ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨೨)

ಬೆಳಿಗ್ಗೆ ಚಳಿ ಅಂತ ಮುದುರಿ ಮಲಗಿದರೂ.. 4 ಕ್ಕೆ ಎಚ್ಚರವಾಯಿತು, ಮತ್ತೆ ಮೈಗಳ್ಳ ನಿದ್ದೆಯು ಸುಳಿಯುಲಿಲ್ಲ. ಎದ್ದವನೆ ಸ್ನಾನ ಮುಗಿಸಿ ಮುಂದೆ ಹೊರಡಲು ತಯಾರಾದೆ‌. ಮುಂದೇನಾಯಿತು ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾ ಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…

“ಶಹಪುರ” ವನ್ನು ಬೆಳಿಗ್ಗೆ 6:30 ಕ್ಕೆ ಬಿಟ್ಟು ಹೊರಟವನನ್ನು ತಡೆದು, ತಂಗಲು ಆಶ್ರಯ ನೀಡಿದವರು “ಚಹಾ ಕುಡಿದು ಹೊರಡಿ ಚಳಿ ಇದೆ” ಎಂದು ಚಹಾ ತಂದು ಕೊಟ್ಟರು.
ಚಹಾ ಕುಡಿದು ಧನ್ಯವಾದ ತಿಳಿಸಿ ನಿಧಾನಕ್ಕೆ ಹೊರಟೆ.

ಅಲ್ಲಿಂದ 5 ಕಿ‌.ಮೀ ಮುಂದೆ ಬಂದಾಗ ಬುಡಕಟ್ಟು ಜನಾಂಗದ ಮನೆಯವರು, “ಬಾಲಭೋಗ ಮಾಡಿ ಹೋಗಿ” ಎಂದು ವಿನಂತಿಸಿಕೊಂಡರು‌. ಇವರೆಲ್ಲರದು ಹೃದಯದಿಂದ ಹೊರಡುವಂತ ಸೇವೆ‌. ಪ್ರಚಾರಕ್ಕೂ, ಹೆಸರು.. ಪ್ರಶಸ್ತಿಗಳಿಗೆ ಖಂಡಿತ ಅಲ್ಲಾ. ಅವರ ಸೇವೆ ನಿರಂತರ ಜಾರಿಯಲ್ಲಿರುತ್ತೆ. ತಾಯಿ ನರ್ಮದೆ ಮೇಲಿನ ಭಕ್ತಿ ಮತ್ತು ಅಚಲ ವಿಶ್ವಾಸವೇ ಅವರ ಸೇವೆಯ ಮೂಲ ಸೆಲೆ.

ಬೆಳಗಿನ ತಿಂಡಿ ತಿಂದು ಪ್ರಯಾಣ ಮುಂದುವರಿಸಿದೆ..

ಮಧ್ಯಪ್ರದೇಶದ ಡಿಂಡೋರಿ ಜಿಲ್ಲೆಯನ್ನು ದಾಟಿ “ಅನೂಪಪುರ” ಜಿಲ್ಲೆಯನ್ನು ಪ್ರವೇಶಿಸಿದೆ‌. ಮೊದಲು ಹೋಗಿದ್ದು.. ಶೇಷ ಅಥವಾ ಶಿರೀಷ ಘಾಟ್’ಗೆ. ಶೇಷ ಘಾಟ್ ಇಲ್ಲಿ ದೂಧಿ ಆಶ್ರಮವಿದೆ. ಪರಿಕ್ರಮವಾಸಿಗಳಿಗೆ ಊಟ, ವಸತಿ ವ್ಯವಸ್ಥೆ ಅಚ್ಚುಕಟ್ಟಾಗಿದೆ. ಶೇಷ ಘಾಟ್ ತ್ರಿವೇಣಿ ಸಂಗಮ ಕ್ಷೇತ್ರ. ಹನುಮಾನ್ ಮಂದಿರ, ದುರ್ಗಾದೇವಿ ಮಂದಿರ, ಭೋಲೆನಾಥ ಮಂದಿರಗಳು ಇವೆ‌. ತಾಯಿ ನರ್ಮದೆ ಇಲ್ಲಿ ಓಡೋಡಿ ಧಾವಿಸುತ್ತಿದ್ದಾಳೆ. ಸ್ಫಟಿಕದಷ್ಟು ಸ್ವಚ್ಚವಾದ ಜಲ ಸಾಗರವಿದೆ‌. ಮನಸೂರೆಗೊಳ್ಳುವ ನೋಟ ಮಾ ನರ್ಮದಾಳದು.
ಇನ್ನು ಮುಂದೆ ತಾಯಿ ನರ್ಮದೆಯ “ಬಾಲ್ಯ ಅವಸ್ಥೆ” ನೋಡಬಹುದು. ಜಲ ಹರಿವು ಮತ್ತು ಕ್ಷೀಣವಾದ ವಿಸ್ತೀರ್ಣವನ್ನು ಕಾಣಬಹುದು.

ಮಧ್ಯಾಹ್ನದ ಬಿಸಿಲು ಕೆಂಡ ಸುರಿದಂತೆ ಭಾಸವಾಗುತ್ತೆ‌. ಒಂದಿಷ್ಟು ಹೊತ್ತು ಪ್ರಯಾಣದ ನಂತರ ಮತ್ತೆ ನೆರಳಿಗೆ ನಿಲ್ಲುವುದು ಅನಿವಾರ್ಯ. ಇಲ್ಲವಾದರೆ ಮೈ ಚರ್ಮ ಚುರು ಚುರು ಉರಿಯುತ್ತೆ. ಸುತ್ತಲೂ ಬೋಳು ಬೋಳಾದ ಗುಡ್ಡಗಳು, ರಸ್ತೆಬದಿಗೆ ಅರಣ್ಯ ಇಲಾಖೆಯವರು ಬೆಳೆಸಿದ ಅರಣ್ಯ ತೋಪು ಅಲ್ಲಲ್ಲಿ. ಚಿಕ್ಕ ಚಿಕ್ಕ ಹಳ್ಳಿಗಳ ದರ್ಶನ, ಮಧ್ಯಾಹ್ನದ ಹೊತ್ತಿಗೆ “ಊರಿಗೆ ಊರೆ ಸ್ತಬ್ಧವಾದಂತ ನೀರವ ಮೌನ, ಕಾರಣ ಉರಿ ಬಿಸಿಲು.

ಮಧ್ಯಾಹ್ನದ ಉರಿ ಬಿಸಿಲಿಗೆ ಆವಾಗಾವಾಗ ಸಾಂತ್ವನ ಹೇಳುತ್ತಾ “ಚಂದನ್ ಘಾಟ್”ಗೆ ಬಂದೆ. ಚಂದನ್ ಘಾಟ್’ನಲ್ಲಿ ಶಿವಲಿಂಗ, ನರ್ಮದೇಶ್ವರ ಶಿವಲಿಂಗಗಳ ಪುರಾತನ ದೇವಸ್ಥಾನಗಳಿವೆ. ಕೆಲವು ಮಂದಿರಗಳು ನದಿಯ ಮಧ್ಯದಲ್ಲಿವೆ. ಮಂದಿರಗಳ ಗೋಪುರ ಮಾತ್ರ ನದಿಯಲ್ಲಿ ಕಾಣಲು ಸಿಗುತ್ತೆ. ಇಲ್ಲಿ ಸಹ ಪರಿಕ್ರಮವಾಸಿಗಳಿಗೆ ಊಟ ಮತ್ತು ತಂಗಲು ವ್ಯವಸ್ಥೆ ಇದೆ. ಮಧ್ಯಪ್ರದೇಶದ ಊಟ ಇಲ್ಲಿಯೇ ಆಯಿತು. ಊಟವಾದ ನಂತರ ಬಿಸಿಲಿನ ತಾಪಕ್ಕೆ ಹೆದರಿ ಸ್ವಲ್ಪ ಹೊತ್ತು ಮಲಗಿದ್ದೆ. ಮಧ್ಯಾಹ್ನ 3 ಗಂಟೆಗೆ ಮತ್ತೆ ಮುಂದಿನ ಪಯಣ ಶುರುಮಾಡಿದೆ.

ಹಳ್ಳಿಗಳ ಕಚ್ಚಾ ರೋಡು, ಅಲ್ಲಲ್ಲಿ ಬೆಟ್ಟಗಳ ಮಗ್ಗುಲಿನ ಮಣ್ಣಿನ ರೋಡುಗಳನ್ನು ಬಳಸಿಕೊಂಡು “ಅಮರಕಂಟಕ್” ನತ್ತ ಹೊರಟೆ. ರಸ್ತೆಗಳಲ್ಲಿ ಭಾರಿ ಏರಿಳಿತಗಳಿವೆ. ನಂದಿ ಓಡಿಸುವುದು ತೀರಾ ಕಷ್ಟಕರ. ಅಲ್ಲಲ್ಲಿ ನಿಂತು ನಿಂತು ಇಂದು ಒಟ್ಟು 70 ಕಿ‌. ಮೀ ಸಾಗಿದೆ. ಅಮರಕಂಟಕ್ ದೂರ ಇನ್ನೂ 40 ಕಿ. ಮೀ ಇದೆ. ಅತ್ತ ಸಾಗುತ್ತಿರುವಾಗ “ದಮಹೆಡಿ”ಎಂಬ ಹಳ್ಳಿ ಸಿಕ್ಕಿತು.
ಸಮಯ ಸಾಯಂಕಾಲ 5 ಗಂಟೆಯಾದ್ದರಿಂದ, ಈ ಹಳ್ಳಿಯ ವ್ಯಕ್ತಿಯೊಬ್ಬ ನನ್ನ ತಡೆದು ನಿಲ್ಲಿಸಿ “ಚಹಾ” ಕುಡಿಸಿದ. ನನ್ನ ಪಯಣದ ದೂರ ಕೇಳಿದವನೆ.. “ಪ್ರಭು..!! ಮುಂದೆ ಅಮರಕಂಟಕನ ದಟ್ಟ ಕಾಡು ಪ್ರಾರಂಭವಾಗುತ್ತೆ, ಸಾಯಂಕಾಲ ಮತ್ತು ರಾತ್ರಿ ಕಾಡುಪ್ರಾಣಿಗಳ ಹಾವಳಿ ಇರುತ್ತೆ ಮುಂದೆ ಹೋಗಬೇಡಿ, ರಸ್ತೆಯು ಸಹ ಘಾಟಿ ಪ್ರದೇಶ, ನಾಳೆ ಬೆಳಿಗ್ಗೆ ಹೊರಡಿ” ಎಂದು ಹೇಳಿದ.

ತನ್ನ ಗೃಹಪ್ರವೇಶವಾಗದ ಹೊಸಮನೆಯನ್ನು ನನಗೆ ಉಳಿಯಲು ಕೊಟ್ಟ. ಊಟದ ವ್ಯವಸ್ಥೆಯು ಆಯ್ತು. ಧನ್ಯವಾದಗಳು ತಾಯಿ ನರ್ಮದೆ.

This slideshow requires JavaScript.

ಬೆಳಿಗ್ಗೆ ಚಳಿ ಅಂತ ಮುದುರಿ ಮಲಗಿದರೂ.. 4 ಕ್ಕೆ ಎಚ್ಚರವಾಯಿತು, ಮತ್ತೆ ಮೈಗಳ್ಳ ನಿದ್ದೆಯು ಸುಳಿಯುಲಿಲ್ಲ. ಎದ್ದವನೆ ಸ್ನಾನ ಮುಗಿಸಿ ಮುಂದೆ ಹೊರಡಲು ತಯಾರಾದೆ‌. ಮಲಗಿದ್ದ ಹೊಸಮನೆಯಿಂದ ಹೊರಗೆ ಬಂದು ರಸ್ತೆಯ ತಿರುವಿಗೆ ನಂದಿಯನ್ನು ನೂಕಿಕೊಂಡು ಬಂದೆ, ಚುಮುಚುಮು ಬೆಳಕು. ಚಳಿಯಂತೂ ಯಥಾವತ್ತು ನಡುಗಿಸುತ್ತಿತ್ತು. ಮೂಲೆಯ ಚಹಾ ಅಂಗಡಿಯವ “ಬನ್ನಿ ಭಗವಾನ್!! ಚಹಾ ಕುಡಿಯಿರಿ” ಎಂದು ಕೂಗು ಹಾಕಿದ.

ಅವನ ಅಂಗಡಿಗೆ ಹೋಗಿ ಹೆಗಲಿಗಿದ್ದ ಚಿಕ್ಕ ಬ್ಯಾಗನ್ನು ಟೇಬಲ್ ಮೇಲಿಟ್ಟು, ಚಹಾ ಕುಡಿದೆ. ನಾನೇ ಆ ಅಂಗಡಿಗೆ ಮೊದಲ ಗಿರಾಕಿ, ಬೋಣಿ ಅಂತ ದುಡ್ಡು ಕೊಡಲು ಹೋದರೆ… “ಪರಿಕ್ರಮವಾಸಿಗಳು ಅಂಗಡಿಗೆ ಮೊದಲ ಗಿರಾಕಿ ಆದರೆ ದೇವರೆ ಬಂದಂತೆ, ದುಡ್ಡು ಬೇಡ‌… ಹೊರಡಿ ” ಎಂದು ಕೈಯಲ್ಲಿನ ಲೋಟ ತೆಗೆದುಕೊಂಡ. ಕೈ ಮುಗಿದು ಮುಂದೆ ಹೊರಟೆ.
ಸೂರ್ಯ ಆವಾಗ ತಾನೆ ಬಾನಿನಲ್ಲಿ ಹಾಜರಾಗುತ್ತಿದ್ದ, ಎಳೆ ಬಿಸಿಲು ಭೂಮಿಗೆ ಬೀಳಲು ತವಕಿಸುತ್ತಿತ್ತು. ಹಕ್ಕಿಗಳ ಕಲಕಲ, ಸುಯ್ಯನೆ ಬೀಸುವ ಚಳಿಗಾಳಿ, ತಲೆಯಾಡಿಸುವ ಸುತ್ತಲ ಮರಗಳು, ಹರಡಿದ್ದ ತಿಳಿ ಮಂಜು.. ಆಹಾ..!! ಆ ಮುಂಜಾವಿನ ಸೊಬಗು.

ಒಂದಿಷ್ಟು ದೂರ ಕ್ರಮಿಸಿದ ನಂತರ ನೇರವಾಗಿ ಎದುರಾಗಿದ್ದು 5 ಕಿ.ಮೀ ಉದ್ದನೆಯ, ಎತ್ತರದ ಬೆಟ್ಟ. ಈ ಬೆಟ್ಟದ ಮೈ ಮೇಲೆ ಟಾರು ಸುರುವಿ ರಸ್ತೆ ನಿರ್ಮಿಸಿದ್ದಾರೆ.
ಈ ಬೆಟ್ಟ ಏರಲು ಶುರು ಮಾಡಿದೆ. ನಿಧಾನಕ್ಕೆ ನಂದಿಯನ್ನು ನೂಕಿಕೊಂಡು ಹೊರಟೆ. ಒಂದರ ನಂತರ ಮತ್ತೊಂದು ಎದುರಾಗುವ ತಿರುವುಗಳು… ನಿಧಾನವಾಗಿ ಎತ್ತರೆತ್ತರಕ್ಕೆ ಹೊರಟ ರಸ್ತೆ, ಅದರ ಮೇಲೆ ನಂದಿಯನ್ನು ದೂಡಿಕೊಂಡು ಹೊರಟವನ ಯಾತ್ರೆ ನನ್ನದು.

ಮೈ ತುಂಬಾ ಬೆವರು, ಮೇಲಂಗಿ ತೊಯ್ದು ಹೋಯಿತು. ಆವಾಗಾವಾಗ ನಿಲ್ಲುತ್ತಾ, ಜೋರಾದ ಉಸಿರಾಟ ನಿಧಾನವಾದ ಮೇಲೆ ಮತ್ತೆ ಏರುವ ಪಯಣ. ಅಂತು ಇಂತೂ ಹೆಂಗೆಗೋ 5 ಕಿ.ಮೀ ಎತ್ತರವನ್ನು ಏರಿದೆ. ಬೆಟ್ಟದ ಇನ್ನೊಂದು ಭಾಗಕ್ಕೆ ಅಂಕುಡೊಂಕು ಇಳಿಜಾರು ರಸ್ತೆ ಸಹ ಇತ್ತು. ನಾನು ಮೇಲೇರಿ ಬಂದಿದ್ದಕ್ಕೆ ಸಾಂತ್ವನ ಮಾಡುವಂತ ಇಳಿಜಾರು. ನಂದಿಯು ಖುಷಿಯಾಗಿ ನೆಗೆಯುತ್ತಾ ಇಳಿಜಾರಿನಲ್ಲಿ ಗಾಳಿಯಂತೆ ಓಡತೊಡಗಿದ.

ಬೆಟ್ಟವನ್ನು ಸಂಪೂರ್ಣ ಇಳಿದು ಮತ್ತೆ ಮುಂದೆ 8 ಕಿ.ಮೀ ಹಾದಿಯನ್ನು ಕ್ರಮಿಸಿದ ನಂತರ “ಮೋಹದಿ” ಎನ್ನುವ ಹಳ್ಳಿ ಸಿಕ್ಕಿತು. ಮ್ಯಾಪ್ ನೋಡಿದರೆ 18 ಕಿ.ಮೀ ದೂರಕ್ಕೆ ಬಂದಿದ್ದೆ.
ಚಹಾ ಕುಡಿಯೋಣ ಅಂತಾ ಹೋಟೆಲ್ಲಿಗೆ ಹೋದೆ, ನೀರು ಕುಡಿಯೋಣ ಅಂತ ಹೆಗಲಿಗಿದ್ದ ಬ್ಯಾಗ್’ಗೆ ಕೈ ಹಾಕಿದೆ. ಅರೇ ಬ್ಯಾಗಿಲ್ಲ. ಸೈಕಲ್’ಗೆ ತೂಗಿಹಾಕಿದ್ದೇನಾ..ಅಂತ ನೋಡಿದರೆ ಅಲ್ಲಿಯೂ ಇಲ್ಲ.

ಆವಾಗ ಮೆದುಳು ಚುರುಕಾಗಿ ಎಲ್ಲಿ ಹೋಯಿತು ಬ್ಯಾಗ್? ಎಂದು ತಡಕಾಡಿದಾಗ ನೆನಪಾಗಿದ್ದು.. 18 ಕಿ.ಮೀ ಹಿಂದೆ ಚಹಾ ಕುಡಿದ ಅಂಗಡಿ. ಅಯ್ಯೋ… ಬ್ಯಾಗ್ ಅಲ್ಲಿಯೇ ಬಿಟ್ಟು ಬಂದಿದ್ದೆ. ಅದರಲ್ಲಿ ಕೆಲವು ಪುಸ್ತಕ, ನೀರಿನ ಬಾಟಲ್, ನೋಟ್”ಬುಕ್, ಪರಿಕ್ರಮ ರಸ್ತೆ ಮಾರ್ಗದ ಮಾರ್ಗದರ್ಶಕ, ಪೂಜೆಯ ಸಾಮಾನು ಇದ್ದವು. ನಡೆದ ಘಟನೆಯನ್ನು “ಮೋಹದಿ”ಯ ಚಹಾ ಅಂಗಡಿಯವನಿಗೆ ತಿಳಿಸಿದೆ… ಆತ ಅದೇ ಊರಿನ ಮುಖ್ಯಸ್ಥರಿಗೆ ನನ್ನ ವಿಷಯ ತಿಳಿಸಿದ. ಅವರು ನೇರವಾಗಿ ನಾನಿದ್ದಲ್ಲೀಗೆ ಬಂದು ವಿಷಯ ತಿಳಿದುಕೊಂಡರು. ಹಿಂದಿನ ಊರಿನ ಹೋಟೆಲ್’ನವನಿಗೆ ಕರೆ ಮಾಡಿ “ಮಹಾರಾಜ್ ಒಬ್ಬರು ನಿನ್ನ ಅಂಗಡಿಯಲ್ಲಿ ಬ್ಯಾಗ್ ಬಿಟ್ಟಿದ್ದಾರಂತೆ, ಹೌದಾ? ” ಎಂದು ಕೇಳಿದರು, ಆ ಕಡೆಯ ಅಂಗಡಿಯವ “ಹೌದು..ಇದೆ’ ಎಂದು ಉತ್ತರಿಸಿದ. ಆವಾಗ… ಬರುವ ಬಸ್ಸಿಗೆ ಹಾಕಿ ಕಳುಹಿಸು, ಅವರು ನಮ್ಮ ಮನೆಯಲ್ಲಿ ಇದ್ದಾರೆ ಎಂದವನೆ, ಪೋನ್ ಕಾಲ್ ಬಂದ್ ಮಾಡಿದರು.

ನೇರವಾಗಿ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಿ, ತಿಂಡಿ, ಚಹಾ ಕೊಟ್ಟು. ಮಾತಾಡುತ್ತಾ ಕೂತರು. ಅರ್ಧ ಗಂಟೆಯಲ್ಲಿ ಬಂದ ಬಸ್ಸಿನಲ್ಲಿ ನನ್ನ ಬ್ಯಾಗ್ ಬಂತು.
ನನಗೆ ಸಹಾಯ ಮಾಡಿ, ಒಂದು ರೂಪಾಯಿ ತೆಗೆದುಕೊಳ್ಳದೆ ಸತ್ಕರಿಸಿ.. ಮುಂದೆ ಹೊರಡಲು ಅನುವು ಮಾಡಿಕೊಟ್ಟರು.

ಅವರ ಹೆಸರು “ಮಥುರಾ ನಾಯಕ್”.

ಧನ್ಯವಾದಗಳನ್ನು ತಿಳಿಸಿ.. ಹೊರಟೆ. ಯಾವ್ಯಾವುದೋ ರೂಪದಲ್ಲಿ, ತಾಯಿ ನರ್ಮದೆಯು ಸಹಾಯ ಮಾಡುತ್ತಾಳೆ‌. ಪರಿಕ್ರಮವಾಸಿಗಳಿಗೆ ಎಳ್ಳಷ್ಟು ತೊಂದರೆಯಾಗದ ರೀತಿ.
ನರ್ಮದೆ ಹರ್!!

ಮತ್ತೆ 10 ಕಿ. ಮೀ ಕ್ರಮಿಸಿದ ನಂತರ ಬೃಹತ್ ಬೆಟ್ಟವೇ ಎದುರಾಯಿತು‌. ಇದು ಎತ್ತರದಲ್ಲೂ ದೈತ್ಯ, ಒತ್ತೊತ್ತಾಗಿ ಬೆಳೆದ ಜಂಗಲ್”ನಿಂದ ಸಹ ದೊಡ್ಡಣ್ಣ‌. ರಸ್ತೆ ಏರುತ್ತಾ ಹೊರಟೆ, ನಂದಿಯನ್ನು ನೂಕಿಕೊಂಡು ಹೋಗುವುದು ಅನಿವಾರ್ಯ. ಒಂದರ ಮೇಲೊಂದರಂತೆ ಬೆಟ್ಟ ತಿರುವಿಕೊಂಡು ಹೋದ ರಸ್ತೆ, ನಿಧಾನಕ್ಕೆ ಏರಬೇಕು. ನಡೆದು ನಡೆದು ಮೈ ತುಂಬಾ ಬೆವರು ಹನಿಯತೊಡಗಿತು. ಉಸಿರು ಬಿಗಿ ಹಿಡಿದು ನಂದಿಯನ್ನು ನೂಕಿಕೊಂಡು ಹೊರಟೆ. ಅಲ್ಲಲ್ಲಿ ನಿಲ್ಲುತ್ತಾ ಒಂದೆರಡು ಗುಕ್ಕು ಉಸಿರು ಎಳೆದುಕೊಂಡು ಮತ್ತೆ ಮುಂದೆ ನಡೆಯತೊಡಗಿದೆ. ಏದುಸಿರು ಬಿಡುತ್ತಾ ಏರುವುದು ಅನಿವಾರ್ಯ ಇದರ ಎತ್ತರವೆ 11 ಕಿ. ಮೀ.

ನಡೆದು ನಡೆದು ತೊಡೆ, ಮೊಣಕಾಲು, ಮೀನುಖಂಡ, ತೋಳು, ಬೆನ್ನುಹುರಿಯಲ್ಲೀ ನೋವು. ವಿಶ್ರಾಂತಿ ತೆಗೆದುಕೊಳ್ಳುತ್ತಲೆ ಸಂಪೂರ್ಣ ಬೆಟ್ಟವೇರಿದೆ. ಆಮೇಲೆ ಸೂರ್ಯನ ಬಿಸಿಲು ಸಂಪೂರ್ಣ ಮಾಯ, ತಣ್ಣನೆಯ ಗಾಳಿ, ಮಳೆ ಬರುವಂತ ವಾತಾವರಣ. ಬೆಟ್ಟದ ಮೇಲೆ ನಂದಿಯನ್ನು ಓಡಿಸಿಕೊಂಡು ಹೊರಟೆ, ಭೂಮಿಯಿಂದ 11 ಕಿ.ಮೀ ಎತ್ತರದಲ್ಲಿನ ಬೆಟ್ಟದ ಮೇಲೆಯೇ ಹೊರಟು ಬಂದವನಿಗೆ ಸಿಕ್ಕಿದ್ದು “ಅನೂಪಪುರ ಜಿಲ್ಲೆಯ ಅಮರಕಂಟಕ್.

ಅಮರಕಂಟಕ್ ತೀರ್ಥ ಸ್ಥಳಗಳ ರಾಜಾ. ಬೃಹತ್ ಕಾಡು ಹೊಂದಿರುವ ಸ್ಥಳ. ಇಲ್ಲಿಯೇ ತಾಯಿ ನರ್ಮದೆ ಉದ್ಗಮವಾಗುವುದು. ಪವಿತ್ರ ನಗರ ಅಮರಕಂಟಕ್’ನ “ಮೃತ್ಯುಂಜಯ ಆಶ್ರಮ”ಕ್ಕೆ ಬಂದೆ. ಚಳಿ ತುಂಬಾ ಇದ್ದುದರಿಂದ ಸಾಯಂಕಾಲವಷ್ಟೇ “ರಾಮ ಘಾಟ್”ಗೆ ಹೋಗಿ ಸಾಯಂಕಾಲದ ಆರತಿಗೆ ಹಾಜರಾದೆ. ತಾಯಿ ನರ್ಮದೆ ಮಂದಸ್ಮಿತಳಾಗಿ ನಿಧಾನಕ್ಕೆ ಸಾಗುತ್ತಿದ್ದಾಳೆ.

ಇಂದಿನ ತಂಗುದಾಣ “ಅಮರಕಂಟಕ್”ನ ಮೃತ್ಯುಂಜಯ ಆಶ್ರಮ.

ಮುಂದಿನ ಪಯಣ ನಾಳೆಗೆ

ಹಿಂದಿನ ಸಂಚಿಕೆಗಳು :


  • ಡಾ. ಪ್ರಕಾಶ ಬಾರ್ಕಿ – ವೈದ್ಯರು, ಲೇಖಕರು, ಕಾಗಿನೆಲೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading