ಸಂವೇದನಾಶೀಲ ಕವಯತ್ರಿ ಅರುಂಧತಿ ರಮೇಶ್‌ ಇನ್ನಿಲ್ಲ

ಹಿರಿಯ ಕವಯತ್ರಿ (75) ಅರುಂಧತಿ ರಮೇಶ್‌ ಅವರು ಇಂದು ನಿಧನರಾದರು. ಸಾವಿನಲ್ಲೂ ಸಾರ್ಥಕತೆಯನ್ನು ಪಡೆದಿರುವ ಅರುಂಧತಿ ಮೇಡಂ ಅವರು ಬೆಂಗಳೂರಿನ ರಾಮಯ್ಯ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಿದ್ದಾರೆ, ಅವರಿಗೆ ಖ್ಯಾತ ಪತ್ರಕರ್ತರಾದ ಎನ್.ಎಸ್.ಶ್ರೀಧರ ಮೂರ್ತಿ ಅವರಿಂದ ಅಕ್ಷರ ನಮನಗಳು…

ಏಕೋ ಮತ್ತೆ ಮತ್ತೆ ಬರುತ್ತಿರುವ ಸಾವಿನ ಸುದ್ದಿಗಳು ಮನಸ್ಸನ್ನು ಭಾರ ಮಾಡುತ್ತಿವೆ. ತಮ್ಮ ಸೂಕ್ಷ್ಮ ಚಿಂತನೆ ಮತ್ತು ಆಳವಾದ ಅಧ್ಯಯನದಿಂದ ನನ್ನನ್ನು ಪ್ರಭಾವಿಸಿದ್ದ ಹಿರಿಯ ಕವಯತ್ರಿ (75) ಅರುಂಧತಿ ರಮೇಶ್‌ ಇಂದು ಬೆಳಗಿನ ಜಾವ 2.20ಕ್ಕೆ ನಿಧನರಾದರು ಎಂದು ಅವರ ನಂಬರ್‌ನಿಂದ ನನ್ನ ವಾಟ್ಸಪ್‌ ಗೆ ಮೆಸೇಜ್‌ ಬಂದಾಗ ಒಂದು ಕ್ಷಣ ತಲ್ಲಣಿಸಿ ಹೋದೆ. ಆಶಾ ರಘು ಅವರ ಸಾವಿನ ಆಘಾತದಿಂದ ಹೊರ ಬರುವ ಮೊದಲೇ ಈ ಸುದ್ದಿಯನ್ನು ಹೇಗೆ ಸ್ವೀಕರಿಸ ಬೇಕು ಎಂದು ಮನಸ್ಸು ಅಯೋಮಯವಾಯಿತು.

ಅರುಂಧತಿ ರಮೇಶ್‌ ನನ್ನ ಕಸಿನ್‌ ಆನಂದ ಋಗ್ವೇದಿಯವರ ಮೂಲಕ ಪರಿಚಿತರಾದವರು. ನಾನು ದಾವಣಗೆರೆಯಲ್ಲಿ ಇದ್ದಿದ್ದು ಕಡಿಮೆ ಸಮಯ, ಆದರೆ ನನ್ನ ಹೆತ್ತವರು ಸುಮಾರು ಐದು ವರ್ಷಗಳ ಕಾಲ ಅಲ್ಲಿದ್ದರು. ಆ ಕಾಲದಲ್ಲಿ ನಮ್ಮ ಕುಟುಂಬಕ್ಕೆ ಅರುಂಧತಿ ಬಹಳ ಹತ್ತಿರವಾಗಿದ್ದರು. ನಮ್ಮ ತಂದೆಯವರ ಕುರಿತು ಪ್ರಕಟವಾಗಿರುವ ಏಕೈಕ ಲೇಖನವನ್ನು ಅವರು ಕರ್ಮವೀರದಲ್ಲಿ ಬರೆದಿದ್ದರು. ಅರುಂಧತಿಯವರು ಬರಹಗಾರರಾದರೂ ಚಲನಚಿತ್ರ ಮತ್ತು ನಾಟಕಗಳ ಕುರಿತು ಅಪಾರ ಆಸಕ್ತಿ ಇಟ್ಟು ಕೊಂಡವರು. ದಾವಣಗೆರೆಯ ಸಾಂಸ್ಕೃತಿಕ ಪರಿಸರವನ್ನು ಆರೋಗ್ಯಕರವಾಗಿ ಇಡುವಲ್ಲಿ ಅವರ ಪಾತ್ರ ಬಹಳ ಮುಖ್ಯವಾದದ್ದು.

ಇವರು ಆರಂಭದಲ್ಲಿ ಅರುಂಧತಿ ಸಜ್ಜನ್ ಎಂಬ ಕಾವ್ಯ ನಾಮದಲ್ಲಿ ಬರವಣಿಗೆ ಆರಂಭ ಮಾಡಿದರು. ತಮ್ಮ ಪತಿ ರಮೇಶ್ ಇಂಗ್ಲೀಷ್ ಅಧ್ಯಾಪಕರು ಮಾತ್ರವಲ್ಲದೆ ಇಂಗ್ಲೀಷಿನಲ್ಲಿ ಬರಹಗಾರರಾಗಿದ್ದರು. ಇಂಗ್ಲಿಷಿನಲ್ಲಿ ಕವನ ಸಂಕಲನಗಳನ್ನು ಸಹ ಪ್ರಕಟಿಸಿದ್ದರು. ಕೆಲಕಾಲ ಒಟ್ಟೊಟ್ಟಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ್ದರು. ರಮೇಶ್ ಅವರ ಅಕಾಲಿಕ ನಿಧನದ ನಂತರ ‘ಅರುಂಧತಿ ರಮೇಶ್’ ಹೆಸರಿನಲ್ಲಿ ಬರವಣಿಗೆ ಮುಂದುವರಿಸಿದರು.ವೃತ್ತಿಯಲ್ಲಿ ಅರುಂಧತಿ ರಮೇಶ್‌ ಎಸ್ ಜೆ ಎಂ ಪ್ರೌಢಶಾಲೆ ಮತ್ತು ಅಕ್ಕಮಹಾದೇವಿ ಪ್ರೌಢಶಾಲೆಗಳಲ್ಲಿ ಗಣಿತ ಅಧ್ಯಾಪಕಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯ ನಿರ್ವಹಿಸಿದ್ದರು. ಮಡಿಲು, ಪರಾಗ ಸ್ಪರ್ಶಕ್ಕೆ ಕಾದ ಕವನ, ಮುಂಜಾವಿನ ಬೆಳದಿಂಗಳು, ಚಿತ್ತ ಚಾತಕ ಅವರ ಪ್ರಕಟಿತ ಕವನ ಸಂಕಲನಗಳು. ನೀನಿಲ್ಲದೆ, ತೇಲಿಬಿಟ್ಟ ದ್ವೀಪಗಳು ಅವರ ಮುಕ್ತಕಗಳ ಸಂಕಲನವಾದರೆ ರೋಮ್ಯಾಂಟಿಕ್ ಕಥೆಯೊಂದರ ಕೊನೆ ಅವರ ಏಕೈಕ ಕಥಾ ಸಂಕಲನ, ಬಗೆದಷ್ಟು ಬಾನು ಅವರ ಬಿಡಿ ಲೇಖನಗಳ ಸಂಗ್ರಹ ಭವದ ಬೆರಗು ಅವರ ಸಮಗ್ರ ಕಾವ್ಯದ ಸಂಕಲನ. ಮೂರು ವರ್ಷಗಳ ಕೆಳಗೆ ಇದನ್ನು ನೀಡಿ ಏನಾದರೂ ಬರೆಯಿರಿ ಎಂದಿದ್ದರು. ಅರುಂಧತಿಯವರ ಕಾವ್ಯ ಅಭಿವ್ಯಕ್ತಿಯಲ್ಲಿ ಭಿನ್ನತೆ ಇತ್ತು. ಅದನ್ನು ಒಟ್ಟು ಮಹಿಳಾ ಕಾವ್ಯದ ಹಿನ್ನೆಲೆಯಲ್ಲಿಟ್ಟು ನೋಡುವ ಟಿಪ್ಪಣಿ ಆರಂಭಿಸಿದ್ದೆ. ನನ್ನ ಎಂದಿನ ಸೋಮಾರಿತನದಿಂದ ಅದನ್ನು ಮುಗಿಸಲಿಲ್ಲ. ಈ ಕೊರಗು ಜೀವನಪೂರ್ತಿ ಕಾಡುವಂತಹದು.

ದಾವಣಗೆರೆಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅರುಂಧತಿಯವರು ಕಳೆದ ನಾಲ್ಕೈದು ವರ್ಷಗಳಿಂದ ಮಗ ಮಂಜುನಾಥ್ ಮತ್ತು ಸೊಸೆ ಸುನಿತಾ ಹಾಗೂ ಮೊಮ್ಮಗನೊಂದಿಗೆ ಬೆಂಗಳೂರು ವಾಸಿಯಾಗಿದ್ದರು. ಅನಿವಾರ್ಯ ಕಾರಣಗಳಿಂದ ಬೆಂಗಳೂರಿನಲ್ಲಿದ್ದರೂ ಸದಾ ದಾವಣಗೆರೆಯನ್ನೇ ಧ್ಯಾನಿಸುತ್ತಿದ್ದರು. ಅವರ ಪುಸ್ತಕ ಸಂಗ್ರಹ ಬಹಳ ವಿಶಿಷ್ಟವಾದದ್ದು. ಎಷ್ಟೋ ಅಪೂರ್ವ ಗ್ರಂಥಗಳನ್ನು ಅವರ ಸಂಗ್ರದಿಂದಲೇ ನಾನು ಓದಿದ್ದು. ಅದು ಅರ್ಹರ ಕೈ ಸೇರಬೇಕು ಎಂದು ಬಹಳ ಹಂಬಲಿಸುತ್ತಿದ್ದರು. ನಾನು ಹಾಮಾನಾ ಅವರ ಉದಾಹರಣೆಯನ್ನು ಅವರೊಂದಿಗೆ ಚರ್ಚಿಸಿದ್ದೆ ಮೂರು ವರ್ಷಗಳ ಹಿಂದೆ ದಾವಣಗೆರೆ ವಿಶ್ವವಿದ್ಯಾಲಯದ ‘ಪತ್ರಿಕೋದ್ಯಮ ಅಧ್ಯಯನ ವಿಭಾಗ’ಕ್ಕೆ ತಮ್ಮ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಟಿ.ಗಿರಿಜಾ ದತ್ತಿ ಬಹುಮಾನದಲ್ಲಿ ದತ್ತಿದಾನಿಗಳ ಪರವಾಗಿ ಅವರು ಆಯ್ಕೆಗೆ ಬರುತ್ತಿದ್ದರು. ಹೀಗಾಗಿ ಅವರ ಭೇಟಿ ಮತ್ತು ಮಾತುಕತೆ ಸಾಧ್ಯವಾಗುತ್ತಿತ್ತು. ಜಿ.ಎಸ್.ಸುಶೀಲಾ ದೇವಿ. ಆರ್.ರಾವ್‌, ಡಾ.ವನಮಾಲಾ ವಿಶ್ವನಾಥ್‌, ಡಾ.ಬಿ.ಎಸ್.ಶೈಲಜಾ ಹೀಗೆ ನಮ್ಮ ಅವಧಿಯಲ್ಲಿ ಅವರು ಮಾಡಿದ ಆಯ್ಕೆಗಳೆಲ್ಲವೂ ಉತ್ತಮವಾಗಿದ್ದವು. ಈ ವರ್ಷ ಅವರು ಅನಾರೋಗ್ಯದ ಕಾರಣ ಸಭೆಗೆ ಬಾರದೆ ಜೂಂ ಮೂಲಕ ಭಾಗವಹಿಸಿದ್ದರು. ಹೀಗಾಗಿ ಅವರೊಂದಿಗೆ ಮಾತುಕತೆ ಪೋನ್‌ನಲ್ಲಿಯೇ ನಡೆದಿತ್ತು.

ಸಾವಿನಲ್ಲೂ ಸಾರ್ಥಕತೆಯನ್ನು ಪಡೆದಿರುವ ಅರುಂಧತಿ ಮೇಡಂ ಅವರು ಬೆಂಗಳೂರಿನ ರಾಮಯ್ಯ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಿದ್ದಾರೆ, ನನ್ನ ಜೀವನದಲ್ಲಿ ವಿಶಿಷ್ಟ ಅನುಭೂತಿ ನೀಡಿದ ಅರುಂಧತಿಯವರ ನೆನಪು ಉಳಿಯುವಂತೆ ಮಾಡಬೇಕು, ಮುಖ್ಯ ಅವರ ಕಾವ್ಯದ ಕುರಿತು ಇನ್ನಾದರೂ ಚರ್ಚೆಗಳನ್ನು ನಡೆಸ ಬೇಕು.


  •  ಎನ್.ಎಸ್.ಶ್ರೀಧರ ಮೂರ್ತಿ – ಖ್ಯಾತ ಪತ್ರಕರ್ತರು, ಲೇಖಕರು, ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW