ಕೊಡಗಿನ ಉಸಿರು – ಕಾವೇರಿ

ಪಶ್ಚಿಮಘಟ್ಟದ ರಮಣೀಯ ಸ್ಥಳವಾದ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಕಾವೇರಿ ಜನಿಸಿದೆ. ಪ್ರಮುಖ ಉಪನದಿಗಳಾದ ಹೇಮಾವತಿ, ಹಾರಂಗಿ, ಕಬಿನಿ, ಭವಾನಿ, ನೊಯಾಲ್ ಅರ್ಕಾವತಿ, ಲಕ್ಷ್ಮಣತೀರ್ಥ ಸೇರಿದಂತೆ ಹಲವಾರು ಉಪನದಿಗಳಿವೆ. ಅವಿನಾಶ ಸೆರೆಮನಿ ಅವರು ‘ನದ – ನದಿಗಳ ನಿನಾದ’ ಅಂಕಣದಲ್ಲಿ ಕಾವೇರಿ ನದಿ ಕುರಿತಾಗಿದ್ದು , ತಪ್ಪದೆ ಮುಂದೆ ಓದಿ…

ಹಸಿರಿನ ಸಿರಿಯಲಿ ಮೈ ಬಳಕುತ್ತಾ ಜುಳು ಜುಳು ನಾದದಿ ಪ್ರಕೃತಿಯೇ ಬೆರಗಾಗುವಂತೆ ಹಾಲಿನಂತ ಮೈ ಕಾಂತಿಯು ಅಂಕು ಡೊಂಕುಗಳಲಿ ವಯ್ಯಾರದಿ ಹರಿಯುತ್ತಾ ಕಾನನದ ನಡುವೆ ಸರ ಸರನೆ ಹಾವಿನಂತೆ ಹೊಯ್ದಾಡುತ್ತಾ ಝರಿಗಳ ರೂಪದಲ್ಲಿ ಪ್ರಶಾಂತದಿ ನಿರ್ಲಿಪ್ತತೆದ ಭಾವದಿ ಸಕಲ ಜೀವರಾಶಿಗಳನು ಸಲಹುತ ಬೆಟ್ಟಗುಡ್ಡಗಳ ಕಿಕ್ಕಿರಿದಡವಿಂಚಿನ ಮಧ್ಯದಿ ನಿಸರ್ಗದ ಸೌಂದರ್ಯಕ್ಕೆ ಜೀವವನು ತುಂಬುತ್ತಾ ಖಗಮೃಗಗಳ ಧಣಿವನು ನೀಗಿಸುತ್ತ ಭೂಮಿಗಳ ದಾಹವನ್ನು ತೀರಿಸುತ್ತಿರುವ ಕನ್ನಡನಾಡಿನ ಜನರ ಜೀವನಾಡಿ. ದಕ್ಷಿಣ ಗಂಗೆ ಎಂದು ಪ್ರಸಿದ್ಧವಾಗಿರುವ ನದಿಯೇ ಕಾವೇರಿ.

ಈ ನದಿಯು ಕರುನಾಡಿನ ಜೀವ,ಕೊಡಗು ಜಿಲ್ಲೆಯ ಜನರ ಉಸಿರು.ಕರ್ನಾಟಕ ರಾಜ್ಯದ ಪಾಲಿನ ವರ, ಇಡೀ ನಾಡಿನ ಬವಣೆ ನೀಗಿಸುವ ಗಂಗಾ ಮಾತೆಯು. ಸದಾ ಲವಲವಕೆಯಿಂದ ಕಂಗೊಳಿಸುತ್ತ ಸುತ್ತಲಿನ ಪರಿಸರಕೆ ಹಸಿರ ಸೀರೆಯನ್ನು ತೊಡಿಸಿ ನೋಡುಗರನ್ನು ಕೈಬೀಸಿ ಕರೆಯುತ್ತದೆ.ಸಾವಿರಾರು ಜನರ ಜೀವನಕೆ ಕಲ್ಪವೃಕ್ಷವಾಗಿದೆ.ಕಾವು ಏರಿದ ಭೂಮಿಯ ತಣಿಸಲು ಧರೆಗಿಳಿದ ಪುಣ್ಯನದಿ.ಇದು ಭಕ್ತರ ಸಕಲ ರೋಗ ರುಜಿನಗಳ ನಿವಾರಿಸುವುದು ಎಂಬ ನಂಬಿಕೆ ಇದೆ.ಹಾಗಾಗಿ ಇದು ಪುರಾಣಗಳಲ್ಲಿಯೂ ಕೂಡ ತನ್ನದೆಯಾದ ಪ್ರಸಿದ್ಧತೆಯನ್ನು ಪಡೆದಿದ್ದು ಕಾವೇರಿ ನದಿಯು ಪುರಾಣಗಳಲ್ಲಿ ವರ್ಣಿಸಲಾದ ಪುಣ್ಯನದಿಗಳಲ್ಲಿ ಒಂದಾಗಿದ್ದು.ಪೂಜ್ಯನೀಯ ಮನ್ನಣೆಯನ್ನು ಗಳಿಸಿದೆ.ಅಷ್ಟೇ ಅಲ್ಲದೆ ದಕ್ಷಿಣದಲ್ಲಿರುವ ಏಕೈಕವಾಗಿಹ ಮಹಾನದಿ.

ಫೋಟೋ ಕೃಪೆ : google

ಕಾವೇರಿಯು ಹಸಿರಿನ ಸಿರಿಯಲಿ ಮಲೆನಾಡಿನ ಚೆಲುವಲಿ

ಸ್ವರ್ಗವೇ ಧರೆಗಿಳಿದಂತೆ ಭಾವ ಸೂಸುವ ಸೃಷ್ಟಿಯನ್ನೇ ಬೆರಗಾಗಿಸುವ ಸೌಂದರ್ಯದ ಗಣಿ, ಪಶ್ಚಿಮಘಟ್ಟದ ರಮಣೀಯ ಸ್ಥಳವಾದ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಜನಿಸಿದೆ. ಗಗನವನ್ನೇ ಚುಂಬಿಸುವ ಹಸಿರು ಸಾಲುಗಳಲಿ ನದಿ ಹರಿಯುತಿರೇ ಕಂಗಳಿಗೆ ಹಬ್ಬ ಸಮಯಕೆ ಸುಗ್ಗಿ .ಮನಗಳೆಲ್ಲವೂ ಬೀಗುವವು ಹಿರಿ ಹಿರಿ ಹಿಗ್ಗಿ ಅಷ್ಟರ ಮಟ್ಟಿಗೆ ಇದರ ಉಗಮ ಸ್ಥಾನವು ಪ್ರಸಿದ್ಧತೆಯನ್ನು ಗಳಿಸಿದೆ.ಕೊಡಗಿನ ಜನರು ಈ ನದಿಯನ್ನು ತಮ್ಮ ಕುಲದೈವದಂತೆ ಪೂಜಿಸುತ್ತಾರೆ. ಅಲ್ಲಿರುವ ಜನರು ಕೂಡ ನದಿಯ ಪಾವಿತ್ರ್ಯತೆಯನ್ನು ಕಾಪಾಡುವುದರೊಂದಿಗೆ ಅದುವೇ ಸಕಲ ಸರ್ವಸ್ವ ಎಂಬಂತೆ ಕಾಣುತ್ತಾರೆ. ಇಂದಿಗೂ ಕೊಡಗಿನ ಜನರಿಗೂ ಈ ನದಿಗೂ ಅವಿನಾಭಾವ ನಂಟಿದೆ.

ಇದು ಹಲವಾರು ಉಪನದಿಗಳನ್ನು ಹೊಂದಿದ್ದು ತಮ್ಮದೆಯಾದ ವಿಶಿಷ್ಟವಾದ ಮಹತ್ವವನ್ನು ಹೊಂದಿವೆ. ಪ್ರಮುಖ ಉಪನದಿಗಳಾದ ಹೇಮಾವತಿ,ಹಾರಂಗಿ,ಕಬಿನಿ,ಭವಾನಿ,ನೊಯಾಲ್ ಅರ್ಕಾವತಿ, ಲಕ್ಷ್ಮಣತೀರ್ಥ ಸೇರಿದಂತೆ ಹಲವಾರು ಉಪನದಿಗಳಿವೆ.ಇವುಗಳು ಕೂಡ ವಿವಿಧ ಸ್ಥಳಗಳಲ್ಲಿ ಹರಿದು ಮುಂದೆ ಸಾಗುತ ನಾಡಿನ ಪ್ರತಿ ಕಣ ಕಣದ ಉಸಿರಾಗಿವೆ.ಇದರ ಜಲಾನಯನ ಪ್ರದೇಶವು ಮೂರು ರಾಜ್ಯಗಳನ್ನು ಮತ್ತು ಒಂದು ಕೇಂದ್ರಾಡಳಿತ ಪ್ರದೇಶವನ್ನು ಆವರಿಸಿದೆ.ರಾಜ್ಯಗಳಾದ ತಮಿಳುನಾಡು ,ಕರ್ನಾಟಕ ಕೇರಳ,ಮತ್ತು ಪುದುಚೇರಿಯತ್ತ ಸಾಗುತ ಮುಂದೆ ಬಂಗಾಳಕೋಲ್ಲಿಯನ್ನು ಸೇರುತ್ತದೆ.ಇದರಿಂದ ಹಲವು ಜಲಪಾತಗಳು ಉಗಮಿಸಿವೆ.ಅದರಲ್ಲಿ ಪ್ರಮುಖವಾದ ಜಲಪಾತ ಕರ್ನಾಟಕದಲ್ಲಿ ಮೊಟ್ಟ ಮೊದಲು ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲು ಆರಂಭಿಸಿದ ಜಲಪಾತ,ನಿಸರ್ಗದ ಸೌಂದರ್ಯದ ಮಣಿಯೇ ಶಿವನ ಸಮುದ್ರ ಜಲಪಾತ.ಇದು ಈ ನದಿಯ ಅತ್ಯಂತ ಪ್ರಮುಖ ಜನಮಾನಸದಲ್ಲಿ ಅಚ್ಚೋತ್ತಿದ ಜಲಪಾತ ಸುಮಾರು 320 ಅಡಿಗಳ ಎತ್ತರದಿಂದ ಹಾಲಿನಂತೆ ಧುಮುಕುತ್ತಾ ರಭಸದಿಂದ ಧರೆಯನು ತಲುಪುತ್ತದೆ.ಅಲ್ಲದೆ ಭರಚುಕ್ಕಿ,ಗಗಣಚುಕ್ಕಿ ಎಂಬ ಎರಡು ಜಲಪಾತಗಳನ್ನು ಸೃಷ್ಟಿಸುತ್ತದೆ.

ಈ ನದಿಯು ಪೌರಾಣಿಕ ಹಿನ್ನೆಲೆಯನ್ನು ಹೊಂದಿದ್ದು ಸಾಕಷ್ಟು ಮೌಲಿಕ ಮೌಲ್ಯವನ್ನು ಹೊಂದಿದೆ.ನೀರಾವರಿಗೆ ಪ್ರಮುಖ ಮೂಲವಾಗಿದ್ದು ನಾಡನ್ನು ಬೆಳಗುವ ವಿದ್ಯುತ್ತನ್ನು ಉತ್ಪಾದಿಸುವ ಪ್ರಮುಖ ಮೂಲ ಕೇಂದ್ರವಾಗಿದೆ.ಈ ನದಿಯ ಹಿನ್ನೆಲೆಯನ್ನು ಅವಲೋಕಿಸಿದಾಗ ನೀರಾವರಿಗೆ ಅತ್ಯಂತ ಹೆಚ್ಚಿನ ರೀತಿಯಲ್ಲಿ ಬೆಂಬಲ ನೀಡಿದೆ.ನೀಡುತ್ತಲಿದೆ.ಅಲ್ಲದೆ ಪ್ರಾಚೀನ ವಿವಿಧ ಸಾಮ್ರಾಜ್ಯಗಳು ಮತ್ತು ದಕ್ಷಿಣದ ಆಧುನಿಕ ನಗರಗಳ ಜೀವನಾಡಿಯಾಗಿ ಕಾರ್ಯ ನಿರ್ವಹಿಸಿದೆ.ಈ ನದಿಯು ಕೂಡ ರಾಜ್ಯಗಳ ನಡುವೆ ತಂಟೆಗೂ ಕಾರಣವಾಗಿದ್ದು.ಆದರೂ ಇಂದಿಗೂ ಕೇರಳ,ಕರ್ನಾಟಕ, ತಮಿಳುನಾಡಿನ ಜನರ ಪಾಲಿಗೆ ಸಂಜೀವಿನಿಯಾಗಿದೆ.ಈ ನದಿಯನ್ನು ತಮಿಳಿನ ಸಾಹಿತ್ಯದಲ್ಲಿ ವಿಶಿಷ್ಟ ರೀತಿಯಿಂದ ವರ್ಣಿಸಲಾಗಿದೆ.ಮತ್ತು ಹಿಂದೂ ಧರ್ಮದಲ್ಲಿ ದೈವೀ ರೂಪದಲ್ಲಿ ಕುಲದೈವದ ರೂಪದಲ್ಲಿ ಪೂಜಿಸುತ ಗೌರವದಿಂದ ಕಾಣಲಾಗುತ್ತದೆ.

ಈ ನದಿಗೆ ಹಲವಾರು ಪೌರಾಣಿಕ ಕಥೆಗಳ ಹಿನ್ನಲೆಗಳಿವೆ. ಬ್ರಹ್ಮನ ಮಗಳಾದ ಲೋಪಾಮುದ್ರ ಭೂಲೋಕದಲ್ಲಿ ಲೋಕದ ಉದ್ದಾರಕ್ಕಾಗಿ ನೆಲೆಸಿದ್ದಳು. ಕವರೇನೆಂಬ ಮುನಿಯು ಬ್ರಹ್ಮನ ಕುರಿತಾಗಿ ತಪ್ಪಸ್ಸನ್ನಾಚರಿಸಿದ ಬ್ರಹ್ಮನಿಂದ ವರವ ಪಡೆದನು. ನದಿಯ ಉಗಮಕೆ ಮುನಿಗಳು ಸೂಕ್ತ ಸ್ಥಳವನ್ನು ಹುಡುಕುವಾಗ ಗಣೇಶನು ಇದೆ ಜಾಗ ಸೂಕ್ತ ಎಂದು ಕಮಂಡಲ ನೆಲದ ಮೇಲೆ ಇಟ್ಟನು ಅಲ್ಲಿಯೇ ಒಂದು ಕಾಗೆಯು ಕಮಂಡಲವನ್ನು ತಾಗುವಂತೆ ಕುಳಿತುಕೊಂಡಿತ್ತು. ಆಗ ಮುನಿಗಳು ಕಾಗೆಯನ್ನು ಓಡಿಸಲು ಪ್ರಯತ್ನಿಸಿದಾಗ ಕಮಂಡಲದಿಂದ ನೀರು ಚೆಲ್ಲಿತು.ಆಗ ಸಣ್ಣ ಪ್ರಮಾಣದ ಉದಕವು ಜಲಧಾರೆಯಾಗಿ ಹರಿಯಿತು.ಅದುವೇ ಕಾವೇರಿ ನದಿಯಾಗಿ ಹರಿಯುತ್ತಾ ನೀರು ಹೆಚ್ಚುತ್ತಾ ಇಕ್ಕೆಲವುಗಳಲಿ ಸಾಗುತ್ತಾ ಇಡೀ ನಾಡಿಗೆ ವರವಾಯ್ತು ಎಂಬುದನ್ನು ಪೌರಾಣಿಕ ಕಥೆ ಹೇಳುತ್ತದೆ.ಹೀಗೆ ಹಲವು ಕಥೆಗಳ ಈ ನದಿಯ ಹುಟ್ಟಿಗೆ ಕಾರಣವಾಗಿದೆ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.

ಕೊಡಗಿನ ಬೆಟ್ಟಗಳಲ್ಲಿ ನುಸುಳುತ್ತಾ ಮುಂದೆ ಸಾಗುತ ದಕ್ಷಿಣ ಪ್ರಸ್ತಭೂಮಿಯ ಪೂರ್ವಕ್ಕೆ ಹರಿಯುತ್ತದೆ.ಕರುನಾಡಲ್ಲಿ ಶ್ರೀರಂಗಪಟ್ಟಣ, ಮತ್ತು ಶಿವನಸಮುದ್ರ ಹಾಗೂ ತಮಿಳುನಾಡಿನಲ್ಲಿ ಶ್ರೀರಂಗವೆಂಬ ಮೂರು ದ್ವೀಪಗಳನ್ನು ಹೊಂದಿದೆ.ಶಿವನ ಸಮುದ್ರದಲ್ಲಿ 1902ರಲ್ಲಿ ಜಲವಿದ್ಯುದಾಗಾರ ನಿರ್ಮಿಸಿ ಬೆಂಗಳೂರು ನಗರಕ್ಕೆ ಬೆಳಕನ್ನು ಕರುಣಿಸುತ್ತಿತ್ತು.ಹೊಗೇನಕಲ್ ಜಲಪಾತ ಬಿದ್ದ ನಂತರ ಈ ನದಿ ತಂಜಾವೂರ ಜಿಲ್ಲೆ ಮುಖಾಂತರ ಹರಿದು ಕೊನೆಗೆ ಇಬ್ಬಾಗವಾಗಿ ಬಂಗಾಳಕೋಲ್ಲಿಯನ್ನು ಸೇರುತ್ತದೆ.

ಫೋಟೋ ಕೃಪೆ : google

ಕರ್ನಾಟಕದಲ್ಲಿ ಕಾವೇರಿ ನದಿಗೆ ಒಟ್ಟು 12 ಜಲಾಶಯ ಮತ್ತು ಅಣೆಕಟ್ಟುಗಳನ್ನು ನಿರ್ಮಿಸಲಾಗಿದ್ದು.ಇವುಗಳ ಮುಖ್ಯ ಉದ್ದೇಶ ನೀರಾವರಿ.ಇದರಲ್ಲಿ ಮಡದ ಕಟ್ಟೆ ಬಳಿಯಿರುವ ಅಣೆಕಟ್ಟು ಅತ್ಯಂತ ಉದ್ಧವಾಗಿದ್ದು 10,000 ಎಕರೆ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ.ಇದೆ ಕಾಲುವೆ ಮೈಸೂರು ನಗರಕ್ಕೆ ಸ್ವಲ್ಪ ಭಾಗದಷ್ಟು ಕುಡಿಯಲ್ಲಿಕ್ಕೆ ನೀರು ಒದಗಿಸುತ್ತದೆ.ಶ್ರೀರಂಗಪಟ್ಟಣದ ಬಳಿಯಿರುವ ಬಂಗಾರ ದೊಡ್ಡಿ ನಾಲೆ ಮೈಸೂರು ಒಡೆಯರ್ ರಾಜಮನೆತನದ ರಣಧೀರ ಕಂಠೀರವ ಕಟ್ಟಿಸಿದ್ದು . ಕರ್ನಾಟಕದಲ್ಲೆ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅತ್ಯಂತ ಪ್ರಸಿದ್ದ ಜಲಾಶಯ ಕೃಷ್ಣರಾಜಸಾಗರ.

ತಲಕಾವೇರಿಯಲ್ಲಿ ತೀರಥೋದ್ಭವ ಎಂದು ಉತ್ಸವ ರೀತಿಯಲ್ಲಿ ಆಚರಿಸುತ್ತಾರೆ. ತುಲಾ ಸಂಕ್ರಮಣದಂದು ಸೂರ್ಯನು ತುಲಾ ರಾಶಿ ಪ್ರವೇಶಿಸುವನು.ಈ ಪುಣ್ಯ ದಿನದಂದು ಗಂಗೆ ಮೊದಲಾದ ಆರು ಪವಿತ್ರ ನದಿಗಳು ಕಾವೇರಿಯಲ್ಲಿ ಬಂದು ಸೇರುತ್ತವೆಂಬ ನಂಬಿಕೆಯಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರತಿವರ್ಷ ಈ ದಿನ ತಲಕಾವೇರಿಯ ಜ್ಯೋತಿ ಮಂಟಪದ ಮುಂದಿರುವ ಕುಂಡದಲ್ಲಿ ನೀರಿನ ಬಗ್ಗೆ ಮೂರು ಬಾರಿ ಬರುತ್ತದೆ. ಇದನ್ನು ತಿರಥೋದ್ಭವ ಎನ್ನುವರು.ಈ ಬುಗ್ಗೆಯಲ್ಲಿ ಆರು ಪುಣ್ಯನದಿಗಳಾದ ಗಂಗೆ,ಯಮುನೆ,ಗೋದಾವರಿ,ಸರಸ್ವತಿ ನರ್ಮದಾ,ಸಿಂಧು ನದಿಗಳು ಅಂತರವಾಹಿನಿಯಾಗಿ ಬಂದು ಕಾವೇರಿಯನ್ನು ಸೇರಿ.ಜನರು ತಾವು ಮಾಡಿದ ಪಾಪ ಕರ್ಮಗಳನ್ನು ಕಳೆದುಕೊಳ್ಳುವರು ಎಂಬ ನಂಬಿಕೆ ಇದೆ.ತಿರಥೋದ್ಭವ ಇದು ಕೊಡಗಿನ ಜನತೆಗೆ ಮಹಾ ಹಬ್ಬ.ಧಾರ್ಮಿಕ ಆಚರಣೆಗೆ ಅನುಗುಣವಾಗಿ ಸಂಪ್ರದಾಯಕವಾಗಿ ಆಚರಿಸುವರು.ತಮಿಳುನಾಡಿನ ಜನತೆಯಲ್ಲಿ ತುಲಾ ಮಾಸದ ಕಾವೇರಿ ಸ್ನಾನವು ಸರ್ವ ಪಾಪಗಳನ್ನು ನಿವಾರಣೆ ಮಾಡುತ್ತೆ ಎಂಬ ನಂಬಿಕೆಯಿದೆ.

ಈ ನದಿಯ ಇನ್ನೊಂದು ಪ್ರಮುಖ ಯೋಜನೆಯಾದ ಕಾವೇರಿ ನದಿಯ ಮೇಕೆದಾಟು ಅಣೆಕಟ್ಟು ಯೋಜನೆಯು ಸಾಕಷ್ಟು ರೀತಿಯಲ್ಲಿ ಅನುಕೂಲಗಳನ್ನು ಹೊಂದಿದ್ದು ನಾಡಿಗೆ ಅಲ್ಲದೆ ರಾಜ್ಯಗಳಿಗೆ ಬಹಳಷ್ಟು ಲಾಭಕರವಾಗಿದೆ ಅಲ್ಲದೆ ಕರ್ನಾಟಕವು ಹೆಚ್ಚುವರಿ ಈ ಯೋಜನೆಯಿಂದ ಹೆಚ್ಚಿನ ನೀರನ್ನು ಬಳಸಬಹುದು.ಪ್ರಮುಖವಾಗಿ .ಈ ಯೋಜನೆಯಿಂದ ನೈಸರ್ಗಿಕವಾಗಿ ಹರಿಯುವ ನೀರಿನಿಂದ ವಿದ್ಯುತ್ ಉತ್ಪಾದಿಸಬಹುದು.ಬೆಂಗಳೂರಿಗೆ ಬೇಕಾದಷ್ಟು ನೀರು ಸಂಗ್ರಹಿಸಬಹುದು.ಕೆ ಆರ್ ಎಸ್ ಅಣೆಕಟ್ಟಿನಿಂದ ಹರಿಯುವ ಹೆಚ್ಚುವರಿ ನೀರನ್ನು ಶೇಖರಿಸಬಹುದು.ನೀರಿನ ಹಂಚಿಕೆಯ ನಿಯಂತ್ರಣ ಕೂಡ ಮಾಡಬಹುದು.

ಕಾವೇರಿ ನದಿಯು ಮೂರು ರಾಜ್ಯಗಳ ಕೃಷಿ ಕ್ಷೇತ್ರ, ಕೈಗಾರಿಕಾ ಕ್ಷೇತ್ರದ ಮೂಲವಾಗಿದ್ದು ಉತ್ಪಾದನೆಯನ್ನು ಹೆಚ್ವಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಒಟ್ಟಿನಲ್ಲಿ ಈ ನದಿಯು ಕರುನಾಡಿನ ಜೀವ ನದಿಯಾಗಿದ್ದು.ಜನರ ಪಾಲಿನ ಸಂಜೀವಿನಿಯಾಗಿದೆ.

ಹಿಂದಿನ ಸಂಚಿಕೆಗಳು :


  • ಅವಿನಾಶ ಸೆರೆಮನಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading