ಕೇದಾರನಾಥ ಪ್ರವಾಸಾನುಭವ- ಮಾಲತಿ ಮುದಕವಿಈ ನಮ್ಮ ಜೀವನವೇ ರೋಚಕತೆ ತುಂಬಿದ್ದು. ಪ್ರತಿಯೊಂದು ಕ್ಷಣದಲ್ಲೂ ಮುಂದೇನು ಎಂಬ ಕುತೂಹಲ… ಹೀಗಿರುವಾಗ ರೋಚಕ ಕ್ಷಣಗಳಿಗೆ ಬರವೇ? ಅನೇಕ ಬಾರಿ ಎದುರಿಸಿರುತ್ತೇವೆ. ಆದರೆ ಲೇಖಕಿ ಮಾಲತಿ ಮುದಕವಿ ಅವರ ಸ್ಮೃತಿ ಪಟಲದಲ್ಲಿ ಅಚ್ಚಳಿಯದೆ ಉಳಿದಿರುವುದು ಆ ಕೇದಾರನಾಥನ ಸನ್ನಿಧಿಗೆ ಹೊರಟಂಥ ಕ್ಷಣ…

ದೊಡ್ಡ ದೊಡ್ಡ ನಗರಗಳು, ವಿಮಾನ ನಿಲ್ದಾಣಗಳು, ಗಗನಚುಂಬಿ ಕಟ್ಟಡಗಳು, ಸ್ವಯಂಚಾಲಿತ ರೈಲುಗಳು.. ಹೀಗೆ ದೇಶ-ವಿದೇಶಗಳ ಅನುಭವಗಳ ಬಗ್ಗೆ ನಾನು ಹೇಳುತ್ತಲಿಲ್ಲ. ಹಾಗೆಂದು ನಾನು ವಿದೇಶ ಪ್ರವಾಸ ಮಾಡಿಯೇ ಇಲ್ಲವೆಂದೇನಲ್ಲ. ಎಂಟು ಬಾರಿ ಸುತ್ತು ಹಾಕಿದ್ದೇನೆ. ಆದರೆ ನನ್ನನ್ನು ಇಷ್ಟೊಂದು ಸೆಳೆದುದು ಮಾತ್ರ ಹಿಮಾಲಯದ ಆ ಗಗನಚುಂಬಿ ಶಿಖರ ಶ್ರೇಣಿಯಲ್ಲಿ ಅವಿತು ಕುಳಿತು ಕಾಡುವ ಕೇದಾರನಾಥ! ಆ ಪಯಣವೋ… ನೇರ ಕೈಲಾಸಕ್ಕೇ ಹೊರಟ ಅನುಭವ! ಅವನ ಬಳಿಗೆ ಹೋಗಬೇಕೆಂದರೆ ಆ ಮಾರ್ಗ ಸರಳವೇನಲ್ಲ… ಮುಕ್ತಿ ಪಡೆಯಲೆಂದು ಹಿಂದಿನ ಕಾಲದ ಋಷಿಮುನಿಗಳು ಇಂಥ ಕಡುಚಳಿಯ ಹಿಮಾಲಯದಡಿಯಲ್ಲಿ ತಪಸ್ಸನ್ನಾಚರಿಸುತ್ತಿದ್ದರಂತೆ! ಅದು ನಮ್ಮ ಅಳವಲ್ಲ. ನಾನೀಗ ಹೇಳುತ್ತಿರುವುದು ಆ ಪ್ರವಾಸದ ಸಮಯದಲ್ಲಿ ನಾನು ಕಂಡ ನಮ್ಮ ಸುತ್ತಲಿನ ರುದ್ರರಮಣೀಯ ಪ್ರಕೃತಿ, ಅದರಲ್ಲಿ ಒಂದಾಗಿ ಹೋಗಿದ್ದರೆ ಎಂಬ ಪ್ರಶ್ನಾತೀತ ಅನುಭೂತಿಯ ಬಗ್ಗೆ… ನಮ್ಮನ್ನು ಹೆಗಲಮೇಲೆ ಹೊತ್ತೊಯ್ಯುವ ಆ ತೆಳುಕಾಯದ ಭೀಮಶಕ್ತಿಯ ನೇಪಾಳಿಗಳ ಬಗ್ಗೆ!

ಫೋಟೋ ಕೃಪೆ : char dham yatra

ಕೇದಾರನಾಥದಲ್ಲಿ ಮೂಲ ದೇವಾಲಯವು ಕಲ್ಲಿನ ಸುಂದರ ಶಿಲ್ಪವಾಗಿದ್ದು. ಇದನ್ನು ಸುಮಾರು ೮ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿದರೆಂದು ಹೇಳಲಾಗುತ್ತಿದೆ. ಇದು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲೊಂದು. ಚಾರಧಾಮ ಯಾತ್ರೆಯಲ್ಲಿ ಇದೊಂದು ಮುಖ್ಯ ಯಾತ್ರಾ ಸ್ಥಳ. ಕೇದಾರನಾಥ ಯಾತ್ರೆಯು ‘ಭಾರತ-ಚೀನಾ’ ಗಡಿಗೆ ಅಂಟಿಕೊಂಡಂತಿರುವ ‘ಗೌರಿಕುಂಡ’ವೆಂಬ ಪ್ರದೇಶದಿಂದ ಪ್ರಾರಂಭವಾಗುತ್ತದೆ. ಸಮತಟ್ಟಾದ ಪ್ರದೇಶವಾದ ಇಲ್ಲಿಂದ ಸುಮಾರು ೧೪ ಕಿ.ಮೀ. ಕಾಲ್ನಡಿಗೆ, ಕುದುರೆಸವಾರಿ ಅಥವಾ ಡೋಲಿಯಲ್ಲಿ ಪಯಣಿಸಬೇಕು. ದೇವಾಲಯದ ಮುಖ್ಯದ್ವಾರದಿಂದ ಒಳಗೆ ಬಂದೊಡನೆ ಪ್ರಾಕಾರದಲ್ಲಿ ಪಾಂಡವರ, ಕೃಷ್ಣ, ನಂದಿ ಮತ್ತು ವೀರಭದ್ರನ ಮೂರ್ತಿಗಳಿವೆ. ಈ ದೇವಾಲಯ ವಿಚಿತ್ರವೆಂದರೆ ತ್ರಿಕೋನಾಕಾರದ ಕಲ್ಲಿನ ಮೇಲೆ ಕೆತ್ತಿರುವ ಮಾನವನ ತಲೆ. ಈ ದೇವಸ್ಥಾನದ ಹಿಂದೆಯೇ ಶಂಕರರ ಸಮಾಧಿ ಮಂದಿರವಿದೆ. ಗೌರಿಕುಂಡವು ಸಮುದ್ರಮಟ್ಟದಿಂದ ೬೫೦೦ ಅಡಿ ಎತ್ತರದಲ್ಲಿದೆ. ಇಲ್ಲಿನ ಪ್ರಾಚೀನ ಶೈವ ಪೀಠಗಳಲ್ಲೊಂದಾದ ಏಕೋರಾಮಾರಾಧ್ಯ ಪೀಠವು ಶತಶತಮಾನಗಳಿಂದಲೂ ಅಸ್ತಿತ್ವದಲ್ಲಿದ್ದು ಖ್ಯಾತಿ ಗಳಿಸಿದೆ.

ಫೋಟೋ ಕೃಪೆ : char dham yatra

ನಾವು ಗೌರಿಕುಂಡವನ್ನು ಅಂದು ಸಾಯಂಕಾಲವೇ ತಲುಪಿದ್ದೆವು. ಮರುದಿನವೇ ಕೇದಾರನಾಥ ದರ್ಶನಕ್ಕೆ ನಮ್ಮ ಪಯಣ ಸಜ್ಜಾಗಿತ್ತು. ನಮ್ಮ ಟೂರ್ ಮ್ಯಾನೇಜರ್ ನಮ್ಮ ಪ್ರಯಾಣದ ಎರಡು option ಇಟ್ಟಿದ್ದರು. ಮೂರನೆಯದು ಹೆಲಿಕಾಪ್ಟರ್ ಪಯಣ. ಅದು ಮೊದಲೇ ಬುಕ್ ಆಗಿದ್ದರಿಂದ ನಮಗೆ ದಕ್ಕಿರಲಿಲ್ಲ. ಈಗ ನಮ್ಮ ಪ್ರಯಾಣದ ಬಗ್ಗೆ ಚರ್ಚೆಯಾಗಿತ್ತು. ಹೇಸರಗತ್ತೆಗಳು ಅದರೆ ಪೋನಿ ಮೇಲೋ, ನಾಲ್ಕು ಜನರ ಹೆಗಲಮೇಲೋ ಅಥವಾ ಒಬ್ಬ ವ್ಯಕ್ತಿಯ ಬೆನ್ನ ಮೇಲೋ ಎಂದು. ನನಗಂತೂ ಕುದುರೆಗಳ ಮೇಲೆ ಭರವಸೆ ಇರಲಿಲ್ಲ. ಅವು ನಮ್ಮನ್ನು ಬೀಳಿಸಿಬಿಟ್ಟರೆ? (ನಿಜ ಹೇಳಬೇಕೆಂದರೆ ಅವುಗಳ ಸ್ಥಿತಪ್ರಜ್ಞತೆಯೇ ವಿಶ್ವಾಸಾರ್ಹ) ಎಂಬ ಭಯ. ಅದಕ್ಕೆ ಕಾರಣವೂ ಇದೆ. ಆ ಇಕ್ಕಟ್ಟಾದ ಮಾರ್ಗದಲ್ಲಿ, ಪರ್ವತದ ಪಕ್ಕದಲ್ಲಿ ಕಾಲ್ನಡಿಗೆಯವರು, ಅವರ ಪಕ್ಕ ಡೋಲಿಯವರು ಅಂದರೆ ನಾಲ್ಕು ಜನರ ಹೆಗಲು, ಕೊನೆಯಲ್ಲಿ ಅಂದರೆ ಪರ್ವತ ಶ್ರೇಣಿಯ ಅತ್ಯಂತ ತುದಿಯಲ್ಲಿ. ಕೆಳಗೆ ನೋಡಿದರೆ ತಲೆತಿರುಗುವಂಥ ಆಳವಾದ ಕೊಳ್ಳದಲ್ಲಿ ಧಡಾಯಿಸಿ ಸಶಬ್ದವಾಗಿ ಹರಿಯುವ ಮಂದಾಕಿನಿಯ ಆರ್ಭಟ! ಅದು ಕುದುರೆಗಳ ದಾರಿ. ಕುದುರೆ ಮಾಲಿಕ ನೆಪಮಾತ್ರಕ್ಕೆ ಅದರ ಲಗಾಮನ್ನು ಹಿಡಿದಿರುತ್ತಾನೆ. ಮೇಲಿನಿಂದ ಒಮ್ಮೊಮ್ಮೆ ದಡಬಡನೆ ಉರುಳಿ ಬೀಳಬಹುದಾದ ಹಿಮಾವೃತ ಬಂಡೆಗಳು! ಅವುಗಳಿಂದ ತಪ್ಪಿಸಿಕೊಳ್ಳಲು ಕೂಡ ಕುದುರೆಗಳಿಗೆ ಅವಕಾಶವಿರದು…

ಫೋಟೋ ಕೃಪೆ : uttarachal

ಫೋಟೋ ಕೃಪೆ : indiamike

ಒಟ್ಟಿನಲ್ಲಿ ನಾನು ಹಾಗೂ ನಮ್ಮವರು ಬದುಕಿರುವಾಗಲೇ ನಾಲ್ಕು ಜನರ ಹೆಗಲೇರಲು ಸಿದ್ಧರಾದೆವು. ಒಂದು ವಿಶೇಷವೆಂದರೆ ಇಲ್ಲಿಯ ವರೆಗೂ ಜೊತೆ ಜೊತೆಗೇ ಕಾಶಿಯಲ್ಲಿ ವಿಶ್ವೇಶ್ವರನ ದರ್ಶನ, ಅಭಿಷೇಕ, ಅಲಹಾಬಾದಿನಲ್ಲಿ ಪತಿಯ ತೊಡೆಯೇರಿ ಕುಳಿತು ಜಡೆ ಹೆಣಿಸಿಕೊಂಡು ವೇಣೀದಾನ ಮಾಡಿದ ದಂಪತಿಗಳು ಇಲ್ಲಿಯ ಪಯಣಕ್ಕೆ ಒಂಟಿಯಾಗಿಯೇ ಸಿದ್ಧರಾಗಬೇಕು. ನಾವು ಭಾರತೀಯರು. ಜೊತೆಜೊತೆಗೆ ಜೀವಿಸಲೆ ಇಷ್ಟ ಪಡುವವರು.. ಆದರೆ ಇದೊಂದು ಮಹಾಪ್ರಸ್ಥಾನದ ಅಣಕು ನಾಟಕವೇ ಸೈ! ನಾವಿಬ್ಬರೂ ಒಂದೇ ಸಮಯಕ್ಕೆ ಆ ಡೋಲಿಯ ಸ್ಟೇಶನ್ ಗೆ ಬಂದರೂ ನನ್ನ ಪಯಣ ಮೊದಲು ಪ್ರಾರಂಭವಾಗಿತ್ತು. ನಾನು ಡೋಲಿಯಲ್ಲಿ ಕುಳಿತೆ. ನನ್ನನ್ನು ಎತ್ತಿಕೊಂಡು ಅವರು ಮೆಟ್ಟಿಲು ಹತ್ತತೊಡಗಿದರು. ದೇಹವೆಲ್ಲ ಕೆಳ ಜೋಲಿ. ಕಾಲುಗಳು ಮೇಲಕ್ಕೆ! ಸುತ್ತಣದ ಆ ಸುಂದರ ದೃಶ್ಯಗಳನ್ನು ನೋಡಿ ಆನಂದಿಸುವ ನನ್ನ ಆಶೆ ನುಚ್ಚುನೂರಾಗಿತ್ತು! ಸಾವು ಇಲ್ಲಿಯೇ ಬಾಯಿ ತೆರೆಯಿತೇನೋ ಎಂಬ ಆತಂಕ… ಕಣ್ಣು ಮುಚ್ಚಿಕೊಂಡು ದೇವರನ್ನು ನೆನೆಯತೊಡಗಿದೆ. ಆದರೆ ಆ ೧೪ ಕಿಲೋಮೀಟರ್ ನ ಸುದೀರ್ಘ ಪಯಣದಲ್ಲಿ ಎಷ್ಟು ಸಮಯ ಕಣ್ಣು ಮುಚ್ಚಿರಲು ಸಾಧ್ಯ?ಅಲ್ಲದೆ ಆ ತೆಳುಕಾಯದ ಐದಡಿ ಎತ್ತರದ ನೇಪಾಳಿ ಯುವಕರು “ಮಾಯಿ, ಆಂಖೇ ಖೋಲಿಯೆ.. ಡರತೇ ಕ್ಯೂ ಹೋ? ಹಮ ಆಪ್ ಕೋ ಫೂಲೋಂ ಕೀ ತರಹಾ ಲೇಕೆ ಜಾಯೇಂಗೆ.. ಚಿಂತಾ ಮತ್ ಕರೋ” ಎಂದು ಧೈರ್ಯ ಹೇಳಿದ್ದರು. ಅವರೋ ತೀರಾ ತೆಳ್ಳಗೆ. ನಾನು ೫೬ಕಿಲೋ ಭಾರ. ಹೂವಲ್ಲ, ಹೂವಿನ ಮೂಟೆ! ಅಂತೂ ಕಣ್ಣು ಬಿಟ್ಟಿದ್ದೆ. ಹಿಮಾವೃತ ಪರ್ವತಗಳು ಸಾಲುಸಾಲಾಗಿ ಆ ಬೆಳಗಿನ ಬಿಸಿಲಿನಲ್ಲಿ ಬೆಳ್ಳಿಯೋಪಾದಿಯಲ್ಲಿ ಮಿಂಚುತ್ತಿವೆ. ಎತ್ತರದ ಹಸಿರು ದೇವದಾರು ವೃಕ್ಷಗಳು… ಮಂದಾಕಿನಿಯ ಒಮ್ಮೆ ಬಳುಕುವ, ಇನ್ನೊಮ್ಮೆ ರಭಸದಿಂದ ಇಳಿಯುವ, ಮತ್ತೊಮ್ಮೆ ಶಾಂತವಾಗಿ ಹರಿಯುವ ಆ ವೈವಿಧ್ಯಮಯ ನಡೆ ಇವೆಲ್ಲ ಮನಸೂರೆಗೊಂಡು ಭಯವನ್ನು ಕಿತ್ತೆಸೆದಿದ್ದವು! “ನಿನ್ನೆ ಕಳೆಯಿತು, ನಾಳೆಯನ್ನು ಕಂಡವರಾರು? ಈ ಕ್ಷಣ ನಿನ್ನದು.. ಅನುಭವಿಸು ಬಾ… ಕಣ್ಣು ಮುಚ್ಚಿಕೊಂಡು ಕಾಣದ ಸ್ವರ್ಗವನು ಕಲ್ಪಿಸುವುದೇಕೆ? ಕಣ್ತೆರೆದು ನೋಡು… ಇದೇ ಧರೆಗಿಳಿದ ಸ್ವರ್ಗ ಮರುಳೆ…”ಎಂದಂತಾಯಿತು!ಮುಂದೆ ಮುಂದೆ ಹೋದಂತೆ ಆ ಕಣಿವೆ, ಆ ಹರಿವ ನದಿ, ಎತ್ತರದ ಬೆಟ್ಟ ಸಾಲು… ಇಳಿದು ಕುಣಿದುಬಿಡಲೇ ಎನ್ನಿಸುವಂತಿತ್ತು. ಕೆಲವರು ಆ ಕಣಿವೆಯಲ್ಲಿಳಿದು ನಡೆದೂ ಹೊರಟಿದ್ದರು. ಒಂದೆರಡು ಬಾರಿ ಹಿಮಬಂಡೆಗಳು ಉರುಳಿಯೂ ಬಂದವು.. ಆದರೂ ನಾವು ಹೊರಟ ದಿನ ಯಾರಿಗೂ ಪ್ರಾಣಾಪಾಯವೇನೂ ಆಗಿರಲಿಲ್ಲ. ಅಂತೂ ಒಬ್ಬಂಟಿಯಾಗಿಯೇ ಆ ದೇವಾಧಿದೇವನೆದುರು ನಿಂತಿದ್ದೆ! ಎಂಥ ಭಾವಾತಿರೇಕದ ಕ್ಷಣವದು!

ಗುಪ್ತ ಕಾಶಿಯಿಂದ ತಪ್ಪಿಸಿಕೊಂಡ ತಪೋನಿರತ ಶಿವನನ್ನು ಹುಡುಕಿಕೊಂಡು ಪಾಂಡವರು ಇಲ್ಲಿಗೂ ಬರುತ್ತಾರೆ. ಶಿವ ಇಲ್ಲಿಂದಲೂ ಅವರ ಕೈಗೆ ಸಿಗದಂತೆ ನುಸುಳಿ ಹೋಗುವ ಪ್ರಯತ್ನ ಮಾಡುತ್ತಾನೆ. ಅಲ್ಲಿಯೇ ಸಮೀಪದಲ್ಲಿ ಮೇಯುತ್ತಿದ್ದ ಹಸುಗಳ ಗುಂಪಿನಲ್ಲಿ ಹೋರಿಯ ರೂಪದಲ್ಲಿ ಸೇರಿಕೊಳ್ಳುತ್ತಾನೆ. ಭೀಮಸೇನನು ತನ್ನ ಬಲಿಷ್ಠ ಕಾಲುಗಳನ್ನು ಅಗಲಿಸಿ ನಿಂತಾಗ ಆ ಹಸುಗಳು ಅವನ ಕಾಲಕೆಳಗಿನಿಂದ ನುಸುಳಿ ಹೋಗತೊಡಗುತ್ತವೆ. ಆದರೆ ಒಂದು ಹಸು ಮಾತ್ರ ಅವನ ಕಾಲಡಿಯಲ್ಲಿ ನುಸುಳದೇಹೋದಾಗ ಅವನೇ ಹೋರಿಯ ರೂಪದಲ್ಲಿರುವ ಶಿವನೆಂದರಿತ ಭೀಮಸೇನ ಅದನ್ನು ಹಿಡಿದುಕೊಳ್ಳಲೆತ್ನಿಸುತ್ತಾನೆ. ಆ ಶಿವರೂಪಿ ಹೋರಿಯು ಅಲ್ಲಿಯೇ ಭೂಗರ್ಭವನ್ನು ಸೇರಿಹೋಗತೊಡಗಿದಾಗ, ಅವನು ಅದರ ಡುಬ್ಬವನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾನೆ. ಆ ಕಲ್ಲಾದ ಹೋರಿಯೇ ಕೇದಾರನಾಥ ಲಿಂಗ!
ಅವನು ಸುಲಭಸಾಧ್ಯನಲ್ಲ… ಯಾರಿಗೂ ಬೇಗ ಕಾಣಿಸಿಕೊಳ್ಳಬಾರದೆಂಬ ಅಪೇಕ್ಷೆಯಿಂದ ಅಂಥ ದುರ್ಗಮ ಬೆಟ್ಟಸಾಲುಗಳಲ್ಲಿ ಏಕಾಂತದಲ್ಲಿ ಹೋಗಿ ಕುಳಿತ ಆ ಸುಂದರೇಶ್ವರನನ್ನು ತಂಡೋಪತಂಡವಾಗಿ ದರ್ಶಿಸಹೊರಟ ನಾವು ಆ ಸ್ಥಳವನ್ನು ಜನನಿಬಿಡವಾಗಿಯೂ, ಆ ಸುಂದರತಾಣವನ್ನು ಕಸದರಾಶಿಯನ್ನಾಗಿಯೂ ಮಾರ್ಪಡಿಸುತ್ತೇವೆ ಎಂಬುದಕ್ಕೆ ಕೇದಾರನಾಥಕ್ಕೆ ಹೋಗುವ ಮಾರ್ಗವೇ ನಿದರ್ಶನ. ಎಲ್ಲಿ ನೋಡಿದರಲ್ಲಿ ತಿಂದು ಬರಿದಾಗಿಸಿ ಎಸೆದಿರುವ ಪ್ಲ್ಯಾಸ್ಟಿಕ್ ಚೀಲಗಳು, ಹಾಳೆಗಳು! ದಾರಿ ಮೇಲೆಲ್ಲ ಬಿದ್ದಿರುವ ಕುದುರೆಲದ್ದಿ! ಹೀಗಾಗಿ ಅದು ಕೈಲಾಸಕ್ಕೆ ಹೋಗುವ ಮುನ್ನಿನ ವೈತರಣಿ ಎಂದೆನ್ನಿಸಿದಲ್ಲಿ ಆಶ್ಚರ್ಯವೇನಿಲ್ಲ!ಮುಂದೆ ಒಂದೆರಡು ವರ್ಷಗಳಲ್ಲಿ ಕೇದಾರನಾಥದಲ್ಲಿಯ ಪ್ರಕೃತಿಯ ರುದ್ರನರ್ತನಕ್ಕೆ ಬಲಿಯಾಗಿ ಜೀವ ಕಳೆದುಕೊಂಡವರು, ತಮ್ಮ ಜೊತೆಯ ಸಹಪಯಣಿಗರನ್ನು ಕಳೆದುಕೊಂಡು ಮರಳಿದವರು ಇವರೆಲ್ಲರ ಬಗ್ಗೆ ಟಿವಿಯಲ್ಲಿ ನೋಡಿದಾಗ ಅತ್ಯಂತ ಕಳವಳವಾಯಿತು. ತೇಲಿತೇಲಿ ಬರುವ ಆ ನಿಸ್ಪೃಹ ಕುದುರೆಗಳ ಶವಗಳು… ಬಂಧುಗಳನ್ನು ಕಳೆದುಕೊಂಡವರ ಆಕ್ರಂದನ… ಇದೆಲ್ಲ ನೋಡಿದಾಗ, ನಮಗೆ ಇಂಥದೊಂದು ವಿಕೋಪಕ್ಕೆ ತುತ್ತಾಗಬಹುದೆಂಬ ಕಲ್ಪನೆ ಕೂಡ ಇರಲಿಲ್ಲವಲ್ಲ ಎಂಬ ಭಾವನೆ ಮೂಡುತ್ತದೆ. “ಅಜ್ಞಾನಿ ಸದಾಸುಖಿ” ಎಂದು ಹೇಳುತ್ತಾರಲ್ಲ! ಈ ಜೀವನದಲ್ಲಿ ಮುಂದಿನ ಕ್ಷಣದಲ್ಲೇ ಸಾವು ಹೊಂಚಿ ಕುಳಿತಿರಬಹುದೆಂಬ ತತ್ವನ್ನು ಅರಿತಿದ್ದರೂ ನಾವೇಕೆ ಇದೇ ಶಾಶ್ವತ ಎನ್ನುವಂತೆ ವರ್ತಿಸುತ್ತೇವೆ?


  • ಮಾಲತಿ ಮುದಕವಿ, ಧಾರವಾಡ
3.5 2 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW