ಕಾಡು ಮಲ್ಲಿಗೆಯ ಕಂಪು ನಾಡಿಗೆ ಬಂದ ಕಥನ

‘ಕಾಡು ಮಲ್ಲಿಗೆ ಮತ್ತು ಇತರ ಕಥೆಗಳು’ ಹೆಸರಿನಲ್ಲಿ ಹತ್ತು ಕಥೆಗಳ ಸಂಕಲನ ಈಗ ಹೊರ ಬರುತ್ತಿದೆ. ಪತ್ರಕರ್ತರಾದ ಎನ್.ಎಸ್.ಶ್ರೀಧರ ಮೂರ್ತಿ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಈ ಕೃತಿ ರೂಪುಗೊಂಡಿದ್ದರ ಹಿಂದೆ ಒಂದು ದೊಡ್ಡ ಕಥೆಯೇ ಇದೆ!

1995ರ ಸುಮಾರಿಗೆ ವಿಜಯನಾರಸಿಂಹ ನನ್ನ ಬಳಿ ಒಂದಿಷ್ಟು ಕಥೆಗಳನ್ನು ಬರೆಯುತ್ತಿದ್ದೇನೆ, ಎನ್ನುವ ಪ್ರಸ್ತಾಪವನ್ನು ಮಾಡಿದ್ದರು. ಆ ವೇಳೆಗಾಗಲೇ ಅವರನ್ನು ಕಣ್ಣಿನ ಸಮಸ್ಯೆ ಕಾಡುತ್ತಿತ್ತು. ಹೀಗಾಗಿ ಮಡದಿ ಸರಸ್ವತಿಯವರೇ ಬರೆದು ಕೊಳ್ಳುವ ಹೊಣೆಯನ್ನು ಹೊತ್ತಿದ್ದರು. ಈ ಕಾರ್ಯ ಅವರ ಜೀವಿತಾವಧಿಯಲ್ಲಿ ಪೂರ್ಣವಾಗಲೇ ಇಲ್ಲ.

ವಿಜಯನಾರಸಿಂಹ ಅವರ ನಂತರವೂ ಅವರ ಕುಟುಂಬದ ಜೊತೆಗೆ ನನ್ನ ಆತ್ಮೀಯ ಒಡನಾಟ ಮುಂದುವರೆಯಿತು. ಮಗಳು ಭುವನೇಶ್ವರಿ, ಅಳಿಯ ಶಾರದಾ ಪ್ರಸಾದ್, ಮೊಮ್ಮಕ್ಕಳು ಗೌತಮ್, ಅರ್ಚನಾ, ಸಂದೀಪ್ ಎಲ್ಲರೂ ನನ್ನ ಬಗ್ಗೆ ಅಕ್ಕರೆಯನ್ನು ಇಟ್ಟು ಕೊಂಡವರೇ. ಒಂದು ರೀತಿಯಲ್ಲಿ ನಾನು ಅವರ ಕುಟುಂಬದ ಭಾಗವೇ ಆಗಿ ಬಿಟ್ಟಿದ್ದೆ. ಸರಸ್ವತಿ ಮೇಡಂ ಅವರಿಗೆ ಈ ಕಾರ್ಯ ಮುಂದುವರೆಸ ಬೇಕು ಎನ್ನುವ ಹಂಬಲ. ನಾನು ಭೇಟಿಯಾದಗಲೆಲ್ಲ ಇದನ್ನು ಪ್ರಸ್ತಾಪಿಸುತ್ತಲೇ ಇದ್ದರು. ಕೊನೆಗೊಮ್ಮ 2009ನೆಯ ಇಸವಿಯಲ್ಲಿ ನಲವತ್ತು ಕಥೆಗಳನ್ನು ಕೊಟ್ಟು ‘ನನ್ನ ಹೊಣೆ ಮುಗಿಯಿತು, ಇನ್ನು ಮುಂದಿನದು ನಿನ್ನ ಜವಾಬ್ದಾರಿ’ ಹೀಗೆ ಹೇಳಿದ ನಾಲ್ಕೇ ದಿನಕ್ಕೆ ನಮ್ಮನ್ನು ಅಗಲಿದರು. ಈಗ ದೊಡ್ಡ ಜವಾಬ್ದಾರಿ ನನ್ನ ಹೆಗಲೇರಿತು. ಅನೇಕ ಪ್ರಕಾಶಕರ ಬಳಿ ಮಾತನಾಡಿದೆ. ಎಲ್ಲರೂ ತೊಡಕುಗಳ ಕುರಿತೇ ಮಾತನಾಡುತ್ತಿದ್ದರು.

ಬಹಳ ಕಾಲದ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಮತ್ತು ಚಿತ್ರಗೀತೆಗಳ ಕುರಿತು ಅಪಾರ ಆಸಕ್ತಿಯನ್ನೂ ಇಟ್ಟು ಕೊಂಡವರಾದ ‘ಮಧುರ ಮಧುರವೀ ಮಂಜುಳ ಗಾನ’ದ ಖ್ಯಾತಿಯ ನಾಡೋಜ ಡಾ.ಮಹೇಶ ಜೋಶಿಯವರ ಬಳಿ ಪ್ರಸ್ತಾಪಿಸಿದಾಗ ಅವರು ಸಂತೋಷದಿಂದ ಒಪ್ಪಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ಸಮಿತಿಯಲ್ಲಿಯೂ ಇದಕ್ಕೆ ಒಪ್ಪಿಗೆ ದೊರಕಿತು. ಮಂಡ್ಯ ಜಿಲ್ಲೆ ಪಾಂಡವಪುರದ ಬಳಿಯ ಹಳೇಬೀಡಿನವರಾದ ವಿಜಯನಾರಸಿಂಹ ಅವರ ಕೃತಿ ಮಂಡ್ಯದಲ್ಲಿ ಅಯೋಜಿತವಾಗಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ಬಿಡುಗಡೆಯಾಗುತ್ತಿರುವುದು ಅರ್ಥಪೂರ್ಣವೂ ಆಗಿದೆ.

ಮೊದಲ ಕಂತಾಗಿ ‘ಕಾಡು ಮಲ್ಲಿಗೆ ಮತ್ತು ಇತರ ಕಥೆಗಳು’ ಹೆಸರಿನಲ್ಲಿ ಹತ್ತು ಕಥೆಗಳ ಸಂಕಲನ ಈಗ ಹೊರ ಬರುತ್ತಿದೆ. ಉಳಿದ ಎಲ್ಲಾ ಕಥೆಗಳನ್ನು ಹೀಗೆ ಸಂಪುಟಗಳಲ್ಲಿ ತರುವುದು ನಮ್ಮ ಉದ್ದೇಶ. ಈ ಪ್ರಸ್ತಾಪಕ್ಕೆ ಒಪ್ಪಿಗೆಯನ್ನು ನೀಡಿದಾಗ ವಿಜಯನಾರಸಿಂಹ ಅವರ ಮಗಳು ಭುವನೇಶ್ವರಿ ನಮ್ಮ ಜೊತೆಗಿದ್ದರು.ಸಂತೋಷದಿಂದ ತಮ್ಮ ಹೆತ್ತವರ ಮಹದಾಸೆಯ ಕೃತಿ ಬೆಳಕು ಕಾಣುತ್ತಿರುವುದಕ್ಕೆ ಒಪ್ಪಿಗೆ ಕೊಟ್ಟು ಸಂತೋಷ ಪಟ್ಟಿದ್ದರು. ಇದು ಕಾರ್ಯರೂಪಕ್ಕೆ ಬರುತ್ತಿರುವ ಕಾಲದಲ್ಲಿ ಅವರು ಇಲ್ಲ ಎನ್ನುವುದು ನಿಜಕ್ಕೂ ದೊಡ್ಡ ಕೊರತೆಯಾಗಿ ಕಾಡುತ್ತಿದೆ.

ಇಬ್ಬರು ಹಿರಿಯರು ನನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಳಿಸಿ ಕೊಂಡಿದ್ದೇನೆ.. ಅವರು ಕನಸು ಕಂಡಿದ್ದ ಕೃತಿ ಹೊರ ಬರುತ್ತಿದೆ ಎನ್ನುವುದೂ ನಿಜಕ್ಕೂ ಭಾವನಾತ್ಮಕವಾಗಿ ಧನ್ಯತೆಯ ಸಂಗತಿ.


  • ಎನ್.ಎಸ್.ಶ್ರೀಧರ ಮೂರ್ತಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW