ಹೆಣ್ಣನ್ನು ದೇವಿ ದೇವತೆಯರ ಸ್ಥಾನದಲ್ಲಿ ಇಟ್ಟು ಪೂಜಿಸುವ ನಾಟಕವಾಡುತ್ತಾರೆ. ಇನ್ನೊಂದೆಡೆ ಅದೇ ಹೆಣ್ಣಿನ ಬದುಕನ್ನು ಅತ್ಯಾಚಾರದಂತಹ ಪಾಪಕೃತ್ಯವೆಸಗಿ ಛಿದ್ರಗೊಳಿಸುತ್ತಾರೆ. ಯಾಕೆ ಬೇಕು ಅವಳಿಗೆ ಗೌರವ ಮರ್ಯಾದೆಗಳನ್ನು ನೀಡದ ಮೇಲೆ ದೇವತೆಯ ಪಟ್ಟ? ಎನ್. ಶೈಲಜಾ ಹಾಸನ ಅವರ ಸಾಮಾಜಿಕ ಬದುಕಿಗೆ ಉಪಯುಕ್ತವಾಗುವ ಹಲವಾರು ಸಂದೇಶಗಳನ್ನು ಒಳಗೊಂಡಂತಹ ಕಾದಂಬರಿಯೇ ಅಂತರ. ಈ ಕೃತಿಯ ಕುರಿತು ನಯನ ಬಜಕೂಡ್ಲು ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಅಂತರ (ಕಾದಂಬರಿ)
ಲೇಖಕರು : ಎನ್. ಶೈಲಜಾ ಹಾಸನ
ಪ್ರಕಾಶಕರು : ಹೊಂಗಿರಣ ಪಬ್ಲಿಕೇಶನ್ಸ್
ಪುಸ್ತಕದ ಬೆಲೆ : 135/-
ಬದುಕು ಮಾನವನಿಗೆ ದೇವರು ಇತ್ತ ಒಂದು ಸುಂದರ ಉಡುಗೊರೆ. ಇಲ್ಲಿ ಸಿರಿವಂತಿಕೆ ಇರಬಹುದು, ಬಡತನವೂ ಇರಬಹುದು. ಆದರೆ ಅಂತಸ್ತು ಪರಿಸ್ಥಿತಿಗೆ ತಕ್ಕ ಹಾಗೆ ಬದುಕನ್ನು ಸುಂದರವಾಗಿಸಿಕೊಳ್ಳುವುದು ಅವರವರ ಕೈಯಲ್ಲೇ ಇದೆ. ಬದುಕು ಕೇವಲ ಸಿರಿವಂತಿಕೆಯಲ್ಲಿ ಮಾತ್ರವಲ್ಲ ಬಡತನದಲ್ಲೂ ನೆಮ್ಮದಿಯನ್ನು ಕಂಡು ಸಿಂಗಾರಗೊಳ್ಳಬಹುದು. ಗಂಡು ಹೆಣ್ಣು ಇಬ್ಬರಿಗೂ ಬದುಕುವ ಹಕ್ಕು ಇದೆ ಇಲ್ಲಿ. ಕೆಲವೊಂದು ಪರಿಸ್ಥಿತಿಗಳಲ್ಲಿ ಕೆಲವು ನರರಾಕ್ಷಸರು ಇನ್ನೊಬ್ಬರ ಬಾಳನ್ನು ನಾಶಪಡಿಸಿ ಮೆರೆಯುವುದು ದುರಂತವೇ ಸರಿ.
ಮುಂದುವರಿದ ಇವತ್ತಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಹೆಣ್ಣು ಗಂಡಿನಷ್ಟೇ ಸಬಲಳು ವ್ಯವಹಾರ ಚತುರಳು. ಅವಳು ಕಾಲಿರಿಸಿ ಗೆಲುವು ಸಾಧಿಸದ ಕ್ಷೇತ್ರಗಳೇ ಇಲ್ಲ ಎನ್ನಬಹುದು. ಆದರೆ ಗಂಡು ರಾಕ್ಷಸನಾಗಿ ಅತ್ಯಾಚಾರದಂತಹ ಹೀನ ಕೃತ್ಯ ಎಸಗಲು ಮುಂದಾದಾಗ ಮಾತ್ರ ಇಲ್ಲಿ ಹೆಣ್ಣು ಸೋಲುತ್ತಾಳೆ, ಅಸಹಾಯಕಳಾಗುತ್ತಾಳೆ, ಭರವಸೆಯನ್ನೇ ಕಳೆದುಕೊಳ್ಳುತ್ತಾಳೆ. ಹೆಣ್ಣನ್ನು ದೇವಿ ದೇವತೆಯರ ಸ್ಥಾನದಲ್ಲಿ ಇಟ್ಟು ಪೂಜಿಸುವ ನಾಟಕವಾಡುತ್ತಾರೆ. ಇನ್ನೊಂದೆಡೆ ಅದೇ ಹೆಣ್ಣಿನ ಬದುಕನ್ನು ಅತ್ಯಾಚಾರದಂತಹ ಪಾಪಕೃತ್ಯವೆಸಗಿ ಛಿದ್ರಗೊಳಿಸುತ್ತಾರೆ. ಯಾಕೆ ಬೇಕು ಅವಳಿಗೆ ಗೌರವ ಮರ್ಯಾದೆಗಳನ್ನು ನೀಡದ ಮೇಲೆ ದೇವತೆಯ ಪಟ್ಟ?

ಬಡತನವಿದ್ದರೂ ಕಷ್ಟಪಟ್ಟು ಹಗಲು ರಾತ್ರಿ ದುಡಿದು, ಓದಿ ಬದುಕು ಕಟ್ಟಿಕೊಳ್ಳಲು ಹೆಣಗುವ ಹೆಣ್ಣುಮಕ್ಕಳು ಅದೆಷ್ಟೋ ಮಂದಿ. ಹೀಗೆ ಸ್ವಾಭಿಮಾನಿಗಳಾಗಿ ಯಾರಿಗೂ ಹೊರೆಯಾಗದೆ ಬದುಕುವ ಹೂಗಳನ್ನು ಅತ್ಯಾಚಾರದಂತಹ ಘೋರ ಕೃತ್ಯ ಎಸಗಿ ಹೊಸಕಿ ಹಾಕುವ ಅಧಿಕಾರವನ್ನು ಗಂಡಿಗೆ ಇತ್ತವರು ಯಾರು? ಇಷ್ಟೆಲ್ಲಾ ಆದ ಮೇಲೂ ಕಾನೂನಿನ ಹಿಡಿತದಿಂದ ತಪ್ಪಿಸಿಕೊಂಡು ಮೆರೆಯುವ ರಾಕ್ಷಸರಿಗೆ ಸಮಾಜವೇ ಶಿಕ್ಷಿಸುವ, ಅಧಿಕಾರವನ್ನು ಕೈಗೆತ್ತಿಕೊಳ್ಳುವ ನಿರ್ಣಯವನ್ನು ತೆಗೆದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ ಇಂದು.
ಗಂಡು (ಎಲ್ಲರೂ ಅಲ್ಲ) ಎಂಬ ಅಹಂ ಅವನನ್ನು ಎಷ್ಟು ವಿವೇಚನಾಹೀನನನ್ನಾಗಿಸುತ್ತದೆ ಎಂದರೆ ಹೆಂಡತಿ/ ತಾಯಿ /ಮಗಳಾದವಳು ದುಡಿದು ಮನೆ ಮಂದಿಯ, ಸಂಸಾರದ ನೊಗ ಹೊತ್ತಿದ್ದರೂ ಅವನು ಮಾತ್ರ ತನ್ನ ಜವಾಬ್ದಾರಿಯೆಡೆಗೆ ಕುರುಡ. ಹೆಣ್ಣಿನ ದುಡಿಮೆಯಿಂದಲೇ ತನ್ನ ಚಟಗಳಿಗೆ ಬೇಕಾದ ಹಣವನ್ನು ಕೀಳುವ, ಅವಳನ್ನು ಹೊಡೆದು, ಬಡಿದು, ಹಂಗಿಸಿ ಮೆರೆಯುವುದನ್ನು ತನ್ನ ಗಂಡಸುತನ ಅಂದುಕೊಳ್ಳುವ ನೀಚತನಕ್ಕೆ ಇಳಿಯುತ್ತಾನೆ. ಇಂತಹ ಚಾಳಿ ಹತ್ತಿಕೊಂಡ ಗಂಡಿನ ಬದುಕು ಹೆಚ್ಚಾಗಿ ದುರಂತದಲ್ಲೇ ಕೊನೆಗೊಳ್ಳುವುದು. ಎಷ್ಟೇ ಪೋಲಿಸ್, ಕೋರ್ಟು, ಕಾನೂನಿನ ರಕ್ಷಣೆ ಇದ್ದರೂ ಹೆಣ್ಣು ಸಮಾಜದ ಮರ್ಯಾದೆಗೆ ಅಂಜಿ ಇವುಗಳ ಸಹಾಯ ಪಡೆಯುವುದು ಕಡಿಮೆಯೆ. ಅಷ್ಟಕ್ಕೂ ಎಲ್ಲಾ ಕಡೆ ಕಾನೂನು ಎಲ್ಲರನ್ನೂ ರಕ್ಷಿಸಲಾರದು ಅನ್ನುವುದು ಕೂಡ ಸತ್ಯ.

ಗಂಡು ಎಷ್ಟೇ ರಾಕ್ಷಸತನ ಮೆರೆದರೂ, ಹೆಣ್ಣಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರೂ ಕೆಲವು ಹೆಣ್ಣು ಮಕ್ಕಳು ಗಂಡನ್ನು ಬದಲಿಸುವ ಸಾತ್ವಿಕ ಮಾರ್ಗಗಳನ್ನು ಅನುಸರಿಸುತ್ತಾರೆಯೇ ಹೊರತು ಗಂಡನಾದವನು ನೆಗೆದು ಬಿದ್ದು ಹೋಗಲಿ, ಸಾಯಲಿ ಎಂದು ಬಯಸಲಾರರು. ಇದು ನಮ್ಮ ಭಾರತೀಯ ಪರಂಪರೆಯ ಕೊಡುಗೆ. ಅನಾದಿ ಕಾಲದಿಂದಲೂ ಎಲ್ಲವನ್ನೂ ಸಹಿಸಿಕೊಂಡು ಹೋಗುವುದೇ ಹೆಣ್ಣಾದವಳ ಹಣೆಬರಹ (ಎಲ್ಲರೂ ಇದರೊಳಗೆ ಬರುವುದಿಲ್ಲ ಅನ್ನುವುದು ಬೇರೆ ವಿಚಾರ).
ಬದುಕು ಎಂತಹುದೇ ನರಕಯಾತನೆಯನ್ನು ಉಡುಗೊರೆಯಾಗಿ ಕೊಟ್ಟರೂ ಇವೆಲ್ಲದರ ನಡುವೆಯೂ ಮನಸ್ಸಿಗೆ ನೆಮ್ಮದಿ ಉಲ್ಲಾಸ ತರುವವಳು ಪರಿಸ್ಥಿತಿಯನ್ನು ಚೆನ್ನಾಗಿ ಅರಿತ ಮಗಳು/ಮಗ. ಇಂತಹ ಎಲ್ಲವನ್ನು ಅರ್ಥಮಾಡಿಕೊಂಡು ಸ್ಪಂದಿಸುವ, ಹೆತ್ತವರ ಕಷ್ಟವನ್ನು ತುಸುವಾದರೂ ದೂರವಾಗಿಸಿ ಅವರಿಗೆ ನೆಮ್ಮದಿ ನೀಡಬೇಕು ಅನ್ನುವ ಮಕ್ಕಳಿದ್ದಾಗ ಕಷ್ಟದಲ್ಲೂ ಬದುಕು ಸುಂದರವಾಗುತ್ತದೆ. ಅವರಿಗೋಸ್ಕರ ಬದುಕಬೇಕು ಅನ್ನುವ ಕಾರಣ ಎಲ್ಲವನ್ನೂ ಸಹಿಸುವ ಸಹನೆಯನ್ನು ತರುತ್ತದೆ.
ಸಂಸಾರವೆಂದ ಮೇಲೆ ಅಲ್ಲಿ ನಾನಾ ಬಗೆಯ ಮುಖವಾಡ ಧರಿಸಿ ಸಾಗುವುದು ಸಹಜ ಅಷ್ಟೇ ಅಲ್ಲ ಅನಿವಾರ್ಯ ಕೂಡ. ನೋವನ್ನು ಮರೆಮಾಚಿ ನಗು ತೋರಿಸಿಕೊಳ್ಳಬೇಕು, ಬೇಸರವನ್ನು ಸರಿಸಿ ಸ್ನಿತ ಪ್ರಜ್ಞತೆಯನ್ನು ತೋರಿಸಬೇಕು, ಕೋಪವನ್ನು ತೋರಿಸಿಕೊಳ್ಳುವಂತಿಲ್ಲ, ಎಲ್ಲವನ್ನು ನುಂಗಿ ಸಾಗುತ್ತಿರುವುದು ಅನಿವಾರ್ಯ.

ಸಾಮಾಜಿಕ ಬದುಕಿಗೆ ಉಪಯುಕ್ತವಾಗುವ ಹಲವಾರು ಸಂದೇಶಗಳನ್ನು ಒಳಗೊಂಡಂತಹ ಕಾದಂಬರಿ ಅಂತರ. ಕಲ್ಲಂತಹ ಹೃದಯವನ್ನು ಕೂಡ ವಿಧಿ ಅಸಹಾಯಕ ಪರಿಸ್ಥಿತಿಯನ್ನು ತಂದೊಡ್ಡಿ ಕರಗಿಸುತ್ತದೆ. ವಿಧಿಯ ಆಟದ ಮುಂದೆ ಯಾರೂ ಲೆಕ್ಕಕ್ಕೇ ಇಲ್ಲ . ಮನುಷ್ಯನ ಅಹಂಕಾರವನ್ನು ಇಳಿಸಬಲ್ಲ ಒಂದೇ ಒಂದು ಶಕ್ತಿ ಎಂದರೆ ಅದು ಅವನ ಕರ್ಮಫಲ, ವಿಧಿ ಎಂದೇ ಹೇಳಬಹುದು. ಈ ವಿಚಾರ ಬಹಳ ಸೊಗಸಾಗಿ ಕಥಾರೂಪದಲ್ಲಿ ಹೆಣೆಯಲ್ಪಟ್ಟಿದೆ. ಸಾಮಾನ್ಯ ಊಹೆಗೆ ನಿಲುಕದ ಕಥೆಯ ಅಂತ್ಯ ಈ ಕಾದಂಬರಿಯ ವಿಶೇಷತೆ. ಎಲ್ಲಾ ಕಷ್ಟಗಳನ್ನು ಸಹಿಸುತ್ತಾ , ಹಾಗೆಂದು ಗಂಡೆಂಬ ಅಹಂನ ಮುಂದೆ ಸೋತೂ ಬದುಕಲ್ಲಿ ಸೋಲದೆ , ಸಮಾಜದ ಎದುರು ತನ್ನ ಸಂಸಾರವನ್ನು ಸೋಲಗೊಡದೆ, ಎಲ್ಲಾ ನಿರಾಶೆಗಳನ್ನು ಮೀರಿ ಬೆಳೆಯುತ್ತಾ, ತನ್ನ ಮಗಳನ್ನು ಉನ್ನತವಾಗಿ ಬೆಳೆಸುತ್ತಾ, ಓದುಗರಲ್ಲಿ ಜೀವನಪ್ರೀತಿಯನ್ನು ತುಂಬುವಂತಹ ನಾಯಕಿಯ ಪಾತ್ರ ಬಹಳ ಇಷ್ಟವಾಗುತ್ತದೆ ಈ ಕಾದಂಬರಿಯಲ್ಲಿ. ಕಾದಂಬರಿಯಲ್ಲಿ ಹೊಸ/ವಿಭಿನ್ನ ಅನ್ನಿಸುವ ತಿರುವುಗಳನ್ನು ನೀಡುವ ರೀತಿಯಿಂದಾಗಿ ಶೈಲಜಾ ಹಾಸನ ಅವರ ಕಥೆಗಳು ಹೆಚ್ಚು ಆಪ್ತವಾಗುವುದು. ಅಂತರ ಕಾದಂಬರಿಯ ಹೊರತಾಗಿ ಸದ್ಯ ಬಿಡುಗಡೆಗೊಂಡಿರುವ ಶೈಲಜಾ ಹಾಸನ್ ಅವರ ಇನ್ನೆರಡು ಪುಸ್ತಕಗಳು ನಕ್ಸಲೇಟ್ ಹಾಗೂ ಶಿಕ್ಷಣ ಕ್ಷೇತ್ರದ ವಿಚಾರಗಳನ್ನು ಒಳಗೊಂಡ ಕೃತಿ “ಶಿಕ್ಷಣದತ್ತ ಒಂದು ನೋಟ”.
- ನಯನ ಬಜಕೂಡ್ಲು
