“ಬೆಳಕು ಮೂಡಿದಾಗ” ಭಾಗ ೧- ರಘುರಾಂ 

“ಬೆಳಕು ಮೂಡಿದಾಗ ” ಇದೊಂದು ಸಣ್ಣ ಕಥೆ. ಕೆಳವರ್ಗದ ಬಾಲಕನ ಜೀವನದಲ್ಲಿ ದೀಪಾವಳಿ ಹಬ್ಬ ಹೇಗೆ ಬೆಳಕಾಗಿ ಮೂಡುತ್ತದೆ. ಮತ್ತು ಆತನ ತಂದೆ- ತಾಯಿಗಳ ಕನಸನ್ನು ಹೇಗೆ ನನಸ್ಸಾಗಿಸುತ್ತಾನೆ. ಕುತೂಹಲಕಾರಿ ವಿಷಗಳನ್ನಈ ಕಥಾಹಂದರ ಒಳಗೊಂಡಿದೆ. ಕತೆಗಾರ ರಘುರಾಂ ಅವರು ಇಲ್ಲಿ ಕತೆಯ ಜೊತೆಗೆ ಜೀವನದ ಪಾಠ ಮಾಡುತ್ತಾರೆ…

” ಸಾಕು ಮಗ… ಬೇಗನೆ ಮಲಕ್ಕೋ…ನಾಳೆ ವರ್ಷಾವದಿ ಹಬ್ಬ ದೀಪಾವಳಿ. ಬೇಗ ಎದ್ದು, ಸ್ನಾನ  ಮಾಡಬೇಕು”.  ಶಿವಮ್ಮ ಹೇಳಿದ  ಮಾತಿಗೆ ನಗುತ್ತಲೇ ತಲೆ  ಆಡಿಸಿದ  ಗೋಪಾಲ ಮಲಗಲು ತನ್ನ ಕೊಠಡಿಗೆ ಹೊರಟ.

ಹೊಸದಾಗಿ ತಂದಿದ್ದ  ಚತುರವಾಣಿ (ಸ್ಮಾರ್ಟ  ಫೋನ್ ) ದಿಂಬಿನ  ಪಕ್ಕದಲ್ಲೇ ಇಟ್ಟುಕೊಂಡು ಮಲಗಲು ಪ್ರಯತ್ನಿಸಿದ. ಆದರೆ  ನಿದ್ದೆ ಎಲ್ಲಿ ಬರಬೇಕು? ಅದೂ ಈ ದೀಪಾವಳಿ ಹಿಂದಿನ ದಿನ. ಇದು ನನ್ನ ಜೀವನದ ದಿಕ್ಕನ್ನು ಬದಲಿಸಿದ ದಿನವಲ್ಲವೇ?  ಹೊರಳುತ್ತಾ ಮಲಗಲು ಪ್ರಯತ್ನ. ಆದರೆ ನಿದ್ದೆ ದೂರವೇ  ಸರಿದಿತ್ತು. …..

ಒಂದು  ಸಣ್ಣ ಮನೆಯಲ್ಲಿ ಇದ್ದೇವಲ್ಲ. ಊರ  ದೇವಿಯ ದೇವಸ್ಥಾನದ ಹತ್ತಿರ ಒಂದು ಸಣ್ಣ ವಠಾರದಲ್ಲಿ ಇದ್ದ ಮನೆಯದು. ಆ ಕಡೆ, ಈ ಕಡೆ  ಮೂರು ಮಹಡಿ ಕಟ್ಟಡಗಳ ಮನೆಯ ಮಧ್ಯೆ ಉಳಿದುಕೊಂಡಿರುವ ಐದು ಮನೆಗಳ ಒಂದು ವಠಾರ. ಎಲ್ಲರ ಮನೆಯಲ್ಲೂ ಒಂದೇ ರೂಮು, ಹಾಲು, ಅಡಿಗೆ ಮನೆ. ನನ್ನ ಸ್ನೇಹಿತ  ರಾಮಣ್ಣನ ಮನೆಯನ್ನು ಒಮ್ಮೆ ನೋಡಿದ್ದೆನಲ್ಲ. ಅವರ ಮನೆ  ವರಾಂಡ  ನಮ್ಮ ಇಡೀ ಮನೆಗಿಂತ ದೊಡ್ಡದಾಗಿತ್ತಲ್ಲವೇ?. ರಾಮಣ್ಣನ ಅಪ್ಪ ಮನೆ ಕಟ್ಟಿಸುವ  ಇಂಜನೀಯರ್ ಅಂತೆ.  ನಾನು ಇಂಜನೀಯರ್ ಆಗಿ  ದೊಡ್ಡ ಮನೆಗೆ ಕರೆದುಕೊಂಡು ಹೋಗಬೇಕು ಅಪ್ಪ, ಅಮ್ಮರನ್ನು…ಆಗುತ್ತಾ ನನಗೆ?…

ಫೋಟೋ ಕೃಪೆ : Photos.com

ನನ್ನ ಅಪ್ಪ ಬೆಳಿಗ್ಗೆ ಬೇಗ ಎದ್ದು ಮಾರ್ಕೆಟ್ ಗೆ ಹೋಗಿ ಸೈಕಲ್ ನಲ್ಲಿ ಹೂವು  ಹಾಕಿಕೊಂಡು ಬರಬೇಕು. ಅಷ್ಟೋತ್ತಿಗೆ ಅಮ್ಮ ರಾಗಿ- ಮುದ್ದೆ ಸಿದ್ದ ಮಾಡಿಟ್ಟಿ, ಹೂ ತೆಗೆದುಕೊಂಡು ದೇವಸ್ಥಾನದ ಬಳಿಗೆ ಬೆಳಿಗ್ಗೆ ಏಳು ಗಂಟೆಗೆಲ್ಲ ಹಾಜರಾಗುತ್ತಿದ್ದಳು. ಅಪ್ಪ ಸ್ನಾನ ಮಾಡಿ, ಸರಸ್ವತಿ ಪಟದ ಹತ್ತಿರ ಒಂದೆರಡು ಹೂ ಇಟ್ಟು, ಮುದ್ದೆ ತಿಂದು ಮತ್ತೆ ಮಾರ್ಕೆಟ್  ಕಡೆಗೆ ಹೊರಡುತ್ತಿದ್ದರು. ಮಾರ್ಕೆಟ್ ನಲ್ಲಿ ಕೂಲಿ ಕೆಲಸ. ದೊಡ್ಡ ಮೂಟೆಗಳನ್ನು ಗೋಡೌನ್ ಗೆ  ಲಾರಿಯಿಂದ ಇಳಿಸುವುದು, ಮೂಟೆಗಳನ್ನು ಮತ್ತೆ ಸಣ್ಣ  ಟೆಂಪೋಗಳಿಗೆ ತುಂಬಿಸುವುದು.  ಮಧ್ಯೆ ಒಂದೆರಡು ಬೀಡಿ  ಸೇದುವುದನ್ನೂ ಬಿಟ್ಟರೆ  ಇನ್ನು ಯಾವುದೇ  ಚಟಗಳು ಇರಲಿಲ್ಲ.  ಅಪ್ಪ-ಅಮ್ಮರ ಇಬ್ಬರ ಗುರಿ, ಗೋಪಾಲನನ್ನು ಕಾಲೇಜ್ ಮೆಟ್ಟಿಲು ಹತ್ತಿಸಬೇಕು. ಆಫೀಸರ್ ನನ್ನಾಗಿ ನೋಡಬೇಕು ಎನ್ನುವುದಾಗಿತ್ತು.

ಫೋಟೋ ಕೃಪೆ : Tripadvisor

ಸಣ್ಣವನಿಂದ ಅವರ  ಕನಸಿನ ಮಾತುಗಳನ್ನು ಕೇಳುತ್ತಾ ಬೆಳದ ನನಗೆ, ಆಫೀಸರ್ ಆಗುವ ಆಸೆ ಇದ್ದರೂ ಅದು ಹೇಗೆ? ಎಂದು ತಿಳಿದಿರಲಿಲ್ಲ. ಅದಕ್ಕೆ ಕಾಲೇಜ್ ನಲ್ಲಿ ಓದಬೇಕು ಎಂದು ಸಹಪಾಠಿ ರಾಮಣ್ಣ ಒಮ್ಮೆ ಹೇಳಿದ್ದ. ಏಳನೇ ತರಗತಿ ಮುಗಿಸಿದ ನಂತರ ಅಮ್ಮನ ವ್ಯಾಪಾರಕ್ಕೆ ಕೈ ಜೋಡಿಸಿದ್ದೆ, ಆಗ ಕಾಲೇಜು ಮೆಟ್ಟಿಲು ಹತ್ತುವುದು ಹೇಗೆ ಎನ್ನುವ ಚಿಂತೆಯಲಿ ನಾನು ಮೊಳಗಿದ್ದರೇ, ಹೈಸ್ಕೂಲ್ ಸೇರಲು ಜೋಡಿಸಿಟ್ಟ ಸಣ್ಣ ಹಣದ ಗಂಟು ಅಪ್ಪನಿಗೆ ಬಂದ ಮಲೇರಿಯಾ ಔಷಧೋಪಚಾರಕ್ಕೆ ವ್ಯಯಿಸಿದ್ದನ್ನು ಅಮ್ಮ ಚಿಂತಿಸುತ್ತಿದ್ದಳು. ಇತ್ತ ಕಡೆ ಅಪ್ಪ ನಿಶ್ಯಕ್ತಿಯ ನಡುವೇ ಕೆಲಸಕ್ಕೆ ಹೋಗಲು ಪ್ರಾರಂಭ ಮಾಡಿದ್ದ. ಆದರೆ ಅಮ್ಮ ನನಗೆ ಹೈಸ್ಕೂಲ್ ಸೇರಿಸುವ ಹೊಣೆ ಹೊತ್ತಿದ್ದಳು. ಅದರಂತೆ ತನ್ನಲ್ಲಿದ್ದ ಸಣ್ಣದೊಂದು ಬಂಗಾರದ ಒಲೆಯನ್ನು ಅಡ ಇಟ್ಟು, ಹತ್ತಿರದ ಸರಕಾರಿ ಹೈಸ್ಕೂಲ್ ಗೆ ಸೇರಿಸಿದ್ದಳು.

ನಾನೇನೂ ಅತಿ ಬುದ್ಧಿವಂತ ಹುಡುಗನೇನು ಆಗಿರಲಿಲ್ಲ. ಆದರೆ ಓದಲು ಬೇಕಾದಷ್ಟು ಆಸಕ್ತಿ ಇತ್ತು. ಪ್ರತಿ ದಿನ ಸಂಜೆ ಆ ದಿನದ ಪಾಠವನ್ನು ಓದದೆ  ಮಲಗುತ್ತಿರಲಿಲ್ಲ. ಅದೊಂದು ಸಂಜೆ ಜ್ವರ ಅಂತ ಮಾತ್ರೆ  ತಿಂದು ಮಲಗಿದ್ದ ಅಪ್ಪ ಬೆಳಿಗ್ಗೆ ಮೇಲೆ ಏಳಲಿಲ್ಲ.  ಅಮ್ಮನ ರೋಧನದ ನಡುವೆ ನನ್ನ ಕನಸುಗಳು ಕರಗ ತೊಡಗಿತು. ಒಂದು ವಾರ ಶಾಲೆಯ ಕಡೆಗೆ ಹಾಯದಿದ್ದಾಗ, ಅಮ್ಮನ ಬೇಸರ ಇನ್ನಷ್ಟು ಹೆಚ್ಚಾಯಿತು. ಒಂದು ದಿನ  ಶಾಲೆಯ ಮುಖ್ಯೋಪಾಧ್ಯಾಯರು ಮನೆಯ ವಠಾರದಲ್ಲೆ ನಿಂತು ಅವರ ಜೊತೆ ಬಂದಿದ್ದ ವ್ಯಕ್ತಿಯ ಜೊತೆಗೆ ಏನೋ ಇಂಗ್ಲಿಷ್ನಲ್ಲಿ  ಠುಸ್ ಪುಸ್ ಅನ್ನುತ್ತಿದ್ದಾಗ ಆ ಸಮಯದಲ್ಲಿ  ನನಗೇನೂ ಅರ್ಥವಾಗಲಿಲ್ಲ. ಆ ಅಪರಚಿತ ವ್ಯಕ್ತಿ ನನ್ನ ಹತ್ತಿರ ಬಂದ, “ಮುಂದೆ ಏನು ಮಾಡಬೇಕು ಅನ್ಕೊಂಡಿದ್ದೀಯ… ಮರೀ?”  ಎಂದು ನಯವಾಗಿ ಕೇಳಿದ. ನನಗೆ ಏನು ಹೇಳಬೇಕೆಂದು ತೋಚದೆ ಹಾಗೆ ನೆಲ ನೋಡುತ್ತಾ ನಿಂತೇ. ಆದರೆ ಆ ವ್ಯಕ್ತಿ ನನ್ನ ದುಬಾಲು ಬಿದ್ದು ಒತ್ತಾಯಿಸಿದಾಗ ಆಗ ನಾನು “ಕಾಲೇಜ್ ಹೋಗಿ, ದೊಡ್ಡ  ಆಫೀಸರ್ ಆಗುತ್ತೇನೆ” ಎಂದೇ.  “ಭೇಷ್… ಭೇಷ್…” ಎನ್ನುತ್ತಾ ಅಲ್ಲಿಂದ ಹೊರಟು ಹೋದರು.   ಹೋಗುವ  ಮುಂಚೆ ತಪ್ಪದೆ  ಶಾಲೆಗೆ ಕಳುಹಿಸುವಂತೆ ಅಮ್ಮನಿಗೆ ಹೇಳಿ ಹೋದರು. ಮುಖ್ಯೋಪಾಧ್ಯಾಯರು ಜೊತೆಗೆ ಬಂದವರು ಯಾರು? ಏಕೆ ಬಂದರು. ಏನು ಎತ್ತ…  ಅರ್ಥವಾಗಲಿಲ್ಲ.  ಆದರೆ ಮಾರನೇಯ ದಿನದಿಂದ ಅಮ್ಮ ಅವರು ಹೇಳಿದಂತೆ ನನ್ನನ್ನು ಶಾಲೆಗೆ ಕಳುಹಿಸುವುದನ್ನು ಮರೆಯಲಿಲ್ಲ.

ಫೋಟೋ ಕೃಪೆ : iied.org

ಈಗ ಅಮ್ಮನಿಗೆ ಹೂವು ಮಾರಲು ಸಹಾಯ ಮಾಡಬೇಕು.  ಬೆಳಿಗ್ಗೆ ಅಪ್ಪನ ಸೈಕಲ್ ಹತ್ತಿ  ಅದರಲ್ಲಿ ಹೂವು ಇಟ್ಟುಕೊಂಡು ಮನೆಯ ಹತ್ತಿರ ಎಲ್ಲ  ರಸ್ತೆಗಳಲ್ಲಿ ತಿರುಗಿ  ಮಾರಾಟ ಮಾಡಲು ಪ್ರಾರಂಭ ಮಾಡಿದೆ.  ಏಳೆಂಟು ಮನೆಗಳಿಗೆ ನಾನೇ ಹೂವು ಹಾಕಲು ಪ್ರಾರಂಭ ಮಾಡಿದೆ.  ನಂತರ ಶಾಲೆಗೆ ಹೋದೆ.  ಆ ದಿನ ಶಾಲೆ ಮುಗಿದ ಮೇಲೆ  ಮುಖ್ಯೋಪಾಧ್ಯಾಯರು ತಮ್ಮ ಕೊಠಡಿಗೆ ಬರಲು ಶಿಕ್ಷಕರ ಬಳಿ ಹೇಳಿ ಕಳುಹಿಸಿದ್ದರು. ಅವರ ಕೊಠಡಿ ಒಳಗೆ ಹೋಗಲು ಏನೋ ಆತಂಕ. ಆ ಭಯದಲ್ಲೇ ಅವರ ಕೊಠಡಿ ಒಳಕ್ಕೆ ಹೋದೆ. ಒಳಕ್ಕೆ ಹೋದಾಗ ನನ್ನ ಕಣ್ಣಿಗೆ ಕಂಡಿದ್ದು ವಠಾರಕ್ಕೆ ಬಂದಿದ್ದ ಅದೇ ಅಪರಿಚಿತ ವ್ಯಕ್ತಿ ಮುಖ್ಯೋಪಾಧ್ಯಾಯರ ಮುಂದೆ ಕುರ್ಚಿಯಲ್ಲಿ ಕೂತಿದ್ದ. ನನ್ನನ್ನು ಬಿಟ್ಟು ನನ್ನ ನಾಲ್ಕು ಜನ ಸಹಪಾಠಿಗಳು ಅಲ್ಲಿ ಉಪಸ್ಥಿತರಿದ್ದರು. ನಮ್ಮನ್ನು  ಕಂಡು “ಕಂಗ್ರಾಜುಲೆಶನ್ಸ್!  ನೀವೆಲ್ಲರೂ  ಇವರ  “ವಿದ್ಯಾಭಿವೃದ್ದಿ ಯೋಜನೆ ಯಲ್ಲಿ  ಆಯ್ಕೆ ಆಗಿದ್ದೀರಿ. ಇಂದಿನಿಂದ ನಿಮ್ಮ  ವಿದ್ಯಾಭ್ಯಾಸದ ಖರ್ಚು, ವೆಚ್ಚ ಎಲ್ಲವನ್ನೂ ಇವರ ಸ್ನೇಹಿತರ ಬಳಗದ ಟ್ರಸ್ಟ್  ನೋಡಿಕೊಳ್ಳುತ್ತದೆ” ಎಂದು  ಮುಖ್ಯೋಪಾಧ್ಯಾಯರು ಎದುರು ಕೂತಿದ್ದ ಅಪರಿಚಿತ ವ್ಯಕ್ತಿಯನ್ನು ತೋರಿಸಿ ಹೇಳಿದರು. ನನಗೆ ಹೆಚ್ಚಿಗೆ ಏನೂ ಅರ್ಥ ಆಗಾದಿದ್ದರೂ’ ಇನ್ನ ಮೇಲೆ ಶಾಲೆಯ ಖರ್ಚು ವೆಚ್ಚವನ್ನೆಲ್ಲ ನನ್ನ ಅಮ್ಮನಿಗೆ ಭಾರವಾಗುವುದಿಲ್ಲ ಎನ್ನುವ ಸಮಾಧಾನದ ಗೆರೆಗಳು ನನ್ನ ಮುಖದ ಮೇಲೆ ಮೂಡಿತು. ಅವರು ಯಾಕೆ ನಮಗೆ ಇವೆಲ್ಲ ಮಾಡುತ್ತಿದ್ದಾರೆ ಎಂದು ತಿಳಿಯಲಿಲ್ಲ ಮತ್ತು ತಿಳಿದುಕೊಳ್ಳುವ ಗೋಜಿಗೂ ನಾನು ಹೋಗಲಿಲ್ಲ. ಆದರೆ ನನ್ನಲ್ಲಿ ಒಂದು ಸಂತೋಷವಿತ್ತು. ಅದೇ ಸಂತೋಷವನ್ನಿಟ್ಟುಕೊಂಡು  ಓಡೋಡಿ ಬಂದು ಅಮ್ಮನಿಗೆ ಹೇಳಿದಾಗ “ಅವರ ಹೊಟ್ಟೆ ದೇವರು ತಂಪಾಗಿ ಇಟ್ಟಿರಲಿ” ಎನ್ನುತ್ತಾ ಒಳಗೆ ಹೋಗಿ ದೇವರ ಪಟಕ್ಕೆ ಒಂದು ಹೂವಿನ ಮಾಲೆ ಹಾಕಿ ನಮಸ್ಕರಿಸಿದಳು.ಆ ದಿನವೂ ಅಮ್ಮ ಹೇಳಿದ್ದಳು “ಮಗ, ನಾಳೆ  ವರ್ಷಾವದಿ ದೀಪಾವಳಿ. ಬೇಗ ಏಳಬೇಕು”.

ಈಗ ಆಟಗಳು ಕ್ರಮೇಣ ಕಡಿಮೆ ಆಯಿತು. ಓದಿ ಅಪ್ಪ, ಅಮ್ಮನ ಕನಸು ನನಸಾಗಿಸುವ  ಸಂಕಲ್ಪ ನಿಧಾನವಾಗಿ ಗಟ್ಟಿಯಾಯಿತು.  ಸಹಾಯ ಮಾಡಲು ಬಂದ ಟ್ರಸ್ಟ್ ಬಗ್ಗೆ ಕ್ರಮೇಣ ತಿಳಿಯಿತು.  ಅದು ಆ ಊರಿನ ಪ್ರತಿಷ್ಠಿತ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದವರು ಮಾಡಿಕೊಂಡಿರುವ  ಟ್ರಸ್ಟ್.  ಓದಲು ಆಸಕ್ತಿ ಇದ್ದು, ಹಣಕಾಸಿನ  ಅಡಚಣೆ ಇದ್ದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿ ವರ್ಷ ಐದು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ  ಸಹಾಯ ಮಾಡುವ ಯೋಜನೆ ಹಾಕಿಕೊಂಡಿದ್ದರು. ಆ ವರ್ಷದಿಂದಲೇ ಅದು ಜರಿ ಆಗಿತ್ತು. ಹೊಸ ಭರವಸೆಯ ದೀಪಾವಳಿ ಅಂದು ಕಂಡಿತು.

ಮುಂದೆ ಏನಾಯಿತು ತಪ್ಪದೆ ಓದಿ…

(ವಿಶೇಷ ಸೂಚನೆ: ಇಲ್ಲಿ ಬರುವ ಹೆಸರು, ಸ್ಥಳ, ಘಟನೆ, ಇತ್ಯಾದಿಗಳು ಕೇವಲ ಕಾಲ್ಪನಿಕ)


  • ಎನ್.ವಿ.ರಘುರಾಂ (ನಿವೃತ್ತ ಅಧೀಕ್ಷಕ ಅಭಿಯಂತರ ವಿದ್ಯುತ್, ಬೆಂಗಳೂರು) 

0 0 votes
Article Rating

Leave a Reply

4 Comments
Inline Feedbacks
View all comments
ಸತೀಶ್

ಚೆನ್ನಾಗಿ ಬಂದಿದೆ

ರಘುರಾಂ

ಧನ್ಯವಾದಗಳು

CHOWDAPPA CHOWDAPPA

ಅಭಿನಂದನೆಗಳು ಸಾರ್ ಕತೆ ಚೆನ್ನಾಗಿ ಮೂಡಿಬಂದಿದೆ. ಭಾಗ-2 ಕ್ಕಾಗಿ ಎದುರು ನೋಡುತ್ತಿದ್ದೇನೆ.

ರಘುರಾಂ

ಧನ್ಯವಾದಗಳು.

Home
News
Search
All Articles
Videos
About
4
0
Would love your thoughts, please comment.x
()
x
%d bloggers like this:
Aakruti Kannada

FREE
VIEW