ಕವಿ, ಕಥೆಗಾರ, ವಿಮರ್ಶಕ ಹಾಗೂ ಆಕಾಶವಾಣಿ ನಿರ್ದೇಶಕರಾಗಿ ಪ್ರಸ್ತುತ ನಿವೃತ್ತರಾಗಿರುವ ಬಸವರಾಜ ಸಾದರ ಅವರ ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಬರೀ ಬೆಳಗಲ್ಲೊ ಅಣ್ಣಾ…
ಲೇಖಕರು: ಬಸವರಾಜ ಸಾದರ
ಪ್ರಕಾಶನ : ಸಂಗಾತ ಪ್ರಕಾಶನ ಗದಗ
ಮುದ್ರಣದ ವರ್ಷ: ೨೦೨೧
ಬೆಲೆ: ರೂ. ೮೦/
ಪುಟಗಳು. ೫೨
ಪರಿಚಯ:
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಅಂತರ್ರಾಷ್ಟ್ರೀಯ ಪ್ರಶಸ್ತಿ ಮುಂತಾದ ಅನೇಕ ಗೌರವಗಳಿಗೆ ಭಾಜನರಾಗಿದ್ದಾರೆ. “ಅಂಬಿಕಾ ತನಯದತ್ತ” ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ವರಕವಿ ದ. ರಾ. ಬೇಂದ್ರೆಯವರ ಅಪ್ಪಟ ಅಭಿಮಾನಿಯಾದ ಲೇಖಕರು ತಮ್ಮ ಹಾಗೂ ಬೇಂದ್ರೆಯವರ ಪರಿಚಯವನ್ನು ಅಲ್ಲಿಯ ಸೊಗಡಿನ ಆಡುಭಾಷೆಯಲ್ಲಿ ಇಲ್ಲಿ ವಿವರಿಸಿದ್ದಾರೆ.
ಅವರ ಬಾಲ್ಯದಲ್ಲಿ ಮನೆ ಮನೆಗೆ ಬೇಡಲು ಬರುವ ಮುದುಕಜ್ಜನೊಬ್ಬ ” ಇನ್ನೂ ಯಾಕ ಬರಲಿಲ್ಲವ್ವಾ.. ಹುಬ್ಬಳ್ಳಿಯಾಂವಾ, ವಾರದಲ್ಲಿ ಮೂರ್ ಸರ್ತೆ ಬಂದು ಹೋಗಾಂವಾ…. “ಎಂದು ರಾಗವಾಗಿ ಹಾಡುತ್ತಿದ್ದದ್ದು… ಈ ಹಾಡು ರೇಡಿಯೋದಲ್ಲೂ ಬಂದು.. ಜನರೆಲ್ಲಾ ನಾನಾ ರೀತಿಯಲ್ಲಿ ಗುನುಗುವಾಗ.. “ಹಾಂಗಾದ್ರ……ಈ ಹುಬ್ಬಳ್ಳಿಯಾಂವಾ ಯಾರಿರಬೇಕು? ಅಂವ ಭಾರೀ ಆಸಾಮಿನೇ ಇರಬೇಕೆಂದು ಕೊಂಡಿದ್ದರಂತೆ.!! ಮುಂದೆ ಅವರು ಧಾರವಾಡದ ಕಾಲೇಜಿಗೆ ಕಲಿಯಲು ಬಂದಾಗ..ಇಲ್ಲಿ ಸಿಕ್ಕಿದ್ದು ಹುಬ್ಬಳ್ಳಿಯಾಂವಾನನ್ನು ಹುಟ್ಟಿಸಿದ ಬೇಂದ್ರೆ ಅಜ್ಜ!! ಕಡೆಗೆ ಅವರ ಪರಿಚಯವಾಗಿದ್ದಷ್ಟೇ ಅಲ್ಲ….

ಪಾತರಗಿತ್ತಿ ಪಕ್ಕಾ ನೋಡಿದೇನಾ ಅಕ್ಕಾ… ಬಾರೋ ಸಾಧನಕೇರಿಗೆ…. ಕುಣಿಯೋಣು ಬಾರ… ನಾನು ಬಡವಿ, ಆತ ಬಡವ… ಕುರುಡು ಕಾಂಚಾಣ… ನೀ ಹಿಂಗೆ ನೋಡ ಬ್ಯಾಡ ನನ್ನ… ಮುಗಿಲ ಮಾರಿಗ ರಾಗರತಿಯ ಮುಂತಾದ ಬೇಂದ್ರೆ ಅಜ್ಜನ ಹಾಡುಗಳು ಕಿವಿಗೆ ಬೀಳುವಂತಾಗಿತ್ತು. !!
ಬೇಂದ್ರೆ ಅವರನ್ನು ಭೇಟಿಯಾಗಬೇಕೆಂದು ಒಮ್ಮೆ ಮನೆಗೆ ಹೋದಾಗ… ಬಾ ತಮ್ಮಾ… ಯಾವೂರಪ್ಪ ನಿಂದು? ಎಂದು ಕೇಳಿದರಂತೆ. ಇವರು ಕಲಘಟಗಿ ತಾಲ್ಲೂಕಿನ “ಹುಲ್ಲಂಬಿ ” ಎಂದುತ್ತರ ಕೊಟ್ಟರಂತೆ. ಅದರ ಅರ್ಥ ಗೊತ್ತೇನು ನಿನಗೆ?.. ಎನ್ನುತ್ತಾ ನಿಮ್ಮ ಮಲ್ನಾಡ್ ನಲ್ಲಿ ಮಳೆ ಮತ್ತು ನೀರು ಜಾಸ್ತಿ ಇರೋದ್ರಿಂದ ನಿಮ್ಮೂರಿಗೆ “ಹುಲ್ಲಂಬಿ “ಅನ್ನೋ ಹೆಸರು ಬಂದಿರಬೇಕು ಇದನ್ನೆಲ್ಲಾ ತಿಳ್ಕೊಂಬೇಕು ನೀನು …. ಎನ್ನುತ್ತಾ….ಕೈ ಮೇಲೆ ಕಲ್ಲು ಸಕ್ಕರೆ ಹಾಕಿ ಚೊಲೋತ್ನಗಿ ಅಭ್ಯಾಸ ಮಾಡು ಅಂದಿದ್ದರಂತೆ. !!
ಕಾಲೇಜಿನ ಸಮಾರಂಭವೊಂದಕ್ಕೆ ಬಂದಾಗ ,ಬೇಂದ್ರೆ ಯವರು ಬಸವರಾಜ ಸಾದರ ಅವರ ಕವನವೊಂದನ್ನು ಮೆಚ್ಚಿ ಆಶೀರ್ವಾದ ಮಾಡಿದ್ದನ್ನೂ, ಹಾಗೂ ಮುಂದೆ ಅವರು ಕಲಿತು ಉದ್ಯೋಗಕ್ಕೆ ಸೇರಿಕೊಂಡು ಧಾರವಾಡಕ್ಕೆ ಬಂದಾಗ ಸಾಧನಕೇರಿಯೊಳಗೆ ಆ ಸಾಧಕ ಬೇಂದ್ರೆ ಅಜ್ಜ ಇರಲಿಲ್ಲ… ಆದರೆ ಅವರು ಹಾಡಿದ “ಬಾ ಬಾ ಸಾಧನಕೇರಿಗೆ… ಮರಳಿ ನಿನ್ನೀ ಊರಿಗೆ… “ಎನ್ನೋ ಹಾಡು ಮಾತ್ರ ಪ್ರೀತಿಯಿಂದ ಕರೆಯುತ್ತಿತ್ತು… ಎಂಬುದಾಗಿ ನೆನಪಿಸಿಕೊಂಡಿದ್ದಾರೆ.
ಮುಂದೆ ಅವರು ಧಾರವಾಡ ಆಕಾಶವಾಣಿ ಕೇಂದ್ರದ ನಿರ್ದೇಶಕರಾಗಿಬಂದ ವರ್ಷವೇ, ಬೇಂದ್ರೆಯವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಏನಾದರೂ ಒಂದು ವಿಶೇಷ ಕಾರ್ಯಕ್ರಮ ಮಾಡಬೇಕೆಂದು ಕೊಂಡಾಗ.. ಈ ವಿಚಾರ ಸಂಕಿರಣದ ಯೋಜನೆ ಹೊಳೆದಿತ್ತು. !!
ಅದರಂತೆ ಆಕಾಶವಾಣಿ ಧಾರವಾಡ ಕೇಂದ್ರದ ಮೂಲಕ ನೂರು ಜನ ಆಮಂತ್ರಿತ ಶ್ರೋತೃಗಳ ಸಮ್ಮುಖದಲ್ಲಿ… ನೂರು ನಿಮಿಷಗಳ ಅವಧಿಯ ಬೇಂದ್ರೆಯವರ ಸಾಹಿತ್ಯಕ ವಿಚಾರ ಸಂಕಿರಣ” ಇದು ಬರಿ ಬೆಳಗಲ್ಲೊ ಅಣ್ಣಾ “ಎಂಬ ಹೆಸರಿನ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಿ ದಾಖಲೆಯನ್ನುಂಟು ಮಾಡಿದ ಕೀರ್ತಿ ಬಸವರಾಜ ಸಾದರ ಇವರದು.
ದಿನಾಂಕ ೨୭.೧.೧೯೯೬ ರಂದು ಬೇಂದ್ರೆಯವರು ರಚಿಸಿದ “ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೊಯ್ದಾ” ಎಂಬ ಹಾಡಿನ ಪ್ರಾರಂಭದೊಂದಿಗೆ ನಡೆದ ಈ ಬಾನುಲಿ ಕಾರ್ಯಕ್ರಮ ಪ್ರಸಾರವಾಗಿ ಕೇಳುಗರ ಮೈ ಮರೆಸಿತು.!!ಅಲ್ಲಿ ಆಮಂತ್ರಿತ ಈ ಕೆಳಕಂಡ ವಿದ್ವಾಂಸರು ಮಾತಾಡಿದ ವಿಷಯಗಳನ್ನು ಸಂಕ್ಷಿಪ್ತವಾಗಿ ನಾನಿಲ್ಲಿ ವಿವರಿಸುವ ಪ್ರಯತ್ನ ಮಾಡಿರುವೆ.
೧. ಬೇಂದ್ರೆ ಹಾಗೂ ಗೆಳೆಯರ ಗುಂಪು ಪ್ರೋ. ಕೀರ್ತಿನಾಥ ಕುರ್ತ ಕೋಟಿ.
ಬೇಂದ್ರೆಯವರು ಪುಣೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾಗಲೇ ಕನ್ನಡ ಮತ್ತು ಮರಾಠಿ ಗೆಳೆಯರು ಕೂಡಿ “ಶಾರದಾ ಮಂಡಲ “ಎಂಬ ಗುಂಪನ್ನು ನಿರ್ಮಿಸಿ ಕೊಂಡಿದ್ದರು. ಈ ಗುಂಪಿಗೆ ಯಾವುದೇ ಸಂವಿಧಾನ ಇರಲಿಲ್ಲ. ಗೆಳೆಯರ ಗೆಳೆಯರಾದರೆ ಸಾಕು. ಗೆಳೆಯರಾಗ ಬಹುದಾಗಿತ್ತು. ಸಾಹಿತ್ಯದ ರೂಪು ರೇಷೆಗಳನ್ನು ಮತ್ತು ಆಶಯಗಳನ್ನು ಹುಡುಕಿ ತೆಗೆಯುವುದೇ ಈ ಗುಂಪಿನ ಉದ್ದೇಶವಾಗಿತ್ತು. ಹಾಗೂ ಧಾರವಾಡದ ಸಾಧನಕೇರಿ ಇವರ ಪ್ರಯೋಗ ಶಾಲೆಯಾಗಿತ್ತು. ಬೇಂದ್ರೆಯವರ” ಗರಿ” ಸಂಕಲನ ಬಂದಿದ್ದು ಅದೇ ಸಮಯದಲ್ಲಿ. ಮುಂದೆ ಈ ಗುಂಪು ಚದುರಿ ಬಿತ್ತು. ಈ ಬಗ್ಗೆ ಬೇಂದ್ರೆಯವರ ಸಂಚಯ ಎಂಬ ಕವಿತೆಯಲ್ಲಿ ಕೆಲವು ಉಲ್ಲೇಖವಿದೆಯಾದರೂ…. ಎಲ್ಲಾ ಪ್ರಶ್ನೆಗಳಿಗೂ ಸಿಗುವ ಉತ್ತರ ಒಂದೇ.
” ಅರ್ಥವಿಲ್ಲ… ಸ್ವಾರ್ಥವಿಲ್ಲ ಬರಿಯ ಭಾವಗೀತ ”
೨. ಬೇಂದ್ರೆ ಕಾವ್ಯದ ಮುಖ್ಯ ನೆಲೆಗಳು ಮತ್ತು ದರ್ಶನ ಮಲ್ಲೇಪುರಂ ಜಿ. ವೆಂಕಟೇಶ್.
ಬೇಂದ್ರೆ ಕಾವ್ಯದ ಪ್ರವೇಶಕ್ಕಿರುವ ಬಾಗಿಲು ಅವರ ಕವಿತೆಗಳೇ. “ಹಕ್ಕಿ ಹಾರುತಿದೆ “ಕವನ ಸಂಕಲನದ ಮುನ್ನುಡಿಯಲ್ಲಿ ಅವರು ಹೇಳಿದ…ಸಾಹಿತ್ಯಕ್ಕಿಂತ ಜೀವನ ಮೇಲು. ವಸಂತ ಮಾಸ ಬಂದರೆ ಸಾಕು ಯಾವ ಮಾಮರವೂ ಚಿಗುರಲು ಯಾರ ಅಪ್ಪಣೆಯನ್ನೂ ನಿರೀಕ್ಷಿಸುವುದಿಲ್ಲ. …. ಎಂಬ ಮಾತು ಈಗಲೂ ಪ್ರಸ್ತುತ.
ಬೇಂದ್ರೆಯವರದು ಮೂಲ ಪ್ರತಿಭೆಯೇ ಹೊರತು ಪ್ರತಿ ಸೃಷ್ಟಿ ಪ್ರತಿಭೆಯಲ್ಲ. ಅವರು ಇದರಿಂದಲೇ ಇಂದು ನಾಳೆಗಳನ್ನು ಒಟ್ಟಾಗಿ ಕವಿತೆಗಳಲ್ಲಿ ಹಿಡಿಯ ಬಲ್ಲರು. ಉದಾಹರಣೆಗೆ ಅವರದೊಂದು ಕವಿತೆ….
ಛಂದೋಗತಿಯ ಛಂದ
ತಾಳ ಲಯದ ಆನಂದ
ಸ್ವಚ್ಛಂದ ಬಂಧವ ಕಲಿಸಿದವು,
ನಾಡ ಬಳಕೆಯ ನುಡಿಗೆ
ಸೋತಿದ್ದ ಮನವನು
ಹಾಡಿನಾ ಮೋಡಿಗೆ ಒಲಿಸಿದವು
ಕನ್ನಡವು ಕನ್ನಡವ ಕನ್ನಡಿಸುತ್ತಿರಬೇಕು.
೩. ಬೇಂದ್ರೆ ಕಾವ್ಯದಲ್ಲಿ ಒಲವು -ಸಿದ್ಧಲಿಂಗ ಪಟ್ಟಣ ಶೆಟ್ಟಿ.
ಬೇಂದ್ರೆ ಅವರ ಮೊದಲ ಕೃತಿಗಳಾದ “ಕೃಷ್ಣಾ ಕುಮಾರಿ” ಯಿಂದ ಹಿಡಿದು ಕೊನೆಯ ಸಂಕಲನದವರೆಗೂ ಒಲವಿನ ವಿವಿಧ ಪರಿಗಳು ಹಲವು ರೀತಿಯ ಸಂಬಂಧಗಳಾಗಿ, ಕಾವ್ಯದ ಬಂಧಗಳಾಗಿ, ಕೊನೆಗೆ ಭಕ್ತಿ ಮುಕ್ತಿಯ ದೇವ ಮಾಟವಾಗಿ ಪರಿವರ್ತನೆ ಗೊಳ್ಳುವುದನ್ನು ನಾವು ನೋಡ ಬಹುದು. ಒಲವು ಅಥವಾ ಪ್ರೀತಿಯನ್ನು, ಅದು ನೀಡುವ ನೋವು ನಲಿವುಗಳನ್ನು ದೀರ್ಘವಾಗಿ ಅನುಭವಿಸಿದ ಕವಿ ಬೇಂದ್ರೆ. ಅದರ ಎಲ್ಲಾ ಆಯಾಮಗಳನ್ನು ಅನುಭೋಗಿಸಿ ತೀವ್ರವಾಗಿ ಪ್ರತಿಕ್ರಿಯಿಸಿ ಅವರು ಕವನ ರಚಿಸಿದರು. ಆಯಾ ಕಾಲಕ್ಕೆ, ಸಂದರ್ಭಕ್ಕೆ, ವಯಸ್ಸಿಗೆ ತಕ್ಕಂತೆ ಒಲವಿನ ವೈವಿಧ್ಯಮಯ ಚಿತ್ರಗಳನ್ನು ಬಿಡಿಸಿದಂತ ವಿರಳ ಕವಿ ಬೇಂದ್ರೆಯವರು.
ನಾರಿ ನಿನ್ನ ಮಾರಿ ಮ್ಯಾಗ
ನಗೀ ನವಿಲು ಆಡುತ್ತಿತ್ತ
ಆಡುತ್ತಿತ್ತ ಓಡತ್ತಿತ್ತ
ಮುಗಿಲ ಕಡೆಗೆ ನೋಡತ್ತಿತ್ತ
————–
ನಾನು ಬಡವಿ ಆತ ಬಡವ
ಒಲವೇ ನಮ್ಮ ಬದುಕು
ಬಳಸಿ ಕೊಂಡೆವು ಅದನೆ ನಾವು
ಅದಕು ಇದಕು ಎದಕು
————–
ಗಮ ಗಮ ಗಮಾಡಸ್ತಾವ ಮಲ್ಲೀಗಿ
ನೀ ಹೊರಟಿದ್ದೀಗ ಎಲ್ಲೀಗಿ?
ತುಳುಕ್ಯಾಡತಾವ ತೂಕಡಿಕಿ
ಎವಿ ಅಪ್ಪತಾವ ಕಣ್ಣ ದುಡುಕಿ
ಕನಸು ತೇಲಿ ಬರುತಾವ ಹುಡುಕಿ
ನೀ ಹೊರಟಿದ್ದೀಗ ಎಲ್ಲೀಗಿ?
—————–
ಒಲವೆಂಬ ಹೊತ್ತಗೆಯನೋದ ಬಯಸುತ ನೀನು
ಬೆಲೆಯೆಷ್ಟು ಎಂದು ಕೇಳುತಿಹೆ ಹುಚ್ಚಾ
ಹಗಲಿರುಳು ದುಡಿದರೂ
ಹಲು ಜನುಮ ಕಳೆದರೂ
ನೀ ತೆತ್ತಲಾರೆ ಬರೀ ಅಂಚೆ ವೆಚ್ಚ.
—————
ಯಾವುದೇ ರೀತಿಯ ಹಂಗು, ಹಮ್ಮು, ಬಿಮ್ಮು ಏನೂ ಇಲ್ಲದೇ ಒಲವಿನ ಕಾವ್ಯದ ಶ್ರೇಷ್ಠ ಸುಂದರ ಮಂದಿರವನ್ನು ನಿರ್ಮಾಣ ಮಾಡಿದ ಕವಿ ಬೇಂದ್ರೆ. ಹೀಗೆ ಅವರ ನೆನಪಿನ ಸುಳಿಗಳು ಕವಿತೆಯ ನುಡಿಗಳಾಗುತ್ತಾ ಹೋಗುತ್ತವೆ.

೪. ಬೇಂದ್ರೆಯವರ ಕಾವ್ಯೇತರ ಸಾಹಿತ್ಯ ಗುರುಲಿಂಗ ಕಾಪಸೆ
ಬೇಂದ್ರೆಯವರ ಪ್ರಮುಖ ಸಾಧನೆ ಇರುವುದು ಕಾವ್ಯದಲ್ಲಿ. ಆದರೂ ವಿಮರ್ಶೆ, ಸಂಶೋಧನೆ, ನಾಟಕ, ಕಥೆ ಹರಟೆ ಇತ್ಯಾದಿ ಪ್ರಕಾರಗಳಿಗೂ ಅವರ ಕೊಡುಗೆ ಸಂದಿದೆ. ಡಾ. ವಾಮನ ಬೇಂದ್ರೆಯವರು ಒಂದೆಡೆ ಹೇಳಿದಂತೆ , ಸಾಹಿತ್ಯದ ವಿರಾಟ ಸ್ವರೂಪದಿಂದ ಹೊರಗಿರುವ ಬೇಂದ್ರೆಯವರ ಗದ್ಯ ಸಾಹಿತ್ಯವನ್ನು ಸಂಕಲಿಸಿದರೆ ಅದು ಇನ್ನೊಂದು ಸಾವಿರ ಪುಟಗಳಷ್ಟಾಗುತ್ತವೆ. ವಿಫುಲವಾದ ಇದರ ಬಗ್ಗೆ ಅದ್ಯಯನ ನಡೆಯ ಬೇಕಾದ ಅಗತ್ಯವಿದೆ. ಅವರು ಬರೆದ ಗದ್ಯವೂ, ಕಾವ್ಯದಂತೆಯೇ ಮಾಂತ್ರಿಕ ವಾದ ಮೋಹಕತೆಯಿಂದ ಕೂಡಿದೆ.
೫.ಬೇಂದ್ರೆಯವರ ಕಾವ್ಯಭಾಷೆ ಮತ್ತು ಪ್ರತಿಮಾ ಯೋಜನೆ ಚನ್ನವೀರ ಕಣವಿ.
ಬೇಂದ್ರೆಯವರ ಕಾವ್ಯಭಾಷೆಯ ವೈಶಿಷ್ಟ್ಯಗಳು ಎದ್ದು ಕಾಣುವುದು ಉತ್ತರ ಕರ್ನಾಟಕದ ಜನಪದ ಉಪಭಾಷೆಯನ್ನು ಅವರು ಒಗ್ಗಿಸಿ, ಬಗ್ಗಿಸಿ ಹಾಗೂ ಬಳಸಿ ಕೊಂಡಂತಹ ರೀತಿಯಲ್ಲಿ. !!
ಅಂತರಂಗದಾ ಮೃದಂಗ ಅಂತು ತೊಂ ತಾನನ
ಚಿತ್ತ ತಾಳ ಬಾರಿಸುತಿತ್ತು ಝಂ ಝಣ ಣನ
ನೆನಪು ತಂತಿ ಮೀಟುತಿತ್ತು ತಂ ತನ ನಾನ
—————–
ತಲಿ ಮ್ಯಾಲೆ ಬಿಂದಿಗೆ ಕಾಲಾಗ ಅಂದಿಗೆ
ತುಮುತುಮುಕು ತುಂಬಿದೆ ಬಿಂದಿಗೆ ಅಂತಿದೇ
——————–
ಹೀಗೆ ಪ್ರತಿಮಾ ನಿರ್ಮಾಣದಲ್ಲಿ ಈ ಕವಿಯ ಪ್ರತಿಭಾ ದ್ಯೋತಕವಾಗಿ ನೂರಾರು ಉದಾಹರಣೆಗಳನ್ನು ಕೊಡ ಬಹುದು. ಕವನಗಳ ರಸಾನುಭವದ ಫಲವಾಗಿ ಮೂಡುವಂತ ಹಿಗ್ಗು ಮತ್ತು ಒಲವು ಬೇಂದ್ರೆಯವರ ದೃಷ್ಟಿಯಲ್ಲಿ ಬಹಳ ಮುಖ್ಯ ವಾಗಿತ್ತು. ಅದು ಶಬ್ದಗಳಿಗೆ ಸಿಕ್ಕಾಗ ಬರೀ ಬೆಳಗು.. ಅದರಾಚೆ ಧ್ವನಿಸಿದಾಗ , ಬರೀ ಬೆಳಗಲ್ಲೊ ಅಣ್ಣಾ… ಆದ್ದರಿಂದ ಅವರ ಕವನಗಳನ್ನು ಗಟ್ಟಿಯಾಗಿ ದನಿ ತೆಗೆದು ಓದಿದಾಗ ಮಾತ್ರ ಅವುಗಳ ಸಂಪೂರ್ಣ ಸ್ವಾರಸ್ಯ ಸವಿಯಲಿಕ್ಕೆ ಸಾಧ್ಯ. ಅವರ ” ಇದು ನಭೋ ವಾಣಿ” ಕವಿತೆಯಲ್ಲಿ ಹೇಳಿದಂತೆ….
ಓ ಶ್ರೋತ್ರೀಯನೇ ಶ್ರೋತಾರ ಕೇಳು,
ಇದು ನಭೋ ವಾಣಿ.
ನಾನು ಬಾಯಿ, ನೀನು ಕಿವಿ
ಬಾನ ಕಡಲಲ್ಲಿ ತೇಲಿ ಬಿಟ್ಟ ಈ ನುಡಿದೋಣಿ
ನಿನ್ನ ಹೃದಯದ ಬಂದರವ ಮುಟ್ಟಿೀತು
ನಿನ್ನ ಬುದ್ಧಿಯ ಮನೆಯ ಕಟ್ಟಿೀತು
ನೀನು ಎಲ್ಲೇ ಇರು ಕೇಳುವ ಸೂತ್ರ ಸರಿಯಿರಲಿ
ಹೃದಯ ತೆರೆದಿರಲಿ.
ಹೀಗೆ ಬೇಂದ್ರೆಯವರಂತಹ ಒಬ್ಬ ಶ್ರೇಷ್ಠ ಸಾಹಿತಿಯನ್ನು ನೆನಪಿಸಿಕೊಳ್ಳುವ ಮೂಲಕ ನಾವು ಅವರಿಗೆ ಗೌರವವನ್ನು ಸಲ್ಲಿಸೋಣ.
- ಮಾಲತಿ ರಾಮಕೃಷ್ಣ ಭಟ್
