ಹೆಣ್ಣು ತನ್ನ ಅಸ್ತಿತ್ವ ಹಾಗೂ ಅಸ್ಮಿತೆಯನ್ನು ಕಳೆದುಕೊಂಡು ಬದುಕುವ ನತದೃಷ್ಟ ಹೆಣ್ಣಿನ ಚಿತ್ರಣವನ್ನು ’ದಿ ಗ್ರೇಟ್ ಇಂಡಿಯನ್ ಕಿಚನ್’ ಸಿನಿಮಾದಲ್ಲಿ ವೀಕ್ಷಕರ ಎದೆಗೆ ತಾಗುವಂತೆ ಚಿತ್ರಿಸಿದ್ದಾರೆ. ಈ ಚಿತ್ರದ ಕುರಿತು ಧಾರಿಣಿ ಮಾಯಾ ಅವರು ಬರೆದಿರುವ ತಮ್ಮ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ ….
ಓಹ್! ನೀವು ಹೌಸ್‌ವೈಫಾ. ಹಾಗಾದ್ರೆ ತುಂಬಾನೇ ಫ್ರೀ ಇರ್ತೀರಾ ಅಲ್ವಾ… ನಿಮಗಿನ್ನೇನು ಕೆಲಸ ಎನ್ನುವವರು ಈ ಚಿತ್ರವನ್ನು ನೋಡಲೇಬೇಕು. ಹೌದು, ಇದು ನಾನು ನೋಡಿದ ಮಲಯಾಳಂ ಚಿತ್ರ “ದಿ ಗ್ರೇಟ್ ಇಂಡಿಯನ್ ಕಿಚನ್.” ಭಾಷೆ, ಪಂಗಡ ಯಾವುದಾದರೇನು. ಆ ಗೆರೆಯನ್ನು ಮೀರಿ ಗಂಡು-ಹೆಣ್ಣು, ಒಂದು ಸಂಸಾರ ಎಂಬುದಿದೆ. ಇಂತಹ ಬಹಳಷ್ಟು ಸಂಸಾರಗಳಲ್ಲಿ ನಡೆಯುವುದು ಇದೇ ‘ದಿ ಗ್ರೇಟ್ ಇಂಡಿಯನ್ ಕಿಚನ್‌ನಲ್ಲಿ’ ನಡೆಯುವಂಥ ಸರ್ಕಸ್ಸು.
ಈ ಚಿತ್ರದಲ್ಲಿ ಪ್ರತೀ ಮನೆಯಲ್ಲೂ ಕಾಣಬಹುದಾದಂಥ ಪಿತೃಪ್ರಭುತ್ವವನ್ನು ಸೂಕ್ಷ್ಮವಾಗಿ ಅನಾವರಣ ಮಾಡಲಾಗಿದೆ. ಹೆಣ್ಣಿರುವುದೇ ಗಂಡಿನ ಅಡಿಯಾಳಾಗಿರುವುದಕ್ಕೆ ಎಂಬಂತೆ ಮನೆಯ ಪುರುಷರು ನಡೆದುಕೊಳ್ಳುತ್ತಿರುತ್ತಾರೆ. ಈ ಸಿನಿಮಾದ ಕಥಾನಾಯಕಿ ಮದುವೆಯ ಹೊಸತರಲ್ಲಿ ಖುಷಿಯಿಂದ ಗಂಡನಿಗೆ ಇಷ್ಟವಾದ ಅಡುಗೆ ಮಾಡುತ್ತಿರುತ್ತಾಳೆ. ಅಡುಗೆಮನೆ ಚಂದವೆನಿಸುತ್ತದೆ. ಆದರೆ ಎಲ್ಲಿಯವರೆಗೆ? ಅಡುಗೆಕೋಣೆಯ ಕಪ್ಪುಮಸಿಯನ್ನೇ ನೋಡುತ್ತಾ ತನ್ನ ಕನಸು ಕೊಂದುಕೊಳ್ಳುವವರೆಗೇ? ಪ್ರತಿನಿತ್ಯ ಮುಂಜಾವಿನಿಂದ ನಟ್ಟಿರುಳವರೆಗೂ ಅಡುಗೆ ಮನೆಯಲ್ಲೇ ಬೆಂದು ಬಸವಳಿಯುತ್ತಾಳೆ. ಅನಾದಿ ಕಾಲದಿಂದಲೂ ಹೆಣ್ಣು ಅಡುಗೆ ಮನೆಗೇ ಸೀಮಿತವಾಗಿದ್ದು, ಇಂದಿಗೂ ಅದೇ ಮುನ್ನಡೆದಿದೆ. ಕಥಾನಾಯಕಿಯ ಪರಿಪಾಟಲನ್ನು ಎಳೆ ಎಳೆಯಾಗಿ ಬಿಚ್ಚಿಡುವ ನಿಟ್ಟಿನಲ್ಲಿ ಈ ಕಥೆ ನಿಧಾನಗತಿಯಲ್ಲೇ ಸಾಗುತ್ತ ವೀಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ. ಇರಿ, 1 ಗಂಟೆ 40 ನಿಮಿಷದ ಸಿನಿಮಾದಲ್ಲಿ ಬಹುತೇಕ ಆಕೆ ಪಾತ್ರೆ ತೊಳೆಯುವುದನ್ನು ನೋಡುತ್ತಲೇ ತಾಳ್ಮೆ ಕಳೆದುಕೊಳ್ಳುವುದಾದರೆ, ಇನ್ನು ಹೆಣ್ಣುಮಕ್ಕಳು ಪ್ರತಿನಿತ್ಯ ತಮ್ಮ ಮನೆಯಲ್ಲಿ ಇದೇ ಕೆಲಸವನ್ನು ಜೀವನ ಪೂರ್ತಿ ಮಾಡುವುದನ್ನು ಒಮ್ಮೆ ನೆನೆಯಿರಿ.
ಫೋಟೋ ಕೃಪೆ : google
ಬೆಳಗ್ಗೆ ಹಲ್ಲುಜ್ಜುವ ಬ್ರಷನ್ನೂ ಆಕೆ ತನ್ನ ಮಾವ ಕುಳಿತಲ್ಲಿಗೇ ಕೊಡಬೇಕು. ಮಾವ ಹಾಗೂ ಗಂಡ ಊಟ ಮಾಡಿದ ಡೈನಿಂಗ್ ಟೇಬಲ್ ತುಂಬೆಲ್ಲಾ ಅಗಿದು ಉಗಿದ ಊಟದ ಪದಾರ್ಥಗಳನ್ನು ಬೇಸರಿಸಿಕೊಳ್ಳದೆ ನಿತ್ಯವೂ ಶುಚಿಗೊಳಿಸುತ್ತಾಳೆ. ಆದರೆ ಒಮ್ಮೆ ಗಂಡ-ಹೆಂಡತಿ ಊಟಕ್ಕೆಂದು ರೆಸ್ಟೋರೆಂಟಿಗೆ ಹೋದಾಗ, ಪತಿಮಹಾಶಯ ಟೇಬಲ್ ಮ್ಯಾನರ್ಸ್ ಪಾಲಿಸುವುದನ್ನು ನೋಡಿ ಆಶ್ಚರ್ಯಗೊಳ್ಳುತ್ತಾಳೆ. ಅದೇ ಮ್ಯಾನರ್ಸ್ ಮನೆಯಲ್ಲಿ ಏಕಿಲ್ಲ ಎಂಬವಳ ಪ್ರಶ್ನೆಗೆ, ಗಂಡ ಕಿಡಿಕಾರಿ ವ್ಯಂಗ್ಯವಾಡುತ್ತಾನೆ. ಹೆಂಡತಿ ಇರುವುದೇ ಗಂಡಿನ ಕಾಮತೃಷೆ ನೀಗಿಸಲಿಕ್ಕೆ ಎಂಬಂತೆ ವರ್ತಿಸುತ್ತಾನೆ. ತನ್ನ ಸಣ್ಣಪುಟ್ಟ ವೈಯಕ್ತಿಕ ಆಸೆ ಪೂರೈಸಿಕೊಳ್ಳಲೂ ಸಾಧ್ಯವಾಗದ ಪರಿಸ್ಥಿತಿ ಆಕೆಗೆ. ‘ಮಗಳೇ’ ಎಂದು ಕರೆಯುತ್ತಲೇ ನಯವಾಗಿಯೇ ಆಕೆಯ ಎಲ್ಲ ನಡೆಗಳಿಗೂ ಬೇಲಿ ಹಾಕುವ ಮಾವ. ಅವಳ ಶ್ರಮವನ್ನು ಕಿಂಚಿತ್ತೂ ಪರಿಗಣಿಸದೆ, ಕೇವಲವಾಗಿ ಮಾತಾಡುವ ಗಂಡ. ಒಟ್ಟಿನಲ್ಲಿ ಅವಳ ಆಶಯ, ಕನಸುಗಳಿಗೆ ಬೆಂಬಲ ಕೊಡದ ಮನೆ ಪುರುಷರು; ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಜೀತದಾಳಿನ ಜೀವನ ನಡೆಸುತ್ತಿರುತ್ತಾಳೆ. ಹೀಗೆ ಪ್ರತಿಯೊಂದೂ ಅತಿರೇಕಕ್ಕೆ ಹೋದಾಗ, ಎಲ್ಲದರಿಂದ ರೋಸಿ ಹೋಗಿ ಕೊನೆಗೆ ಧೈರ್ಯ ಮಾಡಿ ಮನೆ ತೊರೆದು ತನ್ನದೇ ಬದುಕಿನ ದಾರಿಯನ್ನು ಕಂಡುಕೊಳ್ಳುತ್ತಾಳೆ. ಒಟ್ಟಾರೆ ಹೆಣ್ಣಿನ ಬದುಕಿನ ರೂಪರೇಷೆ ಒಂದು ಸಿನಿಮಾ ಕಥೆಯ ಪ್ರಾತ್ರವಾಗಿರದೆ, ಅವಳ ನೈಜ ಬದುಕಿಗೆ ಹಿಡಿದ ಕನ್ನಡಿಯಾಗಿದೆ.
ಹೆಣ್ಣು ತನ್ನತನವನ್ನು ಉಳಿಸಿಕೊಳ್ಳುವುದೂ ಒಂದು ಸಾಧನೆಯೇ ಸೈ. ಪ್ರಪಂಚದ ಅದೆಷ್ಟೋ ಹೆಣ್ಣುಮಕ್ಕಳು ಎಷ್ಟೆಲ್ಲಾ ಮೇಲುಗೈ ಸಾಧಿಸಿರುವುದು ಹೆಮ್ಮೆಯ ವಿಷಯ. ಬೆಳ್ಳಕ್ಕಿಗಳಾಗಿ ಆಕಾಶದೆತ್ತರಕ್ಕೆ ಹಾರುವ ವನಿತೆಯರು, ಪುರುಷರಿಗೆಂದೇ ಮೀಸಲಾಗಿದ್ದ ರಂಗಗಳಲ್ಲಿ ತಮ್ಮ ಛಾಪನ್ನು ಮೂಡಿಸಿ ನಮ್ಮ ನಾಡಿಗೆ, ರಾಷ್ಟ್ರಕ್ಕೆ ಮೆರಗು ತಂದಿದ್ದಾರೆ. ಈ ಸಾಧಕಿಯರ ತಂದೆ/ ಪತಿ ಇವರ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದು, ಇವರೆಲ್ಲಾ ಆತ್ಮವಿಶ್ವಾಸವನ್ನು ತಮ್ಮ ಮುಷ್ಟಿಯಲ್ಲಿಟ್ಟುಕೊಂಡು ದಾಪುಗಾಲಿನಲ್ಲಿ ಮುನ್ನಡೆಯುತ್ತಿದ್ದಾರೆ.
ಫೋಟೋ ಕೃಪೆ : google
ಆದರೆ ಮತ್ತೊಂದು ಬಗಲಿದೆ. ತನ್ನ ಅಸ್ತಿತ್ವ ಹಾಗೂ ಅಸ್ಮಿತೆಯನ್ನು ಕಳೆದುಕೊಂಡು ಬದುಕುವ ನತದೃಷ್ಟ ಹೆಣ್ಣಿನ ಚಿತ್ರಣವನ್ನು ’ದಿ ಗ್ರೇಟ್ ಇಂಡಿಯನ್ ಕಿಚನ್’ ಸಿನಿಮಾದಲ್ಲಿ ವೀಕ್ಷಕರ ಎದೆಗೆ ತಾಗುವಂತೆ ಚಿತ್ರಿಸಿದ್ದಾರೆ. ಸಾಧನೆಯ ಹಾದಿಯಲ್ಲಿ ನಡೆಯಬೇಕೆಂದು ಕನಸು ಹೊತ್ತ ಹೆಣ್ಣು, ಗಂಡಿನ ತುಳಿತಕ್ಕೆ ತತ್ತರಿಸಿ ಆ ಕನಸುಗಳೆಲ್ಲಾ ಅವಳ ಒಡಲೊಳಗೇ ಗರ್ಭಪಾತವಾಗಿ ಅವಳ ಉಸಿರು ನಶಿಸುವವರೆಗೂ ಕತ್ತಲ ಗರ್ಭದಲ್ಲೇ ಕರಗಿ ಹೋಗಿಬಿಡುವಳು. ಕೊನೆಗೆ ಅವಳ ದೈನಂದಿನ ಸಣ್ಣಪುಟ್ಟ ಬಯಕೆ, ಆಶಯಗಳಿಗೂ ಮಾನ್ಯತೆ ಕೊಡದ ಪುರುಷ ಅವಳನ್ನು ಅಧೀರಳನ್ನಾಗಿ ಮಾಡಿ ತನ್ನ ಅಧೀನದಲ್ಲಿಟ್ಟುಕೊಳ್ಳುವ ಹುನ್ನಾರದಲ್ಲೇ ಇರುತ್ತಾನೆ. ಒಟ್ಟಿನಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಆಕೆ ಅವನ ಅಡಿಯಾಳಾಗಿರಬೇಕೆಂಬುದೇ ಅವನ ಇಚ್ಛೆ.
ಈ ಕಥಾನಾಯಕಿಯಂತೆ, ಆ ಬೆಳ್ಳಿ ಸಂಕೋಲೆಯಿಂದ ಹೊರಬರುವ ಸಾಹಸ ಕೆಲ ಹೆಣ್ಣುಮಕ್ಕಳು ಮಾಡಿದರೆ, ಧೈರ್ಯ ಸಾಲದೆ ತಮ್ಮ ನಸೀಬೇ ಇಷ್ಟು ಎಂದು ಅಲವತ್ತುಕೊಂಡು ವಿಧಿಗೆ ಶರಣಾಗುವವರು ಅದೆಷ್ಟೋ ಮಂದಿ.
51ನೇ ಕೇರಳ ಸ್ಟೇಟ್ ಅವಾರ್ಡ್ ಗೆದ್ದುಕೊಂಡಿರುವ ‘ದಿ ಗ್ರೇಟ್ ಇಂಡಿಯನ್ ಕಿಚನ್’ ಒಂದು ಕುಟುಂಬವು ನೋಡಲೇಬೇಕಾದ ಸಿನಿಮಾ.
- ಧಾರಿಣಿ ಮಾಯಾ