“ಮದ್ಯಪಾನ ಪ್ರಿಯರ ಹೋರಾಟ ಸಂಘ” ದವರು ಸರ್ಕಾರಕ್ಕೆ ತಮ್ಮ ಅಹವಾಲುಗಳನ್ನು ನೀಡಲು ಕರೆದ ಸುದ್ದಿಗೋಷ್ಠಿ ಮಾಡಿದ್ದರು, ಆ ಗೋಷ್ಠಿಯಲ್ಲಿ ಕುಡುಕರ ನಿಗಮ ಮಾಡುವುದು, ಕುಡುಕರಿಂದ ಮನೆಯಲ್ಲಿ ಮಕ್ಕಳು ಸರಿಯಾಗಿ ಓದಲಾಗದಿರುವುದರಿಂದ ಮಕ್ಳಿಗೆ ೧೦% ಹಾಸ್ಟೆಲ್ ಗೆ ನೀಡುವುದು, ಸಾಕಷ್ಟು ಬಾಯಿತೆರೆದುಕೊಳ್ಳುವಂತಹ ಬೇಡಿಕೆಗಳಿದ್ದವು, ತಪ್ಪದೆ ಮುಂದೆ ಓದಿ ವಾಣಿ ಭಂಡಾರಿ ಅವರ ವಿಚಾರಧಾರೆಯಲ್ಲಿ ಮೂಡಿ ಬಂದ ಕುಡುಕರ ಕರಾಮತ್ತು…
ಶಿವಮೊಗ್ಗ ಗೌರ್ವಮೆಂಟ್ ಬಸ್ಟ್ಯಾಂಡಿಗೆ ಬಂದ ಬಸ್ಸು ತನ್ನ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಎಂದಿನಂತೆ ತನಗೆಂದೇ ಪ್ರತ್ಯೇಕಿಸಿದ ಜಾಗದಲ್ಲಿ ನಿಂತೊಡನೆ ಹಲವು ಪ್ರಯಾಣಿಕರು ದಡದಡನೆಂದು ಇಳಿದುಬಿಟ್ಟರು.
ಎಲ್ಲರು ಅವರವರ ಬೇಕು ಬೇಡಗಳಿಗನುಗುಣವಾಗಿ ಕೆಲವರು ಹೋಟೆಲ್ ಕಡೆ ನುಗ್ಗಿದರೆ ಇನ್ನು ಕೆಲವರು ಒಂದು ದಮ್ ಎಳೆಯಲೆಂದೆ ನಿಂತರು. ಹಾಗೆ ಹಲವರು ಮೂತ್ರ ವಿಸರ್ಜನೆ ಮಾಡಲು ಶೌಚಾಲಯ ಹುಡುಕಿ ಓಡಿದರು. ಎಲ್ಲರೂ ಇಳಿದ ನಂತರ ನಾವು ಸೀಟ್ ಹಿಡಿದು ಕುಳಿತೆವು. ಆಯಕಟ್ಟಿನ ಜಾಗ ಹಿಡಿದು ಕೂರುವುದು ಅಂದ್ರೆ ಒಂದು ರೀತಿಯಲ್ಲಿ ಯುದ್ಧ ಮಾಡಿದಂತೆಯೇ ಸರಿ. ಕೆಲವರಿಗೆ ಕಿಟಕಿ ಪಕ್ಕ ಸೀಟು ಬೇಕು ಅಂತಾದ್ರೆ ಇನ್ನು ಕೆಲವರಿಗೆ ಕೊನೆಯ ಸೀಟು ಆರಾಮಾಗಿ ಮಲಗಿ ಹೋಗಬಹುದು ಎಂಬುದು ಅವರ ಯೋಚನೆ.ಹಾಗೆ ಜಂಪ್ ಹೊಡೆದಾಗ ಆರಾಮಾಗಿ ಮಲಗಿದವರು ನೇರವಾಗಿ ಸ್ವರ್ಗಕ್ಕೂ ಕೂಡ ಹೋಗಬಹುದು ಅದು ಅವರವರ ಅದೃಷ್ಟದ ಮೇಲೆ ನಿಂತಿರುವ ವಿಚಾರ ಬಿಡಿ. ಹಾಗೆ ಹೀಗೆ ಅಲ್ಲಿ ಇಲ್ಲಿ ಇಣುಕಿ ತಡವಿಡುತ್ತಲೇ ಅಂತು ಇಂತು ಕಿಟಕಿ ಸರಿಯಾಗಿ ತೆಗೆದು ಹಾಕಲು ಬರುವಂತಹ ಎರಡು ಸೀಟ್ ಇರುವಂತಹ ಜಾಗ ನೋಡಿ ಕೂರುತ್ತಿದ್ದಂತೆ ಬಸ್ ನಾ ಡ್ರೈವರ್ ಬಂದು ಗಾಡಿ ಹತ್ತಿದ. ನಮ್ಮನ್ನು ಯಾವ ಲೋಕಕ್ಕೆ ಕರೆದೋಯ್ಯತ್ತಾನೆಂಬುದು ಮಾತ್ರ ಅವನಿಗೆ ಬಿಟ್ಟ ವಿಚಾರ.ಅದೇನೆ ಇರ್ಲಿ ಬಿಡಿ. ಕಂಡಕ್ಟರು ಶಿಳ್ ಹಾಕುತ್ತಿದ್ದಂತೆ ದಡಬಡಿಸಿ ಹೊರಗೆ ನಿಂತವರು ಕೂತವರು ಎದ್ದವರು ಸಂದಿಯಲ್ಲೆ ಕಣ್ ಕಣ್ ನೋಟಕ್ಕೆ ಕರಗಿದವರು ಎದ್ನೊ ಬಿದ್ನೊ ಎಂಬಂತೆ ಓಡೋಡಿ ಬಂದು ಗಾಡಿ ಹತ್ತಿದರು.
ನಾನು ನಮ್ಮನೆಯವರು ಬಸ್ಸಿನಿಂದ ಇಳಿದು ಹತ್ತಿದ ಪ್ರಯಾಣಿಕರನ್ನು ಸರಿಯಾಗಿ ವೀಕ್ಷಿಸಿದ್ದರಿಂದ ಒಂದು ವಿಕೆಟ್ ಮಿಸ್ ಹೊಡಿತಾ ಇದೆ ಅನಿಸ್ತು ನಂಗೆ. “ರೀ ಆ ಮನುಷ್ಯ ಬರ್ಲೇ ಇಲ್ವಲ್ರಿ” ಅಂದೆ ಅದಕ್ಕೆ ಅವರು “ಯಾರು,ತೂರಾಡ್ತಾ ಹೋದ್ನಲ್ಲ ಅವ್ನಾ?””ಅಂದ್ರು.ನಾನು ಹೂ ಅಂದೆ.
ಫೋಟೋ ಕೃಪೆ : thedrinksbusiness
ನಮ್ಮಿಬ್ಬರ ಮಾತನ್ನು ಕೇಳಿಸಿಕೊಂಡ ಕಂಡಕ್ಟರ್ “ಸರಾ ಅವ್ನು ಬರಲ್ಲ ಬಿಡಿ ಸರ್, ಅವ್ನಿಗೆ ಈಗ ಎಣ್ಣೆ ಬೇಕಾಗೇತೆ, ರಾತ್ರಿ ಹಾಕಿದ್ದು ಇಳಿಬೇಕಾದ್ರೆ ಬೆಳಗ್ಗೆ ಕೂಡ ಸ್ವಲ್ಪ ತಗೊಂಡ್ರೆ ತಲೆಭಾರ ಇಳಿತಂತೆ, ಅದ್ಕೆ ಎಣ್ಣೆ ಅಂಗ್ಡಿ ಹುಡ್ಕಂಡು ಹೋದಂಗೈತಿ ಬಿಡ್ರಿ ಸರಾ”.ಎಂದು ಚಿಂತಾಮಣಿಯಿಂದ ರಾತ್ರಿ ಹೊರಟ ಬಸ್ ನ ಕಂಡಕ್ಟರ್ ಕಿಚಾಯಿಸಿ ನಗಾಡುತ್ತಲೇ ಹೇಳಿದ. ನಿಜಕ್ಕೂ ನಂಗೆ ದಿಗಿಲಾಯ್ತು ಅವರ ಮಾತು ಕೇಳಿ. ಛೆ ಎಂತಹ ದುರಂತ ಹೀಗೆ ಬರಬಾರದಿತ್ತು ಬಸ್ಸಿನವರು ಆ ಕುಡುಕನನ್ನು ಬಿಟ್ಟು.ಅವನಿಗೂ ಹೆಂಡ್ತಿ ಮಕ್ಕಳು ಇರುತ್ತಾರಲ್ಲ ಅವನ ಕಥೆ ಏನಾಯ್ತೊ ಏನೊ?. ಅವನು ಬಸ್ ಹೊರಟ ತಕ್ಷಣ ಬರದೇ ಎತ್ಲಾಗೆ ಹೋದ ಪಾರ್ಟಿ? ಅಂದುಕೊಳ್ಳುತ್ತಾ ನೂರಾರು ಚಿಂತನೆಗಳೊಂದಿಗೆ ಶಿವಮೊಗ್ಗದಿಂದ ಹೊರಟ ನಂಗೆ ನನ್ನ ಯೋಚನಾ ಲಹರಿಯೊಳಗೆ ಗುಂಗೆ ಹುಳಗಳು ಕೊರೆದಂತೆ ಕೊರೆಸಿಕೊಳ್ಳುತ್ತ ಕೂತುಬಿಟ್ಟೆ. ನನ್ನ ವಿಪ್ಲವ ವದನವನ್ನು ಕಂಡ ಇವರು, “ಮಾರಾಯ್ತಿ ನಿನ್ನ ಗುಂಗೆ ಹುಳನೆಲ್ಲ ನನ್ನ ಕಡೆ ಮಾತ್ರ ವರ್ಗಾಯಿಸ್ಬೇಡ ಕಣೆ, ನಿಂಗೆ ಕೈ ಮುಗೀತಿನಿ”. ಅಂತ ನಾಟಕೀಯವಾಗಿ ನಟಿಸಲು ಶುರುವಿಟ್ಟಾಗ, ನಾನು ಹುಸಿ ಕೋಪದಿಂದ “ನಿಮ್ಮಜ್ಜಿ ಪಿಂಡ ಸುಮ್ಮನಿರ್ರಿ” ಅಂತ ಅನ್ನುತ್ತಲೇ “ರೀ,,ಪಾಪ ಕಂಡ್ರಿ ಅವ್ನು, ಆ ಮನುಷ್ಯನ ಹತ್ರ ದುಡ್ಡು ಇತ್ತೊ ಇಲ್ವೋ”?. ಹೀಗೆ ತರ್ಕ ರಹಿತವಾದ ತಲೆಬುಡ ಇಲ್ಲದ ನನ್ನ ಪ್ರಶ್ನೆಗಳಿಗೆ, “ಮಾರಾಯ್ತಿ ನಿನ್ನ,ನಿನ್ನೊಳಗಿನ ಆ ಗುಂಗೆ ಹುಳವನ್ನ ಒಟ್ಟಿಗೆ ಸೇರ್ಸಿ ಕಿಟಕಿಯಿಂದ ಹೊರಗೆ ದಬ್ತಿನಿ ನೋಡೀಗ” ಅಂತ ಅನ್ಬೇಕಾ.
“ಆಹಾಹಾ ಏನಂದ್ರಿ!, ನನ್ನ ಹೊರಗೆ ದಬ್ಬಿದ್ರೆ ನನ್ನಮ್ಮ ಅಷ್ಟು ಸುಲಭಕ್ಕೆ ಬಿಟ್ ಬಿಟ್ತಾಳೆ ಅನ್ಕೊಂಡ್ರಾ” ಅಂದೆ. “ಅಯ್ಯೋ ನಾನೇ ಸ್ವರ್ಗಕ್ಕೆ ಹೋಗಿ ನಿನ್ನ ಅಮ್ಮನ ಐ ಮೀನ್ ನನ್ ಅತ್ತೆ ಹತ್ರ ಹೋಗಿ, ಏನೋ ಮಿಸ್ ಆಯ್ತು ಅತ್ತೆ ಅಂತ ಹೇಳಿ ವಾಪಾಸ್ ನಿನ್ನೆ ಕರ್ಕೊಂಡು ಬರ್ತೀನಿ ಬಿಡು ಮಾರಾಯ್ತಿ ನೀನಿಲ್ದೆ ನಾನಿಲ್ಲ ಕಣೆ”. ಈಗ ಆ ಕುಡ್ಕನ ಬಗ್ಗೆ ಯೋಚಿಸ್ದೆ ಸುಮ್ನೆ ಇದ್ದರೆ ಸಾಕು ಅಂತ ನನ್ ಬಾಯಿ ಮುಚ್ಚಿಸ್ಬಿಟ್ರು.
ಪಯಣದ ಹಾದಿಯಲ್ಲಿ ಏನೇನೋ ಯೋಚನೆಗಳು ಬಿಟ್ಟರೂ ಬಿಡದಂತೆ ಕಾಡುತ್ತಿರುವಾಗಲೇ ನಮ್ಮನೆಯವರು ಇದೀಗ ಬಂದ ಬೇಕ್ರಿಂಗ್ ನ್ಯೂಸ್ ಅಂತ “ಮದ್ಯಪಾನ ಪ್ರಿಯರ ಹೋರಾಟ ಸಂಘ” ದವರು ಸರ್ಕಾರಕ್ಕೆ ತಮ್ಮ ಅಹವಾಲುಗಳನ್ನು ನೀಡಲು ಕರೆದ ಸುದ್ದಿಗೊಷ್ಟಿಯ ವಿಚಾರವನ್ನು ನೋಡುತ್ತಾ ಅವರ ಉದ್ದನೆಯ ಪಟ್ಟಿಯನ್ನು ನಂಗೆ ಹೇಳಿದ್ರು. ನಾ ಅವರ ಬೇಡಿಕೆಗಳನ್ನು ಕೇಳಿ ಶಾಕ್ ಮಾರ್ರೆ.
ಈ ಮದ್ಯಪ್ತಿಯರ ೩೦% ಹಣದಿಂದಾಗಿಯೇ ಸರ್ಕಾರ ನಡೆಯುತ್ತಿರುವ ಪ್ರಯುಕ್ತ ಬಾಟಲಿಯ ಮೇಲೆ ಒಂದು ಲಕ್ಷ ಇನ್ಸುರೆನ್ಸ್ ಮಾಡುವುದು. ಕುಡುಕರ ನಿಗಮ ಮಾಡುವುದು. ಅದರ ಮೂಲಕ ಒಂದು ಲಕ್ಷ ಮನೆ ವಿತರಣೆ ಹಾಗೂ ಕುಡುಕರಿಂದ ಮನೆಯಲ್ಲಿ ಮಕ್ಕಳು ಸರಿಯಾಗಿ ಓದಲಾಗದಿರುವುದರಿಂದ ಮಕ್ಳಿಗೆ ೧೦% ಹಾಸ್ಟೆಲ್ ಗೆ ನೀಡುವುದು.ಮತ್ತು ಮದ್ಯಪ್ರಿಯರಿಗೆ ಪಿಲ್ಟರ್ ನೀರು ಸ್ವಚ್ಛ ಶೌಚಾಲಯ ವ್ಯವಸ್ಥೆ ಇವರ ಕಿಡ್ನಿ ಲಿವರ್ ತೂತಾದಾಗ ನಾಲ್ಕರಿಂದ ಐದು ಲಕ್ಷ ಹಣ ಸರ್ಕಾರ ನೀಡಬೇಕು.ಜೊತೆಗೆ ಹೋಬಳಿ, ವಲಯ ಮಟ್ಟದಲ್ಲಿ ತ್ರೈ ಮಾಸಿಕ ಆರೋಗ್ಯ ತಪಾಸಣೆ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಕೇಳುತ್ತಿದ್ದಂತೆ ಅದುವರೆಗೂ ನನ್ನೊಳಗಿದ್ದ ನಶೆ ಜರ್ರನೆ ಇಳಿದು ಹೋಯಿತು. ಅದು ಸಾಲದೆಂಬಂತೆ ನಮ್ಮನೆಯವರು,”ನಿಂದೆನಾದ್ರೂ ಅವರ ಪರವಾದ ವಕಾಲತ್ತಿನ ಬೇಡಿಕೆ ಇದ್ದರೆ ಸರ್ಕಾರಕ್ಕೆ ಸಲ್ಲಿಸಬಹುದು ನೋಡಮ್ಮ” ಅನ್ನೊದಾ ಮಾರ್ರೆ. ನನ್ನ ಪಿತ್ತ ನೆತ್ತಿಗೇರಿದ್ದು ಆಗಲೇ ಇಳಿದ್ದಾಗಿತ್ತು. ಮತ್ತೆ ನಶೆ ಏರಿಸಿಕೊಳ್ಳೋಕೆ ಆ ಕುಡುಕನ ತರ ಇನ್ಯಾವುದಾದ್ರೂ ಎಣ್ಣೆ ಅಂಗ್ಡಿ ಹುಡ್ಕೊಂಡು ಹೋಗೋಣ ಅಂದ್ರೂ ನಂಗೆ ಕುಡಿಯೋ ಅಭ್ಯಾಸನೂ ಇಲ್ವಲ್ಲ ಅಂತ ಮನಸಲ್ಲೇ ಮಂಥನ ಮಾಡ್ತಾ ಕೂತ್ಕೊಂಡೆ.
ಫೋಟೋ ಕೃಪೆ : bristolpost
ಆದ್ರೂ ಈ ಕುಡುಕರ ಕರಾಮತ್ತು ಅವರ ಧೈರ್ಯ ಮೆಚ್ಲೇ ಬೇಕು ಅನಿಸ್ತು ಕಣ್ರೀ. ಮುಂದೊಂದು ದಿನ ಇನ್ನು ಏನೇನೊ ಬೇಡಿಕೆಯ ಪಟ್ಟಿ ಇಡ್ತಾರೋ ಏನೊ ಅಂತ ಅನಿಸದೆ ಇರ್ಲಿಲ್ಲ ನಂಗೆ. ನಾಳೆ ನಮ್ಮ ಮಕ್ಕಳಿಗೆ ಕೆಲಸ ಕೊಡಬೇಕು ಅಂತಾನೋ, ನಾವು ಕುಡಿದು ಕುಡಿದು ಸರ್ಕಾರ ನಡೆಸೋಕೆ ದುಡ್ಡು ಇನ್ವೆಸ್ಟ್ಮೆಂಟ್ ಮಾಡಿರುವ ಪ್ರಯುಕ್ತ ನಾವು ಸತ್ತ ನಂತರ ಪಿಂಚಣಿ ಕೊಡಿ ಎನ್ನಬಹುದೇನೊ,.
ಹಾಗೆ ಪ್ರತಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ನಗರಸಭೆ ಹೀಗೆ ಎಲ್ಲಾ ಕಡೆಯಿಂದಲೂ ಪಕ್ಕಾ ಕುಡಕರೆ ನಿಂತು ಆಯ್ಕೆಯಾಗಿ ಬರಬೇಕು ಎಂಬ ಅಜೆಂಡವನ್ನು ತರಬಹುದೇನಪ್ಪ,ಯಾಕಂದ್ರೆ ಅವರ ನಿಗಮವನ್ನು ನಿಭಾಯಿಸಲು ಬೇಕಲ್ವಾ ಒಬ್ರೊ ಇಬ್ರೋ ಸದೃಡ ಮದ್ಯಪ್ರಿಯಾ ಮಹಾನ್ಚೇತನರು. ಅದರ ಜೊತೆಗೆ ಕುಡುಕರು ಸಾಗುವ ದಾರಿಯಲ್ಲಿ ಅಡ್ಡಾದಿಡ್ಡಾದ ಹೆಜ್ಜೆಯನ್ನು ಸರಿದೂಗಿಸುವ ಸಲುವಾಗಿ “ಮದ್ಯಪ್ರಿಯರ ರಸ್ತೆ” ಎಂಬ ನೇಮ್ ಪ್ಲೇಟ್ ಕೊಟ್ಟು ಹೊಸ ರಸ್ತೆ ಬೇಕು ಎಂದು ಪಟ್ಟು ಹಿಡಿದು ಧರಣಿ ಕೂರಬಹುದೇನಪ್ಪಾ. ಕುಡುಕರ ಖಾನ್ದಾನುಗಳಲ್ಲಿ ಹಾಗೂ ಕುಡುಕರ ಸಂಘ ಸಂಸ್ಥೆಗಳಲ್ಲಿ ಅತಿ ಹೆಚ್ಚು ಕುಡಿತದಿಂದ ಸಾಧನೆಗೈದ ಕುಡುಕರಿಗೆ ಸಮಾಜದ ಸ್ವಸ್ಥ ಹಾಳು ಮಾಡಿದ ಕೀರ್ತಿ ಶಿಖರ ಎಂಬ ಬಿರುದು ಬಾವಲಿಗಳು ಬೇಕೆನ್ನಬಹುದೇನೊ ಯಾರಿಗೆ ಗೊತ್ತು?.
ಹಾಗೂ “ಮದ್ಯಪಾನ ಪ್ರಿಯಭೂಷಣ”
(ಕುಡುಕ ಭೂಷಣ) “ಮದ್ಯಪಾನ ಪ್ರಿಯವಿಭೂಷಣ” (ಕುಡುಕ ವಿಭೂಷಣ) “ಕುಡುಕಾದಿ ಕುಡುಕಾ ಮದ್ಯಪ್ರಿಯಾ ಮಾರ್ತಾಂಡ” ಹೀಗೆ ನಾನಾ ತರದ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಬೇಕು ಎಂದು ಹಕ್ಕೊತ್ತಾಯ ಮಂಡನೆಯನ್ನು ಮಾಡಬಹುದೇನೋ ಆಲೋಚನೆ ಬರುತ್ತಿದ್ದಂತೆ ಮನಸ್ಸು ಹಳವಂಡಗೊಂಡಿತು. ಬಾರದ ನಗುವೊಂದು ಪ್ರಯತ್ನ ಪೂರಕವಾಗಿ ಮುಖದಲ್ಲಿ ಮೂಡಿಸಿಕೊಂಡೆ. ಬೀರೂರು ಬೀರೂರು ಎಂಬ ಕಂಡಕ್ಟರ್ ಧ್ವನಿಯ ಸದ್ದಿನಿಂದಾಗಿ ಅಂಟಿದ ಅಮಲೆಲ್ಲ ಸಂಪೂರ್ಣವಾಗಿ ಇಳಿದಿದ್ದರೂ ದಿಮ್ಮೆನ್ನುವ ತಲೆಯನ್ನು ಒಮ್ಮೆ ಒತ್ತಿಕೊಂಡು ನಮ್ಮನೆಯವರ ಕೈ ಹಿಡಿದು ಬಸ್ಸಿನಿಂದ ನಿಧಾನವಾಗಿ ಕೆಳಗಿಳಿದು ಬಿಟ್ಟೆ.
- ವಾಣಿ ಭಂಡಾರಿ