ಅಪ್ರಕಟಿತ ಕವಿತೆ : ರಾಜ್ ಆಚಾರ್ಯ

ಹೌದು ಅವಳಿಲ್ಲದ ದಿನ, ರಾತ್ರಿಗಳಲಿ, ವಿರಹದುರಿಯಲಿ ಮೌನದಲಿ ಬೇಯುತ್ತೇನೆ, ಉಸಿರ ಬಿಗಿಹಿಡಿದು ಬದುಕಿದ ಕ್ಷಣಗಳಿಗೆ ಕವಿತೆಯೊಂದ ಪುರಾವೆ ಒದಗಿಸುತ್ತೇನೆ…ಕವಿ ರಾಜ್ ಆಚಾರ್ಯ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಡಿಸೆಂಬರ್ ತಿಂಗಳ ಸಂಜೆಗಳನ್ನು
ಆದಷ್ಟೂ ಶಪಿಸುವುದನ್ನು ಬಿಟ್ಟಿದ್ದೇನೆ
ಮುರುಕು ತೊಲೆ ಹುಳುಕು ಜಂತಿಯ
ಒಂಟಿ ಮನೆಯ ಕಿಟಿಕಿಗಾತು ನಿಂತರೆ
ಬೆನ್ನು ಹುರಿಯ ಗುಂಟ ಹರಿವ ವಿಪರೀತ ಚಳಿ
ಬೆಚ್ಚಗಿನ ನಿನ್ನ ನೆನಪುಗಳ ಜೊತೆ
ಬರಿದಾದ ಬಟ್ಟಲಿಗೆ ಬಗ್ಗಿಸಿಕೊಂಡ
ವರ್ಷಗಳಷ್ಟು ಹಳೆಯದಾದ
ಸ್ಕಾಚ್ ವ್ಹಿಸ್ಕಿಯ ಒಗರು ವ್ಯಾಪಿಸುವ
ಮೊದಲೇ ವಿಷಣ್ಣತೆಯೊಂದು ಹೆಜ್ಜೆಗಳ
ಸಪ್ಪಳವಿಲ್ಲದೆ ಹಾದು ಹೋಗುತ್ತದೆ

*****

ನೀನೇ ಖುದ್ದಾಗಿ ಹೆಣೆದು ಕೊಟ್ಟ
ಜೋಡಿ ಹೃದಯಗಳ ಕಸೂತಿ ಇರುವ
ಕಡು ಕೆಂಪು ಬಣ್ಣದ ಉಲ್ಲನಿನ ಸ್ವೆಟರ್
ನನ್ನನು ಹೊದ್ದು ಕೂತಿದೆ
ನೀನು ನುಡಿಸಿ ಬದಿಗಿಟ್ಟ
ವೀಣೆಯ ತಂತಿಗಳು ಜೀವ ತಂತುಗಳ
ಈಗಲೂ ಮೀಟುವಂತೆ ಮೌನರಾಗವೊಂದು
ಎದೆ ಕಣಿವೆಯಲಿ ಮಾರ್ದನಿಸುತ್ತದೆ

*****

ಒಂಟಿತನವು ಅದೆಷ್ಟು ಒಂಟಿಯಾಗಿದೆ
ಗವ್ವನೆ ಕತ್ತಲು ಮೇಲ್ಛಾವಣಿಯಿಂದ
ತೂರಿ ಆತ್ಮಕಿಳಿದಂತೆ ಭಾಸವಾಗುತ್ತದೆ
ಹಿಂದಿನ ಬಾರಿ ನೀನು ಬಂದಾಗ
ಹಚ್ಚಿಟ್ಟ ಕಿರು ದೀಪ ಆರಿಸಿಲ್ಲ
ಹಾಗಾಗಿ ಬೆಳಕಿಲ್ಲವೆಂದೇನೂ ಅಲ್ಲ
ನೀನು ಮುಡಿದಿದ್ದ ಹೆಳಲ ಮಲ್ಲಿಗೆ
ನೆಲ ನಕ್ಷತ್ರಗಳಂತೆ ಚದುರಿವೆ
ಪುಕ್ಕಲು ಮನಸೀಗ ಅವುಗಳ
ಒಂದೊಂದಾಗಿ ಹೆಕ್ಕಲು ಹೆದರುತಿದೆ

*****

ನಿನ್ನ ಕುಲುಕುಲು ನಗೆಯ
ಪಲುಕುಗಳನ್ನು ಮನಯ ಮೂಲೆಗಳು
ಅಡಗಿಸಿಟ್ಟು ಆಗಾಗ ಹೊರ ತೆಗೆದು
ಅಜ್ಜನ ಕಾಲದ ಗ್ರಾಮಾಫೋನಿನ
ಪ್ಲೇಟುಗಳಲಿ ಉಲಿವ ಸಂಗೀತದಂತೆ
ಜಿದ್ದಿಗೆ ಬಿದ್ದು ಕೇಳಿಸುತ್ತವೆ
ಶೀತಲತೆಯಲಿ ನಿನ್ನ ಅನುಪಸ್ಥಿತಿಯನ್ನು
ಅರಿತುಕೊಂಡ ಕನಸುಗಳು ಮನಸಿನ
ಖಾಲಿ ಪರದೆಯ ಮೇಲೆ ಬಿತ್ತರಗೊಳ್ಳುತ್ತವೆ

*****
ಸರಿ ರಾತ್ರಿಯಲಿ ಖಾತರಿಯಾಗದ
ಅಸ್ಪಷ್ಟ ನೆರಳುಗಳ ಚಲನೆ
ಎಲ್ಲವನೂ ಕೊಡವಿ ಎದ್ದಾಗಲೊಮ್ಮೆ
ಅಜ್ಞಾತ ಗಮ್ಯದ ಕಡೆಗೆ ಜೋಳಿಗೆ
ಹೆಗಲೇರಿಸಿ ಹೊರಡುತ್ತೇನೆ
ವಿವ್ಹಲತೆಗೆ ಮುಖತಿರುಗಿಸಿ ನಿರುಮ್ಮಳನಾಗಿ
ಹಾದಿ ಸವೆಸಲೆಂಬಂತೆ ಅರ್ಧ ಸೇದಿ
ಬಿಸುಟ ಬದುಕಿನಂತ ಸಿಗರೇಟನ್ನು
ಕಾಲಲಿ ಹೊಸಕಿ ನಿರ್ಭಾವದಲಿ ಮುನ್ನಡೆಯುತ್ತೇನೆ

*****

ಅಪ್ಪಿತಪ್ಪಿ ನೀನೆಲ್ಲಾದರೂ
ನನ್ನ ಹುಡುಕಿ ಬಂದರೆ ನಿರಾಶಳಾಗಬೇಕಿಲ್ಲ
ಜಂಗು ಹಿಡಿದ ಬಾಗಿಲಿನ ಅಗುಳಿಗೆ
ಸಿಕ್ಕಿಸಿದ ಲಕೋಟೆಯಲ್ಲಿ ಕೊನೆಯ
ಅಪ್ರಕಟಿತ ಕವಿತೆಯೊಂದಿದೆ ಓದಿ ಬಿಡು
ನನ್ನ ಒಲವಿನಂತೆ ಅನರ್ಥವೆನಿಸಿದರೆ
ಪ್ರಕಟಿಸಬೇಡ ಎಲ್ಲಿಯೂ ಹಿಂತಿರುಗಿ ಬರುವುದು
ತಡವಾದರೆ ನೀನೊಮ್ಮೆ ನನ್ನ ಕ್ಷಮಿಸಿಬಿಡು


  • ರಾಜ್ ಆಚಾರ್ಯ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW