‘ಹೆಣ್ಣಿನ ಶೋಷಣೆ’ ಕವನ – ಮಮತ (ಕಾವ್ಯ ಬುದ್ಧ)

ಕುರುಡಾದ ಜನರ ಅಂತರಂಗದಲ್ಲಿ ಕೇಳಲಾಗದ ಹೆಣ್ಣಿನ ಆಕ್ರಂದನ….ಕವಿಯತ್ರಿ ಮಮತ (ಕಾವ್ಯ ಬುದ್ಧ) ಅವರ ಕವನವನ್ನು ತಪ್ಪದೆ ಮುಂದೆ ಓದಿ…

ಎಲ್ಲೆಲ್ಲೂ ಹೀನೈಸುವರು
ಇವರ್ಯಾರು ಅವರ್ಯಾರೆಂಬ
೭೬ ವರ್ಷಗಳ ಸ್ವಾತಂತ್ರ್ಯ ದಲಿ
ಮಹಿಳೆಗೆ ಭದ್ರತೆ ಸಿಕ್ಕಿತೆಲ್ಲಿ?

ದೇಶದೆಲ್ಲೆಡೆಯ
ಬಣ್ಣದ ಚಿತ್ತಾರಗಳೆಲ್ಲೆಲ್ಲೂ
ತೆಗೆಯುವ ಮಾನ,
ಹೊಗಳಿಕೆಯು ನೆಪಮಾತ್ರದಲ್ಲಿ

ಎಲ್ಲ ಕಡೆಯಲ್ಲೂ
ನರಳಿ ಮಾಯವಾಗುತಿಹಳು
ಸಂಸಾರ, ಸಾಮಾಜಿಕದ
ಸಂಕೋಲೆಗಳಲ್ಲಿ

ಖಾಕಿ, ಖಾದಿ, ಕಾವಿಗಳು
ಹೇಳದೆ ಮಾಯವಾಗುತಿರುವಾಗ
ಯಾರ ನಂಬಲಿ
ನ್ಯಾಯಕ್ಕಿಂದು?

ಹೆಣ್ಣ ಮೇಲಿನ
ದೌರ್ಜನ್ಯದ ಕತ್ತಲಲಿ
ಎಲ್ಲೋಯ್ತು
ಮಹಾಶಯನ ರಾಮರಾಜ್ಯದ ಕನಸು?

ರಕ್ತ ಮಾಂಸಗಳ ಮೂಟೆ
ಹೊತ್ತ ದೇಹವು
ಯಂತ್ರದಂತೆಯೇ ಇರಬೇಕು
ಸದಾ ಅವಳು

ಹಗಲಲ್ಲೂ ಕಾಣುತಿಹೆ ಕತ್ತಲನೆ
ಕಾಮುಕರ ಕಣ್ಣು ತಪ್ಪಿಸಿ ಓಡಾದಿದೆ
ಹಸುಳೆ-ಅಬಲೆಯರ
ಕಾಮ ಪಿಚಾಚಿಗಳ ಅಟ್ಟಹಾಸವ

ಕೊಲ್ಲುತಿಹರು ಹೆಣ್ಣು ಹುಣ್ಣೆಂದು
ಗರ್ಭಿಣಿಯ ಹೊಟ್ಟೆ ಸೀಳಿ ಕತ್ತು ಕೋಯ್ದು ಕೊಲ್ಲುವಾಗ ಭ್ರೂಣದ ನೋವ ಸಹಿಸದಾದೆನಾ

ಬೆತ್ತಳೆ ಮೆರವಣಿಗೆ ಮಾಡಿಸುವರು
ಹಸಿದವಳು ಕದ್ದ ತುಂಡು ರೊಟ್ಟಿಗಾಗಿ
ಎದುರಿಸಿ ಮಾತಾಡಿದ ಹೆಣ್ಣನ್ನು
ಹತ್ಯೆಗೈವರು ಹಣ ಬಲದಿಂದ

ಪ್ರೀತಿ ದಿಕ್ಕರಿಸಿದಳೆಂದು
ಉರಿವ ಆಸಿಡ್‌ ಸುರಿದು
ಹೆಣ್ಣ ಅಂದಗೆಡಿಸಿ
ಬದುಕಿಗೆದುರು ನಿಲ್ಲಿಸಿ ಕುರೂಪಿಯಾಗಿಸುವರು

ಹೆಣ್ಣಿನ ಯಾತನೆಯ ಬಣ್ಣಿಸದೆ
ಪ್ರತಿ ಸೂರ್ಯಾಸ್ತದಲ್ಲಿ
ಮತ್ತೊಂದರ ಸೂರ್ಯೋದಯದ
ಖಾತ್ರಿಯಿಲ್ಲೆನಗೆ

ಬದಲಾದ ಪರಿಸ್ಥಿತಿಯಲ್ಲಿ
ಹೋರಾಟದ ಸ್ಥಿತಿ-ಗತಿ ಬಂದಿತೆಲ್ಲಿ
ಹೆಣ್ಣಿನ ಶೋಷಣೆಯು
ಇಂದು – ಅಂದೂ ಒಂದೇ

ಕುರುಡಾದ ಜನರ ಅಂತರಂಗದಲ್ಲಿ
ಕೇಳಲಾಗದ ಹೆಣ್ಣಿನ ಆಕ್ರಂದನ
ಹೇಳಿ- ಕೇಳಿದರಷ್ಟೇ ಕಥೆಯಲ್ಲಿ
ಭಾರತಾಂಬೆಯ ಪಾದ ಪ್ರೇಮದಲಿ
ನಲುಗಿದ ಹೆಣ್ಣಿನ ರಕ್ಷಣೆಯೆಲ್ಲಿ?
ಈ ೭೬ ವರ್ಷಗಳ ಸ್ವಾತಂತ್ರ್ಯದಲಿ


  • ಮಮತ (ಕಾವ್ಯ ಬುದ್ಧ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading