‘ಸಾಹಿತಿಯಾದವನು ಯಾವೊತ್ತೂ ಪ್ರಭುತ್ವದ ಅಂಕುಡೊಂಕುಗಳನ್ನು ಗಮನಿಸಿ ಅವುಗಳ ಸರಿ ತಪ್ಪುಗಳ ಬಗ್ಗೆ ಬರೆಯುತ್ತಾ ಹೋಗಬೇಕು. ನಾನಂತೂ ಇದನ್ನು ಪಾಲಿಸಿರುವೆನೆಂಬ ಆತ್ಮ ಸಂತೃಪ್ತಿ ಇದೆ.ಎಷ್ಟೋ ಸಾರಿ ಅನೇಕ ಗೆಳೆಯರು, ಓದುಗರು ಸರ್ಕಾರಿ ನೌಕರಿಯಲ್ಲಿ ಇದ್ದುಕೊಂಡೂ ಹೀಗೆ ಬರೆಯುತ್ತೀರಲ್ಲ, ಸೇವೆಯಿಂದ ಅಮಾನತು ಮಾಡಿದರೆ ಏನು ಮಾಡ್ತೀರಿ ಎಂದು ಕೇಳಿದ್ದುಂಟು !’ ಕೇಶವರೆಡ್ಡಿ ಹಂದ್ರಾಳ ಅವರ ಹೊಸ ಕೃತಿ ಕುರಿತು ಅವರದೇ ಮಾತು.
ಪುಸ್ತಕ : ಕಾಕ್ಟೇಲ್
ಲೇಖಕರು : ಕೇಶವರೆಡ್ಡಿ ಹಂದ್ರಾಳ
ಪ್ರಕಾಶನ : ಕಠೀರವ ಪ್ರಕಾಶನ
ಖರೀದಿಗಾಗಿ: 9480088960
ಸುಮಾರು ಮೂರು ವರ್ಷಗಳಿಂದ ಹಲವು ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ನನ್ನ ಚಿಕ್ಕಂದಿನ ಕೆಲವು ಬೆಳದಿಂಗಳ ಕಥೆಗಳ, ಕವಿತೆಗಳ, ಪ್ರಬಂಧಗಳ, ಲೇಖನಗಳ ಮತ್ತು ಒಂದು ಕಾದಂಬರಿಯ ವಿಶಿಷ್ಟ ಸಂಯೋಜನೆ ಎನ್ನಬಹುದಾದ ಸಂಕಲನ ಈ ‘ ಕಾಕ್ಟೇಲ್ ‘ ಎನ್ನುವ ಕೃತಿ. ನನ್ನ ಮಟ್ಟಿಗೆ ಇದೊಂದು ಹೊಸ ಪ್ರಯೋಗ. ಇಂಥ ಒಂದು ಪುಸ್ತಕ ಹೊರತರುವ ಯೋಜನೆ/ಯೋಚನೆ ಮಾಡಿದಾಗ ಇದಕ್ಕೆ ಕಾಕ್ಟೇಲ್ ಎಂಬ ಟೈಟಲ್ ಸೂಚಿಸಿದವರು ವೈಜ್ಞಾನಿಕ ಚಿಂತಕರು, ಪರಿಸರವಾದಿಗಳು ಮತ್ತು ಕ್ರಿಯಾಶೀಲ ಸಂಘಟಕರೂ ಆದ ಆತ್ಮೀಯ ಗೆಳೆಯ ಡಾಕ್ಟರ್. ಎಚ್. ಆರ್. ಸ್ವಾಮಿ. ಸಾವಿರದ ಒಂಬೈನೂರ ಎಂಬತ್ತನಾಲ್ಕರಿಂದಲೂ ಕಥನಗಾರಿಕೆಯಲ್ಲಿ ತೊಡಗಿರುವ ನನಗೆ ಪ್ರಬಂಧ, ಲೇಖನಗಳ ಕೃಷಿಯಲ್ಲೂ ಒಳ್ಳೆಯ ಹಿಡಿತ ಸಿಕ್ಕಿದ್ದು ನನ್ನ ಹಳ್ಳಿಗಾಡಿನ ಮತ್ತು ನಗರ ಬದುಕಿನ ಗಾಢವಾದ ಅನುಭವಗಳಿಂದಾಗಿಯೇ ಎಂಬುದು ನನ್ನ ಬಲವಾದ ನಂಬಿಕೆ. ನನ್ನ ಕಥೆ, ಕವಿತೆ, ಲೇಖನ, ಪ್ರಬಂಧ, ಕಾದಂಬರಿಗಳಲ್ಲಿ ಹಳ್ಳಿಗಾಡಿನ ಮತ್ತು ನಗರ ಬದುಕಿನ ನಡುವಿನ ಸಂಘರ್ಷಗಳನ್ನು ಕಾಣಬಹುದು. ಒರಟು ಮತ್ತು ನಯ-ನಾಜೂಕು ಭಾಷೆಗಳೆರಡೂ ನನ್ನ ಸಾಹಿತ್ಯದಲ್ಲಿ ಎಗ್ಗಿಲ್ಲದೆ ಅನಾವರಣಗೊಂಡಿವೆ. ನನ್ನ ಕವಿತೆ, ಕಥೆ, ಪ್ರಬಂಧ, ಲೇಖನ, ಕಾದಂಬರಿ ಹೀಗೆ ಯಾವುದೇ ಸಾಹಿತ್ಯ ಪ್ರಕಾರದಲ್ಲಿರಲಿ ಹೆಚ್ಚಿನ ಪ್ರಭಾವ ಬೀರಿದ್ದು ನನ್ನ ‘ ಬೇರು ‘ ಗಳೇ. ಅಂದರೆ ಬಯಲು ಸೀಮೆಯ ನನ್ನ ಹಳ್ಳಿಗಾಡಿನ ಬದುಕು. ನನ್ನ ಪ್ರಾರಂಭಿಕ ಕಥನಕಗಳಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಹಳ್ಳಿಗಾಡಿನ ಬಡತನ, ಮುಗ್ಧತೆ, ಸಾಮಾಜಿಕ ಅಸಮಾನತೆ, ದಟ್ಟವಾದ ಅನೌಪಚಾರಿಕ ಸಂಬಂಧಗಳು, ಕಪಟವಿಲ್ಲದ ಪ್ರೀತಿ-ವಿಶ್ವಾಸ, ಅನಕ್ಷರಸ್ಥ ಹಳ್ಳಿಗಾಡಿನ ಜನರ ದುಃಖ-ದುಮ್ಮಾನ, ಸಂಕಟ-ಸಂಭ್ರಮ, ಧ್ವೇಷ, ಸಣ್ಣತನ ಎಲ್ಲವೂ ನನ್ನ ಕಥಾನಕಗಳಲ್ಲಿ ಜೀವಂತ ಪಾತ್ರಗಳಾಗಿ ಮೆರೆದಿರುವುದು ಸುಳ್ಳಲ್ಲ. ಆ ಬಗ್ಗೆ ನನಗೆ ಹೆಮ್ಮೆ ಕೂಡಾ ಇದೆ. ಬೆಂಗಳೂರಿನ ರಸ್ತೆಗಳಲ್ಲಿ ನಡೆದಾಡುವಾಗ ಯಾರಾದರೂ ನನ್ನನ್ನು ‘ ಹಳ್ಳಿಗಮಾರ ‘ ಎಂದರೆ ನಾನು ‘ ಮೈಸೂರು ಬ್ಯಾಂಕ್ ‘ ಬಿಲ್ಡಿಂಗ್ ನ ತುತ್ತ ತುದಿಯಲ್ಲಿ ಕುಳಿತುಬಿಡುತ್ತಿದ್ದೆ! ನನ್ನ ‘ ಒಕ್ಕಲ ಒನಪು ‘ ಪುಸ್ತಕವನ್ನು ಓದಿದ ಪೂರ್ಣಚಂದ್ರ ತೇಜಸ್ವಿಯವರು ” ಏನ್ಮಾರಾಯ .ಓದ್ತಾ ಇದ್ರೆ ಒಂದೊಂದು ಲೇಖನಾನೂ ಹಳ್ಳಿಗಾಡಿನ ಬದುಕಿನ ಒಂದೊಂದು ಬೃಹತ್ ಕಾದಂಬರಿ ಓದಿದ ಅನುಭವ ಆಗ್ತದೆ ” ಎಂದಿದ್ದರು. ಇದಕ್ಕೆ ಅವರ ಶ್ರೀಮತಿ ರಾಜೇಶ್ವರಿಯವರೂ ಧ್ವನಿಗೂಡಿಸಿದ್ದರು. ಇನ್ನು ಹಿರಿಯ ಗೆಳೆಯ ಎಚ್. ಎಲ್. ಕೇಶವ ಮೂರ್ತಿಯವರು ಒಮ್ಮೆ ಮಂಡ್ಯದ ಕಾರ್ಯಕ್ರಮವೊಂದರಲ್ಲಿ ಹಠಾತ್ತನೆ ಅಪ್ಪಿಕೊಂಡು ಕೆನ್ನೆಗೆ ಮುತ್ತು ಕೊಟ್ಟು ” ಅಪ್ಪಾ ಮಹಾನುಭಾವ ಹಳ್ಳಿಗಾಡಿನ ಬಗ್ಗೆ ಬರೆಯೋದಕ್ಕೆ ನೀನು ಬೇರೆ ಯಾರಿಗೂ ಏನು ಉಳಿಸಿಲ್ಲವಲ್ಲ. ಈ ವಿಷಯದಲ್ಲಿ ನನಗಂತೂ ನಿನ್ನ ಮೇಲೆ ಅಪಾರ ಹೊಟ್ಟೆ ಕಿಚ್ಚು ಹುಟ್ಟಿದೆ ” ಎಂದು ನಾಚಿ ನೀರಾಗಿ ಕರಗಿಹೋಗುವಂತೆ ಮಾಡಿದ್ದರು. ಒಕ್ಕಲ ಒನಪು ಪುಸ್ತಕವನ್ನು ಓದಿ ಒಂದು ದಿನ ಸಂಜೆ ದೂರದ ಮುಂಬಯಿಯಿಂದ ಖ್ಯಾತ ಕಥಗಾರ ಯಶವಂತ ಚಿತ್ತಾಲರು ಫೋನ್ ಮಾಡಿ ” ನಿಮ್ಮ ಪುಸ್ತಕದ ಪ್ರತಿಯೊಂದು ಪುಟವನ್ನೂ ಬಿಡದಂತೆ ಓದಿದೆ. ಅನೇಕ ಕಾರಣಗಳಿಂದ ಸುಮಾರು ಮುವತ್ತೈದು ವರ್ಷಗಳಿಂದ ನಾನು ನನ್ನ ಹಳ್ಳಿಗೆ ಹೋಗಲಾಗಲಿಲ್ಲ. ನಿಮ್ಮ ಲೇಖನಗಳು ನಲವತ್ತು ಐವತ್ತು ವರ್ಷಗಳ ಹಿಂದಿನ ನನ್ನ ಹನೇಹಳ್ಳಿಯನ್ನು ಸಂಪೂರ್ಣವಾಗಿ ನೆನಪಿಸಿದವು. ಈ ಮುಂಬಯಿಯಲ್ಲಿ ನಡೆದಾಡುತ್ತಿದ್ದರೂ ನನ್ನ ಹಿಂದೆ ಮುಂದೆ ಹನೇಹಳ್ಳಿಯ ಪಾತ್ರಗಳು ಜೀವಂತವಾಗಿ ಓಡಾಡುತ್ತಿರುವಂತೆ ನಿಮ್ಮ ಪುಸ್ತಕ ಓದಿದಾಗ ಅನ್ನಿಸಿತು. ನಿಮ್ಮ ಕೃತಿ ನನ್ನನ್ನು ಈ ಕ್ಷಣ ಮುಂಬಯಿಯಲ್ಲಿ ಕೊಲ್ಲುತ್ತಿದೆ, ಕಣ್ಣೀರು ಹಾಕಿಸುತ್ತಿದೆ… ” ಎಂದು ಗದ್ಗಧಿತರಾಗಿ ನುಡಿಯುತ್ತಿದ್ದಾಗ ಇತ್ತ ಬೆಂಗಳೂರಿನಲ್ಲಿ ನನ್ನ ಕಣ್ಣುಗಳು ತೇವಗೊಳ್ಳುತ್ತಿದ್ದವು.

ಇರಲಿ, ನಾನು ಯಾವೊತ್ತೂ ಸಾಹಿತ್ಯ ರಾಜಕಾರಣದಿಂದ ದೂರ ಉಳಿದವನು. ಸಾವಿರದ ಒಂಬೈನೂರ ಎಪ್ಪತ್ತೈದರಲ್ಲಿ ದೇಶವನ್ನು ಆವರಿಸಿದ ತುರ್ತು ಪರಿಸ್ಥಿತಿ, ತದನಂತರ ಹುಟ್ಟಿಕೊಂಡ ಬಂಡಾಯ, ರೈತ, ದಲಿತ ಮತ್ತು ಕನ್ನಡ ಚಳವಳಿಗಳು ಮತ್ತು ವಿದ್ಯಾರ್ಥಿ ದಿಸೆಯಿಂದಲೇ ಅವುಗಳಲ್ಲಿ ನನ್ನ ಪಾಲ್ಗೊಳ್ಳುವಿಕೆ ನನ್ನಲ್ಲಿ ಹೊಸ ಆಲೋಚನಾ ಕ್ರಮಗಳು ಹುಟ್ಟಿಕೊಳ್ಳಲು ಕಾರಣವಾಯಿತು. ಪಿ ಯು ಸಿ ಓದುವಾಗಲೇ ಕಾರ್ಲ್ ಮಾರ್ಕ್ಸ್, ಮಹಾತ್ಮ ಗಾಂಧಿ, ಏಂಜಲ್ಸ್ , ದಸ್ತೋವಸ್ಕಿ ಮುಂತಾದ ಮಹನೀಯರು ಹೆಗಲೇರತೊಡಗಿದರು. ಇವರನ್ನು ನನ್ನ ಹೆಗಲಿಗೇರಿಸಿದ ಕಬ್ಬನ್ ಪಾರ್ಕಿನ ಸೆಂಟ್ರಲ್ ಲೈಬ್ರರಿಯನ್ನು ನಾನೆಂದೂ ಮರೆಯಲಾರೆ. ಹಾಗೆಯೇ ನನ್ನಲ್ಲಿ ಬಲವಾದ ಓದಿನ ಗೀಳನ್ನು ಹುಟ್ಟಿಸಿದ ಎಪ್ಪತ್ತರ ದಶಕದ ಪತ್ತೇದಾರಿ ಕಾದಂಬರಿಕಾರರಾದ ಎನ್. ನರಸಿಂಹಯ್ಯ, ಜಿಂದೆ ನಂಜುಂಡಸ್ವಾಮಿ, ಟಿ. ಕೆ. ರಾಮರಾವ್ ಮುಂತಾದ ಮಹನೀಯರು ಕೂಡಾ ನನಗೆ ಪ್ರಾತಃಸ್ಮರಣೀಯರೇ! ಎಮರ್ಜೆನ್ಸಿಯ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡ ನಂತರದ ದಿನಗಳಲ್ಲಿ ನಕ್ಸಲ್ ಚಳವಳಿಗೆ ಸಕ್ರಿಯವಾಗಿ ಧುಮುಕಲು ಕೂಡಾ ತೀವ್ರವಾಗಿ ಯೋಚಿಸಿದ್ದುಂಟು ! ಈ ಸಂದರ್ಭದಲ್ಲಿ ನನ್ನ ಬರವಣಿಗೆಗೆ ಮೊನಚನ್ನು ನೀಡಿದ್ದು, ವ್ಯವಸ್ಥೆಯಲ್ಲಿನ ಸಂಗತಿಗಳನ್ನು ಕುರಿತು ಮುಚ್ಚುಮರೆಯಿಲ್ಲದೆ, ಮುಲಾಜಿಲ್ಲದೆ ಬರೆಯಲು ಪ್ರೇರೇಪಿಸಿದ್ದು ಹಾಗೂ ನನ್ನನ್ನು ನಾನೇ ಬಯಲುಗೊಳಿಸಿಕೊಂಡು ನಗ್ನವಾಗಿ ( ಭಾಷೆ ಮತ್ತು ವಿಷಯ ಎರಡರಲ್ಲೂ ) ಅನಾವರಣಗೊಳಿಸಿಕೊಳ್ಳಲು ಧೈರ್ಯ ತುಂಬಿದ್ದು ಪಕ್ಕದ ಆಂಧ್ರಪ್ರದೇಶಲ್ಲಿ ಹುಟ್ಟಿಕೊಂಡ ‘ ವಿರಸಂ ‘ ಅಂದರೆ ಕ್ರಾಂತಿಕಾರಿ ಬರಹಗಾರರ ಸಂಘ. ಇದು ಮುಂದೆ ಕರ್ನಾಟಕದಲ್ಲಿ ಬಂಡಾಯ, ದಲಿತ ಸಾಹಿತ್ಯ ಸಂಘಟನೆ/ಚಳವಳಿಗಳಿಗೆ ನಾಂದಿಯಾಯಿತು. ಅಲ್ಲದೆ ಎಪ್ಪತ್ತರ ದಶಕದಲ್ಲಿ ಆಂಧ್ರಪ್ರದೇಶದ ನಕ್ಸಲ್ ಚಳವಳಿಗೆ ಇನ್ನಿಲ್ಲದ ಬಲ ತುಂಬಿತು. ವಿರಸಂ ಹುಟ್ಟಿಹಾಕಿದ ಬರಹಗಾರರಲ್ಲಿ ಶ್ರೀರಂಗಂ ಶ್ರೀನಿವಾಸ ರಾವ್ ( ಶ್ರೀ ಶ್ರೀ ), ವರವರರಾವ್, ಚರಬಂಡರಾಜು, ನಗ್ನಮುನಿ, ಜ್ವಾಲಾಮುಖಿ, ಕುಟುಂಬರಾವ್, ವೆನಪುಟಾಪು ಸತ್ಯಂ, ಆದಿಬಾಟಲ ಕೈಲಾಸಂ, ಸುಬ್ಬಾರಾವ್ ಪಾಣಿಗ್ರಾಹಿ, ಕೆ. ವಿ. ರಮಣಾರೆಡ್ಡಿ ಪ್ರಮುಖರು. ಇವರಲ್ಲಿ ಬಹುತೇಕರು ತುರ್ತು ಪರಿಸ್ಥಿತಿಯಲ್ಲಿ ಸೆರೆಮನೆವಾಸ ಅನುಭವಿಸಿದರು. ಸುಮಾರು ಎರಡು ದಶಕಗಳ ಕಾಲ ವಿರಸಂ ಅತ್ಯಂತ ಸಕ್ರಿಯವಾಗಿತ್ತು. ಮುಂದೆ ಜನನಾಟ್ಯ ಕಲಾಮಂಡಳಿ ಮೂಲಕ ಗದ್ದರ್ ಇವರಿಗೆಲ್ಲ ದೊಡ್ಡ ಧ್ವನಿಯಾದರು. ಇವರಲ್ಲಿ ಯಾರೂ ರಾಜಕೀಯ ಸ್ಥಾನಮಾನಗಳ ಲಲಾಸೆಗೆ ಒಳಗಾಗಲೇ ಇಲ್ಲ. ವರವರರಾವ್ ಈಗಲೂ ಸೆರೆವಾಸ ಅನುಭವಿಸುತ್ತಿದ್ದಾರೆ. ಆದರೆ ಈ ವಿರಸಂ ಪ್ರಭಾದಿಂದ ಹುಟ್ಟಿಕೊಂಡ ಕನ್ನಡದ ಪ್ರಮುಖ ಬಂಡಾಯ, ದಲಿತ ಬರಹಗಾರರನ್ನು ನೋಡಿ! ರಾಜಕೀಯ ಸ್ಥಾನಮಾನಗಳಿಗೆ ಬಲಿಯಾಗಿ ಹೋದರು. ಬೆಂಕಿಯಾಗಿದ್ದವರು, ಕಿಡಿಗಳಾಗಿದ್ದವರು ರಾಜಕಾರಣಿಗಳ ಕಾಲುಗಳಿಗೆ ಬಿದ್ದು ರಾಜಕೀಯದ ಉನ್ನತ ಸ್ಥಾನಮಾನಗಳನ್ನು ಅನುಭವಿಸತೊಡಗಿದರು. ಈಗಲೂ ಪ್ರಸಿದ್ಧ ಕನ್ನಡ ಬಂಡಾಯ ಸಾಹಿತ್ಯ ಸಂಸ್ಥಾಪಕರು ಮಂತ್ರಿಗಳ ಮನೆ ಬಾಗಿಲು ಕಾಯುತ್ತಿದ್ದಾರೆ ! ರಾಮ ರಾಮ ಕನ್ನಡದ ಬಂಡಾಯ ಕಾವ್ಯಕನ್ನಿಕೆಯ ಪಾಡು ನೋಡಾ !! ಕನ್ನಡದ ಪ್ರಸ್ತುತ ಪ್ರಗತಿಪರರ ಹೆಸರಲ್ಲಿ ಪ್ರಕಾಶಿಸುತ್ತಿರುವವರು ಸ್ವತಃ ತಮ್ಮ ಹೆಂಡತಿ ಮಕ್ಕಳನ್ನು ಸಹ ಬದಲಾಯಿಸಲಾಗದೆ ಜಗತ್ತನ್ನು ಬದಲಾಯಿಸುವ ಉಮೇದಿನಲ್ಲಿದ್ದಾರೆ! ನನ್ನ ಸಾಹಿತ್ಯ ಲೋಕದ ಸುಮಾರು ನಲವತ್ತು ವರ್ಷಗಳ ನಂಟಿನಲ್ಲಿ ಪುರೋಹಿತ ಶಾಹಿಯನ್ನು ಬಲವಾಗಿ ಖಂಡಿಸುತ್ತಿದ್ದ ಗೆಳೆಯರು ಮದುವೆಯಲ್ಲಿ ಹಣೆಗೆ ನಾಮಗಳನ್ನು ಬಳಿದುಕೊಂಡು ಪುರೋಹಿತರು ಹೇಳಿಕೊಟ್ಟ ಮಂತ್ರಗಳನ್ನು ಹೇಳುತ್ತಾ ತಾಳಿ ಕಟ್ಟಿರುವುದನ್ನು ನೋಡಿದ್ದೇನೆ. ಎಲ್ಲರ ಎದುರಿಗೆ ದೇವರುಗಳನ್ನು ಬೈದು ಮರೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ದೇವಸ್ಥಾನಗಳಿಗೆ ಹೋಗಿರುವವರನ್ನು ಕಂಡಿದ್ದೇನೆ. ಮೈಸೂರಿನ ಬ್ರಾಹ್ಮಣ ಜ್ನಾನ ಪೀಠ ಸಾಹಿತಿ ಚೇರ್ ಮೇಲೆ. ಕುಳಿತಿದ್ದರೆ ಮಹಾನ್ ದಲಿತ ಸಾಹಿತಿಯೊಬ್ಬರು ಅವರ ಎದುರು ಚಾಪೆಯ ಮೇಲೆ ಕುಳಿತಿದ್ದ ಚಮತ್ಕಾರವನ್ನು ನೋಡಿದ್ದೇನೆ! ಸದಾ ಬ್ರಾಹ್ಮಣರನ್ನು, ಪುರೋಹಿತ ಶಾಹಿಯನ್ನು ಗೆಳೆಯರ ಮಧ್ಯೆ ವೀರಾವೇಶದಿಂದ ಟೀಕಿಸುತ್ತಾ ಗರ್ಜಿಸುವ ಅಜಾನುಭಾಹು ಸಾಹಿತಿಯೊಬ್ಬರು ಬ್ರಾಹ್ಮಣ ವಿಮರ್ಶಕರ ಹತ್ತಿರ ತಮ್ಮ ಕಾದಂಬರಿಗಳಿಗೆ ಮುನ್ನುಡಿ ಬರೆಸಿ ಅವರ ಕಾಲುಗಳಿಗೆ ಬಿದ್ದಿರುವುದನ್ನು ಕಣ್ಣಾರೆ ಕಂಡು ಆನಂದಿಸಿದ್ದೇನೆ!

ವ್ಯವಸ್ಥೆಯ ವಿರುದ್ಧ ಕಟುವಾಗಿ ಗರ್ಜಿಸಿದ್ದ ಅನೇಕ ಪ್ರಸಿದ್ಧ ಸಾಹಿತಿ ಪ್ರಗತಿಪರ ಬುದ್ದಿಜೀವಿಗಳು ಸತ್ತಾಗ ಅವರ ಹೆಣಗಳನ್ನು ಅವರವರ ಧರ್ಮ ಜಾತಿ, ಸಂಪ್ರದಾಯದಂತೆ ಸಂಸ್ಕಾರ ಮಾಡಿರುವುದನ್ನು ಕಣ್ಣು ತುಂಬಿಸಿಕೊಂಡಿದ್ದೇವೆ. ಅಂದರೆ ಬದುಕಿರುವವರೆಗೂ ಜಗತ್ತಿಗೆ ಬುದ್ದಿ ಹೇಳುತ್ತಿದ್ದ ಈ ಮಹಾನುಭಾವರುಗಳು ತಮ್ಮ ಮನೆಯ ಒಬ್ಬನೇ ಒಬ್ಬ ಸದಸ್ಯನನ್ನು ತಮ್ಮಂತೆ ಬದಲಾಯಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಇಂಥ ಹುಸಿ ಪ್ರಗತಿಪರರ ಬಗ್ಗೆಯೂ ಇಲ್ಲಿ ದಂಡಿಯಾಗಿ ಉಲ್ಲೇಖಿಸಿದ್ದೇನೆ. ಸ್ಪಿರಿಚುಯಾಲಿಟಿ ಇನ್ ಕಮ್ಯುನಿಸಂ ಬಗ್ಗೆ ಮಾತನಾಡುತ್ತಾ ಮೂರು ವರ್ಷಗಳ ಹಿಂದೆ ಗದ್ದರ್ ಹೇಳಿದ್ದ ಮಾತುಗಳು ಎಂಥ ಕಠೋರ ಸತ್ಯ : ” ನೋಡು ಕೇಶ್ವರೆಡ್ಡಣ್ಣ ವಿಶ್ವವಿದ್ಯಾಲಯದ ಪ್ರೊಫೆಸರ್ ಗಳು, ಪಟ್ಟಣದ ತಮ್ಮ ಎಸಿ ರೂಮುಗಳಲ್ಲಿ ಕುಳಿತು ಬರೆಯುವ ಸಾಹಿತಿಗಳು ಇಂದು ಈ ಗದ್ದರ್ ಬಗ್ಗೆ ಬಾಯಿಗೆ ಬಂದಂತೆ ಒದರುತ್ತಿದ್ದಾರೆ. ಸುಮಾರು ನಾಲ್ಕು ದಶಕಗಳ ಕಾಲ ಸರಿಯಾಗಿ ಹೊಟ್ಟೆಗೆ ಊಟವಿಲ್ಲದೆ, ಮೈಗೆ ನೀರಿಲ್ಲದೆ ಹಳ್ಳಿಕೊಳ್ಳ, ಕಾಡು ಮೇಡು ಅಲೆಯುತ್ತಾ, ಹಾಡುತ್ತಾ ಜನರ ನೋವು ಸಂಕಷ್ಟಗಳಲ್ಲಿ ಒಂದಾಗಿ ಅನ್ಯಾಯದ ವಿರುದ್ಧ ಅಸಹಾಯಕರಲ್ಲಿ ಧೈರ್ಯ, ರೋಷ ತುಂಬಿದವನು ನಾನು. ಶರೀರದಲ್ಲಿ ಗುಂಡನ್ನು ಇಟ್ಟುಕೊಂಡು, ನನ್ನ ತೊಡೆಯ ಮೇಲೆಯೇ ಮಗನ ಪ್ರಾಣ ಹೋಗುವುದನ್ನು ನೋಡಿಕೊಂಡು ದಣಿವರಿಯದೆ ಹಾಡಿದೆ. ಇಂದು ಹೋರಾಟದ ಹಾದಿ ಗೋಸುಂಬೆಗಳಿಂದ ತುಂಬಿ ಹೋಗಿದೆ…” ಎಂದು ಹೇಳುತ್ತಾ ಗದ್ಗಧಿತರಾಗಿ ಮಾತು ನಿಲ್ಲಿಸಿದ ಗದ್ದರ್ ಕಣ್ಣುಳಲ್ಲಿ ತೇಲಿದ್ದು ಮಾತ್ರ ಸಾವಿರಾರು ನದಿಗಳ ರೂಪದಲ್ಲಿ ವೇಷಕಟ್ಟಿ ನಿಂತ ಸಾಹಿತಿಗಳು, ಚಿಂತಕರು, ಬುದ್ಧಿ ಜೀವಿಗಳು, ಪ್ರಗತಿಪರರು ಮತ್ತು ಹೋರಾಟಗಾರರು. ಅವರಲ್ಲಿ ನಾನೂ ಒಬ್ಬನಿರಬಹುದು!
ಸಾಹಿತಿಯಾದವನು ಯಾವೊತ್ತೂ ಪ್ರಭುತ್ವದ ಅಂಕುಡೊಂಕುಗಳನ್ನು ಗಮನಿಸಿ ಅವುಗಳ ಸರಿ ತಪ್ಪುಗಳ ಬಗ್ಗೆ ಬರೆಯುತ್ತಾ ಹೋಗಬೇಕು. ನಾನಂತೂ ಇದನ್ನು ಪಾಲಿಸಿರುವೆನೆಂಬ ಆತ್ಮ ಸಂತೃಪ್ತಿ ಇದೆ. ನಾನು ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದಾಗ, ತದನಂತರ ಕೆಎಎಸ್ ಪಾಸು ಮಾಡಿ ವಾಣಿಜ್ಯ ತೆರಿಗೆ ಇಲಾಖೆ ಸೇರಿ ಅಧಿಕಾರಿಯಾಗಿ ಅನೇಕ ವರ್ಷಗಳ ಸೇವಾವಧಿಯಲ್ಲಿ ವ್ಯವಸ್ಥೆ ಮತ್ತು ಪ್ರಭುತ್ವದ ಜನ ವಿರೋಧಿ ನಿಲುವುಗಳ, ಋಣಾತ್ಮಕ ನೀತಿಗಳ ವಿರುದ್ಧ ನಿರಂತರವಾಗಿ ಬರೆದಿದ್ದೇನೆ. ಇದು ನನ್ನ ಕಥೆ, ಲೇಖನ, ಪ್ರಬಂಧಗಳಲ್ಲಿ ಸ್ಪಷ್ಟವಾಗಿ ಪ್ರಕಟಗೊಂಡಿವೆ.
ಎಷ್ಟೋ ಸಾರಿ ಅನೇಕ ಗೆಳೆಯರು, ಓದುಗರು ಸರ್ಕಾರಿ ನೌಕರಿಯಲ್ಲಿ ಇದ್ದುಕೊಂಡೂ ಹೀಗೆ ಬರೆಯುತ್ತೀರಲ್ಲ, ಸೇವೆಯಿಂದ ಅಮಾನತು ಮಾಡಿದರೆ ಏನು ಮಾಡ್ತೀರಿ ಎಂದು ಕೇಳಿದ್ದುಂಟು ! ಗದ್ದರ್ ಜೊತೆ ವಾಕ್ ಮಾಡುತ್ತಿದ್ದರೆ ಕೆಲವು ಸರ್ಕಾರಿ ಅಧಿಕಾರಿಗಳು ನೋಡಿ ಕಾಣದಂತೆ ಓಡಿಹೋಗಿದ್ದುಂಟು !! ಕೆಎಎಸ್ ಪಾಸು ಮಾಡಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಪ್ರೊಬೆಷನರಿ ತರಬೇತಿಯಲ್ಲಿ ಇರುವಾಗಲೇ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ‘ತೆರಿಗೆ ಅಧಿಕಾರಿ’ ಕಥೆ ದೊಡ್ಡ ಗದ್ದಲವನ್ನೇ ಎಬ್ಬಿಸಿತ್ತು. ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳು ಕಮಿಷನರ್ ರವರಿಗೆ ನನ್ನ ವಿರುದ್ಧ ದೂರು ಕೊಟ್ಟಿದ್ದರು. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಅವರನ್ನು, ಶೋಭಾ ಕರಂದ್ಲಾಜೆ ಮತ್ತು ಜನಾರ್ಧನ ರೆಡ್ಡಿಯವರನ್ನು ಸೇರಿಸಿ ಅಗ್ನಿಯಲ್ಲಿ ‘ಥರ್ಡ್ ರೇಟ್ಸ್’ ಎಂಬ ಲೇಖನವನ್ನು ಬರೆದಿದ್ದೆ. ಪ್ರಧಾನಿ ಮೋದಿಯವರ ಸ್ವಚ್ಛ ಭಾರತ್ ಅಭಿಯಾನದ ವೈಫಲ್ಯಗಳನ್ನು ಕುರಿತು ಪ್ರಜಾವಾಣಿಯಲ್ಲಿ ತುಂಬಾ ವಿಡಂಬನಾತ್ಮಕವಾಗಿ ‘ವ್ರಣ’ ಎಂಬ ಕಥೆಯನ್ನು ಬರೆದಿದ್ದೆ. ಆದರೆ ಇತ್ತೀಚೆಗೆ ಸಿದ್ದರಾಮಯ್ಯನವರ ಉಚಿತ ಗ್ಯಾರಂಟಿಗಳು ರಾಜ್ಯದ ಆರ್ಥಿಕ ವ್ಯವಸ್ಥೆಯ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಲೇಖನ ಬರೆದಾಗ ಕರ್ನಾಟಕದ ಪ್ರಗತಿಪರರು ನನಗೆ ಕೋಮುವಾದಿಯೆಂಬ ಪಟ್ಟ ಕಟ್ಟಿದ್ದರು! ವಿಮರ್ಶೆ ಮತ್ತು ಪ್ರಶಸ್ತಿಗಳನ್ನು ಗುರಿಯಾಗಿಟ್ಟುಕೊಂಡು ನಾನೆಂದೂ ನನ್ನ ಲೇಖನಿಗೆ ಮುಜುಗರವನ್ನು ಉಂಟುಮಾಡಿಲ್ಲ. ನನ್ನ ವಿದ್ಯಾಭ್ಯಾಸದ ಸಮಯದಲ್ಲಿ ನನ್ನಲ್ಲಿ ಹೆಚ್ಚು ಆಸಕ್ತಿ ಮೂಡಿಸಿದ್ದು ಇತಿಹಾಸ. ಇದು ಮಿಡ್ಲಿಸ್ಕೂಲಿನಿಂದಲೂ ನಡೆದುಕೊಂಡು ಬಂದಿತ್ತು. ಹೈಸ್ಕೂಲಿನಿಂದಲೂ ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯ ಪುಟಗಳು ಹೆಚ್ಚು ಹೆಚ್ಚು ಆಕರ್ಷಣೆ ಉಂಟುಮಾಡಿದರೂ ಪಿಯುಸಿ ಮತ್ತು ಡಿಗ್ರಿ ಓದುವಾಗ ಜಾಗತಿಕ ಇತಿಹಾಸ ಅದರಲ್ಲೂ ಫ್ರಾನ್ಸಿನ ಮಹಾಕ್ರಾಂತಿ ಮತ್ತು ರಷ್ಯಾದ ಮಹಾಕ್ರಾಂತಿಗಳು ಓದಿನ ತುಡಿತವನ್ನು ದ್ವಿಗುಣಗೊಳಿಸಿದ್ದವು. ಮುಂದೆ ಸ್ನಾತಕೋತ್ತರ ಪದವಿಗೆ ಕನ್ನಡ, ಎಂ ಎಸ್ ಡಬ್ಲ್ಯೂ ಮತ್ತು ಅರ್ಥಶಾಸ್ತ್ರ ವಿಭಾಗಗಳಲ್ಲಿ ಸೀಟು ಸಿಕ್ಕಿದ್ದರೂ ಉದ್ಯೋಗದ ವ್ಯಾಪ್ತಿಯನ್ನು ಗಮನಿಸಿ ಅರ್ಥಶಾಸ್ತ್ರವನ್ನು ಆಯ್ಕೆ ಮಾಡಿಕೊಂಡಿದ್ದೆ. ನನ್ನ ಆಯ್ಕೆ ಒಳ್ಳೆಯದೇ ಆಗಿತ್ತು. ಸಮಾಜದ ಬಗ್ಗೆ ಸಾಹಿತ್ಯದ ವಿದ್ಯಾರ್ಥಿಗಳಿಗೆ ಇರುವ ದೃಷ್ಟಿಕೋನದಲ್ಲಿ ಮತ್ತು ಅರ್ಥಶಾಸ್ತ್ರದ ವಿದ್ಯಾರ್ಥಿಗಳಿಗೆ ಇರುವ ದೃಷ್ಟಿಕೋನದಲ್ಲಿ ಅಜಗಜಾಂತರ ವ್ಯತ್ಯಾಸವಿರುತ್ತದೆ. ಅಲ್ಲದೆ ಯೋಚನಾಕ್ರಮಗಳು ಸಹ ಭಿನ್ನವಾಗಿರುತ್ತವೆ ಉದಾಹರಣೆಗೆ ದೇಶದಲ್ಲಾಗಲೀ ರಾಜ್ಯದಲ್ಲಾಗಲೀ ಸರಕು ಸೇವೆಗಳ ಬೆಲೆ ಹೆಚ್ಚಾದಾಗ ಚಿಂತಕರು, ಬುದ್ದಿಜೀವಿಗಳು, ಪ್ರಗತಿಪರರು ‘ ಬ್ರಾಂಡ್ ‘ ಗಳಲ್ಲಿ ಮಿಂಚುತ್ತಿರುವ ಸಾಹಿತಿಗಳು ಪ್ರಧಾನ ಮಂತ್ರಿಯನ್ನೋ, ಮುಖ್ಯಮಂತ್ರಿಯನ್ನೋ ತಮ್ಮ ಟೀಕಾಸ್ತ್ರಗಳಿಂದ ಅಟ್ಯಾಕ್ ಮಾಡುತ್ತಾರೆ. ನಮ್ಮ ಕರ್ನಾಟಕದಲ್ಲಿನ ಪ್ರಗತಿಪರಂತೂ ( ಇವರೆಲ್ಲ ಹೆಚ್ಚಾಗಿ ಲಿಟರೇಚರ್ ಸ್ಟೂಡೆಂಟ್ಸ್ ಮತ್ತು ಸಾಹಿತಿಗಳು ಎಂಬುದು ಗಮನಾರ್ಹ ) ಬೆಲೆ ಏರಿಕೆಗೆ ನೇರವಾಗಿ ಪ್ರಧಾನಮಂತ್ರಿಗಳೇ ಕಾರಣವೆಂದು ಎಗರಾಡುತ್ತಿದ್ದಾರೆ. ಪ್ರಜಾಪ್ರಭುತ್ವ ರಾಷ್ರಗಳಲ್ಲಿ ಸರಕು, ಸೇವೆಗಳ ಬೆಲೆಗಳು ಆಯಾ ಸರಕು ಸೇವೆಗಳ ಬೇಡಿಕೆ ಮತ್ತು ಪೂರೈಕೆಗಳನ್ನು ಅವಲಂಭಿಸಿರುತ್ತವೆಂಬ ಸರಳ ತರ್ಕ ಈ ಘನ ಚಿಂತಕರಿಗೆ ಅರಿವಿರುವುದಿಲ್ಲ. ಟೊಮೆಟೊ ಸರಕು ವಿಪರೀತ ಪೂರೈಕೆಯಾದಾಗ ಅದರ ಬೆಲೆ ಕೇಜಿಗೆ ಐದಾರು ರೂಪಾಯಿಗೆ ಬೀಳುತ್ತದೆ. ಪೂರೈಕೆ ಕಡಿಮೆಯಾದಾಗ ಅದೇ ಕೇಜಿ ಟೊಮೆಟೊ ಬೆಲೆ ನೂರು ರೂಪಾಯಿ ಮೇಲಾಗುತ್ತದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನೇ ತೆಗೆದುಕೊಳ್ಳಿ, ವಾಹನಗಳ ಸಂಖ್ಯೆ ವಿಪರೀತ ವೆಚ್ಚಳವಾಗಿರುವುದರಿಂದಲೂ ಅವುಗಳ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ತಲಾ ಮುವತ್ತು ಪರ್ಸೆಂಟ್ ತೆರಿಗೆ ಹಾಕುವುದರಿಂದಲೂ ಯಾವ ಸರ್ಕಾರ ಬಂದರೂ ಅವುಗಳ ಬೆಲೆಯನ್ನು ಕಡಿಮೆ ಮಾಡಲಾಗುವುದಿಲ್ಲ. ಮತ್ತು ಸ್ವಾತಂತ್ರ್ಯ ಬಂದಾಗ ಮುವತ್ತಮೂರು ಕೋಟಿಯಿದ್ದ ಭಾರತದ ಜನಸಂಖ್ಯೆ ಈಗ ನೂರಾ ನಲವತ್ತು ಕೋಟಿಯನ್ನು ತಲುಪಿದೆ. ಜನಸಂಖ್ಯಾ ಸ್ಪೋಟವು ನಿರುದ್ಯೋಗ, ಅರೆ ನಿರುದ್ಯೋಗ, ತಲಾ ವರಮಾನ ಕುಸಿತ, ಸಾರ್ವಜನಿಕ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬ ಸಂಗತಿ ಈ ಮಹಾನುಭಾವರ ಮೆದುಳನ್ನು ಪ್ರವೇಶಿಸುವುದೇ ಇಲ್ಲ. ಇಂಥ ಪಂಥ ಸಾಹಿತಿಗಳು ಯಾವುದಾದರೊಂದು ರಾಜಕೀಯ ಪಕ್ಷದ ವಕ್ತಾರರಂತೆ ವರ್ತಿಸುವುದರಿಂದ ಇವರ ಚಿಂತನೆ ಮತ್ತು ಅಭಿಪ್ರಾಯಗಳು ಸದಾ ಪೂರ್ವಗ್ರಹ ಪೀಡಿತವಾದ ದಟ್ಟವಾದ ಹೊಗೆ ಉಗುಳತ್ತಿರುತ್ತವೆ. ಹೊಲಗದ್ದೆಗಳಲ್ಲಿ ಹರಕಲು ಬಟ್ಟೆ ತೊಟ್ಟು ಕೆಲಸ ಮಾಡುವ ರೈತರು, ಕೃಷಿ ಕಾರ್ಮಿಕರು, ಕ್ಷೌರಿಕರು, ಚಮ್ಮಾರರು, ಚಪ್ಪಲಿ ಹೊಲೆಯುವವರು, ಪೈರು ಹಾಕುವ, ಕಳೆಕೀಳುವ, ಹೊಲ ಕೊಯ್ಯುವ ಹೆಂಗಸರು, ಕೂಲಿ ಮಾಡುತ್ತಲೇ ಊರಿಗೆ ಓಡಿಹೋಗಿ ಮಕ್ಕಳಿಗೆ ಮೊಲೆ ಹಾಲು ಕೊಟ್ಟು ಮತ್ತೆ ಕೆಲಸಕ್ಕೆ ಓಡಿ ಬರುತ್ತಿದ್ದ ಶ್ರಮಜೀವಿ ಹೆಂಗಸರು ನನ್ನ ಕಥೆಗಳಲ್ಲಿ ಸದಾ ನಾಯಕ, ನಾಯಕಿಯರಾಗಿ ಮೆರೆದಿದ್ದಾರೆ. ಇದು ನನ್ನ ಬರವಣಿಗೆಯ ಹೆಗ್ಗಳಿಕೆಯೆಂದು ಜಂಭದಿಂದಲೇ ಹೇಳಿಕೊಳ್ಳುತ್ತೇನೆ. ಬೀದಿ ಬದಿಯಲ್ಲಿ ಬೋಂಡ, ವಡೆ, ಹೂವು, ತರಕಾರಿ ಮಾರುವ ಹೆಂಗಸರು, ಬದುಕಿಗಾಗಿ ಬೀದಿ ಬದಿಯಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಹೆಂಗಸರು, ಭಿಕ್ಷುಕರು, ಕುಡಿದು ಫುಟ್ಪಾತ್ ಮೇಲೆ ಹೊರಳಾಡುವ ದಿಕ್ಕು ತಪ್ಪಿದವರು ನಗರ ಬದುಕಿನ ನನ್ನ ಅಪೇಕ್ಷಣೀಯ ಚಿತ್ರಪಟಗಳು.
ಕರ್ನಾಟಕದಲ್ಲಿನ ಉಚಿತ ಸೌಲಭ್ಯಗಳನ್ನು ಅನೇಕ ರಾಜಕಾರಣಿಗಳಲ್ಲದೆ ಸರ್ಕಾರವನ್ನು ಓಲೈಸುವ ಸಾಹಿತಿ, ಬುದ್ಧಿಜೀವಿ ಪ್ರಗತಿಪರರು ಅವುಗಳನ್ನು ಗಾಂಧೀಜಿಯವರ ಕನಸುಗಳೆಂದು ಹೇಳಿರುವುದು ಗಾಂಧಿ ಚಿಂತನೆಗಳಿಗೆ ಅವಮಾನ ಮಾಡಿದಂತೆಯೇ. ಗಾಂಧಿ ಯಾವೊತ್ತೂ ಶ್ರಮ, ಸ್ವಾವಲಂಬನೆ, ಸಹಕಾರ, ಶಿಸ್ತು ಇಂತಹ ಗುಣಾತ್ಮಕ ಸಂಗತಿಗಳಲ್ಲಿ ನಂಬಿಕೆಯಿಟ್ಟವರು. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ತನ್ನ ಊಟವನ್ನು ತಾನೇ ಸಂಪಾದಿಸಿಕೊಳ್ಳಬೇಕೆಂದು ಗಾಂಧಿ ಹೇಳುತ್ತಾರೆ. ಇದೊಂದು ಇಡೀ ಜಗತ್ತು ಮೆಚ್ಚಿದ ಅದ್ಭುತವಾದ ಆರ್ಥಿಕ ಚಿಂತನೆ. ಜಗತ್ತಿನಲ್ಲಿ ಭಾರತ ಮತ್ತು ಕೆಲವು ಹಿಂದುಳಿದ ತೃತೀಯ ರಾಷ್ಟ್ರಗಳನ್ನು ಬಿಟ್ಟರೆ ಬೇರೆಲ್ಲ ಮುಂದುವರೆದ ರಾಷ್ಟ್ರಗಳ ಜನತೆ ಗಾಂಧೀಜಿಯವರ ಈ ಸರಳ ಆರ್ಥಿಕ ಸಿದ್ಧಾಂತವನ್ನು ಪಾಲಿಸುತ್ತಿದ್ದಾರೆ. ಇಂಥ ಉಚಿತ ಯೋಜನೆಗಳು ಧೀರ್ಘಾವಧಿಯಲ್ಲಿ ಉತ್ಪಾದನೆಯ ಮೇಲೆ ದುಷ್ಪರಿಣಾಮಗಳನ್ನು ಬೀರಿ ಕುಂಠಿತ ಉತ್ಪಾದನೆ, ಬೆಲೆಯೇರಿಕೆ, ನಿರುದ್ಯೋಗ ಮುಂತಾದ ಗಂಭೀರವಾದ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಇಂಥ ಆಲೋಚನೆಗಳು ನಮ್ಮ ಘನ ಪ್ರಗತಿಪರರ ಮನಗಳಲ್ಲಿ ಸುಳಿಯುವುದಿಲ್ಲ. ಬದಲಾಗಿ ರಾಜಕೀಯ ಶಕ್ತಿ ಕೇಂದ್ರದ ಸುತ್ತ ಸುಳಿಯುತ್ತಾ ಭಾರತದ ವೈವಿಧ್ಯಮಯ ಬದುಕಿನಲ್ಲಿನ ಜಾತಿ, ಮತ, ಧರ್ಮ ಭಾಷೆಗಳ ನಡುವೆ ಕಿಡಿ ಹೊತ್ತಿಸಿ ಸಂಘರ್ಷಗಳನ್ನು ಉಂಟುಮಾಡುವ ಮತ್ತು ಅವುಗಳನ್ನು ತಾವು ಬೆಂಬಲಿಸುವ ರಾಜಕೀಯ ಪಕ್ಷಗಳಿಗೆ ಅಜೆಂಡಗಳನ್ನಾಗಿ ಪೂರೈಸುವ ಕುಟಿಲೋಪಾಯಗಳಲ್ಲಿ ಮುಳುಗಿಬಿಟ್ಟಿದ್ದಾರೆ. ಕೆಲವು ಪ್ರಖರ ಚಿಂತಕ ಬುದ್ಧಿಜೀವಿ ಪ್ರಗತಿಪರರಂತೂ ರಾಷ್ಟ್ರೀಯತೆಯನ್ನೇ ಕೋಮುವಾದವೆಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಇವರು ನಮ್ಮ ದೇಶದ ಇತಿಹಾಸ ಪುಟಗಳಲ್ಲೂ ಸರಿಯಾಗಿ ಕಣ್ಣಾಡಿಸಿರುವುದಿಲ್ಲ. ಮೊಘಲರ ಆಕ್ರಮಣ, ಬ್ರಿಟಿಷರ ಆದಿಪತ್ಯ, ಈಸ್ಟ್ ಇಂಡಿಯಾ ಕಂಪನಿಯ ದರೋಡೆ, ಇಸ್ಲಾಂ ದೊರೆಗಳಿಂದ ಆದ ಭಾರತದ ವಾಸ್ತು ಶಿಲ್ಪದ ನಾಶ, ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆ, ಧರ್ಮಾಧಾರಿತ ದೇಶ ವಿಭಜನೆ, ಎಪ್ಪತ್ತೈದರ ತುರ್ತು ಪರಿಸ್ಥಿತಿಯ ಅಗಣಿತ ದೌರ್ಜನ್ಯಗಳು, ತದನಂತರ ಹುಟ್ಟಿಕೊಂಡ ಸಾಮಾಜಿಕ ಚಳವಳಿಗಳ ಚರಿತ್ರೆ ಮುಂತಾದುವುಗಳನ್ನು ನಮ್ಮ ರಾಜಕಾರಣಿಗಳು, ಅವರನ್ನು ಬೆಂಬಲಿಸುತ್ತಿರುವ ಸಾಹಿತಿ ಮಿತ್ರರು ದೇಶ ವಿರೋಧಿ ಮಾತುಗಳನ್ನು ಯಾವೊತ್ತೂ ಆಡುವುದಿಲ್ಲ ಪೂರ್ವಗ್ರಹ ಪೀಡಿತರಾಗಿರದಿದ್ದರೆ. ಇನ್ನು ವಿದ್ಯಾರ್ಥಿಗಳ ಪಠ್ಯ ಪುಸ್ತಕ ರಚನೆಯಲ್ಲಂತೂ ಎರಡೂ ಕಡೆಯ ಪಂಥೀಯರು ಪರಸ್ಪರ ಶತ್ರುಗಳು ಹೋರಾಡುವಂತೆ ಹೋರಾಡಿಬಿಟ್ಟರು. ಪ್ರೌಢಾವಸ್ಥೆಯನ್ನು ತಲುಪದ ವಿದ್ಯಾರ್ಥಿಗಳು ತಾವು ಪಾಸಾಗುವುದಕ್ಕೆ, ಅಧಿಕ ಅಂಕಗಳನ್ನು ಗಳಿಸುವುದಕ್ಕೆ ಏನನ್ನು ಓದಬೇಕು, ಹೇಗೆ ಓದಬೇಕು ಎಂಬುದನ್ನು ಅವರೇ ಬಲ್ಲವರಾಗಿರುತ್ತಾರೆ. ಅಷ್ಟೇಕೆ, ಉನ್ನತ ವಿದ್ಯಾಭ್ಯಾಸದ ಕಡೆ ಹೊರಟಾಗಲೂ ಅವರ ಗುರಿ ಒಳ್ಳೆಯ ಉದ್ಯೋಗ ಗಳಿಸಿ ಉತ್ತಮ ಬದುಕು ನಡೆಸುವುದೆಂಬುದು ಮಾತ್ರವೇ ಆಗಿರುತ್ತದೆ ಎಂಬ ಸತ್ಯ ಈ ಮಹಾಚಿಂತಕರ ಅರಿವಿಗೆ ಬರುವುದಿಲ್ಲವೆ. ಮಕ್ಕಳಲ್ಲಿ ರಾಷ್ಟ್ರೀಯತೆ, ಮಾನವೀಯತೆ, ಸಮಾನತೆಯ ಭಾವನೆಗಳನ್ನು ತುಂಬುವ ಪಠ್ಯಗಳನ್ನು ರಚಿಸುವ ಕಡೆ ಗಮನ ಹರಿಸಬೇಕು. ಇಂದು ಎಲ್ಲಾ ರಂಗಗಳಲ್ಲೂ ಸೋಷಿಯಲ್ ಫ್ಯಾಬ್ರಿಕೇಷನ್ ಮಿತಿಮೀರಿ ಹಬ್ಬುತ್ತಿದೆ. ಸುಳ್ಳುಗಳನ್ನು ಪದೇ ಪದೇ ಸತ್ಯವೆಂದು ಹೇಳುತ್ತಾ ಜನಸಾಮಾನ್ಯರು ಅದನ್ನೇ ನಂಬುವಂತೆ ಮಾಡುವುದು ಆಡಳಿತಗಾರರ, ಜನಪ್ರತಿನಿಧಿಗಳ, ರಾಜಕೀಯ ಪಕ್ಷಗಳನ್ನು ಬೆಂಬಲಿಸುವ ಚಿಂತಕರ ವೃತ್ತಿಯಾಗಿಬಿಟ್ಟಿದೆ. ಇಡೀ ಸರಕು ಮತ್ತು ಸೇವಾ ಮಾರುಕಟ್ಟೆಯನ್ನು ಆಧುನಿಕ ಸಂಪರ್ಕ ಸಾಧನಗಳ ಮೂಲಕ ವಂಚಿಸಲಾಗುತ್ತಿದೆ. ಇಂಥ ಅನೇಕ ಸಂಗತಿಗಳನ್ನು ಸತ್ಯ ಮತ್ತು ವಾಸ್ತವದ ನೆಲೆಗಟ್ಟಿನಲ್ಲಿ ಈ ಪುಸ್ತಕದ ಲೇಖನ, ಪ್ರಬಂಧಗಳಲ್ಲಿ ಪ್ರಸ್ತಾಪಿಸಿದ್ದೇನೆ. ಮುಂಬಯಿಯ ಧಾರಾವಿ ಕೊಳಗೇರಿ ಮತ್ತು ಕಾಮಾಟಿಪುರದ ರೆಡ್ ಲೈಟ್ ಏರಿಯಾಗಳಲ್ಲಿ ನರಜಂತುಗಳಂತೆ ವಾಸಿಸುವ ಜನ ಅದೇ ಮುಂಬಯಿಯ ಶ್ರೀಮಂತ ಬಡಾವಣೆಗಳಲ್ಲಿ ವಾಸಿಸುವ ಅಂಬಾನಿಯೂ ಸೇರಿದಂತೆ ಸಾವಿರಾರು ಶ್ರೀಮಂತರಿಗಿಂತಲೂ ಸಾವಿರಪಟ್ಟು ಖುಷಿಯಿಂದ ಬದುಕುತ್ತಿರುವ ಸತ್ಯ ಮತ್ತು ವಿಸ್ಮಯಗಳನ್ನು ಕಣ್ತುಂಬಿಸಿಕೊಂಡಿದ್ದೇನೆ. ಮತ್ತು ಅದನ್ನು ಸಾಹಿತ್ಯದಲ್ಲಿ ದಾಖಲಿಸಿದ್ದೇನೆ ಕೂಡ.
ಈ ಕಾಕ್ಟೇಲ್ ಅನ್ನು ರೆಡಿ ಮಾಡಲು ಮುಂದೆ ಬಂದಿರುವ ಸಾಧನಾ ಪ್ರಕಾಶನದ ಗೆಳೆಯ ಶ್ರೀ ರವಿಚಂದ್ರರವರಿಗೆ ನಾನು ಋಣಿಯಾಗಿದ್ದೇನೆ. ಅಂದದ ಪುಸ್ತಕ ವಿನ್ಯಾಸ ಮಾಡಿರುವ ಶ್ರೀಮತಿ ಜಮುನಾ, ಮುಖಪುಟ ರಚಿಸಿರುವ ಶ್ರೀಅರುಣ್ ಕುಮಾರ್ ಅವರಿಗೆ ನಮನಗಳನ್ನು ತಿಳಿಸುತ್ತೇನೆ. ಎಮರ್ಜೆನ್ಸಿಯ ನಂತರದ ಎಲ್ಲಾ ಚಳವಳಿಗಳಲ್ಲಿ ಸಕ್ರಿಯ ಪಾತ್ರ ವಹಿಸಿ ಈಗಲೂ ಸಾಹಿತ್ಯ ಮತ್ತು ರಾಜಕೀಯಗಳಲ್ಲಿ ಲವಲವಿಕೆಯಿಂದ ಸಕ್ರಿಯರಾಗಿರುವ ದಪ್ಪ ನಗೆಯ, ಇಷ್ಟೆಲ್ಲಾ ವರ್ಷಗಳಲ್ಲಿ ಎಂಥಾ ಸ್ಥಾನಮಾನಗಳನ್ನು ಅಲಂಕರಿಸಿದರೂ ಹಮ್ಮುಬಿಮ್ಮನ್ನು ತೋರದ, ಅಹಂ ನ ಲವಶೇಷವನ್ನೂ ತಮ್ಮ ಹತ್ತಿರ ಬಿಟ್ಟುಕೊಳ್ಳದ ಅಪರೂಪದ ಗೆಳೆಯ ಡಾಕ್ಟರ್ ಎಲ್. ಹನುಮಂತಯ್ಯನವರು ಮನಬಿಚ್ಚಿ ಬೆನ್ನುಡಿಯನ್ನು ಬರೆದಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು. ಎಷ್ಟೋ ಬಾರಿ ನನ್ನ ಬರಹದ ಬಗ್ಗೆ ನಿಷ್ಠೂರವಾಗಿ ಮಾತನಾಡಿ ಎಚ್ಚರಿಸುವ ಕಲ್ಮಶವಿಲ್ಲದ ಗೆಳೆತನಕ್ಕೆ ಹೆಸರಾದ ಮೈಸೂರಿನ ಸ್ವಾಮಿ ಆನಂದ್, ನನ್ನ ಬದುಕಿನ ಚಲನಶೀತೆಯಲ್ಲಿ ಸದಾ ಜೊತೆಗಿರುವ ಸಿ. ಜಿ. ಶ್ರೀನಿವಾಸನ್, ಅಬ್ಬೂರು ಚಂದ್ರಕಾಂತ, ಪ್ರೊಫೆಸರ್ ಎಂ. ಎಸ್. ಜಯರಾಮ್ ಇವರು ಸದಾ ಅಭಿನಂದನಾರ್ಹರು. ನನ್ನ ಸಾಹಿತ್ಯ ರಚನೆಯಲ್ಲಿ ಸದಾ ನನಗೆ ಇಂಬಾಗಿರುವ ನನ್ನ ಕುಟುಂಬದವರನ್ನು ಮತ್ತು ಅಪಾರ ಸ್ನೇಹಿತರ ಬಳಗವನ್ನು ಮರೆಯಲಾರೆ. ಇನ್ನು ಓದುಗರ ಬಳಗ ನನ್ನ ಮರವಣಿಗೆಯ ಹಿಂದಿನ ಅಗಾಧವಾದ ಶಕ್ತಿಯೆಂದೇ ಹೇಳಬೇಕು. ಸುಮಾರು ನಾಲ್ಕು ದಶಕಗಳಿಂದಲೂ ನನ್ನ ಕಥನ ಕೃಷಿ ನಾಡಿನಾದ್ಯಂತ ನನಗೆ ಅಸಂಖ್ಯಾತ ಓದುಗರನ್ನು ಗಳಿಸಿಕೊಟ್ಟಿದೆ. ನನ್ನ ಎಲ್ಲಾ ಓದುಗರಿಗೂ ನಾನು ನಿರಂತರವಾಗಿ ಋಣಿಯಾಗಿದ್ದೇನೆ. ಇದೆಲ್ಲಾ ಸಾಧ್ಯವಾದದ್ದು ಈ ನಲವತ್ತು ವರ್ಷಗಳಿಂದ ಕನ್ನಡ ದಿನಪತ್ರಿಕೆಗಳು ನನ್ನ ಕಥನ ಕ್ರಿಯೆಗೆ ನೀಡಿದ ಪ್ರೋತ್ಸಾಹ ಮತ್ತು ಉತ್ತೇಜನ. ಮೊದಲನೆಯದಾಗಿ ನನ್ನನ್ನು ಕಥಾ ಲೋಕಕ್ಕೆ ವಿಸ್ತಾರವಾಗಿ ಪರಿಚಯಿಸಿದ್ದು ಕನ್ನಡದ ಹೆಮ್ಮೆಯ ದಿನಪತ್ರಿಕೆ ಪ್ರಜಾವಾಣಿ. ಸಾವಿರದ ಒಂಬೈನೂರ ಎಂಬತ್ತನಾಲ್ಕರಿಂದ ಪ್ರಸ್ತುತದವರೆಗೆ ಪ್ರಜಾವಾಣಿ ಸಾಪ್ತಾಹಿಕ ಪುರವಣಿ, ಮಯೂರ ಮತ್ತು ಸುಧಾ ಪತ್ರಿಕೆಗಳಲ್ಲಿ ಹತ್ತಿರ ಹತ್ತಿರ ಮುನ್ನೂರು ಕಥೆಗಳು ಪ್ರಕಟಗೊಂಡಿವೆ. ಬಿ. ವಿ. ವೈಕುಂಟರಾಜು, ಜಿ. ವಿ. ರಾಜಶೇಖರ, ರಂಗನಾಥ್ ರಾವ್, ಗುಡಿಹಳ್ಳಿ ನಾಗರಾಜ್, ಸಂದೀಪ ನಾಯಕ್ ಮುಂತಾದ ಪ್ರಜಾವಾಣಿ ಬಳಗದ ಸ್ನೇಹಿತರು ನನ್ನಿಂದ ಕಥೆಗಳನ್ನು ತರಿಸಿಕೊಳ್ಳುತ್ತಿದ್ದರು. ತರಂಗ ವಾರಪತ್ರಿಕೆಯ ಸಂತೋಷ್ ಕುಮಾರ್ ಗುಲ್ವಾಡಿ, ಚಿರಂಜೀವಿ ಕೂಡಾ ನಿಯಮಿತವಾಗಿ ನನ್ನಿಂದ ಕಥೆಗಳನ್ನು ತರಿಸಿಕೊಳ್ಳುತ್ತಿದ್ದರು. 1991 ರಲ್ಲಿ ತರಂಗದಲ್ಲಿ ಪ್ರಕಟವಾದ ಪರಿಮಿತಿಗಳಾಚೆಗಿನ ಕ್ಷಣದ ಸತ್ಯಗಳು ಎಂಬ ತಿಂಗಳ ಬಹುಮಾನಿತ ಕಥೆಗೆ ಸರಿಯಾಗಿ 158 ಮೆಚ್ಚುಗೆ ಪತ್ರಗಳು ಬಂದಿದ್ದವು! ಪ್ರಜಾವಾಣಿ ಸಮೂಹಕ್ಕೆ ಬಿಟ್ಟರೆ ನಾನು ಹೆಚ್ಚು ಕಥೆಗಳನ್ನು ಬರೆದಿದ್ದು ತರಂಗ, ಲಂಕೇಶ್ ಪತ್ರಿಕೆ, ಮುಂಗಾರು ದಿನಪತ್ರಿಕಗಳಿಗೆ. ಲಂಕೇಶ್ ಮೇಷ್ಟ್ರಂತೂ ಕಥೆ ಕಳಿಸಿದ ಮಾರನೆಯ ವಾರಕ್ಕೇ ಪ್ರಕಟಿಸಿ ಕೈತುಂಬಾ ಸಂಭಾವನೆ ಕಳಿಸುತ್ತಿದ್ದರು. ಗೆಳೆಯ ಪ್ರಕಾಶ್ ಅಬ್ಬೂರು ಸಂಜೆವಾಣಿ ಮತ್ತು ಮುಂಗಾರು ಪತ್ರಿಕೆಗಳಲ್ಲಿದ್ದಾಗ ಕಳಿಸಿದ ಯಾವ ಕಥೆಯನ್ನೂ ಕಸದ ಬುಟ್ಟಿಗೆ ಹಾಕದೆ ಪ್ರಕಟಿಸಿ ಕೆಲವೊಮ್ಮೆ ಪೇಚಿಗೆ ಸಿಕ್ಕಿಕೊಂಡಿದ್ದೂ ಉಂಟು. ಹಾಗೆ ಮಲ್ಲಿಗೆ, ವಾರಪತ್ರಿಕೆ, ಮಾರ್ಧನಿ, ಮಂಗಳ ಪತ್ರಿಕೆಗಳಲ್ಲೂ ನನ್ನ ಕಥೆಗಳು ದಂಡಿಯಾಗಿ ಪ್ರಕಟಗೊಂಡವು. ಇನ್ನು ಅಗ್ನಿ, ಹಾಯ್ ಬೆಂಗಳೂರ್, ಕನ್ನಡ ಪ್ರಭ, ಶೌರ್ಯ ಸಂದೇಶ್ ಪತ್ರಿಕೆಗಳಲ್ಲಿ ನನ್ನ ಪ್ರಬಂಧಗಳು ಸದ್ದು ಮಾಡಿದವು. ಅಗ್ನಿಯಲ್ಲಿ ಪ್ರಕಟವಾದ ಒಕ್ಕಲ ಒನಪು ಮತ್ತು ರಾಜಧಾನಿಯ ರಸ್ತೆಗಳಲ್ಲಿ ಮತ್ತು ಹಾಯ್ ಬೆಂಗಳೂರ್ ನಲ್ಲಿ ಪ್ರಕಟವಾದ ಮರೆತ ಭಾರತ ನನ್ನ ಭಾಷೆಗೊಂದು ಹೊಸ ಬೆರಗನ್ನು ಮೆತ್ತಿದವು. ಅಗ್ನಿ ಶ್ರೀಧರ್, ಸಹೋದರ ಮಂಜುನಾಥ್ ಅದ್ದೆ, ಗೆಳೆಯ ರವಿಬೆಳೆಗೆರೆ ಇದಕ್ಕೆ ಕಾರಣರಾದರು. ನನ್ನ ಪುಸ್ತಕಗಳನ್ನು ಪ್ರಕಟಿಸಿದ ಕ್ರಾಂತಿ ಸಿರಿ, ಸಪ್ನ, ಅಂಕಿತ, ಸಾಧನ, ಸಿ ವಿ ಜಿ ಮುಂತಾದ ಪ್ರಕಾಶನ ಸಂಸ್ಥೆಗಳನ್ನು ನಾನೆಂದೂ ಮರೆಯಬಾರದು. ಇಂಥ ಅನೇಕ ಮಹನೀಯರಿಂದಾಗಿ ನಾನು ಅಸಂಖ್ಯಾತ ಕನ್ನಡದ ಓದುಗರನ್ನು ಸುಲಭವಾಗಿ ತಲುಪುವಂತಾಯಿತು. ಇವರೆಲ್ಲರನ್ನೂ ನಾನು ಯಾವೊತ್ತಿಗೂ ಮರೆಯಲಾರೆ. ಸಧ್ಯಕ್ಕೆ ಕಾಕ್ಟೇಲ್ ಎನ್ನುವ ಈ ಕೃತಿ ನಿಮಗೆ ಸ್ವಲ್ಪವಾದರೂ ಕಿಕ್ ಕೊಡುತ್ತದೆಂಬ ನಂಬಿಕೆ ನನ್ನದು.
- ಕೇಶವರೆಡ್ಡಿ ಹಂದ್ರಾಳ – ಸುಮಾರು ಐನೂರು ಕಥೆಗಳು , ಮುನ್ನೂರು ಪ್ರಬಂಧಗಳು ಕನ್ನಡದಲ್ಲಿ ಪ್ರಕಟಗೊಂಡಿವೆ. ಕೆ ಎ ಎಸ್ ಅಧಿಕಾರಿಯಾಗಿ ನಿವೃತ್ತಿಯನ್ನು ಹೊಂದಿದ್ದಾರೆ.
