ಸಿಟ್ಟನ್ನು ಸುಟ್ಟು ಭಸ್ಮ ಮಾಡುವ ಶಕ್ತಿ ಇರುವುದು ತಾಳ್ಮೆಗೆ, ಎಲ್ಲ ಸಮಸ್ಯೆಗಳಿಗೆ ಸರಿಯಾದ ಉತ್ತರ ತಾಳ್ಮೆ. ತಾಳ್ಮೆಯ ಕುರಿತು ಸುಂದರವಾದ ಕವನವನ್ನು ಕವಿ ಅವಿನಾಶ ಸೆರೆಮನಿ ಅವರು ಬರೆದಿದ್ದಾರೆ. ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.
ತಾಳ್ಮೆಯೇ ಎಲ್ಲ ಗುಣಗಳಿಗಾಗಿದೆ ಗಣಿ
ಸಕಲ ಕಾರ್ಯಕ್ಕಿವನೆ ಯಶಸ್ಸಿನ ಧಣಿ
ಮನುಜನ ಜೀವನಕ್ಕೆ ಇವನೇ ಆಧಾರ
ವ್ಯಕ್ತಿತ್ವ ನಿರ್ಧರಿಸುವ ಪ್ರೀತಿಯ ಸರದಾರ
ಕ್ರೋಧ, ಮದ, ಮತ್ಸರದ ನಿಯಂತ್ರಕ
ಶಾಂತಿ ಸಹನೆ,ನೆಮ್ಮದಿಯ ಮಾಂತ್ರಿಕ
ಬದುಕಲ್ಲಿ ಎಲ್ಲವನ್ನು ಸಹಿಸುವ ಜೀವಿ
ಸೋಲನ್ನು ಸಮನಾಗಿ ಸ್ವೀಕರಿಸುವ ಕವಿ
ಸಿಟ್ಟನ್ನು ಸುಟ್ಟು ಭಸ್ಮ ಮಾಡುವ ಚಿನ್ಮಯಿ
ಗೆಲುವನ್ನು ನಿಧಾನ ನೀಡುವ ಕರುಣಾಮಯಿ
ಆಸಾಧ್ಯವಾದದ್ದನ್ನು ಸಾಧ್ಯವಾಗಿಸುವ ಋಣಿ
ಎಲ್ಲವ ಕೆಚ್ಚೆದೆಯಿಂದ ಎದುರಿಸಲು ಸದಾ ಅಣಿ
ಎಷ್ಟೇ ಜಟಿಲ ಸಮಸ್ಯೆಯ ಪರಿಹರಿಸುವ ಶಕ್ತಿ
ಸಮಾಧಾನದಿ ಸಲಹೆ ಸೂಚನೆ ನೀಡುವ ಯುಕ್ತಿ
ನಿತ್ಯವೂ ಬಾಳಿಗೆ ಬೆಳಕಾಗುವ ಪರಮ ಜ್ಯೋತಿ
ರೂಪವನ್ನು ಬದಲಿಸದೆ ಆಶಾಕಿರಣವಾದ ಸತಿ
- ಅವಿನಾಶ ಸೆರೆಮನಿ