ಅಮಟೆ-ಎಸ್ ಎಂಬ ಹಾಸ್ಯದ ಏರ್ ಬಸ್ !

ಸುಮಾ ರಮೇಶ್ ಅವರ ನಾಲ್ಕನೇ ಕೃತಿ ‘ಅಮಟೆ… ಎಸ್’ ಕೃತಿಯ ಕುರಿತು ಖ್ಯಾತ ಹಾಸ್ಯ ಸಾಹಿತಿಗಳಾದ ತುರುವೇಕೆರೆ ಪ್ರಸಾದ್ ಅವರ ಮೌಲಿಕವಾದ ಮುನ್ನುಡಿ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಅಮಟೆ… ಎಸ್
ಲೇಖಕರು : ಸುಮಾ ರಮೇಶ್
ಪ್ರಕಾಶನ : ನ್ಯೂ ವೇವ್ ಬುಕ್ಸ್ ಪ್ರಕಾಶನ
ಬೆಲೆ : ೧೭೦.೦೦

ಹಾಸ್ಯ ಪುಸ್ತಕಕ್ಕೊಂದು ಮುನ್ನುಡಿ ಬರೆದುಕೊಡಿ ಎಂದು ಯಾರಾದರೂ ಕೇಳಿದರೆ ಸ್ವಲ್ಪ ಪೀಕಲಾಟ ಆರಂಭವಾಗುತ್ತದೆ. ಯಾಕೆಂದರೆ ನಮ್ಮ ಮುನ್ನುಡಿ ಎನ್ನುವುದೇ ಬರೆದಿರುವ ಹಾಸ್ಯವನ್ನು ನುಂಗಿ ನೊಣೆಯುವಷ್ಟು ಸೀರಿಯಸ್ಸಾಗಿಬಿಟ್ಟರೆ ಅಂತಹ ಮುನ್ನುಡಿ ಇದ್ದರೆಷ್ಟು ಬಿಟ್ಟರೆಷ್ಟು? ಹಾಗೇ ಮುನ್ನುಡಿ ಬರೆಯುವವ ವಿಮರ್ಶಕನೂ ಅಲ್ಲ, ಬಹುಪರಾಕ್ ಹೇಳುವ ವಂದಿಮಾಗಧನೂ ಅಲ್ಲ. ಇವೆರೆಡರ ಮಧ್ಯೆ ಭಾಗವತರಂತೆಯೋ, ಇಲ್ಲ ಪರದೆ ಎಳೆಯುವವನಂತೆಯೋ ಒಂದು ಕರ್ಟನ್‌ರೈಸ್ ಮಾಡಿ ಮಿಕ್ಕಿದ್ದನ್ನು ಓದುಗರಿಗೇ ಬಿಟ್ಟುಬಿಡಬೇಕು. ರುಚಿಯಾಗಿ ಯಾರೋ ಮಾಡಿಟ್ಟ ಅಡುಗೆಯನ್ನು ಒಗ್ಗರಣೆ ಹಾಕುವವ ಕೆಡಿಸಬಾರದು. ಈ ನಿಟ್ಟಿನಲ್ಲಿ ಮುನ್ನುಡಿ ಎನ್ನುವುದು ಒಂದು ಟೀಸರ್. ಬರೆಯುವವ ಕ್ರಿಟಿಸೈಸರ್ ಆಗಬಾರದು.ಮುನ್ನುಡಿ ಒಂದು ಅಡಾವುಡಿಯೋ ದೊಡ್ಡ ಬಾನಗಡಿಯೋ ಆಗದೆ ಹಾಸ್ಯದ ಗರಡಿಯಲ್ಲೇ ಜರಡಿ ಆಡಬೇಕು. ‘ಅಮಟೆ..ಎಸ್?’ ಎಂದು ಕೇಳದೇನೇ ಮುನ್ನುಡಿಗೆ ಕ್ಯಾರೇ ಎನ್ನದೆ ಪುಸ್ತಕ ಮಾಡುವವರ ಮಧ್ಯೆ ಈಗಲೂ ಮುನ್ನುಡಿಗೆ ಹಂಬಲಿಸುವ ಸುಮಾ ಪ್ರವೇಶದಲ್ಲೊಂದು ಪನ್ನಿರು ಸ್ಪ್ರೇ ಇರಲಿ ಎಂದುಕೊಂಡಿರಬಹುದು.

ಕೆಲವು ಪುಸ್ತಕಗಳಿಗೆ ಸಲೀಸಾಗಿ ಮುನ್ನುಡಿ ಬರೆದು ಕೈ ತೊಳೆದುಕೊಂಡು ಬಿಡಬಹುದು. ಇವರ ಬರಹಗಳಲ್ಲಿ ನಗೆಬುಗ್ಗೆ ಪಕ್ಕೆ ಹಿಡಿಯುವಂತೆ ಉಕ್ಕಿಹರಿಯುತ್ತದೆ ಅಂತಲೋ, ಹಾಸ್ಯ ಓತಪ್ರೋತವಾಗಿ ಬಕ್ಕೆ ಒಡೆಯುವಂತೆ ಸ್ಪುರಿಸುತ್ತದೆ ಅಂತಲೋ ಒಂದಿಷ್ಟು ಲೇಖನಗಳನ್ನು ಉಲ್ಲೇಖಿಸಿ ಮುಗಿಸಿಬಿಡಬಹುದು. ಆದರೆ ಸುಮಾ ರಮೇಶ್ ಅವರ ‘ಅಮಟೆ-ಎಸ್’ನಂತಹ ಪುಸ್ತಕಗಳಿಗೆ ಮುನ್ನುಡಿ ಬರೆಯುವಾಗ ಇದರಾಚೆ ಏನೋ ಒಂದಿಷ್ಟು ಬರೆಯಲೇಬೇಕಾಗುತ್ತದೆ. ಅದಕ್ಕಾಗಿ ಒಂದಿಷ್ಟು ಸರ್ಕಸ್ ಮಾಡಲೇಬೇಕು.ಅವರ ಬರಹಗಳನ್ನು ಓದಲೇಬೇಕು.
‘ವಿಟ್ ಈಸ್ ದ ಬೆಸ್ಟ್ ಫಾರಂ ಆಫ್ ಹ್ಯೂಮರ್’ ಅಂತ ವೈಎನ್ಕೆ ಹೇಳುತ್ತಿದ್ದರು. ಹೊಸ ವಿಷಯ ಶೋಧಿಸಿ, ನವನವೀನ ವೈವಿಧ್ಯತೆಗಳ ಬೆಲ್ಲ ಹಾಕಿ, ಭಾಷೆಯ ಅಚ್ಚಿನಲ್ಲಿ ಪಾಕಹುಯ್ದು, ಅದನ್ನೊಂದು ‘ಹ್ಯೂಮರ್‌ಪಾಕ್’ ಮಾಡುವ ಕಲೆ ಸುಮಾ ಅವರಿಗೆ ಸಿದ್ಧಿಸಿದೆ. ಸುಮಾ ಅವರ ವಿಷಯಗಳ ಆಯ್ಕೆಯೇ ವೈವಿಧ್ಯಮಯ.ಅದು ಇಳಿಗೆ ಮಣೆಯಿಂದ ಹಿಡಿದು ಒಲಿಂಪಿಕ್ಸ್ ಮೆಡಲ್,ಚಂದ್ರಲೋಕದ ತನಕ, ಅಮಟೆ-ಎಸ್ ನಿಂದ ಹಿಡಿದು ‘ಹೈಟ್ ಆಫ್ ಸ್ಪಿಂಜಿನೆಸ್’ ತನಕ ಓತಪ್ರೋತವಾಗಿ ಹರಿದಾಡುತ್ತದೆ. ಅವರ ನಗೆಲಹರಿ ಕನ್ನಡದಲ್ಲಿ ವಿಜೃಂಭಿಸುತ್ತಲೇ ತಟ್ಟನೆ ಇಂಗ್ಲೀಷ್ ಪದಗಳನ್ನು ತನ್ನದೇ ಎನ್ನುವಂತೆ ಕಬಳಿಸಿಕೊಂಡು ಸೌಮ್ಯ, ಗ್ರಾಮ್ಯ ಮೀರಿ ಹಾಸ್ಯದ ಪಾರಮ್ಯ ತಲುಪಿಬಿಡುತ್ತದೆ. ಕನ್ನಡ-ಇಂಗ್ಲೀಷ್ ಪದಗಳನ್ನು ಹದವಾಗಿ ಬಳಸಿಕೊಂಡೇ ಪನ್ ಮಾಡುತ್ತಾರೆ. ‘ಹಲವರ ಕೇಶ ಸಂಪತ್ತು ಸ್ವಚ್ಛಗೊಳಿಸಿದ ಮೆಟ್ರೋಪಾಲಿಟಾನ್ ಸಿಟಿಯ ಹೊಸ ಲೇಔಟ್’ ‘ಬೋನ್ಸಾಯಿಯಂತಾದ ಬೂಟಿನ ಅಚ್ಚಿನೊಳಗಿನ ಮಿನಿ ಪಾದಗಳು (ಚೀನಾ ಜನರ ಕಾಲುಗಳ ಕುರಿತು ಹೇಳಿರುವುದು) ಈ ತರ ಹೊಸ ಮಾದರಿಯ ಉಪಮೆಗಳು ಕಚಗುಳಿ ಇಡುತ್ತವೆ. ಭಾಷೆಯ ಮೇಲಿನ ಅವರ ಹಿಡಿತವಂತೂ ಅಚ್ಛರಿ ಮೂಡಿಸುವಂತಹುದು, ‘ಮಡಿ ಪಂಚೆ ಮೇಲೇರಿ ಮಿಡಿ ಪಂಚೆಯಾಗಬಾರದು’, ‘ಮಂಡಿಯೂರಿ ನಮಿಸಿದಾಗ ಹಳೆ ಮುನಿಸುಗಳ ಮಾಫಿ ಮಾಡಿ ಮನದುಂಬಿ ಮಂಡೆ ಸವರಿ ಮೇಲೆತ್ತಿ ಉ(ಹುಂ)ಡಿ ತುಂಬಿಸಿ ಸಂತೃಪ್ತಿಗೊಳಿಸಿದರು’ ಇಂತಹ ಹಾಸ್ಯಪ್ರಯೋಗಗಳು ಸುಮಾರವರ ಸಿಗ್ನೇಚರ್ ಬರವಣಿಗೆ ಎನ್ನುವಷ್ಟರ ಮಟ್ಟಿಗೆ ಅವರಿಗೆ ಕರತಲಾಮಲಕವಾಗಿವೆ. ಬಹಳಷ್ಟು ಜನ ಹಾಸ್ಯ ಎಂದರೆ ಬರೀ ಹೇಗೊ ನಗಿಸುವುದು ಎನ್ನುವ ಮಟ್ಟದಲ್ಲೇ ನಿಂತು ಹೋಗಿದ್ದಾರೆ. ಆದರೆ ಅದರಾಚೆ ಅದೂ ಒಂದು ನಾಸ್ಟಾಲ್ಜಿಯಾ ಆಗಿ ಪದೇ ಪದೇ ಕಾಡಬೇಕೆಂದರೆ ಸುಮಾ ಅವರ ಬರಹಗಳನ್ನು ಓದಬೇಕು. ಹಾಸ್ಯಕ್ಕೂ ಒಂದು ತರ್ಕವಿದೆ. ಅದನ್ನು ಕುತರ್ಕ ಮಾಡಿ ನಗೆಯ ಮೊಟ್ಟೆಯೊಡೆಯುವುದೂ ಒಂದು ಚಾಣಾಕ್ಷ ಕಲೆಯೇ! ‘ಪ್ರೊಟೆಕ್ಟ್ ಮಾಡುವ ಪಾದುಕೆಗಳು ಎಂದಿಗೂ ಗ್ರೌಂಡ್‌ಫ್ಲೋರ್’, ‘ಹಬ್ಬಿದ ಕಲೆ ಹುಬ್ಬಿನೆಡೆಗೆ’ ಇಂತಹ ನುಡಿಕಟ್ಟುಗಳು ಎಂತಹ ರಸ್ಟ್ ಹಿಡಿದ ಫೇಸ್‌ಕಟ್‌ಗಳನ್ನೂ ಅರಳಿಸುವುದಂತೂ ನಿಜ.

ಸುಮಾ ಅವರ ಬರಹದುದ್ದಕ್ಕೂ ಕಾಣುವುದು ಅವರ ಲವಲವಿಕೆ. ಈ ಲವಲವಿಕೆ ಎನ್ನುವುದೇ ತಕ್ಷಣದಲ್ಲಿ ಸ್ಪೋಟಗೊಳ್ಳುವ ಹಾಸ್ಯವನ್ನು ಅನುಭವಿಸಿ ಬರೆಯುವುದು. ಅದು ಅವಾಗವಾಗ ಆವಾಹಿಸಿಕೊಳ್ಳುವ ವೃತ್ತಿಯಾಗದೆ ಸ್ವಭಾವತಃ ಬಂದ ಒಂದು ಪ್ರವೃತ್ತಿ ಎನ್ನುವಷ್ಟು ಸಲೀಸಾಗಿ ಸುಮಾ ನಿಭಾಯಿಸುತ್ತಾರೆ. ಹಾಸ್ಯಪ್ರಜ್ಞೆ ಎನ್ನುವುದು ಮಿಕ್ಕೆಲ್ಲಾ ಸಂಕೀರ್ಣ ಪ್ರಜ್ಞೆಗಳನ್ನು ಹಿಮ್ಮೆಟ್ಟಿಸಿದಾಗ ಮಾತ್ರ ಕಾಣಸಿಗುವ ಜೀವಂತಿಕೆಯ ಜಲ. ಅದನ್ನು ಆಪೋಶನ ತೆಗೆದುಕೊಂಡವರAತೆ ಸುಮಾ ಎಲ್ಲಾ ಬರಹಗಳನ್ನು ತಮ್ಮ ಅಂಕೆಯಲ್ಲಿಟ್ಟುಕೊAಡು ವಿಜೃಂಭಿಸುತ್ತಾರೆ. ಹಾಗಾಗಿಯೇ ಅವರ ಯಾವ ಬರಹವೂ ಸಪ್ಪೆ ಅಥವಾ ಬೋರ್ ಎನಿಸುವುದೇ ಇಲ್ಲ. ಮೆಟ್ರೋರೈಲಿನಂತೆ ಒಂದರ ಹಿಂದೊAದು ಹಾಸ್ಯ ಬೋಗಿಗಳನ್ನು ಓಡಿಸುತ್ತಲೇ ಇರುತ್ತಾರೆ.

ಇನ್ನು ಸುಮಾ ಕಿಚನ್‌ನಿಂದ ಈಚೆ ಬಂದಿದ್ದಾರೆ. (ಯಜಮಾನರನ್ನು ಬಿಟ್ಟು ತಾವು ಈಚೆ ಬಂದಿದ್ದಾರೇನೋ?) ಹಾಗೆ ಕಿಚನ್‌ನಿಂದ ಈಚೆ ಬಂದವರು ಹರಟೆ ಕಟ್ಟೆಯ ಕಾನ್ರ‍್ಸೇಶನ್, ದೂರದರ್ಶನ್ ಎರಡಕ್ಕೂ ಬಲಿಯಾಗದೆ ಸೀದಾ ಹಾಸ್ಯದ ಮಿಶನ್ ಹಿಡಿದಿದ್ದಾರೆ.ಇದೊಂದು ನಿಜಕ್ಕೂ ಹೆಲ್ತಿ ವಿಶನ್. ಹೆಣ್ಣುಮಕ್ಕಳಿಗೆ ‘ಮಿಶನ್ ಇಂಪಾಸಿಬಲ್’ ಎನ್ನುವುದನ್ನು ಸುಮಾ ನಗಿಸುತ್ತಲೇ ‘ಎವೆರಿಥಿಂಗ್ ಈಸ್ ಪಾಸಿಬಲ್’ ಎಂದು ತೋರಿಸುತ್ತಾರೆ. ಹೀಗೆ ಕಿಚನ್‌ನಿಂದಾಚೆ ಅಪ್ಡಡೇಟ್ ಆಗುತ್ತಿರುವುದರಿಂದಲೇ ಅವರ ಬರಹಗಳು ತಾಜಾ ಎನಿಸುತ್ತವೆ. ಪ್ರಬುದ್ಧ ಹಾಸ್ಯದ ಮಾದರಿಗಳಾಗುತ್ತವೆ.

ಈಚಿನ ದಿನಗಳಲ್ಲಿ ಹಾಸ್ಯ ವಾಚ್ಯವಾಗಿ ಹಲವು ಸಂದರ್ಭಗಳಲ್ಲಿ ತನ್ನ ಘನತೆಯನ್ನೇ ಕಳೆದುಕೊಂಡಿದೆ. ಅದೇ ಹಳಸಲು ಜೋಕುಗಳು ರಿಂಗಣವಾಗಿ ಸುತ್ತಿ ಸುತ್ತಿ ವಾಪಸ್ ಬರುತ್ತಿವೆ. ಹಿಂದೆ ಹಾಸ್ಯಕ್ಕೊಂದು ಬ್ರಾಂಡ್ ಇತ್ತು. ಒಂದು ಲೇಖನ ಓದಿದರೆ ಅದು ದಾಶರಥಿ ದೀಕ್ಷಿತ್, ಅರಾಸೇ, ರಾಶಿ, ಶ್ರೀನಿವಾಸ ವೈದ್ಯ ಭುವನೇಶ್ವರಿ ಹೆಗ್ಗಡೆ, ಟಿ.ಸುನಂದಮ್ಮ, ವೈಎನ್ಕೆ, ಪಿ.ಎಸ್. ರಾಮಾನುಜಂ,ಶಿವಕುಮಾರ್, ಆನಂದ, ಹೀಗೆ ಯಾರದ್ದು ಆ ಲೇಖನ ಎಂದು ತಟ್ಟನೆ ಹೇಳಿಬಿಡಬಹುದಿತ್ತು. ಈಗ ಬ್ರಾಂಡ್ ಹೋಗಿ ಬರೀ ಹಾಸ್ಯವೆನ್ನುವ ಜೊಂಡುಗಳೇ ಇವೆ. ಅವನ್ನು ಓದಿದರೆ ಝಂಡೂಬಾಮೇ ಗತಿ. ಈಚೆಗೆ ಕೃಷ್ಣಮಾಚಾರ್, ಅಣಕು ರಾಮನಾಥ್ ಅವರಂತೆ ಬ್ರಾಂಡೆಡ್ ಹಾಸ್ಯ ಕೊಡುತ್ತಿರುವವರೇ ಅಪರೂಪ. ಹಾಸ್ಯ ಎಲ್ಲಿದೆ? ಎಂದು ಜೇಮ್ಸ್ ಬಾಂಡ್‌ನಂತೆ ಬ್ಯಾಟರಿ ಬಿಟ್ಟು ಹುಡುಕಬೇಕಾದ ಹೊತ್ತಲ್ಲಿ ಸುಮಾರವರ ಈ ಪಾದ ಪುಣ್ಯಪಾದ, ಲಿಪಿಗಳ ಕಾಪಿಟ್ಟ ಕಾಫಿ ಪುಸ್ತಕಗಳು, ರೂಪಾಂತರಿ ಆಪ್, ಮಾಟದಾಗಿ ಭಯವಾ ಮೀಟಿ, ಸಿಗ್ನೇಚರ್ ಮೀಮಾಂಸೆ ಮೊದಲಾದ ಬರಹಗಳು ಹಾಸ್ಯದ ಅನ್‌ಟೋಲ್ಡ್ ಬ್ರಾಂಡ್‌ಗಳಾಗಿ ಉಳಿಯಬಹುದೇನೋ ಎನಿಸುತ್ತದೆ. ಹಾಗೇ ಸ್ಟಾಂಡ್ ಅಪ್ ಕಾಮೆಡಿಯ ಉಪದ್ವಾಪಗಳ ನಡುವೆ ‘ಸಿಡ್ಡೌನ್ ಹ್ಯೂಮರ್ ಸ್ಟಡಿ’ ಓದಿನಲ್ಲೂ ಹಾಸ್ಯದ ರಸಾಸ್ವಾದನೆ ಮಾಡಿ ಹಿತಾನುಭವ ಪಡೆಯುವ ಹೊಸ ಭರವಸೆಯೊಂದು ಮೂಡುತ್ತದೆ.

‘ಅಮಟೆ-ಎಸ್, ಕುಂಟಾಟಕ್ಕೊಂದು ನಗೆಬಿಲ್ಲೆ’ ಎಂದು ಹೇಳುತ್ತಲೇ ಹಾಸ್ಯದ ತಮಟೆ, ಜಾಗಟೆ ಬಾರಿಸುತ್ತಾ ನಗೆಭಲ್ಲೆ ಝಳಪಿಸುತ್ತಾ ನಾನೂ ನಗಬಲ್ಲೆ, ಇತರರನ್ನೂ ನಗಿಸಬಲ್ಲೆ ಎಂದು ಸುಮಾ ಸಾಬೀತು ಮಾಡಿದ್ದಾರೆ. ಸುಮಾ ರಮೇಶ್‌ರವರ ಹಾಸ್ಯದ ಏರ್‌ಬಸ್ ಹೀಗೇ ನಿರಂತರವಾಗಿ ಹಾರುತ್ತಿರಲಿ ಎಂದು ಮನತುಂಬಿ ಹಾರೈಸುತ್ತೇನೆ.


  • ತುರುವೇಕೆರೆ ಪ್ರಸಾದ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW