ಸ್ಪರ್ಶವಿಲ್ಲದೇ ದೂರದಲ್ಲಿದ್ದರೂ ನಿನ್ನ ಸಾನಿಧ್ಯ ಕಾಡುತ್ತಲೇ ಇದೆ…ಕವಿ ಶೀತಲ್ ಹೆಗಡೆ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…
ನಿನ್ನ ನೆನಪುಗಳು ನಿಶ್ಯಬ್ದದೊಳಗೆ
ಮೃದುವಾಗಿ ಹರಿದಾಡುವ ಸ್ವರಗಳಂತೆ
ಮನದ ಗರ್ಭದಲ್ಲಿರುವ ಆಲಾಪನೆ
ನನ್ನೆಲ್ಲಾ ಉಸಿರನ್ನೇ ನಿನ್ನದಾಗಿಸಿದೆ
ನಿನ್ನ ಕಂಗಳಲ್ಲಿ ನನ್ನ ಪ್ರತಿಬಿಂಬ
ನನ್ನ ಲೋಕ ನಿನ್ನೊಲವ ಸುತ್ತ
ನಿನ್ನ ಮೌನದೊಳಗೆ ಹುದುಗಿದ
ನಾದವು ಪ್ರೀತಿಯಾಗಿ ಹೊಮ್ಮಿದೆ
ಸ್ಪರ್ಶವಿಲ್ಲದೇ ದೂರದಲ್ಲಿದ್ದರೂ
ನಿನ್ನ ಸಾನಿಧ್ಯ ಕಾಡುತ್ತಲೇ ಇದೆ
ಯಾವ ಮೋಡಿಗೆ ಸಿಲುಕಿನಲುಗಿದೆ
ಇದಾವ ಮಾಯೆ ನಾನರಿಯದಾದೆ
ರಾತ್ರಿಯ ನೀರವ ಮೌನದಲ್ಲೂ
ನಿನ್ನದೇ ಕನಸು ನಿನ್ನದೇ ಜಪನಾಮ
ಹಗಲಿನ ಗದ್ದಲ ಭರಾಟೆಯಲ್ಲೂ
ನಿನ್ನ ನೆನಪುಗಳೇ ನನ್ನುಸಿರಾಗಿದೆ
ಈ ಆಲಾಪನೆ ಅಂತ್ಯವಿಲ್ಲದ ನಾದ
ಈ ಒಲವು ಮಿತಿಯಿಲ್ಲದ ಸಾಗರ
ನಿನ್ನೊಳಗೆ ನಾನು ಅನುರಕ್ತೆಯಾದಾಗ
ಬದುಕೇ ನಮ್ಮೊಲವ ಆಲಾಪನೆಯಾಗಿದೆ.
- ಶೀತಲ್ ಹೆಗಡೆ
