರಕೃತಿ ಆಗಾಗ ಅವಕಾಶಗಳನ್ನು ಮಾಡಿಕೊಡುತ್ತಿರುತ್ತದೆ. ಆದರೆ ಅದನ್ನು ತೆರದ ಮನಸ್ಸಿನಿಂದ ನೋಡಬೇಕಾದದ್ದು ಅಂತಹ ಏಕಾಂಗಿಯ ಕರ್ತವ್ಯ. ನಮ್ಮ ಜೀವನದ ಅತ್ಯುತ್ತಮ ಜೊತೆಗಾರ ಪುಸ್ತಕ  ಎಂಬುದು  ಪ್ರಸಿದ್ಧರ ಮಾತು .

ಒಬ್ಬ ವ್ಯಕ್ತಿಯ ಜ್ಞಾನವನ್ನು ಹೆಚ್ಚಿಸಲು ಮತ್ತು ಆತನ ಮನೋವಿಕಾಸಕ್ಕೆ ಪುಸ್ತಕಗಳು ನೆರವಾಗುತ್ತವೆ. ಪುಸ್ತಕಗಳು ನಮ್ಮ ಕಲ್ಪನಾ ಶಕ್ತಿಯನ್ನು ಹೆಚ್ಚಿಸುತ್ತದೆ. ಒಂದೊಂದು ಪುಸ್ತಕವೂ ತನ್ನದೇ ಆದ ಪ್ರಪಂಚವನ್ನು, ನಮಗೆ ಪರಿಚಯವಿಲ್ಲದ ಜೀವನವನ್ನು ನಮಗೆ ಪರಿಚಯಿಸುತ್ತವೆ.

ಭಾರತ ರತ್ನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಪುಸ್ತಕದ ಕುರಿತ ಅರ್ಥಗರ್ಭಿತವಾದ ಮಾತನ್ನು ಹೇಳುತ್ತಾರೆ – ” ನಿಮ್ಮ ಬಳಿ 2 ರುಪಾಯಿಗಳಿದ್ದರೆ ಒಂದು ರುಪಾಯಿಯನ್ನು ಆಹಾರಕ್ಕಾಗಿ ಬಳಸಿ. ಉಳಿದ ಇನ್ನೊಂದು ರುಪಾಯಿಯನ್ನು ಪುಸ್ತಕಕ್ಕಾಗಿ ಬಳಸಿ. ಆಹಾರವು ನಿಮ್ಮನ್ನು ಜೀವಂತವಾಗಿರುವಂತೆ ಮಾಡುತ್ತದೆ. ಪುಸ್ತಕವು ಹೇಗೆ ಜೀವಿಸಬಹುದೆಂದು ಕಲಿಸುತ್ತದೆ.’

ಪುಸ್ತಕಗಳು ಕೇವಲ ನಿರ್ಜೀವ ವಸ್ತುಗಳಲ್ಲ. ಬದಲಾಗಿ ವ್ಯಕ್ತಿಯ ವ್ಯಕ್ತಿತ್ವವನ್ನು ಶ್ರೇಷ್ಠ ಮಟ್ಟಕ್ಕೆ ಒಯ್ಯುವ ಜೀವ ಸೆಲೆಗಳು. ಮೈಮೇಲೆ ಹರಿದ ಬಟ್ಟೆಯಿದ್ದರೂ ಪರವಾಗಿ. ಆದರೆ ಕೈಯ್ಯಂದು ಪುಸ್ತಕವಿರಲಿ,ಎಂಬ ಮಾತು ಪುಸ್ತಕದ ಮಹತ್ವವನ್ನು ಸಾರುತ್ತದೆ.

ಹಾಗಾಗಿ ಪುಸ್ತಕಗಳೇ ನಮ್ಮಲ್ಲರ ನಿಜವಾದ ಸಂಗಾತಿಯಾಗಿದೆ, ಪುಸ್ತಕ ಓದುವ ಹವ್ಯಾಸ ಬೆಳಸಿಕೊಳ್ಳೊಣ,ಮುಂದುವರೆಸಿಕೊಂಡು ಹೋಗೋಣ.


  • ಡಾ.ಗುರುಪ್ರಸಾದ ರಾವ್ ಹವಲ್ದಾರ್ – ವಿಜಯನಗರ ಜಿಲ್ಲೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading