ಬದುಕಿನ ಸಂಕಟಗಳೆ ‘ಗಾಯಗೊಂಡ ಸಾಲುಗಳು’

ಸದಾಶಿವ ಸೊರಟೂರು ಅವರ ‘ಗಾಯಗೊಂಡ ಸಾಲುಗಳು’ ಕವಿತೆಗಳ ಕುರಿತು ಮಾರುತಿ ಗೋಪಿಕುಂಟೆ ಅವರು ಬರೆದ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…

ಪುಸ್ತಕ : ಗಾಯಗೊಂಡ ಸಾಲುಗಳು
ಲೇಖಕರು : ಸದಾಶಿವ ಸೊರಟೂರು
ಪ್ರಕಾಶನ : ವೀರಲೋಕ
ಬೆಲೆ : 110.00

ಕವಿತೆಗೆ ಎದೆಯ ಮಾತು ಕೇಳಿಸುತ್ತದೆ. ಅದು ಮನದೊಳಗೆ ಬಚ್ಚಿಟ್ಟು ಮನಸ್ಸು ಮೌನವಾಗಿ, ಮೌನ ಅಕ್ಷರವಾಗಿ ಹೇಳಬೇಕಾದ್ದನ್ನು ಹೃದಯ ಮತ್ತು ಮನಸ್ಸಿಗೆ ತಾಕುವಂತೆ ಸುಲಲಿತವಾಗಿ ಬಂಡೆಯ ಮೇಲೆ ಹರಿದ ನೀರಿನಂತೆಯೊ ಜಲಲ ಜಲಧಾರೆಯಾಗಿಯೋ ಇನಿದನಿಯ ನುಡಿಗಳನ್ನು ಇನ್ನೊಬ್ಬರಿಗೆ ಮುಟ್ಟಿಸಿದಾಗ ಕವಿತೆಗೊಂದು ನಿಟ್ಟುಸಿರು ಸದ್ಯ ದಡ ಸಿಕ್ಕಿತಲ್ಲಾ ಎಂಬ ಸಮಾಧಾನ. ಕವಿತೆ ಕ್ರಾಂತಿಯು ಆಗಬಲ್ಲದು ಶಾಂತಿಯು ಆಗಬಲ್ಲದು. ಗಾಯಗೊಂಡ ಎದೆಗೆ ಮುಲಾಮು ಆಗಬಲ್ಲದು. ಕವಿತೆ ಹೇಳುತ್ತಲೆ ಹಗುರಾಗುವುದಿದೆಯಲ್ಲ ಅದೊಂತರ ಖುಷಿ ಬರೆದವರಿಗಾದರೆ ಓದಿದವನ ಹೃದಯದಲ್ಲೊಂದು ಒಳಪು ತನ್ನಿಂದ ತಾನೆ ಹುಟ್ಟಿ ಬಿಡುತ್ತದೆ. ಆಡಿದ ಮಾತು ಸುಳ್ಳಿರಬಹುದು. ಬರೆದ ಕವಿತೆ ಸತ್ಯ ಆಗಾಗಿ ಕವಿ ಸತ್ತಮೇಲೂ ಕವಿತೆ ಜೀವಂತವಾಗಿರುತ್ತದೆ. ಅದು ಕವಿತೆಯ ಸತ್ಯದ ದರ್ಶನ

ಸೊರಟೂರರ ಕೆಲವು ಕವಿತೆಗಳನ್ನಷ್ಟೆ ಓದಿದ ನಾನು ಅವರ ಭಾಷಾ ಶೈಲಿ ಹೇಳುವ ಧಾಟಿ ಸರಳವಾದ ಸನ್ನಿವೇಶಗಳನ್ನು ಕವಿತೆಯ ಮೂಲಕವೆ ಮನಮುಟ್ಟುವಂತೆ ಬರೆಯುವ ಕಸುವು ಅವರ ಕವಿ ಮನಸ್ಸು ನಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಅವರ ಅನೇಕ ಲೇಖನಗಳನ್ನು ಓದುತ್ತಲೆ ಇರುತ್ತೇನೆ. ಇವರು ಕತೆ ಬರೆಯುವುದರಲ್ಲಿಯೂ ನಿಸ್ಸೀಮರು. ಪ್ರಸ್ತುತ ‘ಗಾಯಗೊಂಡ ಸಾಲುಗಳು’ ಕವಿತೆ ಸಂಕಲನವೂ ಕೂಡ ಆ ಕಾರಣಕ್ಕಾಗಿಯೆ ಓದಬೇಕೆಂಬ ಅಭೀಷ್ಟೆಗೆ ಪಕ್ಕಾದ ಮನಸ್ಸು ಇಡಿ ಸಂಕಲನವನ್ನು ಒಂದೆ ಉಸಿರಿಗೆ ಓದಿ ಅದರಲ್ಲಿನ ಗಾಯಗಳಿಗೆ, ಹೇಳದೆ ಉಳಿದುಕೊಂಡ ಮಾತುಗಳಿಗೆ ಅಕ್ಷರಗಳೆ ಸಮಾಧಾನ ಹೇಳಿವೆ ಎಂದೆನಿಸದಿರದು. ಮನುಷ್ಯ ಜಗತ್ತಿನಲ್ಲಿ ಬದುಕುವ ನಾವು ಕೊಲ್ಲಲು ಬಂದವರಿಗೂ ಉಣಬಡಿಸುತ್ತಲೆ “ನಿಮ್ಮ ನಾಲ್ಕುವರ್ಷದ ಮಗುವೂ ನೀವು ಹೊರಡುವಾಗ ‘ಅಪ್ಪ’ ಎಂದು ಬೆರಳಿಡಿದಿತ್ತೇನು ‘ಎಂಬ ಸಾಲುಗಳು ಕೊಲ್ಲಲು ಬಂದವನ ಎದೆಯಲ್ಲೂ ಭಾವಬಂಧವನ್ನು ತುಂಬ ಬಲ್ಲದು ಅದು ಮನುಷ್ಯ ಸಂಬಂಧವನ್ನು ಗಟ್ಟಿಗೊಳಿಸಿ ಕೊಳ್ಳುವ ಸಾಮರಸ್ಯದ ಸಾಲು ಆಗಿಬಿಡುತ್ತದೆ. ಕಾಮದ ಮಾಂಸದ ಮುದ್ದೆಯೊಳಗೆ ಮಜ್ಜನವಾಗುವ ಬೇರೆಬೇರೆ ಆಯಾಮಗಳನ್ನು’ ಹೂವು ತುಂಬಿದ ಸೆರಗು ‘ಕವಿತೆ ಪರಿಚಯಿಸುತ್ತದೆ. ಕಾಯುವವನ ಸಂಕಟಗಳು ಕತ್ತಲೆ ಪಾಳಿಯಲ್ಲಿ ರೂಪುಗೊಂಡರೆ ಪಾಪದ ಗುರುತುಗಳು ಕ್ರೌರ್ಯದ ಇನ್ನೊಂದು ಮಗ್ಗಲನ್ನು ಪರಿಚಯಿಸುತ್ತದೆ. ನೋವುಂಡವರಷ್ಟೆ ಇಂತಹ ಕವಿತೆಯನ್ನು ಬರೆಯಲು ಸಾಧ್ಯ.

ಪ್ರೀತಿಯಿಂದ ವಿಮುಖನಾದ ಪ್ರೇಮಿಯೊಬ್ಬನ ಅಹವಾಲುಗಳು ವೈನು ಮೆತ್ತಿದ ತುಟಿಗಳು, ಕಟ್ಟಳೆಯೊಳಗೆ, ಗೋರಿ ಅಲ್ಲ ರೆಂಜೆ ಗಿಡ, ಅಳಿಸಿ ಹೋದ ಸಾಲು, ಗಾಯ, ಒಂದು ಮುರಿದ ಪದ, ಕಾಳಜಿ, ಈ ಕವಿತೆಗಳಲ್ಲಿ ಅಕ್ಷರಗಳಲ್ಲಿ ಇಣುಕಿಣುಕಿ ನಮ್ಮನ್ನು ಆರ್ದ್ರ ಗೊಳಿಸಿಬಿಡುತ್ತವೆ. ಯುದ್ಧ ಬೀಕರತೆಯ ಬಗ್ಗೆ ಸೂಕ್ಷ್ಮವಾಗಿ ಬರೆದಿರುವ ಕವಿತೆಗಳು ಯೋಚಿಸುವಂತೆ ಮಾಡುತ್ತವೆ. ಅಪ್ಪ ತೊಟ್ಟ ಗಾಯಗಳಲ್ಲಿ ಬದುಕಿನ ವ್ಯಥೆ ಇದೆ ಅದಕ್ಕೆ ಅಪ್ಪನ ಟವಲ್ ಸಾಕ್ಷಿಯಾಗುತ್ತದೆ. “ಒಡೆಯನ ಅಂಗಳದಲಿ ಅಪ್ಪ ಮತ್ತೆ ಮತ್ತೆ ಮುದುಡುತ್ತಾನೆ, ಅಂಗೈಯಲ್ಲಿ ಹಿಡಿದ ಟವಲಿಗೆ ಉಸಿರು ಗಟ್ಟುತ್ತದೆ.” ಇವೆರಡೆ ಸಾಲುಗಳು ಸಾಕು ಸಾಮಾಜಿಕ ಸ್ತರದ ಬೇದಭಾವ ಇನ್ನು ಮಾಸಿಲ್ಲ ಎಂಬುದನ್ನು ಧ್ವನಿಸುತ್ತದೆ.

‘ಅವ್ವ ಹಾಡದ ಹಾಡು ‘ಅಕ್ಷರದ ಮೂಲಕವೆ ಎಲ್ಲವನ್ನು ಹಾಡುತ್ತದೆ. ಅವ್ವನ ಬದುಕು ಅಡುಗೆ ಮನೆಯಷ್ಟೆ ಅಲ್ಲಿನ ಸಂಕಟಗಳು ಅವಳನ್ನು ಮೂಕವಾಗಿ ಮಾಡಿದ್ದರೂ ರೊಟ್ಟಿ ತಟ್ಟುತ್ತಲೆ ಅದನ್ನು ಹೊರಹಾಕುತ್ತಿದ್ದಳು. ಅವಳು ಎಂದೂ ಸಂಕಟವನ್ನು ಹೇಳಲೆ ಇಲ್ಲ… “ಅವ್ವನಿಗೆ ಅವ್ವ ದಕ್ಕುತ್ತಿದ್ದದ್ದು ಅಲ್ಲೇ ಆ ಮೂರು ಕಲ್ಲಿನ ಬಡ ಒಲೆಯ ಬಳಿಯೆ ಅವಳದೆ ಅಷ್ಟೆ ಪ್ರಪಂಚ ಎಂದು ಅಮ್ಮನ ಒಡಲ ನೋವಿನ ಪ್ರಪಂಚವನ್ನೆ ಕವಿತೆ ತೆರೆದು ಬಿಡುತ್ತದೆ. ಅಮ್ಮ ಬಹುದೊಡ್ಡ ರೂಪಕ ಆಕೆ ಪ್ರತಿಮೆಯಾಗಬಲ್ಲಳು ಸಾಂತ್ವನವಾಗಬಲ್ಲಳು ದಾರಿದೀಪವಾಗಬಲ್ಲಳು, ಕಡೆಗಣಿಸಲ್ಪಟ್ಟರೂ ತಾಯಿಗೆ ತಾಯಿ ಸರಿಸಾಟಿಯಷ್ಟೆ ಎಂಬ ಬಿಂಬವಿರುವ ಅನೇಕ ಕವಿತೆಗಳು ನಮ್ಮನ್ನು ಇನ್ನಷ್ಟು ಭಾವುಕರನ್ನಾಗಿ ಮಾಡುತ್ತದೆ. ಪದ ಮತ್ತು ಕವಿತೆಗಳ ಬಗ್ಗೆ ಹೇಳುತ್ತಲೆ ಸಮಾಜದ ಬೇರೆ ಬೇರೆ ರೂಪಗಳನ್ನು ಅಕ್ಷರ ರೂಪಗಳಲ್ಲಿ ನಿರೂಪಿಸಿ ಕವಿತೆಯಾಗಿಸಿದ್ದಾರೆ. ಹೊಂದಿಸಿ ಬರೆಯಿರಿ, ತುಣುಕು ಶಬ್ದದ ತಲಾಷಿನಲ್ಲಿ, ದಯವಿಟ್ಟು ಕ್ಷಮಿಸಿ, ಕವಿತೆ ಮತ್ತು ಕವಿಯ ಕೋಟು ಇಂತಹ ಅನೇಕ ಕವಿತೆಗಳ ಪದಗಳು ಎದೆಯನ್ನು ಅಪ್ಪುತ್ತವೆ, ಮನಸ್ಸನ್ನು ಕಲಕುತ್ತವೆ, ಬೋರ್ಗರೆಯುತ್ತವೆ, ಶಾಂತವಾಗುತ್ತವೆ. ಮನಸ್ಸಿಗೊಂದು ನಿರಾಳ, ಒಂದಿಷ್ಟು ತೃಪ್ತಿ, ಕವಿತೆಯ ಸಾರ್ಥಕತೆ ಓದುಗನಲ್ಲಿ ಅವನ ತಿಳಿವಿನ ಓದಿನಲ್ಲಿ ಕೊನೆಯಾಗುತ್ತದೆ.

ಕೊನೆ ಮಾತು ಗಾಯಗೊಂಡ ಸಾಲುಗಳು ಎದೆಯ ಕದವನ್ನು ದಾಟಿ ಬೆಚ್ಚಗೆ ಕೂತು ಮನಸ್ಸಿನ ಜೊತೆ ಮಾತಾಡುತ್ತವೆ ಆಗಾಗ ನಮ್ಮೊಳಗೆ ಮತ್ತೆ ಮತ್ತೆ ಗಿರಕಿ ಹೊಡೆಯುತ್ತವೆ. ಈ ಸಂಕಲನದಲ್ಲಿ ಎಲ್ಲವೂ ಇದೆ ಯುದ್ದವಿದೆ ಬಂಧವಿದೆ, ಪ್ರೇಮವಿದೆ ವಿರಹವಿದೆ, ಸಂಭ್ರಮವಿದೆ ಸಂಕಟವಿದೆ. ಅಮ್ಮನ ಮಡಿಲಿದೆ ಹೇಳದ ಮಾತಿವೆ, ಬರೆಯದೆ ಉಳಿದ ಸಾಲುಗಳಿವೆ, ಬಾಗಿಲು ಕಾಯುವವನ ವೇದನೆ ಇದೆ ಅಪ್ಪನ ಭಾಂದವ್ಯವಿದೆ, ಆಳುವ ವರ್ಗವಿದೆ ಅಳುವ ವರ್ಗವೂ ಇದೆ. ಎಲ್ಲರಿಗೂ ಕವಿತೆಯ ಸಾಲುಗಳಿವೆ. ಆ ಸಾಲುಗಳು ಎಲ್ಲರನ್ನು ತಲುಪಲಿ. ಕವಿತೆಯ ಸಾಲೊಂದು ಓದುಗನ ಮನಸ್ಸನ್ನು ಸಾರ್ಥಕ ಗೊಳಿಸಿದರೆ ಅದು ಕವಿತೆಯ ಗೆಲುವು ಇಂತಹ ಎಷ್ಟೊ ಸಾಲುಗಳಿವೆ. ಯಾಕೆಂದರೆ ಕವಿತೆ ಸತ್ಯ. ಸತ್ಯ ಚಿರಾಯುವಾಗಲಿ.

ಸೊರಟೂರು ಸರ್ ಅವರ ಕವಿತೆಯ ಬಗ್ಗೆ ಹೇಳುವಷ್ಟು ಬುದ್ದಿ ಮತ್ತು ಕವಿತ್ವ ನನ್ನಲ್ಲಿ ಎಷ್ಟು ಇದೆಯೋ ಗೊತ್ತಿಲ್ಲ ನನಗೆ ತಿಳಿದದ್ದನ್ನು ಅಷ್ಟೆ ಹೇಳಿದ್ದೇನೆ. ಸೊರಟೂರು ರವರು ಒಳ್ಳೆಯ ಲೇಖಕರು ಅವರು ಹೀಗೆ ಬರೆಯುತ್ತಿರಲಿ. ನಾವು ಓದುತ್ತಲೆ ಇರುತ್ತೇವೆ. ನೀವೂ ಓದಿ. ಸೊರಟೂರು ಸರ್ ರವರಿಗೆ ಶುಭವಾಗಲಿ.


  • ಮಾರುತಿ ಗೋಪಿಕುಂಟೆ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW