ನಾನು ವೆಜಿಟೇರಿಯನ್ ಆದದ್ದರಿಂದ ಇಲ್ಲೇ ಇರುತ್ತೇನೆ ಅಂದುಕೊಂಡಿದ್ದರು ಶಿರೋಡ್ಕರ. ಆದರೆ ನನಗೆ ಒಮ್ಮೆ ಕ್ಯಾಸ್ಟಲ್‌ರಾಕ್ ನೋಡಬೇಕೆಂಬ ಆಸೆಯಿತ್ತು. ನಾನು, ಶಿರೋಡ್ಕರರು, ಅವರ ಶಿಷ್ಯ ಹನುಮಂತ್ಯಾ ಮೂರು ಜನ ಫೆಡ್ರಿಕ್‌ನ ಟ್ರಾಕ್ಟರ್ ಹತ್ತಿದೆವು. ಮತ್ತು ಬೆಳಿಗ್ಗೆ ನಮ್ಮನ್ನು ಇಲ್ಲಿಗೆ ತಂದು ಬಿಡುವ ವ್ಯವಸ್ಥೆಯನ್ನು ಮಂಗೇಶ ಚಂದಾವರ ಮಾಡುವುದಾಗಿ ಹೇಳಿದ. ಅಲ್ಲಿಂದ ಬರುವಾಗ ತನಗೆ ಗೋವಾ ಮಾಲು [ಡ್ರಿಂಕ್ಸು] ತಂದುಕೊಡಲು ಅಪ್ಪೂ ಕುಟ್ಟಿ ಬೇಡಿಕೆಯಿಟ್ಟ.
ಇಲ್ಲಿಯವರೆಗೆ…
ಚಾಂದೇವಾಡಿಯ ಉಸುಕಿನ ದಿಬ್ಬದಲ್ಲಿ [sand quarry) ನಮ್ಮ ಸರ್ವೇ ತಂಡ ಕ್ಯಾಂಪು ಹಾಕಲು ಧಾರವಾಡ ಆಫೀಸೀನಿಂದ ಸೂಚನೆ ಬಂತು. ಚಾಂದೇವಾಡಿಗೆ ಮುಂಚಿತವಾಗಿ ಹೋಗಿ ಅಲ್ಲಿ ಟೆಂಟು ಹಾಕಲು ಅನುಕೂಲಕರ ಜಾಗ ನೋಡಿ ಬರಲು ನಮ್ಮ ತಂಡದ ಶಿರೋಡ್ಕರ ಅವರು ನನಗೆ ತಿಳಿಸಿದರು. ಅದಕ್ಕಾಗಿ ನಾನು ತಂಡದ ಸಹಾಯಕ ಪರಸ್ಯಾನನ್ನು ಕರೆದುಕೊಂಡು ನವಲೂ ಗೌಳಿ ಜೊತೆಗೆ ಅತ್ತ ಹೊರಟೆ. ಅದೂ ದಟ್ಟ ಕಾಡಿನ ಹಾದಿಯೇ. ದಾರಿಯಲ್ಲಿ ವರ್ಷದ ಹಿಂದೆ ಹುಲಿಯೊಂದು ಮನುಷ್ಯನನ್ನು ಕೊಂದ ಜಾಗ ಸಿಕ್ಕಿತು ಅಲ್ಲಿ ನಿಂತು ಗೌರವ ಸತ್ತವನಿಗೆ ಗೌರವ ಸೂಚಿಸಿದೆವು. ಅಲ್ಲಿಯೇ ಕಾಡಾನೆಯೊಂದು ಇದ್ದಕ್ಕಿದ್ದಂತೆ ನಮ್ಮ ಮೇಲೆ ನುಗ್ಗಿ ಬಂತು. ಅದರಿಂದ ಪಾರಾಗಿ ಮುಂದೆ ಬಂದರೆ ಕಾಡು ಹಂದಿ ನಮ್ಮ ಮೇಲೆ ಎರಗಿತು. ಕಾಡಿನಲ್ಲಿ ಶಕ್ತಿ, ಆಯುಧಗಳಿಗಿಂತ ಯುಕ್ತಿಯೇ ಹೆಚ್ಚು ನಮ್ಮನ್ನು ರಕ್ಷಿಸುವ ಆಯುಧ ಅನಿಸಿತು. ಮುಂದೆ ಕಡ್ಡಿಯಂಥ ಹಸಿರು ಹಾವೊಂದು ನಮ್ಮ ಮುಂದೆಯೇ ಸರಿದು ಹೋಯಿತು. ಒಂದೇ ದಿನ ಇಂಥ ಕಾಡು ಪ್ರಾಣಿಗಳ ದರ್ಶನವಾದದ್ದು ನಮಗಂತೂ ಹೊಸದಾಗಿರಲಿಲ್ಲ. ಆರು ಮೈಲಿ ಕಾಡಿನ ದಾರಿ ತುಳಿದು ಈಗ ಚಾಂದೇವಾಡಿಯ ನದೀ ತೀರಕ್ಕೆ ಬಂದೆವು.
ಈಗ ಮುಂದಕ್ಕೆ ಓದಿ…
ಫೋಟೋ ಕೃಪೆ : Patrik
ಎಂದೂ ನೋಡಿರದ ಉಸುಕಿನ ದಿಬ್ಬ [sand quarry)
ಕಳೆದೊಂದು ತಿಂಗಳಿಂದ ಕಾಡಿನಲ್ಲಿ ಬರೀ ಬೆಟ್ಟದ ಶಿಖರಗಳು, ಹಸಿರು ಮರ ಗಿಡಗಳಿಂದ ತುಂಬಿದ ನಡೆಯಲು ಸಾಧ್ಯವಾಗ ಕೊರಕಲು ಕಲ್ಲು ಬಂಡೆಯ ಇಳಿಜಾರು ಪ್ರದೇಶವನ್ನೇ ನೋಡಿದ್ದ ನನಗೆ ಈಗ ಚಾಂದೇವಾಡಿ.ನದಿಯ ಬಯಲನ್ನು ನೋಡಿ ಸಂತೋಷವಾಯಿತು. ಕೆಲವೊಮ್ಮೆ ಧಿಮಿಗುಟ್ಟುವ, ಮಗುದೊಮ್ಮೆ ಪ್ರಶಾಂತವಾಗಿ ಹರಿಯುವ ಇಲ್ಲಿಯ ನದಿಯ ಎಡಬಲದಲ್ಲಿ ಗಿಡಮರಗಳು , ಬಳ್ಳಿಗಳು ಹೆಣೆದುಕೊಂಡು ನಿಂತಿದ್ದವು. ನದಿಯ ಮಧ್ಯದಲ್ಲಿ ದೊಡ್ಡ ದೊಡ್ಡ ಕಲ್ಲು ಬಂಡೆಗಳು, ಚೂಪುಗಲ್ಲುಗಳು ಮೈಚೆಲ್ಲಿದ್ದವು. ಬಯಲು ಇದ್ದ ಕಡೆ ಬಂಗಾರದ ಬಣ್ಣದ ಉಸುಕಿನ ದೊಡ್ಡ ದಿಬ್ಬಗಳೇ ಇದ್ದವು. ಯಾವ ಕಾಲದಿಂದ ಈ ಉಸುಕಿನ ಖಣಿ ಅಲ್ಲಿತ್ತೋ. ಉಸುಕಿನಲ್ಲಿ ಯಾರೂ ನಡೆದುಕೊಂಡು ಹೋದ ಹೆಜ್ಜೆಯ ಗುರುತುಗಳೇ ಇರಲಿಲ್ಲ. ಅದಕ್ಕೆ ಕಾಣವೂ ನನ್ನ ತಲೆಗೆ ಹೊಳೆಯಿತು.
ಬಿಸಿಲಿಗೆ ಮೈಯೊಡ್ಡಿ ಮಲಗಿರುವ ಮೊಸಳೆಗಳು ಬಹುಶಃ ನದಿಯ ಕಲ್ಲು ಬಂಡೆಗಳ ಸಂದಿನಲ್ಲಿದ್ದ ನೀರಿನ ಮಡುವಿನಲ್ಲಿ ಮೊಸಳೆಗಳಿರಬೇಕು. ಅವು ಆಗಾಗ ಬಿಸಿಲಿಗೆಂದು ಈ ಉಸುಕು ದಿಬ್ಬದ ಮೇಲೆ ಬಂದು ಮಲಗುತ್ತವೆ. ರಾತ್ರಿ ಹೊತ್ತು ಜಿಂಕೆಗಳು, ನರಿ-ಮೊಲಗಳು, ಇತರ ಕಾಡುಪ್ರಾಣಿ ಗಳು ನೀರು ಕುಡಿಯಲೆಂದು ನದೀ ತೀರಕ್ಕೆ ಬರುತ್ತವೆ. ಈ ಹೊತ್ತಿನಲ್ಲೇ ಮೊಸಳೆಗಳು ಹೊಂಚು ಹಾಕುವುದು. ಅದರಿಂದ ಈ ದಿಬ್ಬದ ಕಡೆಗೆ ಮನುಷ್ಯರೂ ಸೇರಿ ಯಾವ ಪ್ರಾಣಿಗಳೂ ಅತ್ತ ಹೋಗುವುದಿಲ್ಲ. ಅದರಿಂದ ಆ ಉಸುಕಿನ ಮೇಲೆ ಯಾವ ಪ್ರಾಣಿಗಳ ಹೆಜ್ಜೆಯ ಗುರುತೂ ಮೂಡಿರಲಿಲ್ಲ. ನನಗೆ ಉಸುಕಿನ ದಿಬ್ಬವನ್ನು ಹತ್ತಿರದಿಂದ ನೋಡುವ ಕುತೂಹಲವಾಯಿತು. ಯಾಕಂದರೆ ಮುಂದಿನ ದಿನಗಳಲ್ಲಿ ಈ ದಿಬ್ಬದ ಉಸುಕನ್ನೇ ಸೂಪಾ ಆಣೆಕಟ್ಟಿನ ಕಾಮಗಾರಿಗೆ ಬಳಸಲು ಮೇಲಿನವರು ನಿರ್ಧರಿಸಿದ್ದರು. ಇಲ್ಲಿಯ ಉಸುಕನ್ನು ಮುಷ್ಠಿಯಲ್ಲಿ ಹಿಡಿದು ನೋಡಬೇಕು. ಭವಿಷತ್ತಿನಲ್ಲಿ ಕರ್ನಾಟಕದ ಒಂದು ಮಹತ್ತರ ಕಾಮಗಾರಿಗೆ ತನ್ನನ್ನೇ ಅರ್ಪಿಸಿಕೊಳ್ಳುವ ಇಲ್ಲಿಯ ಉಸುಕು ನನ್ನ ಪಾಲಿಗೆ ಆ ಕ್ಷಣಕ್ಕೆ ದೇವರಂತೆ ಕಂಡಿತು. ಆದರೆ ನವಲೂ ಗೌಳಿ ಅತ್ತ ಹೋಗಲು ಬಿಡಲಿಲ್ಲ. ‘ನಕಾ ಸಾಹೇಬ್. ತಿತಾ ಮೊಸಳೆ ಖೂಬ ಅಸಾ…’ ಅಂದು ಹೆದರಿಸಿದ. ಈ ಜಾಗದಲ್ಲಿ ನಾವು ಟೆಂಟು ಹಾಕಲು ಸಾಧ್ಯವಿರಲಿಲ್ಲ. ರಾತ್ರಿಯೆಲ್ಲ ಮೊಸಳೆಗಳು ದಂಡೆಯ ನೀರಿನಲ್ಲಿ ಮುಳುಗಿ ಹೊರಗೆ ಬಾಯಿ ಚಾಚಿಕೊಂಡಿರುತ್ತವೆ ಅಂದ.
ರಾತ್ರಿ ಹೊತ್ತು ಒಮ್ಮೊಮ್ಮೆ ಮೊಸಳೆಗಳು ನೀರಿನಿಂದ ಹೊರಗೆ ಬಂದು ದಂಡೆಯ ಮೇಲಿರುವ ಗಿಡ ಮರಗಳ ಬಡ್ಡೆಯ ಮೇಲೂ ಮಲಗುತ್ತವೆ ಎಂದೂ ಹೇಳಿದ. ನಿಜಕ್ಕೂ ನನಗೆ ಹೆದರಿಕೆಯಾಯಿತು. ರಾತ್ರಿ ಸಮಯದಲ್ಲಿ ಅವು ನಾವು ಮಲಗಿರುವ ಟೆಂಟು ಹೊಕ್ಕರೆ ಗತಿಯೇನು ಎಂದು ಗಲಿಬಿಲಿಗೊಂಡೆ. ಇಲ್ಲಿ ನಾವು ಕ್ಯಾಂಪು ಹಾಕಿದರೆ ಒಬ್ಬರಾದರೂ ಮೊಸಳೆಗೆ ಆಹಾರವಾಗುವುದು ಪಕ್ಕಾ ಅನಿಸಿತು. ಆದರೂ ಕೈ ಚೆಲ್ಲುವಂತಿಲ್ಲ. ಆಫೀಸಿನಲ್ಲಿ ಕಾರ್ಯಪಾಲಕ ಇಂಜನಿಯರ್ ಶ್ರೀ ಎನ್.ಸಿದ್ದಯ್ಯನವರು ಒಮ್ಮೆ ಹೇಳಿದ್ದರು.
ನಾವು ಯುದ್ಧ ಭೂಮಿಗೆ ಹೋಗುತ್ತಿದ್ದೇವೆ. ಕಾಳೀ ನದಿ ಯೋಜನಾ ಪ್ರದೇಶ ನಮ್ಮ ಪಾಲಿಗೆ ರಣರಂಗವೆ. ಅಲ್ಲಿರುವುದು ಕಾಡಿನ ಬದುಕು. ಯಾರಿಗೂ ಅಲ್ಲಿ ಮನೆಯಿಲ್ಲ. ವಾಹನ ಸೌಕರ್ಯವಿಲ್ಲ. ಸರಿಯಾದ ಆಹಾರವೂ ಸಿಗುವುದಿಲ್ಲ. ಸಂಬಳವೂ ಅಷ್ಟಕ್ಕಷ್ಟೆ. ಯೋಧರಂತೆ ನಾವು ಕೆಲಸ ಮಾಡಬೇಕು. ನಾವು ಮಾಡುತ್ತಿರುವುದು ದೇಶಕ್ಕೆ ಬೆಳಕು ಕೊಡುವ ಕೆಲಸ. ಯಾರು ಹೊಗಳಲಿ ಬಿಡಲಿ. ನಮ್ಮ ಜನ್ಮ ಸಾರ್ಥಕವಾಗುವುದು ಅಲ್ಲಿಯೇ..ಅಂದಿದ್ದರು. (ಅವರು ಮುಂದೆ ಸೂಪರಿಂಟೆಂಡೆಂಟ್ ಇಂಜನಿಯರ್ ಆಗಿ ಕಾಳೀ ಯೋಜನಾ ಪ್ರದೇಶದಲ್ಲಿಯೇ ನಿವೃತ್ತರಾದರು. ಅವರ ಬಗ್ಗೆ ಮುಂದೆ ಬರುಯುತ್ತೇನೆ) ನಾನು ವಿದ್ಯಾರ್ಥಿಯಾಗಿದ್ದಾಗ ಡಾ.ಎನ್.ಎಸ್.ಹರ್ಡೀಕರರ ಸೇವಾದಲದಲ್ಲಿ ಒಂದಷ್ಟು ದಿನ ಕೆಲಸ ಮಾಡಿದ್ದೆ. ದೇಶಭಕ್ತಿ, ಸ್ವಾಭಿಮಾನ, ಕರ್ತವ್ಯ ಪ್ರಜ್ಞೆ, ಶಿಸ್ತು ಅಲ್ಲಿ ಮೈಗೂಡಿದ್ದವು. ನನ್ನ ತಂದೆ ಕೂಡ ನಲವತ್ತೆರಡರ ಚಳುವಳಿಯಲ್ಲಿ ಭಾಗಿಯಾದವರೆ. ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದ ನನಗೆ ಕಷ್ಟಗಳನ್ನು ಸಹಿಸುವ ಜಾಯಮಾನ ಸಿದ್ಧಿಸಿತ್ತು. ಇರಲಿ.
ಈಗ ಮೇಲಿನ ಆಫೀಸೀನವರು ಚಾಂದೇವಾಡಿ ಉಸುಕಿನ ದಿಬ್ಬದ ಸರ್ವೇ ಮಾಡಲು ಹೇಳಿದ್ದಾರೆ. ಮೇಲಿನವರು ಹೇಳಿದ ಕೆಲಸ ಮಾಡಲೇಬೇಕಲ್ಲ. ದಿಬ್ಬದ ಜಾಗದಿಂದ ಅನತಿ ದೂರದಲ್ಲಿ ಹೆಚ್ಚು ಎತ್ತರವಲ್ಲದ ಒಂದು ಸಣ್ಣ ಗುಡ್ಡ ಕಂಡಿತು. ಹಾಗೆ ನೋಡಿದರೆ ಅದೂ ಕೂಡ ನದಿಯ ಪಕ್ಕದಲ್ಲೇ ಇತ್ತು ಅನ್ನಿ. ಬೇಕಾದರೆ ಆ ಗುಡ್ಡದ ಮೇಲೆ ಟೆಂಟು ಹಾಕಬಹುದು. ಮೊಸಳೆಗಳು ಅಷ್ಟು ದೂರಕ್ಕೆ ಬರಲಿಕ್ಕಿಲ್ಲ. ಅಲ್ಲದೆ ಹತ್ತಿರದಲ್ಲೇ ನವಲೂ ಗೌಳಿ ಮತ್ತು ಇತರರು ವಾಸವಾಗಿರುವ ದೊಡ್ಡಿಯೂ ಇತ್ತು. ಮೊದಲೇ ಕಾಡು. ಕೂಗಿದರೆ ಇವರಾದರೂ ಬರುತ್ತಾರೆ ಎಂದು ಲೆಕ್ಕ ಹಾಕಿದೆ.
ನದೀ ತೀರದಲ್ಲಿ ನಗ್ನ ಕಾಡು ಸುಂದರಿಯರು
ನನಗೆ ನವಲೂ ಗೌಳಿಯ ದೊಡ್ಡಿಯನ್ನು ನೋಡಬೇಕಿತ್ತು. ಕಾಡಿನಲ್ಲಿ ಅವರ ವಾಸ ಹೇಗಿರುತ್ತದೆಂಬ ಕುತೂಹಲವಿತ್ತು. ಅದನ್ನು ಅವನಿಗೆ ಹೇಳಿದೆ. ನವಲೂ ಖುಶಿಪಟ್ಟ. ಮತ್ತು ತನ್ನ ದೊಡ್ಡಿಯ ಕಡೆಗೆ ಕರೆದುಕೊಂಡು ಹೊರಟ. ನದಿಯ ಎಡದಂಡೆಗುಂಟ ನಡೆಯುತ್ತ ಹೊರಟೆವು. ಅಲ್ಲೆಲ್ಲ ದೊಡ್ಡೀವಾಸಿಗಳು ಮತ್ತು ಅವರ ದನಗಳು ಕಾಡಿನ ಕಡೆಗೆ ಹೋಗುವಾಗ ನಡೆದೂ, ನಡೆದೂ ಮಾಡಿಕೊಂಡ ಕೊರಕಲು ಕಾಲು ಹಾದಿ ಇತ್ತು. ಅದರಲ್ಲೇ ಎಚ್ಚರಿಕೆಯಿಂದ ಕಾಲು ಇಡುತ್ತ ನಡೆದೆವು. ತಗ್ಗುಗಳಿದ್ದಲ್ಲಿ ಜಿಗಿಯುತ್ತ ನವಲೂ ಗೌಳಿಯ ಹಿಂದೆ ನಡೆದೆವು.
ಅಲ್ಲೊಂದು ಸಣ್ಣ ನೀರಿನ ಹೊಂಡ. ಕಲ್ಲು ಬಂಡೆಗಳಲ್ಲಿಯೇ ಹರಿಯುವ ನದಿಯ ನೀರು ಅಲ್ಲಿ ಕನ್ನಡಿಯಂತೆ ತಿಳಿಯಾಗಿತ್ತು. ಸುತ್ತಲೂ ಗಿಡಮರಗಳಿಂದ ತುಂಬಿದ ದಟ್ಟ ಹಸಿರು. ಕಲ್ಲು ಬಂಡೆಯ ಪಕ್ಕದಲ್ಲಿ ಎದೆಮಟ್ಟದ ಹುಲ್ಲು ಕೊಂಪೆ. ಅದರ ಪಕ್ಕದಲ್ಲಿಯೇ ನದಿಯ ಕಲ್ಲುಗಳ ಮೇಲೆ ಮೇಲೆ ಹಸಿರು, ಹಳದಿ, ಕೆಂಪು ಬಣ್ಣದ ಉದ್ದುದ್ದ ಸೀರೆಗಳನ್ನು ಒಣಗಲು ಹಾಕಿದ್ದು ಕಂಡಿತು. ದೊಡ್ಡಿಯ ಹೆಂಗಸರು ಯಾರೋ ಅಲ್ಲಿ ಬಟ್ಟೆ ತೊಳೆಯಲು ಬಂದಿರಬೇಕೆಂದುಕೊಂಡೆ. ಮೊಸಳೆಯ ಹೊಂಡ ಅಲ್ಲೇ ಸನಿಹದಲ್ಲೇ ಇತ್ತು. ಇವರಿಗೆ ಮೊಸಳೆಯ ಭಯವೂ ಇಲ್ಲವೇನೋ. ಓಯ್ ! ಓಯ್ ! ಫೋಕರಾ ಆಯೀಲಾ… !
ಫೋಟೋ ಕೃಪೆ : Vintage Mauritius
ತನ್ನ ದೊಡ್ಡಿಯ ಹೆಂಗಸರು ಅಲ್ಲಿರುವುದನ್ನು ಗಮನಿಸಿದ ನವಲೂ ಗೌಳಿ ಒಮ್ಮೆ ಜೋರಾಗಿ –
`ಓಯ್…! ಓಯ್…!’ ಅನ್ನುತ್ತ ತನ್ನ ಗಾವಠಿ ಭಾಷೆಯಲ್ಲಿ ಏನೋ ಕೂಗಿ ಹೇಳಿದ. ತಕ್ಷಣವೇ ಹೊಂಡದ ನೀರಿನಲ್ಲಿ ಕುಕ್ಕುರಗಾಲಲ್ಲಿ ಅರ್ಧ ಮುಳುಗಿ ಕುಳಿತಿದ್ದ ಮೂರು ಜನ ಹೆಂಗಸರು ಧಡಾರನೆ ಗಡಬಡಿಸಿ ಮೇಲೆದ್ದರು. ಅವರಲ್ಲಿ ಇಬ್ಬರು ನಡು ವಯಸ್ಸಿನವರು. ಒಬ್ಬಾಕೆ ಏರು ಜವ್ವನೆ. ಅವರನ್ನು ನೋಡಿದ್ದೇ ನಾವು ಗಾಬರಿಯಾದೆವು. ಸೊಂಟಕ್ಕೆ ಮಾತ್ರ ಕೈಯಗಲದ ಬಟ್ಟೆ. ಎದೆ ಸಂಪೂರ್ಣ ನಗ್ನ. ನಿಸರ್ಗದ ತೊಟ್ಟಿಲಲ್ಲಿ ಹಾಯಾಗಿ, ಸ್ವಚ್ಛಂದವಾಗಿ ಬದುಕುವ ಅವರಿಗೆ ಇಂಥ ನಗ್ನತೆ ಏನೂ ಅಲ್ಲ. ನಾಗರಿಕ ಸಮಾಜದಿಂದ ಬಂದ ನನ್ನಂಥವರಿಗೆ ಅದು ಮುಜುಗುರ.
ನಟ್ಟನಡು ಅರಣ್ಯದ ನದಿಯ ತೀರದಲ್ಲಿ ವಾಸಿಸುವ ಕಾಡು ಹೆಂಗಸರು ಹೀಗೂ ಇರುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ನಮಗೆ ಗೊತ್ತಿರದ ಅದೆಷ್ಟೋ ಸಂಗತಿಗಳನ್ನು ಕಾಡು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿರುತ್ತದೆ ಅನಿಸಿತು.
ನಾನು ಕೂಡಲೇ ದೃಷ್ಟಿಯನ್ನು ಬೇರೆ ಕಡೆಗೆ ತಿರುಗಿಸಿದೆ. ಪರಸ್ಯಾ ಮಾತ್ರ ಬಿಟ್ಟ ಕಣ್ಣಿಂದ ಅವರನ್ನೇ ನೋಡುತ್ತಿದ್ದ. ಕೂಡಲೇ ಆ ಹೆಂಗಸರು ತಡ ಮಾಡದೆ ಮೊದಲೇ ಮುರಿದು ಇಟ್ಟುಕೊಂಡಿದ್ದ ಗಿಡದ ಎಳೆಯ ತೊಪ್ಪಲನ್ನು ಮೈಗೆ ಮರೆ ಮಾಡಿಕೊಂಡು ಅಲ್ಲಿಯೇ ನೀರಿನಲ್ಲಿದ್ದ ದೊಡ್ಡ ಕೋಡುಗಲ್ಲಿನ ಮರೆಗೆ ಹೋಗಿ ನಿಂತರು. ಹಾಗೆ ನಿಂತವರು ಮರೆಯಲ್ಲಿ ಕತ್ತೆತ್ತಿ ನೋಡುತ್ತ ನಾವು ದಾಟುವುದನ್ನೇ ನೋಡುತ್ತಿದ್ದರು. ನನಗೆ ಬಯಲು ಸೀಮೆಯ ನಾಡಿನಲ್ಲಿ ಸಂಜೆ ಹೊತ್ತು ರಸ್ತೆಯ ಇಕ್ಕೆಲದಲ್ಲಿ ಬಯಲುಕಡೆ ಕೂಡುವ ಹೆಂಗಸರು ನೆನಪಾದರು.
ವಿಚಿತ್ರ ವಿನ್ಯಾಸದ ಹುಲ್ಲು ಗುಡಿಸಲುಗಳ ದೊಡ್ಡಿ
ನವಲೂ ಗೌಳಿ ಅವಸರವಾಗಿ ಹೆಜ್ಜೆ ಹಾಕಿದ. ಅವನ ಹಿಂದಿನಿಂದ ನಾವೂ ನಡೆದೆವು. ನನ್ನ ಮನಸ್ಸು ಕ್ಷಣ ಹೊತ್ತು ಪ್ರಕ್ಷುಬ್ದವಾಗಿತ್ತು. ಆ ಹೆಂಗಸರು ಅಲ್ಲಿನ ದೊಡ್ಡಿಯವರೇ ಆಗಿದ್ದರು. ಅವರಿಗೆ ಯಾರಿಗೂ ಕಾಡಿನಾಚೆ ಅಕ್ಷರ ಕಲಿತವರ ಜಗತ್ತೊಂದಿದೆ ಎಂಬುದೇ ಗೊತ್ತಿರಲಿಲ್ಲ. ಪ್ಯಾಂಟು ತೊಟ್ಟ ಅಪರಿಚಿತರು ಕಾಡಿನಲ್ಲಿ ಹೀಗೆ ಕಂಡಾಗ ಅವರು ಹೆದರುತ್ತಾರೆ ಎಂದು ನವಲೂ ಹೇಳಿದ್ದ. ಅವರ ಎಲ್ಲ ಬದುಕೂ ಕಾಡೇ ಆಗಿತ್ತು. ನಾನು ಮತ್ತೆ ಅವರ ಬಗ್ಗೆ ಏನೂ ಕೇಳಲಿಲ್ಲ. ದುಡುದುಡು ನಡೆದು ಬಿಟ್ಟೆವು. ನವಲೂ ಸಹಜವಾಗಿದ್ದ.
‘ಸಾಹೇಬ್… ಹಮಚಾ ದೊಡ್ಡಿ… ದಿಸಲಾ?’
ನವಲೂ ಕೈಮಾಡಿ ಅತ್ತ ತೋರಿಸಿದ. ನೋಡಿದೆ. ಅಬ್ಬಾ… ನಾನೆಲ್ಲೋ ಬೇರೆ ಲೋಕದಲ್ಲಿದ್ದೇನೆ ಅನಿಸಿತು. ಒಣಗಿದ ಮರದ ದಿಮ್ಮಿಗಳನ್ನು ಉದ್ದಕ್ಕೂ ಬೇಲಿಯಂತೆ ನೆಟ್ಟಿದ್ದರು. ಅವುಗಳಿಗೆ ಹೊಂದಿ ಎರಡು ದೊಡ್ಡ ಹಲಸಿನ ಮರಗಳು.
ಫೋಟೋ ಕೃಪೆ : Google site
ನಾಲ್ಕು ಮಾವಿನ ಮರಗಳು, ಒಂದಷ್ಟು ಇವರೇ ನೆಟ್ಟ ಬಾಳೆಯಅದರ ನಡುವೆ ಹತ್ತಾರು ಎಮ್ಮೆಗಳು, ಕರುಗಳು ನಿಂತಿದ್ದವು. ಅಲ್ಲಿಯೇ ಹುಲ್ಲಿನಿಂದ ಹೊದಿಸಿದ ವಿಶಿಷ್ಠ ಆಕಾರದ ಗುಡಿಸಲುಗಳು. ಅಲ್ಲಿ ಇನ್ನಷ್ಟು ಜನ ನಿಂತಿದ್ದರು. ಗಂಡಸರು ಬರೀ ಲಂಗೋಟಿಯಲ್ಲಿದ್ದರೆ. ಹೆಂಗಸರು ತೊಡೆಸಂದಿಗೆ ಸೀರೆಯ ಕಚ್ಚೆ ಬಿಗಿದುಕೊಂಡು ಕೊರಳಲ್ಲಿ ವಿವಿಧ ಬಣ್ಣದ ಹವಳದಂಥ ಸರ ಹಾಕಿಕೊಂಡು ನಿಂತಿದ್ದರು. ಗಂಡಸರು ಮತ್ತು ಹೆಂಗಸರು ಕಿವಿಗೆ ದೊಡ್ಡದಾದ ಮುರುವು ಚುಚ್ಚಿಕೊಂಡಿದ್ದರು. ಹೆಂಗಸರ ಮುಖ, ಕೈ, ಮೂಗಿನ ಬಳಿ ಹಚ್ಚೆ ಹಾಕಿಸಿಕೊಂಡಿದ್ದರು. ನವಲೂ ನಮ್ಮ ಜೊತೆಯಲ್ಲಿಯೇ ಇದ್ದುದರಿಂದ ಅವರು ಹೆದರಿರಲಿಲ್ಲವೇನೋ. ನನ್ನ ಮುಖದಲ್ಲಿ ಆತಂಕವಂತೂ ಇತ್ತು. ನವಲೂ ಗೌಳಿ ಗಾವಠಿ ಭಾಷೆಯಲ್ಲಿ ಅಲ್ಲಿದ್ದವರಿಗೆ ಏನೋ ಹೇಳಿದ. ಅವರು ನೆಮ್ಮದಿಯಉಸಿರು ಬಿಟ್ಟರು. ನಂತರ ನಾನು ಅವರ ಗುಡಿಸಲು ನೋಡಲೆಂದು ಒಳಗೆ ಹೊಕ್ಕೆ. ಗಮ್ಮನೆ ಮೂಗಿಗೆ ಹೊಡೆದ ಕಮಟು ವಾಸನೆ. ಎಮ್ಮೆ -ಸೆಗಣಿ, ಮೂತ್ರ ಅಲ್ಲೆಲ್ಲ ತುಂಬಿತ್ತು. ಗುಡಿಸಿಲಿನ ಹುಲ್ಲಿಗೆ ಸಿಕ್ಕಿಸಿದ್ದ ಬಣ್ಣದ ಸೀರೆಗಳು, ಕುಪ್ಪಸಗಳು, ಗಂಡಸರ ಅಂಗಿಗಳು ಅಲ್ಲಲ್ಲಿ ಗುಪ್ಪೆಯಾಗಿ ಜೋತು ಬಿದ್ದಿದ್ದವು.. ಪಕ್ಕದಲ್ಲಿಯೇ ನದಿ ಹರಿಯುತ್ತಿದ್ದರೂ ಅವು ನೀರನ್ನೇ ಕಂಡಿಲ್ಲ ಅನ್ನುವಂತಿದ್ದವು. ಅವರು ಬಟ್ಟೆಗೆ ಸೋಪನ್ನೇ ಬಳಸುವುದಿಲ್ಲ ಎಂದು ಆಮೇಲೆ ಗೊತ್ತಾಯಿತು.
ಹತ್ತು ಅಡಿ ಎತ್ತರದ ಹುಲ್ಲಿನ ಗುಡಿಸಲುಗಳು. ಅದರಲ್ಲೇ ಬಿದಿರಿನ ಅಟ್ಟ. ಎಲ್ಲರೂ ಅಲ್ಲಿಯೇ ಮಲಗುತ್ತಾರೆ. ಮಕ್ಕಳು, ಗಂಡಹೆಂಡಿರು, ಮನೆಯ ಇತರ ಗಂಡಸರು, ಹೆಂಗಸರು ಎಲ್ಲರೂ ಸಾಲಾಗಿ ಮಲಗುತ್ತಾರೆ. ಮುದುಕರು ಮಾತ್ರ ಬೇರೆ ಕಡೆ ಮಲಗುತ್ತಾರಂತೆ. ಅಲ್ಲಿ ಯಾವುದೂ ಮುಚ್ಚುಮರೆಯಿಲ್ಲ. ಗಂಡ-ಹೆಂಡಿರು ಇನ್ನಷ್ಟು ಏಕಾಂತ ಬೇಕಾದರೆ ಕಾಡಿನ ಬಿದಿರು ಮೆಳೆಯತ್ತಲೋ ಹೊಳೆ ದಂಡೆಯತ್ತಲೋ ಹೋಗುತ್ತಾರೆ.
ಅಟ್ಟದ ಕೆಳಗೆ ಹಾಲು ಕರೆಯುವ ಎಮ್ಮೆಗಳು, ಕರುಗಳನ್ನು ಕಟ್ಟಲಾಗಿತ್ತು. ಎಲ್ಲ ದನಗಳಿಗೂ ಕೊರಳಿಗೆ ಗಂಟೆ ಕಟ್ಟಿದ್ದಾರೆ. ಅಟ್ಟದ ಕೆಳಗೆ ಒಂದು ಮೂಲೆಯಲ್ಲಿ ಅಡುಗೇ ಮನೆ. ಅಲ್ಲಿರುವುದು ಬರೀ ಮಣ್ಣಿನ ಪಾತ್ರೆಗಳು. ಹುಡುಕಿ ನೋಡಿದರೂ ಸಿಗದ ಲೋಹದ ಮತ್ತು ಪ್ಲಾಸ್ಟಿಕ ಪಾತ್ರೆಗಳು. ಹೊರಗೆ ನೆಲಕ್ಕೆ ನೆಟ್ಟಿದ್ದ ದೊಡ್ಡ ಗೂಟಕ್ಕೆ ನೇತು ಹಾಕಿದ್ದ ಅಲ್ಯುಮಿನಿಯಂ ಹಾಲಿನ ಕ್ಯಾನುಗಳು ಮಾತ್ರ ಕಂಡವು. ಇವರೆಲ್ಲ ಹತ್ತಿರದ ಊರುಗಳಿಗೆ ಹಾಲು ತುಂಬಿಸಿಕೊಂಡು ಹೋಗುವುದು ಅದರಲ್ಲಿಯೇ.
ಆಗಿನ್ನೂ ಮೊಬೈಲ್ ದೂರವಾಣಿಗಳು ಬಂದಿರಲಿಲ್ಲ. ವಾಕೀ –ಟಾಕೀಗಳು ಬಂದಿದ್ದವಾದರೂ ನಮಗೆ ಲಭ್ಯವಿರಲಿಲ್ಲ ಆಗಲೇ ಮಧ್ಯಾನವಾಗಿತ್ತು. ನಾವು ಮರಳಿ ಬೇಗನೆ ವಾಪಸು ಹೋಗಿ ಟೆಂಟು ಸೇರಿಕೊಳ್ಳಬೇಕಾಗಿತ್ತು. ಅದರ ನಡುವೆ ನಮಗೆ ಯಾವ ಸಂಪರ್ಕ ಸಾಧನಗಳೂ ಲಭ್ಯವಿರಲಿಲ್ಲ. ಕಾಡಿನ ಹಾದಿ ಬೇರೆ. ದಾರಿ ತಪ್ಪಿದರೆ ದೇವರೇ ಗತಿ. ಈಗ ನನಗೆ ಆತಂಕ ಸುರುವಾಯಿತು. ಪರಸ್ಯಾನ ಹೊಟ್ಟೆ ಹಸಿದಿತ್ತೇನೋ. ಬಾಯಿಬಿಟ್ಟೇ ಹೇಳಿದ. ನಮ್ಮ ಹತ್ತಿರ ಹತ್ತು ಚಪಾತಿಗಳಿದ್ದವು. ಅದರಲ್ಲಿ ನಾಲ್ಕು ಪರಿಸ್ಯಾನಿಗೆ, ಎರಡು ನನಗೆ ಇಟ್ಟುಕೊಂಡು ನಾಲ್ಕು ಚಪಾತಿಗಳನ್ನು ನವಲೂ ಕೈಗಿಟ್ಟೆ. ಚಪಾತಿ ನೋಡಿ ಅಲ್ಲಿದ್ದವರಿಗೆ ಬಂಗಾರ ಕಂಡಷ್ಟು ಸಂತೋಷ. ನಾವು ಈಚೆ ಬರುವುದರೊಳಗೆ ಅಷ್ಟೂ ಚಪಾತಿಗಳು ತುಣುಕು ತುಣುಕಾಗಿ ಅಲ್ಲಿದ್ದವರ ಹೊಟ್ಟೆ ಸೇರಿದ್ದವು.
ಇದ್ದಕ್ಕಿದ್ದಂತೆ ದೊಡ್ಡಿಯ ಹೊರಗೆ ಕಾಡಿನ ಕಾಲು ಹಾದಿಯಲ್ಲಿ ಏನೋ ಸದ್ದು. ದೊಡ್ಡಿಯಲ್ಲಿದ್ದ ನಾಯಿಯೊಂದು ಕಾಡಿನ ಹಾದಿಯತ್ತ ನೋಡಿ ಬೊಗಳಿತು. ಎಲ್ಲರೂ ತುಸು ಆತಂಕದಿಂದ ಅತ್ತ ನೋಡಿದರು. ಅಚ್ಚರಿಯಾಯಿತು. ನದಿಯ ದಂಡೆಗುಂಟ ಇತ್ತಲೇ ನಡೆದು ಬರುತ್ತಿದ್ದ ಇಬ್ಬರು ಅರಣ್ಯ ಪಾಲಕರನ್ನು ನವಲೂ ಗುರುತಿಸಿದ.
ದೇವರಂತೆ ಬಂದ ಫಾರೆಸ್ಟ ಗಾರ್ಡಗಳು
ಖಾಕೀ ದಿರಿಸಿನಲ್ಲಿದ್ದ ಅವರ ಕೈಯಲ್ಲಿ ಉಕ್ಕಿನ ಕೊಯತಾಗಳಿದ್ದವು. ತಲೆಗೆ ಇಲಾಖೆಯ ಟೋಪಿ ಹಾಕಿದ್ದರು. ಬಂದವರಿಗೆ ನನ್ನನ್ನು ಮತ್ತು ಪರಸ್ಯಾನನ್ನು ನೋಡಿ ಅಚ್ಚರಿಯಾಗಿತ್ತು. ನಮ್ಮನ್ನೇ ನೋಡುತ್ತ –
ಫೋಟೋ ಕೃಪೆ : Examistan
ಕೋನ್ ತೋ…? ಎಂದು ನವಲೂನನ್ನು ಕೇಳಿದರು. ಅಷ್ಟರಲ್ಲಿ ನಾನೇ ಹೇಳಿದೆ.
‘ನಾವು ಎಚ್.ಇ.ಸಿ.ಪಿ. ಡಿಪಾರ್ಟಮೆಂಟಿನವರು. ಕಾಳೀ ಯೋಜನೆಗಾಗಿ ಸರ್ವೇ ಮಾಡಲು ಬಂದಿದ್ದೇವೆ. ಸೂಪಾ ಡ್ಯಾಂ ಮುಳುಗಡೆ ಪ್ರದೇಶದ ಸರ್ವೇ ಕೆಲಸಕ್ಕೆ ನೇಮಕ ವಾಗಿದೀವಿ. ಇಲ್ಲಿ ನದೀ ದಂಡೇಲಿ ಸ್ಯಾಂಡ್ ಕ್ವಾರೀ ಸರ್ವೇ ಕೆಲಸಾನೂ ಮಾಡಬೇಕು. ನಿಮ್ಮ ಹೆಡ್ ಆಫೀಸಿಗೆ ನಮ್ಮ ಕಡೆಯಿಂದ ಪತ್ರ ಹೋಗಿದೆಯಂತೆ….’
ನಾನೇ ಯೋಜನೆಯ ಮುಖ್ಯ ವ್ಯವಸ್ಥಾಪಕನಂತೆ ಹೇಳಿದೆ. ಪಾಪ1 ಅವರಿಗೆ ಏನೂ ಗೊತ್ತಾಗಲಿಲ್ಲ. ಅವರ ಹೆಡ್ ಆಫೀಸಿಗೆ ಪತ್ರ ಹೋಗಿದೆ ಅಂದದ್ದೇ ಬಂತು. ತುಂಬ ನಯವಾಗಿ ಮಾತಾಡಿಸಿದರು.
‘ಓ…! ನಮ್ ಏರಿಯಾದೊಳಗ ಸರ್ವೇ ಮಾಡೋಕ್ ಬಂದವ್ರಾ? ನಾವು ಫಾರೆಸ್ಟ ಗಾರ್ಡುಗೋಳು. ನನ್ನ ಹೆಸ್ರು ಪೆಡ್ರಿಕ್ ಅಂತ. , ಇವ್ರು ಮಂಗೇಶ ಚಂದಾವರ. ಈ ಏರಿಯಾ ಫಾರೆಸ್ಟು ನಮ್ಮ ದೇಖರೀಕಿಯೊಳಗ ಬರ್ತದೆ. ನಿಮ್ಮ
ಹೆಸ್ರೂ?’
‘ನಾನು ಹೂಲಿ ಶೇಖರ್ ಅಂತ. ಇವ್ರು ಪರಸ್ಯಾ ನಾಮದೇವ’
ಪರಸ್ಪರ ಪರಿಚಯ ಆಯಿತು. ಅವರು ನಮ್ಮ ಬಗ್ಗೆ ಇನ್ನಷ್ಟು ವಿವರ ತಿಳಿದುಕೊಂಡರು. ಆಮೇಲೆ ಇಬ್ಬರೂ ಬಲು ಬೇಗ ನಮಗೆ ಹೊಂದಿಕೊಂಡುಬಿಟ್ಟರು.
‘ಗೊತ್ತಾಯ್ತು….. ನಿಮ್ಮ ಟೆಂಟು ನೋಡ್ಕೊಂಡು ಬಂದ್ವಿ. ಈಗ್ ನೀವು ಎಲ್ಲಿಗೆ ಹೋಗೂದು?’
ಎಂದು ಪೆಡ್ರಿಕ್ ಕೇಳಿದ. ‘ನಾವು ವಾಪಸ್ಸು ಟೆಂಟಿಗೇ ಹೋಗ್ತೀವಿ’ ಅಂದಾಗ ಅವರು ಒಂದು ಕ್ಷಣ ತಡೆದು ಹೇಳಿದರು.
‘ನಿಮಗೆ ಇಲ್ಲೀ ಫಾರೆಸ್ಟು ಬಗ್ಗೆ ಏನೂ ಗೊತ್ತಿಲ್ಲ. ದಾರಿ ತಪ್ಪಿದ್ರೆ ಸೀದಾ ಹೋಗೂದು ಹುಲಿ ಬಾಯಿಗೇ. ನಮ್ದು ಆಫೀಸು ಟ್ರಾಕ್ಟರು ಅದೆ. ಅದ್ರಲ್ಲಿ ಕರಕೊಂಡೋಗಿ ನಿಮ್ ಜಾಗಕ್ ಬಿಟ್ಟು ನಾವು ಹೋಗ್ತೇವು. ಬರ್ರಿ’ ಎಂದು ಕರೆದರು.
ವಾಪಸ್ಸು ನಮ್ಮ ಟೆಂಟಿನ ಕಡೆಗೆ
ಗಾರ್ಡಗಳು ನಮ್ಮನ್ನು ಕರೆದದ್ದು ನವಲೂಗೆ ಸಮಾಧಾವಾಯಿತೇನೋ. ‘ಜಾ ಸಾಹೇಬ್’ ಎಂದ ಖುಶಿಯಿಂದ. ನಮಗೂ ಕಾಡಿನಲ್ಲಿ ಆರು ಮೈಲಿ ನಡೆಯುವ ಚಿಂತೆ ತಪ್ಪಿತಲ್ಲ ಎಂದು ಒಪ್ಪಿಕೊಂಡೆ. ಅಲ್ಲಿಯೇ ನದೀ ತೀರದಲ್ಲಿ ಟ್ರಾಕ್ಟರು ನಿಲ್ಲಿಸಿದ್ದರು. ಕರ್ನಾಟಕ ಫಾರೆಸ್ಟು ಅಂತ ಅದಕ್ಕೆ ಅಡ್ಡಾದಿಡ್ಡಿ ಬರೆದ ಬೋರ್ಡು ಬೇರೆ ಇತ್ತು. ಫೆಡ್ರಿಕ್ ಮತ್ತು ಮಂಗೇಶ ಚಂದಾವರ ಇಬ್ಬರೂ ಇಂಜಿನ್ ಬಳಿ ಕುಳಿತರು. ನಾನು ಮತ್ತು ಪರಸ್ಯಾ ಹಿಂದೆ ಟ್ರಾಲಿಯನ್ನೇರಿದೆವು. ಅಂಥ ಕಾಡಿನಲ್ಲಿ ಇಂಥ ಸಾರಿಗೆ ಸೌಕರ್ಯ ಸಿಕ್ಕಿದ್ದು ನಮ್ಮ ಪೂರ್ವ ಜನುಮದ ಪುಣ್ಯ ಅಂದುಕೊಂಡೆ.
ನವಲೂ ಗೌಳಿಗೆ ಮುಂದಿನ ವಾರ ಟೆಂಟ್ ಸಮೇತ ಬರುತ್ತೇವೆ ಎಂದು ಹೇಳಿದೆ. ‘ಯೇತಲಾ…! ಸಾಹೇಬ್ .
ಯೇತೋ’…ಎಂದು ಆತ ಕೈಮಾಡಿ ಅಂದವನು ನಂತರ ‘ಕಾಲ್ ಯೇತಲಾ ಮೀ…ಕ್ವಾರ್ಟರ ದೂಧ ಲೇಕೂನ…’.. ಅಂದ. ನಮ್ಮ ಗಾಡಿ ಹೊರಟಿತು.
ಕಾಡಿನ ಕೊರಕಲು ಹಾದಿಯಲ್ಲಿ ಟ್ರಾಕ್ಟರಿನ ಟ್ರಾಲಿಯಲ್ಲಿ ಕೂತು ಹೋಗುವ ಸುಖ ಅನುಭವಿಸಿದವರಿಗೇ ಗೊತ್ತು. ಕಪ್ಪೆಗಳ ಹಾಗೆ ಟ್ರಾಲಿಯ ಉದ್ದಕ್ಕೂ ಎದ್ದೆದ್ದು ಬಿದ್ದೆವು.
ಆಗಲೇ ನಾಲ್ಕು ಗಂಟೆ. ಟ್ರಾಲಿಯಲ್ಲಿ ಕೂತೇ ಚಪಾತಿ ತಿಂದು ನೀರು ಕುಡಿದಿದ್ದೆವು. ಟೆಂಟು ಕಂಡಕೂಡಲೇ ಫೆಡ್ರಿಕ್ ಎಂಜಿನ್ನು ಬಂದು ಮಾಡಿದ. ಆಗಲೇ ಟೆಂಟಿನ ಹೊರಗೆ ಬಂದು ನಿಂತಿದ್ದ ಅಪ್ಪೂ ಕುಟ್ಟಿ ನಮ್ಮನ್ನು ನೋಡಿ ಮುಖ ಅರಳಿಸಿದ. ಹಾಗೆಯೇ ಬಂದವರು ಯಾರೆಂದೂ ಅವನಿಗೆ ಗೊತ್ತಾಗಿ ಹೋಗಿತ್ತು. ಆಗಲೇ ಇಲ್ಲಿಗೆ ಬಂದು ಹೋಗಿದ್ದ ಫೆಡ್ರಿಕ್ ಮತ್ತು ಚಂದಾವರ ಇಬ್ಬರೂ ಅಪ್ಪೂ ಕುಟ್ಟಿಯನ್ನು ಮಾತಾಡಿಸಿ ಪರಿಚಯ ಮಾಡಿಕೊಂಡು ಹೋಗಿದ್ದರು. ಅದೇ ಹೊತ್ತಿಗೆ ಸರ್ವೇ ಕೆಲಸಕ್ಕೆ ಹೋಗಿದ್ದ ತಂಡದವರೆಲ್ಲ ಒಂದು ಗಂಟೆ ಮುಚೆಯೇ ವಾಪಸಾದರು.
ಕರಡಿಯ ಕೈಗೆ ಸಿಕ್ಕು ಲೆವೆಲ್ ಬಾಕ್ಸ ಬಿಟ್ಟು ಓಡಿ ಬಂದ ಶ್ರೀನಿವಾಸ ಸೆಟ್ಟಿ ನನಗೆ ಅಚ್ಚರಿಯಾಯಿತು. ನಾನು ಕೇಳುವ ಮುಂಚೆಯೇ ನಾಗೇಶ ಶಿರೋಡ್ಕರರು ಕತೆ ಹೇಳಿದರು.
‘ಸರ್ವೇ ಕೆಲಸ ಮಾಡುವಾಗ ಕರಡಿಯೊಂದು ಇವರತ್ತ ನುಗ್ಗಿ ಬಂತಂತೆ. ಲೆವೆಲ್ ಇನ್‌ಸ್ಟ್ರುಮೆಂಟ್ ಹಿಡಿದಿದ್ದ ಇಂಜನಿಯರ ಶ್ರೀನಿವಾಸ ಸೆಟ್ಟಿ ಹೆದರಿಕೊಂಡು ಕಾಲು ಜಾರಿ ಇಳಿಜಾರಿಗೆ ಬಿದ್ದರಂತೆ. ಹನಮಂತ್ಯಾ ಓಡಿ ಹೋಗಿ ಕೈ ಹಿಡಿದನಂತೆ ಇಲ್ಲದಿದ್ದರೆ ಕೆಳಗೆ ಬಂಡೆಯಿಂದ ಜಾರಿ ತಲೆಯೊಡದು ಸತ್ತೇ ಹೋಗುತ್ತಿದ್ದರಂತೆ. ಕೆಳಗೆ ಬಿದ್ದಿದ್ದರೆ ಆಗಿನ ಕಾಲದಲ್ಲೇ ಲಕ್ಷ ರೂಪಾಯಿ ಕಿಮ್ಮತ್ತಿನ ಲೆವೆಲ್ ಉಪಕರಣ ಪುಡಿಯಾಗುತ್ತಿತ್ತಂತೆ. ಅಷ್ಟರಲ್ಲಿ ಉಳಿದವರು ಬೆಂಕಿ ಕಡ್ಡಿ ಕೊರೆದು ಕರಡಿಯನ್ನು ಓಡಿಸಿದರಂತೆ. ಲೆವೆಲ್ ಉಪಕರಣ ಕೆಳಗೆ ಬಿದ್ದಿದ್ದರೆ ದೊಡ್ಡ ಘಾತವೇ ಆಗುತ್ತಿತ್ತು’ ಎಂದು ಉಸುರು ಬಿಡದೆ ಹೇಳಿದರು. ಮತ್ತು ಅಲ್ಲಿಯೇ ಇದ್ದ ಫಾರೆಸ್ಟ ಗಾರ್ಡಗಳನ್ನು ನೋಡಿ ವಿವರ ಕೇಳಿದರು.
ಅಪ್ಪೂ ಕುಟ್ಟಿ ಎಲ್ಲರಿಗೂ ಕಟ್ಟಾ ಚಾಯ ಸಿದ್ಧಮಾಡಿ ತಂದ. ಶಿರೋಡ್ಕರರ ಮನೆ ಮಾತು ಮರಾಠಿ ಮಿಶ್ರಿತ
ಕೊಂಕಣಿಯಾಗಿತ್ತು. ಅದು ಫಾರೆಸ್ಟಿನವರಿಗೆ ಖುಶಿ ತಂದಿತು.
‘ನಾವೂ ಸರಕಾರೀ ಸೇವಕರಿದ್ದೀವಿ. ನೀವೂ ಸರಕಾರಿ ಕೆಲಸ ಮಾಡುವವರು. ನಮ್ದು ಈಗ ಬ್ಲಡ್ಡು ಒಂದೇ ನೋಡ್ರಿ‘
ಅಂದು ನಕ್ಕ ಫೆಡ್ರಿಕ್. ಜಬರದಸ್ತ ಪಾರ್ಟಿಗೆ ಹೊರಟೆವು
‘ಇವತ್ತು ರಾತ್ರಿ ನಮ್ಮ ಚಾಂದೇವಾಡೀಲಿ ಕ್ರಿಸ್ತನ ಹಬ್ಬ ಇದೆ. ಎರಡು ಡುಕ್ಕರಾ ಬೀಳ್ತವೆ. ಡುಕ್ರಾ ಅಂದ್ರೆ ಗೊತ್ತಲ್ಲ…
ಫೋಟೋ ಕೃಪೆ :The register Herald
ಹಂದಿ… ಹಂದೀ ಮಾಂಸದಡಿಗೆ. ಜಬರದಸ್ತ ಪಾರ್ಟೀ. ಇರ್ತದೆ. ನೀವು ಎಲ್ರೂ ಬಂದ್ರೆ ಮೂರು ಡುಕ್ರಾಗೆ ಕೆಡವತೀವಿ. ’
ಅಂದ. ‘ಹೌದೌದು…ಪಾರ್ಟಿ ಜಬರದಸ್ತ ಆಗಿರ್ತದೆ’ ಎಂದು ಚಂದಾವರನೂ ಆಸೆ ಹುಟ್ಟಿಸಿದ. ಹಂದಿಯ ಮಾಂಸದಡಿಗೆ ಎಂದು ಗೊತ್ತಾಗುತ್ತಲೂ ಶಿರೋಡ್ಕರ ತಯಾರಾಗೇ ಬಿಟ್ಟರು. ಅವರ ಹಿಂದಿನಿಂದ ಹನುಮಂತ್ಯಾ, ಪರಸ್ಯಾರೂ ತಯಾರಾದರು. ಅಪ್ಪೂ ಕುಟ್ಟಿಗೂ ಹೊರಡುವ ಆಸೆಯಿತ್ತು. ಆದರೆ ಟೆಂಟು ಕಾಯಲು ಇಲ್ಲಿ ಇರಬೇಕಲ್ಲ. ಅದು ಅವನ ಡ್ಯೂಟಿ.
ನಾನು ವೆಜಿಟೇರಿಯನ್ ಆದದ್ದರಿಂದ ಇಲ್ಲೇ ಇರುತ್ತೇನೆ ಅಂದುಕೊಂಡಿದ್ದರು ಶಿರೋಡ್ಕರ. ಆದರೆ ನನಗೆ ಒಮ್ಮೆ ಕ್ಯಾಸ್ಟಲ್‌ರಾಕ್ ನೋಡಬೇಕೆಂಬ ಆಸೆಯಿತ್ತು. ಯಾಕಂದರೆ ಅತ್ತ ಗೋವಾದಲ್ಲಿ ಪೋರ್ತುಗೀಜರು, ಇತ್ತ ಇಂಡಿಯಾದಲ್ಲಿ ಬ್ರಿಟಿಷರು ಆಳಿಕೆ ಮಾಡುತ್ತಿದ್ದಾಗ ಈ ಕ್ಯಾಸ್ಟಲ ರಾಕ್ ಇಬ್ಬರಿಗೂ ಮಹತ್ವದ ಗಡಿಭಾಗವಾಗಿತ್ತು ಎಂದು ಓದಿದ್ದೆ. ವಾಸ್ಕೋದಿಂದ ಬರುವ ಟ್ರೇನು ಇಲ್ಲಿ ಬರುತ್ತಲೂ ಬ್ರಿಟಿಷರ ಮತ್ತು ಪೋರ್ತುಗೀಜ ಪೋಲೀಸರು ಜಂಟಿಯಾಗಿ ಅದನ್ನು ಇಲ್ಲಿಯೇ ಪರಿಶಿಲನೆ ಮಾಡಿ ಮುಂದೆ ಬಿಡುತ್ತಿದ್ದರು. ಟ್ರೇನು ಅಲ್ಲಿಂದ ಮುಂದೆ ದೂಧಸಾಗರ್ ಮೂಲಕ ಬ್ರಿಟಿಷ ಆಡಳಿತದ ಲೋಂಡಾ ಪ್ರವೇಶಿಸುತ್ತಿತ್ತು.
ಇತಿಹಾಸ ಅಲ್ಲಿದ್ದವರಿಗೆ ಗೊತ್ತಿದ್ದರೂ ಯಾರೂ ಕುತೂಹಲಿಗಳಾಗಿರಲಿಲ್ಲ. ನನಗೆ ಅದರ ಬಗ್ಗೆ ಏನಾದರೂ ಬರೆಯಬೇಕು ಎಂಬ ಹಂಬಲವಿತ್ತು. ಅದರಿಂದ ನಾನೂ ಕ್ಯಾಸ್ಟಲ ರಾಕ್‌ಗೆ ಹೊರಟು ನಿಂತೆ. ಟೆಂಟಿನಲ್ಲಿ ಕೊನೆಗೆ ಪರಸ್ಯಾ, ಅಪ್ಪೂ ಕುಟ್ಟಿ, ಶ್ರೀನಿವಾಸ ಸೆಟ್ಟಿ, ಲಿಂಗರಾಜ ಉಳಿಯುವುದು ಎಂದು ನಿರ್ಣಯವಾಯಿತು. ನಾನು, ಶಿರೋಡ್ಕರರು, ಅವರ ಶಿಷ್ಯ ಹನುಮಂತ್ಯಾ ಮೂರು ಜನ ಫೆಡ್ರಿಕ್‌ನ ಟ್ರಾಕ್ಟರ್ ಹತ್ತಿದೆವು. ಮತ್ತು ಬೆಳಿಗ್ಗೆ ನಮ್ಮನ್ನು ಇಲ್ಲಿಗೆ ತಂದು ಬಿಡುವ ವ್ಯವಸ್ಥೆಯನ್ನು ಮಂಗೇಶ ಚಂದಾವರ ಮಾಡುವುದಾಗಿ ಹೇಳಿದ. ಅಲ್ಲಿಂದ ಬರುವಾಗ ತನಗೆ ಗೋವಾ ಮಾಲು [ಡ್ರಿಂಕ್ಸು] ತಂದುಕೊಡಲು ಅಪ್ಪೂ ಕುಟ್ಟಿ ಬೇಡಿಕೆಯಿಟ್ಟ. ನಾವು ನಸುನಕ್ಕು ಕ್ಯಾಸ್ಟಲರಾಕ್
ಕಡೆಗೆ ಹೊರಟೆವು.
ಮುಂದೆ ಓದಿರಿ – ಕ್ಯಾಸ್ಟಲ ರಾಕ್ ನಲ್ಲಿ ಪೋರ್ತುಗೀಜರ ಬಂಗಲೆಗಳು – ಗುಡ್ಡದ ಬಯಲಿನಲ್ಲಿ ಭರ್ಜರಿ ಪಾರ್ಟಿ ಮತ್ತು ಡಿಂಗ್ ಡಾಂಗ್ ಡ್ಯಾನ್ಲುಗಳು- ಮರುದಿನ ನನಗೆ ಸರ್ವೇ ಕೆಲದಿಂದ ತಗೆದು ಸೂಪಾಕ್ಕೆ ಎತ್ತಿ ಹಾಕಿದ್ದು… ಇತ್ಯಾದಿ ರೋಚಕ ಕತೆಗಳು. ತಪ್ಪದೆ ಓದಿ.
ಲೇಖಕರು – ಹೂಲಿಶೇಖರ್ (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)