ಸಿರಿಗರವ ಬಿಡಿಸಲು, ಆನಂದ ಭಾಷ್ಪ ಸುರಿಸಲು ಹಸಿರು ವನಸಿರಿ ಬೇಕು …ಡಾ. ಅಶೋಕ ಕುಮಾರ ಎಸ್ ಅವರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ನಿಸರ್ಗದ ಮಡಿಲಲ್ಲಿ ಗುಡಿಸಲು
ಹರುಷದ ಅಮೃತವ ಉಣಬಡಿಸಲು
ಪ್ರೀತಿ ವಾತ್ಸಲ್ಯದ ಝರಿಯು ತಡಿಸಲು.
ಭಾವದಂದಕಾರ ಬಿಡಿಸಲು
ಶುದ್ಧ ಮನಸಿಗೆ ಮಲ್ಲಿಗೆ ಮುಡಿಸಲು
ಸುಜ್ಞಾನದ ಜ್ಯೋತಿ ಬೆಳಕು ಮೂಡಿಸಲು.
ಸಿರಿಗರವ ಬಿಡಿಸಲು
ಆನಂದ ಭಾಷ್ಪ ಸುರಿಸಲು
ನೆಮ್ಮದಿಯ ಹೊನಲು ಹರಿಸಲು.
ಹಸುವಿಗೆ ಹಾಲು ಕರೆಯಲು
ಕರುವಿಗೆ ಚಿನ್ನಾಟವ ಮೆರೆಸಲು
ಬಾಯಿಗೆ ನೊರೆ ಹಾಲು ಜೇನು ಒರೆಸಲು.
ಕರಿ ಮೋಡ ಕಟ್ಟಲು
ನವಿಲು ಗರಿಗೆದರಿ ಕುಣಿಯಲು
ಬಾನಲ್ಲಿ ಕಾಮನ ಬಿಲ್ಲು ಮೂಡಲು.
ನೀರ ಬಾವಿ ತೋಡಲು
ಬಾನಲ್ಲಿ ಬೆಳ್ಳಿಚುಕ್ಕಿ ಮೂಡಲು
ಗದ್ದೆಗೆ ಜೋಡೆತ್ತಿನ ಗಳೆ ಹೂಡಲು.
ಬಾಯಾರಿ ಭೂಮಿ ಬಿರಿಯಲು
ಧಾರೆಗಟ್ಟಿ ವರ್ಷಧಾರೆ ಸುರಿಯಲು
ಹರುಷದ ಹೊನಲು ತುಂಬಿ ತುಳುಕಲು.
ಹಸಿರು ವನಸಿರಿ ತುಂಬಲು
ಕಣ್ಣಿಗೆ ಸೊಬಗು ಸವಿವ ಹಂಬಲು
ಮನದಲ್ಲಿ ಹಬ್ಬದಾನಂದವ ಉಂಬಲು.
- ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ – ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ ಯಾದಗಿರಿ ಜಿಲ್ಲೆ. ಜಿಲ್ಲಾಧ್ಯಕ್ಷರು ಸಿರಿಗನ್ನಡ ವೇದಿಕೆ ಯಾದಗಿರಿ ಜಿಲ್ಲಾ.
