ಪುನರ್ವಸು – ಪ್ರಿಯಾ ಭಟ್ ಅವರಿಂದ ಕಾದಂಬರಿಯ ಒಂದು ಅವಲೋಕನ.



ಪುನರ್ವಸು ಕಾದಂಬರಿ ಬಗೆಗೆ ಬರೆಯೋದಕ್ಕೆ ಪೀಠಿಕೆ ಬೇಕು. ಪುನರ್ವಸು ಇಷ್ಟವಾಗಿದ್ದಕ್ಕೆ ಮೊದಲ ಕಾರಣ ಇದು ಕಾದಂಬರಿ ಕತೆಯಂತಿಲ್ಲ.ಜೀವನಗಾತೆಯಂತಿದೆ. ಎಲ್ಲರೂ ಓದಲೇ ಬೇಕಾದ ಪುಸ್ತಕ. ಇದು ಪ್ರಿಯಾ ಭಟ್ ಅನಿಸಿಕೆಯ ಮಾತು.

ಕಾದಂಬರಿ : ಪುನರ್ವಸು
ಲೇಖಕರು : ಡಾ. ಗಜಾನನ ಶರ್ಮ
ಪ್ರಕಾಶನ : ಅಂಕಿತ ಪುಸ್ತಕ

ಸ್ವಪ್ನ ಸಾರಸ್ವತ ಓದಿದ ನಂತರ ಹೀಗೆ ಬರೋಬ್ಬರಿ ೫೪೪ ಪುಟಗಳ ಕಾದಂಬರಿಯೊಂದು ಬಿಡದೇ ಓದಿಸಿಕೊಂಡಿದ್ದಿಲ್ಲ. ಈ ಕೊರೊನಾ ಕಾಲದಲ್ಲಿ ನನಗಾದ ಅತ್ಯುತ್ತಮ ಲಾಭವೆಂದರೆ ಪೇರಿಸಿಟ್ಟುಕೊಂಡ ಪುಸ್ತಕಗಳ ನಿರುದ್ವಿಗ್ನವಾಗಿ ಯಾವ ಒತ್ತಡಗಳಿಲ್ಲದೇ ಓದಲು ಬೇಕಾದಷ್ಟು ಸಮಯ ಸಿಗುತ್ತಿರುವುದು. ಒಂದು ವಾರದ ಹಿಂದೆಯೇ ಪುನರ್ವಸು ಆರಂಭಿಸಿದಾಗ ಇದು ಮುಗಿಯಲು ಎಷ್ಟು ಕಾಲ ಹಿಡಿಯಬಹುದೋ ಅನ್ನಿಸಿತ್ತು. ಯಾಕೆಂದರೆ ಇತ್ತೀಚೆಗೆ ಒಂದೇ ಗುಕ್ಕಿಗೆ ದೀರ್ಘ ಓದು ನನಗೆ ಸಾಧ್ಯವಾಗುತ್ತಿರಲಿಲ್ಲ. ಮನೆ, ಮಳೆಗಾಲ, ಮಗಳು, ಒಂದು ವಿಶ್ರಾಂತ ಬದುಕಿನ ಪರಿಸರದಂತೆ ದಿನ ದಿನ ಓಡುವ ಬದುಕಲ್ಲಿ ಮರೆತ ಎಷ್ಟೋ ಹವ್ಯಕ ಅಡುಗೆಗಳ ನೆನಪಿಸಿಕೊಂಡು ಹೊಸ ಪ್ರಯೋಗ ಅಂತ ಕೇಕು, ಪಾನಿಪುರಿ, ಮಸಾಲೆಪುರಿ ಮಗಳಿಗೆ ಮಾಡಿಕೊಡುತ್ತ ಆವಾಗಾವಾಗ ಸ್ಟಾಕ್ ನಲ್ಲಿರೋ ಫಿಲ್ಮ ನೋಡುತ್ತ ಬಹುಶಃ ಹತ್ತು ವರ್ಷಗಳ ನಂತರದ ದೀರ್ಘ ರಜೆಯಂತಿದೆ ಇದು.

ಬಹುಶಃ ಮುಂದೆ ಕೂಡ ಯಾವಾಗಲೋ. ಮನೆಯಲ್ಲಿ ಮಕ್ಕಳಿದ್ದರೆ ಅದಕ್ಕಿಂತ ದೊಡ್ಡ ನೆಮ್ಮದಿ ಖುಶಿ ಇನ್ನೇನಿದೆ. ಸಮಯವಂತೂ ಪಾಸ್ ಮಾಡುವ ಅನಿವಾರ್ಯತೆ ಬೀಳೋದೆ ಇಲ್ಲ. ಕಳೆದೇ ಹೋಗುತ್ತದೆ. ಸರಿಯಾಗಿ ಅಂದುಕೊಂಡಂತೆ ಪುನರ್ವಸು ಮಳೆ ಆರಂಭವಾಗಿ ಧೋ ಎಂದು ಸುರಿಯುತ್ತಿದ್ದರೆ ನಾನು ೫೦, ೧೦೦ ಪೇಜುಗಳ ಮುಗಿಸಿ ಹಾಗಾಗೇ ಅದು ಇದು ಕೆಲಸದಲ್ಲಿ ಕಳೆದೇ ಹೋಗುತ್ತಿದೆ ಅಂದುಕೊಳ್ಳುವಾಗಲೇ ಮುಂದಿನ ಭಾಗ ನಿಲ್ಲಲೇ ಇಲ್ಲ. ಪುಸ್ತಕ ಶುಕ್ರವಾರ ಹಿಡಿದಿದ್ದು ಶನಿವಾರ ಮುಗಿಸಿಯೇ ಕೆಳಗಿಟ್ಟಿದ್ದು.ಸುಮಾರು ೩೫೦ ಪೇಜ್ ಎರಡೇ ದಿನದಲ್ಲಿ ಓದಿದ ಖುಶಿ. ಪರ್ವ, ಮಂದ್ರ ಎಲ್ಲ ಹೀಗೇ ಎಡಬಿಡದೇ ಓದುತ್ತಿದ್ದ ಕಾಲದ ಖುಶಿಯಿದು.

ಪುಸ್ತಕ ಓದುವುದು ಅನ್ನೋದು ಸುಲಭದ ವಿಚಾರ ಅಲ್ಲ. ಅದು ಕತೆ ಕಾದಂಬರಿ ಇರಲಿ ಸಿಲೆಬಸ್ ಇರಲಿ, ಅದಕ್ಕೆ ತಾದಾತ್ಮ್ಯ ಬೇಕು, ಆಸಕ್ತಿ ಬೇಕು, ಶೃದ್ಧೆ ಬೇಕು ಹಾಗಿದ್ದಾಗ ಮಾತ್ರ ಓದಲು ಸಾಧ್ಯ ಅಂತ ನನ್ನ ನಂಬಿಕೆ. ಇಷ್ಟೆಲ್ಲ ಪೀಠಿಕೆ ಬೇಕಾ ಕಾದಂಬರಿಯೊಂದಕ್ಕೆ ಅನಿಸಿಕೆ ಬರೆಯೋಕೆ ಅಂದ್ರೆ ಪುನರ್ವಸು ಬಗೆಗೆ ಬರೆಯೋದಕ್ಕೆ ಪೀಠಿಕೆ ಬೇಕು. ಕಳೆದ ವರ್ಷ ಸ್ನೇಹಿತೆ ಸುಧಾ ಅವರ ಮನೆಯಲ್ಲಿ ಇದೇ ಪುಸ್ತಕದ ಬಗೆಗೆ ಒಂದು ಕಾರ್ಯಕ್ರಮ ನಡೆದಾಗ ಅನಿವಾರ್ಯ ಕಾರಣಗಳಿಂದ ಪಾಲ್ಗೊಳ್ಳಲಾಗದಿದ್ದ ನೋವಿತ್ತು. ಪುಸ್ತಕದ ಬಗೆಗೆ ಎಲ್ಲರ ಮಾತು ಕೇಳಿ ಓಹ್ ಇದೊಂದು ಓದಲೇಬೇಕಾದ ಪುಸ್ತಕ ಅನ್ನಿಸಿ ಟಿಕ್ ಮಾಡಿಕೊಂಡಿದ್ದೆ. ಒಂದಿನ ಶ್ರೀಯುತ ಎಂ. ಎನ್. ಹೆಗಡೆ ಸರ್ ಪುನರ್ವಸು ಓದಿದ್ಯ? ಈ ಕಾದಂಬರಿಯನ್ನು ಒಂದೇ ಉಮ್ಮಳಿಕೆ ಇಲ್ಲದಂತೆ ಓದಿಮುಗಿಸಬೇಕು ಅನ್ನುವ ಛಾಲೆಂಜ್ ಹಾಕಿದ್ರು. ಬಹುಶಃ ನನ್ನಿಂದ ಅಸಾಧ್ಯವೇನೋ ಅಂತ ಹೇಳಿದ್ದೆ ನಾನು. ಸಿಲೆಕ್ಟೆಡ್ ಪುಸ್ತಕಗಳನ್ನು ಅದರ ರಸಾನುಭೂತಿಗಾಗೇ ಓದುವ ನನಗೆ ವಿಮಶರ್ಾತ್ಮಕ ಓದಿಗಿಂತ ಸಹಜ ಓದೇ ಖುಶಿ. ಹಾಗಾಗಿ ಇದು ಖಂಡಿತ ಪುಸ್ತಕದ ವಿಮಶರ್ೆ ಅಂದುಕೊಳ್ಳಲೇಬಾರದು. ಓದುಗಳ ಅನಿಸಿಕೆ ಅಷ್ಟೇ..

ಪುನರ್ವಸು ಇಷ್ಟವಾಗಿದ್ದಕ್ಕೆ ಮೊದಲ ಕಾರಣ ಇದು ಕಾದಂಬರಿ ಕತೆಯಂತಿಲ್ಲ. ಜೀವನಗಾತೆಯಂತಿದೆ. ಇವತ್ತು ಅರ್ಧ ಗಂಟೆ ಮನೆಯಲ್ಲಿ ವಿದ್ಯುತ್ ಇಲ್ಲದಿದ್ದರೆ ನಾವೆಲ್ಲ ಅದೆಷ್ಟು ಶಪಿಸುತ್ತೇವೆ ಇಲಾಖೆಯನ್ನು, ಸರಕಾರವನ್ನು, ಕಂಡಕಂಡವರನ್ನು ನಮ್ಮ ಅಸಹನೆಗೆ ಗುರಿಯಾಗಿಸುತ್ತೇವೆ. ಈ ವಿದ್ಯುತ್ ಹೀಗೆ ನಮ್ಮ ನಿಮ್ಮೆಲ್ಲರ ಜೀವನಾಡಿಯಾಗಲು ಅದೆಷ್ಟು ಜನರ ಬದುಕು ನೀರ ಪಾಲಾಗಿದೆ ಎಷ್ಟು ಜನರ ಕಣ್ಣೀರು ವಿದ್ಯುತ್ ಆಗಿದೆ ಮತ್ತೆಷ್ಟು ಜೀವಗಳ ಬಲಿಯಾಗಿದೆ ಎಂಬುದನ್ನು ಇದಕ್ಕಿಂತ ಚೆನ್ನಾಗಿ ಹೇಳಲು ಸಾಧ್ಯವಿಲ್ಲವೇನೋ. ಜೋಗವೆಂಬ ಜಗತ್ ವಿಖ್ಯಾತ ಜಲಪಾತವೊಂದರ ಬದುಕಿನ ಕತೆಯಿದೆ. ಶರಾವತಿ, ಅಘನಾಶಿನಿ, ಗಂಗಾವಳಿ, ಕಾಳೀ ಕಾವೇರಿ ನದಿಗಳ ಉಸಿರಿನ ಕತೆಯಿದೆ, ದಿನ ದಿನ ಹೊಸ ಹೊಸ ಯೋಜನೆಗಳ ಯೋಚನೆಗಳ ಅಭಿವೃದ್ಧಿಯ ಮಂತ್ರದಂಡ ಹಿಡಿದಿರುವವರ ನಡುವೆ ಬಳಲುವ ಪೃಕೃತಿಯ ಕತೆಯಿದೆ. ಕಣ್ಣೀರಿದೆ, ಹಳ್ಳಿಗಳೆಂಬ ದಿವ್ಯ ದೈವಿಕ ಸಾನಿಧ್ಯಗಳು ನಗರೀಕರಣದ ಮೋಹಕ್ಕೆ ಮನಸೋತು ಬದಲಾಗುವ ಮಾಂತ್ರಿಕ ಶಕ್ತಿಯ ಅರಿವಿದೆ. ನಾವೆಲ್ಲ ಯಾವುದರ ಹಿಂದೆ ಓಡುತ್ತಿದ್ದೇವೆ ಮತ್ತು ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ತಿಳಿಯಲೇ ಬೇಕಾದ ಸತ್ಯಗಳಿವೆ. ಅರ್ಥ ಮಾಡಿಕೊಳ್ಳುವ ಭಾವುಕನಿಗೆ ಭಾವುಕತೆಯಿದೆ, ನೋವಿದೆ, ಕುಶಿಯಿದೆ, ಹಾಗೇ ಒಬ್ಬ ಸ್ಥಿತಪ್ರಜ್ಙ ಜ್ಞಾನಿಗೆ ಅರಿವಿಗೆ ಬೇಕಾದ ಅನೇಕ ವೈಜ್ಙಾನಿಕ ವಾಸ್ತವಿಕ ಸತ್ಯಗಳಿವೆ.

ಒಂದು ಪುಸ್ತಕದಲ್ಲಿ ಇನ್ನೇನು ಇರಬೇಕು? ಬಹಳ ಸಲ ಅಂದುಕೊಳ್ಳುತ್ತದ್ದೆ. ಕಾರಂತ, ಕುವೆಂಪು. ಭೈರಪ್ಪ, ಮಾಸ್ತಿ, ತ,ರಾ,ಸು. ಅವರನ್ನು ಓದುವಾಗ ಮತ್ತೆ ಬಹುಶಃ ಇಂತಹ ಸಾಹಿತ್ಯ ಸೃಷ್ಟಿಯೇ ಅಸಾಧ್ಯವೇನೋ ಅಂತೆಲ್ಲ. ಈಗಿನ ಓದುಗರಗೂ ಬರಹಗಾರರಿಗೂ ಒಂದು ಗಾಢ ಸಂಬಂಧವೆಂದರೆ ಓದುಗನಿಗೆ ಬೇಕಾಗಿದು ಫಿಕ್ಷನಲ್ ಬರಹಗಳು, ಬರಹಗಾರ ಕೂಡ ಅದನ್ನೇ ಸೃಷ್ಟಿಸಿ ಮೃಷ್ಟಾನ್ನವೆಂಬಂತೆ ಎದರುರಿಗಿಡುತ್ತಿದ್ದರೆ ಸರಿ ಇದೆ ಜೋಡಿ ಅನ್ನಿಸುತ್ತಿತ್ತೆ ವಿನಃ ಆ ಓದಿನ ಖುಶಿ ಸಿಗುತ್ತಲೇ ಇರಲಿಲ್ಲ. ಬಹಳ ಸಲ ಕಾದಂಬರಿಗಳು ಅವೇ ಅವೇ ಮರು ಮುದ್ರಣಗೊಳ್ಲುತ್ತಿವೆ ಹೊರತು ಹೊಸಬರದ್ದು ಮೊದಲ ಮುದ್ರಣವೇ ಖಾಲಿಯಾಗೋದು ಅಪರೂಪ ಅನ್ನಿಸಿ ಬಿಡುತ್ತಿತ್ತು. ಆದರೆ ಪುನರ್ವಸು ಈ ಶತಮಾನದ ಅಂತಹ ಎಲ್ಲ ಕೊರತೆಗಳ ನೀಗಿಸಬಲ್ಲ ಕಾದಂಬರಿ ಎನ್ನಿಸಿದ್ದು ಸುಳ್ಳಲ್ಲ. ಲೇಖಕರ ನಾನು ಓದ್ತಾ ಇರೋ ಮೊದಲ ಪುಸ್ತಕ ಇದು. ಮೊದಲ ಓದಿಗೆ ಬಹುಶಃ ಬಹಳ ದಿನದ ಹುಡುಕಾಟಗಳೆಲ್ಲ ಸಾರ್ಥಕವಾದಂತಹ ಭಾವ ಕಾಳೀ ಯೋಜನೆಯಿಂದ ನಿರಾಶ್ರಿತರಾದವರಿಗೆ ಮರು ವಸತಿ ನೀಡಿದ್ದು ನನ್ನ ತವರೂರು. ಅಲ್ಲಿಯ ಮೊದಮೊದಲಿನ ಸರ್ವೆ ಕಾರ್ಯಗಳು ನನಗಿನ್ನು ನೆನಪಿದೆ. ಇಡೀ ದಟ್ಟ ಅರಣ್ಯವನ್ನು ಕಡಿದು ಸಾಗಿಸುತ್ತಿದ್ದ ಅಲ್ಲಿ ಪ್ಲಾಟ ಮಾಡಿ ಹಂಚುತ್ತಿದ್ದ ಎಲ್ಲ ದಿನಗಳೂ ನೆನಪಿವೆ. ಈಗ ಅದೊಂದು ಕಾಲೋನಿ ಕಾಲೋನಿ ಹರಡಿಕೊಂಡ ವ್ಯವಸ್ಥಿತ ಊರಾಗಿ ಬೆಳೆದು ನಿಂತಿದೆ. ಕಳೆದ ವರ್ಷ ಕಾಳಿ ನದಿಯ ಹಿನ್ನೀರಿನ ಪ್ರದೇಶಕ್ಕೆ ಹೋದಾಗ ಇವೆಲ್ಲ ನೆನಪು ಮರುಕಳಿಸಿತ್ತು. ಹಾಗೇ ಶರಾವತಿ ಹಿನ್ನೀರಿನ ಕತೆಯೂ ಕೇಳಿದ್ದಷ್ಟೇ ಆಗಿತ್ತು.

ಪುನರ್ವಸು ಓದಿದ ಮೇಲೆ ಜೋಗದ ರುದ್ರಮನೋಹರ ಸೌಂದರ್ಯಕ್ಕೆ ಸೇರಿದ ರುದ್ರ ಭಯಾನಕ ಕತೆಯೊಂದನ್ನು ಓದಿದ ಅನುಭವ ಮರೆಯಲಾರದ್ದು. ಮರೆಯಬಾರದ್ದು. ಇದು ಶರಾವತಿಯೊಂದರ ಕತೆ ಅನ್ನಿಸುವುದೇ ಇಲ್ಲ. ನಮ್ಮ ಮಲೆನಾಡಿನ ತುಂಬ ಹಂಚಿಕೊಂಡ ಎಲ್ಲ ನದಿ ಹಾಗೂ ಇತರ ಅಭಿವೃದ್ಧಿ ಯೋಜನೆಗಳ ಕತೆ ಅನ್ನಿಸಿತು ನನಗೆ. ಬೆಂಗಳೂರೆಂಬ ಬೆಂಗಳೂರು ಹಾಗೂ ಈ ದೇಶದ ಆರ್ಥಿಕ ವ್ಯವಸ್ಥೆಯ ಮೂಲ ನಿಂತಿದ್ದು ನಮ್ಮ ಪಶ್ಚಿಮಘಟ್ಟಗಳ ನದಿಗಳ ಸಂಪನ್ಮೂಲಗಳ ಮೂಲದ ಮೇಲೆ ಅಂತ ಅನ್ನಿಸಿದ್ದು ಸುಳ್ಳಲ್ಲ. ಕೈಗಾದಿಂದ ಅದೆಷ್ಟು ಪ್ರಮಾಣದ ಕರೆಂಟ್ ಹರಿಯುತ್ತಿರಬಹುದು ಈ ದೇಶದ ಹೊಟ್ಟೆಗೆ, ಕಾಳಿಯಿಂದ ಎಷ್ಟು ಮೆಗಾವ್ಯಾಟ್ ವಿದ್ಯುತ್ ಹರಿಯುತ್ತಿರಬಹುದು? ಶರಾವತಿಯಂತೂ ಬರಿದಾಗಲು ಬಾಕಿ ಇಲ್ಲದಷ್ಟು ಕೊಟ್ಟಿದೆ. ಆದರೆ ನಮ್ಮ ಜನರಿಗೆ ಈ ನೆಲದ ಮೇಲೆ ಕಿಂಚಿತ್ತು ಕೃತಜ್ಞತೆಯಿಲ್ಲ. ಚೂರು ಚೂರು ಪಶ್ಚಾತ್ತಾಪವಿಲ್ಲ. ಪುನರ್ವಸುವಿನ ಕೃಷ್ಣಾರಾವ್ ನಂತೆ ದಿನ ಕಳೆಯುತ್ತ ನಾವು ಕಲ್ಲಾಗಿಬಿಟ್ಟಿದ್ದೇವೆ. ದತ್ತಪ್ಪ ಹೆಗಡೆಯವರು ಹೇಳುವಂತೆ ” ಕೃಷ್ಣರಾವ್ ಅಂತವರೇ ಯೋಜನೆಯ ಯಶಸ್ಸಿನ ಗರ್ವದಲ್ಲಿ ಉಬ್ಬಿ ಕನಿಷ್ಠ ಸೌಜನ್ಯವನ್ನೂ ಮರೆತು ಮಾತನಾಡತೊಡಗಿದರೆಂದರೆ ಅದರ ಉನ್ಮಾದ ಶಕ್ತಿ ಎಷ್ಟಿರಬೇಡ? ಅದೇ ಅಲ್ಲವೇ ಮಹಾತ್ವಾಕಾಂಕ್ಷೆಗಳ ಹಿಂದಿನ ಮಾಂತ್ರಿಕ ಶಕ್ತಿ? ಅದಕ್ಕೆ ಸ್ವ ನಿಯಂತ್ರಣವಿಲ್ಲ, ಸಂಯಮವಿಲ್ಲ, ಆರಂಭಗೊಂಡಿತೆಂದರೆ ಅದು ಅಂತ್ಯದವರೆಗೂ ಅಡೆತಡೆಯಿಲ್ಲದೇ ನುಗ್ಗುವ ಹುಚ್ಚು ಹೊಳೆ. ಅದರಲ್ಲಿ ಇಂದಲ್ಲ ನಾಳೆ ಭಾರಂಗಿಯಲ್ಲ ಇಡೀ ಭಾರತವೇ ಕೊಚ್ಚಿಹೋದರೂ ಅಚ್ಚರಿಯಿಲ್ಲ” ಎಷ್ಟು ಸತ್ಯ ಈ ಮಾತುಗಳು!

ಇದೀಗ ಗದ್ದೆಗಳು ಹಸಿರಾಗಲು, ಬೆಳೆಗಳು ತೆನೆತುಂಬಲು, ಕೈಗಾರಿಕೆಗಳಿಗೆ ಮನೆಮನೆಗೆ ಪ್ರತಿಯೊಂದಕ್ಕೂ ವಿದ್ಯುತ್ ಎಂಬ ಬೆಳಕಿನ ಖನಿಯಿದೆ, ಪುನರ್ವಸು ವಿನಲ್ಲಿ ಈ ಬೆಳಕಿನ ಬೀಜದ ಮೂಲಗಳಿವೆ. ದತ್ತಪ್ಪ ಹೆಗಡೆಯವರಂತೆ ಸಾಕು ಈ ಬೆಳಕು. ಹೆಚ್ಚಾಯಿತು. ಸ್ವಲ್ಪ ಕತ್ತಲೆ ಬೇಕು. ಕಣ್ಮುಚ್ಚಿ ವಿಶ್ರಮಿಸಲು ಅನ್ನುವಂತ ಕಾಲ ಬರಬೇಕಿದೆ.ಪ್ರಗತಿಯ ಪಶ್ಚಿಮದ ಬೆಳಕಿನ ದಾರಿಯಲ್ಲಿ ಅಂಧರಾಗಿ ನಡೆಯುವ ನಮ್ಮದೇ ಮೂಲವೊಮ್ಮೆ ನಾವು ತಡಕಿ ನೋಡಿಕೊಳ್ಳಬೇಕಿದೆ. ಅಷ್ಟೆಲ್ಲ ಅನ್ನಿಸುವುದು ಈ ಪುಸ್ತಕ ಓದುವಾಗ.



ಕತೆಯ ಕುರಿತಾಗಿ ಜಾಸ್ತಿ ಹೇಳುವುದಕ್ಕಿಂತ ಓದುಗನಿಗೇ ಬಿಡಬೇಕು. ಆದರೆ ಮೂಗಿ ಕಿವುಡಿ ಶರಾವತಿಯ ಬದುಕು ಮತ್ತು ಶರಾವತಿ ನದಿಯ ಬದುಕಿನ ಮೇಲಿನ ಅತ್ಯಾಚಾರಗಳೇ ಈ ಕತೆ ಅಂದರೆ ತಪ್ಪಲ್ಲ. ಮುರಾರಿ ಭಟ್ಟನಂತಹ ಸತ್ಯವನ್ನು ಮುಖದ ಮೇಲೆ ಉಗಿದಂತೆ ನುಡಿಯುವ ಜನರಿಗೆ ಸಮಾಜದಲ್ಲಿ ಮಳ್ ಭಟ್ಟ ಅನ್ನೋ ಬಿರುದು ಖಾಯಂ ಅನ್ನುವುದು ಸುಳ್ಳಲ್ಲ. ವಸುಧಾಳ ಪಾತ್ರವಂತೂ ಭೂಮಿ ತೂಕದ್ದು. ತುಂಗಕ್ಕ, ಮಾಣಿ ಚಿಕ್ಕಯ್ಯ, ಭೀಮಯ್ಯ, ದೋಣೀ ಗಣಪ ಎಷ್ಟೆಲ್ಲ ಕಾಡುವ ಪಾತ್ರಗಳು!! ಪಾತ್ರಗಳ ಬಗೆಗೆ ಸಂದರ್ಭಗಳ ಬಗೆಗೆ ಬರೆಯುತ್ತ ಹೋದರೆ ಕಾದಂಬರಿಯಷ್ಟೇ ಬರೆಯಬೇಕಾದೀತು. ಆದರೆ ಇಂತದ್ದೊಂದು ಕಾದಂಬರಿ ಇವತ್ತಿನ ಸಾಹಿತ್ಯ ಪ್ರಪಂಚದ ಪ್ರತಿಷ್ಟಿತರು ಎಷ್ಟು ಗುರುತಿಸುತ್ತಾರೆ ಎಷ್ಟು ಆದರಿಸುತ್ತಾರೆ ಅನ್ನುವ ಕುತೂಹಲವಿದೆ ನನಗೆ. ಪ್ರತಿಯೊಬ್ಬರೂ ತಮ್ಮತಮ್ಮದೇ ಗುಂಪು, ತಮ್ಮದೇ ಪ್ರತಿಷ್ಠೆ ನಿರಂತರ ರಾಜಕೀಯಗಳಲ್ಲಿ ಸೇರಿಕೊಂಡವರಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಓದುಗರು ಮನಸ್ಸು ಮಾಡಿದರೆ ಪುನರ್ವಸು ಅಂತ ಕೃತಿಯನ್ನು ಹೆಚ್ಚು ಪ್ರಚಾರಕ್ಕೆ ತರುವುದು ಕಷ್ಟವೂ ಅಲ್ಲ. ಒಳ್ಳೆಯ ಓದುಗರಿಗೆ ತಲುಪಿದರೆ ಸಾಕು. ಅಷ್ಟಾದರೂ ಪ್ರಚಾರ ಆಗಲೆಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಬೆಳಕಿನ ಹಿಂದೆ ಬಿದ್ದಿರುವ ನಾವೆಲ್ಲ ಈ ಬೆಳಕಿನ ಬೀಜದ ಹಿಂದೆ ಇರುವ ಕಳೆದುಕೊಂಡವರ ಕತೆ ಓದಲೇಬೇಕು. ಇಡೀ ಪ್ರಪಂಚ ಋಣಿಯಾಗಬೇಕಿದೆ ಅಂತವರಿಗೆ, ಮುಳುಗಡೆಯಾದದ್ದು ಭಾರಂಗಿ ಮಾತ್ರವಲ್ಲ. ಅದೆಷ್ಟು ಜನರ ಭರವಸೆ, ಕನಸು, ಜೀವನ.

ಎಂ.ಎನ್.ಹೆಗಡೆ ಸರ್, ಹೇಳಿದಂತೆ ಉಮ್ಮಳಿಕೆಯಿಲ್ಲದೇ ಕಣ್ಣೀರಿಲ್ಲದೇ ನನಗಂತೂ ಓದಲು ಸಾಧ್ಯವಾಗಲಿಲ್ಲ. ವಸುಧೆಯ ತಾಯ್ತನದ ಕನವರಿಕೆಯಿಂದ ಹಿಡಿದು ಅವಳ ಕೊನೆಯ ಪತ್ರದ ವರೆಗೂ ಕಣ್ತುಂಬಿದೆ. ದತ್ತಪ್ಪ ಹೆಗಡೆಯವರಂತ ದಿವ್ಯ ವ್ಯಕ್ತಿತ್ವ ಮನೆಯ ಪ್ರಧಾನ ಬಾಗಿಲು ಕಿತ್ಗೊಂಡು ಹೋಗು ಅನ್ನುವಾಗ ದೇವರ ಪೀಠದಿಂದ ದೇವರೆತ್ತಿ ಕೊಡುವಾಗ ಕೊಟ್ಟಿಗೆಯ ದನಗಳ ತೂರಿಕೊಂಡು ಹೊರಟವರ ಹಿಂದೆ ಓಡುವಾಗ. ಶರಾವತಿಯ ಮೇಲಾಗುವ ಅತ್ಯಾಚಾರ ದೋಣಿ ಗಣಪನ ಕೊನೆಯ ಮಾತುಗಳು ಅಂತರಂಗವನ್ನು ಕಲಕುವ ಅದೆಷ್ಟೋ ಸಂದರ್ಭಗಳಿಗೆ ಮನಸು ದ್ರವಿಸದಿರದು. ಸ್ವಾತಂತ್ಯ್ರಪೂರ್ವ ಹಾಗೂ ಸ್ವಾತಂತ್ರ್ಯನಂತರದ ಬದಲಾವಣೆಯ ಗಾಳಿ ಅದೇಗೆ ದೇಶವನ್ನು ಆವರಿಸಿತು ಅನ್ನುವುದಕ್ಕೆ ಮತ್ತೆ ಬೇರೆ ಉದಾಹರಣೆಗಳೇ ಬೇಕಿಲ್ಲ. ಸರಿ ತಪ್ಪುಗಳ ಗೊಂದಲದಲ್ಲಿ ನಿಂತ ಮನುಷ್ಯನಿಗೆ ನಿರ್ದಿಷ್ಟವಾಗಿ ಸರಿ ತಪ್ಪುಗಳ ಹೇಳಬಹುದಾದ ಕತೆ.

ಫೋಟೋ ಕೃಪೆ : Theprint

ಒಂದು ಸಂದರ್ಭದಲ್ಲಿ ಯೋಜನೆಯ ವಿರೋಧಿಸಿ ನಿಲ್ಲಿಸುವಂತೆ ಕೇಳಿಕೊಳ್ಳಲು ಆಗಿನ ಪ್ರಧಾನಿ ನೆಹರು ಅವರ ಬಳಿ ಒಂದು ಕಮಿಟಿ ರಚಿಸಿ ಹೋಗುತ್ತಾರೆ. ಅಲ್ಲಿ ಅವರಿಗೆ ಪ್ರಧಾನಿಯಿಂದ ಬರುವ ರಿಪ್ಲೈ ನ್ನು ಒಂದು ಚಂದದ ಉಪಮೆಯೊಂದಿಗೆ ವಿವರಿಸಿದ್ದಾರೆ ಲೇಖಕರು. ಅದು ನಿಜವಾಗಿ ನಡೆದದ್ದೇ ಇರಬಹುದು. ಓದುತ್ತಿದ್ದ ಇಡೀ ಪೇಪರ್ ನ ಚೂರೊಂದು ಹರಿದು ಕಪ್ ಲ್ಲಿ ಮುಳುಗಿಸುವುದು. ಇಡೀ ದೇಶಕ್ಕೋಸ್ಕರ ಭಾರಂಗಿಯ ಮುಳುಗಡೆ ಅನಿವಾರ್ಯ ಎಂಬುದು. ಆದರೆ ಭಾರಂಗಿ ಬರೀ ಒಂದು ಪೇಪರಿನ ಚೂರಿನಷ್ಟು ಹಗುರವೇ? ಅಲ್ಲಿ ಜನ, ಜೀವನ, ಅವರ, ಸಂಸ್ಕೃತಿ, ಸಂಭ್ರಮ, ಬದುಕು….. ಒಂದು ಕ್ಷಣ ಎದೆ ನಡುಗಿಸುವ ಸತ್ಯ ಅದು. ಇಲ್ಲೊಂದು ದತ್ತಪ್ಪ ಹೆಗಡೆಯವರ ಮಾತು ನೆನಪಾಗುತ್ತದೆ.” ಬದುಕು ಹೀಗೇ ಕೃಷ್ಣರಾವ್, ಇದ್ದಕ್ಕಿದ್ದಂತೆ ತನ್ನ ಮಗ್ಗಲು ಬದಲಿಸಿಬಿಡುತ್ತದೆ. ಪರಿವರ್ತನೆಯ ಪ್ರವಾಹಕ್ಕೆ ಸಿಕ್ಕ ನಾವು ಕಾರ್ಯ ಕಾರಣಗಳ ಅರಿವಿಲ್ಲದೇ ನರಳುತ್ತೇವೆ. ಇಲ್ಲವೇ ನಲಿಯುತ್ತೇವೆ. ನಮ್ಮಲ್ಲಿ ಒಂದು ಗಾದೆಯ ಮಾತಿದೆ. ಇರುವೆಗೆ ಮೂತ್ರವೇ ಪ್ರಳಯ ಅಂತ. ದೊಡ್ಡವರು ಮಹತ್ವದ ಕಾರಣವಿಲ್ಲದೆಯೂ ತೆಗೆದುಕೊಳ್ಳುವ ಒಂದು ಸಣ್ಣ ನಿರ್ಧಾರ ಸಣ್ಣವರ ಪಾಲಿಗೆ ಪ್ರಾಣಾಂತಿಕವಾಗಿಬಿಡಬಹುದು. ಈಗ ನ್ಯಾಮಯ್ಯನಂತವರೂ ಹಾಗೆಯೇ.. ಕಾಲದ ಪ್ರವಾಹದಲ್ಲಿ ಸಿಲುಕಿದ್ದಾರೆ……”

(ಪುನರ್ವಸು ಕಾದಂಬರಿಯ ಲೇಖಕರಾದ ಗಜಾನನ ಶರ್ಮ)

“ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಇದೊಂದೇ ಕೊನೆಯಲ್ಲಿ ಸಮಾಧಾನ ಅನ್ನಿಸುವ ನುಡಿ. ದತ್ತಪ್ಪ ಹೆಗಡೆಯವರಂದುಕೊಳ್ಳುವಂತೆ ಇದೆಲ್ಲಕ್ಕೂ ಒಂದು ಕೊನೆ ಇರಬಹುದು. ಶರಾವತಿ ಪೂರ್ವದಿಂದ ದಿಕ್ಕು ಬದಲಿಸಿ ಪಶ್ಚಿಮಕ್ಕೆ ಹರಿದಿದ್ದಾಳೆಂದರೆ ಅವಳೇ ಮನಸು ಮಾಡಿದ ದಿನ ಪೂರ್ವಕ್ಕೂ ತಿರುಗಬಹುದು. ಹಾಗೇ ಗಂಗೆಯಂತೆ ಮುನಿದು ಎಲ್ಲ ತೊಳೆದೂ ಹಾಕಬಹುದು. ಮನುಷ್ಯ ಸೃಷ್ಟಿ ಎಷ್ಟೇ ಉತ್ತಮವಾಗಿದ್ದರೂ ಪೃಕೃತಿ ಅವಳಿಗೆ ಅವಳೇ ಸಾಟಿ. ಇದು ನನ್ನ ನಂಬಿಕೆ ಕೂಡ.

ಉದಾಹರಿಸಹೋದರೆ ಅದೆಷ್ಟು ಇಂತಹ ಮಾತುಗಳಿವೆ! ಮನೆಯ ಹಿರಿಯಜ್ಜ ಕತೆ ಹೇಳುವಾಗ ಆಡಿಕೊಂಡಷ್ಟು ಸಹಜವಾಗಿ ಅವು ಬಂದು ಹೋಗುತ್ತವೆ. ಶರ್ಮರ ಬರಹದ ತಾಕತ್ತೇ ಆ ಸಹಜತೆ. ಒಂದೇ ಒಂದು ಕಡೆ ಅನವಶ್ಯ ಎಳೆತಗಳಿಲ್ಲ. ವಿವರಣೆಗಳಿಲ್ಲ. ಹಾಗೆ ವಿವರಣೆಗಳ ಬರೆದಿದ್ರೆ ಬಹುಶಃ ಸಾವಿರ ಪುಟಗಳು ಸಾಕಾಗುತ್ತಿರಲಿಲ್ಲವೇನೋ. ಅಷ್ಟು ಚಂದದ ಶೈಲಿ. ಎಲ್ಲೂ ಯಾವುದೇ ಮಾತುಗಳಿಗೂ ಇದೊಂದು ಡೈಲಾಗ್ ಅಂತ ತುರುಕುವುದು ಕಾಣದು. ಬದುಕಿನಷ್ಟು ಸಹಜ ಗಾಂಭೀರ್ಯದಿಂದಲೇ ಬಂದು ಹೋಗುವ ಮಾತುಗಳು. ಪುಸ್ತಕವೊಂದು ಪರಿಪೂರ್ಣವಾಗಬೇಕಾದರೆ ಅದೆಷ್ಟು ವಿಷಯಗಳ ಜೊತೆ ಮನಸಿಗೆ ತಲುಪುವಂತೆ ಬರೆಯಬೇಕೆಂಬುದು ನಿಜ. ಕಾದಂಬರಿಯಲ್ಲಿ ಬರುವ ವಿದೇಶಿಗರ ಪಾತ್ರಗಳಿಗೂ ಅಧಿಕಾರಿಗಳ ಪಾತ್ರಗಳಿಗೂ ಸರ್ ಎಂ ವಿ ಅವರ ಕನಸುಗಳಿಗೂ ಎಷ್ಟು ನ್ಯಾಯವಿತ್ತಿದೆ! ವೃತ್ತಿನಿಷ್ಟತೆಗೂ ಒಂದು ಯೋಜನೆಯ ಯಶಸ್ಸಿಗೂ ಅದೆಷ್ಟು ಗಟ್ಟಿಯಾದ ಸಂಬಂಧವಿದೆ ಎಂಬುದನ್ನು ಚಂದವಾಗಿ ಕಟ್ಟಿಕೊಡುತ್ತಾರೆ ಕೃಷ್ಣರಾವ್ ಪಾತ್ರದ ಮೂಲಕ. ಮತ್ತೊಮ್ಮೆ ನನ್ನ ವಿನಂತಿಯಿಷ್ಟೇ.. ಬರೀ ಸಾಹಿತ್ಯಪ್ರಿಯರಷ್ಟೇ ಅಲ್ಲ. ಪ್ರತಿಯೊಬ್ಬರೂ ಓದಲೇಬೇಕಾದ ನಮ್ಮದೇ ನೆಲದ ಬೆಳಕು ಮತ್ತು ಕತ್ತಲೆಯ ಕತೆಯಿದು. ಸ್ವಲ್ಪ ಬಿಡುವು ಮಾಡಿಕೊಂಡು ಪುಸ್ತಕ ಕೈಗೆತ್ತಿಕೊಳ್ಳಿ ಎಂಬುದಷ್ಟೇ ಕೊನೆಯ ಮಾತು.


  • ಪ್ರಿಯಾ ಭಟ್

5 1 vote
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW