ಹೊಸ ದಂಪತಿಗಳ ಮಧುರ ರಾತ್ರಿಗಳಿಗೆ ಸಾಕ್ಷಿಯಾಗಿದ್ದೇನೆ. ಅದೇತರ ಸಿಟ್ಟು ಬಂದಾಗ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವೆಂಬಂತೆ ಅವರು ನನ್ನನ್ನು ಎತ್ತಿ ಎಸೆದಾಗ ಹೆದರಿ ನಡುಗಿದ್ದೇನೆ.ನಾನು ಯಾರು ಗೊತ್ತಾ ‘ನಾನು… ನಿಮ್ಮ ದಿಂಬು’ ಈ ವಿಷಯದ ಕುರಿತು ಲೇಖಕಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಬಹುಶಃ ನಾನು ನೋಡಿದಷ್ಟು ಕಣ್ಣೀರು ಯಾರೂ ನೋಡಿರಲಿಕ್ಕಿಲ್ಲ. ನೊಂದ ಸಮಯದಲ್ಲಿ ಎಲ್ಲರಿಗೂ ನನ್ನಷ್ಟು ಜೊತೆಯಾಗಿದ್ದವರೂ ಸಹ ಯಾರು ಇಲ್ಲ ಅನಿಸುತ್ತೆ. ನನಗೆ ಮಾತು ಬಾರದಿದ್ದರೂ ನನ್ನ ಮೆತ್ತನೆಯ ಸ್ಪರ್ಶದಿಂದಲೇ ಸಾಂತ್ವನ ನೀಡುವ ಸಾಮರ್ಥ್ಯ ನನಗಿದೆ. ನನ್ನ ಆಕಾರ, ಬಣ್ಣ ಬೇರೆ ಬೇರೆಯಾದರೂ ಎಲ್ಲರಿಗೂ ನಾನು ಇಷ್ಟವಾಗುವುದಂತೂ ಸತ್ಯ. ವಿಶ್ರಾಂತಿಗೆ, ನಿದ್ರೆಗೆ, ಖುಷಿಗೆ, ಸಾಂತ್ವನಕ್ಕೆ , ಒರಗಲು, ಕಾಲು ನೋವಾದಾಗ ಒಮ್ಮೊಮ್ಮೆ ಕಾಲಡಿಗೆ, ತೊಡೆಯ ಮೇಲೆ, ತಬ್ಬಿಕೊಳ್ಳಲು ಎಲ್ಲವುದಕ್ಕೂ ನಾನು ಬೇಕು.
ಎಳೇ ಕೈಯ್ಯ ಸ್ಪರ್ಶಕ್ಕೆ, ಮುದ್ದು ಮಕ್ಕಳ ತುಂಬುಗೆನ್ನೆಗೆ, ನಿದ್ದೆಯಲ್ಲಿ ಅವರ ನಗು, ಕನವರಿಕೆಗೆ ನಾನು ಮನ ಸೋತಿದ್ದೇನೆ. ಬೆಚ್ಚಿಬಿದ್ದಾಗ ಗಟ್ಟಿಯಾಗಿ ಹಿಡಿದಿಟ್ಟಿದ್ದೇನೆ. ಮಂಚದಿಂದ ಕೆಳಗೆ ಬೀಳದಂತೆ ಕಾವಲಾಗಿದ್ದೇನೆ. ಕಲಿತ ಎಬಿಸಿಡಿಯನ್ನೋ, ಚಿತ್ರಗಳನ್ನೋ ನನ್ನ ಮೇಲೆ ಪುಟ್ಟ ಬೆರಳುಗಳಿಂದ ಬರೆದಾಗ ಆಗುವ ಕಚಗುಳಿಗೆ ಮನಸಾರೆ ನಕ್ಕಿದ್ದೇನೆ. ಅಪ್ಪ-ಅಮ್ಮ ಬೈದಾಗ, ಸ್ಕೂಲು ಕಾಲೇಜಿನಲ್ಲಿ ಅವಮಾನ ಆದಾಗ, ಸ್ನೇಹಿತರು-ನೆಂಟರು ಕಡೆಗಣಿಸಿದಾಗ, ಪಟ್ಟ ಶ್ರಮಕ್ಕೆ ಪ್ರತಿಫಲ ಸಿಗದಿದ್ದಾಗ, ಜ್ವರ ಬಂದು ನನ್ನಾಸರೆ ಬಯಸಿ ಬಂದಾಗ ಹೀಗೆ ನಾನು ಎಲ್ಲರಿಗೂ ಯಾವಾಗಲೂ ಜೊತೆಯಾಗಿದ್ದೇನೆ. ಮಕ್ಕಳಿಗಂತೂ ನನ್ನನ್ನು ಕಂಡರೆ ತುಂಬಾ ಇಷ್ಟ. ಪ್ರತಿನಿತ್ಯ ಮಕ್ಕಳು ಪುಸ್ತಕವನ್ನು ನನ್ನ ಮೇಲೆ ಇಟ್ಟುಕೊಂಡು ಬರೆಯುವಾಗ ಸರಸ್ವತಿಯ ಸೇವೆ ಮಾಡುವ ಅವಕಾಶಕ್ಕೆ ಮನದಲ್ಲೇ ಕೃತಜ್ಞತೆ ಸಲ್ಲಿಸಿದ್ದೇನೆ.

ನನ್ನನ್ನು ಎದೆಗವಚಿಕೊಂಡು ತನ್ನ ಪ್ರಿಯತಮನೊಡನೆ ಮಾತನಾಡುವ ಹುಡುಗಿಯ ಮಾತು ಕೇಳಿ ಎಷ್ಟೋ ಬಾರಿ ನಾಚಿದ್ದೇನೆ. ಹರೆಯದ ಹೆಣ್ಣು ಮಕ್ಕಳ ರಂಗಾದ ಕೆನ್ನೆಯ ಕೋಮಲ ಸ್ಪರ್ಶ ಪ್ರತಿದಿನ ಸಿಗುವುದು ನನಗೆ ಮಾತ್ರ. ಅವರ ಮನದ ಹುಚ್ಚಾಟಕ್ಕೆ ಮರುಳಾಗಿದ್ದೇನೆ. ಅವರ ತುಂಟಾಟಕ್ಕೆ ಕೈ ಜೋಡಿಸಿದ್ದೇನೆ. ಒಮ್ಮೊಮ್ಮೆ ದುಃಖದಿಂದ ಇಳಿದ ಅವರ ಕಣ್ಣೀರನ್ನು ನುಂಗಿ ಬೆಳಗಾಗುವಷ್ಟರಲ್ಲಿ ಅವರ ನೋವನ್ನು ಕಡಿಮೆ ಮಾಡಿ ಮನಸ್ಸನ್ನು ಹಗುರಾಗಿಸಿದ್ದೇನೆ. ಗೋಡೆಗೆ ನನ್ನನ್ನು ಇಟ್ಟುಕೊಂಡು ಒರಗಿ ಕೂತು ಯಾರಿಗೂ ಕಾಣದಂತೆ ಮುಚ್ಚಿಟ್ಟುಕೊಂಡು ಬರೆಯುವ ಡೈರಿಯ ಪ್ರತಿ ಅಕ್ಷರಕ್ಕೂ ಸಾಕ್ಷಿಯಾಗಿದ್ದೇನೆ. ಓದುವ ಪ್ರೇಮ ಸಂದೇಶಗಳಿಗೆ ಕಿವಿಯಾಗಿದ್ದೇನೆ. ನನ್ನ ಮೇಲೆ ಚಿತ್ರ-ಬರಹ, ಭಾವಚಿತ್ರಗಳ ಮೂಲಕ ಅವರ ಮನದ ಭಾವನೆಗಳನ್ನು ವ್ಯಕ್ತಪಡಿಸಲು ಸಹಕಾರಿಯಾಗಿದ್ದೇನೆ. ಹುಟ್ಟುಹಬ್ಬ , ಪ್ರೇಮಿಗಳ ದಿನ, ಮದುವೆ ವಾರ್ಷಿಕೋತ್ಸವ ಹೀಗೆ ಅವರ ಎಲ್ಲಾ ಆನಂದದ ಕ್ಷಣಗಳ ಉಡುಗೊರೆಯಾಗಿ ಕಂಗೊಳಿಸಿದ್ದೇನೆ.
ಹದಿಹರೆಯದ ಹುಡುಗರ ಕಾಲ ಮೇಲೆ ನಾನು. ನನ್ನ ಮೇಲೆ ಮೊಬೈಲ್ ಇಟ್ಟುಕೊಂಡು ಗೇಮ್ಸ್ ಆಡುವುದು ಅವರು. ಆದರೆ ಸೋತಾಗ ಛೇ, ಎಂದು ಕೈಯ್ಯಿಂದ ಎರಡೇಟು ಜೋರಾಗಿ ಬೀಳುವುದು ಮಾತ್ರ ನನಗೆ. ನನ್ನ ಮೇಲೆ ಮಲಗಿಕೊಂಡು
ಅಪ್ಪ-ಅಮ್ಮನಿಗೆ ಕಾಣದಂತೆ ಮುಸುಗು ಹಾಕಿಕೊಂಡು ಆಡುವ ಗೇಮ್ಸ್ ಗಳು, ನೋಡುವ ವೀಡಿಯೋಗಳು, ಮಾಡುವ
ಚಾಟ್ಸ್ ಗಳು ಬೇಡವೆಂದರೂ ನನ್ನ ಕಣ್ಣಿಗೆ ಬೀಳುವುದಂತೂ ಸತ್ಯ. ಆಗೆಲ್ಲಾ ನಾನೂ ಬುದ್ಧಿ ಹೇಳುತ್ತೇನೆ. ಬೇಡ ಕಣ್ರೋ, ಒಳ್ಳೇದಲ್ಲ ಅಂತ. ಆದರೆ ನನ್ನ ಧ್ವನಿ ಆಚೆ ಬರುವುದೇ ಇಲ್ಲ. ಒಂದು ವೇಳೆ ನನ್ನ ಧ್ವನಿ ಆಚೆ ಬರುವಂತಿದ್ದರೆ ನನ್ನನ್ನೂ ದೂರ ತಳ್ಳುತ್ತಿದ್ದರೋ ಏನೋ ಗೊತ್ತಿಲ್ಲ.
ಹೊಸ ದಂಪತಿಗಳ ಮಧುರ ರಾತ್ರಿಗಳಿಗೆ ಸಾಕ್ಷಿಯಾಗಿದ್ದೇನೆ. ನನ್ನ ಮೇಲೆ ತಲೆಯಿಟ್ಟು ಒಬ್ಬರನ್ನೊಬ್ಬರು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಪರಿಗೆ ಮೈಮರೆತಿದ್ದೇನೆ. ಇನ್ನೂ ಅನೇಕ ದಂಪತಿಗಳ ದಿನದ ಜಗಳಕ್ಕೆ ಮಂಗಳ ಹಾಡಿದ್ದೇನೆ. ಮರುದಿನದ ಬೆಳಗಿಗೆ ಸ್ವಾಗತ ಕೋರಿದ್ದೇನೆ. ದಿನದ ಅಂತ್ಯಕ್ಕೂ, ದಿನದ ಆದಿಗೂ ಎಲ್ಲರ ಕಣ್ಣು ಬೀಳುವುದು ಮೊದಲು ನನ್ನ ಮೇಲೆಯೇ. ಹೇಗೆ ಅಂತೀರಾ ? ರಾತ್ರಿ ತಮಗೆ ಬೇಕಾದಂತೆ ನನ್ನನ್ನು ಇಟ್ಟುಕೊಂಡು ಸುಖನಿದ್ರೆ ಮಾಡಿದವರು ಬೆಳಗ್ಗೆ ನನ್ನನ್ನು ಯಥಾ ಸ್ಥಾನದಲ್ಲಿರಿಸಿಯೇ ಮುಂದಿನ ಕೆಲಸಕ್ಕೆ ಹೋಗುವುದು. ಹಗಲಲ್ಲಿ ತಮಗೆ ಬೇಕಾದಂತೆ ನನ್ನನ್ನು ಉಪಯೋಗಿಸಲು ಹೋಗಿ ಕೆಲವೊಮ್ಮೆ ನನ್ನ ಆಕಾರ ಕಳೆದುಕೊಂಡರೂ ಗೊಣಗದೇ ಸುಮ್ಮನಿರುತ್ತೇನೆ. ಕೆಲವೊಮ್ಮೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ನನ್ನನ್ನು ಬಿಟ್ಟು ಹೋಗಿದ್ದರೂ ಅವರು ಹಿಂದಿರುಗಿದಾಗ ಮತ್ತೆ ಜೊತೆಯಾಗುತ್ತೇನೆ.
ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವೆಂಬಂತೆ ಅವರವರ ಜಗಳದಲ್ಲಿ ನನ್ನನ್ನು ಎತ್ತಿ ಎಸೆಯುವಾಗ ಹೆದರಿ ನಡುಗಿದ್ದೇನೆ. ಅವರ ಉಗ್ರ ಕೋಪಕ್ಕೆ ಕರುಳು ಬಗೆದಂತೆ ನನ್ನನ್ನು ಕಿತ್ತು ಕಿತ್ತು ಎಸೆದಾಗ, ನನ್ನ ಭಾಗಗಳನ್ನೆಲ್ಲಾ ಕಳೆದುಕೊಂಡು ಅಂಗವಿಕಲ ಆಗಿದ್ದೇನೆ. ನನ್ನನ್ನು ಬಳಸಿ ಬೇರೆಯವರಿಗೆ ಹೊಡೆಯುವಾಗ ಅವರಿಗೆ ನೋವಾಗದಂತೆ ಉಸಿರು ಬಿಗಿಹಿಡಿದುಕೊಂಡಿದ್ದೇನೆ.
ಅವರ ತಲೆನೋವು, ನೆಗಡಿಯ ಔಷಧಿಗಳಿಗೆ ನಾನೂ ಉರಿ ಅನುಭವಿಸಿದ್ದೇನೆ. ಅದರ ಘಾಟಿಗೆ ಮುಖ ತಿರುಗಿಸದೇ ಅವರ ಕಷ್ಟಕ್ಕೆ ಸ್ಪಂದಿಸಿದ್ದೇನೆ. ಅವರ ಪುಸ್ತಕ, ಪೆನ್ನು, ಮಾತ್ರೆಗಳು, ವಿಕ್ಸ್, ಅಮೃತಾಂಜನ್, ಮೊಬೈಲ್, ಡೈರಿ ಎಲ್ಲವುದಕ್ಕೂ ನನ್ನ ಅಡಿಗೆ ಜಾಗ ಕೊಟ್ಟಿದ್ದೇನೆ. ಮಾತ್ರೆಯ ಶೀಟ್ಗಳು ಒಮ್ಮೊಮ್ಮೆ ಚುಚ್ಚಿದರೆ, ವಿಕ್ಸ್, ಅಮೃತಾಂಜನ್ ಡಬ್ಬಿಗಳು ಒತ್ತಿ ಕೊಡುವ ನೋವನ್ನು ವಿಧಿಯಿಲ್ಲದೇ ಕಷ್ಟಪಟ್ಟು ಸಹಿಸಿದ್ದೇನೆ. ಸಡನ್ನಾಗಿ ಕೇಳುವ ಫೋನ್ ಶಬ್ಧಕ್ಕೆ , ಅದರ ಬೆಳಕಿಗೆ ಬೆಚ್ಚಿ ಬಿದ್ದಿದ್ದೇನೆ.

ಫೋಟೋ ಕೃಪೆ : ಅಂತರ್ಜಾಲ
ಅವರು ಕೊಟ್ಟು, ಕೊಂಡುಕೊಂಡಿರುವ ಬೆಲೆಗಿಂತ ಜಾಸ್ತಿಯೇ ಉಪಯೋಗಕ್ಕೆ ಬಂದಿದ್ದೇನೆ. ಅದಕ್ಕೇ ಎಷ್ಟು ವರ್ಷಗಳಾದರೂ ನನ್ನನ್ನು ಆಚೆಗೆ ಹಾಕದೇ ಈಗಲೂ ತಮ್ಮೊಡನೆಯೇ ಇರಿಸಿಕೊಂಡಿದ್ದಾರೆ. ನನ್ನ ಬಟ್ಟೆಯನ್ನು ಆಗಾಗ ಬದಲಿಸಿ ಶುಭ್ರಗೊಳಿಸಿದ್ದನ್ನು ಹಾಕಿದಾಗ ಖುಷಿಪಟ್ಟಿದ್ದೇನೆ. ಹೊಸಬಟ್ಟೆ ಸಿಕ್ಕಾಗಲಂತೂ ಅವರ ಕಂಗಳನ್ನು ತಣಿಸಿ ತಂಪಾಗಿಸಿದ್ದೇನೆ. ನನ್ನ ಒಡೆಯ/ಒಡತಿ ಮೃದುವಾಗಿ ಸ್ಪರ್ಶಿಸಿದಾಗ ಕರಗಿ ಹೋಗಿದ್ದೇನೆ. ಎಷ್ಟೋ ಜನರು ನನ್ನ ತಯಾರಿಕೆ, ಮಾರಾಟದಿಂದ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಇನ್ನು ಕೆಲವರು ಯಾವುದಾದರೂ ಸಮಾರಂಭದಲ್ಲಿ ಕುಳಿತಾಗ ಅವರ ಹೊಟ್ಟೆ ಕಾಣದಿರಲೆಂದೋ, ಹಾಕಿರುವ ತುಂಡು ಉಡುಗೆಗಳಿಂದ ಆಗುವ ಅಭದ್ರತೆಯನ್ನು ನೀಗಿಸಲೆಂದೋ ನನ್ನನ್ನು ಅವರ ಕಾಲಮೇಲೆ ಇರಿಸಿಕೊಂಡಾಗ ರಕ್ಷಣೆ ನೀಡಿ ಅವರ ಆತ್ಮವಿಶ್ವಾಸ ಹೆಚ್ಚಿಸಿದ್ದೇನೆ. ಗೊರಕೆ ಸದ್ದಿಗೆ ಬೇರೆಯವರು ಗೊಣಗಿದರೂ ನಾನು ಮಾತ್ರ ನಿಶ್ಯಬ್ಧವಾಗಿದ್ದೇನೆ. ನಿದ್ದೆಯಲ್ಲಿ ಅವರಿಗರಿವಿಲ್ಲದಂತೆಯೇ ಇಳಿಯುವ ಜೊಲ್ಲಿಗೂ ಜಾಗ ಕೊಟ್ಟಿದ್ದೇನೆ. ಸಾಕು ಪ್ರಾಣಿಗಳಾದ ನಾಯಿ, ಬೆಕ್ಕುಗಳಿಗೂ ನಾನೆಂದರೆ ಬಹಳ ಇಷ್ಟ. ನನ್ನ ಮೇಲೆಯೇ ನಿದ್ರಿಸುವ ಅವುಗಳು ನನ್ನನ್ನು ಕಚ್ಚಿ, ಎಳೆದು, ಕೆರೆದು ಪರಚಿದರೂ ಅವುಗಳ ಮುಗ್ಧತೆಯ ತುಂಟಾಟಕ್ಕೆ ಮರುಳಾಗಿ ಖುಷಿಪಟ್ಟಿದ್ದೇನೆ.
ಆಸ್ಪತ್ರೆ ಬೆಡ್ಡಲ್ಲಿ ಮಲಗಿದ್ದವರ ಕಣ್ಣೀರಲ್ಲಿ ನಾನೂ ಬೆರೆತು ಹೋಗಿದ್ದೇನೆ. ಹಗಲಿರುಳು ಅವರು ಮಾಡುವ ಪ್ರಾರ್ಥನೆಗೆ ನಾನೂ ಬೇಡಿದ್ದೇನೆ. ಬಂಧು-ಬಾಂಧವರು, ಸ್ನೇಹಿತರ ಪ್ರೀತಿಗೆ ತಲೆಬಾಗಿದ್ದೇನೆ. ವೈದ್ಯರು, ದಾದಿಯರ ಸೇವೆಗೆ ಕೃತಜ್ಞತೆ ಸಲ್ಲಿಸಿದ್ದೇನೆ. ಎಷ್ಟೋ ಹುಟ್ಟು-ಸಾವುಗಳಿಗೆ ಸಾಕ್ಷಿಯಾಗಿದ್ದೇನೆ.
ಕತ್ತರಿಸುವಾಗ, ಹೊಲಿಯುವಾಗ, ತುರುಕೀ ತುರುಕೀ ನನ್ಹೊಟ್ಟೆಯನ್ನು ತುಂಬಿಸುವಾಗ ನೋವಿನಿಂದ ಅತ್ತ ನಾನು ಇಂದು ಎಷ್ಟೋ ಜನರ ನೋವಿಗೆ ಸಾಂತ್ವನ ನೀಡುವ ವಸ್ತುವಾಗಿದ್ದೇನೆ. ತಲೆಗೆ, ಕುತ್ತಿಗೆಗೆ ಆಧಾರವಾಗಿ, ಕುಳಿತಾಗ, ಅಡ್ಡಾದಾಗ ಶರೀರಕ್ಕೆ ಆಧಾರ ನೀಡಲು, ಕೈ ಇಟ್ಟುಕೊಳ್ಳಲು, ಕುರ್ಚಿಗಳಲ್ಲಿ ಒರಗಲು, ದಿವಾನ್, ಸೋಫಾ ಮೇಲೆ ಅಲಂಕಾರಕ್ಕೆ, ಕಾರುಗಳಲ್ಲಿ ಹೀಗೆ ಎಲ್ಲಾ ಕಡೆಯೂ ನನ್ನ ಅಸ್ತಿತ್ವವನ್ನು ಕಂಡುಕೊಂಡಿದ್ದೇನೆ. ಕೆಲವರಿಗೆ ತಲೆಯಡಿ ನಾನು ಮಾತ್ರ ಸಾಕೆನಿಸಿದರೆ ಇನ್ನು ಹಲವರಿಗೆ ನನ್ನ ಒಂದಿಬ್ಬರು ಜೊತೆಗಾರರೂ ಬೇಕಾಗುತ್ತಾರೆ. ಎಲ್ಲರ ಸುಖ-ದುಃಖ, ಅಳು-ನಗು, ಖುಷಿ, ಭಾವನೆಗಳು ತಿಳಿದಿರುವುದು ನನಗೆ ಮಾತ್ರ. ಅವರ ಭಾವನೆಗೆ ಕರಗಿದ್ದೇನೆ. ಮಾನವ ನಿರ್ಮಿತ, ಜೀವವಿಲ್ಲದ ವಸ್ತುವಾದರೂ ಭಾವ ತುಂಬಿದ ಮನುಷ್ಯನ ಒಡನಾಟದಿಂದ ಉದ್ವೇಗಕ್ಕೆ ಒಳಗಾಗಿದ್ದೇನೆ. ಹಗಲಿಡೀ ದುಡಿದು ದಣಿದು ಬಂದು ನನ್ನ ಮೇಲೆ ತಲೆಯಿಟ್ಟು ಹಾಯೆನಿಸಿ, ನಿದ್ರಿಸಿ ಕನಸು ಕಾಣುತ್ತಾ ಸುಖಿಸುವಾಗ ನನ್ನ ಜನ್ಮಕ್ಕೂ ಸಾರ್ಥಕದ ಭಾವ. ಆದರೆ ಅವರ ಸಿಹಿಗನಸಲ್ಲಿ ಮಾತ್ರ ನನಗೆ ಪಾಲಿಲ್ಲ ಅಷ್ಟೇ.
(ಸುತ್ತ ಮುತ್ತ _ ಲೇಖನಗಳ ಸಂಕಲನದಿಂದ)
ಹಿಂದಿನ ಸಂಚಿಕೆಗಳು :
- ಮಂಗಳ ಎಂ ನಾಡಿಗ್
