ಕರ್ನಾಟಕದ ಮುದ್ರಣ ಮಾಧ್ಯಮದಲ್ಲಿ ಕೀರ್ತಿ ಪತಾಕೆ ಹಾರಿಸಿದ ಬೆರಳೆಣಿಕೆಯಷ್ಟು ಕಲರ್ ಫುಲ್ ವ್ಯಕ್ತಿಗಳಲ್ಲಿ ರಾಜಹನ್ಸ್ ಬ್ರದರ್ಸ್ ಪ್ರಮುಖರು. ಎ ರವೀಂದ್ರನಾಥ್, ಬಾಲಚಂದ್ರ ಸಹೋದರರ ಪ್ರಿಂಟಿಂಗ್ ಮೆಷಿನ್ ಸುಮಾರು ಮೂವತ್ತೈದು ವರ್ಷಗಳಿಂದ ನಿರಂತರವಾಗಿ ಚಾಲನೆಯಲ್ಲಿದೆ. ಇನ್ನಷ್ಟು ರೋಚಕ ವಿಷಯವನ್ನು ವೈ ಜಿ ಅಶೋಕ್ ಕುಮಾರ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
1983 ರಲ್ಲಿ ಸಣ್ಣಮಟ್ಟದಲ್ಲಿ ಆರಂಭವಾದ ಮುದ್ರಣ ವ್ಯವಹಾರ. ರಾಜಹನ್ಸ್ ಎಂದರೆ ನಂ 134. ರಾಜಾಜಿನಗರ 44 ಎಂದು ಹೇಳುವ ಮಟ್ಟಕ್ಕೆ ಬೆಳೆದು ನಿಂತಿದೆ. ಅಲ್ಲದೆ ದಾವಣಗೆರೆ, ಬಿಡದಿ, ಕೊಯಮತ್ತೂರು, ಮಧುರೆಗೂ ತನ್ನ ಜಾಲವನ್ನು ವಿಸ್ತರಿಸಿಕೊಂಡಿದೆ. ಊದಿನಕಡ್ಡಿ ಪ್ಯಾಕೇಟ್ ನಿಂದ ಹಿಡಿದು ನೂರಾರು ಮಾದರಿಯ ಮೇಲು ಹೊದಿಕೆ, ಮುಖಪುಟಗಳನ್ನು
(ಕವರ್) ಗಳನ್ನು ಮುದ್ರಿಸುವುದರಲ್ಲಿ ದಕ್ಷಿಣ ಭಾರತದಲ್ಲೇ ಹೆಸರುವಾಸಿ.
ನಿಗದಿತ ಸಮಯ ಕ್ವಾಲಿಟಿ ಮತ್ತು ಲೆಕ್ಕದಲ್ಲಿ ಗ್ಯಾರಂಟಿ.ಮುದ್ರಣ ಮಾಧ್ಯಮದಲ್ಲಿ ನೂತನ ಅವಿಷ್ಕಾರಗಳನ್ನು ಅಳವಡಿಸಿದರು. ಪ್ರಜಾವಾಣಿಯೂ ಸೇರಿದಂತೆ ಪ್ರಮುಖ ದಿನಪತ್ರಿಕೆಗಳು, ಪುರವಣಿಗಳು , ಐವತ್ತಕ್ಕೂ ಹೆಚ್ಚು ಮಾಸಪತ್ರಿಕೆ ಹಾಗೂ ವಾರಪತ್ರಿಕೆಗಳು ಇಲ್ಲಿ ಮುದ್ರಣ ಕಾಣುತ್ತಿದ್ದವು.

ಕಛೇರಿಯ ಕೆಲಸ ಕಾರ್ಯಗಳನ್ನು ಅಣ್ಣ ರವಿಯವರು ಹಾಗೂ ಹೊರಗಿನ ಓಡಾಟವನ್ನು ಬಾಲಿಯವರು ವಹಿಸಿಕೊಂಡು ಒಂದೇ ತಕ್ಕಡಿಯಂತೆ ಕೆಲಸ ಮಾಡುತ್ತಿದ್ದರು. ಉತ್ಸಾಹಿ ತರುಣರಾಗಿದ್ದ ಬಾಲಚಂದ್ರ ಅವರ ಶ್ರೀಮತಿಯವರಿಗೆ ಮುದ್ರಣದ ಜತೆಗೆ ಪತ್ರಿಕೆ ಮಾಡುವ ಅಭಿಲಾಶೆ ಹಾಗಾಗಿ ಪತ್ರಕರ್ತರಾದ ಸಮಿ ಉಲ್ಲಾ, ಸಾಚ, ನಾನು ಮತ್ತು ಕಲಾವಿದ ರವಿ ಸೇರಿಕೊಂಡು ‘ಪ್ರಿಯಾಂಕ ಪತ್ರಿಕೆ’ ಯನ್ನು ರೂಪಿಸಿದೆವು.
ಅದ್ದೂರಿ ಆಕರ್ಷಣೀಯ ಮುದ್ರಣದಿಂದ ಕಂಗೊಳಿಸಿದ ಪ್ರಿಯಾಂಕ ಪತ್ರಿಕೆ ಆಗ ಮನೆಮಾತಾಗಿದ್ದ ಗೃಹಶೋಭ ಮಾಸಿಕಕ್ಕೆ ಸಡ್ಡು ಹೊಡೆದು ಮಾರುಕಟ್ಟೆಯಲ್ಲಿ ನಿಂತಿತು. ವಾರಪತ್ರಿಕೆಯ ವೈಕುಂಠರಾಜು ಮತ್ತು ಸನತ್ ಕುಮಾರ್ ಅವರನ್ನು ಬಾಲಚಂದ್ರ ಬ್ರದರ್ಸ್ ಬಹಳ ಹಚ್ಚಿಕೊಂಡಿದ್ದರು. ಹಾಗೆಯೇ ಸಂಜೆ ನುಡಿಯ ಕೆ ಎಸ್ ಜಯರಾಮನ್ ಕೂಡಾ ಸ್ನೇಹಿತರೇ….
ಲಂಕೇಶ್ ಪತ್ರಿಕೆಯ ಮಾದರಿಯಲ್ಲಿ ಪತ್ರಿಕೆ ಮಾಡಬೇಕೆಂಬ ಬಯಕೆ ಬಾಲಿಯವರಿಗೆ ಒಮ್ಮೆ ಬಾಲಿಯವರು ಆಥರಾ ಪತ್ರಿಕೆ ಮಾಡಬೇಕಂದ್ರೆ ಏನಂತ ಹೆಸರಿಡೋದು ಸರ್ ಅಂತ ಕೇಳಿದರು.

ನಮ್ಮ ತರ್ಲೆ ರವಿ ತಮಾಷೆಯಾಗಿ ‘ ಬಾಲೀಶ್ ಪತ್ರಿಕೆ ‘ ಅಂತ ಇಡಬಹುದು ಸರ್ , ಸಂತೋಷ್ ಕುಮಾರ್ ಗುಲ್ವಾಡಿ ಅವರನ್ನು ಎಡಿಟರ್ ಮಾಡಬಹುದು ಎಂದಿದ್ದ. ತಕ್ಷಣ ಬಾಲಿಯವರು ‘ಆ ಯಪ್ಪ ಯಾರ್ ಸರ್ ‘ ಕರೆಸಿ ಸರ್ ಅಂದ್ರು. ಅಷ್ಟು ಮುಗ್ಧರಾಗಿದ್ದ ಬಾಲಿಯವರಿಗೆ ಪತ್ರಕರ್ತ ಸ್ನೇಹಿತರನ್ನು ಕಂಡ್ರೆ ತುಂಬಾ ಪ್ರೀತಿ. ಯಾರಾದ್ರೂ ಪರಿಚಯದ ಪತ್ರಕರ್ತರು ಹೊಸ ಪತ್ರಿಕೆ ಮಾಡಲು ಬಂದ್ರೆ ‘ ಸರ್ ಪೇಪರ್ ಕಾಸ್ಟ್ ಕೊಡಿ ಸಾಕು ಪ್ರಿಂಟಿಂಗ್ ಫ್ರೀ ‘ ಅಂತಿದ್ರು.
( ಸಂಜೆವಾಣಿ ಮಣಿಯವರು ಸಣ್ಣ ಪತ್ರಿಕೆಗಳನ್ನು ಬಹಳಷ್ಟು ಸಲ ಉಚಿತವಾಗಿಯೂ ಮುದ್ರಿಸಿ ಕೊಡುತ್ತಿದ್ದರು.) ಅಲ್ಲಿದ್ದಷ್ಟು ಕಾಲ ಪ್ರಜಾವಾಣಿ ಭಾನುವಾರದ ಪುರವಣಿಯನ್ನು
ಗುರುವಾರವೇ ಓದುವ ಖುಷಿ ಅನುಭವಿಸುತ್ತಿದ್ದೆ. ಹೊಸ ಪ್ರಿಂಟಿಂಗ್ ಮೆಷಿನ್ ಉದ್ಘಾಟನೆಗೆ ಮುಖ್ಯಮಂತ್ರಿ ಪಟೇಲರು ಹಾಗೂ ಕಾನೂನು ಮಂತ್ರಿ ನಾಣಯ್ಯ ಅವರನ್ನು ಕರೆದುಕೊಂಡು ಹೋಗಿದ್ದೆವು.
ಪಟೇಲರು ಸ್ವಿಚ್ ಒತ್ತಿದ ತಕ್ಷಣ ಹಣ್ಣುಗಳು ತುಂಬಿದ ತಟ್ಟೆ ಹಿಡಿದು ಸ್ವಾಗತಿಸುವ ಸುಂದರ ಯುವತಿಯ ವರ್ಣರಂಜಿತ ಚಿತ್ರ ಹೊರ ಬಂತು. ಪಟೇಲರು ಥ್ರಿಲ್ ಆದರು. ಮುದ್ರಣ ವ್ಯವಸ್ಥೆಯ ಬಗ್ಗೆ ಕೇಳಿ ತಿಳಿದುಕೊಂಡರು.
‘ ಇಂತಹ ಧಣಿಗಳನ್ನು ಇಟ್ಟುಕೊಂಡು ಯಾಕಪ್ಪಾ ಒದ್ದಾಡ್ತೀರಾ ‘ ಎಂದು ನಮ್ಮನ್ನು ರೇಗಿಸಿದರು. ಆಮೇಲೆ ಬಾಲಿಯವರು ‘ಸೂರ್ಯ’ ಮತ್ತು ‘ಚಿತ್ರ’ ಪತ್ರಿಕೆಗಳನ್ನು ಆರಂಭಿಸಿದರು.
ಇಂದ್ರಜಿತ್ ಲಂಕೇಶ್ ರನ್ನು ನಿರ್ದೇಶಕನನ್ನಾಗಿಸಿ ತುಂಟಾಟ ಎಂಬ ಸಿನಿಮಾವನ್ನೂ ನಿರ್ಮಾಣ ಮಾಡಿದರು. ನಷ್ಟದ ಉದ್ಯಮಕ್ಕೆ ಕೈ ಹಾಕದ ಬಾಲಿಯವರು ಚಿತ್ರೋದ್ಯಮದಲ್ಲಿ ಮುಂದುವರೆಯಲಿಲ್ಲ.

ಅವರಿಗೆ ರಾಜಕಾರಣದಲ್ಲೂ ಆಸಕ್ತಿ, ಬಿ ಕೆ ಹರಿಪ್ರಸಾದ್ ಅವರ ನೆಚ್ಚಿನ ರಾಜಕಾರಣಿಗಳಲ್ಲೊಬ್ಬರು. ಹಾಗೆಯೇ ಸೇವಾ ಮನೋಭಾವವೂ ತುಂಬಾ ಇದೆ ಕಳೆದ ಬಾರಿ ಉತ್ತರ ಕರ್ನಾಟಕ ನೆರೆಹಾವಳಿ ಆದಾಗ ಸುಮಾರು ನಲ್ವತ್ತು ಲಕ್ಷ ರೂಪಾಯಿಗಳ ಸಾಮಗ್ರಿಗಳನ್ನು ಸಂತ್ರಸ್ತರಿಗೆ ತಲುಪಿಸಿದ್ದರು.
ನೂರಾರು ಶ್ರಮಿಕ ಕುಟುಂಬಗಳು ರಾಜಹನ್ಸ್ ನೆರಳಿನಲ್ಲಿ ಬದುಕು ಕಟ್ಟಿಕೊಂಡಿವೆ. ನಮ್ಮ ಪ್ರೆಸ್ ಕ್ಲಬ್ ಗಾಗಿ ಕಡಿಮೆ ದರದಲ್ಲಿ ಡೈರಿಗಳನ್ನು ಮುದ್ರಿಸಿ ಕೊಟ್ಟಿದ್ದಾರೆ. ಈಗ ಅವರ ಮಕ್ಕಳಾದ ಅಶ್ವಥ್ ಹಾಗೂ ಆಕಾಶ್ ಮುದ್ರಣ ವ್ಯವಹಾರದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಸ್ನೇಹಿತರಾದ ಬಾಲಚಂದ್ರ ಅವರ ಜನುಮ ದಿನದ ಈ ಸಂದರ್ಭದಲ್ಲಿ ಕನ್ನಡದ ಪತ್ರಿಕೋದ್ಯಮ ಹಾಗೂ ಪುಸ್ತಕ ಮುದ್ರಣ ಮಾಧ್ಯಮ ಮತ್ತಷ್ಟು ಕಂಗೊಳಿಸಲಿ ಎಂಬ ಹಾರೈಕೆ ನಮ್ಮದು.
- ವೈ ಜಿ ಅಶೋಕ್ ಕುಮಾರ್
