“ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ” ಎಂಬ ಶ್ರೇಯಾ ಘೋಷಾಲ್ ಹಾಡಿದ್ದ ಸುಮಧುರ ಹಾಡಿಗೆ ಹೊಸ ಭಾಷ್ಯವನ್ನೇ ಬರೆದಂತೆ, ಅದರ ರಾಗ ತಾಳ ಲಯ ಶ್ರುತಿ ರಿದಮ್ಮು ಎಲ್ಲವನ್ನೂ ಅನಾಮತ್ತು ವಿರೂಪಗೊಳಿಸಿ ಗರಗರ ಹಾಡಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ಅಮ್ಮು ಕುರಿತು ಹಿರಿಯೂರು ಪ್ರಕಾಶ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ನೀವೊಬ್ಬ ಪ್ರತಿಭಾವಂತ ಮಧುರಕಂಠದ ಗಾಯಕ- ಗಾಯಕಿಯಾಗಿದ್ದು ಸಾಕಷ್ಟು ಕಾಲದಿಂದ ಸೋಷಿಯಲ್ ಮೀಡಿಯಾಗಳಲ್ಲಿ ನಿಮ್ಮ ಗಾಯನ ಪ್ರತಿಭೆ ತೋರುತ್ತಾ ಬಂದಿದ್ದರೂ ನೀವು ಹೆಚ್ಚು ಜನರನ್ನು ತಲುಪಲು ಸಾಧ್ಯವಾಗಲಿಲ್ಲವೆಂಬ ಕೊರಗಿದೆಯಾ…? ಅಥವಾ ನಿಮ್ಮೊಳಗಿನ ಯಾವುದೇ ಪ್ರಕಾರದ ಸಮರ್ಥ ಕಲಾಪ್ರತಿಭೆಯ ಅನಾವರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನಿರೀಕ್ಷಿತ ಮಟ್ಟದ ಲೈಕ್ಸ್, ಕಾಮೆಂಟ್ಸ್ ಅಥವಾ ವ್ಯೂಸ್ ಸಿಗುತ್ತಿಲ್ಲವೆಂಬ ಬೇಸರವಿದೆಯಾ..?
ಅದೇ ರೀತಿಯಾಗಿ ಎಷ್ಟೇ ಒಳ್ಳೆಯ ಕಂಟೆಂಟ್ ಇರುವ ಬರಹ ಬರೆದು ಪೋಸ್ಟ್ ಮಾಡಿದರೂ ಸಾಕಷ್ಟು ಲೈಕುಗಳು ಬರುತ್ತಿಲ್ಲವೇ, ಹೆಚ್ಚು ಫ಼ಾಲೋವರ್ಸ್ ಇಲ್ಲವೇ..? ಒಟ್ಟಾರೆಯಾಗಿ, ನಿಮ್ಮೊಳಗಿನ ಏನೇ ಉತ್ತಮ ಪ್ರತಿಭೆಯನ್ನು ರೀಲ್ಸು, ವಿಡಿಯೋ ಅಥವಾ ಬರಹಗಳ ಮೂಲಕ ಹೊರಹಾಕಿದರೂ ಜಾಲತಾಣಗಳಲ್ಲಿ ಜನಪ್ರಿಯರಾಗಲು ಆಗುತ್ತಿಲ್ಲವೇ ..?
ಡೋಂಟ್ ವರೀ.!
ಈ ಸೋಷಿಯಲ್ ಮೀಡಿಯಾಗಳ ಅಸಲೀಯತ್ತು ಏನೆಂದರೆ ಇಲ್ಲಿ ಪಾಪ್ಯುಲರ್ ಆಗೋಕೆ ನೀವು ಪ್ರತಿಭಾವಂತರೇ ಆಗಬೇಕಿಲ್ಲ. ಜ್ಞಾನ, ಬುದ್ದಿ, ವಿವೇಕ ಪಾಂಡಿತ್ಯ ಇದಾವುದೂ ಬೇಕಿಲ್ಲ ಅಥವಾ ನಿಮಗೆ ಮಧುರ ಕಂಠ, ಪ್ರಖರ ಬರವಣಿಗೆ ಉತ್ತಮ ಸಾಹಿತ್ಯದ ಅಗತ್ಯವೇ ಇಲ್ಲ. ಅದಾವುದಿಲ್ಲದಿದ್ದರೂ ನೀವು ಕೆಟ್ಟದಾಗಿಯೇ ಹಾಡಿ ಅದಕ್ಕೆ ಸ್ವಲ್ಪ ಡಿಫ಼ರೆಂಟ್ ಎನಿಸುವ ಟಚ್ ಕೊಟ್ಟು ರೀಲ್ಸ್ ಅಥವಾ ವಿಡಿಯೋ ಮಾಡಿಸಿ ಪೋಸ್ಟ್ ಮಾಡಿದಲ್ಲಿ, ನಿಮ್ಮ ಅದೃಷ್ಟ ನೆಟ್ಟಗಿದ್ದರೆ ರಾತ್ರೋರಾತ್ರಿ ಸೆನ್ಸೇಷನ್ ಸ್ಟಾರ್, ಸೆಲೆಬ್ರಿಟಿ ದಿಲ್ ದಾರ್ ಆಗಬಹುದು. ಅದರಲ್ಲೂ ಹುಡುಗಿಯರಾಗಿದ್ದರಂತೂ ಇನ್ನೂ ಸ್ಕೋಪ್ ಜಾಸ್ತಿ.

ಇದಕ್ಕೆ ನಮ್ಮ ಮೈಸೂರಿನ ಕಾಲೇಜೊಂದರ ಹುಡುಗಿಯೊಬ್ಬಳು ಏನೋ ತಮಾಷೆಗೆಂದು ತನ್ನ ಗೆಳತಿಯರ ಮುಂದೆ ಗುನುಗಿ ಹಾಡಿದ್ದ ಒಂದು ಹಾಡು ಸಾಮಾಜಿಕ ಜಾಲತಾಣಗಳಲ್ಲಿ ನಿನ್ನೆ ಮೊನ್ನೆಯಿಂದ ಸಖತ್ ವೈರಲ್ ಆಗಿರುವುದನ್ನುಉದಾಹರಿಸಬಹುದು ! ನಿತ್ಯಶ್ರೀ ಎಂಬ ಕಾಲೇಜು ವಿಧ್ಯಾರ್ಥಿನಿ ಮೊನ್ನೆ ಕ್ಯಾಮೆರಾಗಳ ಮುಂದೆ ”ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ” ಎಂಬ ಶ್ರೇಯಾ ಘೋಷಾಲ್ ಹಾಡಿದ್ದ ಸುಮಧುರ ಹಾಡಿಗೆ ಹೊಸ ಭಾಷ್ಯವನ್ನೇ ಬರೆದಂತೆ, ಅದರ ರಾಗ ತಾಳ ಲಯ ಶ್ರುತಿ ರಿದಮ್ಮು ಎಲ್ಲವನ್ನೂ ಅನಾಮತ್ತು ವಿರೂಪಗೊಳಿಸಿ ಗರಗರ ಹಾಡಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ , ಮಿರಮಿರ ಮಿಂಚಿ ಲಕ್ಷಾಂತರ ಜನ ಹುಡುಕಿ ವೀಕ್ಷಿಸುವಂತಾಗಿದೆ . ಇದು ಈ ಹಿಂದಿನ “ಕರಿಮಣಿ ಮಾಲೀಕ ನೀನಲ್ಲ”…. ರೇಂಜಿಗೆ ವೈರಲ್ ಆಗುತ್ತಿದೆ.
ಅಸಲಿ ಸತ್ಯ ಏನೆಂದರೆ ಒಂದು ವೇಳೆ ನಿತ್ಯಶ್ರೀ ಈ ಹಾಡನ್ನು ಮೂಲ ಹಾಡಿನ ಧಾಟಿಯಂತೆಯೇ ಚೆನ್ನಾಗಿ ಹಾಡಲು ಯತ್ನಿಸಿದ್ದಲ್ಲಿ ಅದನ್ನು ಮೂರು ಮತ್ತೊಬ್ಬರು ಸಹಾ ನೋಡುತ್ತಿರಲಿಲ್ಲವೇನೋ ! ಅಷ್ಟೇಕೆ, ಸ್ವಯಂ ಶ್ರೇಯಾ ಘೋಷಾಲ್ ಈ ಹಾಡಿನ ತುಣಕನ್ನು ಹಾಡಿ ವಿಡಿಯೋ ಬಿಟ್ಟಿದ್ದರೂ ಈ ಲೆವೆಲ್ಲಿಗೆ ರೀಚ್ ಆಗಿತ್ತಿರಲಿಲ್ಲ.
ಆದರೆ ನಿತ್ಯಶ್ರೀಯ ಮುಗ್ಧ ನೋಟ, ಅಮಾಯಕ ನಗು ಹಾಗೂ ಯಾವ ದೃಷ್ಟಿಯಿಂದಲೂ ಹಾಡಿನಂತಿರದ ಆಕೆಯ ಹಾಡಿನಿಂದ ಕ್ಷಣಾರ್ಧದಲ್ಲಿ ಜಾಲತಾಣಗಳಲ್ಲಿ ವೈರಲ್ ಆಗಿ ಅಲ್ಲಿಯವರೆಗೆ ಕೇವಲ ನೂರೈವತ್ತು ಜನ ಇದ್ದ ಈಕೆಯ ಜಾಲತಾಣದ ಹಿಂಬಾಲಕರ ಸಂಖ್ಯೆ ಈಗ ಅರ್ಧ ಲಕ್ಷ ದಾಟಿ ಸ್ಟಾರ್ ಆಗಿಬಿಟ್ಟಳು. ಅದುವೇ ಜಾಲತಾಣಗಳ ಮಾಯಾಜಾಲದ ಮಹಿಮೆ !
ಅಲ್ಲಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಅತಿಹೆಚ್ಚು ವೀಕ್ಷಣೆಯಿಂದ ಮಿಂಚಲು ನೀವೊಬ್ಬ ಪ್ರತಿಭಾವಂತ ಗಾಯಕರೇ ಆಗಿರಬೇಕೆಂಬ ನಿಯಮವೇನಿಲ್ಲ ಎಂಬುದು ಖಾತ್ರಿಯಾಯಿತಲ್ಲವೇ? ಹಾಗೆಯೇ ನೀವು ಹೆಚ್ಚು ಜನರನ್ನು ತಲುಪಲು ಯಾವುದೇ ತಾಲೀಮು, ಪ್ರಯತ್ನ, ಶ್ರದ್ಧೆ ಅಥವಾ ನೀವು ಕೊಡುತ್ತಿರುವ ವಸ್ತು ವಿಷಯದಲ್ಲಿನ ಪ್ರತಿಭೆ, ಜ್ಞಾನ ಯಾವುದರ ಅಗತ್ಯವೂ ಇರಲೇ ಬೇಕಿಲ್ಲ.
ಹೀಗೆಂದ ಮಾತ್ರಕ್ಕೇ ಆ ಹುಡುಗಿಯನ್ನು ನಾನು ಅಂಡರ್ ಎಸ್ಟಿಮೇಟ್ ಮಾಡುತ್ತಿಲ್ಲ. ಕೇವಲ ತಮಾಷೆಗಾಗಿ ಅಂದರೂ ಆ ಕ್ಷಣದಲ್ಲಿನ ಆಕೆಯೊಳಗಿದ್ದ ಎಂಥಾದ್ದೋ ಒಂದು ಕ್ರಿಯಾಶೀಲತೆ ಮತ್ತು ವಿಭಿನ್ನತೆ ಸಾಂದರ್ಭಿಕ ಅದೃಷ್ಟದೊಂದಿಗೆ ಸೇರಿ ಹೆಚ್ಚು ಜನರನ್ನು ತಲುಪಿ ಆ ಹುಡುಗಿ ಹಾಡಿದ್ದ ವಿಡಿಯೋ ಭಿನ್ನ ಕಾರಣಕ್ಕೆ ವೈರಲ್ ಆಗುವಲ್ಲಿ ಸಾಥ್ ನೀಡಿತ್ತು. ಆ ಹುಡುಗಿಯ ಮುಗ್ಧತೆಗೆ ನನ್ನದೊಂದು ಸಲಾಂ. ಮುಖ್ಯವಾಗಿ ಆಕೆ ಅದನ್ನು ಮನಸಾರೆ ಒಪ್ಪಿಕೊಂಡು ಶ್ರೇಯಾಗೆ ಅರ್ಜುನ್‌ಜನ್ಯಾಗೆ ಸಾರೀ ಕೇಳಿ , ಯಾರೂ ನೆಗೆಟೀವ್ ಕಾಮೆಂಟ್‌ಮಾಡಬೇಡಿ ಎಂದು ಕೇಳಿರುವ ರೀತಿ ತುಂಬಾ ಇಷ್ಟವಾಯ್ತು. ಎಷ್ಟೇ ಆಗಲೀ ನಮ್ಮ ಕನ್ನಡದ ಹುಡುಗಿಯರ ಮನಸ್ಸೇ ಅಂಥಾದ್ದು.
ಸೋ…. ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಜನರ ವೀಕ್ಷಣೆಗೂ, ನಿಮ್ಮ ವಸ್ತು – ವಿಚಾರ ವೈರಲ್ ಆಗುವುದಕ್ಕೂ, ನೋಡುಗರ ಆಸಕ್ತಿಗೂ ಹಾಗೂ ನಿಮ್ಮ ಪ್ರತಿಭಾ ಪ್ರಕಾರಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ. ಇನ್ನೇಕೆ ತಡ..! ನಿಮಗೂ ದಿಡೀರ್ ವೈರಲ್ ಸ್ಟಾರ್ ಆಗಬೇಕೆಂಬ, ತನ್ಮೂಲಕ ಹೆಚ್ಚು ಜನರನ್ನು ರೀಚ್ ಆಗಬೇಕೆಂಬ ತುಡಿತ ಇದ್ದಲ್ಲಿ , ನನಗೆ ಹಾಡಲು, ಕುಣಿಯಲು, ಬರೆಯಲು ಅಥವಾ ಚೆನ್ನಾಗಿ ಮಾತನಾಡಲು ಬರೋಲ್ಲ ಎಂಬ ಚಿಂತೆಬಿಟ್ಟು ಅದರಲ್ಲೇ ಏನಾದರೊಂದನ್ನು ವಿಭಿನ್ನತೆಯಿಂದ ಅಥವಾ ನಿಮ್ಮಲ್ಲಿಲ್ಲದಿರುವ ಪ್ರತಿಭೆಯನ್ನೇ ಇದೆಯೆಂದುಕೊಂಡು ಅದನ್ನೇ ಶ್ರದ್ಧೆಯಿಂದ ವಿಡಿಯೋ ಮಾಡಿ ಇಲ್ಲಿ ತೇಲಿ ಬಿಡಿ. !
ಯಾವಾನಿಗ್ಗೊತ್ತು….? ಹೆಚ್ಚು ಜನ ಗುರುತಿಸುವ ಸೆಲೆಬ್ರಿಟಿ ನೀವಾಗಬಹುದು . ಗುಡ್ ಲಕ್.

** ಮರೆಯುವ ಮುನ್ನ **
ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಸಾಮಾಜಿಕ ಚಿಂತನೆಯ ಉಪದೇಶವನ್ನು ತಾಳ್ಮೆಯಿಂದ ಕೇಳಲು ಅಥವಾ ನಿಮ್ಮೊಳಗಿನ ನೈಜ ಪ್ರತಿಭೆಯನ್ನು ಗಂಭೀರವಾಗಿ ಗಮನಿಸಲು ಯಾರೂ ಹೆಚ್ಚು ಇಷ್ಟಪಡೋಲ್ಲ, ಅದಕ್ಕೆ ಸಮಯವೂ ಇರೋಲ್ಲ. ಇಲ್ಲೇನಿದ್ದರೂ ರಚನಾತ್ಮಕತೆಗಿಂತ ಕ್ಷಣಾರ್ಧದಲ್ಲಿ ಅತಿ ಹೆಚ್ಚು ರೋಚಕತೆ ಕೊಡುವ ವಿಷಯಗಳೇ ವೈರಲ್ ಆಗೋದು. ಜನರ ಈ ವೀಕ್‌ನೆಸ್ಸನ್ನು ಹಿಡಿದೇ ಸುಳ್ಳಿನ ಸರದಾರರು ಸತ್ಯದ ಕತ್ತನ್ನು ಹಿಸುಕಿ ಸೋಷಿಯಲ್ ಮೀಡಿಯಾಗಳ ಮೂಲಕ ಮೆರೆಯುತ್ತಿರುವುದು.
ಹೀಗಾಗಿ ಒಳ್ಳೆಯ ಕಂಟೆಂಟ್ ಇರುವ , ಸಮಾಜವನ್ನು ತಿದ್ದುವ ಬರಹ/ ವಿಡಿಯೋಗಳ ಬದಲು ಜಾತಿ, ಧರ್ಮ, ದೇವರು, ಕೊಲೆ, ರಾಜಕೀಯ ಮುಂತಾದ ಸೆನ್ಸಿಟೀವ್ ಸಬ್ಜೆಕ್ಟ್ ಇರುವ ವಿಚಾರಗಳ ಬಗ್ಗೆ ಕಾಂಟ್ರೋವರ್ಷಿಯಲ್ ಆಗಿ ಬರೆದಲ್ಲಿ ಅಥವಾ ರೀಲ್ಸ್ – ಯೂಟ್ಯೂಬ್ ಮಾಡಿ ಪೋಸ್ಟ್ ಮಾಡಿದಲ್ಲಿ ಧಿಡೀರ್ ಎಂದು ಲಕ್ಷಾಂತರ ಲೈಕ್ಸು, ಕಾಮೆಂಟ್ಸು, ವ್ಯೂಸ್ ಗ್ಯಾರಂಟೀಯಾಗುವುದರ ಜೊತೆಗೆ ನೀವು ಸೆಲೆಬ್ರಿಟಿಯೂ ಆಗಬಹುದು, ನಿಮ್ಮ ಟಿ ಆರ್ ಪಿ ಗೆ ತಕ್ಕಂತೆ ದುಡ್ಡೂ ಸಿಗಬಹುದು, ಇಂದು “ಸಮೀರ” ನಾಗಿದ್ದವ ನಾಳೆ “ಅಮೀರ” ನೂ ಆಗಬಹುದು.
ಭ್ರಮಾತ್ಮಕ ಲೋಕದಲ್ಲಿ , ಫ಼ೇಕುಗಳ ಪ್ರಪಂಚದಲ್ಲಿ ವಸ್ತುನಿಷ್ಠತೆಯನ್ನು ಹುಡುಕಿ ಹೈರಾಣಾಗುವ ಅವಿವೇಕ ಕ್ಕಿಂತಲೂ, ಸುಳ್ಳು-ಪೊಳ್ಳುಗಳನ್ನು ಪೋಣಿಸಿ ಅದನ್ನೇ ನಂಬಿಸಿ ಮೆರೆಸುವ ಸಿನಿಕತೆಯೇ ವಿವೇಕದಂತೆ ತೋರುತ್ತಿರುವುದು ಜಾಲತಾಣಗಳ ಈ ಹೊತ್ತಿನ ಟ್ರೆಂಡು !
ಪ್ರೀತಿಯಿಂದ….
- ಹಿರಿಯೂರು ಪ್ರಕಾಶ್
