‘ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೆ’ ಕೃತಿ ಪರಿಚಯ

ಲೇಖಕಿ ಪ್ರತಿಭಾ ನಂದಕುಮಾರ್ ಅವರ ‘ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೆ’ ಕೃತಿಯ ಕುರಿತು ಡಾ. ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೆ
ಲೇಖಕರು : ಪ್ರತಿಭಾ ನಂದಕುಮಾರ್
ಪ್ರಕಾಶನ : ಅಂಕಿತ ಪ್ರಕಾಶನ
ಬೆಲೆ : ೧೯೫.೦೦

ನಾಲ್ಕು ದಶಕದ ಹಿಂದೆ” ನಾವು ಹುಡುಗಿಯರೇ ಹೀಗೆ” ಎಂದು ಬರೆಯುವ ಮೂಲಕ ಓದುಗರನ್ನು ಬೆಚ್ಚಿ ಬೀಳಿಸಿದ್ದ ಪ್ರತಿಭಾ, ಈಗ ಈ ಕಥಾಸಂಕಲನದ ಮೂಲಕ ಅದೇ ರೀತಿಯಲ್ಲಿ ಬೆಚ್ಚಿ ಬೀಳಿಸುತ್ತಾರೆ. ಮನುಷ್ಯ ಕಟ್ಟಿಕೊಂಡ ಹಲವಾರು ಮುಖವಾಡಗಳನ್ನು ಕಿತ್ತೊಗೆಯುವುದಕ್ಕೆ ಇಲ್ಲಿನ ಬಹುತೇಕ ಕಥೆಗಳು ಇದಕ್ಕೆ ಸಾಕ್ಷಿ. ಬೆಕ್ಕು ಮತ್ತು ಹಾವುಗಳು ನವ್ಯರ ಕಾಲದಲ್ಲಿ ಕಾಮಕ್ಕೆ ಸಂಕೇತವಾಗಿ ಬಳಕೆಯಾಗುವ ಮೂಲಕ ,ಮನುಷ್ಯನ ಅಂತರಂಗದ ಅಭೀಪ್ಸೆಗಳನ್ನು ಅನಾವರಣ ಮಾಡಲು ಸಾಧನಗಳಾದವು. ಪ್ರತಿಭಾ ಈ ಕಥಾಸಂಕಲನಕ್ಕೆ ಅದೇ ಹೆಸರು ಇಟ್ಟಿರುವುದು , ಇವರು ಕೂಡ ಅದೇ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಅವರ ಇರಾದೆಗೆ ಸಾಕ್ಷಿ. ಕಥಾಸಂಕಲನದ ಶೀರ್ಷಿಕೆಯ ಹೆಸರನ್ನು ಹೊಂದಿರುವ ಕಥೆಯಲ್ಲಿ ತನ್ನ ಕಾಮವನ್ನು ಮಾತಿನಲ್ಲೇ ವಿಜೃಂಬಿಸುವ ಕಥಾನಾಯಕ ಗಿರೀಶನ ಮಾತಿನ ಮೋಡಿಗೆ ಒಳಗಾದ ಇಲ್ಲಿನ ನಾಯಕಿ, ಅವನನ್ನು ಹುಡುಕಿಕೊಂಡು ಹೋಗಿ, ಅವನ ನಿರ್ವೀರ್ಯತನದ ನಡವಳಿಕೆಯಿಂದ, ಭ್ರಮನಿರಸನಗೊಂಡು ಮರಳುತ್ತಾಳೆ. ಆಗ ಅವಳಿಗೆ ಹಳೆಯ ಗಂಡನ ಪಾದವೇ ಗತಿಯಾಗಿ, ಅವನಿಂದಲೇ ತೃಪ್ತಿಪಡಬೇಕಾಗುತ್ತದೆ. ಈ ಕತೆಯ ಮೂಲಕ ಅನ್ಯ ಸಂಬಂಧಗಳ ಮರೀಚಿಕೆಯನ್ನು, ಲೇಖಕಿ ಮನದಟ್ಟು ಮಾಡಿಸುವುದು ರೋಚಕವಾಗಿದೆ.

ಒಣ ಬಡಿವಾರದ ಬೆನ್ನು ಹತ್ತಿದ ಗಂಡನಿಗೆ ,ಬುದ್ದಿ ಕಲಿಸಲೋ ಎನ್ನುವಂತೆ, ಮನೆಯಲ್ಲಿ ಅರಳಿದ ಒಂದು ಗುಲಾಬಿ ಹೂವನ್ನು, ಪಾರ್ಟಿಯಲ್ಲಿ ಉಡುಗೊರೆಯಾಗಿ ನೀಡಿ ಎಲ್ಲರನ್ನೂ ಆಕರ್ಷಿಸುವ ಗೃಹಿಣಿ ಕೂಡ ಇಲ್ಲಿ ಇದ್ದಾಳೆ.. ಉಡುಗೊರೆಯ ಮೌಲ್ಯಕ್ಕಿಂತ ಅದನ್ನು ಕೊಡುವುದರ ಹಿಂದಿನ ಮನೋಭಾವವೆ ಮುಖ್ಯ ಎಂದು ಇಲ್ಲಿನ ಕತೆಯ ನಾಯಕಿ ಸಾಬೀತು ಪಡಿಸುತ್ತಾಳೆ.( ಒಂದು ಕೊಡುಗೆ ಪ್ರಕರಣ)

ಡೈಮಂಡ್ ಒಡವೆ ಕೊಡಿಸುವ ಯಾಂತ್ರಿಕವಾದ, ಗಂಡನ ದುಡ್ಡಿನ ದೌಲತ್ತಿನ ಪ್ರದರ್ಶನಕ್ಕಿಂತ, ಕೊಸರಾಡಿ ತನ್ನ ಹೆಂಡತಿಗೆ ಬಳೆಗೆ ಮುಂಗಡ ಕೊಟ್ಟು ಖಾತ್ರಿ ಮಾಡಿಕೊಳ್ಳುವ ,ಗಂಡನ ಪ್ರೀತಿಯೆ ಇಲ್ಲಿನ ಕಥಾನಾಯಕಿಗೆ ನೈಜ ಪ್ರೀತಿಯ ದರ್ಶನ ಮಾಡಿಸುತ್ತದೆ. ( ಡೈಮಂಡ್ ಪ್ಯಾಲೆಸ್)

ಗಂಡನ ಲೈಂಗಿಕ ಸಂಬಂಧವನ್ನು ಕೊಳೆ ಎಂದು ತಿಳಿದವಳು, ತನ್ನ ಪ್ರತಿಭೆಯನ್ನು ಮೆಚ್ಚಿ ಕೊಂಡಾಡುವ ಪ್ರಿಯತಮನ ಬೆನ್ನುಹತ್ತಿ, ತನ್ನನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಅವನ ಹೊಂಚನ್ನು ಅರ್ಥಮಾಡಿಕೊಂಡು, ಅವನಿಂದ ದೂರವಾಗುವ ಕಥಾನಾಯಕಿಯ ನಿರ್ಧಾರ, ಅವಳ ಆತ್ಮಾವಲೋಕನಕ್ಕೆ ನಿದರ್ಶನವಾಗಿದೆ. (ಅರುಂಧತಿ). ಹೆಣ್ಣಿನ ಸಮಕಾಲೀನ ಪ್ರಜ್ಞೆಯನ್ನು ಅಭಿವ್ಯಕ್ತಿ ಪಡಿಸುವ ಕೆಲವು ಕತೆಗಳು ಇಲ್ಲಿವೆ. ಸಲಿಂಗರತಿ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಸುಪ್ರೀಂ ಕೋರ್ಟ್ ತೀರ್ಪನ್ನು ಸಂಭ್ರಮದಿಂದ ಆಚರಿಸುವ ಸಂದರ್ಭದಲ್ಲಿ ,ಅವರಿಂದಲೇ ಹಲ್ಲೆಗೆ ಒಳಗಾಗುವ ವೈಪರೀತ್ಯದ ಅನಾವರಣ ಕೂಡ ಇಲ್ಲಿದೆ( ಒಂದು ಸರ್ಕಲ್ ವೃತ್ತಾಂತ). ಹೆಣ್ಣಿನ ಉದ್ಯಮ ಶೀಲತೆಯನ್ನು ಶಂಕಿಸುವ ಗಂಡಸಿಗೆ, ತನ್ನ ವ್ಯವಹಾರ ಕೌಶಲ್ಯದ ಮೂಲಕ ಪಾಠಕಲಿಸುವ ಹೆಣ್ಣು ಕೂಡ ಇಲ್ಲಿ ಇದ್ದಾಳೆ.( ಒಳಾಂಗಣ ವಿನ್ಯಾಸ). ಆಧುನಿಕ ಜಗತ್ತಿನಲ್ಲಿ ಹೆಣ್ಣು ಎದುರಿಸಲೇ ಬೇಕಾದ ಸವಾಲುಗಳು, ಮತ್ತು ಅಂಥಲ್ಲಿ ತಮ್ಮ ಅಸ್ಮಿತೆಯನ್ನು ಸ್ಥಾಪಿಸಬೇಕಾದ ಸಂದರ್ಭದಲ್ಲಿ, ಸಿಕ್ಕಿದ ಹೆಣ್ಣಿನ ಒಳತೋಟಿಗಳನ್ನು ಸಮರ್ಥವಾಗಿ ಸೆರೆಹಿಡಿದ ಶ್ರೇಯಸ್ಸು ಲೇಖಕಿಗೆ ಸಲ್ಲಬೇಕು. ಅದಕ್ಕಾಗಿ ಅವರ ವೈವಿಧ್ಯಮಯ ಭಾಷಾ ಕಾವ್ಯಮಯ ಬಳಕೆಯನ್ನು ಬಳಸಿಕೊಂಡಿದ್ದಾರೆ. ಅದರಲ್ಲಿ ಗ್ರಾಮೀಣ ದೇಸಿ ಭಾಷೆಯಿಂದ ಹಿಡಿದು ಆಧುನಿಕ ಸಂಮಿಶ್ರ ಭಾಷಾ( ಹಿಂದಿ ,ಇಂಗ್ಲಿಷ್) ಬಳಕೆ ಶೈಲಿಯ ಮೇಲೆ ಅವರ ಪ್ರಭುತ್ವಕ್ಕೆ ಸಾಕ್ಷಿಯಾಗಿದೆ . ಇದನ್ನು ಪ್ರಕಟಿಸಿದ ನಮ್ಮ ಸಹಪಾಠಿಗಳಾದ ಅಂಕಿತದ ಪ್ರಭಾ ಮತ್ತು ಪ್ರಕಾಶ್ ಗೆ ಅಭಿನಂದನೆಗಳು.


  • ಡಾ. ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW