ಸರ್ವ ಜನಾಂಗದ ಶಾಂತಿಯ ತೋಟ

ತೇಜಸ್ವಿಯವರ‌ ನೂರಾರು ಅಭಿಮಾನಿಗಳೇ ಹಣ‌ಹೂಡಿ‌ ನಿರ್ಮಿಸಿರುವ “ಡೇರ್ ಡೆವಿಲ್‌ ಮುಸ್ತಾಫ಼” ನನ್ನು‌ ಕನ್ನಡಿಗರೆಲ್ಲರೂ ಒಮ್ಮೆ ಕಣ್ತುಂಬಿಕೊಂಡು ಇಂತಹಾ ಪ್ರಯತ್ನಗಳನ್ನು ಸ್ವಾಗತಿಸಿದಲ್ಲಿ ಕರುನಾಡಿಗಿರುವ” ಸರ್ವಜನಾಂಗದ ಶಾಂತಿಯ ತೋಟ” ಎಂಬ‌ ಹೆಸರು ಚಿರಸ್ಥಾಯಿಯಾಗಿ ನಿಲ್ಲಲು ಸಾಧ್ಯ. ಹಿರಿಯೂರು ಪ್ರಕಾಶ್ ಅವರು ಡೇರ್ ಡೆವಿಲ್‌ ಮುಸ್ತಾಫ಼ ಸಿನಿಮಾ ಕುರಿತು ಬರೆದ ಒಂದು ಲೇಖನವನ್ನು ತಪ್ಪದೆ ಮುಂದೆ ಓದಿ….

ಕನ್ನಡ ಸಾರಸ್ವತ ಲೋಕದ ಬಾನಂಗಳದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಸದಾ ಮಿನುಗುವ ನಕ್ಷತ್ರವಿದ್ದಂತೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅವರಿತ್ತ ಕೊಡುಗೆ ವಿಶಿಷ್ಟ, ವಿಭಿನ್ನ, ವಿನೂತನ , ವೈವಿಧ್ಯ ಹಾಗೂ ವಿವೇಕಯುಕ್ತ. ಹೀಗಾಗಿಯೇ ಸುಮಾರು ಐವತ್ತು ವರ್ಷಗಳ ಹಿಂದಿನ ಅವರ ಕಥಾ ಸಂಕಲನದಲ್ಲಿನ ಒಂದು ಕಿರುಕತೆ ಅದೇ ಹೆಸರಿನೊಂದಿಗೆ ಸಿನಿಮಾ‌ ಆಗಿ ಅಂದಿನ‌ ಇಂಟಿಮೇಟ್ ಕಾಲದಿಂದ ಹಿಡಿದು ಇಂದಿನ ಇಂಟರ್ನೆಟ್ ‍ಜ಼ಮಾನದವರೆಗೂ ಪರಿಣಾಮಕಾರಿಯಾಗಿ ಪ್ರಸ್ತುತವಾಗುವ ಅಂಶಗಳನ್ನು ಹೊಂದಿರುವುದೇ ಪೂಚಂತೆಯವರ ಬರಹಕ್ಕಿರುವ ಗೈರತ್ತು ಗಮ್ಮತ್ತು, ತಾಕತ್ತು, ಹಾಗೂ ಅವರದ್ದೇ ಆದ ಶೈಲಿಯ ಗತ್ತು !

ಹತ್ತೊಂಬತ್ತನೂರ ಎಪ್ಪತ್ಮೂರರಲ್ಲಿ ರಚಿತವಾದ ತೇಜಸ್ವಿಯವರ ಈ ಚಂದದ ಕತೆಗೆ ಶಶಾಂಕ್ ಸೋಗಲ್ ಅಚ್ಚುಕಟ್ಟಾದ ನಿರ್ದೇಶನದ ಫ಼್ರೇಮ್ ಹಾಕಿ ಪಕ್ಕಾ ಕನ್ನಡ ಸೊಗಡಿನ‌ ಪ್ರತಿಭೆಗಳನ್ನು ಪೋಣಿಸಿ ಒಂದು ಅದ್ಭುತವಾದ ದೃಶ್ಯಕಾವ್ಯದ ಚಿತ್ತಾರವನ್ನೇ ಚಂದನವನದಲ್ಲಿ‌ ಬಿಡಿಸಿದ್ದಾರೆ. ಈ‌ ಸಿನಿಮಾ ನೋಡುತ್ತಿದ್ದರೆ ನೀವು ಸಾಕ್ಷಾತ್ ಅಬಚೂರಿನಲ್ಲೇ ಇದ್ದಂತೆ ಅನಿಸಿ ನಿಮ್ಮ‌ ಬಾಲ್ಯದ ಆಟ, ಕಾಲೇಜು ದಿನಗಳ ತುಂಟಾಟ, ಕ್ರಿಕೆಟ್ ಮೈದಾನದ ಹೋರಾಟ , ಹುಡುಗಿಯರಿರುವ ತರಗತಿಯ ಪರದಾಟ ಎಲ್ಲವನ್ನೂ ಮತ್ತೇ‌ ನೆನಪಿಸಿ ಮೈಮನಗಳು ಪುಳಕಗೊಳ್ಳುವಂತೆ ಮಾಡುತ್ತದೆ. ಜಾತಿ, ಮತ, ಧರ್ಮಗಳಿದಾಚೆಗಿನ ಮನುಷ್ಯ ಧರ್ಮ , ಪ್ರೀತಿ, ಸ್ನೇಹ, ಬಂಧುತ್ವ ಇವುಗಳಿಗಿರುವ ಅಸಾಧಾರಣ ಮೌಲ್ಯಗಳು ಕೇವಲ ಮುಗ್ಧತೆಯ ಮುಸುಕಿನಲ್ಲೇ ಸದ್ದಿಲ್ಲದೇ ಅನಾವರಣಗೊಳ್ಳುತ್ತಾ ಹೋಗುತ್ತವೆ. ಅದರಲ್ಲೂ ಜಾತಿ ಧರ್ಮಗಳ ನಡುವಿನ‌ ಶ್ರೇಷ್ಠತೆಯ ಸಂಘರ್ಷ ತಾರಕಕ್ಕೇರಿರುವ ಇಂದಿನ ಸಂಕಷ್ಟದ ದಿನಗಳಲ್ಲಿ ” ಡೇರ್ ಡೆವಿಲ್ ಮುಸ್ತಾಫ಼” ದಂತಹ ಚಿತ್ರಗಳು ಮಾನವೀಯ ಸೆಲೆಯತ್ತ ಮನುಷ್ಯನನ್ನು ಮುಖ ಮಾಡುವಂತೆ ಪ್ರೇರೇಪಿಸುವಲ್ಲಿ ಸಕಾರಾತ್ಮಕ ಪ್ರಭಾವ ಬೀರುತ್ತವೆ.

ಜಮಾಲ್ ಅಬ್ದುಲ್ ಮುಸ್ತಾಫ಼ಾ ಹುಸೇನ್ …!!

ಕೇವಲ ಹಿಂದೂಗಳೇ ಇರುವ ಅಬಚೂರಿನ ಕಾಲೇಜಿಗೆ ಮೊದಲ ಬಾರಿಗೆ ಒಬ್ಬ ಮುಸ್ಲೀಂ ವಿಧ್ಯಾರ್ಥಿ ಪ್ರವೇಶ ಮಾಡುತ್ತಾನೆ. ಆರಂಭದಲ್ಲಿ ಕಾಲೇಜಿನಲ್ಲಿ ಎಲ್ಲರಿಗೂ ಇವನಾರೆಂಬ ಬಗೆಗೆ ಕುತೂಹಲ, ಮುಸ್ಲೀಮರ ಬಗೆಗೆ ಇರಬಹುದಾದ ದಿಗಿಲು, ಆತಂಕ ಹಾಗೂ ಅವರ ವಿಚಿತ್ರ ವೃತ್ತಿಗಳ ಕುರಿತಾದ ಕೌತುಕ ಇವೆಲ್ಲಾ ಸೇರಿ ಮುಸ್ತಾಫ಼ನನ್ನು ಯಾವುದೋ ಅನ್ಯ ಲೋಕದ ಗ್ರಹವೆಂಬಂತೆ ಭಾವಿಸಿರುತ್ತಾರೆ. ಆದರೆ ಎಲ್ಲರ ನಿರೀಕ್ಷೆಗೆ ವಿರುದ್ಧವಾಗಿ ಮುಸ್ತಾಫ಼ ಘಜಿನಿ ಮಹಮ್ಮದ್‌ನ‌ ಕರಾಳ ಸಂತತಿಯಂತಿರದೇ ನೋಡಲು ಲಕ್ಷಣವಾಗಿರುವ‌ ಮುಗ್ಧ ಯುವಕನಾಗಿರುವುದು ಎಲ್ಲರ ಸಮಾಧಾನಕ್ಕೆ ಕಾರಣವಾಗುತ್ತದೆ. ಅವನನ್ನು‌ ಕಂಡರೆ ಆರಂಭದಿಂದಲೂ ಅವರದ್ದೇ ಆದ ಕಾರಣದಿಂದಾಗಿ ಅಸಹ್ಯಿಸಿಕೊಳ್ಳುತ್ತಲೇ ಇದ್ದ ರಾಮಾನುಜ ಅಯ್ಯಂಗಾರಿ ಹಾಗೂ ಅವನ‌ ಕಾಲೇಜು ಪಟಾಲಂ ಗಳಾದ ಸೀನ, ಶಂಕರ, ಪುಲಿಕೇಶಿ, ಸಂಪತ್ ಮುಂತಾದವರಿಂದ ಮುಸ್ತಾಫ಼ನಿಗೆ ಕಾಲೇಜಿನ‌ ಒಳಗೂ ಹೊರಗೂ ಹೆಜ್ಜೆ ಹೆಜ್ಜೆಗೂ ಆಗುವ ತೊಂದರೆ, ಕಿರಿಕ್ಕು, ಅಡಚಣೆಗಳನ್ನು ಮುಸ್ತಾಫ಼ ತನ್ನ ಮುಗ್ಧತೆಯಿಂದಲೇ ಎದುರಿಸಿ‌ ನಿಲ್ಲುತ್ತಾನೆ. ಪ್ರತೀ ಬಾರಿ ಅವನಿಗೆ ಅಪಮಾನ ಮಾಡ ಹೊರಟ ಅಯ್ಯಂಗಾರಿ ಪಟಾಲಂ ರ‌ ಪ್ಲಾನು ಅವರಿಗೇ ತಿರುಗಿ ಬೀಳುವಂತೆ ಆಗುತ್ತದೆ. ಕಾಲೇಜಿನಲ್ಲಿ, ಅಧ್ಯಾಪಕರ ಹಾಗೂ ಊರ ಜನರ ದೃಷ್ಟಿಯಲ್ಲಿ ಮುಸ್ತಾಫ಼ ಹೀರೋ ಆಗುವ ಪ್ರಸಂಗಗಳೂ ಎದುರಾಗುತ್ತವೆ.

ಈ ಮೊದಲೇ ಕೋಮು ಸಂಘರ್ಷದ ಹಣೆಪಟ್ಟಿ ಕಟ್ಟಿಕೊಂಡಿದ್ದ ಅಬಚೂರು, ಗಣೇಶ‌ ವಿಸರ್ಜನೆ ಸಮಯದಲ್ಲಿ ಆದ ಯಾವುದೋ ಪ್ರಮಾದದಿಂದ ಸ್ಥಿತಿ ಮತ್ತಷ್ಟು ಬಿಗಡಾಯಿಸುವಂತಿರುತ್ತದೆ. ಆದರೆ ಮುಸ್ತಾಫ಼ನ ಮಧ್ಯಪ್ರವೇಶದಿಂದ ಅವನು ಬೆಂಕಿ ತಗುಲಿದ್ದ ಹೋರಿಯನ್ನು ಆ‌ಸಮಯದಲ್ಲಿ ಪಳಗಿಸಿದ್ದರಿಂದ ಆಗಬಹುದಾಗಿದ್ದ ಈ ಬಾರಿಯೂ ಆಗಬಹುದಾಗಿದ್ದ ಕೋಮು ಘರ್ಷಣೆ ತಪ್ಪಿ ಕಾಲೇಜಿನ ಹಾಗೂ ಊರ ಜನರ ದೃಷ್ಟಿಯಿಂದ ಅವನು ‌ಹೀರೋ ಆಗಿಬಿಡುತ್ತಾನೆ. ಇದು ಅಯ್ಯಂಗಾರಿ ಅಂಡ್ ಪಟಾಲಂ ರ‌ ಅಸೂಯೆಯ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗುತ್ತದೆ.

ಒಮ್ಮೆ ಕ್ಲಾಸ್ ಗೆ‌ ಫ಼ೇಜ಼್ ಟೊಪ್ಪಿ ಧರಿಸಿ‌ಬಂದ‌ ಮುಸ್ರಾಫ಼ ಎಲ್ಲರ ಗಮನ ಸೆಳೆಯುತ್ತಾನೆ. ಆದರೆ ಆ ಟೊಪ್ಪಿ ತೆಗೆಯಬೇಕೆಂಬ‌ ಅಯ್ಯಂಗಾರಿ‌ ಗ್ಯಾಂಗಿನ ಹಾಗೂ ‌ಮೇಷ್ಟ್ರ ಒತ್ತಾಯಕ್ಕೆ ಕೇರ್ ಮಾಡದ‌ ಮುಸ್ತಾಫ಼ ತಾನು ಡೇರ್ ಅಂಡ್ ಡೆವಿಲ್ ಎಂಬುದನ್ನು‌ ಓಪನ್ನಾಗಿ‌ ಹೇಳುತ್ತಾನೆ. ಆ‌ ಸಮಸ್ಯೆಯನ್ನು ಪ್ರಿನ್ಸಿಪಾಲರೇ ನವಿರಾಗಿ ಬಗೆಹರಿಸುತ್ತಾರೆ.

ಈ‌ ನಡುವೆ‌ ಫ಼ುಟ್ ಬಾಲ್, ಕ್ರಿಕೆಟ್ ಪಂದ್ಯಗಳಲ್ಲಾದ‌ ಘಟನೆಗಳು,‌ ಕಾಲು ಕೆರೆದುಕೊಂಡು ಮುಸ್ತಾಫ಼ನ ಮೇಲೆ‌ ಹಲ್ಲೆ‌ ಮಾಡಿದ ಅಯ್ಯಂಗಾರಿ‌ ಗ್ಯಾಂಗ್‌ ಕೊನೆಗೆ ಅವನ ನೆಚ್ಚಿನ ಫ಼ೇಜ಼್ ಟೊಪ್ಪಿಯನ್ನು ಕೆಳಕ್ಕೆ‌ ಬೀಳಿಸಿ ಅದನ್ನು‌ ತುಳಿದು ಹಾಕುತ್ತಾರೆ. ಅದರಿಂದ ಮುಸ್ತಾಫ಼ನಿಗೆ ತೀವ್ರ ‌‌ನೋವಾಗಿ ಅದರ ಸೇಡನ್ನು ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಜಾದೂಗಾರನಾಗಿ ಅಯ್ಯಂಗಾರಿಯ ಜರ್ಕಿನ್ ನ ಪಾಕೇಟಿನಲ್ಲಿ ಕೋಳಿಮೊಟ್ಟೆ ಹೊಡೆಯುವ ಮೂಲಕ ಮುಸ್ತಾಫ಼ ‌ಸೇಡು ತೀರಿಸಿಕೊಳ್ಳುತ್ತಾನೆ. ಈ‌ ಘಟನೆಯಿಂದಾಗಿ ಅವರಿಬ್ಬರ ನಡುವೆ ವೈಮನಸ್ಯ ಇನ್ನಷ್ಟು ಹೆಚ್ಚಾಗುತ್ತದೆ.

ಈ‌ ಮಧ್ಯೆ ಕಾಲೇಜು ಗೆಳತಿ ರಮಾಮಣಿ ಇವನೊಟ್ಟಿಗೆ ಸಲಿಗೆಯಿಂದ ಇರುವುದೂ ಸಹ ಅಯ್ಯಂಗಾರಿ ಗ್ಯಾಂಗ್ ನ‌ ಅಸಹನೆ ಹೆಚ್ಚುವಂತೆ ಮಾಡಿ ಮುಸ್ತಾಫ಼ನನ್ನು ಕಾಲೇಜು ಬಿಡಿಸುವ ಪ್ಲಾನ್ ಮಾಡಿ ಅದನ್ನು ಅಬಚೂರಿನ ಸುಲ್ತಾನ್‌ಪುರಿಯ ಮುಸ್ಲಿಂ ಯುವಕರ ವಿರುದ್ಧ ಕ್ರಿಕೆಟ್ ಪಂದ್ಯದ ಸೋಲು -ಗೆಲುವಿಗೆ ತಳುಕು ಹಾಕಿ, ಮುಸ್ತಾಫ಼ನನ್ನೇ ಟೀಂ ಕ್ಯಾಪ್ಟನ್ ಮಾಡಿ ಮುಸ್ಲೀಂ‌ತಂಡದ ವಿರುದ್ಧ ಬೇಕಾಗಿಯೇ ಸೋಲುವ‌ಂತೆ ಆಡುವ ರಾಮಾನುಜ ಅಯ್ಯಂಗಾರಿಯ ಪ್ಲಾನ್ ಯಶಸ್ವಿಯಾಗುತ್ತದೆಯೇ…… ! ಚಿತ್ರ ನೋಡಿ.

ಚಿತ್ರದ ಕೊನೆಗೆ ನೀಡಿರುವ ಸಂದೇಶ ಹಾಗೂ ‌ಕ್ಲೈಮ್ಯಾಕ್ಸ್ ನ‌ ಚಿತ್ರಣ ಪ್ರೇಕ್ಷಕರಲ್ಲಿ‌ ವಿಶೇಷ ಕುತೂಹಲ ಹುಟ್ಟಿಸಿ ಮುಸ್ತಾಫ಼ನ ಬಗೆಗೆ ಹಾಗೂ ಸಿನಿಮಾದ ಸದುದ್ದೇಶದ ಬಗೆಗೆ ಭೇಷ್ ಎನ್ನುವಂತೆ ಮಾಡುತ್ತದೆ.

ಸಾಹಸಸಿಂಹ ವಿಷ್ಣುವರ್ಧನ್ ತಮ್ಮ ಮೊದಲ ಚಿತ್ರ ನಾಗರಹಾವಿನ ರಾಮಾಚಾರಿಯಾಗಿ ಆ ಪಾತ್ರವನ್ನು ಹೇಗೆ ಆವಾಹಿಸಿಕೊಂಡಿದ್ದರೋ ಅದೇ ರೀತಿಯಲ್ಲಿ ಮುಸ್ತಾಫ಼ಾನ‌ ಪಾತ್ರದಲ್ಲಿ ಶಿಶಿರ್ ಬೈಕಾಡಿ ಹಾಗೂ ರಾಮಾನುಜ ಅಯ್ಯಂಗಾರಿಯ‌ ಪಾತ್ರದಲ್ಲಿ ಆದಿತ್ಯ ಅಶ್ರೀ ಆ ಪಾತ್ರಗಳೇ ಆಗಿ‌ ಹೋಗಿದ್ದಾರೆ. ಕನ್ನಡದ ಅದ್ಭುತ ರಂಗಪ್ರತಿಭೆಗಳ ಸಮ್ಮಿಲನವೇ‌ ಇಲ್ಲಿದೆ. ಅದಕ್ಕೆ ಸಾಥ್ ಕೊಡುವಂತೆ ಮಂಡ್ಯ ರಮೇಶ್, ಉಮೇಶ್, ಪೂರ್ಣಚಂದ್ರ, ಪ್ರೇರಣಾ, ಮೈಸೂರ್ ಆನಂದ್, ವಿಜಯ್ ಶೋಭರಾಜ್ ಮುಂತಾದವರ ಸಹಜಾಭಿನಯವಿದೆ. ‌ನವನೀತ್ ಶ್ಯಾಮ್ ರವರ ಸಹನೀಯ ಹಿನ್ನೆಲೆ ಸಂಗೀತವೂ ಸಿನಿಮಾದ ಪ್ಲಸ್ ಪಾಯಿಂಟು. ಜೊತೆಗೆ ರಾಹುಲ್ ರ ಛಾಯಾಗ್ರಹಣ ದಲ್ಲಿ ಅಂದಿನ ಅಬಚೂರಿನ ಅಂದವಾದ ಪ್ರಕೃತಿಯನ್ನೇ ಸೆರೆಹಿಡಿದಿದ್ದಾರೆ. “ನಿನ್ನಂಥೋರ್ ಯಾರೂ ಇಲ್ವಲ್ಲೋ “…ಎಂಬ ಹಾಡಿನಲ್ಲಿ ಅಣ್ಣಾವ್ರನ್ನು ರಣಧೀರ ಕಂಠೀರವನನ್ನಾಗಿ ಗ್ರಾಫಿಕ್ ಮೂಲಕ ಸೆರೆ ಹಿಡಿದಿರುವ ದೃಶ್ಯ ‌ನೋಡಿದಾಗ ಮನಸ್ಸು ಮುದಗೊಳ್ಳುತ್ತದೆ. ಕೋಮು ಸಂಘರ್ಷದ ವಿಷಯವಿದ್ದರೂ ಅದಕ್ಕೆ ಎಲ್ಲಿಯೂ ಉಪ್ಪು ಖಾರ ಸುರಿಯದಂತೆ‌ , ಭಾವುಕತೆಯನ್ನು ಕೆರಳಿಸದಂತೆ ನಿರ್ದೇಶಕ ಶಶಾಂಕ್ ನಿರೂಪಿಸಿ ಸೂಕ್ಷ್ಮತೆ ಮೆರೆದಿದ್ದಾರೆ.

ಕೆಲ ಅನವಶ್ಯಕ ದೃಶ್ಯಗಳನ್ನು ಹಾಗೂ ಡೈಲಾಗುಗಳನ್ನು ಕತ್ತರಿಸಿ ಚಿತ್ರದ ಅವಧಿಯನ್ನು‌ ಸ್ವಲ್ಪ ಕಡಿಮೆ ಮಾಡಿ ನವಿರು ಹಾಸ್ಯದ‌ ಜೊತೆಗೆ ಮತ್ತಷ್ಟು ಕಾಮಿಡಿಗೆ ಒತ್ತು ಕೊಟ್ಟಿದ್ದಲ್ಲಿ ಚಿತ್ರ ಕೆಲವೆಡೆ ಬೋರ್ ಎನಿಸದೇ ಇನ್ನಷ್ಟು ಆಕರ್ಷಕವಾಗಿರುತ್ತಿತ್ತು.

ಕನ್ನಡದ ಅಪ್ರತಿಮ ಸಾಹಿತಿಯ ಕಿರುಕತೆಗೆ ಸಲ್ಲಬೇಕಾದ ಗೌರವಕ್ಕೆ ಎಲ್ಲಿಯೂ‌ ಚ್ಯುತಿ ಬಾರದಂತೆ ದ್ವೇಷ ಅಳಿಸಿ ಪ್ರೀತಿ ಅರಳಿಸುವ ಪ್ರಯತ್ನವಾಗಿ ಮುಸ್ತಾಫ಼ಾ ಸಿನಿಮಾ ಮೂಡಿ ಬಂದಿದೆ. ಈ ಚಿತ್ರಕ್ಕೆ ಅರ್ಹವಾಗಿ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿಯನ್ನೂ ಘೋಷಿಸಿದೆ.

ಕನ್ನಡಿಫ಼ರೇ……ಪ್ರೋತ್ಸಾಹಿಸಿ.

* ಮರೆಯುವ ಮುನ್ನ *

ರಾಜಕಾರಣಿಗಳಿಗೆ, ಸಿನಿಮಾ‌ ಮಾಡುವವರಿಗೆ, ಅಥವಾ ಪರಿಸ್ಥಿತಿಯ ದುರ್ಲಾಭ ಪಡೆಯುವವರಿಗೆ “ಕೋಮು ಸಂಘರ್ಷ” ದ ವಿಷಯವೆನ್ನುವುದು ಅಂದಿನಿಂದ ಇಂದಿನವರೆಗೂ‌ ಒಂದು‌ ಪೊಗದಸ್ತಾದ ಸರಕು. ಅದನ್ನು ‌ಹೇಗೆ ಬೇಕಾದರೂ ತಿರುಚಿ ಸಿನಿಮಾ ಕತೆ ಮಾಡಿ ಜನರ ಧಾರ್ಮಿಕ‌ ಭಾವನೆಗಳನ್ನು‌ ಕೆರಳಿಸಿ ಆಟ ಆಡಬಹುದು ಜೊತೆಗೆ ಸಾಕಷ್ಟು ಕಾಸೂ ಮಾಡಬಹುದು ಅಥವಾ ‌ಚುನಾವಣೆಯಲ್ಲಿ ಟ್ರಂಪ್‌ಕಾರ್ಡ್ ಆಗಿಟ್ಟುಕೊಂಡು ಸ್ವಾರ್ಥವನ್ನೂ‌ ಮೆರೆಯಬಹುದು. ಇದನ್ನು ಹಲವಾರು ದೃಷ್ಟಾಂತಗಳಾಗಿ ಈ‌ ಹಿಂದೆ ಬಂದ ಸಿನಿಮಾಗಳಲ್ಲಿ ಸೂಕ್ಷ್ಮವಾಗಿ ಕಾಣಬಹುದು.

ಆದರೆ‌ ವ್ಯಾಪಾರಿ ದೃಷ್ಟಿಯಿಂದ ‌ಕೋಮು ಸಂಘರ್ಷ ಬಳಸಿಕೊಳ್ಳುವ ಬದಲು ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಬಳಸಿಕೊಳ್ಳುವ‌ , ಅನಗತ್ಯವಾಗಿ ಜನರ ಭಾವುಕತೆಯನ್ನು‌ ಕೆರಳಿಸದೇ‌, ಇದ್ದಿರಬಹುದಾದ ತಪ್ಪು‌ಕಲ್ಪನೆಗಳನ್ನು ಹೋಗಲಾಡಿಸುವ ಒಂದು ಪ್ರಾಮಾಣಿಕ ಪ್ರಯತ್ನಕ್ಕೆ ಕೈ‌ ಹಾಕುವವರು ಕಡಿಮೆ. ಏಕೆಂದರೆ ಭಾವನೆಗಳನ್ನು ಕೆರಳಿಸದೇ, ಅರಳಿಸಲು‌ ಹೋದಲ್ಲಿ ಅದು‌ ಕಮರ್ಷಿಯಲ್ ಆಗಿ ಲಾಭ ತಂದು‌ಕೊಡುವುದಿಲ್ಲ. ಈ ಸತ್ಯ ಗೊತ್ತಿದ್ದೂ ತೇಜಸ್ವಿಯವರ‌ ನೂರಾರು ಅಭಿಮಾನಿಗಳೇ ಹಣ‌ಹೂಡಿ‌ ನಿರ್ಮಿಸಿರುವ “ಡೇರ್ ಡೆವಿಲ್‌ ಮುಸ್ತಾಫ಼” ನನ್ನು‌ ಕನ್ನಡಿಗರೆಲ್ಲರೂ ಒಮ್ಮೆ ಕಣ್ತುಂಬಿಕೊಂಡು ಇಂತಹಾ ಪ್ರಯತ್ನಗಳನ್ನು ಸ್ವಾಗತಿಸಿದಲ್ಲಿ ಕರುನಾಡಿಗಿರುವ” ಸರ್ವಜನಾಂಗದ ಶಾಂತಿಯ ತೋಟ” ಎಂಬ‌ ಹೆಸರು ಚಿರಸ್ಥಾಯಿಯಾಗಿ ನಿಲ್ಲಲು ಸಾಧ್ಯ.

ಕನ್ನಡಿಗರೇ…..ಕನ್ನಡಿಗರ ಈ ಸದಭಿರುಚಿಯ ಪ್ರಯತ್ನವನ್ನು ಹರಸಿ, ಬೆಂಬಲಿಸಿ, ಪ್ರೋತ್ಸಾಹಿಸಿ.

ಪ್ರೀತಿಯಿಂದ….


  • ಹಿರಿಯೂರು ಪ್ರಕಾಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading