‘ಒತ್ತಾಸೆ’ ಕಾದಂಬರಿ ಪರಿಚಯ – ರಘುನಾಥ್ ಕೃಷ್ಣಮಾಚಾರ್

ಲೇಖಕ ಕೆ.ಸತ್ಯನಾರಾಯಣ ಅವರ ‘ಒತ್ತಾಸೆ’ ಕಾದಂಬರಿ ಕುರಿತು ಲೇಖಕ ರಘುನಾಥ್ ಕೃಷ್ಣಮಾಚಾರ್ ಅವರು ಬರೆದ ಪುಸ್ತಕ ಪರಿಚಯವನ್ನು ತಪ್ಪದೆ ಓದಿ….

ಪುಸ್ತಕ : ಒತ್ತಾಸೆ
ಲೇಖಕರು : ಕೆ. ಸತ್ಯನಾರಾಯಣ
ಪ್ರಕಾಶಕರು : ಗೀತಾಂಜಲಿ ಪ್ರಕಾಶನ
ಪ್ರಕಾರ : ಕಾದಂಬರಿ

ಹಾಮಾನಾ ಅವರ ಅಂಕಣಗಳ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ,’ ಅದು ಒಂದು ಸಾಹಿತ್ಯ ಪ್ರಕಾರವೆ ಅಲ್ಲ’ ಎನ್ನುವವರೆಗೆ ಕನ್ನಡ ಲೇಖಕರು ಅವರ ಮೇಲೆ, ಅಕಾಡೆಮಿಯ ಮೇಲೆ ಮುಗಿಬಿದ್ದರು. ಪ್ರಜಾವಾಣಿ ಪತ್ರಿಕೆಯಲ್ಲಿ ಅವರ ಅಂಕಣಗಳ ಬರೆಯಲು ಕೇಳಿ ಕೊಂಡಾಗ ಎಷ್ಟು ಕೊಡುವಿರಿ ಒಂದು ಅಂಕಣಕ್ಕೆ? ಎಂದು ಕೇಳಿದರಂತೆ ಪ್ರಜಾವಾಣಿಯವರಿಗೆ. ಆಗ ಇವರು ನಾನೂರು ಎಂದಾಗ ಐದನೂರು ಕೊಟ್ಟರೆ ಮಾತ್ರ ಬರೆಯಲು ಸಾಧ್ಯ’ ಎಂದು ಹಾಮಾನಾ ಷರತ್ತು ಹಾಕಿದರು. ಅದಕ್ಕೆ ಇವರು ಒಪ್ಪಿದ ಮೇಲೆ ಅವರ ಅಂಕಣ ಪ್ರಾರಂಭವಾಯಿತು. ಏಕೆಂದರೆ ಅಂಕಣ ಬರೆಯುವುದು ಒಂದು ಸವಾಲು. ಪ್ರತಿವಾರ ತಪ್ಪದೆ ಬರೆಯಲು ಅಪಾರವಾದ ಅರಿವು, ಅನುಭೂತಿ ಮತ್ತು ಶಿಸ್ತುಗಳು ಬೇಕಾಗುತ್ತವೆ. ಅವರು ಬರೆಯುತ್ತಿದ್ದ ವಿಷಯ ವೈವಿಧ್ಯ ಇಂದಿಗೂ ಯಾರನ್ನಾದರೂ ದಂಗುಬಡಿಸುತ್ತದೆ. ಅಂದಿನಿಂದ ಇಂದಿನವರೆಗೂ ಕಾವೇರಿಯಲ್ಲಿ ನೀರು ಹರಿದು ಹೋಗಿದೆ. ಮುಂದೆ ಕೀರ್ತಿನಾಥ ಕೋಟಿಯವರು , ಸಿದ್ಧಲಿಂಗಪಟ್ಟಣಶೆಟ್ಟಿಯವರು ತಮ್ಮ ಅಂಕಣಗಳಲ್ಲಿ ಅದರ ಹರಹನ್ನು ವಿಸ್ತರಿಸಿದರು. ನಂತರ ಬೇರೆ ಬೇರೆ ಪತ್ರಿಕೆಗಳು ಅಂಕಣಗಳನ್ನು ಪ್ರಾರಂಭ ಮಾಡಿದವು. ಬರೆಯಬಲ್ಲ ಲೇಖಕರ ಮನವೊಲಿಸಿ ಅಂಕಣ ಬರೆಸುವುದು ಒಂದು ಸಾಹಸ.

ಉದಯ ವಾಣಿಯಲ್ಲಿ ಎಚ್.ಎಸ್.ವಿ. ಓ.ಎಲ್.ಎನ್ ಮುಂತಾದವರು ಬರೆಯುತ್ತಿದ್ದ ಅಂಕಣ ಬರಹಗಳು ಇಂದಿಗೂ ನನ್ನ ನೆನಪಿನಲ್ಲಿ ಉಳಿದಿವೆ. ಅವರ ಸಾಲಿಗೆ ಈ ಅಂಕಣಗಳ ಬರಹಗಾರರಾದ ಶ್ರೀ ಸತ್ಯನಾರಾಯಣ ಅವರು ಸೇರುತ್ತಾರೆ . ಶಾಂತಿನಾಥ ದೇಸಾಯಿಯವರ ಕುರಿತು ಬರೆದ ಅಂಕಣ, ಅವರಿಗೆ ಇದ್ದ ಆಧುನಿಕತೆಯ ಮತ್ತು ನವ್ಯತೆಯ ಪರಿಕಲ್ಪನೆಗಳ‌ ಸ್ಪಷ್ಟ ಗ್ರಹಿಕೆ ಮತ್ತು ಇಡಿಯಾಗಿ ನವ್ಯಕ್ಕೆ ತಮ್ಮನ್ನು ಕೊಟ್ಟುಕೊಂಡು., ಅದನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಿಸಿದರು. ಇದನ್ನು ಅವರ ಕೃತಿಗಳ ಆಧಾರದ ಮೇಲೆ ಗುರುತಿಸಿ ವಿಶ್ಲೇಷಣೆಗೆ ಒಳಪಡಿಸಿರುವುದು ಇಲ್ಲಿನ ವೈಶಿಷ್ಟ್ಯವಾಗಿದೆ.ಅವರ ಕಾದಂಬರಿಗಳಾದ ಮುಕ್ತಿ, ವಿಕ್ಷೇಪ, ಬೀಜ ಮುಂತಾದವನ್ನು ಹಾಗೂ ಕ್ಷಿತಿಜ‌ ಕತೆಯ ಮೂಲಕ ಹೆಣ್ಣಿನ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಸ್ತೀವಾದಿ ಸಾಹಿತ್ಯ ಮೂಡುವ ಮೊದಲೇ ಚಿತ್ರಿಸಿದ ಶ್ರೇಯಸ್ಸು ಸರಿಯಾಗಿಯೇ ಅವರ ಸಲ್ಲಬೇಕು ಎಂದು ನಿರೂಪಿಸಿದ್ದಾರೆ. ಅವರ ಕಾದಂಬರಿಗಳ ಕುರಿತ ಪುಸ್ತಕದ ಮಿತಿಯನ್ನು ಹೇಳಿರುವುದು ಲೇಖಕರ ವಸ್ತುನಿಷ್ಠತೆಗೆ ಸಾಕ್ಷಿ. ಅವರ ಕಥಾಸಾಹಿತ್ಯದ ಕುರಿತು ಇನ್ನಷ್ಟು ಬರೆಯಲು ಅವಕಾಶಗಳು ಇವೆ. ಅವರ ಪಟ ಮತ್ತು ಫೋಟೋ ಗಳನ್ನು ಕುರಿತು ಬರೆದ ಅಂಕಣ, ಒಂದು ಕಾಲದಲ್ಲಿ ಮನೆಮನೆಗಳಲ್ಲಿ ರಾರಾಜಿಸುತ್ತಿದ್ದ , ಪುರಾಣ, ಇತಿಹಾಸ, ವರ್ತಮಾನ ಇವುಗಳು ಏಕಕಾಲದಲ್ಲಿ ಎಲ್ಲರ ಬದುಕಿನ ಭಾಗವಾಗಿದ್ದುದು , ಯಂತ್ರಗಳಲ್ಲಿ ಸೇರಿಹೋಗಿರುವ ದುರಂತವನ್ನು ವಿಷಾದದಿಂದ ದಾಖಲಿಸಿದ್ದಾರೆ.

ವೃತ್ತಿ ಮತ್ತು ಪ್ರವೃತ್ತಿಗಳು ಬೇರೆ ಬೇರೆಯಾಗಿರುವ ಇಂದಿನ ಸಂದರ್ಭದಲ್ಲಿ, ಎರಡಕ್ಕೂ ನ್ಯಾಯ ಸಲ್ಲಿಸಲಾರದೆ,ವೃತ್ತಿಯ ಘನತೆಯನ್ನು ಕಳೆದುಕೊಂಡು, ಪ್ರವೃತ್ತಿಯನ್ನು ನಂಬಿ ಬದುಕಲಾರದೆ ಹೋಗಿರುವ, ಆಧುನಿಕ ವಿದ್ಯಮಾನಗಳ ವಿಷಾದಕರ ಸ್ಥಿತಿಯನ್ನು ವಸ್ತುನಿಷ್ಠವಾಗಿ ಇನ್ನೊಂದು ಅಂಕಣದಲ್ಲಿ ದಾಖಲಿಸಿದ್ದಾರೆ. ಅದಕ್ಕೆ ಕೆಲವರು ಉನ್ನತ ಶಿಕ್ಷಣ ಪಡೆದ ಕೆಲವು ವರ್ಷ ಒಳ್ಳೆಯ ಉದ್ಯೋಗ ಮಾಡಿ ನಂತರ ಸ್ವಯಂ ನಿವೃತ್ತಿ ಹೊಂದಿ ತಮಗೆ ಇಷ್ಟವಾದ ಪ್ರವೃತ್ತಿಯಲ್ಲಿ ತೊಡಗಿ ಸಾಫಲ್ಯ ಪಡೆದ ಸಂಜಯ್ ಸುಬ್ರಹ್ಮಣ್ಯಂ, ಹಾಗೂ ವಸುದೇಂಧ್ರರ ಉದಾಹರಣೆಗಳ ಮೂಲಕ ಈಚಿನವರ ಪ್ರವೃತ್ತಿ ಪ್ರೇಮವನ್ನು ಸಾಬೀತು ಪಡಿಸಿದ್ದಾರೆ. ಹಾಗೆ ನಿವೃತ್ತಿ ಪಡೆಯದೆ ವೃತ್ತಿ ಪ್ರವೃತ್ತಿ ಸಮತೋಲನ ಮಾಡಿ ತೋರಿಸಿದ ಉದಾಹರಣೆಗೆ ಯಶವಂತ ಚಿತ್ತಾಲರ ಉದಾಹರಣೆಕೊಟ್ಟಿದ್ದಾರೆ.

ಲೇಖಕ ಕೂಡ ಇದಕ್ಕೆ ಒಳ್ಳೆಯ ನಿದರ್ಶನ. ಬೂಸಾ ನಲವತ್ತು ವರ್ಷಗಳ ಸಂದರ್ಭದಲ್ಲಿ ಬರೆದ ಅಂಕಣ ದಲಿತರಿಗೆ ಏಕೆ ಅಂಬೇಡ್ಕರ್ ಮಾದರಿ ಪ್ರೇರಣೆ ಆಗಲಿಲ್ಲ ಎಂದು ದಲಿತ ಲೇಖಕರು ಆತ್ಮಾವಲೋಕನಕ್ಕೆ ಕರೆಕೊಟ್ಟಿದ್ದಾರೆ. ದೇವನೂರು ಮಹಾದೇವ, ಸಿದ್ದಲಿಂಗಯ್ಯ ,ಡಿ.ಆರ್. ಎನ್ ಅವರನ್ನು ಕುರಿತು ಬರೆದ ಉಲ್ಲೇಖಗಳಲ್ಲಿ, ಅವರ ಮೇಲೆ ಅಂಬೇಡ್ಕರ್ ದಟ್ಟ ಪ್ರಭಾವವನ್ನು ಗುರುತಿಸಬಹುದು. ಅದರಲ್ಲೂ ಡಿ.ಆರ್.ಎನ್ ರ ಫ್ಲೆಮಿಂಗ್‌ ಫೀಟ್ ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಮುಖಾಮುಖಿಯನ್ನಾಗಿಸಿದ ಮಹತ್ವದ ಕೃತಿ. ಲೇಖಕರು ಅದರ ಉಲ್ಲೇಖ ಕೂಡ ಮಾಡದಿರುವುದು ಆಶ್ಚರ್ಯ. ಇದೆ ಬಗೆಯ ಆಶ್ಚರ್ಯ ಬೇಂದ್ರೆಯವರು ಮಾಸ್ತಿಯವರ ಕುರಿತು ಬರೆದ ಅಂಕಣಕ್ಕೆ ಕೂಡ ಆನ್ವಹಿಸಬಹುದು. ರುದ್ರ ಶಿವನಾಗುವ ಮಾಯಕ ಕುರಿತು , ಬೇಂದ್ರೆಯವರ ಮೇಲಿನ ಸೂಕ್ಷ್ಮ ಗ್ರಹಿಕೆ ಕುರಿತು ಮಾಸ್ತಿಯವರ ಕತೆಗಳ ಕುರಿತು ಬರೆದ ಲೇಖನದಲ್ಲಿ ನನ್ನ ಮೇಷ್ಟ್ರು ಕೆ.ವಿ.ನಾರಾಯಣ ಅವರು ಪ್ರಸ್ತಾಪ ಮಾಡಿ ಅದರ ಮಹತ್ವವನ್ನು ಗುರುತಿಸಿದ್ದಾರೆ. ಇದನ್ನು ಲೇಖಕರು ಗಮನಿಸಿಲ್ಲ . ಕುಮಾರವ್ಯಾಸನ ” ಹಾವಿನ ಹೆಡೆಯಿಂದ ತಲೆಯನ್ನು ತುರಿಸುವುದನ್ನು” ಎಂಬ ಸಾಲನ್ನು ಬೇಂದ್ರೆಯವರು ತೆಗೆದುಕೊಂಡಿದ್ದಾರೆ ಎಂಬುದನ್ನು ಕೂಡ ಇಬ್ಬರೂ ಗುರುತಿಸಿಲ್ಲ. ಬೀದಿಯೆಂಬ ವಿಶ್ವವಿದ್ಯಾಲಯದಲ್ಲಿ ತಾವು ಕಲಿತ ಪಾಠ ಯಾವುದೇ ವಿ.ವಿ. ಕಲಿಸದ ನೈಜ ಪಾಠ.ಜನಸಾಮಾನ್ಯರಿಗೆ ಇರುವ ಒಳನೋಟಗಳನ್ನು ಯಾರೂ ಹೊಂದಿರಲು ಸಾಧ್ಯವಿಲ್ಲ, ಎಂಬುದನ್ನು ರಂಗೋಲಿ ಮಾರುವ ಹೆಣ್ಣು ನಂಜಮ್ಮನಿಂದ ಕಲಿಯುತ್ತಾರೆ. ನಾಲ್ಕು ವರ್ಷಗಳ ಹಿಂದೆ ನನ್ನ ಸಹಪಾಠಿ ಎಂ.ಆರ್ ಕಮಲಾ ಬರೆವ ಬೀದಿ ಸುತ್ತುವ ಕೃತಿಯಲ್ಲಿ ಇದೆ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಕುತೂಹಲ ಕಾರಿಯಾಗಿದೆ. ಸಮಕಾಲೀನರಾದ ಇಬ್ಬರು ಲೇಖಕರು ಒಂದೇ ಬಗೆಯಲ್ಲಿ ಯೋಚಿಸುತ್ತಾರೆ ಎಂಬುದು ಈ ಚಿಂತನೆಯ ಸಮಕಾಲೀನ ಮಹತ್ವಕ್ಕೆ ಸಾಕ್ಷಿ. ಮಾಸ್ತಿಯವರು ತಮ್ಮ ಕತೆಗಳ ಸ್ಪೂರ್ತಿ ಬೀದಿ ಎಂದು ಹೇಳಿಕೊಂಡಿದ್ದಾರೆ ಒಂದು ಸಂದರ್ಶನದಲ್ಲಿ .

ಕೊನೆಯಲ್ಲಿ ಕೊಡಗಿನ ಗೌರಮ್ಮ ಅಂಕಣ ‌ಚಿಕವೀರ ರಾಜೇಂದ್ರ ಕಾದಂಬರಿ ಬಿಟ್ಟಲ್ಲಿಂದ ಮುಂದುವರಿಸಿದ ಒಂದು ಇಂಗ್ಲಿಷ್ ಪುಸ್ತಕದ ಬೊಪ್ಪಣ್ಣ ಅವರ ಅನುವಾದವನ್ನು ಕುರಿತು ಬರೆದ ಬರಹ. ಅದರಲ್ಲಿ ಗೌರಮ್ಮ ‌ಹೇಗೆ ಬ್ರಿಟಿಷರ ಮತ್ತು ಚಿಕವೀರ ರಾಜೇಂದ್ರನ ಆಟದ ದಾಳವಾಗಿಬಿಟ್ಟ ದುರಂತವನ್ನು ಆರ್ದ್ರವಾಗಿ ಸಾಧಾರವಾಗಿ ಚಿತ್ರಿಸಲಾಗಿದೆ .

‘ಕಾದಂಬರಿಯ ಮೊದಲ ವಾಕ್ಯ’ ಎಂಬ ಲೇಖನದಲ್ಲಿ ಮೊದಲ ವಾಕ್ಯದ ಮಹತ್ವವನ್ನು ಟಾಲ್ಸ್ಟಾಯ್ ನ ‘ಅನ್ನಾಕೆರಿನಿನಾ’ ಮೊದಲುಗೊಂಡು ತಮ್ಮ ಕಾದಂಬರಿಗಳ ಮೊದಲ ವಾಕ್ಯಗಳವರೆಗೆ ವಿಸ್ತರಿಸಿ ಅದು ಹೇಗೆ ಇಡೀ ಕಾದಂಬರಿಯ ವಸ್ತುವನ್ನು ನಿರ್ದೇಶಿಸುವ ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ.
‌ ‌ ‌‌‌‌‌‌‌
ಗಿರಡ್ಡಿ ಗೋವಿಂದರಾಜ ಅವರ ಕುರಿತು ಬರೆದ ಅಂಕಣ ಕನ್ನಡ ವಿಮರ್ಶಾಲೋಕಕ್ಕೆ ಅವರು ಕೊಟ್ಟ ಕೊಡುಗೆಯ ಸಮೀಕ್ಷೆಯಾಗಿದೆ. ಪಕ್ಷಪಾತ ರಹಿತ ವಿಮರ್ಶೆ ಅವರ ‌ವಿಮರ್ಶೆಯ ಸ್ವರೂಪವಾಗಿದೆ ಎಂದು ಸರಿಯಾಗಿಯೆ ಅವರ ಸ್ಥಾನವನ್ನು ನಿರ್ದೇಶಿಸಿದ್ದಾರೆ. ‘ಭಾನುವಾರದ ಮೈದಾನ ದರ್ಶನ’ ನಮ್ಮ ಜೀವಂತಿಕೆಯ ಪ್ರತೀಕವಾಗಿದೆ. ಅದರ ಚಿತ್ರವತ್ತಾದ ವರ್ಣನೆ ಕಣ್ಣಿಗೆ ಕಟ್ಟುವಂತೆ ಇದೆ.

‘ಒತ್ತಾಸೆ’ ಲೇಖಕ ಕೆ. ಸತ್ಯನಾರಾಯಣ

ಸಂಕ್ರಮಣ ಐದು ದಶಕಗಳ ಕಾಲ ನಡೆದು ಬಂದ ದಾರಿಯ ಮತ್ತು ಅದರ ಸಾಂಸ್ಕೃತಿಕ ಮಹತ್ವದ ಅವಲೋಕನ ಇದೆ.

‘ಪಾಲ್ ಬ್ರಂಟನ್ ಕಂಡು ಕೊಂಡ ರಮಣ’ರ ಆಧ್ಯಾತ್ಮಿಕ ಸಾಧನೆಯ ಅನಾವರಣವನ್ನು ಅವರ ಇಂಗ್ಲಿಷ್ ಪುಸ್ತಕದ ಅನುವಾದದ ಮೂಲಕ ಮಾಡಲಾಗಿದೆ. ಅವರು ಎಲ್ಲದಕ್ಕೂ ಉತ್ತರ ಅಲ್ಲ ಎಂಬ ಅವರ ಮಿತಿಯನ್ನು ಗುರುತಿಸಿರುವುದು ಅವರ ವಸ್ತುನಿಷ್ಠತೆಗೆ ಸಾಕ್ಷಿಯಾಗಿದೆ.

‘ಅಜ್ಜಿಯ ಕೊರಿಯರ್ ಬಾಲಕ’ ನಾಗಿ ಹೂ ಕೊಯ್ದು ಪೊಟ್ಟಣ ಕಟ್ಟಿ ಬಸ್ ಕಂಡಕ್ಟರ್ ಮೂಲಕ ಪಕ್ಕದ ಊರಿಗೆ ಕಳಿಸಲು ಸಾಧನವಾದಂತೆ, ನಾಲ್ಕು ದಶಕಗಳ ನಂತರ ಅಮೆರಿಕದ ಮಗನಿಗೆ, ಹುಣಿಸೆ ತೊಕ್ಕನ್ನು ಮಾಡಿ ವಿಮಾನದ ಮೂಲಕ ರವಾನಿಸುವ ದೀರ್ಘ ಅವಧಿಯ ಆರ್ದ್ರ ಭಾವ,ಮಾತ್ರ ಒಂದೇ .ಅದಕ್ಕೆ ಬಳಸಿದ ವಾಹನಗಳು ಬೇರೆ ಬೇರೆ ಆದರೂ.
‘ಟಾಲ್ಸ್ಟಾಯ್ ಕನ್ನಡ ಕ್ಲಬ್‌ ನಲ್ಲಿ’ ನಿರಂತರವಾಗಿ ಕಳೆದ ಒಂಬತ್ತು ದಶಕಗಳಿಂದ ಕನ್ನಡ ಅನುವಾದಗಳ ಅವನು ಮತ್ತು ಅವನ ಕೃತಿಗಳು ನಮ್ಮ ನಮ್ಮ ಬದುಕಿನ ಭಾಗವಾಗಿ ಸಂವೇದನಾ ಶೀಲತೆಯನ್ನು ಬೆಳೆಸಿದ ಬಗೆಯನ್ನು ಅರ್ಥ ಪೂರ್ಣವಾಗಿ ವಿವರಿಸಲಾಗಿದೆ. ಲೆನಿನ್ ಕೂಡ “ಟಾಲ್ಸ್ಟಾಯ್ ಸಾಹಿತ್ಯದ ಕುರಿತು ಕ್ರಾಂತಿ ಪೂರ್ವ ರಷ್ಯಾದ ರನ್ನಗನ್ನಡಿ”ಎಂದು ಕರೆದಿರುವುದನ್ನು ಇಲ್ಲಿ ನೆನಪು ಮಾಡಿಕೊಳ್ಳುವ ಅಗತ್ಯವಿದೆ.

‘ಸಾಂಸ್ಕೃತಿಕ ತೆರೆಮರೆಯ ರೂವಾರಿ’ ಎನ್ ವಿದ್ಯಾಶಂಕರ ಅವರ ಬಹುಮುಖಿ ವ್ಯಕ್ತಿತ್ವದ ಅನಾವರಣದೊಂದಿಗೆ ಈ ಅಂಕಣ ಕೃತಿಯನ್ನು ಸಮಾಪ್ತಿಮಾಡಲಾಗಿದೆ. ಮಾಸ್ತಿಯಿಂದ ಮೊದಲುಗೊಂಡು ಟಾಲ್ಸ್ಟಾಯ್ ವರೆಗೆ ಕನ್ನಡ ಸಂಸ್ಕೃತಿಯಲ್ಲಿ ಬೇರುಬಿಟ್ಟ ಬಗೆಯ ಅನಾವರಣ ಮಾಡಿರುವುದು. ಸಾಹಿತ್ಯ ಸಂಸ್ಕೃತಿಯ ವಿಷಯಗಳ ಮೇಲೆ ಬರೆದಷ್ಟೆ ಕಾಳಜಿ, ಅವರ ಸಾಮಾಜಿಕ ಆರ್ಥಿಕ ವಿಷಯಗಳ ಕುರಿತು ಬರೆದ ಬರಹಗಳು ಅವರ ಕಾಳಜಿಯ ವಿಶಾಲ ವ್ಯಾಪ್ತಿಗೆ ಸಾಕ್ಷಿ. ಚಿತ್ರವತ್ತಾಗಿ ಕಣ್ಣಿಗೆ ಕಟ್ಟುವಂತೆ ಬರೆಯುವ ಅವರ ಭಾಷಾ ಸಿದ್ದಿ : ಭಾನುವಾರದ ಮೈದಾನ: ಅಲ್ಲಿ ಆಟವಾಡುತ್ತಿರುವ ವಿವಿಧ ಜನರೊಂದಿಗೆ, ಅಲ್ಲಿ ಮಲಗಿರುವ ಎಮ್ಮೆಗಳು, ಬೆಳೆದುನಿಂತ ಮರ, ಅದರ ಕೆಳಗಿನ ಕೊಳಚೆ, ಎಲ್ಲಾ ಜೀವಂತವಾಗಿ ನಮ್ಮ ಕಣ್ಮುಂದೆ ಬರುತ್ತದೆ. ಲೇಖನದ ಆರಂಭದಲ್ಲಿ ಸೂಚಿಸಿದ ಒಬ್ಬ ಅಂಕಣಕಾರ ನಲ್ಲಿ ಇರಬೇಕಾದ ಅಪಾರ ಅರಿವು , ಅನುಭೂತಿ , ಶಿಸ್ತುಗಳಿಗೆ ಇವರ ಅಂಕಣಗಳು ಸಾಕ್ಷಿಯಾಗಿವೆ. ಪುಸ್ತಕ ಕೊಟ್ಟ ಲೇಖಕರ ಸೌಜನ್ಯಕ್ಕೆ ಕೃತಜ್ಞತೆ .ಅಭಿನಂದನ .


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW