ಒಬ್ಬಳು ಹದಿಮೂರು ವರುಷದ ಹೆಣ್ಣು ಮಗು, ತನ್ನ ತಂದೆಯನ್ನು ಕೆಲ ವಾರದ ಹಿಂದೆ ಕಳೆದುಕೊಂಡ ನಂತರ ತಾಯಿಯನ್ನು ಕಳೆದುಕೊಂಡು, ತನ್ನ ಪುಟ್ಟ ತಮ್ಮ ಹಾಗೂ ತಂಗಿಯೊಂದಿಗೆ ಅಂತ್ಯ ಸಂಸ್ಕಾರ ಮಾಡುವುದು ನೋಡಿ, ಕವಿ- ಲೇಖಕ ಪ್ರೊ. ರೂಪೇಶ್ ಅವರ ಮನಸ್ಸಲ್ಲಿ ಆದ ಭಾವನೆಯ ಪ್ರತಿಬಿಂಬವೇ ಈ ಕವನ…
ಚುಂಬನದ ಹೂವಿಂದ ಹೊದಿಸಿ ನನ್ನ
ಜೀವದಾತೆ ನಿನ್ನ ಚಿರನಿದ್ರೆಗೆ ಕಳುಹಿಸಲೇ?
ಮುಗ್ದತೆ ಮೇಲಣ ನಲ್ಮೆಯ ಕಣ್ಣೀರಿನ
ಅನುರಾಗದ ಜೇನು ನಾ ಇಲ್ಲಿ ಉಣಿಸಲೇ?
ಇನ್ನು ಈ ಶೂನ್ಯ ರಂಗಸ್ಥಳದ ಘೋರ ಇರುಳಲ್ಲಿ ನಾ ಏಕಾಂಗಿಯಾಗಿ
ನೆರಳಿಲ್ಲದ ಹೆಜ್ಜೆಯಿಡಬೇಕಲ್ಲವೇ?
ಗದ್ಗದ ಸಂದಿಗ್ದತೆಯ ಸಮಯದಲ್ಲಿ
ಉಸಿರೊಂದಿಗೆ ನೀನೇ ನನ್ನ ಪ್ರಾರ್ಥನೆಯಾಗುವೆ.
ಈವರೆಗೆ ನಾ ನಿನ್ನ ಮಗಳಾಗಿದ್ದೆ ಇನ್ನು ಮನದಲ್ಲಿ
ನಿನ್ನ ಸ್ಮೃತಿಯನ್ನು ಕೂಸಾಗಿ ಕಾಪಾಡುವೆ.
ಮಿನುಗಿ ಹೋಗುವ ಮೋಹವೆಲ್ಲಾ ಇನ್ನು
ನನ್ನದಲ್ಲವೆಂದು ನಿಟ್ಟುಸಿರು ಬಿಡುವೆ.
ಕರೆಯೊಡ್ಡಿ ಮಾಡಿದ ಪ್ರಾರ್ಥನೆ ಸಫಲವಾದರೆ
ಕಾಣದ ದೇವನಿಗೆ ಮಂದಿರಬೇಕೆ?
ಕಾಣುವ ಕನಸುಗಳೆಲ್ಲಾ ಫಲಿಸಿದರೆ
ಕಾಲದ ಆದೇಶಗಳಿಗೆ ಏನು ಮೌಲ್ಯ?
ಉರಿಯುವ ಗ್ರೀಷ್ಮದ ಮರುದಡದಲ್ಲಿ
ನಿನ್ನ ಆಶೀರ್ವಾದದ ವಸಂತವಿರಬಹುದೇ?
ಹುಣ್ಣಿಮೆ ಬೆಳಕಲ್ಲಿ ಉರಿದು ಸುಟ್ಟ ಮೊಗ್ಗಂತೆ ನಮ್ಮೀ
ಸ್ನೇಹ ಸಾಮ್ರಾಜ್ಯ ಕರಗಿಹರಿದ ಮೇಣದಂತಾಯಿತು.
ಇನ್ನು ಮುಂದಿನ ಜೀವನದ ಮೈದಾನದಲ್ಲಿ
ನಿನ್ನ ಆರಾಧನೆಯನ್ನು ನನ್ನ ಮೌನ ಹೋರುತ್ತದೆ.
ಇನ್ನಾವ ಜನ್ಮದಲ್ಲಿ ನಾ ನಿನ್ನ ಪೂರ್ಣಬಿಂಬವಾಗಿ ಪಡೆವೆ?
ನಿನ್ನೊಂದಿಗಿನ ಜೀವನದ ಹಸಿವು ಹೇಗೆ ಸಹಿಸೆನೋ?
ನಿಮ್ಮವ ನಲ್ಲ
ರೂಪು
- ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಬೆಂಗಳೂರು)
