ಇರುವೆಯ ವಿಸ್ಮಯ ಜಗತ್ತುಒಮ್ಮೆ ಒಬ್ಬ ವಿಜ್ಞಾನಿ ಒಂದು ಇರುವೆಯನ್ನು ತಲೆಮಾತ್ರ ಕಾಣುವಂತೆ ಬಿಟ್ಟು ಉಳಿದ ಭಾಗವನ್ನು ಮಣ್ಣಿನ ಉಂಡೆಯಲ್ಲಿ ಮುಚ್ಚಿಟ್ಟನಂತೆ. ಅಲ್ಲಿಗೆ ಬಂದ ಒಂದೆರಡು ಇರುವೆಗಳು ಆ ಮಣ್ಣಿನುಂಡೆಯ ಸುತ್ತ ಓಡಾಡಿ ಮೂಸಿನೋಡಿ ಹೋದವಂತೆ. ಸ್ವಲ್ಪ ಸಮಯ ಬಿಟ್ಟು ಒಂದು ಗುಂಪೇ ಬಂದು ಆ ಇರುವೆಯನ್ನು ಮಣ್ಣಿನುಂಡೆಯಿಂದ ಬಿಡುಗಡೆ ಮಾಡಿದವಂತೆ. ಈ ಕತೆಯನ್ನು ಓದಿದ ಮೇಲೆ ಇವುಗಳ ಬಗ್ಗೆ ತಿಳಿಯುವಾಸೆಯಾಯಿತು. ತಿಳಿದದ್ದು ನಿಮಗೆ ಹೇಳುವಾಸೆಯಾಯಿತು.

“ಇರುವೆ… ಇರುವೆ… ಎಲ್ಲಿರುವೆ? ಎಂದರೆ ಎಲ್ಲೆಲ್ಲೂ ನಾನಿರುವೆ” ನೆಂದು ಹೇಳುವ ಪುಟ್ಟ ಜೀವಿಯ ಬಗ್ಗೆ ಲೇಖಕಿ ಸುಮಾ ಕಳಸಾಪುರ ಅವರ ಪುಟ್ಟ ಬರಹ.

ಒಬ್ಬ ಜರ್ಮನ್, ಬಿಸ್ಮಾರ್ಕ್ ಎಂಬ ಪರಿಸರ ತಜ್ಞ ನದು ಒಂಥರಾ ವಿಚಿತ್ರ ಆಸೆ. ಅವರು ಹೇಳ್ತಾರೆ, “ನನಗೇನಾದ್ರೂ ಇನ್ನೊಂದು ಬಾರಿ ಭೂಮಿ ಮೇಲೆ ಜನ್ಮ ತಾಳೋ ಅವಕಾಶ ಸಿಕ್ಕಿದ್ರೆ , ನಾನು ಇರುವೆಯಾಗಿ ಹುಟ್ಟೋಕೆ ಇಷ್ಟ ಪಡ್ತೀನಿ.” ಅಂತ ಹೇಳ್ತಿದ್ರಂತೆ. ಪ್ರಪಂಚದಲ್ಲಿ ಅನೇಕ ಬಲಶಾಲಿ ಪ್ರಾಣಿಗಳೂ, ಸುಂದರ ಪ್ರಾಣಿಗಳೂ ಇರ್ಬೇಕಾದ್ರೆ ಅತಿ ಚಿಕ್ಕ ಪ್ರಾಣಿಯಾಗಿ ಮತ್ತೆ ಹುಟ್ಟೋಕೆ ಇಷ್ಟ ಪಡ್ತಾರೇಂದ್ರೆ ಈ ಆಸೆ ವಿಚಿತ್ರವಲ್ಲದೆ ಮತ್ತೇನೂ…? ಅವರ ಪ್ರಕಾರ ಮನುಷ್ಯನಂತೆ ಸಂಘ ಜೀವಿಯಾಗಿದ್ದು, ತನ್ನ ಸಮೂದಾಯದ ಒಳಿತಿಗೆ ಶಿಸ್ತಿನಿಂದ ದುಡಿಯುವ ಪ್ರಾಣಿಯೆಂದರೆ ಇರುವೆಯೊಂದೆ. ಮತ್ತೆ ಬೇರಾವ ಜೀವಿಯಿಂದಲೂ ಇಂಥಹ ಒಗ್ಗಟ್ಟು ಕಾಣಸಿಗಲಾರದು ಎಂದು. ಹೌದು, ನನಗೆ ಜೀಯೋಗ್ರಫಿಕಲ್ ಚಾನೆಲ್ ನಲ್ಲಿ ವೀಕ್ಷಿಸಿದಾಗ ಅವರ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆಯಿದೆ ಎಂದೆನಿಸಲಿಲ್ಲ. ಅವುಗಳ ಜೀವನ ಶೈಲಿ ಬುದ್ದಿವಂತ ಪ್ರಾಣಿ ಮನುಷ್ಯನಿಗೇ ಮಾದರಿಯಾಗಿದೆಯೆಂದರೆ ತಪ್ಪಾಗಲಾರದು.

ಇರುವೆಗಳ ಸಾಮ್ರಾಜ್ಯ ಬಹಳ ವಿಸ್ತಾರವಾದದ್ದು: 

ಫೋಟೋ ಕೃಪೆ : shutterstock

ಮೇಲ್ನೋಟಕ್ಕೆ ಇವುಗಳ ವಾಸಸ್ಥಾನ ಒಂದು ಸಣ್ಣ ಗುಡ್ಡೆಯಂತೆ ಕಂಡರೂ ನೆಲದಡಿಯಲ್ಲಿ ಇವುಗಳ ವಿಸ್ತಾರ ಮೀಟರ್/ ಕಿಲೋಮೀಟರ್ಗಳಷ್ಟು ಹಬ್ಬಿರುತ್ತದೆಂದರೆ ಆಶ್ಚರ್ಯ ಪಡಬೇಕಾದ್ದೇನಿಲ್ಲ. ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇರುವೆಗಳು ಚಟುವಟಿಕೆಯಿಂದ ತಮ್ಮನ್ನು ತೊಡಗಿಸಿಕೊಂಡಿರುತ್ತವೆ. ಪ್ರತ್ಯೇಕ ಕೋಣೆಗಳು, ಗ್ಯಾಲರಿಗಳ ನಿರ್ಮಾಣ ಮಾಡಿಕೊಂಡು ನಿರಂತರವಾಗಿ ತಮಗೆ ನಿಯೋಜಿಸಿದ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತವೆ. ರಾಣಿ ಇರುವೆ ಈ ಸಾಮ್ರಾಜ್ಯದ ಕೇಂದ್ರ ಬಿಂದು. ಅವಳ ಕೆಲಸ ಕೇವಲ ಮೊಟ್ಟೆಯಿಡುವುದಷ್ಟೆ. ಅವಳೊಬ್ಬಳೇ ಮುಂದಿನ ಪೀಳಿಗೆಗಾಗುವಷ್ಟು ಮೊಟ್ಟೆಯಿಡುತ್ತಾಳೆ..! ಇಟ್ಟ ಮೊಟ್ಟೆಗಳನ್ನು ಕೆಲಸಗಾರರು ನರ್ಸರಿಗೆ ಹೊತ್ತೊಯ್ದು ಇಟ್ಟರೆ, ಅಲ್ಲಿ ದಾದಿಯರು (nurse ants) ಆ ಮೊಟ್ಟೆಗಳನ್ನು ಶುಚಿಗೊಳಿಸಿ ವಿಶೇಷ ಆಹಾರವನ್ನು ಉಣಿಸಿ ಅವುಗಳ ಸಂಪೂರ್ಣ ಬೆಳವಣಿಗೆಗೆ ಶ್ರಮಿಸುತ್ತವೆ. ಬೆಳೆದ ಮೊಟ್ಟೆಗಳನ್ನು ದಾದಿಗಳೇ ಕಕೂನ್ ಛೇಂಬರ್ ಗೆ ವರ್ಗಾಯಿಸಿ ಅಲ್ಲೂ ಅವುಗಳ ಆರೈಕೆ ಮಾಡುತ್ತವೆ. ಮರಿ ಇರುವೆಗಳು ನಿದ್ರಾವಸ್ಥೆಯಲ್ಲಿರುವಾಗ ದಾದಿ ಇರುವೆಗಳು ಅವುಗಳನ್ನು (ಕಕೂನ್) ಗೂಡಿನ ಹೊರಭಾಗಕ್ಕೆ ಹೊತ್ತೊಯ್ಯುತ್ತವೆ. ಸೂರ್ಯನ ಶಾಖದಿಂದ ಕಕೂನ್ ಗಳು ಒಡೆದು ಮರಿಗಳು ಹೊರ ಬರುತ್ತವೆ. ಹೊರ ಬಂದ ನಂತರ ತಮ್ಮ ತಮ್ಮ ಕೆಲಸಕ್ಕೆ ಹಾಜರ್ . ಇಲ್ಲಿ ಸೋಂಬೇರಿಗಳು ಎಂಬ ಶಬ್ದವೇ ಇಲ್ಲ…! ದಾದಿ ಇರುವೆಗಳು ಮರಿಗಳ ಶುಶ್ರೂಷೆ ಮಾಡಿದರೆ, ಸೈನಿಕ ಇರುವೆಗಳು ಗೂಡಿನ ಹೊರಭಾಗದಲ್ಲಿ ಕಾವಲು ಕಾಯುತ್ತವೆ. ಇನ್ನುಳಿದ ಇರುವೆಗಳು ಗೂಡನ್ನು ರಿಪೇರಿ ಮಾಡುವುದು, ಆಹಾರ ಸಂಗ್ರಹಿಸುವುದೂ ಹೀಗೆ ಸತತವಾಗಿ ತಮ್ಮನ್ನು ತೊಡಗಿಸಿಕೊಂಡಿರುತ್ತವೆ.ಹಸುಗಳನ್ನು ಸಾಕುವ ಇರುವೆಗಳು :

ಮೇಲಿನ ಸಾಲನ್ನ ನೋಡಿದ್ರೆ ಆಶ್ಚರ್ಯವಾಗುತ್ತೆ ಅಲ್ವಾ? ನಿಜ, ಇರುವೆಗಳು ಹಸುಗಳನ್ನು ಸಾಕುತ್ತವೆ. ಗುಲಾಬಿ ಗಿಡ, ದಾಸವಾಳದ ಗಿಡಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಹೇನುಗಳೇ (green fly) ಇರುವೆಗಳು ಸಾಕುವ ಹಸುಗಳು. ಇವುಗಳು ಹೂವಿನಿಂದ ಹೀರಿದ ಜೇನನ್ನು ಹಿಂಬದಿಯ ಎರಡು ಸೂಕ್ಷ್ಮ ನಳಿಕೆಗಳ ಮೂಲಕ ಸಣ್ಣ ಸಣ್ಣ ಹನಿಗಳಾಗಿ ಹೊರಬಿಡುತ್ತವೆ. ಆ ಹನಿಗಳನ್ನು ಇರುವೆಗಳು ಹೊತ್ತೊಯ್ದು ಮರಿಗಳಿಗೆ ಉಣಿಸುತ್ತದೆ. ಅದಕ್ಕೋಸ್ಕರ ಇರುವೆಗಳ ಒಂದು ತಂಡವೇ ಅವುಗಳ ಪಾಲನೆ ಮಾಡುತ್ತವಂತೆ!!! ಮಿಡತೆ, ಮತ್ತೆ ಬೇರೆ ಕೀಟಗಳಿಂದ ಆ ಹಸುಗಳಿಗೆ ಉಪದ್ರವ ಆಗಬಾರದೆಂದೇ ಇವು ಅವುಗಳ ಬಾಡಿಗಾರ್ಡ್ ಆಗಿರ್ತಾವಂತೆ. ಅಬ್ಬಾ..! ಅದೆಷ್ಟು ಸೋಜಿಗದ ಸಂಗತಿ ನೋಡಿ.

ಫೋಟೋ ಕೃಪೆ : Newstalk

ಇರುವೆಗಳಲ್ಲೂ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಎಂಬ ಎರುಡು ವರ್ಗಗಳಿವೆ. ಸಸ್ಯಾಹಾರಿ ಇರುವೆಗಳು ( leaf cutting ants ) ಜೀವಿಗಳಿಗೆ ನೇರವಾಗಿ ತೊಂದರೆ ಕೊಡದಿದ್ದರೂ ಪರೋಕ್ಷವಾಗಿ ಹಾನಿ ಮಾಡುತ್ತವೆ. ಇವುಗಳು ಆಹಾರಕ್ಕಾಗಿ ಒಂದು ಮರವನ್ನೆ ಆಕ್ರಮಿಸಿ ಅದರ ಎಲೆಗಳನ್ನು ಕಿತ್ತು ತಂದು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಗೂಡಿನಲ್ಲಿ ಸಂಗ್ರಹಿಸಿಡುತ್ತವೆ. ಕೆಲ ದಿನಗಳ ನಂತರ ಆ ಎಲೆಗಳು ಕೊಳೆತು ಅದರ ಮೇಲೆ ಬೆಳೆಯುವ ಶಿಲೀಂದ್ರಗಳು ಇವುಗಳ ಆಹಾರವಾಗುತ್ತದೆ. ಇದಕ್ಕಾಗಿ ಅವುಗಳು ಒಂದು ಮರವನ್ನೇ ಬೋಳುಗೊಳಿಸುತ್ತದೆಂದರೆ ಆಶ್ಚರ್ಯವೇನಿಲ್ಲ.

ಆದರೆ ಕ್ಯಾನಿಬಾಲ್ ಇರುವೆಗಳು ( ಮಾಂಸಾಹಾರಿಗಳು) ಮಾತ್ರ ಬಹಳ ಅಪಾಯಕಾರಿಗಳು. ಇವುಗಳು ಸತ್ತ ಪ್ರಾಣಿಗಳನ್ನಷ್ಟೇ ಭಕ್ಷಿಸುವುದಿಲ್ಲ, ಜೊತೆಗೆ ಜೀವಂತ ಪ್ರಾಣಿಗಳನ್ನೂ ಕಚ್ಚಿ ಸಾಯಿಸಿ ತಿಂದು ಬಿಡುತ್ತವೆ. ಇವುಗಳ ಅತಿ ದೊಡ್ಡ ಸೈನ್ಯ (ಲಕ್ಷಾಂತರ ಇರುವೆಗಳ ಒಂದು ಗುಂಪು) ರಾತ್ರಿ ವೇಳೆ ಬೇಟೆಗೆ ಹೊರಟು ತಮ್ಮ ಮುಖ್ಯಸ್ಥರ ಆದೇಶದಂತೆ ಶಿಸ್ತಿನಿಂದ ಜೀವಿಗಳನ್ನು ಸುತ್ತುವರೆದು ಒಮ್ಮೆಲೇ ಆಕ್ರಮಣ ಮಾಡುತ್ತವೆ. ಈ ಆಕ್ರಮಣದಿಂದ ಯಾವ ಬೃಹತ್ ಪ್ರಾಣಿಗಳೂ ತಪ್ಪಿಸಿಕೊಳ್ಳಲಾಗದು. ಸಣ್ಣ ಜಿರಲೆಯಿಂದ ಹಿಡಿದು ದೊಡ್ಡ ಗಾತ್ರದ ಹುಲಿ, ಚಿರತೆ, ಹೆಬ್ಬಾವುಗಳೂ ಕೂಡ ಇವುಗಳ ಆಕ್ರಮಣಕ್ಕೆ ಶರಣಾಗಲೇ ಬೇಕು..! ಈ ಆಕ್ರಮಣಕ್ಕೆ ಮನುಷ್ಯರೇನೂ ಹೊರತಾಗಿಲ್ಲ. ಇಂಥಹ ಪ್ರದೇಶದಲ್ಲಿ ಜನರು ತಮ್ಮ ಬೆಡ್ ಗಳನ್ನು ಗೋಡೆಗೆ ತಾಗಿಸದೆ, ಮಂಚದ ಕಾಲಿಗೆ ಸಾಸರ್ ಫಿಕ್ಸ್ ಮಾಡಿ,ಅದರಲ್ಲಿ ಸೀಮೆ ಎಣ್ಣೆಯನ್ನು ಹಾಕಿ ಮಲಗಿಕೊಳ್ಳುತ್ತಾರಂತೆ. ಇಲ್ಲದಿದ್ದರೆ ತಾವೇ ಸಜೀವವಾಗಿ ಇರುವೆಗಳಿಗೆ ಆಹಾರವಾಗುವುದನ್ನು ತಪ್ಪಿಸಿಕೊಳ್ಳಲಾಗುವುದಿಲ್ಲವಂತೆ. ಇದನ್ನ ನೆನೆಸಿಕೊಂಡರೆ ಮೈ ನಡುಕ ಬರುವುದಿಲ್ಲವೇ..?

ಫೋಟೋ ಕೃಪೆ : Nikkei Asia

ಇರುವೆಗಳು ಶಿಸ್ತಿನ ಸಿಪಾಯಿಗಳು ಯಾರೊಬ್ಬರೂ ಸೋಂಬೇರಿಗಳಲ್ಲ. ತಮಗೆ ನಿಯೋಜಿಸಿದ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತವೆ. ತಮ್ಮ ಗುಂಪಿನ ಯಾವುದೇ ಇರುವೆ ಆರೋಗ್ಯ ತಪ್ಪಿದರೆ ನರ್ಸ್ ಇರುವೆ ಶುಶ್ರೂಷೆ ಮಾಡುತ್ತವೆ. ಸತ್ತ ಇರುವೆಗಳನ್ನು ನೆಲದಲ್ಲಿ ಹುಗಿದು ಅದರ ಕೆಲಸವನ್ನು ಹಂಚಿಕೊಳ್ಳುತ್ತವೆ. ಹಿಂದಿನ ಕಾಲದಲ್ಲಿ ರಾಜರುಗಳು ಬೇರೆ ಪ್ರಾಂತ್ಯದವರೊಂದಿಗೆ ಕಾದಾಡಿ ಜನರನ್ನು ಹಿಡಿದು ತಂದು ಗುಲಾಮರನ್ನಾಗಿ ಮಾಡಿಕೊಳ್ಳುತ್ತಿದ್ದರಲ್ಲಾ.., ಇರುವೆಗಳೂ ಕೂಡ ಬೇರೆ ಗುಂಪಿನ ಮೇಲೆ ಆಕ್ರಮಣ ಮಾಡಿ ತಮ್ಮ ಶತೃಗಳನ್ನು ಜೀವಂತವಾಗಿ ಹಿಡಿದು ತಂದು ತಮ್ಮ ಗುಲಾಮನನ್ನಾಗಿ ಮಾಡಿಕೊಳ್ಳುತ್ತವೆ. ಅವುಗಳ ಕಾರ್ಯ ಕೌಶಲ್ಯ ಯಾವ ಬುದ್ದಿವಂತ ಪ್ರಾಣಿಗೂ ಕಡಿಮೆಯಿಲ್ಲ.

ಇವುಗಳ ಬಗ್ಗೆ ಒಂದು ರೋಚಕ ಕತೆಯಿದೆ. ಒಮ್ಮೆ ಇರುವೆಗಳ ಗುಂಪೊಂದು ಸಣ್ಣ ತೊರೆಯನ್ನು ದಾಟ ಬೇಕಿತ್ತಂತೆ. ಒಂದೇ ಒಂದು ಕಡ್ಡಿಯ ತುಂಡು ಸೇತುವೆಯಾಗಿತ್ತಂತೆ, ಅದರ ಮೇಲೆ ಇರುವೆಯ ಒಂದು ಸಾಲು ಮಾತ್ರ ಏಕಮುಖನಾಗಿ ಸಾಗಬಹುದಿತ್ತಂತೆ. ಆಗ ಹಿರಿಯ ನಾಯಕ ಇರುವೆಗಳು ಸೈನಿಕರಂತೆ ಕಡ್ಡಿಯ ಇಕ್ಕೆಲಗಳನ್ನೂ ಕಚ್ಚಿ ಹಿಡಿದು ಸೇತುವೆಯ ಅಗಲವನ್ನು ದ್ವಿಗುಣಗೊಳಿಸಿದವಂತೆ. ಆಗ ಏಕ ಕಾಲದಲ್ಲಿ ನಾಲ್ಕು ಸಾಲು ಇರುವೆಗಳು ತೊರೆಯನ್ನು ದಾಟಬಹುದಾಯ್ತಂತೆ.

ಹೀಗೆ ತನ್ನ ಸ್ವಾರ್ಥಕ್ಕಾಗಿ ದುಡಿಯದೆ ತನ್ನ ಸಮೂಹದ ಒಳಿತಿಗಾಗಿ ತಮ್ಮ ಜೀವವನ್ನೇ ಮುಡಿಪಾಗಿ ಇಡುವ ಪುಟ್ಟ ಜೀವಿಗೆ ನನ್ನದೊಂದು ದೊಡ್ಡ ಸಲಾಂ.


  • ಸುಮಾ ಕಳಸಾಪುರ
5 1 vote
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW