ಕಾಡಿನ ಬದುಕಿನಲ್ಲಿ ಸಾಕಷ್ಟು ಬಾರಿ ಹಗಲು ರಾತ್ರಿ ಕಳೆದಿದ್ದೇನೆ, ಆಗ ಕಾಡು ಪ್ರಾಣಿಗಳನ್ನು ಎದುರಾಗಿದ್ದೇನೆ, ಆದರೆ ಚುಕ್ಕೆ ಚಿರತೆಯಷ್ಟು ಯಾವ ಚಿರತೆಯು ನನಗೆ ಇಲ್ಲಿಯವರೆಗೂ ಕಾಡಲಿಲ್ಲ. ಕಾಡಿನ ನಡುವೆ ಇರುವ ಒಂದು ಸುಮಧುರ ಬಾಂಧವ್ಯದ ಕುರಿತು ಅರಣ್ಯ ಸಿಬ್ಬಂದಿ ಗಿರಿವಾಲ್ಮೀಕಿ ಅವರು ಬರೆದ ಒಂದು ಸುಂದರ ಲೇಖನ ತಪ್ಪದೆ ಓದಿ …
ಅಪ್ಪಟ ಡೆಕ್ಕನ್ನಿನ ಬಿಸಿಲ ಬಯಲಿನಲ್ಲಿ ಹುಟ್ಟಿ ಬೆಳೆದ ನಾನು. ಪಶ್ಚಿಮ ಘಟ್ಟಗಳ ಕಾಡು ಸೇರಿದ ನಂತರ ನಮ್ಮೂರಿನ ಭೌಗೋಳಿಕ ದೃಶ್ಯಾವಳಿಗಳ ಹಾಗೂ ಅಲ್ಲಿಯ ಅಳಿವಿನಂಚಿನ ಶ್ರೀಮಂತ ಕುರುಚಲು ಕಾಡಿನ ಜೀವವೈವಿಧ್ಯತೆಯ ಬಗ್ಗೆ ಸಾದ್ಯಂತವಾಗಿ ಅರಣ್ಯಾಧಿಕಾರಿ ಪ್ರಕಾಶ್ ಎಸ್ ಎಚ್ ಅವರಿಗೆ ವಿವರಿಸುತ್ತಿದ್ದೆ. ತುಂಗಭಧ್ರಾ ನದಿ ನಮ್ಮೂರಿನ ಚಿರತೆ,ಕರಡಿ, ತೋಳ ಹಾಗೂ ಅಲ್ಲಿಯ ನೀರು ನಾಯಿ,ಕಬ್ಬೆಕ್ಕು ಮತ್ತು Schedule-1 ರಲ್ಲಿ ಬರುವ ಪ್ರಾಣಿಗಳ ಸಂರಕ್ಷಣೆಯ ಸವಾಲಿನ ಬಗ್ಗೆ ಮಾತನಾಡುತ್ತ ಖಾನಾಪುರ ತಾಲೂಕಿನ ಜಾಂಬೋಟಿ ಅರಣ್ಯ ಪ್ರದೇಶಕ್ಕೆ ಅಂಟಿಕೊಂಡಿರುವ ಚೋರ್ಲಾ ಕಣಿವೆಯಲ್ಲಿ ಕೆಲಸದ ನಿಮಿತ್ತ ಅಲೆಯುತ್ತಿದ್ದೆವು.
ತುಂಬು ತನ್ಮಯತೆಯಿಂದ ನನ್ನ ಡೆಕ್ಕನ್ ಬಯಲಿನ ಅನುಭವಗಳನ್ನು ಆಲಿಸುತ್ತಾ ನಡೆಯುತ್ತಿದ್ದ ಅವರು ಗಕ್ಕನೇ ನಿಂತು ಸಮಯ ನೋಡಿಕೊಂಡು, ಗಿರಿ ತಡವಾಯಿತು ಆದಷ್ಟೂ ಬೇಗ ಈ ಬೆಟ್ಟದ ಕಿಬ್ಬಿಯಿಂದಿಳಿದು ಕ್ಯಾಂಪಿಗೆ ಹೋಗುವ ಎಂದರು.ಕಾರಣ ಸಂಜೆಯಾಗುತ್ತಲೇ ಕಾಡಿಗೆ ಜೀವ ಬರತೊಡುಗುತ್ತದೆ.!(ಮೃಗೀಯ ಪ್ರಾಣಿಗಳ ಸಂಚಾರ ಆರಂಭವಾಗುತ್ತದೆ) ಮಬ್ಬು ಕತ್ತಲೆಯಲ್ಲಿ ನಮ್ಮ ಕಾಡುದಾರಿ ಸಾಗತೊಡಗಿತು. ಅಷ್ಟೇನೂ ಪರಿಚಿತವಲ್ಲದ ಜಾಂಬೋಟಿ ಅರಣ್ಯ ಪ್ರದೇಶವು ನಾನು ಇಷ್ಟು ವರ್ಷಗಳಲ್ಲಿ ನೋಡಿದ ಕಾಡುಗಳಲ್ಲೇ ಭಿನ್ನವಾದ ಅತ್ಯಂತ ನಿರ್ಮಾನುಷವಾದ ಭೌಗೋಳಿಕ ಪ್ರದೇಶ. ಇಲ್ಲಿಗೆ ಬಂದು ಕಾಡೊಳಗೆ ಅಲೆಯುವ ಆರಂಭದಿಂದಲೂ ನನಗೆ ಒಂದು ತೆರನಾದ ಅವ್ಯಕ್ತ ಭಯ,ಆತಂಕ,ದ್ವಂದ್ವ ಈ ಕಾಡುಗಳಲ್ಲಿ ಸುತ್ತುತ್ತಿದ್ದ ನನ್ನ ಗಮನಕ್ಕೆ ಬರುತ್ತಿತ್ತು.
ಫೋಟೋ ಕೃಪೆ : fao.org
ಈ ವಿನಾಕಾರಣ ಯೋಚನೆಗಳಲ್ಲೇ ಸಮಯ ಸರಿಯುತ್ತಿತ್ತು. ಕ್ಯಾಂಪಿನ ಹಾದಿಯುದ್ದಕ್ಕೂ ಮೈ ನಡುಗಿಸುವ ಚಳಿ. ನಾವು ನಿಂತಿದ್ದ ಉತ್ತರ ದಿಕ್ಕಿನ ಚೋರ್ಲಾ ಕಣಿವೆಯನ್ನು ದಟ್ಟ ಮಂಜು ಆವರಿಸಿ ಹಾದಿ ಮಸುಕಾಗತೊಡಗಿತು. ಕಾಡಿನ ಮಬ್ಬು ಕತ್ತಲಿಗೆ ಕಣ್ಣು ಹೊಂದಿಸಿಕೊಳ್ಳುತ್ತಾ ಇಬ್ಬರು ನಡೆಯತೊಡಗಿದೆವು. ಕಾಡಿನ ಹಾದಿಯ ಎಡ-ಬಲದಲ್ಲೂ ಲಂಟಾನ ಜಿಗ್ಗು,ಪೆಳೆಗಳು, ಹಾದಿಯ ಉದ್ದಕ್ಕೂ ಹಳದಿ ಬಣ್ಣಕ್ಕೆ ತಿರುಗಿದ ಮರಗಳ ಎಲೆಗಳು. ಇವೆಲ್ಲವೂಗಳ ಮೇಲೆ ಮಲಪ್ರಭಾ ನದಿಯ ಉಗಮ ಸ್ಥಾನವಾದ ಮರಾಠಿ ಪ್ರಾಬಲ್ಯದ ಕನ್ನಡ ನೆಲದ ಕಣಕುಂಬಿ ಗ್ರಾಮ. ಜಾಂಬೋಟಿ ಗ್ರಾಮದಿಂದ ಅನತಿ ದೂರದಲ್ಲಿರುವ ಕನ್ನಡವೇ ಗೊತ್ತಿಲ್ಲದ ಗೌಳಿಯಂಥಾ ಒಕ್ಕಲಿಗರೇ ವಾಸಿಸುವ ದಟ್ಟ ಕಾಡಿನ ತಪ್ಪಲಿನ ಒಂದು ಪುಟ್ಟ ಹಳ್ಳಿ. ಈ ಹಳ್ಳಿಯ ಕಳ್ಳ ಬೇಟೆ ತಡೆ ಶಿಬಿರದಲ್ಲಿ ನಮ್ನ ವಾಸ್ತವ್ಯ ನಿಗದಿಯಾಗಿತ್ತು.
ಲಗುಬಗೆಯಿಂದ ಹೊರಟ ನಮಗೆ ಕರಡಿ,ಆನೆಗಳ ಭಯ ಕಾಡುತ್ತಿದ್ದರಿಂದ ಎಷ್ಟು ಸಾಧ್ಯವೋ ಅಷ್ಡು ಜೋರಾಗಿ ನಡೆಯತೊಡಗಿದೆವು. ಒದ್ದೆಯಾದ ನೆಲ ಆರಂಭವಾಗಿ ಜಾನುವಾರುಗಳ ಹೆಜ್ಜೆಯ ಗುರುತು ಮೂರುದಾರಿ ಕೂಡುವ ಜಾಗದಲ್ಲಿ ಅಚ್ಚೊತ್ತಿದ್ದರಿಂದ ಕ್ಯಾಂಪಿಗೆ ಹೋಗುವ ಸರಿಯಾದ ಮಾರ್ಗದ ಬಗ್ಗೆ ಗೊಂದಲ ಉಂಟಾಗಿತ್ತು.ಒಂದು ತಕ್ಷಣ ಇಬ್ಬರು ನಿಂತಲ್ಲೇ ಧೇನಿಸಿ ನಮ್ಮ ಎಡಕ್ಕೆ ನೀರು ಹರಿದು ಹೋಗುವ ಚಿಕ್ಕ ತೊರೆಯ ಜಾಡನ್ನು ಬಳಸಿ ಪ್ರಯಾಣ ಮುಂದುವರೆಸಿದೆವು. ಬೆಟ್ಟ ಇಳಿದು ಸುಮಾರು ಎರಡು ತಾಸಗಿದ್ದರಿಂದ ಗಾಳಿಯೇ ಆಡದ ನಿತ್ಯಹರಿದ್ವರ್ಣ ಕಾಡುಗಳಲ್ಲಿ ದೇಹ ನಿರ್ಜಲೀಕರಣಕ್ಕೆ ಒಳಗಾಗಿತ್ತು.
ಫೋಟೋ ಕೃಪೆ : ekaxp
ಪೊಡವಿ ಬೆಳಗಿದ ಪಶ್ಚಿಮದ ಸೂರ್ಯ ಕಣಿವೆಯೊಳಗೆ ಇಳಿಯತೊಡಗಿದ.ಕಾಡು ಮೆಲ್ಲನೇ ಬಂಗಾರ ಬಣ್ಣಕ್ಕೆ ವೇಷ ಬದಲಿಸತೊಡಗಿತು. ಸೂರ್ಯನ ಕೊನೆಯ ಕಿರಣ ಮಾಯವಾಗಿ ಕಾಡು ಧೀರ್ಘ ಮೌನ ಧರಿಸಿದ್ದರಿಂದ ಸಹಿಸಲಾಸಾಧ್ಯವಾದ ಮೌನ ಎದೆಯಲ್ಲಿ ತೌಡು ಕುಟ್ಟುತ್ತಿತ್ತು. ದೂರದ ಚೋರ್ಲಾ ಕಣಿವೆಯ “ವಿರಡೇ” ಜಲಪಾತದ ನೆತ್ತಿಯ ಮೇಲೆ ಹೈವೇ ಬದಿಯ ದೂರದ ಡಾಬಾಗಳಲ್ಲಿನ ಮಿಣುಕು ದೀಪದಂತೆ ನಕ್ಷತ್ರಗಳು ಜಲಪಾತದ ಮೇಲೆ ಮಿನುಗತೊಡಗಿದವು.
ಇದ್ದಕ್ಕಿದ್ದಂತೆ ಇರುಳ ಹಕ್ಕಿಗಳ ಕೇಕೆ ಕಾಡಿನಾಳದಲ್ಲಿ ಆರಂಭವಾದೊಡನೆ ಪ್ರಕಾಶ್ ಸರ್ ತದೇಕತೆಯಿಂದ ಧ್ವನಿ ಬಂದ ದಿಕ್ಕಿನೆಡೆ ಕಿವಿಯಾನಿಸಿ ಶಬ್ದ ಕೇಳಿ, ಗಿರಿ ಆದಷ್ಟೂ ಬೇಗ ಕಣಿವೆಯ ವ್ಯಾಪ್ತಿಯಿಂದ ಹೊರ ನಡೆಯಬೇಕು. ಲಘುಬಗೆಯಿಂದ ಹೆಬ್ಬಾವಿನಂಥ ಹಾದಿಯಲ್ಲಿ ನಡೆಯುತ್ತಾ ಸಾಗಲಾಗಿ, ಒಮ್ಮೆಲೇ ಹಲ್ಲುಗಾವಲಿನ ಬಯಲು ನಮಗೆ ಅಡ್ಡವಾಗಿ, ಅಲ್ಲಿಂದ ನಾವು ನಿಂತ ಜಾಗದಿಂದ ಕೂಗಳತೆಯ ದೂರದಲ್ಲಿ ಸುಮಾರು 35-40 ಅಡಿಯ ದಿಬ್ಬದ ಮೇಲೆ ಅಸ್ಪಷ್ಟ ಚಲನೆಯನ್ನು ಕಂಡು ಪ್ರಕಾಶ್ ಸರ್ ಸದ್ದು ಮಾಡಬೇಡವೆಂದು ಬಾಯಿಯ ಮೇಲೆ ಬೆರಳಿಟ್ಟು ಸುಮ್ಮನಿರುವಂತೆ ನನಗೆ ಸೂಚಿಸಿದರು.
ಏ… ಅಲ್ನೋಡು ಎಂದಾಗ ಆ ಕತ್ತಲೆಗೆ ನನ್ನ ಕಣ್ಣುಗಳನ್ನು ಹೊಂದಿಸಿಕೊಳ್ಳುತ್ತಾ ದೃಷ್ಟಿ ನೆಟ್ಟು ನೋಡಿದರೆ, ಸಣ್ಣ ಪ್ರಮಾಣದ ಕದಲಿಕೆ. ಸ್ವಲ್ಪವೂ ಅಲುಗದೇ ಮತ್ತೆ ದೃಷ್ಟಿ ಕಿರುಕಿಸಿ ನಿರ್ದಾಕ್ಷಿಣ್ಯ ಕತ್ತಲಲ್ಲಿ ನೋಡಿದರೆ ಬಂಗಾರದ ಬಣ್ಣದ ಕಪ್ಪು ಚುಕ್ಕೆಯ ದೈತ್ಯನೊಬ್ಬ ಯಾವ ಗಡಿ ರೇಖೆಗಳ ಅಂಕೆಯಿಲ್ಲದೇ ನೀರ್ಭೆಡೆಯಿಂದ ಸಂಚರಿಸುತ್ತಿದ್ದರೆ ನನ್ನ ಜೀವ ಬಾಯಿಗೆ ಬಂದಿತ್ತು. ಅದರ ಠೀವಿ, ನಡಿಗೆ,ಗಾಂಭೀರ್ಯ,ರುದ್ರ ಭೀಕರ ಸೌಂದರ್ಯವನ್ನು ವರ್ಣಿಸಲು ಕೂತರೆ ಅಕ್ಷರಗಳು ಕೂಡಾ ಸೋಲುವಂತಹ ಅನನ್ಯ ಸೌಂದರ್ಯದ ಧೀಮಂತಿಕೆ ಅದಕ್ಕೆ ಪ್ರಾಪ್ತಿಯಾಗಿತ್ತು.
ಫೋಟೋ ಕೃಪೆ : google
ಒಂದೆರೆಡು ಫೋಟೋಗಳನ್ನು ಪ್ರಕಾಶ್ ಅವರು ಕ್ಲಿಕ್ಜಿಸಿ ಅಲ್ಲಿಂದ ಹೊರಟರು, ಆ ಚುಕ್ಕೆ ಚಿರತೆ ನಮ್ಮಿಬ್ಬರನ್ನು ಸುಮಾರು ಗಂಟೆಗಳಿಂದ ನಮಗೆ ತಿಳಿಯದೆ ಹಿಂಬಾಲಿಸಿ ಹತ್ತಿರದಿಂದ ನಮ್ಮನ್ನು ಗಮನಿಸಿದೆ. ಹಾಗೂ ನಮ್ಮಿಬ್ಬರ ಮಾತುಕತೆಯ ಗಲಾಟೆಯಿಂದ ಭೀತಿಗೊಂಡು ಅದು ದೂರ ಸರಿದಿದೆ ಎಂದರು.! ಚಿರತೆಯ ಮೈಯಿಯ ಮಾಂತ್ರಿಕತೆಗೆ ಸಿಕ್ಕು ಬೆಳದಿಂಗಳ ಬೆಳಕಿನಲ್ಲಿ ಇಬ್ಬರು ಕ್ಯಾಂಪಿನ ಕಡೆಗೆ ಹೊರಟಾಗ ಸಂಪೂರ್ಣ ಕತ್ತಲಾಗಿತ್ತು. ಕಾಲ ಬುಡದಲ್ಲಿ ಮಹಾದಾಯಿ ತಣ್ಣಗೆ ಗೋವೆಯ ಕಡೆಗೆ ಓಡತೊಡಗಿದ್ದಳು. ಕ್ಯಾಂಪ್ ಹತ್ತಿರ ವಾಗತೊಡಗಿತು. ಬಿದಿರ ಅಟ್ಟಣಿಗೆಯ ಮೇಲೆ ಕೂತು ಚಳಿಗೆ ಬೆಂಕಿ ಕಾಯಿಸುತ್ತಾ ಜಾಂಬೋಟಿ ಕಾಡಿಗೆ ಮಾತ್ರ ಸಿಮೀತವಾಗಿರುವ ರೋಟನ್ಡ್ ಟೇಲ್ಡ್ ಬಾವಲಿಗಳ ಬಗ್ಗೆ ಮಬ್ಬು ಬೆಳಕಿನಲ್ಲಿ ಅರಣ್ಯಾಧಿಕಾರಿ ಪ್ರಕಾಶ್ ಮತ್ತು ನಾನು ಅಲ್ಲಿಯ ಸಿಬ್ಬಂದಿಯವರೊಂದಿಗೆ ಬಾವಲಿಗಳ ಬಗ್ಗೆ ಮಾಹಿತಿ ಕೇಳುತ್ತಿದ್ದೆವು.
ನನ್ನೀಡೀ ಕಾಡಿನ ಬದುಕಿನಲ್ಲಿ ಸಾಕಷ್ಟು ಬಾರಿ ಕಾಡು ಪ್ರಾಣಿಗಳಿಗೆ ಕಾಡಿನ ನಡುವೆ ಹಗಲು-ರಾತ್ರಿಯ ಹೊತ್ತು ಸಾಕಷ್ಟು ಬಾರಿ ಮುಖಾಮುಖಿಯಾಗಿ ಎದುರಾದರೂ, ಈ ಚುಕ್ಕೆ ಚಿರತೆಯಷ್ಟು ಯಾವ ಚಿರತೆಯು ನನಗೆ ಇಲ್ಲಿಯವತೆಗೂ ಕಾಡಲಿಲ್ಲ. ಈಗಿನ ದಶಕಗಳಲ್ಲಿ ಮಾನವ – ವನ್ಯಜೀವಿ ಸಂಘರ್ಷದಲ್ಲಿ ಹುಲಿಯಂತೆ ಅದರ ಸಂಖ್ಯೆ ಕ್ಷೀಣಿಸುತ್ತಿರುವಾಗ, ಹೀಗೆ ಕಾಡಿನಲ್ಲಿ ಬೆಳದಿಂಗಳ ಹೊತ್ತಿನಲ್ಲಿ ಏಕಾಂಗಿಯಾಗಿ ಕಾಣಿಸುವ ಚಿರತೆಗಳ ಸೌಂದರ್ಯ ಮಾತ್ರ ವರ್ಣಿಸಲಸದಳ. ಕಾಡ ಬೆಳದಿಂಗಳ ಮಬ್ಬಿನಲ್ಲಿ ನಿರ್ಮಾನುಷುವಾದ ಕಣಿವೆಯಲ್ಲಿ ನೋಡಿದ ಆ ಚುಕ್ಕೆ ಮಹಾಶಯ ನನ್ನ ನೆನಪಿನ ಸ್ಮೃತಿ ಪಟಲದಲ್ಲುಳಿದು ನನ್ನನ್ನು ವಿಭಿನ್ನ ರೋಮಾಂಚನಕ್ಕೆ ಈಡು ಮಾಡಿದ್ದ. ಈ ಕಪ್ಪು ಚುಕ್ಕೆಯ ಚಿರತೆ ಮಾತ್ರ ನನ್ನ ಕಾಡಿನ ಅನುಭವವನ್ನು ಇನ್ನಷ್ಟು ಶ್ರೀಮಂತಗೊಳಿಸಿತ್ತು.ಅದರ ಕಣ್ಣು,ನಿರ್ಲಿಪ್ತ ನೋಟ,ಸ್ಥಿರತೆಯಿಂದ ಹಾದಿಯುದ್ದಕ್ಕೂ ನನಗ್ಯಾರು ಸಾರಿಸಾಟಿ ಎಂಬಂತ್ತಿತ್ತು.
ಪ್ರಕಾಶ್ ಅವರ ಕಾಡಿನ ಅನುಭವ ನಾನು ಕೇಳುತ್ತಾ ಕ್ಯಾಂಪಿನೆಡೆಗೆ ಇಬ್ಬರು ಚಿರತೆಯ ಧ್ಯಾನದಲ್ಲೇ ಕಣಿವೆಯಿಳಿದು ಕತ್ತಲೆಯ ಕ್ಯಾಂಪಿನೆಡೆಗೆ ಬರುತ್ತಿದ್ದರೆ, ರೋಟನ್ಡ್ ಟೇಲ್ಡ್ ಬಾವಲಿಗಳು ಮಿಂಚಿನ ವೇಗದಲ್ಲಿ ಜಾಂಬೋಟಿ ಕಣಿವೆಯಲ್ಲಿ ಗಿರಕಿ ಹೊಡೆಯತೊಡಗಿದವು.
ಎದುರಿನ ಮರದ ಕೊಂಬೆಯ ಮೇಲೆ ಗೂಬೆಯೊಂದು ನಮ್ಮನ್ನು ನೋಡುತ್ತಾ ನಿರ್ಲಕ್ಷಿಸಿ ಕತ್ತು ತಿರುಗಿಸಿತು.
- ಗಿರಿವಾಲ್ಮೀಕಿ