ಓದಿ ಕೆಟ್ಟ… ಕೂಚು ಭಟ್ಟ…!

‘ಕದಾ ಹಕ್ಕೋತೀನಿ ಹೋಗ್ರೆಲೇ…’ ಅಂದ ಗುರುಸ್ಯಾ…

ಈಗ ನಲವತ್ತು ವರ್ಷದ ಹಿಂದಿನ ನೆನಪು. ನಾನು ಆಗ ಧಾರವಾಡದ ಕರ್ನಾಟಕ ಕಾಲೇಜಿನೊಳಗ ಓದ್ಲಿಕ್ಕ ಹತ್ತಿದ್ನಿ. ಆಗ ರಾಜ್ಯದ ಹೆಸರು ‘ಕರ್ನಾಟಕ’ ಅಂತ ಇನ್ನೂ ಆಗಿರಲಿಲ್ಲ. ಆದ್ರ ಧಾರವಾಡದ ತುಂಬ ಕರ್ನಾಟಕ ಸಲೂನಿನಿಂದ ಹಿಡ್ದು, ಕರ್ನಾಟಕ ಚಹಾದಂಗಡಿ, ಕರ್ನಾಟಕ ಬಲೂನು ಅಂಗಡಿ, ಕರ್ನಾಟಕ ಕ್ಲಬ್ಬು, ಕರ್ನಾಟಕ ರದ್ದೀ ಅಂಗಡಿ, ಕರ್ನಾಟಕ ಖಾನಾವಳಿ, ಕರ್ನಾಟಕ ವಸತಿ ಗೃಹ, ಕರ್ನಾಟಕ ಬೂಟು-ಚಪ್ಪಲ್ಲು ಅಂಗಡಿ, ಕರ್ನಾಟಕ ಟ್ಯೂಬ್‌ ಅಂಗಡಿ, ಕರ್ನಾಟಕ ಬೀಡಿ-ಸಿಗರೇಟ ಅಂಗಡಿ, ಕರ್ನಾಟಕ ಜಟಕಾ ಸ್ಟಾಂಡು, ಕರ್ನಾಟಕ ಗಾದೀ ಕಾರ್ಖಾನಾ, ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ಕಲೋದ್ಧಾರಕ ಸಂಘ, ಕರ್ನಾಟಕ ಕಾಲೇಜು, ಕರ್ನಾಟಕ ಯೂನಿವರ್ಸಿಟಿ ಹಿಂಗ ಎಲ್ಲಿ ನೋಡಿದ್ರೂ ‘ಕರ್ನಾಟಕ’ ಎಂಬ ಹೆಸರು ಧಾಂಗುಡಿ ಇಟ್ಟ ಕಾಲ ಅದು. ಯಾವಾಗ ರಾಜ್ಯದ ಹೆಸರು ‘ಕರ್ನಾಟಕ’ ಅಂತ ಆತೋ ಆಗಿನಿಂದ ನೋಡ್ರಿ, ಈ ಹೆಸರು ಇಳಿತಾರಕ್ಕ ಬಂತು.

ಇವತ್ತು ಕರ್ನಾಟಕ ಅನ್ನೂ ಜಾಗಾದೊಳಗ ಇಂಗ್ಲೀಷ ಹೆಸರಿನ ನಾನಾ ನಮೂನಿ ಅಂಗಡಿಗೂಳು ಧಾರವಾಡದಾಗ ಕಾಣ್ಲಿಕ್ಕೆ ಹತ್ಯಾವ. ರೆಸ್ಟಾರೆಂಟುಗೂಳು, ಧಾಬಾಗೂಳು, ಲಾಜಿಂಗಗೂಳು, ಮೀಡಿಯಂ ಸ್ಕೂಲುಗೂಳು, ರಿಕ್ಷಾ ಸ್ಟಾಂಡುಗೂಳು, ವಾಚ್‌ ರಿಪೇರಿ, ಸಾರೀ ಹೌಸ್‌, ಪಾನೀಪೂರೀ ಶಾಪು, ಪಾಪ್‌ಕಾರ್ನರ್‌ ಅಂಗಡಿ, ಗೋಬೀ ಮಂಚೂರಿ, ಎಗ್‌ ರೈಸ್‌ ಪ್ಯಾರಾಡೈಸ್‌ ಹಿಂಗ ನಮ್ಮದಲ್ಲದ ಶಬ್ದಗೂಳು ಒಳಗ ಬಂದು ಸೇರಿಕೊಂಡು ಅವೂ ನಮ್ಮೂವನ ಆಗ್ಯಾವ. ಸುಳ್ಳಂತೀರೋ… ಖರೇ ಅಂತೀರೋ.

ಏನಾತಪಾಂದ್ರ…ನಾನು ಧಾರವಾಡದೊಳಗ ಕರ್ನಾಟಕ ಕಾಲೇಜಿನೊಳಗ ಕಾಲು ಹಾಕಿ ಬರೇ ಆರು ತಿಂಗಳು ಆಗಿತ್ತೇನ್ರಪಾ. ಆಗ ಕಾಲೇಜ್‌ ಹಾಸ್ಟೇಲೊಳಗ ನನಗ ಸೀಟು ಸಿಗಲಿಲ್ಲ. ಹಿಂಗಾಗಿ ನಾವು ನಾಲ್ಕು ಹುಡುಗೂರು ಸೇರಿ ಒಂದು ಖೋಲೇನ ಭಾಡಿಗಿ ಹಿಡಿದ್ವಿ ಸಪ್ತಾಪೂರ ಭಾವೀ ಹತ್ರ.

ಸಾಲೀ ಹುಡುಗೂರ ಖೋಲೇ ಅಂದ್ರ ಏನ್‌ ತಿಳಕೊಂಡೀರಿ? ಅಲ್ಲೇನಿರತೈತಿ ಮಣ್ಣು. ಹತ್ತು ಫೂಟು ಉದ್ದಾ…ಹತ್ತು ಫೂಟು ಅಗಲ ಇರೂ ಖೋಲೆ. ಒಂದೀಟ ಹೊರಗ ಒಂದ್‌ ಕಾಮನ್‌ ಬಚ್ಚಲಾ. ಅದಕ್ಕ ಹೊಂದಿ ಹೊರಕಡಿಗಿ ಠಿಕಾಣಿ.

ನಾವು ನಾಕೂ ಮಂದೀಗೆ ಸೇರಿದ ಆಸ್ತಿ ಅದು. ಅದನ್ನಽ ಎಲ್ಲಾರೂ ಪಾಳೇ ಪ್ರಕಾರ ಬಳಕೀ ಮಾಡತಿದ್ವಿ. ಖೋಲೇ ಎದುರಿಗೇ ದಾನಪ್ಪನ ಚಾದಂಗಡಿ. ಮುಂಜಾನಿ ದ್ವಾಸೀ-ಇಡ್ಲಿ. ಸುಣ್ಣದ ನೀರಿನಂಥಾ ಪುಠಾಣಿ ಚಟ್ನಿ. ಸಂಜೀ ಮುಂದ ಚುನಮುರಿ ಸೂಸಲಾ, ಮೆಣಸಿನಕಾಯಿ ಭಜೀ. ಮಧ್ಯಾನಕ್ಕ ಅಲ್ಲೇ ಹತ್ತಿರದಾಗ ಇದ್ದ ಇಬತ್ತಿ ರೊಟ್ಟೀ ಖಾನಾವಳಿಯೊಳಗ ಊಟದ ತಿಕೀಟು ತಗೊಂಡಿದ್ವಿ. ಕಾಲೇಜು-ಖಾನಾವಳಿ- ಖೋಲೇ [ಕಾ.ಖಾ.ಖೋ.]ಇಷ್ಟು ಬಿಟ್ಟರ ನೆಟ್ಟಗ ನಾವು ಯಾರೂ ಧಾರವಾಡಾನ ನೋಡಿರಲಿಲ್ಲ. ಸಾಧನಕೇರಿ, ಎಮ್ಮೀಕೆರೀ, ಕಡಪಾ ಮೈದಾನ, ಹುಚ್ಚರ ಆಸ್ಪತ್ರೆ, ಮಂಗಳವಾರ ಪ್ಯಾಟಿ, ಅತ್ತಿಕೊಳ್ಳ ಇವೆಲ್ಲ ಹಳೇ ಹೆಸರುಗೂಳು ಆಗ.

arunimaಫೋಟೋ ಕೃಪೆ : Glassdoor

ಹಿಂಗಿರತಾ ಒಮ್ಮೆ ಧಾರವಾಡಕ್ಕ ಪೂನಾ ಕಡಿಯಿಂದ ಆರ್ಕೆಸ್ಟ್ರಾ ಒಂದು ಬಂತ್ರೆಪಾ. ಆಗ ಹುಬ್ಬಳ್ಳಿಗೆ ನಾಟಕ ಕಂಪನಿಗೂಳು, ಧಾರವಾಡಕ್ಕ ಆರ್ಕೆಸ್ಟ್ರಾಗೂಳು ಬರೂದು ಭಾಳ. ಅವು ಎಲ್ಲೆಲ್ಲಿಂದ ಬರತಿದ್ವು ಅಂತೀರಿ. ಬೆಳಗಾವಿ ಮ್ಯಾಲ ಹಾದು ಮುಂಬಯಿ, ಪೂನಾ, ಸಾಂಗ್ಲಿ ಕಡೆಯಿಂದ ಬರತಿದ್ವು ಅವು.
ಆರ್ಕೆಸ್ಟರಾದಾಗ ಅಗದೀ ಮನರಂಜನೆ ಕೊಡೂವು ಅಂದ್ರ… ಹಾಡಿನ ಜೋಡೀ ಹುಡುಗ್ಯಾರ ಡ್ಯಾನ್ಸುಗೂಳು. ಅಬಬಬ…

ಏನ್ ಡ್ಯಾನ್ಸರೀ ಅವೂ. ಥೇಟ್‌ ಸಿನಿಮಾ ರೀಲನ ತಗದು ಮುಂದ ಬಿಚ್ಚಿಟ್ಟಾಂಗ ನೋಡ್ರಿ. ನಮಗೂ ಆಗ ಲಗ್ನಾ-ಪಗ್ನಾ ಆಗಿರಲಿಲ್ಲ. ಶಹರಕ್ಕ ಬಂದ ಬ್ರಹ್ಮಚಾರಿಗೂಳು ಆಗಿದ್ವಿ. ನಮ್ಮಂಥಾವ್ರು ಇಂಥಾವೆಲ್ಲಾ ನೋಡದಿದ್ದರ ಹೆಂಗರಿ? ಯಾರರ ಮನಿಶಾ ಅಂತಾರೇನು ಜನ್ಮಕ್ಕ.

ನನಗಂತೂ ಮದಲಿಂದ ನಾಟಕಾ ನೋಡೂದು ಹಾಡು ಕೇಳೂದು ಅಂದ್ರ ಭಯಂಕರ ಹುಚ್ಚಿತ್ತು ಅನ್ರಿ.
ನಮ್ಮ ಖೋಲೇದಾಗೂ ಇಂಥಾ ಹುಚ್ಚಿನಾವ್ರು ಇದ್ದರನ್ರಿ. ಆಗಿನ ವಯಸ್ಸನ ಹಂಗಿತ್ತು. ಹುಚ್ಚ ಹಿಡಿಯೂದು ಮತ್ತ ಹಿಡಿಸೂದು. ಹರೇದ ಕಾಲದಾಗ ಇಂಥಾ ಹುಚ್ಚುಗೂಳು ಕೋರೋನಾ ಇದ್ದಾಂಗ. ದೂರ ಇದ್ದರ ದೂರನ ಇರತಾವು.

ಹತ್ತರ ಇದ್ದರ ಅಂಟುಕೊಂಡಽ ಬಿಡತಾವು. ಹೌದಲ್ರಿ. ಅವತ್ತ ನಾವು ಮೂರು ಜನಾ ರೊಕ್ಕಾ ಹಕ್ಕೊಂಡು ಆರ್ಕೆಸ್ಟ್ರಾ ನೋಡಾಕ್‌ ಹೊಂಟೀವ್ರೆಪಾ. ಆದ್ರ ಗುರುಸಿದ್ಯಾ ಮಾತ್ರ ಬರೂದಿಲ್ಲ ಅಂದ. ನಿನ್ನ ರೊಕ್ಕಾನೂ ನಾವ಼ ಹಾಕತೇವಿ ಬಾರಲೇ ಅಂದ್ರೂ ಅಂವಾ ಬರಲಿಲ್ಲ. ಯಾಕಂದ್ರ ಅಂವಾ ಹುಟ್ಟಿರತನ ನಿದ್ದಿಬಡಕ. ಕಾಲೇಜಿನಾಗ ಗಣಿತ ಪಾಠ ಸುರೂ ಆದರ ಸಾಕು ನಿದ್ದಿ ಎಲ್ಲಿರತಿತ್ತೋ. ಕಣ್ಣು ಮುಚ್ಚಿ ಒಂದ್‌ನಿದ್ದೀ ತಗದು ಪಿರಿಯಡ್‌ ಗಂಟಿ ಹೊಡೆದ ಮ್ಯಾಲನ ಕಣ್ಣು ಬಿಡತಿದ್ದ ಮಾರಾಯ. ಖಾನಾವಳಿ ಊಟಕ್ಕ ಅವಂದು ಮದಲನೇ ಪ್ರಾಶಸ್ತ್ಯ. ಎರಡನೇದ್ದು ನಿದ್ದಿ. ಮೂರನೇದ್ದು ಕಾಲೇಜು.

maxresdefaultಫೋಟೋ ಕೃಪೆ : youtube

‘ನಾ ಆರ್ಕೆಸ್ಟ್ರಾಕ್ಕ ಬರೂದಿಲ್ಲ. ನೀವು ಹೋಗ್ರಿ ಬೇಕಾದ್ರ…’ ಅಂತ ಮದಲ಼ಽ ಹೇಳಿ ಹಿಂದಕ್ಕ ಸರಿದಿದ್ದ ಗುರುಸಿದ್ಯಾ. ನಾವೂ ಅಂವಗ ಹೆಚ್ಚು ಒತ್ತಾಯಮಾಡಲಿಲ್ಲ ಅನ್ರಿ. ಮೂರೂ ಜನ ಅಗಾವ್‌ ತಿಕೀಟು ತಗಿಸಿ ಹೊಂಟ಼ಽಬಿಟ್ವಿ. ಆರ್ಕೆಸ್ಟ್ರಾ ಸುರೂ ಆಗೂದನ ರಾತ್ರಿ ಒಂಭತ್ತಕ್ಕ ಅಂತ ಟಾಂಗಾದಾಗ ಮೈಕ್‌ ಹಚಗೊಂಡು ಊರ ತುಂಬ ಸಾರಿ ಹೋಗಿದ್ರು.

ನಾವು ಮೂರೂ ಜನ ಕಿಸೇದಾಗ ಅತ್ತರ ಶೀಷೆ ಇಟಗೊಂಡು ಹೊರಗ ಹೊಂಟ್ವಿ. ಅಷ್ಟರೊಳಗ ಗುರುಸಿದ್ಯಾ
ಖಾನಾವಳಿಗೆ ಒಬ್ಬನ ಹೋಗಿ ನಾಕು ರೊಟ್ಟಿ ಜಡದು… ಒಂದು ಗಂಗಾಳ ಕಟ್ಟಿನ ಸಾರು ಕುಡ್ದು… ಅನ್ನಾ ಮೊಸರು ಉಂಡು ಬಂದಿದ್ದ. ಬಂದವನ ಖೋಲೀ ಮೂಲಿಯೊಳಗ ತನ್ನ ಜಾಗಾದಾಗ ಹಾಸಿಗೀ ಹಾಸೇ ಬಿಟ್ಟ ನೋಡ್ರಿ ದೀಡ್‌ ಪಂಡಿತ.

‘ನಾ.. ಮಕ್ಕೋತೀನಿ. ನೀವು ಕದಾ ಮುಂದಕ್ಕ ಮಾಡ್ಕೊಂಡು ಹೋಗಿರ್ರಿ’ ಅಂದವನ ಹಾಸಿಗೀ ಮ್ಯಾಲ ಉಳ್ಳಿದ. ನಮ್ಮ ಜೋಡೀ ಹೊಂಟಿದ್ದ ಕಿಟ್ಯಾ ಆಗ ಜೋರು ಮಾಡಿದ. ‘ಈಗ಼ಽ ಅಳ್ಳೀ ಅಂಡಗಿ ಉಳ್ಳಿ ಬಿದ್ದಾಂಗ ಮಕ್ಕೋಬ್ಯಾಡಲೇ ಗುರುಸ್ಯಾ. ನಾವು ಹೊರಗ ಹೊಂಟೇವಿ. ನಾವು ಹ್ವಾದ ಮ್ಯಾಲ ಕದಾ ಹಕ್ಕೊಂಡು ನೀ ಮಲಕ್ಕೋ. ಊರಾನ ಅಡಪು ನಾಯಿಗೂಳು ಒಳಗ ಬಂದು ಮಾರೀ ನೆಕ್ಕಿದ್ರೂ ನೀ ಏಳಾಂವ ಅಲ್ಲ. ಎದ್ದ ಬಾ…! ನಾವು ಹೊಂಟೇವಿ. ಕದಾ ಹಕ್ಕೋ ಬಾ…’ ಎಂದ. ಗುರುಸಿದ್ಯಾ ನಮ್ಮನ್ನು ಬಯ್ದುಕೊಳ್ಳುತ್ತ, ಕಿವೀ ತಿಕ್ಕಿಕೊಳ್ಳುತ್ತ ‘ಆತು… ನೀವು ಹೋಗೇರ ಹೋಗ್ರಲೇ….’ ಅಂದ.

ನಾನು – ‘ಹಕ್ಕೋತಾನು ಬರ್ರಿ’ ಅನ್ನುತ್ತ ಇಬ್ಬರನ್ನೂ ಕರೆದುಕೊಂಡು ಹೊರಟೆ. ನಮಗೆ ಇನ್ನೂ ಖಾನಾವಳಿಗೆ ಹೋಗಿ ಉಣ್ಣುವುದಿತ್ತು. ಆರ್ಕೆಸ್ಟ್ರಾ ನೋಡಲು ಜನವೋ ಜನ. ಮದಲ಼ಽ ಧಾರವಾಡ ಮಂದಿ. ಬಾಯಿ ತಗದರ ಸಾಕು. ಸಪ್ತಾಪೂರ ಬಾವೀ ದರ್ಶನಾನ. ತಂಬಾಕಿನ ಘಾಟು ವಾಸನಿ. ಇನ್ನು ಮಾತಾಡಿದ್ರ ಮುಗುದ಼ಽ ಹೋತು. ಬಾಯಿಂದ ವಾಸನೀ ಮಂಜಿನ ಮಳೀ. ಈ ಜನಕ್ಕ ಯಾವಾಗ ಬುದ್ಧಿ ಬರತೈತೋ. ಸಾರ್ವಜನಿಕ ಸ್ಥಳದಾಗ ಉಗುಳಬಾರದು ಅಂತ ಬರೆದಿದ್ರೂ ಬೇಕಂತನ ಅಲ್ಲೇ ಹೋಗಿ ಉಗುಳತಾರ ಎಬರೇಸಿಗೂಳು.

group of people raise their hands on stadium
Photo by Josh Sorenson on Pexels.com

ಆರ್ಕೆಸ್ಟ್ರಾ ಸುರೂ ಆತು. ಏನ್‌ ದನೀ… ಏನ್‌ ವಾದ್ಯಗೂಳೂ… ಏನ್‌ ಲೈಟುಗೂಳೂ…ಕೇಳಬ್ಯಾಡ್ರಿ. ಈಓಡ್ತಾ-ಕೇಳ್ತಾ ಮಂದಿನ್ನ ಬ್ಯಾರೇ ಲೋಕಕ್ಕನ ತಗೊಂಡು ಹ್ವಾದ್ರು ಅನ್ರಿ. ಧಡಕ್ಕ ಧಡಕ್ಕ ಮ್ಯೂಜಿಕ್ಕು. ಎದೀ ಧಕ್ಕ ಧಕ್ಕ ಅನ್ನಾಕ ಸುರೂ ಆದುವು. ಕಿಟ್ಯಾ ಎರಡ ಸಲ ‘ಒನಸ್‌ಮೋರ್‌’ ಎಂದು ಕೂಗಿದ. ನಾನೂ ‘ಹೌದಪಾ….! ಹೌದು. ಹೊಡೀ ಚಕ್ಕಡೀ…’ ಎಂದೆ.

ನಾವು ಎಲ್ಲಿ ಅದೀವಿ ಅಂತ ನಮಗ಼ಽ ಗೊತ್ತಾಗದಂಗಾತು. ಅವರ ಹಾಡು, ಡ್ಯಾನ್ಸು ಹೆಂಗಿದ್ದೂವು ಅಂದರ
ಹೇಳಾಕ್‌ ಒಲ್ಲೆ ತಗೀರಿ. ಅವನೌವ್ನ… ನೋಡಬೇಕು ಒಮ್ಮೇರಾ… ಅನ್ನೂಹಂಗಾತು.

ಅರ್ಕೆಸ್ಟ್ರಾ ಮುಗಿದು ಮಂದೆಲ್ಲಾ ಹೊರಬಿದ್ರು. ಹೊರಗೆ ಅಲ್ಲೇ ಕಟಗೀ ಒಲೀಮ್ಯಾಲ ಎಣ್ಣೀ ಕಡಾಯಿ ಇಟ್ಟುಗೊಂಡು ಮೆಣಸಿನಕಾಯಿ ಬಿಡತಿದ್ರು. ಕಿಟ್ಯಾ ತಡೀಲಾರದ ನಮಗಂತ ನಾಕಾಣೆ ಕೊಟ್ಟು ನಾಲ್ಕು ಬಿಸೀ ಮೆಣಸಿನಕಾಯಿ ತಂದ.

ತಿನಕೊಂತನ ಖೋಲೇ ಕಡೆ ಹೊಂಟ್ವಿ.
ಅಲ್ಲಿ ಬಾಗಿಲಿಗೆ ಬಂದು ನಿಂತು ‘ಗುರುಸ್ಯಾ… ಬಾಗಿಲಾ ತಗೀಪಾ… ಬಂದೇವಿ’ ಅಂತ ಆರ್ಕೆಸ್ಟ್ರಾದ ಮಧುರ
ಕಂಠದಂಗನ ದನೀ ತಗದ್ವಿ. ಒಳಗಿಂದ ಗುರೂಸ್ಯಾ ಹಾಂನೂ ಅನಲಿಲ್ಲ. ಹೂಂನೂ ಅನಲಿಲ್ಲ. ನಮಗ ಸಿಟ್ಟು ಬಂದು ಕದಕ್ಕ ಒಮ್ಮೆ ಜೋರಾಗಿ ಗುದ್ದಿದ್ವಿ. ಅಷ್ಟ… ಹಾಕಿದ್ದ ಕದಾ ತನ್ನಿಂದ ತಾನ಼ಽ ಅರ್ಧಕ್ಕ ತಕ್ಕೊಂತು. ಅದರ ಹಿಂದಿಂದನ಼ ಗುರುಸಿದ್ಯಾ ನಿದ್ದಿಗಣ್ಣಲ್ಲಿ ಹೇಳಿದ. ‘ನೀವು ಹೋಗ್ರಲೇ.. ನಾ ಕದಾ ಹಕ್ಕೊಂತೀನಿ ಆಮ್ಯಾಲ’ ಅಂದ ಕುಡುಕರಂಗ.

ನಾವು ಒಬ್ಬರಿಗೊಬ್ರು ಮಾರೀ ನೋಡಿಕೊಂಡ್ವಿ. ‘ಅಲ್ಲಾ…ಇಂವಾ ಕದಾನ ಹಕ್ಕೊಂಡಿಲ್ಲ. ಹಂಗ಼ನ ಮಲಿಗ್ಯಾನು ಗಣಪ್ಪನಂಗ…’ ಅನ್ನುತ್ತ ಗಾಬರಿಯಿಂದ ಒಳಗೆ ಕಾಲಿಟ್ಟೆವು. ‘ಇನ್ನೇನು ಹಕ್ಕೊಂತೀಯೋ ನಿನಾಪ್ನ. ಆರ್ಕೆಸ್ಟ್ರಾ ಮುಗುದ ಮ್ಯಾಲ ಹೊಡಮಳ್ಳಿ ಬಂದೇವು. ನೀ ಕದಾನ ಹಕ್ಕೊಂಡಿಲ್ಲ’ ಕಿಟ್ಯಾ ಹೇಳುತ್ತಿದ್ದಂತೆ ಗುರುಸಿದ್ಯಾನ ಬಾಜೂ ಚಾದರದೊಳಗ ಮಲಗಿದ್ದ ಬಿಡಾಡಿ ನಾಯಿಯೊಂದು ಬುದುಗ್ಗನ ಎದ್ದು ‘ಕುಂಯ್ಯೋ’ ಅನ್ನಕೋತನ ಹೊರಗ ಓಡಿ ಹೋತು. ನಾವು ಹಣಿ ಹಣೀ ಬಡಕೊಂಡ್ವಿ. ಗುರುಸಿದ್ಯಾ ಇನ್ನೂ ಗೊರಕೆಯಲ್ಲೇ ಇದ್ದ. ‘ನಮ್ಮ ಟ್ರಂಕು-ಹಾಸಿಗಿ ಗತಿ ಏನಾತೋ…’

ಮುಂದ ಏನಾತಪಾಂದ್ರ…
ನಾನು ಬ್ಯಾಂಕ ಕೆಲಸಕ್ಕ ಸೇರಿ ಈಗ ಪಿಂಚಣೀದಾರ ಆಗೇನಿ. ಕಿಟ್ಯಾ, ಹನುಮ್ಯಾ ಎಲ್ಲೆಲ್ಲೋ ಕೆಲಸ ಮಾಡಿ ಅವರವರ ಊರಾಗದಾರು. ಗುರುಬಸ್ಯಾ ಸಾಲಾಗಿ ಫೇಲು ಆಗಿ ಡಿಗ್ರೀನೂ ಮಾಡಿಕೊಳ್ಳಲಾರದನ ಕುಂತ. ಹಂಗಂತ ನಗಬ್ಯಾಡ್ರಿ.

ಮುಂದ ಅಂವಾ ರಾಜಕೀಯ ಸೇರಿ… ಈಗ ಹುಬ್ಬಳ್ಯಾಗ ಮೂರು ಬಂಗ್ಲೆ ಕಟ್ಟಿಸ್ಯಾನು. ನಾಕು ಕಾರು ಇಟ್ಟಾನು. ಮನಿಯೊಳಗ ಅಡಿಗೀಗೆ ಆಳು. ನೀರೀಗೆ ಆಳು. ಕಸಮುಸರಿಗೆ ಅಂತ ಆಳು. ಬಾಗಲಾ ಕಾಯಾಕಂತ ಆಳು. ಮೊನ್ನೆ ಫೋನು ಹಚ್ಚಿದಾಗ ಕಿಟ್ಯಾ ಹೇಳತಿದ್ದ.

‘ನಾವು ಓದಿ ಕೆಟ್ಟ ಕೂಚು ಭಟ್ಟರಾದ್ವಿ. ಗುರುಸ್ಯಾ ಹೆಂಗಾದ ನೋಡು’ ಅಂದ. ನಾನು ಸುಮ್ಮನೆ ನಕ್ಕೆ.
***
ಅರವಿಂದ ಕುಲಕರ್ಣಿ

Screenshot-2020-04-29-at-10.31.18

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW