ಹಣ ಹೋಗುವುದು ಬರುವುದು ನಿತ್ಯನಿರಂತರ… ಕೊನೆಗೆ ಖಾಲಿ ಕೈ ದಾಸ…ಹಿರಿಯ ಕನ್ನಡ ಉಪನ್ಯಾಸಕರಾದ ಪ್ರೊ. ಸಿದ್ದು ಸಾವಳಸಂಗ ಅವರ ಒಂದು ಕವನವನ್ನು ತಪ್ಪದೆ ಮುಂದೆ ಓದಿ…
ಚಟವ ಮಾಡುವ ಮನುಜ
ನೀನು ಚಟಕ್ಕೇರುವುದು ಬಲುಬೇಗ ಸಹಜ !
ಅದೇನು ಒಂದೇ ಎರಡೇ ಹತ್ತು ಹಲವಾರು
ಬೀಡಿ, ಸಿಗರೇಟು, ಗಾಂಜಾ, ದಾರು, ತಂಬಾಕು ಹಾಗೂ ಗುಟಕಾ ನಸೆಯಲ್ಲಿಯೇ ತೇಲಾಡುವರು !
ತೂತು ಬಿದ್ದ ಅಂಗಿ, ಬಾತು ಹೋದ ಮುಖ
ಬಾಯಲ್ಲಿ ಹೊಗೆ ಸೊಪ್ಪು, ಮಾತು ಬಲು ಸಪ್ಪೆ
ಬಾಯಿ ತೆರೆದರೆ ಬಚ್ಚಲುಮೋರಿ !
ನೋಡಿದರೆ ಹೇಸಿಗೆ ಬಂದು ವಾಂತಿ ಖಾತ್ರಿ
ಇದಲ್ಲದೆ ಇಸ್ಪೀಟು, ಮಟಕಾ ಹಾಗೂ ಲಾಟರಿ
ಹತ್ತಿದರೆ ಮಟಕಾ ಇಲ್ಲದಿರೆ ಜಟಕಾ !
ಹಣ ಹೋಗುವುದು ಬರುವುದು ನಿತ್ಯನಿರಂತರ
ಕೊನೆಗೆ ಖಾಲಿ ಕೈ ದಾಸ ಕಂಡವರಿಗೆ ಭಿಕ್ಷುಕರ ವೇಷ
ಚಟದಿಂದ ಯಾರಾಗಿದ್ದಾರೆ ಮುಂದು !
ಇದು ಜಾನಕಿ ಕಂಡ ಬಂಗಾರದ ಜಿಂಕೆ
ಬೆನ್ನು ಹಿಂದೆ ಓಡಿದರೆ ಗೊತ್ತಾಗುತ್ತದೆ
ಅದೊಂದು ಮಾಯಾ ಜಿಂಕೆ !
ಹಿಡಿದಿಟ್ಟುಕೊಳ್ಳಲು ಹೋದರೆ ಬೀಳಲೇಬೇಕು ಮತ್ತೇಳಲು ಸಾಧ್ಯವಾಗದ ಹಾಳುಬಾವಿ !
ಯುವಕರೆ ಬಿಟ್ಟುಬಿಡಿ ದುಶ್ಚಟ
ನೀವಾಗಿ ಅಪರಂಜಿ ಅಪ್ಪಟ !!
- ಪ್ರೊ. ಸಿದ್ದು ಸಾವಳಸಂಗ, ತಾಜಪುರ – ಹಿರಿಯ ಕನ್ನಡ ಉಪನ್ಯಾಸಕರು, ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು, ವಿಜಯಪುರ.
