ಕತೆ ಚಿಕ್ಕದಾದರೂ ವಾಸ್ತವಕ್ಕೆ ಹತ್ತಿರವಿದೆ. ಇದೊಂದು ಮನೆ ಮನೆಯ ಕತೆ. ಕತೆಗಾರ್ತಿ ವಸಂತ ಗಣೇಶ್ ಅವರ ಸರಳ ಸುಂದರ ಬರಹವನ್ನು ತಪ್ಪದೆ ಮುಂದೆ ಓದಿ…
ನಮ್ಮ ಅಳಿಯಂದ್ರು ಎಷ್ಟು ಧಾರಾಳಿಗಳು ಗೊತ್ತಾ ಕಾಮಾಕ್ಷಮ್ಮ, ದಿನಾ ಸಂಜೆ ಬರುವಾಗ ಕೊತ್ತಂಬರಿ ಸೊಪ್ಪು, ಕರಿಬೇವು, ಹಸಿ ಮೆಣಸಿನಕಾಯಿ ಎಲ್ಲಾ ತೆಗೆದುಕೊಂಡು ಬರ್ತಾರೆ. ಆದ್ರೂ ನನ್ನ ಮಗ ಸೊಸೆಗೆ ಅವರು ಬರೋದು ಇಷ್ಟನೇ ಆಗೊಲ್ಲ ಕಣ್ರೀ. ಹೀಗೆ ಶುರುಮಾಡಿದ ಸುಂದ್ರಮ್ಮ ಮಗ ಸೊಸೆಗೆ ಅಷ್ಟೋತ್ತರ ಸಹಸ್ರನಾಮ ಆರಂಭಿಸಿದರು.
ಕಾಮಾಕ್ಷಮ್ಮ ಅಯ್ಯೋ ಹೌದೇನ್ರಿ… ಅದ್ಯಾಕೆ ಹಾಗೆ ಮಾಡ್ತಾರೆ ನಿಮ್ಮ ಮಗ ಸೊಸೆ, ಅಂದದ್ದೇ ನಿದ್ದೆ ಮಾಡೋನಿಗೆ ಹಾಸಿಗೆ ಹಾಸಿಕೊಟ್ಟಂತೆ ಆಗಿತ್ತು ಸುಂದ್ರಮ್ಮನಿಗೆ.
ಹು ಕಣ್ರೀ ಯಾವಾಗಲೂ ಸಿಡಿ ಸಿಡಿ ಮಾಡ್ತಾನೆ ಇರ್ತಾರೆ ಮಗ – ಸೊಸೆ. ನೋಡ್ರಿ ನನ್ನ ಮಗಳು ಅಳಿಯ ಇಬ್ಬರೂ ಕೆಲಸಕ್ಕೆ ಹೋಗ್ತಾರೆ. ಮಗು ಬೇರೆ ಇದೆ, ಮಗು ನೋಡಿಕೊಳ್ಳೇಕೆ ಯಾಕೆ ಬೇರೆಯವರಿಗೆ ದುಡ್ಡು ಕೊಡ್ತೀಯಾ, ಅದೂ ಅಲ್ಲದೆ ಬೇಬಿ ಕೇರ್ ಗಳಲ್ಲಿ ಮಕ್ಕಳಿಗೆ ಏನೇನೂ ಮಾತ್ರೆಗಳನ್ನು ಹಾಕಿ ನಿದ್ದೆ ಮಾಡಿಸಿ ಬಿಡುತ್ತಾರೆ. ಅವರು ಸರಿಯಾಗಿ ನೋಡಿಕೊಳ್ಳುವುದು ಇಲ್ಲ, ನಾನೇ ನೋಡಿಕೊಳ್ತಿನಿ ಅಂತ ಹೇಳಿದ್ದೀನಿ. ಅದಕ್ಕೆ ಪಾಪ ನನ್ನ ಮಗಳು ಅಳಿಯ ಬೆಳಗ್ಗೆನೇ ಬಂದು ಮಗು ಬಿಟ್ಟು ನಮ್ಮ ಮನೆಲೇ ತಿಂಡಿ ತಿಂದುಕೊಂಡು ಮಾಡಿಟ್ಟ ಅಡಿಗೆ ಡಬ್ಬಿ ಕಟ್ಟಿಕೊಂಡು ಹೋಗ್ತಾರೆ.
ಅವರೇನು ಅದೇ ತಿಂಡಿ ಬೇಕು ಇದೇ ಅಡಿಗೆ ಬೇಕು ಅನ್ನೋಲ್ಲ ಗೊತ್ತಾ. ಬೆಳಗ್ಗೆ ಹೊತ್ತು ಪೂರಿ ಪಲ್ಯ, ದೋಸೆ, ಇಡ್ಲಿ, ಕೇಸರಿಭಾತು ಉಪ್ಪಿಟ್ಟು ಇಂತದ್ದು ಮಾಡಿದ್ರೆ ಸಾಕು. ಇನ್ನು ಮಧ್ಯಾನ್ಹ ಡಬ್ಬಿಗೆ ಬಿಸಿಬೆಳೆಬಾತು, ಕಲಸಿದ ಅನ್ನ, ಪಲಾವು ಇಲ್ಲ ಚಪಾತಿ ಪಲ್ಯ ಇಂತಾದಾದ್ರೆ ಸಾಕು ಅಂತಾರೆ ಪಾಪ ಅವರೇನು ಅದೇ ಬೇಕು ಇದೇ ಬೇಕು ಅನ್ನೋಲ್ಲ ಗೊತ್ತಾ.
ಹೌದಾ, ಪಾಪ ಒಳ್ಳೆಯ ಅಳಿಯ ಮಗಳು ಬಿಡಿ ಅವರು. ಕಾಮಾಕ್ಷಮ್ಮನ ಉವ್ವಾಚ.
ಪಾಪ ಸಂಜೆ ಬರೋಹೊತ್ತಿಗೆ ಸುಸ್ತಾಗಿರುತ್ತೆ ಅಂತ ನಾನೇ ರಾತ್ರಿಗೆ ಬಿಸಿಯಾಗಿ ಅನ್ನ ಸಾರು ಪಲ್ಯ ಮಾಡಿಟ್ಟಿರುತ್ತೀನಿ. ಊಟ ಮಾಡಿಕೊಂಡು ಅವರ ಮನೆಗೆ ಹೋಗಿ ಅಲ್ಲೇ ಮಲಗ್ತಾರೆ ಗೊತ್ತಾ. ಮತ್ತೆ ಭಾನುವಾರ ಪಾಪ ಅವರು ವಾರವಿಡೀ ಕೆಲಸ ಮಾಡಿ ಸುಸ್ತಾಗಿರುತ್ತೆ ಅಂತ ನಾನೇ ಕರೆದು ಏನಾದ್ರು ವಿಶೇಷ ಅಡಿಗೆ ಮಾಡಿ, ಮಗಳು ಮೊಮ್ಮಗುವಿಗೆ ಹರಳೆಣ್ಣೆ ಹಚ್ಚಿ ನೀರು ಹಾಕ್ತಿನಿ ಕಣ್ರೀ. ಅದ್ಕೆ ನನ್ನ ಮಗ ಸೊಸೆಗೆ ಕಣ್ಣು ಕೆಂಪು ಮಾಡಿಕೊಂಡು ಸಿಡಿ ಸಿಡಿ ಮಾಡ್ತಾರೆ ಗೊತ್ತಾ. ಪಾಪ ಅಳಿಯಂದ್ರು ಇಲ್ಲಿ ಊಟ ಮಾಡ್ತೀವಿ ಅಂತ ಕೊತ್ತಂಬರಿ ಕರಿಬೇವು ಹಸಿರು ಮೆಣಸಿನಕಾಯಿ ತರ್ತಾರೆ ಗೊತ್ತಾ ಎಷ್ಟು ಧಾರಾಳ ಗೊತ್ತಾ ನಮ್ಮ ಅಳಿಯಂದ್ರು.
ಅಯ್ಯೋ ಪಾಪ ಹೌದೇನ್ರಿ ಎಂದ ಕಾಮಾಕ್ಷಮ್ಮನ ಮಾತಿಗೆ ಸುಂದ್ರಮ್ಮ ಮುಂದುವರೆಸಿ. ನೋಡ್ರಿ ನಾನು ನನ್ನ ಮಗಳ ಮಗು ನೋಡಿಕೊಳ್ಳುವುದರಿಂದ ನಿಮ್ಮ ಮಗು ನೋಡ್ಕೊಳ್ಳೊಕೆ ಆಗೊಲ್ಲ ಬೇಬಿ ಕೇರ್ ನಲ್ಲಿ ಬಿಡಿ ಅಂತ ಹೇಳಿದ್ದಕ್ಕೆ ಅದೇ ದೊಡ್ಡ ತಪ್ಪು ಅಂತಾರೆ ಮಗ ಸೊಸೆ. ಇಬ್ಬರೂ ದುಡಿತಾರೆ ಊರ ತುಂಬಾ ಬೇಬಿ ಕೇರ್ ಗಳು ಬೇಕಾದಷ್ಟು ಇಲ್ವಾ ಅಲ್ಲಿ ಬಿಡೋಕೆ ಅಗೋಲ್ವೇನ್ರೀ. ನೀವೇನೇ ಹೇಳಿ ನನ್ನ ಮಗಸೊಸೆ ತುಂಬಾ ಜಿಪುಣರು ಕಣ್ರೀ.
ನೋಡ್ರಿ ಕಾಮಾಕ್ಷಮ್ಮ, ವಾರದಲ್ಲಿ ಒಂದು ನಾಲ್ಕೈದು ದಿನ ಮಗ ಸೊಸೆ ರಾತ್ರಿ 9ಕ್ಕೆ ಬರುವ ಹೊತ್ತಿಗೆ ಮಾಡಿದ ಅಡಿಗೆ ಖಾಲಿಯಾಗಿರುತ್ತಪ್ಪ. ಒಂದು ಅನ್ನ ಮಾಡಿಕೊಂಡು ಸಾರು ಇದ್ರೆ ಸಾರು ಇಲ್ಲ ಅಂದ್ರೆ ಮಜ್ಜಿಗೆ ಹಾಕಿಕೊಂಡು, ಊಟ ಮಾಡಿ ಅಂದ್ರೆ ಅದಕ್ಕೂ ಸಿಡುಗುಡ್ತಾರೆ ಕಣ್ರೀ. ಒಂದು ಅನ್ನ ಮಾಡ್ಕೊಳೋಕು ಅಗೋಲ್ಲ ನೋಡ್ರಿ ನನ್ನ ಸೊಸೆಗೆ.
ಮಗ ಸೊಸೆ ಒಂದು ತಿಂಗಳಿಗೆ ಅಂತ ಶೆಟ್ಟರ ಅಂಗಡಿಲಿ ತಂದ ಅಡಿಗೆ ಸಾಮಾನು ಎಲ್ಲ ಹದಿನೈದನೇ ತಾರೀಕಿಗೆ ಖಾಲಿಯಾಗಿದೆ ಅಂದ್ರೆ ಅದ್ಕೂ ಸಿಡಿ ಮಿಡಿ ಮಾಡ್ತಾರೆ ಗೊತ್ತಾ. ಪಾಪ ನಮ್ಮ ಅಳಿಯಂದ್ರು ದಿನಾ ಕೊತ್ತಂಬರಿ ಕರಿಬೇವು ಹಸಿ ಮೆಣಸು ತರ್ತಾರೆ ಎಷ್ಟೊಂದು ಧಾರಾಳ ಗೊತ್ತಾ. ಮಗ ಸೊಸೆ ನೋಡಿದ್ರೆ ಮನೆಗೆ ಸಾಮಾನು ತರೋಕೆ ಹೀಗಾಡ್ತಾರೆ , ನೀವ್ ಏನೇ ಹೇಳಿ ನನ್ನ ಮಗ ಸೊಸೆ ತುಂಬಾ ಜಿಪುಣರು ಕಣ್ರೀ.
- ವಸಂತ ಗಣೇಶ್
